Tuesday, August 22, 2017

ಒಡನಾಡಿಗಳ ಜತೆ ಒಡನಾಟದ ಮೆಲುಕು


ಪ್ರಜಾವಾಣಿಯ ’ದಧಿಗಿಣತೋ” ಅಂಕಣ / 26-5-2017
(ಚಿತ್ರಗಳು: ಯಜ್ಞ ಮಂಗಳೂರು)

             ಯಕ್ಷಗಾನದ ಪಾತ್ರಗಳನ್ನು ಅಭಿನಯದಿಂದ ಬೆರಗುಗೊಳಿಸಿದ ಸೂರಿಕುಮೇರು ಗೋವಿಂದ ಭಟ್ಟರು ರಂಗದಿಂದ ನಿವೃತ್ತಿ! ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐವತ್ತು ವರುಷ ವ್ಯವಸಾಯವನ್ನು ಮಾಡಿ, ಅದೇ ಮೇಳದಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದಾಗ ಒಡನಾಡಿ ಕಲಾವಿದರು, ಅಭಿಮಾನಿಗಳ ನಗೆ ಮಾಸಿತು. "ನೀವು ವೇಷ ಮಾಡಬೇಕೆಂದಿಲ್ಲ. ಚೌಕಿಯಲ್ಲಿರುವುದು ಕಲಾವಿದರಿಗೂ, ಮೇಳಕ್ಕೂ ಶೋಭೆ," ಎನ್ನುವ ಅಭಿಪ್ರಾಯದಲ್ಲಿ ಭಿನ್ನತೆಯಿರಲಿಲ್ಲ. ಈ ಮಾತನ್ನು ಮೇಳದ ಯಜಮಾನರಾದ ಡಾ.ವೀರೇಂದ್ರ ಹೆಗ್ಗಡೆಯವರು ಪುಷ್ಟಿಗೊಳಿಸಿದರು.
            2017 ಮೇ 21, 22ರಂದು ಉಜಿರೆಯಲ್ಲಿ ಜರುಗಿದ 'ಗೋವಿಂದ ಕಲಾಭಾವಾರ್ಪಣಂ' ಕಲಾಪಗಳಲ್ಲಿ ಗೋವಿಂದ ಭಟ್ಟರು (Soorikumeru Govinda Bhat) ರಂಗದಲ್ಲಿ, ಚೌಕಿಯಲ್ಲಿ ಮತ್ತು ರಂಗದ ಹೊರಗೆ ಅವರ ಉನ್ನತ-ವಿಭಿನ್ನವಾದ ವ್ಯಕ್ತಿತ್ವಗಳಿಗೆ ಅಭಿನಂದನೆ ಸಲ್ಲಲ್ಪಡುವಾಗ, ಮೇಳ ನಿವೃತ್ತಿಯ ಸೊಲ್ಲುಗಳು ವಿಷಾದದ ರೂಪದಲ್ಲಿ ಮಿಂಚುತ್ತಿದ್ದುವು. ಒಬ್ಬ ಕಲಾವಿದ ನಿವೃತ್ತಿಯನ್ನು ಬಯಸಿದಾಗ ರಂಗವೂ ಸೇರಿದಂತೆ ಯಕ್ಷ ಮನಸ್ಸುಗಳೆಲ್ಲಾ ಕೋರಿಕೆಯನ್ನು ತಿರಸ್ಕರಿಸುವ ಮನಃಸ್ಥಿತಿ ಪದ್ಮಗೌರವಕ್ಕಿಂತ ಹಿರಿದಲ್ವಾ. 
             ಭಟ್ಟರು ಬದುಕಿನಲ್ಲಿ ಮತ್ತು ವೃತ್ತಿಯಲ್ಲಿ ಹೊಸತನ್ನು ಸ್ಥಾಪಿಸುತ್ತಾ ಬಂದವರು. ಉಜಿರೆಯ ಕಾರ್ಯಕ್ರಮವೂ ಅಷ್ಟೇ. ತನ್ನನ್ನು ಹೊಗಳಬೇಕು, ಸಂಮಾನಿಸಬೇಕೆನ್ನುವ ಆಶಯವಿದ್ದಿರಲಿಲ್ಲ. ಯಕ್ಷ ಬದುಕಿಗೆ ಆಸರೆಯಾದ ವ್ಯಕ್ತಿಗಳನ್ನು ಗೌರವಿಸುವ ಪರಿಪಾಠಕ್ಕೆ ಶ್ರೀಕಾರ ಬರೆದಿದ್ದಾರೆ. ಕಾರ್ಯಕ್ರಮವನ್ನು ಸಂಘಟಿಸಿದ ಕಲಾವಿದ ಉಜಿರೆ ಅಶೋಕ ಭಟ್ ಹೇಳುತ್ತಾರೆ, "ಭಟ್ಟರ ಈ ನಡೆ ಯಕ್ಷಗಾನ ಕ್ಷೇತ್ರದಲ್ಲೇ ಅಪೂರ್ವ.  ಕುಟುಂಬದವರನ್ನೆಲ್ಲಾ ಸೇರಿಸಿ ತನ್ನ ಕಲಾಯಾನಕ್ಕೆ ಪೂರ್ಣ ಪ್ರೋತ್ಸಾಹ ನೀಡಿದವರನ್ನು ನೆನೆಯುವ, ಕಲಾಭಾವಾರ್ಪಣ ಸಮರ್ಪಿಸುವ ನಿರ್ಧಾರವನ್ನು ನೋಡಿ ಆಶ್ಚರ್ಯ ಪಟ್ಟಿದ್ದೇನೆ. ಓರ್ವ ಕಲಾವಿದ ಹೀಗೂ ಇರಲು ಸಾಧ್ಯವಾ ಎಂದು ಚಕಿತನಾಗಿದ್ದೇನೆ."
                ಐವತ್ತು ವರುಷಗಳ ಮೇಳ ವ್ಯವಸಾಯದಲ್ಲಿ ಮನದ ಮಾತುಗಳಿಗೆ ಅವಕಾಶ ಕಡಿಮೆ. ಮೇಳದ ತನ್ನೊಲವಿನ ಕಲಾವಿದರು, ಶಿಷ್ಯರೊಂದಿಗೆ ಭಾವ ಸಂವಾದವನ್ನು ಮಾಡುವ ಉತ್ಕಟ ಬಯಕೆ. ಸಿಹಿ-ಕಹಿಗಳನ್ನು ಹಂಚಿಕೊಳ್ಳಲು ಕಾತರ. ಶಿಷ್ಯರಿಗೆ ಗುರುವಿನ ಮುಂದೆ ಮಾತನಾಡಲು ಮುಜುಗರ. "ಇಪ್ಪತ್ತೈದು ವರುಷದಿಂದ ಗೋವಿಂದ ಭಟ್ಟರ 'ವಿಶ್ವಾಮಿತ್ರ' ಪಾತ್ರವನ್ನು ನೋಡುತ್ತಾ ಬೆಳೆದಿದ್ದೇನೆ. ಆ ಪಾತ್ರ ಪಾಲಿಗೆ ಬಂದಾಗ ಅವರನ್ನು ನೆನಪು ಮಾಡಿಕೊಳ್ಳುತ್ತಾ ಪಾತ್ರ ನಿರ್ವಹಿಸುತ್ತೇನೆ. ಆದರೆ ಅವರಂತೆ ಅಭಿವ್ಯಕ್ತಿಸಲು ಸಾಧ್ಯವಾಗಿಲ್ಲ. ಆ ಮಟ್ಟಕ್ಕೆ ಏರಲು ನಮ್ಮ ಜೀವಮಾನ ಸಾಲದು. ಪುರಾಣಗಳಲ್ಲಿ ಸಾಧನೆಗೆ ಪ್ರತೀಕವಾಗಿ ವಿಶ್ವಾಮಿತ್ರ ಕಾಣಸಿಗುತ್ತಾನೆ. ನಮ್ಮ ಮುಂದಿರುವ ಗೋವಿಂದ ಭಟ್ಟರು ಸಾಧನೆಯಲ್ಲಿ ವಿಶ್ವಾಮಿತ್ರನಂತೆ," ಎಂದವರು ಕಟೀಲು ಮೇಳದ ಕಲಾವಿದ ದಿವಾಣ ಶಿವಶಂಕರ ಭಟ್.
                ಪ್ರಶ್ನೆಗಳು ಅಭಿನಂದನೆಗಳ ರೂಪದಲ್ಲಿ ಪ್ರಕಟವಾಗುತ್ತಿದ್ದುವು. ಎಲ್ಲರ ಮಾತುಗಳನ್ನು ಆಲಿಸಿದ ಗೋವಿಂದ ಭಟ್ಟರು ಒಂದಷ್ಟು ಚಿಂತನೆಗಳನ್ನು ಹರಿಯಬಿಟ್ಟರು. ಅದು ಕಲಾವಿದರಿಗೆ ಸೀಮಿತವಲ್ಲ. ಅದರಲ್ಲಿ ಅಭಿಮಾನಿಗಳಿಗೆ ಸೂಚನೆಗಳಿದ್ದುವು. ಯಜಮಾನರಲ್ಲಿ ವಿನೀತತೆಯಿದ್ದುವು. ಕಲಾವಿದನ ಬದುಕಿನತ್ತ ನೋಟವಿತ್ತು. ಒಬ್ಬ ಕಲಾವಿದ ಒಂದೇ ಮೇಳದಲ್ಲಿ ತಿರುಗಾಟ ಮಾಡುವುದರಿಂದ ಏನು ಪ್ರಯೋಜನ? ಆ ಮೇಳವನ್ನು ಬಿಟ್ಟರೆ ಆಗುವ ಲಾಭವೇನು? ಈ ಎರಡು ಪ್ರಶ್ನೆಗಳು ಸಾಕಷ್ಟು ವಿಚಾರಗಳನ್ನು ಪೋಸ್ಟ್ ಮಾರ್ಟಂ ಮಾಡುವಲ್ಲಿ ಸಫಲವಾದುವು.
             ಮೇಳದ ತಿರುಗಾಟದಲ್ಲಿ ಆರ್ಥಿಕ ಅನುಕೂಲಗಳನ್ನು ಕಲಾವಿದ ಅಪೇಕ್ಷಿಸುತ್ತಾನೆ, ತಪ್ಪಲ್ಲ. ತಾನಿದ್ದ ಮೇಳವು ನೀಡುವ ಸಂಭಾವನೆಗಿಂತ ಹೆಚ್ಚು ಸಂಭಾವನೆ ನೀಡುವ ಮೇಳಗಳತ್ತ ಆಸಕ್ತನಾಗುವುದು ಸಹಜ. ಮೇಳದಲ್ಲಿ ಸೀಮಿತವಾದ ವೇಷಗಳನ್ನು ಮಾಡಬೇಕಾಗುತ್ತದೆ. ಒಂದೇ ಪ್ರಸಂಗಗಳನ್ನು ನಿರಂತರ ಆಡುವಾಗ ಪಾತ್ರವು ಕೂಡಾ ಬದಲಾಗುವುದಿಲ್ಲ. ಬೇರೆ ಮೇಳದಲ್ಲಿ ಉತ್ತಮ ಪಾತ್ರಗಳು ಸಿಗಬಹುದೆನ್ನುವ ನಿರೀಕ್ಷೆ. ತನ್ನ ಪ್ರತಿಭೆಯನ್ನು, ಸಾಮಥ್ರ್ಯವನ್ನು ಪ್ರಕಟಿಸಲು ಇತರ ಮೇಳಗಳಲ್ಲಿ ಸಾಧ್ಯ. ತಾನಿದ್ದ ಮೇಳಕ್ಕಿಂತ ಅನ್ಯ ಮೇಳಗಳಲ್ಲಿ ಸೌಕರ್ಯ ಹೆಚ್ಚು ಕೊಡುತ್ತಾರೆ ಎನ್ನುವ ನಂಬುಗೆ. ಮೇಳದ ತಿರುಗಾಟದಲ್ಲಿ ಕಲಾವಿದ ಕನಿಷ್ಟ ವಾರಕ್ಕೊಮ್ಮೆಯಾದರೂ ಮನೆಮಂದಿಯನ್ನು ಭೇಟಿ ಮಾಡಬೇಕೆನ್ನುವ ಆತುರದಲ್ಲಿರುತ್ತಾನೆ. ಇದು ಅಸಾಧ್ಯವಾದಾಗ ಮೇಳ ಬದಲಿಸುವ ಅಥವಾ ಹತ್ತಿರವೇ ತಿರುಗಾಟ ಮಾಡುತ್ತಿರುವ ಮೇಳಗಳನ್ನು ಆಯ್ಕೆ ಮಾಡುತ್ತಾನೆ. 
               ಮೇಳಗಳು ಈಗ ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಂಡಿವೆ. ವರ್ತಮಾನ ಕಾಲಕ್ಕೆ ಅನಿವಾರ್ಯ ಕೂಡಾ. ಕಲಾವಿದ ಮತ್ತು ಕಲಾವಿದ ಕುಟುಂಬಗಳಿಗೆ ಕಾಲಮಿತಿ ವ್ಯವಸ್ಥೆಗಳು ಪೂರಕವಾಗಿವೆಯೇ? ಸಂಜೆ ಏಳರಿಂದ ರಾತ್ರಿ ಹನ್ನೆರಡರ ತನಕ ಪ್ರದರ್ಶನ. ನಂತರ ಆತ ವಿಶ್ರಾಂತಿಯನ್ನು ಪಡೆಯಬೇಕು. ಬೆಳಿಗ್ಗೆ ಇನ್ನೊಂದು ಕ್ಯಾಂಪಿಗೆ ಪಯಣ. ಆಟ ಮುಗಿಸಿ ಮನೆಗೆ ಹೋಗಬೇಕಾದರೆ ಸ್ವಂತ ವಾಹನ ಹೊಂದಿರಬೇಕು. ಅದಕ್ಕೊಂದಿಷ್ಟು ಖರ್ಚು ಬೇರೆ. ಎಲ್ಲಾ ಕಲಾವಿದರೂ ವಾಹನ ಹೊಂದಿರುವುದಿಲ್ಲ. ವಾಹನ ಇರುವವರು ಆಟ ಮುಗಿಸಿ ಮನೆ ತಲಪುವಾಗ ಬೆಳಗ್ಗಿನ ಜಾವ ಆಗಿರುತ್ತದೆ. ಮನೆಗೆ ಹೋಗಿ ಮನೆವಾರ್ತೆಯನ್ನು ನಿಭಾಯಿಸಿ ವಿಶ್ರಾಂತಿಗೆ ಜಾರಲು ಮನಸ್ಸು ಅಣಿಯಾಗುತ್ತಿದ್ದಂತೆ ಅಂದಿನ ಆಟಕ್ಕೆ ಹೊರಡುವ ಒತ್ತಡ. ರಾತ್ರಿಯೂ ನಿದ್ದೆಯಿಲ್ಲ, ಹಗಲೂ ಇಲ್ಲ! ರಾತ್ರಿಯಿಡೀ ಪ್ರದರ್ಶನ ಇದ್ದಾಗ ಕಲಾವಿದ ಚೌಕಿಯಲ್ಲಿ ಅಷ್ಟಿಷ್ಟು ನಿದ್ದೆ ಮಾಡುತ್ತಿದ್ದ. ಈಗ ನಿದ್ದೆ ಮಾಡುವ  ಹೊತ್ತಲ್ಲಿ ಮಾರ್ಗದಲ್ಲಿ ಪಯಣಿಸುತ್ತಾ ಇರುತ್ತಾನೆ!
               ಟೆಂಟ್ ಪ್ರದರ್ಶನಗಳ ಕಾಲಘಟ್ಟದಲ್ಲಿ ಕಲಾವಿದನಿಗೆ 'ಅಭಿಮಾನಿಗಳು' ಕಡಿಮೆ. ಈಗ  ಬಾಲಕಲಾವಿದನಿಂದ ತೊಡಗಿ ಭಾಗವತರ ತನಕ ಅಭಿಮಾನಿಗಳಿದ್ದಾರೆ. ಅಭಿಮಾನ ತಪ್ಪಲ್ಲ. ಈ ಅಭಿಮಾನವು ಕಲಾವಿದನ ಬದುಕಿಗೆ ಪೂರಕವಾಗಿರುತ್ತಿದೆಯೇ ಎನ್ನುವ ಸೂಕ್ಷ್ಮವನ್ನು ಅಭಿಮಾನಿಗಳು ಗ್ರಹಿಸಬೇಕು. ಅಭಿಮಾನಿ ಇನ್ನೊಂದು ಆಟಕ್ಕೆ ಕರೆದಾಗ ಕಲಾವಿದನಿಗೆ ಬರಲಾಗುವುದಿಲ್ಲ ಎನ್ನಲು ಕಷ್ಟವಾಗುತ್ತದೆ. ಒಪ್ಪಿದರೆ ತಾನಿದ್ದ ಮೇಳದಲ್ಲಿ ವೇಷ ಮಾಡಿ, ನಂತರ ಅಭಿಮಾನಿಯ ಆಹ್ವಾನದಂತೆ ಹೋಗಬೇಕಾಗುತ್ತದೆ. ಎರಡೂ ಕಡೆಯೂ ಸಮರ್ಥ ಅಭಿವ್ಯಕ್ತಿಯನ್ನು ಪ್ರಕಟಿಸಲು ಕಷ್ಟವಾಗುತ್ತದೆ. ಪಾತ್ರ ನಿರ್ವಹಣೆಯಲ್ಲಿ ತಪ್ಪಿ ಬೀಳುತ್ತಾನೆ. ಹಾಗಾಗಿ ಕಲಾಭಿಮಾನಿಗಳಲ್ಲಿ ಒಂದು ವಿಜ್ಞಾಪನೆ - ಒಂದು ಮೇಳಕ್ಕೆ ಸೇರಿದ ಕಲಾವಿದನನ್ನು ಮೇಳ ಮುಗಿಯುವ ತನಕ ಇತರ ಕಾರ್ಯಕ್ರಮಕ್ಕೆ ಒತ್ತಾಯಿಸಬೇಡಿ. ಇದರಿಂದ ಮೇಳಕ್ಕೂ ಕಷ್ಟವಾಗದು, ಮೇಳದ ಯಜಮಾನರಿಗೂ ತ್ರಾಸವಾಗದು. ಮೇಳ ಮುಗಿದ ನಂತರ ನಿಮ್ಮಿಷ್ಟ. ಇಂತಹ ಸೂಕ್ಷ್ಮತೆಯತ್ತ ಗೋವಿಂದ ಭಟ್ಟರು ಗಮನ ಸೆಳೆದರು.
                "ಕಲಾ ಬದುಕಿನಲ್ಲಿ ಮುಖ್ಯವಾಗಿ ಬಣ್ಣದ ಮನೆಯಲ್ಲಿ ಮನಃಸ್ಥಿತಿಗಳ ಹೊಂದಾಣಿಕೆ ಮುಖ್ಯವಾಗುತ್ತದೆ. ಒಬ್ಬೊಬ್ಬರದು ಒಂದೊಂದು ಸ್ವಭಾವ. ಒಬ್ಬ ವ್ಯಕ್ತಿಯ ಸ್ವ-ಭಾವವನ್ನು ಬದಲಿಸಲು ಸಾಧ್ಯವೇ? ಒಂದೇ ರೀತಿಯಾಗಿ ಮನುಷ್ಯ ಇರುವುದು ಸಾಧ್ಯವೇ? ಸಾಧ್ಯವೂ ಇಲ್ಲ. ಹಾಗಾಗಿ ಕಲಾವಿದನ ಅಂತರಂಗ ಹೇಗಿದೆ ಎನ್ನುವುದನ್ನು ಅರಿತು ವ್ಯವಹರಿಸಿದರೆ ಚೌಕಿಯಲ್ಲಿ ಸಮಸ್ಯೆ ಬರಲಾರದು." ಐವತ್ತು ವರುಷಗಳ ಮೇಳದ ಬದುಕು ಕಲಿಸಿದ, ತೋರಿಸಿದ ಜೀವನದ ಪಾಠವು ಗೋವಿಂದ ಭಟ್ಟರ ಮಾತಿನಲ್ಲಿ ವ್ಯಕ್ತವಾಗಿದ್ದುವು. ಮುಕ್ತ ಸಂವಾದಗಳು ಕಲಾವಿದನ ಅಂತರಂಗ, ಕಲಾಯಾನ ಮತ್ತು ಯಶೋಯಾನಗಳ ಅನಾವರಣಕ್ಕೆ ಅನುವು ಮಾಡಿಕೊಟ್ಟಿತ್ತು.
                ಭಾವಕ್ಕೆ ಜೀವವಿದೆ ಎನ್ನುವುದನ್ನು ಗೋವಿಂದ ಭಟ್ಟರು ಬದುಕಿನಲ್ಲಿ ಅನುಷ್ಠಾನಿಸಿ ತೋರಿ 'ಭಾವಜೀವಿ'ಯಾದರು. ಮೇಳದ ಯಜಮಾನರಿಂದ ತೊಡಗಿ, ಅಭಿಮಾನಿಗಳ ತನಕ ಅವರೊಳಗಿನ ಭಾವಕ್ಕೆ ಜೀವವನ್ನು ಕೊಟ್ಟರು.  ಆದ್ರ್ರವಾಗದ ಮತ್ತು ನಿತ್ಯ ಮೌನದಲ್ಲೇ ಸುತ್ತುತ್ತಿರುವ ಭಾವಕ್ಕೆ ಸಾಕಾರತೆಯನ್ನು 'ಭಾವಾರ್ಪಣಂ' ಮೂಲಕ ತೋರಿದ ಗೋವಿಂದ ಭಟ್ಟರ ಮನಃಸ್ಥಿತಿ ಎಲ್ಲರಿಗೂ ಬರುವಂತಹುದಲ್ಲ. ಅದು ಯಕ್ಷಗಾನ ಕಟ್ಟಿಕೊಟ್ಟ ಕಲಾಸಂಸ್ಕಾರ, ಭಾವಸಂಸ್ಕಾರ.

No comments:

Post a Comment