ತಂದೆಯವರು ಅಂಚೆ ಮಾಸ್ತರರಾಗಿದ್ದರು. ಕೃಷಿಯೊಂದಿಗೆ ಯಕ್ಷಗಾನದ ಮದ್ದಳೆಗಾರರಾಗಿ ಭಾಗವಹಿಸುತ್ತಿದ್ದರು. ಸಂದರ್ಭ ಬಂದಾಗ ಭಾಗವತಿಕೆಯನ್ನೂ ಮಾಡಿದ್ದಾರೆ. ಆಗೆಲ್ಲಾ ಸಂಭಾವನೆ ಸಿಕ್ಕರೆ ಪುಣ್ಯ. ಸಮ ಭಾವನೆ ಮಾತ್ರ! ಅವರೊಂದಿಗೆ ಹಲವು ಬಾರಿ ಜತೆಯಾಗಿದ್ದೇನೆ. ಅವರಿಗೆ ಬೀಡಿ ಸೇದುವ ಅಭ್ಯಾಸವಿತ್ತು. ಒಮ್ಮೆ ಹೀಗಾಯಿತು. ಸತತ ಏಳೆಂಟು ದಿವಸ ಅಹೋರಾತ್ರಿ ತಾಳಮದ್ದಳೆಯಲ್ಲಿ ಭಾಗವಹಿಸಿದ್ದರು. ನಿದ್ದೆಯ ಅಮಲು ಬೇರೆ. ಎಂದಿನಂತೆ ಕಚೇರಿಗೆ ಹೋದರು. ಕಡತಗಳನ್ನು ಪರಿಶೀಲಿಸಿದರು. ಯಾವುದೋ ಪತ್ರದ ಬರವಣಿಗೆಗೆ ಕುಳಿತರು. ಅಷ್ಟು ಹೊತ್ತಿಗೆ ತನಿಖಾಧಿಕಾರಿ ಬಂದು ಬಿಡಬೇಕೆ? ವೃತ್ತಿ ನಿಷ್ಠೆಗೆ ಹೆಸರಾದ ಇವರನ್ನು ನೋಡಿ ಅಧಿಕಾರಿಗೆ ಆಶ್ಚರ್ಯ! ಜತೆಗೆ ನಗು ಕೂಡಾ. ಕಾರಣವಿಷ್ಟೇ. ನಿದ್ದೆಯ ಮತ್ತಿನಲ್ಲಿ ಬಾಯಲ್ಲಿ ಪೆನ್ನು ಇಟ್ಟುಕೊಂಡಿದ್ದರು. ಬೀಡಿಯಲ್ಲಿ ಬರೆಯುತ್ತಿದ್ದರು!
ಪುತ್ತೂರು ತಾಲುಕು ಕೋನಡ್ಕ ಗೋಪಾಲಕೃಷ್ಣ ಕಲ್ಲೂರಾಯರ ಬದುಕಿನ ಒಂದು ಎಳೆಯನ್ನು ಅವರ ಚಿರಂಜೀವಿ ಮುರಳಿ ವರ್ಣಿಸಿದ್ದು ಹೀಗೆ. ಕಲ್ಲೂರಾಯರು ಯಕ್ಷಗಾನದ ಅನುಭವಿ ಮದ್ದಳೆಗಾರ. ಹಿರಿ-ಕಿರಿಯ ಕಲಾವಿದರೊಂದಿಗೆ ಆಪ್ತ ಒಡನಾಟವಿತ್ತು. ಸುತ್ತೆಲ್ಲಾ ನಡೆಯುತ್ತಿದ್ದ ಕೂಟಾಟಗಳಿಗೆ ಖಾಯಂ ಕಲಾವಿದ. ಯಕ್ಷಗಾನವನ್ನು ಹಣ ಸಂಪಾದನೆಯ ಮಾರ್ಗವಾಗಿ ಬಳಸಿಕೊಂಡವರಲ್ಲ. ಅದರಲ್ಲಿ ಪೂಜ್ಯತೆಯನ್ನು ಕಂಡವರು.
ಕಲ್ಲೂರಾಯರಿಗೆ ಎಳವೆಯಲ್ಲೇ ಪಿತೃವಿಯೋಗ. ಕೌಟುಂಬಿಕ ಜವಾಬ್ದಾರಿ. ತಮ್ಮ ತಂಗಿಯರ ಮದುವೆ. ಅವಿಭಕ್ತ ಕುಟುಂಬ. ತುಂಬು ಸಂಸಾರ. ಸಾಂಸಾರಿಕ ತಾಪತ್ರಯಗಳು. ಭೂಮಸೂದೆಯಿಂದ ಬಹ್ವಂಶ ಭೂಮಿ ಅನ್ಯರ ಪಾಲು. ಇಂತಹ ಸಂದರ್ಭದಲ್ಲಿ ಅಧೀರತೆ ಶಮನಕ್ಕಾಗಿ ಮತ್ತು ನೆಮ್ಮದಿಗಾಗಿ ಕಲ್ಲೂರಾಯರು ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಮುಂದೆ ಅದು ಬಿಟ್ಟಿರಲಾಗದ ನಂಟಾಯಿತು. ಅಂಚೆ ಕಚೇರಿಯಲ್ಲಿ ಮೂವತ್ತಮೂರು ವರುಷದ ಸೇವೆ ಸಲ್ಲಿಸಿದ್ದರು. ಇಪ್ಪತ್ತೈದು ರೂಪಾಯಿ ಸಂಬಳದಿಂದ ವೃತ್ತಿ ಆರಂಭ. ನಿವೃತ್ತಿ ಹೊಂದುವಾಗ ಅವರಿಗೆ ಸಿಗುತ್ತಿದ್ದ ವೇತನ ಕೇವಲ ಎರಡೂವರೆ ಸಾವಿರ. ಕೈಗೆ ಬಂದದ್ದು ಗ್ರಾಚ್ಯುಟಿ ಆರು ಸಾವಿರ ರೂಪಾಯಿ! ನಿವೃತ್ತಿಯಂದು ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸುವ, ಮಾನಿಸುವ ಮನಸ್ಸುಗಳು ಇಲಾಖೆಯಲ್ಲಿದ್ದಿರಲಿಲ್ಲ!
ಹಿರಿಯರಾದ ಕುಂಞಿಕಣ್ಣ ಮಣಿಯಾಣಿ ಮತ್ತು ಜನಾರ್ದನ ಕುರೂಪ್ - ಇವರಿಗೆ ಗುರು. ಇರಾ ಗೋಪಾಲಕೃಷ್ಣ ಭಾಗವತರು, ದಾಸರಬೈಲು ಚನಿಯ ನಾಯ್ಕ್, ಬೆಳಿಂಜ ವೆಂಕಪ್ಪ ಭಾಗವತರೊಂದಿಗೆ ಸಾಂಗತ್ಯ. ರಂಗಕ್ರಮಗಳು, ಯಾವ ವೇಷಕ್ಕೆ ಯಾವ ವೇಗದ ನುಡಿತ ಎನ್ನುವುದರ ಖಚಿತವಿತ್ತು. ಕಲಾವಿದರಿಗೆ ಬೇಕಾದಂತೆ ರಂಗವನ್ನು ಹಿಡಿದೆಳೆವ ಮನಃಸ್ಥಿತಿಗೆ ವಿರೋಧವಾಗಿದ್ದರು. ಅಟ ರೈಸಬೇಕೆಂದು ರಂಗವನ್ನು ಹಿಗ್ಗಾಮುಗ್ಗಾ ಜಗ್ಗಿದವರಲ್ಲ. ಆ ವಿಚಾರದಲ್ಲಿ ರಾಜಿಯಿಲ್ಲ.
ಹವ್ಯಾಸಿ ಕಲಾವಿದರೆಂದರೆ ಕೆಲವೆಡೆ ಹಗುರವಾಗಿ ಈಗಲೂ ಕಾಣುವುದುಂಟು. ಸಹ ಕಲಾವಿದರಿಗೆ ಅವಮಾನವಾದರೆ ಅದು ತನಗಾದ ಅವಮಾನ ಎಂದು ಗ್ರಹಿಸುವವರು. ಯಾರದ್ದೇ ಮುಲಾಜಿಗೆ ಒಳಗಾದವರಲ್ಲ. ನೇರ ಮಾತು. ಮಾತಿನಂತೆ ನಡೆ. ಮತಿಯರಿತ ನಿಲುವು. ತಾನು ಸಂಘಟಿಸುವ ಕೂಟಾಟಗಳು ತನ್ನ ಯೋಚನೆಯಂತೆ ಪ್ರದರ್ಶಿತವಾಗಬೇಕೆನ್ನುವ ನಿರೀಕ್ಷೆಯಿದ್ದುವು. ಮುಗಿದ ತಕ್ಷಣ ಪ್ರತಿಕ್ರಿಯೆ, ವಿಮರ್ಶೆ. ಪಾತ್ರಗಳು ಹಳಿ ತಪ್ಪಿದರೆ ನಿಷ್ಠುರವಾಗಿ ಖಂಡಿಸುತ್ತಿದ್ದರು. ಇವರ ಈ ಗುಣವನ್ನು ಅರಿತ ಕಲಾವಿದರು ಎಚ್ಚರದಿಂದ ಇರುತ್ತಿದ್ದುದನ್ನು ಕಂಡಿದ್ದೇನೆ.
ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳು, ಜೈಮಿನಿ ಭಾರತ, ದೇವಿಮಹಾತ್ಮೆ ಪ್ರಸಂಗಗಳ ಕಂಠಪಾಠ. ಯಾವ ಪದ್ಯಗಳನ್ನು ಯಾವ ಮಟ್ಟಿನಲ್ಲಿ ಹಾಡಬೇಕೆಂದು ಖಚಿತ ಜ್ಞಾನವಿತ್ತು. ಭಾಗವತರು ಯಾರೇ ಇರಲಿ, ಆ ಮಟ್ಟಿನಲ್ಲಿ ಹಾಡದಿದ್ದರೆ ಅಸಹನೆಗೆ ಒಳಗಾಗುತ್ತಿದ್ದರು. ಯಕ್ಷಗಾನದಲ್ಲಿ ರಾಗಕ್ಕಿಂತ ಮಟ್ಟು ಮುಖ್ಯ. ಹಿರಿಯರಿಂದ ಹರಿದು ಬಂದ ಮಟ್ಟು ಯಕ್ಷಗಾನದ ಜೀವಾಳ. ಅದುವೇ ಪರಂಪರೆ. ಅದನ್ನು ಬದಲಾಯಿಸಲು ನಾವಾರು? ಎಂದಿದ್ದರು.
ಹವ್ಯಾಸಿ ಸಂಘಗಳಲ್ಲಿ ಕಲಾವಿದರಾಗಿ, ಸಂಘಟಕರಾಗಿ ದೀರ್ಘಕಾಲದ ನಿಜಾರ್ಥದ ಸೇವೆ. ಸ್ಥಳೀಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನದ ಸಂಘದ ಅಧ್ಯಕ್ಷರಾಗಿದ್ದಾಗ ತಾಳಮದ್ದಳೆ ಕೂಟವೊಂದಕ್ಕೆ ಭಾಗವತರಾಗಿ ದಾಮೋದರ ಮಂಡೆಚ್ಚರು ಆಗಮಿಸಿದ್ದರು. ಕೂಟ ಮುಗಿಸಿ ಮುಂಬಯಿಗೆ ತೆರಳಿದ ಮಂಡೆಚ್ಚರು ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಕುಸಿದು ದೈವಾಧೀನರಾದರು. ಬೆಟ್ಟಂಪಾಡಿಯದ್ದು 'ಅವರ ಕೊನೇ ಕೂಟ' ಎಂದು ನೆನಪು ಮಾಡಿಕೊಂಡು ಮರುಗುತ್ತಿದ್ದರು.
ಕಲ್ಲೂರಾಯರು ಸ್ವಾಭಿಮಾನಿ. ಫಕ್ಕನೆ ನೋಡುವಾಗ, ಮಾತನ್ನು ಕೇಳುವಾಗ ಛೇಡನೆಯೆಂದು ತೋರಿದರೂ ಮಗುವಿನ ಮನಸ್ಸು. ಅವರು ಸಕ್ರಿಯರಾಗಿರುವ ಸಮಯದಲ್ಲಿ ಸುಳ್ಯ, ಪುತ್ತೂರು ಪ್ರದೇಶಗಳಲ್ಲಿ ಅನುಭವಿ ಮದ್ದಳೆಗಾರರ ಕೊರತೆಯನ್ನು ತುಂಬಿದ್ದರು. ಕೂಟ, ಆಟಗಳಿಗೆ ನಿತ್ಯ ಕರೆ ಬರುತ್ತಿತ್ತು. ಪ್ರೀತಿಯಿಂದ ಭಾಗವಹಿಸುತ್ತಿದ್ದರು. ಎಷ್ಟೋ ಕಡೆ ಬಾಡಿಗೆಗೆ ಜೀಪು ಮಾಡಿಕೊಂಡು ತಾಳಮದ್ದಳೆಗಳಿಗೆ ಹೋಗುತ್ತಿದ್ದರು. ಸಂಘಟಕರಿಗೆ ತಾನೇ ಕೈಯಿಂದ ಅಷ್ಟಿಷ್ಟು ಮೊತ್ತ ನೀಡಿದ್ದಿದೆ. ಅವರ ಜೀವಿತದಲ್ಲಿ ಸಂಭಾವನೆಗಾಗಿ ಜಗಳ ಮಾಡಿದವರಲ್ಲ, ಎಂದು ಕಲ್ಲೂರಾಯರ ಬಂಧು, ಕಲಾವಿದ ವೆಂಕಟೇಶ್ವರ ಉಳಿತ್ತಾಯರು ನೆನಪಿಸಿಕೊಳ್ಳುತ್ತಾರೆ.
ಬದುಕಿನ ಖುಷಿ, ನೆಮ್ಮದಿಯನ್ನು ಯಕ್ಷಗಾನದಲ್ಲಿ ಕಂಡರು. ಅದು ಸಿಕ್ಕಾಗ ಕೀರ್ತಿ ಮರೆತು ಹೋಯಿತು. ಹಣದ ಮೋಹ ಮರೆಯಾಯಿತು. ನಿಷ್ಕಲ್ಮಶ ಭಾವದಿಂದ ಯಕ್ಷಗಾನದ ಆರಾಧನೆ ಕಲ್ಲೂರಾಯರಿಗೆ ಇಷ್ಟವಾಗಿತ್ತು. ಅನಾರೋಗ್ಯದಿಂದ ಒಂದು ಹೆಜ್ಜೆ ಎತ್ತಿಡಲೂ ಆಗದ ಸ್ಥಿತಿಯಲ್ಲಿದ್ದರೂ ಯಕ್ಷಗಾನ ಬಯಲಾಟವಿದೆ ಎಂದರೆ ಸಾಕು, ನಾಲ್ಕು ಹೆಜ್ಜೆ ಇಡುವಷ್ಟು ಸಶಕ್ತರಾಗುತ್ತಿದ್ದರು, ಮುರಳಿ ಜ್ಞಾಪಿಸುತ್ತಾರೆ. ಎಪ್ಪತ್ತೈದು ಸಂವತ್ಸರಗಳನ್ನು (1941-2016) ಬಾಳಿದ ಕಲ್ಲೂರಾಯರು 2016 ಜೂನ್ 12ರಂದು ದೂರವಾದರು. ಮಡದಿ ಕಾವೇರಿ ಅಮ್ಮ. ಅರುಣಕುಮಾರಿ, ರಾಜಾರಾಮ, ಮುರಳಿ, ಹರೀಶ, ಅನುರಾಧ ಮಕ್ಕಳು.
ಬದುಕಿನ ಒಂದು ಕಾಲಘಟ್ಟದ ಕಲ್ಲೂರಾಯರ ಯಕ್ಷಗಾನದ ಓಡಾಟಗಳು ಆ ಸಮಯದ ಸಾಂಸ್ಕೃತಿಕ ಬದುಕಿಗೆ ಕನ್ನಡಿ.
No comments:
Post a Comment