Monday, November 21, 2016

ದಿಗಿಲು-ಬೆರಗಿನ ಮಿಳಿತದ ರಂಗಸುಖ


             ಯಕ್ಷಗಾನದಲ್ಲೀಗ ಗಾನವೈಭವದ ಸುಗ್ಗಿಯ ಕಾಲ. ಮತ್ತೊಂದೆಡೆ ಯಕ್ಷ(?)ನೃತ್ಯಗಳಿಗೆ ವೈಭವದ ಥಳಕು. ಒಂದು ಕಾಲಘಟ್ಟದಲ್ಲಿ ಮೆಚ್ಚಿಕೊಂಡಿದ್ದ, ಆ ಗುಂಗನ್ನೇ ಅಂಟಿಸಿಕೊಂಡಿದ್ದ ಇಂತಹ ವೈಭವಗಳಿಂದ ಸದ್ಯಕ್ಕಂತೂ ದೂರವಿದ್ದೇನೆ! ದೂರವಿರುವುದರಿಂದ ಯಕ್ಷಗಾನಕ್ಕೆ ಲಾಭವೂ ಬಾರದು, ನಷ್ಟವೂ ಒದಗದು. ಆದರೆ ನಾನಂತೂ ಸುಖಿ-ಖುಷಿಯಾಗಿದ್ದೇನೆ!
ಭಾಗವತಿಕೆ, ಚೆಂಡೆ-ಮದ್ದಳೆಗಳಲ್ಲಿ ರಾಗ-ನಾದಗಳ ವೈಭವ 'ಯಕ್ಷಗಾನ'ವಾಗಿ ಮೂಡಬೇಕು. ಈಗೀಗ 'ಯಕ್ಷಗಾನ'ವೊಂದು ನಿಮಿತ್ತ. ಭಾಗವತಿಕೆಯ ಅತಿ-ಲಂಬನೆಗೆ (ಇದೊಂದು ಅರ್ಹತೆ) ಮಣೆ. ಆಲಾಪನೆಗಳು ದೀರ್ಘವಾದಷ್ಟೂ ಭಾಗವತ ಮತ್ತು ಭಾಗವತಿಕೆಗೆ ಬಿರುದುಗಳ ಹೊಸೆತ. ಮದ್ದಳೆ, ಚೆಂಡೆಗಳಿಗೂ ಲಂಬನಾ ಯೋಗ. ಇವೆಲ್ಲವನ್ನೂ ತುಂಬು ಬೆಂಬಲಿಸುತ್ತಿರುವ ಅಭಿಮಾನಿ ಪ್ರೇಕ್ಷಕರು. ಪದ್ಯಾರಂಭಕ್ಕೆ ಮುನ್ನವೇ ಶಿಳ್ಳೆ, ಚಪ್ಪಾಳೆಗಳ ಮಹಾಪೂರ. ಭಾಗವತ ಮತ್ತು ಹಿಮ್ಮೇಳ ವಾದನವು ಮನದಲ್ಲಿ ಇಳಿದು ಸುಖದ ಅನುಭವವಾದಾಗ ಸಂತೋಷದ ಪ್ರಕಟೀಕರಣ ಸಹಜ. ಆದರೆ ರಂಗದಲ್ಲಿ ಪ್ರಕ್ರಿಯೆಗೆ ಉದ್ಯುಕ್ತವಾಗುವಾಗ, ನಡೆಯುತ್ತಿರುವಾಗ ಮಹಾಪೂರ ಅಪ್ಪಳಿಸಿದರೆ ಅನುಭವಿಸುವುದೇನನ್ನು?
             ಈಚೆಗೆ ಪುತ್ತೂರು ಕೆಮ್ಮಾಯಿಯಲ್ಲಿ ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಜರುಗಿದ ಯಕ್ಷ-ಗಾನ(ಯಕ್ಷಗಾನ ಅಲ್ಲ)ದಲ್ಲಿ ಉಪಸ್ಥಿತನಿದ್ದೆ. ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯ ಮತ್ತು ಸುಬ್ರಹ್ಮಣ್ಯ ಧಾರೇಶ್ವರರು ತೆಂಕು-ಬಡಗು ತಿಟ್ಟುಗಳನ್ನು ಪ್ರತಿನಿಧಿಸಿದ್ದರು. ಎರಡೂವರೆ ಗಂಟೆಗಳಷ್ಟು ಹೊತ್ತು ರಂಗಸುಖವನ್ನು ತಾವೂ ಅನುಭವಿಸುತ್ತಾ, ಪ್ರೇಕ್ಷಕರಿಗೂ ಉಣಬಡಿಸಿದ್ದಾರೆ. ಒಂದೆರಡು ಬಾರಿ ಭಾಗವತಿಕೆಯ ನಾದದ ಗುಂಗಿನೊಳಗೆ ಬಂಧಿಯಾದ ಪ್ರೇಕ್ಷಕ ಕರತಾಡನವನ್ನೂ ಮರೆತಿದ್ದ!
             ದಿನೇಶ ಅಮ್ಮಣ್ಣಾಯರ ಶ್ರೀರಾಮನ ಒಡ್ಡೋಲಗದ ಪದ್ಯವೊಂದು ನಿಧಾನ ಗತಿಯಲ್ಲಿ ಪ್ರಸ್ತುತಿಗೊಂಡಿತು.  ಬಹುಶಃ ವರ್ತಮಾನದ ರಂಗದಲ್ಲಿ ಇಷ್ಟು ನಿಧಾನಗತಿಯ ಪದ್ಯವನ್ನು ಕಲಾವಿದರು ಸ್ವೀಕರಿಸುವುದು ಕಷ್ಟ. ಈ ಗತಿಯಲ್ಲಿ ಲಯದ ಜಾಡಿನ ಹಾಡುಗಾರಿಕೆ,  ಅದಕ್ಕೆ ಪೂರಕವಾದ ಮದ್ದಳೆ-ಚೆಂಡೆಗಳ ನಾದಗಳಲ್ಲಿ ಯಕ್ಷಗಾನವಿತ್ತು. ಮೂರ್ನಾಲ್ಕು ದಶಕದ ರಂಗದ ಸೊಬಗನ್ನು ನಾವೆಲ್ಲಾ ಆಗಾಗ್ಗೆ ಮೆಲುಕು ಹಾಕುತ್ತೇವಲ್ಲಾ, ಅದು ಆ ಹಿರಿಯರ ಇಂತಹ ರಂಗಗತಿ, ಲಯದ ಸ್ಥಾಪನೆಯೇ ಕಾರಣ.
             ಉದಾ: ಕೃಷ್ಣ ಸಂಧಾನ ಪ್ರಸಂಗದ 'ನೋಡಿದನು ಕಣ್ದಣಿಯ ಚಿನ್ಮಯನ ಮೂರುತಿಯ', ಭೀಷ್ಮ ವಿಜಯ ಪ್ರಸಂಗದ 'ಪರಮ ಋಷಿ ಮಂಡಲದ ಮಧ್ಯದಿ..', ಸುಧನ್ವ ಮೋಕ್ಷ ಪ್ರಸಂಗದ 'ಸತಿ ಶಿರೋಮಣಿ ಪ್ರಭಾವತಿ..  ಪದ್ಯಗಳು ಅನನ್ಯವಾಗಿ, ಪದ್ಯದ ಲಯದಲ್ಲಿ ಸಂಚರಿಸಿ ಮುದ ನೀಡಿತ್ತು. ಕೆಲವೊಮ್ಮೆ ದೀರ್ಘಲಂಬನೆಯ ಹೊರತಾಗಿಯೂ....!
ಸುಬ್ರಹ್ಮಣ್ಯ ಧಾರೇಶ್ವರರು ವೀರಮಣಿ ಕಾಳಗದ ಪರಮ ಪುರುಷ ವಿಶ್ವಮೂರ್ತಿಯ ಚರಿತೆಗಳನು ಬಲ್ಲೆ..... ಪದ್ಯವನ್ನು ಅವರ ಗುರು ನಾರಣಪ್ಪ ಉಪ್ಪೂರರು ಹಾಡುವ ಬಗೆಯನ್ನು ಮತ್ತು ನಂತರ ಬದಲಾದ ಶೈಲಿಯನ್ನು ನಿರೂಪಣೆಯೊಂದಿಗೆ ತೋರಿಸಿದರು. ಬಬ್ರುವಾಹನ ಕಾಳಗ ಪ್ರಸಂಗದ 'ಅಹುದೇ ಎನ್ನಯ ರಮಣ', ಚೂಡಾಮಣಿಯ 'ನೋಡಿದೆಯಾ ಸರಮೆ'...... ಮೊದಲಾದ ಹಾಡುಗಳಲ್ಲಿ ಲಯದ ಗಟ್ಟಿತನವಿತ್ತು. ನಾದ, ಲಯ, ಗತಿ... ಈ ಪದಗಳಿಗೆ ಶೈಕ್ಷಣಿಕ ಪಠ್ಯಗಳಲ್ಲಿ ಹಲವು ವ್ಯಾಖ್ಯೆಗಳಿವೆ. ಆದರೆ ಪ್ರೇಕ್ಷಕನಿಗೆ ಮತ್ತು ಹಾಡುಗಾರನಿಗೆ 'ರಂಗಸುಖ'ವನ್ನು ನೀಡುವ ಆ ಕ್ಷಣವನ್ನು ವಿಮರ್ಶೆಯ ಮೂಸೆಯಲ್ಲಿ, ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಹಿಡಿದಿಡಲು ಕಷ್ಟ.
              ಬಡಗಿನ ಶ್ರೇಷ್ಟ ಮದ್ದಳೆಗಾರ ಶಂಕರ ಭಾಗವತ ಯಲ್ಲಾಪುರ ಇವರು ಧಾರೇಶ್ವರರಿಗೆ ಸಾಥ್ ಆಗಿದ್ದರು. 'ಸಾಥ್' ಎನ್ನುವ ಪದ ಪ್ರಯೋಗವು ನನ್ನ ಅಪಕ್ವ ಬುದ್ಧಿಮತ್ತೆಯಾಗಬಹುದೇನೋ? ಧಾರೇಶ್ವರರ ಹಾಡಿನ ಗತಿಯನ್ನು ಅನುಸರಿಸುವ ಮದ್ದಳೆಯ ನುಡಿತಗಳು. ಎಲ್ಲೂ ಭಾಗವತಿಕೆಯನ್ನು 'ಓವರ್ಟೇಕ್' ಮಾಡಿಲ್ಲ. ಬಹುತೇಕ ಸಂದರ್ಭಗಳಲ್ಲಿ ಮದ್ದಳೆಯೇ ಹಾಡುತ್ತಿತ್ತೇನೋ ಎನ್ನುವ ಅನುಭವವನ್ನು ಕಟ್ಟಿ ಕೊಟ್ಟಿತ್ತು! ಶಂಕರ ಭಾಗವತರ ಅನುಭವದ ದಟ್ಟ ಗಾಢತನವದು. ಮದ್ದಳೆಯ ನಾದಸುಖವನ್ನು, ರಾಗಸುಖದೊಂದಿಗೆ ಮಿಳಿತಗೊಳಿಸಿದ ಧಾರೇಶ್ವರ-ಶಂಕರ ಭಾಗವತರ ಜತೆಗಾರಿಕೆ ಅನನ್ಯ.
ಅಮ್ಮಣ್ಣಾಯರೊಂದಿಗೆ ಕೃಷ್ಣಪ್ರಕಾಶ ಉಳಿತ್ತಾಯರ ಮದ್ದಳೆವಾದನ. ಶ್ರೀರಾಮನ ಒಡ್ಡೋಲಗ, ಸತಿಶಿರೋಮಣಿ ಪ್ರಭಾವತಿ.. ಪದ್ಯಗಳಲ್ಲಿ ಉಳಿತ್ತಾಯರ ನುಡಿತಗಳು ಅಮ್ಮಣ್ಣಾಯರ ಲಯಸುಖವನ್ನು ಹೆಚ್ಚಿಸಿತ್ತು.  ಈ ಸಂದಭದಲ್ಲಿ ಉಳಿತ್ತಾಯರ ನುಡಿತಗಳು ಶಂಕರ ಭಾಗವತರಿಗೆ ಸ್ಪೂರ್ತಿ ತಂದು, ತೆಂಕು-ಬಡಗು ಮದ್ದಳೆಗಳ ನಿಜಾರ್ಥದ 'ನಾದ-ವೈಭವ'ಗಳಾಗಿ ಮೂಡಿ ಬಂದುವು. 'ಹಳೆಬೇರು-ಹೊಸ ಚಿಗುರು'  ಪದಗಳು ಕ್ಲೀಷೆಯಾಗುವ ದಿನಮಾನದಲ್ಲಿ ಅದರ ನಿಜ ಅರ್ಥವನ್ನು ಶಂಕರ ಭಾಗವತರು ತೋರಿದರು. ಉಳಿತ್ತಾಯರು ಧನ್ಯತೆಯಿಂದ ಸ್ವೀಕರಿಸಿದರು. ಬಡಗಿನ ಚೆಂಡೆಯಲ್ಲಿದ್ದ ಕಾರ್ತಿಕ್ ಧಾರೇಶ್ವರರ ಮುಜುಗರವನ್ನು ಶಂಕರ ಭಾಗವತರು ತಿಳಿಯಾಗಿಸಿದ ಸಂದರ್ಭಗಳು ಹಿರಿಯ ಮದ್ದಳೆಗಾರನ ಸೌಜನ್ಯವನ್ನು ಎತ್ತಿ ತೋರಿತು.
                ಈಚೆಗಂತೂ ಎಲ್ಲಾ ರಸಗಳ ಪದ್ಯಗಳಿಗೂ ಚೆಂಡೆಯ ನುಡಿತವು ಅನಿವಾರ್ಯವೆಂಬ ಹಠಕ್ಕೆ ರಂಗವು ಒಗ್ಗಿಸಿಕೊಂಡಿದೆ! ಶೃಂಗಾರ ರಸಗಳ ಭಾವ-ಲಾಸ್ಯಗಳನ್ನು ಚೆಂಡೆಯ ಸದ್ದು ನುಂಗಿ ನೊಣೆದಿವೆ. ಅಮ್ಮಣ್ಣಾಯರು ಶೃಂಗಾರ ರಸದ ಪದ್ಯಗಳನ್ನು ಹಾಡುವಾಗ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಚೆಂಡೆಕೋಲುಗಳನ್ನು ಕೆಳಗಿಟ್ಟು ಪದ್ಯವನ್ನು ಆಲಿಸುತ್ತಾ ಕುಳಿತರು! ರಂಗಸುಖದ ಕಲ್ಪನೆಯಿದ್ದುದರಿಂದ ಇದು ಸಾಧ್ಯವಾಯಿತು. ದೇಲಂತಮಜಲು ಚೆಂಡೆ ನುಡಿಸುತ್ತಿದ್ದಾಗ ಶಂಕರ ಭಾಗವತರು ಉರುಳಿಕೆಯ ಗತಿಯನ್ನು ಬೆರಗಿನಿಂದ ವೀಕ್ಷಿಸುತ್ತಿದ್ದರು.
             ಸುಬ್ರಹ್ಮಣ್ಯ ಭಟ್ಟರನ್ನು ಹಲವು ಕಾಲದಿಂದ ನೋಡುತ್ತಿದ್ದೇನೆ, ಯಾವ ರಸದ ಪದ್ಯಗಳಿಗೆ ಎಷ್ಟು ಬಾರಿಸಬೇಕೆನ್ನುವ ಎಚ್ಚರ ಮತ್ತು ಚೆಂಡೆಯ 'ವಾಲ್ಯೂಮ್ ಕಂಟ್ರೋಲ್' ಇರುವುದು ಮೈಕ್ಸೆಟ್ಟಿನಲ್ಲಲ್ಲ, ಅದಿರುವುದು 'ತನ್ನ ಸ್ವ-ಪ್ರಜ್ಞೆ'ಯಲ್ಲಿ ಎಂಬ ಸ್ಪಷ್ಟ ಅರಿವನ್ನು ಹೊಂದಿದವರು. ದಾಮೋದರ ಮಂಡೆಚ್ಚರ ಉತ್ತರಾಧಿಕಾರಿಯಾಗಿ ಬೆಳೆದು ಬಂದ ಅಮ್ಮಣ್ಣಾಯರು, ನಾರಣಪ್ಪ ಉಪ್ಪೂರರ ಜತೆ ಪಳಗಿದ ಸುಬ್ರಹ್ಮಣ್ಯ ಧಾರೇಶ್ವರ, ಶಂಕರ ಭಾಗವತರು - ಇವರೆಲ್ಲಾ ರಂಗದ ಬೆರಗುಗಳನ್ನು ಅನುಭವಿಸಿಯೇ ಬೆಳೆದಿದ್ದಾರೆ. ರಂಗವು ಕಟ್ಟಿಕೊಡುವ ದಿಗಿಲು, ಬೆರಗುಗಳು ಕಲಾವಿದನ ಬೆಳವಣಿಗೆಯ ಕ್ಯಾಪ್ಸೂಲ್.
    ಯಕ್ಷ-ಗಾನಕ್ಕೆ 'ನಿರೂಪಕ' ಇಲ್ಲದಿರುವುದು ಎಲ್ಲಕ್ಕಿಂತ ಖುಷಿ ನೀಡಿತ್ತು. ಸಂದರ್ಭಾನುಸಾರ ಭಾಗವತರೇ ನಿರೂಪಣೆ ಮಾಡುತ್ತಿದ್ದರು. ವರ್ತಮಾನದ ಕಲಾಪಗಳಲ್ಲಿ 'ನಿರೂಪಕ'ನ ಸ್ಥಾನವು ಒಂದು 'ಪೋಸ್ಟ್'! ಆತ ರಂಗ ಮತ್ತು ಪ್ರೇಕ್ಷಕರ ಮಧ್ಯೆ ಕೊಂಡಿಯಾಗಿದ್ದರೆ ಸಾಕು. ಬೆರಳೆಣಿಕೆಯ ನಿರೂಪಕರು ಇದನ್ನು ಅರ್ಥಮಾಡಿಕೊಂಡಿದ್ದಾರೆ.
ಹಲವು ಖುಷಿಗಳಿಗೆ ರೆಕ್ಕೆಬಲಿಯಲು ಕಾರಣರಾದ ಅಮ್ಮಣ್ಣಾಯ-ಧಾರೇಶ್ವರರ ಹಾಡುಗಾರಿಕೆಯ ಕಲಾಪವು ರಂಗಸುಖವನ್ನು ನೀಡಿದ 'ಯಕ್ಷ-ಗಾನ'.

(ಚಿತ್ರ : ಮುರಳಿ ರಾಯರಮನೆ)
ಪ್ರಜಾವಾಣಿ/ದಧಿಗಿಣತೋ/9-9-2016




No comments:

Post a Comment