ಪ್ರಜಾವಾಣಿಯ ’ದಧಿಗಿಣತೋ' ಅಂಕಣ / 12-5-2017
ಅದೊಂದು ಯಕ್ಷಗಾನದ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ. ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡುವುದು ಅಂದಿನ ವಿಷಯಸೂಚಿ. ಹತ್ತಾರು ಹೆಸರುಗಳು ಉಲ್ಲೇಖಿಸಲ್ಪಟ್ಟವು. ಅದರಲ್ಲಿ ಚೌಕಿ ಸಹಾಯಕರ ಹೆಸರುಗಳು ಹಾದು ಹೋದುವು. "ಅವರು ಕಲಾವಿದರಲ್ಲ, ನೇಪಥ್ಯ ಸಹಾಯಕರು. ಅವರ ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಸಾಧ್ಯವಿಲ್ಲ," ಎಂಬ ನಿಲುವು ವ್ಯಕ್ತವಾಯಿತು. ಅಲ್ಲಿದ್ದ ಹಿರಿಯರೊಬ್ಬರು, "ಇಡೀ ಪ್ರದರ್ಶನದ ಒಟ್ಟಂದಕ್ಕೆ ಚೌಕಿ ಸಹಾಯಕರ ಶ್ರಮ ಗುರುತರ. ಅವರನ್ನು ಕಲಾವಿದರ ಸಾಲಿಗೆ ಯಾಕೆ ಸೇರಿಸಬಾರದು", ಗಟ್ಟಿ ದನಿಯಲ್ಲಿ ಅಭಿಪ್ರಾಯವನ್ನು ಮುಂದಿಟ್ಟರು. ಕೊನೆಗೂ ಹಿಮ್ಮೇಳ-ಮುಮ್ಮೇಳ ಕಲಾವಿದರ ಆಯ್ಕೆ ನಡೆದು ಸಭೆ ಮುಗಿದಿತ್ತು.
ನೇಪಥ್ಯ ಸಹಾಯಕರು ಕಲಾವಿದರಲ್ಲವೇ? ಬಹುಕಾಲ ನನ್ನನ್ನು ಕಾಡುವ ವಿಚಾರ. ದೊಂದಿ ಹಿಡಿಯುವ, ರಂಗದ ಹಿಂದೆ ದುಡಿಯುವ, ಚೌಕಿಯಲ್ಲಿ ಡ್ರೆಸ್ ಕಟ್ಟುವ, ಟೆಂಟ್-ರಂಗಸ್ಥಳ ಊರುವ ಎಲ್ಲರೂ ಕಲೆಯ ಸರ್ವಾಂಗ ಸುಂದರತೆಗೆ ದುಡಿಯುವವರು. ಒಂದರ್ಥದಲ್ಲಿ ಕಲಾಕರ್ಮಿಗಳು. ಹಲವು ವರುಷಗಳ ಕಾಲ ಮೇಳಗಳಲ್ಲಿ ದುಡಿದು ಬದುಕನ್ನು ರೂಪಿಸುತ್ತಾ ಬಂದವರು. ಅವರಿಗದು 'ಹೊಟ್ಟೆಪಾಡು' ಎಂದಾದರೆ ಹಿಮ್ಮೇಳ-ಮುಮ್ಮೇಳ ಕಲಾವಿದರಿಗೂ ಯಕ್ಷಗಾನವು 'ಹೊಟ್ಟೆಪಾಡು' ಅಲ್ವಾ. ನಿಜಾರ್ಥದ 'ಸೇವೆ' ಮಾಡಲು ಸಿದ್ಧರಿರುತ್ತಾರಾ?
ಒಂದು ಕಾಲಘಟ್ಟದ ಯಕ್ಷಗಾನವನ್ನು ನೆನಪು ಮಾಡಿಕೊಳ್ಳೋಣ. ಟೆಂಟ್ ಮೇಳಗಳ ದಿನಮಾನಗಳವು. ಟಿಕೆಟ್ ಪಡೆದು ಆಟಕ್ಕೆ ಕಾಯುವ ಪ್ರೇಕ್ಷಕರಿದ್ದ ಕಾಲ. ಹೆಚ್ಚೇಕೆ, ದಶಕಗಳ ಹಿಂದೆ ಎನ್ನೋಣ. ಮೇಳದ ಲಾರಿಯು ಬಂದಾಗ ಊರಿಡೀ ಯಕ್ಷಗಾನೀಯವಾದ ವಾತಾವರಣ ಪಸರಿಸಲು ಶುರುವಾಗುತ್ತದೆ. ಟೆಂಟ್, ರಂಗಸ್ಥಳ, ವೇಷಭೂಷಣ.. ಮೊದಲಾದ ಪರಿಕರಗಳು ಅನ್ಲೋಡ್ ಆಗುತ್ತವೆ. ಸ್ವಲ್ಪ ಸಮಯದ ನಂತರ ಸೇನಾಶಿಸ್ತಿನಂತೆ ವಿವಿಧ ಜವಾಬ್ದಾರಿಗಳನ್ನು ಹೊತ್ತವರು ಕಾರ್ಯಪ್ರವತ್ತರಾಗುತ್ತಾರೆ.
ಒಂದೆಡೆ ಟೆಂಟ್ ಎಬ್ಬಿಸುವ, ಚೌಕಿ ನಿರ್ಮಾಣ ಮಾಡುವ, ಹಿಂದಿನ ದಿವಸ ಬಳಸಿದ ವೇಷಭೂಷಣಗಳನ್ನು ಬಿಸಿಲಿನಲ್ಲಿ ಒಣಗಿಸುವ ಪ್ರಕ್ರಿಯೆಗಳು ದಿನವಿಡೀ ನಡೆಯುತ್ತಿರುತ್ತದೆ. ಸೂರ್ಯಾಸ್ತದ ಹೊತ್ತಿಗೆ ಯಕ್ಷಲೋಕ ನಿರ್ಮಾಣವಾಗಿರುತ್ತದೆ. ಏಳರ ಹೊತ್ತಿಗೆ ಹಿಮ್ಮೇಳ-ಮುಮ್ಮೇಳದ ಕಲಾವಿದರು ಚೌಕಿ ಪ್ರವೇಶಿಸುವಾಗ ಒಪ್ಪ-ಓರಣವಾಗಿ ವ್ಯವಸ್ಥೆ ಆಗಿರುತ್ತದೆ. ಈ ಒಪ್ಪ-ಓರಣವೂ ಒಂದು ಕಲೆ. ಚೌಕಿ ಸಹಾಯಕರು ತಂತಮ್ಮ ಕರ್ತವ್ಯಕ್ಕಾಗಿ ಹಾಜರಿರುತ್ತಾರೆ. ದೊಡ್ಡ ಮೇಳಗಳಲ್ಲಿ ಒಂದೊಂದು ವಿಭಾಗಕ್ಕೆ ಒಬ್ಬರೊ ಇಬ್ಬರೋ ನಿಯುಕ್ತಿಯಾಗಿರುತ್ತಾರೆ. ಸಣ್ಣ ಮೇಳಗಳಲ್ಲಿ ಅಂತಹ ಶಕ್ತಿಯಿರುವುದಿಲ್ಲ. ಹಗಲು ಟೆಂಟ್ ಹಾಕುವ, ಡ್ರೆಸ್ ಒಣಗಿಸುವ ಮಂದಿಯೇ ರಾತ್ರಿ ವೇಷಗಳಿಗೆ ಡ್ರೆಸ್ ಕಟ್ಟುವ ಕಾಯಕವನ್ನೂ ಮಾಡುತ್ತಾರೆ.
ನಾವು ಯಾರನ್ನು 'ಡ್ರೆಸ್ ಕಟ್ಟುವವರು' ಎಂದು ಕರೆಯುತ್ತೇವೋ ಅವರೂ ಕಲಾವಿದರೇ. ಯಾವ ಯಾವ ವೇಷಕ್ಕೆ ಯಾವ ತರಹದ ವೇಷಭೂಷಣಗಳ ’ಕಾಂಬಿನೇಶನ್ ’ ಎನ್ನುವುದು ಪಾತ್ರಧಾರಿಗೆ ಮರೆತರೂ ಅವರಿಗೆ ಮರೆಯದು. ಎಷ್ಟೋ ವರುಷಗಳ ಕಾಲ ದುಡಿದು ವೃತ್ತಿಯಲ್ಲಿ ಸುಭಗತನ ಮೈಗೂಡಿಸಿಕೊಂಡಿರುತ್ತಾರೆ. ವೇಷಧಾರಿಗಳ ಬಣ್ಣಗಾರಿಕೆ, ಮನಃಸ್ಥಿತಿ, ಸ್ವಭಾವ ಎಲ್ಲವನ್ನೂ ಹತ್ತಿರದಿಂದ ಅನುಭವಿಸಿರುತ್ತಾರೆ. ಹೀಗಾಗಿ ಪುರಾಣ ಪಾತ್ರಗಳ ಬಣ್ಣಗಾರಿಕೆಯಿಂದ ತೊಡಗಿ ವೇಷ ತೊಡುವ ತನಕದ ಎಲ್ಲಾ ಕೆಲಸಗಳು ಅವರಿಗೆ ಕರತಲಾಮಲಕವಾಗಿರುತ್ತವೆ. ಇಷ್ಟೆಲ್ಲಾ ಅನುಭವ ಹೊಂದಿದ ಇವರನ್ನು ಕಲಾವಿದರೆನ್ನಲು ಯಾಕೆ ಹಿಂಜರಿಕೆ? ಪ್ರಶಸ್ತಿಗೆ ಆಯ್ಕೆ ಮಾಡುವಾಗ ಮನಸ್ಸು ಯಾಕೆ ಕಲ್ಲಾಗುತ್ತದೆ?
ನೇಪಥ್ಯ ರಂಗಕರ್ಮಿ ಕೂಡ್ಲಿನ ಶಂಭು ಬಲ್ಯಾಯರು (ದಿ.) ಒಮ್ಮೆ ಮಾರ್ಮಿಕವಾಗಿ ಹೇಳಿದ್ದರು, "ಕಲಾವಿದರ ವೈಯಕ್ತಿಕ ದೌರ್ಬಲ್ಯಗಳಿಗೆ ಮೊದಲು ಬಲಿಯಾಗುವವರು ನಾವು. ನಿಂದೆ, ಅವಮಾನಗಳನ್ನು ನಿತ್ಯ ಸಹಿಸಬೇಕು. ಕಲಾವಿದರಲ್ಲಿ ಸ್ವಲ್ಪವೂ ಹೊಂದಾಣಿಕೆಯಿರುವುದಿಲ್ಲ. ವೇಷಕ್ಕೆ ಕಟ್ಟುವ ಆಭರಣದ ಒಂದು ಹಗ್ಗ ಅಕಸ್ಮಾತ್ ಕಡಿದರೂ ನಮ್ಮ ಜೀವವನ್ನೇ ಕಡಿಯುತ್ತಾರೆ! ನಾವೂ ಮನುಷ್ಯರಲ್ವೋ. ಸಂದರ್ಭ ಬಂದಾಗ ವೇಷವನ್ನೂ ಮಾಡಿದ್ದೇನೆ. ಎಲ್ಲಾ ನಮೂನೆಯ ವೇಷಗಳಿಗೂ ವೇಷಭೂಷಣಗಳನ್ನು ಕಟ್ಟಿದ, ಪುರಾಣ ಪಾತ್ರಗಳ ಅನುಭವವಿರುವ ನಾವು ಯಾಕೆ ಕಲಾವಿದರಲ್ಲ." ಬಲ್ಯಾಯರು ಈಗಿಲ್ಲ. ಅವರ ಅನಿಸಿಕೆಗಳು ವರ್ತಮಾನದ ಚೌಕಿಗೆ ಯಾ ಬಣ್ಣದ ಮನೆಗೆ ಕನ್ನಡಿ.
ದೊಡ್ಡ ವ್ಯವಸ್ಥೆಯ ಮೇಳಗಳಿಗೆ ಹೋದೆಡೆ ಗೌರವದ ಸ್ಥಾನ, ಮಾನ ಪ್ರಾಪ್ತಿ. ಮೇಳದ ಬಸ್ ಬಂದಾಗ ಸೇವಾಕರ್ತರು ಬಸ್ಸಿಗೆ ದೀರ್ಘದಂಡ ಪ್ರಣಾಮ ಮಾಡುವವರನ್ನು ನೋಡಿದ್ದೇನೆ. ಇದು ಸೇವಾಕರ್ತರಿಗೆ ಆಟದ ಮೇಲಿರುವ ಪ್ರೀತಿ. ಕಲಾವಿದರೆಂದರೆ ಗೌರವ. ದೇವರ ಭಯ. ಅಲ್ಲೆಲ್ಲಾ ಕಲಾವಿದರಿಗೆ ಮೃಷ್ಠಾನ್ನ ಭೋಜನ, ವಸತಿ ಎಲ್ಲವೂ ಇರುತ್ತದೆ. ಆದರೆ ಸಣ್ಣ ಮೇಳಗಳು ಇವೆಯಲ್ಲಾ. ಈ ಮೇಳಗಳಿಗೆ ಸಾಮಾಜಿಕವಾಗಿ ಗೌರವದ ಸ್ಥಾನಮಾನಗಳಿವೆ. ಆದರೆ ಸೇವಾಕರ್ತರಿಗೆ ಮೇಳದಷ್ಟೇ, ಕಲಾವಿದರಿಗೂ ವ್ಯವಸ್ಥೆ ಮಾಡಬೇಕೆನ್ನುವ ಪರಿಜ್ಞಾನ ಯಾಕೋ ಕಡಿಮೆ.
ಉಪಾಹಾರ, ಭೋಜನ, ನಿದ್ರಿಸಲು, ನಿತ್ಯ ವಿಧಿಗಳಿಗೆ ಸೂಕ್ತ ವ್ಯವಸ್ಥೆಗಳಿರುವುದಿಲ್ಲ. ಬಿಸಿಲಿನ ಝಳಕ್ಕೆ ಕನಿಷ್ಠ ಫ್ಯಾನ್ ಒದಗಿಸುವ ಧಾರಾಳತನವೂ ಕಡಿಮೆ. ಈಗ ಕಾಲಮಿತಿಯಾದ್ದರಿಂದ ಹಿಮ್ಮೇಳ-ಮುಮ್ಮೇಳದ ಬಹುತೇಕ ಕಲಾವಿದರು ಚೌಕಿಯಲ್ಲಿರುವುದು ಕಡಿಮೆ. ಆದರೆ ಚೌಕಿ ಸಹಾಯಕರು ಚೌಕಿಯಲ್ಲೇ ಇರಬೇಕಲ್ವಾ. ಅವರೂ ಮನುಷ್ಯರು ತಾನೆ? ಕನಿಷ್ಠ ಸೌಕರ್ಯ, ಸೌಲಭ್ಯಗಳನ್ನು ಸೇವಾಕರ್ತರು ಒದಗಿಸಬೇಕು. ಈಚೆಗೆ ಒಂದು ಆಟದ ಸಪ್ತಾಹ ಪ್ರದರ್ಶನದ ಸಂದರ್ಭದಲ್ಲಿ ಸಮರ್ಪಕವಾಗಿ ನೀರಿನ ವ್ಯವಸ್ಥೆಯಿರಲಿಲ್ಲ. ಸೇವಾಕರ್ತರಲ್ಲಿ/ಆಟದ ಜವಾಬ್ದಾರಿ ಹೊತ್ತವರ ಗಮನಕ್ಕೆ ತಂದಾಗ ಅವರೆನ್ನುವ ಮಾತನ್ನು ಗಮನಿಸಿ : ಮಳೆ ಇಲ್ಲ ಮಾರಾಯ್ರೆ. ಊರಿಗೆ ನೀರಿಲ್ಲ. ಇನ್ನು ನಿಮಗೆ ಎಲ್ಲಿಂದ ತರಲಿ? ಎನ್ನುವ ಉಡಾಫೆ ಉತ್ತರ! ಬೆರಳೆಣಿಕೆಯ ಮೇಳಗಳಲ್ಲಿ ಕಲಾವಿದರ ವಿಶ್ರಾಂತಿಗೆ ಮೇಳದ ಯಜಮಾನರೇ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಎಲ್ಲಾ ಮೇಳಗಳಿಗೂ ಹಬ್ಬಬೇಕು.
ನೇಪಥ್ಯ ಕಲಾವಿದರು ಒಂದು ದಿವಸ ರಜೆ ಹಾಕಿದರೆ ಚೌಕಿ ಗೊಂದಲವಾಗುತ್ತದೆ. ಅವರಿಲ್ಲದೆ ವೇಷ ರಂಗಕ್ಕೆ ಖಂಡಿತಾ ಹೋಗದು. ನಿತ್ಯ ದೊಂದಿ ಹಿಡಿಯುವ ನಿಷ್ಣಾತರು ರಜೆಯಲ್ಲಿದ್ದಾಗ ಅವರ ಜಾಗಕ್ಕೆ ಇನ್ನೊಬ್ಬ ಅನನುಭವಿ ಹೋದರೂ ಸರಿಹೋಗದು. ರಂಗದ ಹಿಂದೆ ನಿಂತು ರಂಗದ ಎಲ್ಲಾ ಕಲಾಪಗಳಿಗೆ ಎಚ್ಚರ ಸ್ಥಿತಿಯಲ್ಲಿದ್ದು ವ್ಯವಸ್ಥೆ ಮಾಡಿಕೊಡುವ ಸಹಾಯಕರು ಇದ್ದಾರಲ್ಲಾ, ಬಹುಶಃ ಅವರಿಗೆ ತಿಳಿದಷ್ಟು ರಂಗಕ್ರಿಯೆಗಳು ಕಲಾವಿದರಿಗೆ ಗೊತ್ತಿರಲಾರದೇನೋ. ಎಲ್ಲಾ ವೇಷಧಾರಿಗಳ (ಎಲ್ಲರೂ ಅಲ್ಲ) ಕಿರುಕುಳವನ್ನು ಮೌನವಾಗಿ ಸಹಿಸುತ್ತಾ, ಏನೂ ಆಗಿಲ್ಲ ಎನ್ನುತ್ತಾ ತನ್ನ ಪಾಡಿಗಿರುವ ಮನಃಸ್ಥಿತಿ ಇದೆಯಲ್ಲಾ, ಒಂದರ್ಥದಲ್ಲಿ ಇದು 'ಧ್ಯಾನ'. ಇದು ತಪಸ್ಸು. ಇವರ ಬಗ್ಗೆ ಕೀಳರಿಮೆ ಯಾಕೆ? ಇವರೂ ಕಲಾವಿದರೇ.
ಕೆಲವು ವೃತ್ತಿಪರ, ಹವ್ಯಾಸಿ ಮೇಳಗಳಲ್ಲಿ ಇವರನ್ನೂ ಕಲಾವಿದರನ್ನಾಗಿ ಅದರಿಸಿ, ಗೌರವ ಸಂಮಾನಗಳನ್ನು ಸಮರ್ಪಿಸುವ ಮನಃಸ್ಥಿತಿಗಳು ರೂಪುಗೊಳ್ಳುತ್ತಿವೆ. 'ಡ್ರೆಸ್ ಕಟ್ಟುವವ, ಚೌಕಿಯವ' ಎನ್ನುವುದು ವೃತ್ತಿಸೂಚಕ ಪದಗಳು. ಇದರ ಹೊರತಾಗಿ ಇತರರಂತೆ ಅವರೂ ಕಲಾವಿದರು ಎಂದು ಗ್ರಹಿಸಿದರೆ ಸಾಕು, ಇದೇ ನಾವು ಅವರಿಗೆ ಸಲ್ಲಿಸುವ ಗೌರವ.
ಸಾಂದರ್ಭಿಕ ಚಿತ್ರ - ಚಿತ್ರ : ಉದಯ ಕಂಬಾರು ನೀರ್ಚಾಲು

No comments:
Post a Comment