ಪ್ರಜಾವಾಣಿಯ 'ದಧಿಗಿಣತೋ' / 3-3-2017
ಕಾಸರಗೋಡು ಜಿಲ್ಲೆಯ ಮುಳಿಯಾರು-ಕೋಟೂರಿನ 'ಕಾರ್ತಿಕೇಯ ಕಲಾ ನಿಲಯ'ವು ಯಕ್ಷಗಾನವನ್ನು ದೇವರ ನಾಡಿನಲ್ಲಿ ಸುತ್ತಿಸಿದ ಸಾಹಸಿ ಸಂಘ. ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್ ಮತ್ತು ತಂಡದ ಸಾರಥ್ಯದಲ್ಲಿ ಕೇರಳ, ಕನ್ನಾಡಿನಲ್ಲಿ ನೂರಾರು ಪ್ರದರ್ಶನಗಳನ್ನು ಸಂಪನ್ನಗೊಳಿಸಿದ ದಿನಮಾನಗಳು ಈಗ ಇತಿಹಾಸ. ಒಂದು ಕಾಲಘಟ್ಟದಲ್ಲಿ ಕಲಾ ನಿಲಯವು ನಾಟಕ, ಯಕ್ಷಗಾನಗಳಲ್ಲಿ ಮೇಲ್ಮೆಯಲ್ಲಿತ್ತು. ಮಲೆಯಾಳಿ ನೆಲದಲ್ಲಿ ಕನ್ನಡ ಸೊಗಸನ್ನು ಜನರ ಮುಂದೆ ತೆರೆದಿಟ್ಟಿತ್ತು. ಹಲವಾರು ಕಲಾವಿದರನ್ನು ರೂಪುಗೊಳಿಸಿದ ಹಿರಿಮೆಯಿದೆ. ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಕಲಾ ನಿಲಯದ ತಂಡದಲ್ಲಿ ಸ್ತ್ರೀಪಾತ್ರಧಾರಿ. ಭಾವನಾತ್ಮಕ ಅಭಿವ್ಯಕ್ತಿಯ ಮೂಲಕ ಪಾತ್ರಗಳಿಗೆ 'ನಿಜನ್ಯಾಯ'ವನ್ನು ಸಲ್ಲಿಸಿದ ಕಲಾವಿದ.
ಈಗ ಕಾರ್ತಿಕೇಯ ಕಲಾ ನಿಲಯವು ಮಲೆಯಾಳ ನಾಟಕಗಳಿಗೆ ಸೀಮಿತ. ಆ ತಂಡದಲ್ಲಿ ಸಕ್ರಿಯರಾಗಿದ್ದ ಅಡ್ಕ ಕುಟುಂಬದ ಕಲಾವಿದರು ಮತ್ತು ಕಲಾ ಆಸಕ್ತಿಯುಳ್ಳ ಸುಮನಸ್ಸಿನವರು 'ಯಕ್ಷತೂಣೀರ ಸಂಪ್ರತಿಷ್ಠಾನ' ಎನ್ನುವ ಸಂಸ್ಥೆಯನ್ನು ರೂಪಿಸಿ ಎರಡು ವರುಷವಾಯಿತು. ಹದಿನಾಲ್ಕು ಸದಸ್ಯರನ್ನೊಳಗೊಂಡ ಪ್ರತಿಷ್ಠಾನವು ಯಕ್ಷಗಾನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ಬಹುತೇಕ ಎಲ್ಲರೂ ಒಂದಲ್ಲ ಒಂದು ವಿಭಾಗದಲ್ಲಿ ಕಲಾವಿದರು. ನಡೆಯುವ ಬಹುತೇಕ ಕಾರ್ಯಕ್ರಮಗಳಲ್ಲಿ ಕಲಾವಿದರಾಗಿ, ಸ್ವಯಂಸೇವಕರಾಗಿ, ಪರಿಚಾರಿಕೆಯರಾಗಿ ಕಾಣಿಸಿಕೊಳ್ಳುತ್ತಾರೆ. ಕಾರ್ಯಕ್ರಮದ ಒಟ್ಟಂದದತ್ತ ಗಮನ. ಎಲ್ಲರ ನೇಪಥ್ಯ ಶ್ರಮ ಗುರುತರ.
ಯಕ್ಷತೂಣೀರ ಸಂಪ್ರತಿಷ್ಠಾನದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಓರ್ವ ಹಿರಿಯ ನಿರ್ದೇಶಕರು. ಎಪ್ಪತ್ತರ ಹರೆಯದ ಜವ್ವನ. ಇವರ ತಂದೆ ಕೃಷ್ಣ ಭಟ್. ಮಾವ ಅಡ್ಕ ಗೋಪಾಲಕೃಷ್ಣ ಭಟ್. ಇವರಿಬ್ಬರ ನೆರಳಿನಲ್ಲಿ ಸ್ವಂತಿಕೆಯ ಯಕ್ಷ ಬದುಕನ್ನು ರೂಪಿಸಿದ ಕಲಾಗಾರ. ಆಗೆಲ್ಲಾ ಹವ್ಯಾಸಿ ಸಂಘದ ಆಟವೆಂದರೆ ಪ್ರತಿಷ್ಠೆ. ಜನ ಸ್ವೀಕೃತಿ ಅಪಾರ. ಊರಿನವರ ಸ್ಪಂದನ ಅನನ್ಯ. ಆಟ ಇದೆಯೆಂದರೆ ಸಾಕು, ಊರಿನ ಸಾಂಸ್ಕೃತಿಕ ಮನಸ್ಸುಗಳು ಗರಿಕೆದರುತ್ತಿದ್ದುವು. ಅಂತಹ ಸಂದರ್ಭದಲ್ಲಿ ಪಾತ್ರಾಭಿವ್ಯಕ್ತಿಯ ಮೂಲಕ ಪೆರಡಂಜಿಯವರು ಗಮನ ಸೆಳೆದಿದ್ದರು. ಮಾವ ಅಡ್ಕರ ನಿರ್ದೇಶನದಲ್ಲಿ ನಿರ್ವಹಿಸಿದ ಪಾತ್ರಗಳೆಲ್ಲಾ ಗಟ್ಟಿ ಶಿಲ್ಪವಾಗಿ ರೂಪುಗೊಂಡಿದ್ದುವು. ಮಾವ-ಅಳಿಯನ 'ಈಶ್ವರ-ದಾಕ್ಷಾಯಿಣಿ, ಹರಿಶ್ಚಂದ್ರ-ಚಂದ್ರಮತಿ, ಈಶ್ವರ-ಮೋಹಿನಿ, ಭೀಮ-ದ್ರೌಪದಿ..'ಜತೆಗಾರಿಕೆಗಳು ಆ ಕಾಲಘಟ್ಟದಲ್ಲಿ ಪ್ರೇಕ್ಷಕರ ಒಲವು ಗಳಿಸಿದ್ದುವು.
ಕಾರ್ತಿಕೇಯ ಕಲಾ ಸಂಘವು ಯಕ್ಷಗಾನಕ್ಕೆ ಎಷ್ಟು ಮಹತ್ವ ಕೊಡುತ್ತಿತ್ತೋ ನಾಟಕಕ್ಕೂ ಅಷ್ಟೇ ಮಹತ್ವ ನೀಡುತ್ತಿತ್ತು. ಅಡ್ಕದವರ ಹಲವಾರು ನಾಟಕ ರಚನೆಗಳು ರಂಗಸಕ್ತರ, ರಂಗಕರ್ಮಿಗಳ ಮೆಚ್ಚುಗೆ ಗಳಿಸಿದೆ. ನಾನು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಮಾವ ಬರೆದ 'ಸತ್ಯವಾನ್ ಸಾವಿತ್ರಿ' ನಾಟಕದಲ್ಲಿ 'ಸಾವಿತ್ರಿ'ಯ ಪಾತ್ರವನ್ನಿತ್ತುದಲ್ಲದೆ, ನನ್ನ ಮುಖಕ್ಕೆ ಬಣ್ಣ ಹಚ್ಚಿ ಬಣ್ಣದ ಬದುಕಿನ ಹಾದಿ ತೋರಿದ್ದಾರೆ. ಮತ್ತೆ ಅವರ ಎಲ್ಲಾ ನಾಟಕಗಳಲ್ಲೂ ನಾನೇ ಮುಖ್ಯ ಸ್ತ್ರೀಪಾತ್ರಧಾರಿ, ಎಂದು ಕಳೆದ ಕಾಲದ ರಂಗಕಥನವನ್ನು ನೆನಪಿಸಿಕೊಳ್ಳುತ್ತಾರೆ ಪೆರಡಂಜಿಯವರು.
ವೇಗದ ಯಕ್ಷಗಾನ ಹೆಜ್ಜೆಗಳಿಗೆ ಒಂದಷ್ಟು ಕಾಲ ವಿಶ್ರಾಂತಿ! ಬಳಿಕ ಅದೇ ಹುರುಪಿನಿಂದ ಮೇಲೆದ್ದು ಬಂದ ಪೆರಡಂಜಿ ಭಟ್ಟರು ಈಗ ಪ್ರಸಂಗಕರ್ತ. ರಂಗದ ಸ್ಪಷ್ಟ ಕಾಳಜಿ, ವಿಮರ್ಶೆ, ನೋಟ, ಹಂಬಲ, ಪರಿಣಾಮ.. ಇವೆಲ್ಲದರ ಪಾಕದ ಪರಿಣಾಮವಾಗಿ 'ರಾಜಾ ದಿಲೀಪ, ಲಂಕಾ ಪತನ' ಪ್ರಸಂಗಗಳ ರಚನೆ ಮಾಡಿದರು. ಪ್ರಸಂಗವನ್ನು ಓದಿದಾಗ ಪೆರಡಂಜಿಯವರ ರಂಗದ ಸೂಕ್ಷ್ಮ ನಡೆಯ ಅರಿವು, ರಂಗಭಾಷೆಯ ಜ್ಞಾನ, ಪ್ರದರ್ಶನ ಪರಿಣಾಮದತ್ತ ದೂರದೃಷ್ಟಿಯನ್ನು ಕಾಣಬಹುದು. ಪ್ರಸಂಗಗಳ ಈ ಗುಣಗಳಿಗೆ ಸುಭಗತೆಯ ಹೊಳಪಿದೆ. ಆಕಳಿಕೆ ಬರಿಸದ ಕಥಾ ಹಂದರವು ಪ್ರಸಂಗಗಳನ್ನು ಯಶದತ್ತ ಒಯ್ದಿದೆ.
'ಯಕ್ಷಗಾನವು ಪಂಡಿತರಿಗೆ ಮಾತ್ರವಲ್ಲ, ಪಾಮರರಿಗೂ ಅರ್ಥವಾಗಬೇಕು', ಕೀರ್ತಿಶೇಷ ಡಾ.ಶೇಣಿಯವರ ಮಾತುಗಳು ಪೆರಡಂಜಿಯವರ ಪ್ರಸಂಗ ಓದುತ್ತಿದ್ದಾಗ ನೆನಪಾಯಿತು. ಇದಕ್ಕೆ ಪೂರಕವಾಗಿ 'ತಾನು ಕಾವ್ಯ ಪರಿಣತನಲ್ಲ' ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. 'ಸುಲಲಿತವಾಗಿ ಹಾಡುವುದಕ್ಕೆ ಅನುಕೂಲ' ಎಂದು ಹಾಡಿದ ಭಾಗವತರು ಬೆನ್ನು ತಟ್ಟಿದ್ದಾರೆ. ತನ್ನ ಕೃತಿಯ ಪದ್ಯಗಳ ಅಕ್ಷರ ಅಕ್ಷರದ ಒಳಹೊಕ್ಕು ಓದಿದ್ದಾರೆ. ಪದದ ಒಳಾರ್ಥವನ್ನು ಬೇಧಿಸಿದ್ದಾರೆ. ಅರ್ಥಧಾರಿ-ವೇಷಧಾರಿಗೆ ಅರ್ಥವಾಗುವಂತೆ ಪೋಣಿಸಿದ್ದಾರೆ. ಒಮ್ಮೆ ಪ್ರಸಂಗ ಓದಿದರೆ ಕಥಾನಕ ವಶವಾಗಿ ಬಿಡುತ್ತದೆ. ಶ್ರೀ ಎಡನೀರು ಮೇಳವು ಈ ಎರಡು ಪ್ರಸಂಗಗಳನ್ನು ಪ್ರದರ್ಶಿಸಿದೆ. ಕಲಾವಿದರು ಮೆಚ್ಚಿಕೊಂಡಿದ್ದಾರೆ.
ಪೆರಡಂಜಿಯವರು ಸಕ್ರಿಯರಾಗಿರುವ ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನವು ಎರಡು ವರುಷಗಳಲ್ಲಿ ನಾಲ್ಕು ಕೃತಿಗಳನ್ನು ಪ್ರಕಾಶಿಸಿದೆ. ಮುಖ್ಯವಾಗಿ ಅರ್ಥಧಾರಿ, ವೇಷಧಾರಿ ಅಡ್ಕ ಗೋಪಾಲಕೃಷ್ಣ ಭಟ್ಟರ ಯಕ್ಷಗಾನ ಯಶೋಯಾನ - 'ಅಡ್ಕ-ವಚೋಹಾಸ' ಎನ್ನುವ ಅಭಿನಂದನಾ ಕೃತಿ. ಅಡ್ಕರ ಸಹಸ್ರಚಂದ್ರ ದರ್ಶನದ ಉಪಾಯನವಾಗಿ ಈ ಗ್ರಂಥ ಮೂಡಿ ಬಂದಿದೆ. ಇದರಿಂದಾಗಿ ಎಂಭತ್ತು ವರುಷ ಮೀರಿದ ಅಡ್ಕರಿಗೆ ಮರು ಯೌವನ ಬಂದಿದೆ! ಇವರು ರಚಿಸಿದ 'ಮಾಂಗಲ್ಯ ಭಾಗ್ಯ' ಎನ್ನುವ ನಾಟಕ ಮತ್ತು ನಂಜುಡ ಕವಿ ವಿರಚಿತ 'ವೀರೋಚನ ವಧೆ-ವಾಮನ ಚರಿತ್ರೆ' ಪ್ರಸಂಗವನ್ನು ಸಂಪ್ರತಿಷ್ಠಾನ ಪ್ರಕಾಶಿಸಿದೆ. ಈ ಪ್ರಸಂಗವು ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಬಹುಕಾಲದ ಹಿಂದೆ ಅಯಾಚಿತವಾಗಿ ಕೈಸೇರಿತ್ತು. ಕೀರ್ತಿಶೇಷ ವೆಂಕಟರಾಜ ಪುಣಿಂಚಿತ್ತಾಯರು ಕೃತಿಯನ್ನು ಪರಿಷ್ಕರಿಸಿದ್ದರು. ಇದರ ನಡೆ, ಪದ್ಯದ ಬಂಧ ಮತ್ತು ಸಾಹಿತ್ಯಾಂಶಗಳಿಗೆ ಅಡ್ಕರು ಪ್ರಭಾವಿತರಾಗಿ ಅಚ್ಚು ಹಾಕಿಸುವ ನಿರ್ಧಾರ ಮಾಡಿದ್ದರು. ಇನ್ನೊಂದು ಕೃತಿ ಪೆರಡಂಜಿ ವಿರಚಿತ 'ರಾಜಾ ದಿಲೀಪ' ಮತ್ತು 'ಲಂಕಾ ಪತನ' ಯಕ್ಷಗಾನ ಕೃತಿ.
ಯಕ್ಷತೂಣೀರ ಪದಾಧಿಕಾರಿಗಳಲ್ಲಿ ಬಹುಶಃ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಹಿರಿಯರು. ಅವರ ನಿರ್ದೇಶನ ಮತ್ತು ಮಾರ್ಗದರ್ಶನವು ಕಿರಿಯರಿಗೆ ಪ್ರೋತ್ಸಾಹದಾಯಕವಾಗಿದೆ. ಸಂಪ್ರತಿಷ್ಠಾನವು ಎರಡು ವಾರ್ಶಿಕೋತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸಿದೆ. ಎರಡು ವರುಷದಲ್ಲಿ ಹನ್ನೊಂದು ಮಂದಿ ಕಲಾವಿದರನ್ನು ಸಂಮಾನಿಸಿದೆ. ಪೆರಡಂಜಿಯವರ ಹಿರಿತನದಲ್ಲಿ 'ಸಕಾಲಿಕ' ಸಾಮಯಿಕ ಸಂಚಿಕೆ ಅಚ್ಚಾಗಿದೆ. ಸಂಪ್ರತಿಷ್ಠಾನವು ನಾಟ್ಯ ತರಬೇತಿ, ರಂಗ ಮಾಹಿತಿ ಶಿಬಿರ, ನವರಸ ಅಭಿನಯ ಶಿಬಿರ, ಸಾಹಿತ್ಯ ಚಟುವಟಿಕೆಗಳು, ಚಿಣ್ಣರ ಬಳಗ ಮೊದಲಾದ ಫಲಿತಾಂಶ ನಿರೀಕ್ಷಿತ ಕಲಾಪಗಳನ್ನು ಯಶಸ್ವಿಯಾಗಿ ನಡೆಸಿದೆ. ಮನೆಮನೆ ತಾಳಮದ್ದಳೆಗಳಿಗೆ ಶ್ರೀಕಾರ ಬರೆದ ತಂಡವು ಈಗಾಗಲೇ ಹಲವೆಡೆ ಕೂಟಗಳನ್ನು ಜರುಗಿಸಿದೆ. ಸಂಪ್ರತಿಷ್ಠಾನದ ಅಧ್ಯಕ್ಷರು ಈಶ್ವರ ಭಟ್ ಬಳ್ಳಮೂಲೆ ಮತ್ತು ಮುರಳಿ ಕೃಷ್ಣ ಸ್ಕಂದ ಇವರು ಕಾರ್ಯದರ್ಶಿ.
ಒಬ್ಬ ವ್ಯಕ್ತಿಯೊಳಗಿನ ಸಾಹಿತ್ಯ ಪುಷ್ಟಿ, ಯಕ್ಷಗಾನದ ಕಂಪು, ರಚನಾ ಸಾಮಥ್ರ್ಯವು ಪ್ರಕಟವಾಗಲು ಕಾಲದ ಪಕ್ವತೆ ಬೇಕಾಗುತ್ತದೆ. ಯಕ್ಷತೂಣೀರ ಸಂಪ್ರತಿಷ್ಠಾನವು ಪೆರಡಂಜಿಯವರ ಕಲಾ ಬೌದ್ಧಿಕತೆಗೆ ನೀರೆರೆದಿದೆ. ಸ್ವಲ್ಪ ಕಾಲ ಎಲ್ಲಾ ಚಟುವಟಿಕೆಯಿಂದ ದೂರವಿದ್ದೆ. ಕಿರಿಯರ ಒತ್ತಾಯ, ಹಿರಿಯರ ಹಾರೈಕೆಯಿಂದ ಎಪ್ಪತ್ತರ ವಯಸ್ಸಲ್ಲೂ ಹುರುಪು ಬಂದಿದೆ, ಎಂದು ಖುಷಿಯಿಂದ ನಗೆಯಾಡುತ್ತಾರೆ. ಎಪ್ಪತ್ತರ ಹರೆಯದ ಭಟ್ಟರೊಳಗಿನ ಕಲಾವಿದ, ಸಾಹಿತಿ, ರಸಜ್ಞನಿಗೆ ಈಗ ಇಪ್ಪತ್ತರ ಯೌವನ ಬಂದಿದೆ.
No comments:
Post a Comment