Friday, August 11, 2017

ರಂಗ ಪ್ರಿನ್ಸಿಪಲ್ ತುಂಬಿದ ಪ್ರಿನ್ಸಿಪಾಲ್

ಪ್ರಜಾವಾಣಿಯ ದಧಿಗಿಣತೋ ಅಂಕಣ / 28-4-2017
  
            ಕುರಿಯ ಗಣಪತಿ ಶಾಸ್ತ್ರಿಗಳು ರಂಗದಲ್ಲಿ ಪ್ರಿನ್ಸಿಪಾಲ್!
           ಹತ್ತಿರದಿಂದ ಬಲ್ಲ ಪದ್ಯಾಣ ಶಂಕರನಾರಾಯಣ ಭಟ್ಟರು ಐದು ಪದಗಳಲ್ಲಿ ಭಾಗವತ ಕುರಿಯರ ವ್ಯಕ್ತಿತ್ವವನ್ನು ಪೋಣಿಸುತ್ತಾರೆ. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಯು ಪ್ರಿನ್ಸಿಪಾಲರಿಗೆ ಅಂಜುವಷ್ಟು ಬೇರಾರಿಗೂ ಅಂಜಲಾರ. ಅದು ಹುದ್ದೆಯ ಘನತೆ ಮತ್ತು ಆ ಹುದ್ದೆಗಿರಬೇಕಾದ ಪೂರ್ತಿ ಅರ್ಹತೆ ಆತನಲ್ಲಿದ್ದಾಗ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ವ್ಯಕ್ತಿತ್ವವೇ ವಿದ್ಯಾರ್ಥಿಗಳನ್ನು ಬಾಗಿಸುತ್ತದೆ.
           ಯಕ್ಷಗಾನದ ವಿಚಾರಕ್ಕೆ ಬಂದಾಗ ಕುರಿಯರು ನಿಜಾರ್ಥದಲ್ಲಿ ಪ್ರಿನ್ಸಿಪಾಲ್. ಅದು ಅವರ ರಂಗಾನುಭವ. ಸ್ಥಾಪಿಸಿದ ವೈಯಕ್ತಿಕ ಛಾಪು. ಭಾಗವತಿಕೆಯ ಪಡಿಮಂಚದಲ್ಲಿದ್ದರೆ ಕಲಾವಿದನ ಮತಿ ಸೂಕ್ಷ್ಮತೆಯತ್ತ ಜಾರುತ್ತದೆ. ಬುದ್ಧಿ ಜಾಗೃತವಾಗಿರುತ್ತದೆ. ತನಗೆ ಖುಷಿ ಬಂದಂತೆ ರಂಗವನ್ನಾಳುವುದಕ್ಕೆ ಅಸಾಧ್ಯವಾದಾಗ ಸ್ವ-ನಿಯಂತ್ರಣ ಕಲಾವಿದನಿಗೆ ಬಂದುಬಿಡುತ್ತದೆ.
           "ಕಲಾವಿದ ನನಗೆ ಭಯ ಪಡುವುದು ಬೇಡ. ರಂಗಕ್ಕೆ ಗೌರವ ಕೊಡಬೇಕು. ರಂಗಕ್ಕೆ ಭಯ ಪಡಬೇಕು. ರಂಗ ಅಂದರೆ ದೇವರ ಸ್ಥಾನ. ದೇವರ ಮುಂದೆ ನಾವು ಬಾಗಲೇ ಬೇಕಲ್ವಾ," ಭಯದ ವಿಚಾರ ಬಂದಾಗ ಶಾಸ್ತ್ರಿಗಳ ನಿಲುವು ಹೀಗೆ. ಭಾಗವತಿಕೆಗೆ ಮಾನ, ಪ್ರಾಣವನ್ನು ತುಂಬಿ ಎತ್ತರಕ್ಕೆ ಬೆಳೆದವರಿಂದ ಮಾತ್ರ ಇಂತಹ ನಿಲುಮೆ ಕಾಣಲು ಸಾಧ್ಯ.
              ತಾಳಮದ್ದಳೆಯಲ್ಲೂ ಕೂಡಾ ಕುರಿಯರ ನಿಯಂತ್ರಣ. ಒಮ್ಮೆ ವಿದ್ವಾಂಸರೇ ಅರ್ಥಧಾರಿಗಳಾಗಿರುವ ಕೂಟ. ಸಂಸ್ಕೃತ ಸೂಕ್ತಿಯೊಂದು ಅರ್ಥದ ಮಧ್ಯೆ ಹಾದು ಹೋದಾಗ ಕುರಿಯರು ತಕ್ಷಣ, 'ಏನದರ ಅರ್ಥ' ಎಂದು ಕೇಳಬೇಕೇ? ಒಂದು ಕ್ಷಣ ಆ ಆರ್ಥಧಾರಿ ಮೌನವಾದರು. ಸಭಾಸದರಲ್ಲೂ ಆಶ್ಚರ್ಯ. ಶ್ಲೋಕದ ಸೂಕ್ಷ್ಮಾರ್ಥವನ್ನು ಅರ್ಥಧಾರಿ ಹೇಳಿದ ಬಳಿಕ ಅರ್ಥ ಮುಂದುವರಿಯಿತು. ಪ್ರೇಕ್ಷಕರ ಸಾಲಿನಲ್ಲಿ ಪಂಡಿತರೂ ಇರುತ್ತಾರೆ. ಪಾಮರರೂ ಇರುತ್ತಾರೆ. ಎಲ್ಲರಿಗೂ ಅರ್ಥವಾಗುವುದು ಬೇಡ್ವೇ, ಎಂದಿದ್ದರು.
              ಈಚೆಗೆ 'ತ್ರಿಜನ್ಮ ಮೋಕ್ಷ' ಪ್ರಸಂಗದ ಕಾಲಮಿತಿ ಪ್ರದರ್ಶನ. ರಾತ್ರಿ ಎಂಟು ಗಂಟೆಗೆ ಆಟ ಶುರು. ಕುರಿಯರು 'ಹಿರಣ್ಯಕಶಿಪು' ಭಾಗಕ್ಕೆ ಭಾಗವತಿಕೆ. ಏಳುವರೆಗೆ ಚೌಕಿಯಲ್ಲಿ ಹಾಜರ್. ಅಂದು ನನಗೂ ಪಾತ್ರವಿತ್ತು. ಪದ್ಯ, ಅದಕ್ಕೆ ಹೇಳಬೇಕಾದ ಅರ್ಥ, ಭಾವಗಳು ಮೊದಲಾದ ವಿಚಾರಗಳನ್ನು ಹೇಳಿದ್ದರು. ಪ್ರಹ್ಲಾದ ಪಾತ್ರಧಾರಿ ಮೊಬೈಲ್ನ್ನು ಉಜ್ಜುವುದರಲ್ಲಿ ತಲ್ಲೀನನಾಗಿದ್ದ! ರಂಗದಲ್ಲಿ ಪಾತ್ರವು ಪರಿಣಾಮವಾಗಬೇಕಾದರೆ ಪ್ರಹ್ಲಾದ-ಕಯಾದು ಪಾತ್ರಗಳೆರಡರ ದಾರಿ ಸಮಾನವಾಗಿರಬೇಕು. "ಸರಿ, ನೀವು ಏನೋ ಕೇಳಿದ್ರಿ. ಇನ್ನೂ ಎಳೆಯವನಾದ ಆತನಿಗೆ ಮೊಬೈಲೇ ಸರ್ವಸ್ವ. ಏನು ಮಾಡುವುದಕ್ಕಾಗುತ್ತದೆ ಹೇಳಿ. ಪಾತ್ರಧಾರಿಯ ಬಳಿಗೆ ಭಾಗವತ ಹೋಗಿ ಸಮಾಲೋಚಿಸುವ ಕ್ರಮವಿಲ್ಲ. ಭಾಗವತ ಇದ್ದಲ್ಲಿಗೆ ಕಲಾವಿದ ಬಂದು ಪಾತ್ರದ ನಡೆಯ ಕುರಿತು ಮಾತನಾಡಬೇಕು. ಆಗ ಪ್ರದರ್ಶನ ಒಟ್ಟಂದವಾಗುತ್ತದೆ. ಇದು ಯಕ್ಷಶಿಸ್ತು. ಈ ಶಿಸ್ತನ್ನು ಕಿರಿಯರು, ಹಿರಿಯರು ಪಾಲಿಸಬೇಕು. ಅದು ಮೇಳದ ಕ್ರಮ," ಎಂದರು.
              ಕುರಿಯ ಶಾಸ್ತ್ರಿಗಳು ಹೇಳುತ್ತಿದ್ದಾಗ ವರ್ತಮಾನದ ಚೌಕಿಯ ವಿದ್ಯಮಾನಗಳು ರಾಚಿದುವು. ರಂಗದ ಬದ್ಧತೆಯಿದ್ದ ಭಾಗವತರು ಮೊದಲೇ ಚೌಕಿಯಲ್ಲಿ ಉಪಸ್ಥಿತರಿರುತ್ತಾರೆ. ಈಗಿನ 'ತಾರಾಮೌಲ್ಯ'(!) ಅಂಟಿಕೊಂಡ ಬಹುತೇಕರು ಅವರ ಭಾಗವತಿಕೆ ಇರುವ ಸಮಯ ಸನ್ನಿಹಿತವಾಗುವಾಗ ಮಾತ್ರ ಚೌಕಿಯಲ್ಲಿ ಪ್ರತ್ಯಕ್ಷ. ನಿತ್ಯವೂ ಒಂದೇ ಪ್ರಸಂಗವಾದರೆ ಓಕೆ. ಬೇರೆ ಪ್ರಸಂಗಗಳಾದರೆ ಪಾತ್ರಧಾರಿಗೆ ಹೇಳುವವರು ಯಾರು? ಅತ ಕೇಳುವುದು ಯಾರಲ್ಲಿ? ರಂಗಕ್ಕೆ ಭಾಗವತನೇ ನಿರ್ದೇಶಕ. ಆತನ ಸೂತ್ರಧಾರಿಕೆಯಲ್ಲಿ ಪ್ರಸಂಗ ಓಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ನೋಡಿದ್ದೇನೆ - ಪಾತ್ರವು ರಂಗ ಪ್ರವೇಶಿಸಲು ಇನ್ನೇನು ಐದಾರು ನಿಮಿಷ ಇರುವಾಗಲಷ್ಟೇ ಸಹ ಪಾತ್ರಧಾರಿಗಳಲ್ಲಿ ಮಾತನಾಡುವ, ಸಮಾಲೋಚಿಸುವ, ಚಡಪಡಿಸುವ ಕ್ಷಿಪ್ರ ವಿದ್ಯಮಾನಗಳು ಚೌಕಿಯಲ್ಲಿ ನಡೆಯುತ್ತಲೇ ಇರುತ್ತದೆ. ಕೊನೆಗೆ ರಂಗದಲ್ಲಿ ಪಾತ್ರವು ಏನೇನೋ ಆಗಿ ನಿರ್ಗಮಿಸುತ್ತವೆ.
                ಪ್ರಸಂಗದ ಪದ್ಯಗಳ ಭಾವ ಏನಿದೆಯೋ ಅದನ್ನು ಪಾತ್ರಧಾರಿಯಲ್ಲಿ ಕುರಿಯರು ನಿರೀಕ್ಷಿಸುತ್ತಾರೆ. ಪದ್ಯದ ಅರ್ಥ, ಭಾವಗಳು ರಂಗದಲ್ಲಿ ಅನಾವರಣಗೊಳ್ಳಬೇಕು. ಕಲಾವಿದನನ್ನು ಅಷ್ಟು ಗಾಢವಾಗಿ ಚೌಕಿಯಲ್ಲಿ ಸಿದ್ಧಗೊಳಿಸುತ್ತಾರೆ. ಒಂದೆರಡು ಬಾರಿ ತಪ್ಪಿದರೆ ಕ್ಷಮ್ಯ. ತಪ್ಪುವ ಚಾಳಿ ಉದಾಸೀನತೆಯಿಂದ ಮುಂದುವರಿದರೆ ಕುರಿಯರು ಕೆರಳುತ್ತಾರೆ. 'ವಿಷಯ ಹೇಳು ಮಾರಾಯ' ಎಂದು ಆತನನ್ನು ಹಳಿಗೆ ತರುತ್ತಾರೆ. ಹಿರಿಯ ಕಲಾವಿದರು ಅಬದ್ಧ ಮಾತನಾಡಿದರೆ ಕುರಿಯರಿಗೆ ಅಸಹನೆಯಾಗುತ್ತದೆ. ಅಂತಹ ಕಲಾವಿದನನ್ನು ಪದ್ಯ ಕೊಡದೆ ನೇಪಥ್ಯಕ್ಕೆ ಕಳುಹಿಸಿದ ಒಂದೆರಡು ಕ್ಷಣಗಳು ನೆನಪಾಗುತ್ತವೆ. ಪ್ರಸಂಗ, ಪಾತ್ರದ ಕುರಿತಾದ ಅವರ ಜ್ಞಾನ ಮತ್ತು ರಂಗದ ನಿಷ್ಠೆಗಳೇ ಕುರಿಯರ ಈ ವರ್ತನೆಗೆ ಕಾರಣ. ಪಾತ್ರದ ಅಭಿವ್ಯಕ್ತಿಯು ತೃಪ್ತಿಕರವಾಗಿ ಬಂದರೆ 'ಶಹಬ್ಬಾಸ್' ಎಂದು ರಂಗದಲ್ಲೇ ಪ್ರೋತ್ಸಾಹಿಸುತ್ತಾರೆ.
               ಸುಮಾರು ಹತ್ತು ವರುಷಗಳ ಕಾಲ ಶ್ರೀ ಕಟೀಲು ಮೇಳದಲ್ಲಿ ಕುರಿಯರು ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರು ಜತೆಗಿದ್ದರು. ಯಕ್ಷಗಾನಕ್ಕೆ ಎಷ್ಟು ಬೇಕೋ ಅಷ್ಟು ರಾಗಗಳು ಕುರಿಯರಿಗೆ ತಿಳಿದಿದ್ದುವು. ಯಕ್ಷಗಾನದ ಹೊರತಾಗಿ ಬೇರೇನನ್ನೋ ಮಾಡುವುದನ್ನು ವಿರೋಧಿಸುತ್ತಿದ್ದರು. ’ಭಾಗವತಿಕೆ ಅಂದರೆ ಸಂಗೀತ ಕಛೇರಿ ಅಲ್ಲ" ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಅವರದು ಭಾವಪೂರ್ಣವಾದ ಭಾಗವತಿಕೆ. ನಾವಿಬ್ಬರೂ ಹಗಲು ರಂಗದ ಬಗ್ಗೆ ಮಾತನಾಡುತ್ತಿರಲಿಲ್ಲ. ರಂಗದಲ್ಲೇ ಸಂದರ್ಭ ಬಂದಾಗಲೆಲ್ಲಾ ಬೇಕಾದ ಬದಲಾವಣೆಗಳನ್ನು ಮಾಡುತ್ತಿದ್ದೆವು. ಅಂತಹುಗಳು ಫಕ್ಕನೆ ಪ್ರೇಕ್ಷಕರಿಗೆ ಗೋತ್ತಾಗದು. ಮೌಖಿಕವಾದ ಮಾತುಕತೆಗಳು ವೇಷಧಾರಿಗೂ ತಿಳಿಯದು. ಹೀಗೆ ಎಷ್ಟೋ ಆವಿಷ್ಕಾರಗಳಾದುದುಂಟು. ಅವೆಲ್ಲಾ ಅನುಭವ ವೇದ್ಯ ಎಂದು ಮೇಳದ ಆ ದಿನಗಳ ಖುಷಿಯನ್ನು ಪದ್ಯಾಣರು ಹಂಚಿಕೊಳ್ಳುತ್ತಾರೆ.
               ಮೇಳದಲ್ಲಿದ್ದಾಗ ಕುರಿಯರು ಭಾಗವತರು ಮಾತ್ರವಲ್ಲ, ಕಲಾವಿದರ ಪಾಲಿನ ಆಪದ್ಭಾಂಧವ. ಕಲಾವಿದರ ಕಷ್ಟವನ್ನು ತನ್ನ ಕಷ್ಟವೆಂದು ಮೈಮೇಲೆ ಎಳೆದುಕೊಳ್ಳುವ ಗುಣ. ತನ್ನ ಮೇಳದ ಕಲಾವಿದನೊಬ್ಬನಿಗೆ ಅಸೌಖ್ಯವೆಂದು ತಿಳಿದರೆ ಸಾಕು, ಅವನಿಗೆ ಚಿಕಿತ್ಸೆ ಕೊಡಿಸಿ, ಮನೆಯ ತನಕ ತಲುಪಿಸಿದ ನಂತರವೇ ತನ್ನ ಮನೆಗೆ ಹೋಗುತ್ತಿದ್ದರು. ಅವನ ಯೋಗ-ಕ್ಷೇಮವನ್ನು ಹೊಣೆಯ ರೀತಿಯಂತೆ ವಿಚಾರಿಸುತ್ತಿದ್ದರು.  ಸಹಕಾರವನ್ನು ಮಾಡಿದ್ದುಂಟು. ಶಾಸ್ತ್ರಿಗಳ ಈ ರೀತಿಯ ಕೊಡುಗೆಗಳು ಯಕ್ಷಲೋದಲ್ಲಿ ಎಲ್ಲೂ ದಾಖಲಾಗಿಲ್ಲ. ಅದು ದಾಖಲಾಗುವುದು ಕುರಿಯರಿಗೂ ಇಷ್ಟವಾಗದ ಸಂಗತಿ. ಹೀಗೆ ಉಪಕಾರವನ್ನು ಪಡೆದ ಕಲಾವಿದರ ಸಂಖ್ಯೆ ದೊಡ್ಡದು. "ಹೌದು ಕಾರಂತಣ್ಣ, ಮೇಳ ಎನ್ನುವುದು ಮನೆಯಿದ್ದಂತೆ. ಕಲಾವಿದ ಮನೆಯ ಸದಸ್ಯ. ಒಬ್ಬ ಸದಸ್ಯನಿಗೆ ತೊಂದರೆಯಾದರೆ ಸ್ಪಂದಿಸುವುದು ಮಾನವೀಯತೆ ಅಲ್ವಾ. ಮಾನವೀಯತೆ ಇಲ್ಲದ ಬದುಕು ಬೇಕಾ? ನನಗೆ ದೇವರು ಕೊಡ್ತಾನೆ." ಎಂದಿದ್ದರು.
               ಮೇಳದಲ್ಲಿದ್ದಾಗ ಅತಿಥಿಗಳು ಬಂದರೆ ಕುರಿಯರು ಕರೆದು ಕರೆದು ಮಾತನಾಡಿಸಿದ್ದಾರೆ. ಚೌಕಿಯ ಸಂಪನ್ಮೂಲದಂತೆ ಚಹ, ತಿಂಡಿಗಳ ಆತಿಥ್ಯ ನೀಡಿದ್ದಾರೆ. ರಂಗದಲ್ಲೂ ಹಾಡಿದ್ದಾರೆ. ಪಾತ್ರದೊಂದಿಗೆ ಮಾತನಾಡಿದ್ದಾರೆ. ಹೀಗೆ ಯಕ್ಷಲೋಕದಲ್ಲಿ ಮಾತೇ ಮಾಣಿಕ್ಯವಾದ ಕುರಿಯರನ್ನು ನೋಡುತ್ತಿದ್ದೇನೆ - ಮಾತಿಗೆ ಮತಿಯೇ ಕಡಿವಾಣ ಹಾಕಿದೆ! ಮಾತನಾಡಿಸಿದರೆ ಮಾತ್ರ ಮನತುಂಬಿ ಮಾತನಾಡುತ್ತಾರೆ. "ಯಾರಿಗೆ ಬೇಕು ಮಾತು? ಎಲ್ಲರೂ ಮಾತನಾಡುವವರೇ?" ಎರಡು ವಾಕ್ಯದ ಯಕ್ಷ ಪ್ರಿನ್ಸಿಪಾಲರ ಮಾತಿನಲ್ಲಿ ವರ್ತಮಾನ ರಂಗದ ಕತೆಯಿದೆ-ವ್ಯಥೆಯಿದೆ. ತಲೆಮಾರು ಬದಲಾದಾಗ ರೂಪುಗೊಳ್ಳುವ ಯಕ್ಷ-ಮನಃಸ್ಥಿತಿಗೆ ಕುರಿಯರು ಬುದ್ಧಿಪೂರ್ವಕವಾಗಿ ಸ್ಪಂದಿಸುತ್ತಿಲ್ಲ. ಈಗಲೂ ಹಳೆಯ ಕುರಿಯರೇ ಕಣ್ತುಂಬಿಕೊಳ್ಳುತ್ತಾರೆ. ಯಾಕೆಂದರೆ ಅವರು ಯಕ್ಷ ಪ್ರಿನ್ಸಿಪಾಲ್. ಆ ಜವಾಬ್ದಾರಿ ಜಾಗದ ಬದ್ಧತೆಯು ಕಾಲಕಾಲಕ್ಕೆ ಬದಲಾಗುವುಂತಹುದಲ್ಲ ಎನ್ನುವ ಪ್ರಜ್ಞೆ ಜಾಗೃತವಾಗಿದೆ. ರಂಗದಿಂದ ತಾನು ದೂರ ಸರಿದಷ್ಟೂ ರಂಗವೇ ಹತ್ತಿರಕ್ಕೆ ಎಳೆದುಕೊಳ್ಳುತ್ತಿರುವುದು ಕುರಿಯರ ಈ ಜಾಗೃತಚಿತ್ತ ಗುಣದಿಂದ ಎಂದು ನಂಬಿದ್ದೇನೆ.    
(ಚಿತ್ರ : ಉದಯ ಕಂಬಾರ್ ನೀರ್ಚಾಲು)


No comments:

Post a Comment