Monday, November 21, 2016

ಸಂಯಮ ತೊರೆಯದ ಮಿತಭಾಷಿಯ ನೆನಪು


             ವಿಷಮ ಸಮರಂಗ ಪ್ರಸಂಗದಲ್ಲಿ ಸಿದ್ಧಕಟ್ಟೆಯವರದು 'ಶ್ರೀಕೃಷ್ಣ'ನ ಪಾತ್ರ. ಪರಂಧಾಮದ ಸನ್ನಿವೇಶ. ತಾಯಿ ಯಶೋದೆಯೊಂದಿಗಿನ ಸಂಭಾಷಣೆ. ಟೆಂಟಿನೊಳಗೆ ಗಾಢ ಮೌನ. ಎಲ್ಲರ ಚಿತ್ತವೂ ರಂಗದತ್ತ. ಭಾವಪೂರ್ಣವಾದ ಸನ್ನಿವೇಶದಲ್ಲಿ ಶ್ರೀಕೃಷ್ಣನ ಕಣ್ಣಲ್ಲಿ ಕಣ್ಣೀರು ಜಿನುಗಿತು. ಪ್ರಸಂಗದ ಕೊನೆಗೆ ತನ್ನ ಅವತಾರದ ಸಮಾಪ್ತಿಯ ಹೊತ್ತು. ಬದುಕಿನ ಬವಣೆ, ಹಿತರೇ ಶತ್ರುಗಳಾದ ಪರಿ, ಬೌದ್ಧಿಕ ಅಪಕ್ವತೆಯ ತನ್ನ ಸಾಮಾಜಿಕರ ಚಿತ್ರಣ ನೀಡುತ್ತಾ ಪಾತ್ರವನ್ನು ಕಟ್ಟುತ್ತಾ ಹೋದಂತೆ ಪ್ರೇಕ್ಷಕರ ಕಣ್ಣೂ ತೇವವಾಗಿತ್ತು. ಹಿಮ್ಮೇಳ ಕಲಾವಿದರೂ ಕಣ್ಣೊರೆಸಿಕೊಂಡಿದ್ದರು.  ಒಂದು ಪಾತ್ರ ಬೀರಿದ ಪರಿಣಾಮಕ್ಕೆ ಬೆರಾಗಾಗಿದ್ದೆ.
             ತಾನು ಅಭಿನಯಿಸುತ್ತಿರುವುದು ಪಾತ್ರವನ್ನು ಎನ್ನುವ ಪ್ರಜ್ಞೆ ಮರೆತುಹೋಗಿ ಪಾತ್ರವೇ ಆಗುವ ಪರಿ ಇದೆಯಲ್ಲಾ, ಇದು ವ್ಯಕ್ತಿಯೊಬ್ಬನ ಒಳಗಿದ್ದ ಸುಪುಷ್ಟ ಕಲಾವಿದನ ಕಲಾವಿದತ್ವ. ಮಾನಿಷಾದ ಪ್ರಸಂಗದ ವಾಲ್ಮೀಕಿಯೂ ಸಿದ್ಧಕಟ್ಟೆಯವರೊಳಗೆ ಸುಪ್ತವಾಗಿ ಅವಿತಿದ್ದಿರಬೇಕು. ಇಲ್ಲದಿದ್ದರೆ ವಾಲ್ಮೀಕಿಯನ್ನು ರಂಗದಲ್ಲಿ ಹಾಗೆ ಕಡೆಯಲು ಸಾಧ್ಯವೇ ಇಲ್ಲ! ಅದೂ ಪ್ರಸಂಗ ಕವಿಯು ಆಶ್ಚರ್ಯಪಡುವಂತೆ! ಪಾತ್ರ, ಭಾವ, ಅದಕ್ಕನುಗುಣವಾದ ಸಾಹಿತ್ಯಗಳು ಪರಿಣಾಮಕಾರಿಯಾಗಿ ಪ್ರಸ್ತುತಗೊಂಡರೆ ಪ್ರೇಕ್ಷಕರಿಗೆ ತುಂಬು ಪರಿಣಾಮ ಬೀರುತ್ತದೆ. ಸಿದ್ಧಕಟ್ಟೆಯವರ ಬಹುತೇಕ ಪಾತ್ರಗಳಲ್ಲಿ ಪಾತ್ರ-ಭಾವ-ಸಾಹಿತ್ಯಗಳು ಮಿಳಿತಕೊಂಡಿದ್ದುವು.
            ತಾಳಮದ್ದಳೆಯಲ್ಲೂ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವ 'ವಾಲಿ ಶಕ್ತಿ' ಇವರಲ್ಲಿತ್ತು. ಸುಸ್ಪಷ್ಟವಾದ ಭಾಷೆಯ ಸೊಗಸಿನಲ್ಲಿ ಮಾಧುರ್ಯವನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ. ಆಗಾಗ್ಗೆ ಇಣುಕುವ ಗಾದೆ, ಸುಭಾಷಿತಗಳ ಸ್ಪರ್ಶ. ಸಮಕಾಲೀನ ವಿಚಾರಗಳ ಲೇಪ. ಮಧ್ಯೆ ಮಧ್ಯೆ ಸಂಸ್ಕೃತ ಸೂಕ್ತಿಗಳು. ಸಂಭಾಷಣೆಗೆಳೆವ-ಇಳಿವ ಸುಭಗತೆ. ಮಾತಿನ ಮೋಡಿಗೆ ಪದಗಳನ್ನು ಕಟ್ಟುವ, ಕಟ್ಟಿದ ಪದಗಳನ್ನು ಪುನಃ ಹೊರಕ್ಕೆ ಬಿಡುವ, ಹೊರಕ್ಕೆ ಬಿಟ್ಟ ಪದಗಳು ಪ್ರೇಕ್ಷಕರ ಸುತ್ತ ಸುತ್ತುತ್ತಾ ಅವರೊಳಗೆ ಇಳಿವ ಕ್ಷಣಗಳಿಗೆ ಹಲವು ಬಾರಿ ಸಾಕ್ಷಿಯಾಗಿದ್ದೇನೆ. ಜುಲೈ 1ರಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರ (71) ಮರಣ ವಾರ್ತೆಯನ್ನು ಕೇಳಿದಾಗ ರಂಗದ ಅವರ ಒಂದೊಂದು ಮಾತುಗಳು ಮಿಂಚಿದುವು.
             ತೆಂಕು, ಬಡಗು ತಿಟ್ಟಿನ ರಂಗದಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರ ಪಾದಗತಿ, ಜತೆಗೆ ಪದ-ಗತಿಗಳು ಅವರಿಗೆ ಅಭಿಮಾನಿಗಳನ್ನು ರೂಪಿಸಿದ್ದುವು. ಹಾಗೆಂತ ಅಭಿಮಾನಿಗಳನ್ನು ರೂಪಿಸಲೆಂದೇ 'ಗಿಮಿಕ್' ಮಾಡಿದವರಲ್ಲ. ಸ್ವ-ಪ್ರತಿಭೆಯ ಹೊಳಪಿನ ಕಿರಣಗಳು ಅಭಿಮಾನಿಗಳನ್ನು ಹುಡುಕಿ ತಂದಿದ್ದುವು. ಪಾತ್ರ ಸ್ವಭಾವ ಮತ್ತು ಪ್ರಸಂಗವು ಆ ಪಾತ್ರಕ್ಕೆ ಹಾಕಿಕೊಟ್ಟ ಚೌಕಟ್ಟಿನ ನಿಖರ ವರ್ತುಲದ ಪರಿಚಯ ಶೆಟ್ಟರಿಗಿತ್ತು. ಪಾತ್ರ ಪ್ರಸ್ತುತಿಯಲ್ಲಿ ಮಿತಿಯ ಅರಿವು ಇದ್ದುದರಿಂದ ಅವರ ಅರ್ಥವನ್ನು ಕೇಳುತ್ತಾ ಇದ್ದ ನಮಗೆ ಬೇರೆ ಪಾತ್ರ, ಪ್ರಸಂಗಗಳ ಮಾತಿನ ಎಳೆಗಳು ತಾಕುವುದಿಲ್ಲ. ಚಿಕ್ಕಚಿಕ್ಕ ಚೊಕ್ಕ ಮಾತುಗಳು, ಚುಟುಕು ಪದಗಳು. ಶುದ್ಧ ಭಾಷಾ ಪ್ರಯೋಗ.
              ಸಿದ್ಧಕಟ್ಟೆಯವರು ಓದಿದ್ದು ಪಿ.ಯು.ಸಿ. ಬೇರೆ ಉದ್ಯೋಗವನ್ನರಲಿಲ್ಲ. ಕಾವೂರು ಕೇಶವರಲ್ಲಿ ನಾಟ್ಯಾಭ್ಯಾಸ. ಕಟೀಲು ಮೇಳದಿಂದ ತಿರುಗಾಟಕ್ಕೆ ಶ್ರೀಕಾರ. ಕದ್ರಿ, ಕರ್ನಾಟಕ, ಮಂಗಳಾದೇವಿ, ಹಿರಿಯಡ್ಕ, ಸಾಲಿಗ್ರಾಮ.. ಹೀಗೆ ವಿವಿಧ ಮೇಳಗಳಲ್ಲಿ ನಾಲ್ಕು ದಶಕಗಳ ವ್ಯವಸಾಯ. ಮೊದಲಿನಿಂದಲೂ ನಾಟ್ಯದತ್ತ ಒಲವು ಕಡಿಮೆ. ಹಾಗೆಂತ ರಂಗದಲ್ಲಿ ನಾಟ್ಯ ಬೇಕೇ ಬೇಕು ಎಂದು ಸಮರ್ಥಿಸುವವನು. ನನಗೆ ನಾಟ್ಯಲಕ್ಷ್ಮೀ ಒಲಿಯಲಿಲ್ಲ. ಒಲಿಯದ ಕಲೆಯನ್ನು ಒಲಿಸುವ ಹಠ ಯಾಕಲ್ವಾ, ಎಂದು ವಿನೋದವಾಗಿ ಹೇಳಿದ್ದರು. ನಾಟ್ಯಲಕ್ಷ್ಮಿಯು ತೋರಿದ ಕೊರತೆಯನ್ನು ಸರಸ್ವತಿಯು ನೀಗಿದ್ದಾಳೆ, ಅನುಮೋದಿಸಿದ್ದಾಳೆ. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದಲ್ಲಿ ಅವರ ಸಹಾಯಕನಾಗಿಯೂ, ವೇಷಧಾರಿಯಾಗಿಯೂ ನಿರ್ವಹಿಸಿದ ಆ ಕಾಲಘಟ್ಟವು ಸಿದ್ಧಕಟ್ಟೆಯವರಿಗೆ ಮೇಳದ ಸಿಹಿ-ಕಹಿಗಳ ಪರಿಚಯವನ್ನು ಮಾಡಿತ್ತು.
             ಸುಧನ್ವ, ರಾಮ, ಕೃಷ್ಣ, ವಾಲ್ಮೀಕಿ, ಪರಶುರಾಮದಂತಹ ಪೌರಾಣಿಕ ಪಾತ್ರಗಳಲ್ಲಿ ಸ್ವಂತಿಕೆಯ ಹೆಜ್ಜೆ ಊರಿದ್ದಾರೆ. ಬೊಳ್ಳಿದಂಡಿಗೆ ಪ್ರಸಂಗದಲ್ಲಿ 'ಶೆಟ್ಟಿ' ಪಾತ್ರದ ಜಿಪುಣತೆ, ಗರುಡ ಕೇಂಜವೆ ಪ್ರಸಂಗದ 'ಮಂತ್ರಿ'ಯ ದುಷ್ಟತನ, ಕೋಟಿ ಚೆನ್ನಯದ 'ಬುದ್ಧಿವಂತ', ಕದ್ರಿ ಕ್ಷೇತ್ರ ಮಹಾತ್ಮೆ ಪ್ರಸಂಗದ 'ಗೋರಕ್ಷನಾಥ'.. ಪಾತ್ರಗಳ ವಿನ್ಯಾಸಗಳಲ್ಲಿ ಸಿದ್ಧಕಟ್ಟೆಯವರ ಕೊಡಗೆ ಅನನ್ಯ. ಬಡಗು ತಿಟ್ಟಿನ ರಂಗದಲ್ಲಿ ಅಗ್ನಿನಕ್ಷತ್ರ, ಈಶ್ವರಿ ಪರಮೇಶ್ವರಿ, ರಂಗನಾಯಕಿ, ಧರ್ಮಸಂಕ್ರಾಂತಿ, ಸೂರ್ಯವಂಶಿ.. ಪ್ರಸಂಗಗಳಲ್ಲಿ ವಿಶ್ವನಾಥ ಶೆಟ್ಟರ ವಿವಿಧ ಭಾವಗಳ ಪಾತ್ರಗಳು ಅವರಿಗೆ ತಾರಾಮೌಲ್ಯ ತಂದು ಕೊಟ್ಟಿದ್ದುವು. ತುಳು ಭಾಷೆಯ ಸೌಂದರ್ಯವನ್ನು ಪ್ರೇಕ್ಷಕನಾಗಿ ಅನುಭವಿಸಿದ್ದೇನೆ.
            ಚಾಣಕ್ಯ ತಂತ್ರ. ವಿಷಮ ಸಮರಂಗ, ಕನ್ಯಾಂತರಂಗ, ಚಾಣಕ್ಷ ಚಾಣಕ್ಯ, ವರ್ಣವೈಷಮ್ಯ, ಶಶಿವಂಶ ವಲ್ಲರೀ, ಜ್ವಾಲಾಜಾಹ್ನವಿ, ಶ್ರೀರಾಮ ಸೇತು.. ಸಿದ್ಧಕಟ್ಟೆಯವರು ರಚಿಸಿದ ಹಿಟ್ ಪ್ರಸಂಗಗಳು.  ಬೊಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆಯಂತಹ ಐವತ್ತಕ್ಕೂ ಮಿಕ್ಕಿದ ಪ್ರಸಂಗಗಳ ರಚಯಿತರು. ಆಳವಾದ ರಂಗಾನುಭವ ಮತ್ತು ನಿರ್ದೇಶನದ ಪರಿಪಕ್ವ ಪಾಕವಾಗಿದ್ದ ಶೆಟ್ಟರ ಪ್ರಸಂಗಗಳೆಲ್ಲವೂ ಈ ಕಾರಣಗಳಿಂದ ಗೆದ್ದಿವೆ. ಕಲಾವಿದನೊಬ್ಬ ಪ್ರಸಂಗಕರ್ತನಾದರೆ ಆತನಿಗೆ ರಂಗದ ಭಾಷೆ, ರಂಗದ ನಡೆ, ಸನ್ನಿವೇಶ ವಿನ್ಯಾಸಗಳನ್ನು ಅನುಭವಿಸಿದ ಅನುಭವ ಇರುತ್ತದೆ. ಈ ಹಿನ್ನೆಲೆಯಲ್ಲಿಯೂ ಅವರ ಪ್ರಸಂಗಗಳು ಗೆದ್ದಿವೆ.
            ವಿಶ್ವನಾಥ ಶೆಟ್ಟರೊಂದಿಗಿನ ಒಡನಾಟ ಮತ್ತು ಅವರ ಅರ್ಥಗಾರಿಕೆಯ ಸೊಗಸುಗಾರಿಕೆ, ಮಾತಿನ ಅಂದವನ್ನು ಅರ್ಥಧಾರಿ ವಾಸುದೇವ ರಂಗಾಭಟ್ ಕಂಡದ್ದು ಹೀಗೆ - ಸರಳ, ಸ್ಪಷ್ಟ ವಾಕ್ಸರಣಿ. ಪ್ರಸಂಗದ ಪ್ರಬಂಧ ಧ್ವನಿಗೆ ಪೂರಕ ಅರ್ಥವಿವರಣೆಯತ್ತ ಕಾಳಜಿ. ತೆಳು ಹಾಸ್ಯಭರಿತ ವೈನೋದಿಕವಾದ ಸಭಿಕರಿಗೆ ಆಪ್ತವಾಗುವ ಶೈಲಿ. ಉದಾಹರಣೆಗಳ, ಉಪಕಥೆಗಳ ಮೂಲಕ ವಿಷಯ ಸ್ಪಷ್ಟೀಕರಣ ಮಾಡುವ ವ್ಯಕ್ತಿ. ವಿಶಿಷ್ಟ ಅರ್ಥ ವಿಧಾನ. ಎಂತಹ ವಾದ-ತರ್ಕಗಳ ಸಂದರ್ಭದಲ್ಲೂ, ಎಂದಿಗೂ ಸಂಯಮ ತೊರೆಯದ ಸ್ಮಿತಭಾಷಿ. ಸೋಲನ್ನು ನಯವಾಗಿ ರಂಗದಲ್ಲೇ ಅಂಗೀಕರಿಸಬಲ್ಲ ಉದಾರಿಯಾದ ಅಪರೂಪದ ಅರ್ಥಧಾರಿ.
             ಮಂಗಳೂರಿನ 'ಯಕ್ಷಾಂಗಣ'ವು ತನ್ನ ತಾಳಮದ್ದಳೆ ಸಪ್ತಾಹದ ಸಮಾರೋಪದಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರನ್ನು ಸ್ಮರಿಸಲಿದೆ. 'ಯಕ್ಷಾಂಗಣ' ಪ್ರಶಸ್ತಿಯನ್ನು ಹಿರಿಯ ಅರ್ಥಧಾರಿ ಕುಂಬಳೆ ಸುಂದರ ರಾಯರಿಗೆ ಪ್ರದಾನಿಸಿದೆ.. ನವೆಂಬರ್ 12ರಂದು ಸಂಜೆ ಮಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ನಡೆದಿದೆ.  ಸೆಪ್ಟೆಂಬರ್ 6ರಿಂದ ನಡೆಯುವ ಸಪ್ತಾಹದಲ್ಲಿ ಪ್ರತಿ ದಿನ ಯಕ್ಷಗಾನದ ಹಿರಿಯರೊಬ್ಬರನ್ನು ನೆನಪಿಸುವ ಪರಿಪಾಠವನ್ನು ಯಕ್ಷಾಂಗಣ ಹಾಕಿಕೊಂಡಿದೆ. ನಾಲ್ಕನೇ ವರುಷದ ಸಪ್ತಾಹ ಮುಗಿಯುವ ಹೊತ್ತಿಗೆ ಯಕ್ಷಾಂಗಣದ ಮುಖ್ಯಸ್ಥ ಭಾಸ್ಕರ ರೈ ಕುಕ್ಕುವಳ್ಳಿಯವರ ಬತ್ತಳಿಕೆಯಲ್ಲಿ ಐದನೇ ವರುಷ ಕಾರ್ಯಕ್ರಮಗಳು ಮೊಳಕೆಯೊಡೆದಿವೆ.

(ಚಿತ್ರ : ರಾಮ್ ನರೇಶ್ ಮಂಚಿ)









No comments:

Post a Comment