Thursday, September 22, 2016

ಇನ್ನು ಆ ಮನಸ್ಸು ಕನಸನ್ನು ಹೆಕ್ಕದು!


 ಜೂನ್ ತಿಂಗಳಲ್ಲಿ ಪೋಳ್ಯದಲ್ಲಿ ಜರುಗಿದ ತಾಳಮದ್ದಳೆಯೊಂದರಲ್ಲಿ



                                                ಯಕ್ಷಗಾನ - ಸುದರ್ಶನ ವಿಜಯದಲ್ಲಿ ವಿಷ್ಣುವಿನ ಪಾತ್ರ

                   "ಬದುಕಿನಲ್ಲಿ ನಿರೀಕ್ಷೆಗಳು ಕನಸುಗಳನ್ನು ಕಟ್ಟುತ್ತವೆ. ಅದರ ಬೆನ್ನಟ್ಟಿ ಹಿಡಿಯಲು ಇನ್ನಿಲ್ಲದ ಯತ್ನ ಮಾಡುತ್ತೇವೆ. ನಮ್ಮ ನಿರೀಕ್ಷೆಯೆಲ್ಲದರ ಸಾಕಾರಕ್ಕೆ ಕಾಲ ಅನುವು ಮಾಡಿಕೊಡುವುದಿಲ್ಲ. ಕೊಟ್ಟರೂ ವಿಧಿ ಸಹಿಸುವುದಿಲ್ಲ. ಹಾಗಾಗಿ ಬದುಕಿನಲ್ಲಿ ಸಂತೃಪ್ತಿಯ ಭಾವ ಬಂದಾಗ ಕನಸುಗಳಿಗೆ ಸ್ವಲ್ಪ ವಿರಾಮ ಕೊಡುವುದೇ ಲೇಸು."  ಒಂದೂವರೆ ತಿಂಗಳ ಹಿಂದೆ 'ರುಕ್ಮಿಣಿ ಕಲ್ಯಾಣ' ಪ್ರಸಂಗದಲ್ಲಿ 'ವೃದ್ಧವಿಪ್ರ'ನಾಗಿ ಗಂಗಾಧರ ಬೆಳ್ಳಾರೆಯವರ ಅರ್ಥಗಾರಿಕೆಯಲ್ಲಿ ಸುಳಿದ ಸಾಲುಗಳಿವು. ಇದು ತನ್ನ ಕುರಿತಾಗಿಯೇ ಹೇಳಿದೆಂದು ಅವರ ಸಾವಿನ ನಂತರವಷ್ಟೇ ಅರಿಯಿತು.
                  ಮನೋವಿಶ್ಲೇಷಕ, ಉಪನ್ಯಾಸಕ, ಲೇಖಕ, ಅಂಕಣಗಾರ, ಕಥೆಗಾರ.. ಹೀಗೆ ಗಂಗಾಧರ ಬೆಳ್ಳಾರೆ (ಗಂಗಣ್ಣ)ಯವರ ಹೆಸರಿನೊಂದಿಗೆ ಹವ್ಯಾಸ-ವೃತ್ತಿಗಳು ಹೊಸೆದಿವೆ.  ಕಳೆದ ಮೂರುವರೆ ದಶಕದಿಂದ ನನಗವರು ಓರ್ವ 'ಮನುಷ್ಯ'ನಾಗಿ, 'ಕಲಾವಿದ'ನಾಗಿಯೇ ಕಂಡಿದ್ದಾರೆ. ಈ ಪದದ ವ್ಯಾಪ್ತಿ ಕೇವಲ ಅರ್ಥ ಹೇಳುವ, ವೇಷ ಮಾಡುವ ವ್ಯಾಪ್ತಿಗೆ ಸೀಮಿತವಾದುದಲ್ಲ. ಅಂದರೆ ಬದುಕಿನಲ್ಲಿ ಕಲೆಯನ್ನು ಹುಡುಕಿದ ಕಲಾವಿದ. ಅದು ಸಿಕ್ಕಾಗ ಸಂತೋಷಗೊಂಡು, ಆಪ್ತರೊಂದಿಗೆ ಹಂಚಿಕೊಂಡ ಸಹೃದಯಿ. ಕಲೆಯೆಂಬುದು ಬದುಕನ್ನು ಅರಳಿಸುವ ಉಪಾಧಿಯೆಂದು ನಂಬಿದ ಆಪ್ತ. ಕೊನೆಕೊನೆಗೆ ನಂಬುಗೆಯ ಗಾಢತೆಗೆ ಮಸುಕು ಆವರಿಸಿದಾಗ ಅದರಿಂದ ಕಳಚಿಕೊಂಡು ದೂರವಿದ್ದರು. ಇವರೊಳಗಿನ ಕಲಾವಿದನಿಗೆ 'ಸ್ವ-ಪ್ರಜ್ಞೆ'ಯಿತ್ತು.
               ಸೆಪ್ಟೆಂಬರ್ 10ರಂದು ಬೆಳ್ಳಾರೆ ದೂರವಾದರು. ಕಳೆದೊಂದು ವರುಷದಿಂದ ಅವರ ಖುಷಿಯನ್ನು ಸ್ವಾಸ್ಥ್ಯವು ಕಸಿದುಕೊಂಡಿತ್ತು. ಲವಲವಿಕೆ ಕುಸಿದಿತ್ತು. ಅವರ ಬದುಕಿನ ಖುಷಿಯನ್ನು, ಸಾಧನೆಯನ್ನು ಲೇಖನವಾಗಿಸಬೇಕೆಂದು ಯೋಚಿಸುತ್ತಲೇ ಇದ್ದೆ. ಅದು ಒದಗಿದುದು ಅವರ ಸಾವಿನ ಬಳಿಕ. "ವ್ಯಕ್ತಿಯ ಸಾಧನೆಯು ಆತ ಬದುಕಿರುವಾಗಲೇ ದಾಖಲಾಗಬೇಕು. ಈಗೀಗ ಸಂಮಾನದ ಸಂದರ್ಭ ಮತ್ತು ಆತ ದೂರವಾದ ಬಳಿಕ ಮಾತ್ರ ಕಲಾವಿದ ಪತ್ರಿಕೆಯ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಾನೆ." - ಅವರ ಮಾತು ಚುಚ್ಚಿತು, ಕಚ್ಚಿತು.
                 ಗಂಗಾಧರ ಬೆಳ್ಳಾರೆ ಸೊನ್ನೆಯಿಂದ ಬದುಕನ್ನು ಕಟ್ಟುತ್ತಾ ಬಂದವರು. ಬಡ ಕುಟುಂಬ. ಆರ್ಥಿಕವಾಗಿ ಸದೃಢರಲ್ಲ.  ಆಕರ್ಷಕ ಕಂಠಶ್ರೀ. ಪರಿಣಾಮಕಾರಿಯಾದ ಸೆಳೆತ. ಶಾಲೆಗಳಲ್ಲಿ ನಡೆಯುವ ಕಲಾ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿ. ಎಲ್ಲವನ್ನೂ ಕಲಿಯಬೇಕೆಂಬ ತುಡಿತ. ಅಪಾರ ನೆನಪು ಶಕ್ತಿ. ಸದಾ ಓದುವ ಗೀಳು. ವಿಮರ್ಶಿಸುವ ಗುಣ. ಆಪ್ತವಾಗಿ ತುಂಬುವ ಸ್ನೇಹಪರತೆ. ಮತಿಯರಿತ ಮಾತು. ಬೆಳ್ಳಾರೆಯ ಕಿರಣ್ ಮುದ್ರಣಾಲಯದಲ್ಲಿ ದಶಕದ ದುಡಿತ.
                 ಬಾಲ್ಯದಿಂದಲೇ ತಲೆತುಂಬಾ ಯಕ್ಷಗಾನ. ಸುತ್ತೆಲ್ಲಾ ನಡೆಯುವ ಕೂಟಾಟಗಳಿಗೆ ಖಾಯಂ ಪ್ರೇಕ್ಷಕ. ಆಟದಲ್ಲಿ ವೇಷ ಮಾಡಿದರು. ಕೂಟದಲ್ಲಿ ಅರ್ಥ ಹೇಳಿದರು. ಹವ್ಯಾಸಿ ರಂಗಕ್ಕೆ ಬೇಡಿಕೆಯ ಕಲಾವಿದರಾದರು. ಯಕ್ಷಗಾನದಲ್ಲಿ ಒಂದೊಂದೇ ಹೆಜ್ಜೆ ಊರುತ್ತಿದ್ದಂತೆ ಬೌದ್ಧಿಕವಾಗಿ ಗಟ್ಟಿಯಾಗಿದ್ದರು. ಪಾತ್ರಾಭಿವ್ಯಕ್ತಿಯಲ್ಲಿ ರಾಜಿಯಿದ್ದಿರಲಿಲ್ಲ. ರಂಗದಲ್ಲೇ ಪಟ್ಟು, ಪೆಟ್ಟು, ವಾದ, ಜಿದ್ದಾ-ಜಿದ್ದಿ. ಇದರಿಂದಾಗಿ ಒಂದಷ್ಟು ಮಂದಿಯ ಅಸಹನೆಗೂ ಕಾರಣರಾಗಿದ್ದರು. ಇದಿರರ್ಥಧಾರಿಯನ್ನು ಏನು ಮಾಡಿಯಾದರೂ ಅಂಗೈಯೊಳಗಿಟ್ಟು ಪುಡಿ ಮಾಡಬೇಕು ಎನ್ನುವ ವಿನೋದದ ಮಾತು ಬೆಳ್ಳಾರೆಯವರಿಗೆ ಸ್ವಭಾವವಾಗಿ ಕಾಡಿತು. ಬೆಳವಣಿಗೆಗೆ ಅದು ಮಾರಕ ಎಂದು ತಿಳಿದಾಗ ಸ್ವ-ಭಾವ ತಿದ್ದಿಕೊಂಡಿದ್ದರು ಕೂಡಾ.
                ಒಂದೂವರೆ ದಶಕದ ಕಾಲ ಅವರೊಂದಿಗೆ ವೇಷ ಮಾಡಿದ ಕಳೆದ ಕಾಲವು ಕಾಡುತ್ತವೆ. ಸುದರ್ಶನ ವಿಜಯದ 'ವಿಷ್ಣು', ಭೀಷ್ಮ ಪರ್ವದ 'ಭೀಷ್ಮ', ಭೀಷ್ಮ ವಿಜಯದ 'ಪರಶುರಾಮ', ಕೃಷ್ಣಾರ್ಜುನದ 'ಕೃಷ್ಣ'.. ಮೊದಲಾದ ಪಾತ್ರಗಳು ಮೆರೆದವುಗಳು. 1992ನೇ ಇಸವಿ ಇರಬೇಕು. ಪುತ್ತೂರಿನ ಯಕ್ಷಕೂಟದ ಆಯೋಜನೆಯ 'ಚಂದ್ರಹಾಸ ಚರಿತ್ರೆ' ಪ್ರಸಂಗವನ್ನು ಹವ್ಯಾಸಿಗಳೂ ಆಡಬಹುದು ಎಂದು ತೋರಿಕೊಟ್ಟ ದಿನಮಾನಗಳು. ಅದರಲ್ಲಿ 'ದುಷ್ಟಬುದ್ಧಿ'ಯ ಪಾತ್ರವನ್ನು ಬೆಳ್ಳಾರೆಯವರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಹಲವೆಡೆ ಈ ಪ್ರಸಂಗವು ಪ್ರದರ್ಶನ ಕಂಡಿವೆ.
              ಬೆಳ್ಳಾರೆಯ ಜತೆ ಅರ್ಥಹೇಳುವುದು, ವೇಷಮಾಡುವುದು ಸುಲಲಿತ. ಅರ್ಥದ ಜಾಡನ್ನು ಸುಲಭವಾಗಿ ತಿಳಿಯುವ ಬುದ್ಧಿಮತ್ತೆ. ಕೆಲವೊಮ್ಮೆ ಪೌರಾಣಿಕ ಲೋಕವನ್ನು ಸಮಕಾಲೀನಗೊಳಿಸುವ ಜಾಣ್ಮೆ. ಬಣ್ಣದ ಮನೆಯಲ್ಲಿ ಸಮಾಲೋಚನೆ ಮಾಡದೆ ವೇಷ ಮಾಡುತ್ತಿರಲಿಲ್ಲ. ಸಂವಾದವನ್ನು ಬೆಳೆಸುವ ಕೌಶಲ್ಯವಿತ್ತು. ಸ್ವತಃ ಕೂಟಾಟಗಳನ್ನು ಸಂಘಟಿಸುತ್ತಿದ್ದರು. ಸದಾ ಹಾಸ್ಯಪ್ರಿಯರಾದ ಬೆಳ್ಳಾರೆಯವರೊಂದಿಗೆ ಮಾತಿಗಿಳಿಯುವುದೇ ಖುಷಿಯ ಕ್ಷಣ.
               ಮನಶಾಸ್ತ್ರಜ್ಞ ಡಾ.ಮೀನಗುಂಡಿ ಸುಬ್ರಹ್ಮಣ್ಯಂ ಅವರ ಶಿಷ್ಯರಾದ ಬಳಿಕ ಮನೋಲೋಕ ಸೆಳೆಯಿತು. ಮನಃಶಾಸ್ತ್ರದ ಶೈಕ್ಷಣಿಕ ಅಧ್ಯಯನ ಮಾಡಿದರು. ಅನುಭವಕ್ಕೆ ಲೋಕ ಸುತ್ತಿದರು. ವಿಶ್ವವಿದ್ಯಾಲಯದ ಪದವಿ ಪಡೆದರು. ಇಷ್ಟು ಹೊತ್ತಿಗೆ ತಾನೂ ಬದಲಾದರು. 'ಸ್ಕೋಪ್ ಕೌನ್ಸೆಲಿಂಗ್ ಸೆಂಟರ್' ಸ್ಥಾಪಿಸಿದರು. ಇದರ ಮೂಲಕ ವಿವಿಧ ತರಬೇತಿಗಳನ್ನು ಏರ್ಪಡಿಸಿದರು. ವರ್ತನಾ ಶಿಬಿರಗಳನ್ನು ಸಂಘಟಿಸಿದರು. ಮನೋವ್ಯಾಧಿಗೆ ವೈದ್ಯರಾಗಿ ಹಲವರ ಬಾಳಿಗೆ ನೆರವಾದರು. ವರ್ತನೆಗಳ ಕುರಿತು ಪುಸ್ತಕಗಳನ್ನು ಬರೆದರು. ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮನಸು, ಇವರು ನೀವಲ್ಲ, ನೆನಪಿಗೊಂದು ಕೌನ್ಸೆಲಿಂಗ್, ತಪ್ಪು ತಿದ್ದುವ ತಪ್ಪು, ಮೌನಗರ್ಭ.. ಪ್ರಕಟಿತ ಕೃತಿಗಳು. ಸಿನೆಮಾ ಒಂದರಲ್ಲೂ ನಟಿಸಿದ್ದರು.
                 ಮನಃಶಾಸ್ತ್ರದ ವಿಚಾರಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡ ಬಳಿಕ ಯಕ್ಷಗಾನವು ವೀಕ್ಷಣೆಗೆ ಸೀಮಿತವಾಯಿತು. ಸ್ಕೋಪ್ ಮೂಲಕ 'ಸ್ವಗತ-ಗುಚ್ಛ' ಎನ್ನುವ ವಿಶಿಷ್ಟ ಕಲಾಪವನ್ನು ಆಯೋಜಿಸಿದರು. ಮನಃಶಾಸ್ತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ಪುರಾಣದ ಕೆಲವು ಪಾತ್ರಗಳು ಮಾತನಾಡಿದುವು. ಪಾತ್ರಗಳಿಗೂ ಒಂದು ಮನಸ್ಸಿದೆ ಎಂದು ತೋರಿದರು. ಈ ಕಲಾಪ ಕ್ಲಿಕ್ ಆಯಿತು.
              ಬದ್ಧತೆಯ ಬದುಕಿಗಾಗಿ ಶ್ರಮಿಸಿದ್ದಾರೆ. ಗಂಟೆ ನೋಡದೆ ತನುವನ್ನು ಸವೆಸಿ ಏಕಲವ್ಯನಂತೆ ಮೇಲೆದ್ದಿದ್ದಾರೆ. ಗಂಗಾಧರರ ಉತ್ಕರ್ಷ 'ಕಾಲ'ಕ್ಕೆ ಬೇಡವಾಗಿದೆ. ಮನೋಚಿಕಿತ್ಸಕನ ಮನವಲ್ಲ, ಬದುಕನ್ನೇ ಅಪಹರಿಸಲು ಹೊಂಚುಹಾಕಿತು. ಒಂದೆರಡು ಬಾರಿ ಚೇತರಿಸಿದರು. 'ಇನ್ನೇನಾಗದು' ಎನ್ನುತ್ತಿರುವಾಗಲೇ ಕಾಲ ಕರೆದೊಯ್ದ. ಕನಸುಗಳು ಚಿಲಕ ಹಾಕಿದುವು. ಕನಸು ಹೆಕ್ಕುವ ಮನಸ್ಸು ಸ್ಥಬ್ದವಾಯಿತು.  ಪತ್ನಿ ಆಶಾ, ಅಧ್ಯಾಪಕಿ. ಮಕ್ಕಳು ಪ್ರಣವ, ಅವನಿ. ಫೇಸ್ಬುಕ್ಕಿನಲ್ಲಿ ಒಮ್ಮೆ ಬರೆದಿದ್ದರು, "ನನ್ನ ದುಃಖದ ಕ್ಷಣಗಳಲ್ಲಿ ಆಶಾ ಅಮ್ಮನಾಗಿದ್ದಾಳೆ. ಸಹಿಸಿಕೊಂಡು ನಕ್ಕಳೇ ಹೊರತು ಹಾಯಾಗಲಿಲ್ಲ. ನಾನು ಏನಾಗಿದ್ದೇನೆ.. ಹುಡುಕಿಕೊಳ್ಳಬೇಕಿದೆ." ಮಾರ್ಮಿಕ ಮಾತನ್ನು ಗ್ರಹಿಸಿದಾಗ ಕಣ್ಣೀರು ಜಿನುಗುತ್ತದೆ.  ನಿತ್ಯ ಭೇಟಿ ಇಲ್ಲದಿದ್ದರೂ ಮನದಿಂದ ಅಳಿಸಲಾಗದ ಬಂಧ-ಅನುಬಂಧ.
             ಬೆಳ್ಳಾರೆ  ದೂರವಾಗಿದ್ದಾರೆ. "ಮನುಷ್ಯನನ್ನು ಸಾವು ಹಂತಹಂತವಾಗಿ ಕೊಲ್ಲಬಾರದು. ಅವೆಲ್ಲವೂ ಒಂದೈದು ನಿಮಿಷದಲ್ಲಿ ಮುಗಿದುಹೋಗಬೇಕು," ಎಂದಿದ್ದ ಸ್ನೇಹಿತನ ಮಾತು ಕಾಡುತ್ತದೆ.
              ಬರುವುದಿದ್ದರೆ ನನಗೂ ಅಂತಹ ಯೋಗವೇ ಬಂದುಬಿಡಲಿ.
(16-9-2016ರ ಪ್ರಜಾವಾಣಿಯ ಕಾಲಂ)
    



No comments:

Post a Comment