Friday, August 18, 2017

ಆರದ ನೆನಪಿನ ಒರತೆ

ಪ್ರಜಾವಾಣಿಯ ದಧಿಗಿಣತೋ ಅಂಕಣ  / 7-4-2017
               ಕೊಲ್ಲೂರು ಸನಿಹದ ವಂಡ್ಸೆಯ ನಾರಾಯಣ ಗಾಣಿಗರು ರಂಗದಿಂದ ನಿವೃತ್ತಿಯಾಗಿ ಮೂರು ದಶಕ ಮೀರಿತು. ಈಗವರ ವಯಸ್ಸು ಎಂಭತ್ತು. ಸುಮಾರು ನಾಲ್ಕು ದಶಕದ ಬಣ್ಣದ ನಂಟು. ಬಾಲ್ಯದಿಂದಲೇ ಯಕ್ಷಗಾನವು ಹೊಟ್ಟೆಪಾಡಿನ ವಿಚಾರ. ಆದರೆ ಅದಕ್ಕೊಂದಿಷ್ಟು ಬದ್ಧತೆಯ ಥಳಕು.
          ಕಳೆದ ದಶಂಬರದಲ್ಲಿ ’ಪಾತಾಳ ಪ್ರಶಸ್ತಿ’ ಪ್ರಕ್ರಿಯೆಗಾಗಿ ಅವರ ಮನೆ ಸೇರಿದಾಗ ಕಳೆದ ಕಾಲದ ಕಥನವನ್ನು ಮಾತಿಗಿಳಿಸುವ ಉತ್ಸಾಹದಲ್ಲಿದ್ದರು. ಕೇಳುವ ಕುತೂಹಲ ನನಗಿತ್ತು. ಸೋಸಿ ಅದನ್ನಿಲ್ಲಿ ಪೋಣಿಸಿದ್ದೇನೆ. ”ಸಿನೆಮಾವು ಕಲೆ, ಯಕ್ಷಗಾನವೂ ಕಲೆ. ಸರಕಾರದವರು ಸಿನಿಮಾದವರಿಗೆ ಎಷ್ಟೊಂದು ಮಾನ್ಯತೆ ಕೊಡುತ್ತಾರೆ. ಪ್ರಶಸ್ತಿಗಳನ್ನು ನೀಡುತ್ತಾರೆ. ಯಕ್ಷಗಾನ ಕಲಾವಿದರೆಂದರೆ ಯಾಕೆ ಅಸಡ್ಡೆ. ಇದು ಪ್ರಾಚೀನ ಕಲೆಯಲ್ವಾ. ಸರಕಾರಕ್ಕೆ ಈ ವಿಚಾರವನ್ನು ತಿಳಿಸುವವರು ಯಾರು? ತಿಳಿಸಬೇಕಾದವರಿಗೆ ಪುರುಸೊತ್ತಿಲ್ಲ, ಅಗತ್ಯವೂ ಇಲ್ಲ,’ ಎಂದು ವಿಷಾದದಿಂದ ಮಾತಿಗಿಳಿದರು:-
            ಮಾರಣಕಟ್ಟೆ ಮೇಳದಿಂದ ನನ್ನ ರಂಗ ವ್ಯವಸಾಯ ಆರಂಭ. ಕೋಡಂಗಿ, ಬಾಲಗೋಪಾಲ, ಸ್ತ್ರೀವೇಷ.. ಹೀಗೆ ಹಂತಹಂತವಾಗಿ ಬೆಳೆದೆ. ಆಗ ಬಹುಶಃ ಹತ್ತೋ ಹನ್ನೊಂದು ವರುಷ. 'ಸಣ್ಣ ಹುಡುಗ, ಇವನಿಗೇನು ಖರ್ಚು ಇದೆ' ಎಂದು ಯಜಮಾನರಿಗೆ ತೋಚಿರಬೇಕು! ಊಟಕ್ಕೆ ತೊಂದರೆಯಿರಲಿಲ್ಲ. ಹನ್ನೆರಡು ವರುಷ ಒಂದೇ ಮೇಳದಲ್ಲಿ ದುಡಿದೆ. ನಂತರ ದಿ.ಕೆರೆಮನೆ ಶಿವರಾಮ ಹೆಗಡೆಯವರ ಯಜಮಾನಿಕೆಯ ಇಡಗುಂಜಿ ಮೇಳಕ್ಕೆ ಹೋದೆ. ಆಗಲೇ ಸ್ತ್ರೀಪಾತ್ರಧಾರಿಯಾಗಿ ತಯಾರಾಗಿದ್ದೆ.
               ತೆಂಕುತಿಟ್ಟಿನಲ್ಲಿ ತಿರುಗಾಟ ಮಾಡಬೇಕು ಎನ್ನುವ ಉಮೇದು ಇತ್ತು. ಕುಂಡಾವು, ಕೂಡ್ಲು, ಸುರತ್ಕಲ್, ಧರ್ಮಸ್ಥಳ ಮೇಳಗಳಲ್ಲಿ ಅವಕಾಶ ಸಿಕ್ಕಿತು. ವೇಷಧಾರಿ ಶ್ರುತಿಯಲ್ಲಿ ಮಾತನಾಡಿದರೆ ಅಗರಿ ಶ್ರೀನಿವಾಸ ಭಾಗವತರಿಗೆ ಇಷ್ಟವಾಗುತ್ತಿತ್ತು. 'ಶ್ರುತಿಯಲ್ಲಿ ಮಾತನಾಡಿದರೆ ರಂಗಸ್ಥಳ ತುಂಬಿ ಬರುತ್ತದೆ. ಪ್ರೇಕ್ಷಕರನ್ನು ವಶೀಕರಿಸುತ್ತದೆ' ಎನ್ನುತ್ತಿದ್ದರು. ನನಗೆ ಹಿಮ್ಮೇಳದ ಜ್ಞಾನವಿದ್ದುದರಿಂದ ಶ್ರುತಿಯಲ್ಲಿ ಮಾತನಾಡಲು ಕಷ್ಟವಾಗಲಿಲ್ಲ. 'ಚಂದ್ರಮತಿ, ದಮಯಂತಿ' ಪಾತ್ರಗಳನ್ನು ಮಾಡಿ ಎಷ್ಟೋ ಬಾರಿ ರಂಗದಲ್ಲಿ ಅತ್ತಿದ್ದೇನೆ. ಪ್ರೇಕ್ಷಕರೂ ಅತ್ತುದನ್ನು ಗಮನಿಸಿದ್ದೇನೆ. ಪಾತ್ರ ತನ್ಮಯತೆಗೆ ಪೂರಕವಾದ ಹಿಮ್ಮೇಳಗಳು ತೆಂಕಿನಲ್ಲಿ ನನಗೆ ಪೂರಕವಾಗಿ ಒದಗಿದ್ದುದರಿಂದ ಪರಿಣಾಮಕಾರಿಯಾಗಿ ಪಾತ್ರಗಳನ್ನು ನಿರ್ವಹಿಸುವುದಕ್ಕೆ ಸಾಧ್ಯವಾಯಿತು.
ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರು ಮತ್ತು ನಾನು ಹಲವು ಬಾರಿ ರಂಗದಲ್ಲಿ ಜತೆಯಾಗಿದ್ದೇವೆ. ನಿಜವಾದ ರಂಗಸುಖವನ್ನು ತೆಂಕಿನಲ್ಲಿ ಅನುಭವಿಸಿದ್ದೇನೆ. ಬಡಗು ತಿಟ್ಟಿನಿಂದ ತೆಂಕಿಗೆ ಬರುವಾಗ ನಾಟ್ಯ ವಿಭಾಗದಲ್ಲಿ ಸಮಸ್ಯೆಯಾಗಿತ್ತು. ತಾಳದ ಮುಕ್ತಾಯದಲ್ಲಿ ಮಾತ್ರ ವ್ಯತ್ಯಾಸವಷ್ಟೇ. ಕಡತೋಕ ಮಂಜುನಾಥ ಭಾಗವತರು, ಕುದ್ರೆಕೋಡ್ಲು ರಾಮ ಭಟ್ಟರು ನಾಟ್ಯವನ್ನು ತಿದ್ದಿದರು.
                 ಶೇಣಿ ಗೋಪಾಲಕೃಷ್ಣ ಭಟ್ಟರ ಜತೆ ವೇಷ ಮಾಡಿದ್ದೇನೆ. 'ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗದಲ್ಲಿ ಅವರ 'ದಾರಿಕಾಸುರ', ನನ್ನದು 'ರಂಭಾಮಣಿ'ಯ ಪಾತ್ರ. ಚಕ್ರಾಪಹಾರ ಆದಾಗ ದಾರಿಕಾಸುರ ಬಂದು ಪ್ರಶ್ನಿಸುತ್ತಾನೆ. ಅದಕ್ಕೆ ರಂಭಾಮಣಿ ಉತ್ತರ ಹೇಳುವ ಸಂದರ್ಭದ ಪದ್ಯಕ್ಕೆ ಅಂದು ಸ್ವಲ್ಪ ಹೆಚ್ಚೇ ಕುಣಿದಿದ್ದೆ. ಆಗ ಶೇಣಿಯವರು 'ಏ ತಡಿಯೇ, ನಾನು ಕೇಳಿದ್ದು ಚಕ್ರ, ನೀನು ಕುಣಿಯುತ್ತಿಯಲ್ಲಾ.. ಎಂದು ನೇರವಾಗಿ ಛೇಡಿಸಿದ್ದರು. ನನಗದು ಪಾಠವಾಗಿತ್ತು.
ಗುರು ವೀರಭದ್ರ ನಾಯಕರಲ್ಲಿ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದೇನೆ. ಕಲಾವಿದನಿಗೆ ಗುರುಪಾಠ ಮುಖ್ಯ. ಗುರುಪಾಠದ ಮೂಲಕ ಬೆಳೆದರೆ ಯಾವ ರಂಗದಲ್ಲೂ ಧೈರ್ಯದಿಂದ ಪಾತ್ರ ನಿರ್ವಹಿಸಬಹುದು. ಅಭ್ಯಾಸ ಮಾಡದೆ ರಂಗವನ್ನೇರಬಾರದು. ಇದು ಕಲೆಗೆ ಮಾಡುವ ದ್ರೋಹ.
               'ಕಲೆ ಹಾಳಾಗಿದೆ' ಎಂದು ಹಲವರು ಮಾತನಾಡುವುದನ್ನು ಕೇಳುವಾಗ ಮರುಕವಾಗುತ್ತದೆ. ಕಲೆಗೆ ಸಾವಿಲ್ಲ. ಅದು ಅವಿನಾಶಿ. ನಾವು ಕಲೆಯನ್ನು ಬೇಕಾದಂತೆ ಹಿಂಜಿದ್ದೇವೆ. ನಮಗೆ ಬೇಕಾದಂತೆ ಬದಲಾಯಿಸಿದ್ದೇವೆ. ಅದರ ಒಂದೊಂದು ಅಂಗವನ್ನು ಊನ ಮಾಡಿದ್ದೇವೆ.
             ನಾನು ನಿವೃತ್ತನಾಗುವ ಹೊತ್ತಿಗೆ 'ಕಾಲಮಿತಿ' ಎನ್ನುವುದು ಇರಲಿಲ್ಲ. ಈಗಿನ ವಾತಾವರಣಕ್ಕೆ ಅನಿವಾರ್ಯವೆಂದು ಬಿಂಬಿಸುತ್ತಾರೆ. ಆದರೆ ಅರ್ಧ ರಾತ್ರಿಯ ಬಳಿಕ ಪ್ರೇಕ್ಷಕ ಎಲ್ಲಿಗೆ ಹೋಗಬೇಕು? ಪೇಟೆಯಲ್ಲಾದರೆ ವ್ಯವಸ್ಥೆಗಳಿರುತ್ತವೆ. ಹಳ್ಳಿಗಳಲ್ಲಿ? ರಾತ್ರಿಯಿಡೀ ಆಟ ನೋಡಿ ಅಭ್ಯಾಸವಾದ ಪ್ರೇಕ್ಷಕನಿಗೆ ಕಾಲಮಿತಿ ಪ್ರದರ್ಶನಗಳನ್ನು ತಾಳಿಕೊಳ್ಳಲು ಕಷ್ಟವಾಗುತ್ತದೆ.
              ಈಗ ಕಲಾವಿದರಿಗೆ ಆರ್ಥಿಕ  ಸವಲತ್ತುಗಳು ಬಂದಿವೆ. ಸ್ವಂತದ್ದಾದ ವಾಹನಗಳನ್ನು ಹೊಂದಿದ್ದಾರೆ. ಆದರೆ ಒಂದು ಹೊತ್ತು ಊಟಕ್ಕೆ ಪರದಾಡುವ ಕಲಾವಿದರು ಎಷ್ಟು ಮಂದಿ ಬೇಕು? ಬೇಸಿಗೆಯಲ್ಲಿ ಆಟದಿಂದ ಜೀವನ ಮಾಡಿದರೆ, ಮಳೆಗಾಲದಲ್ಲಿ ಇತರ ಕೂಲಿ ಕೆಲಸಕ್ಕೆ ಹೋಗುವ ಕಲಾವಿದರ ಸಂಖ್ಯೆ ಅಗಣಿತ. ಇವರಿಗೆ ಹೊಟ್ಟೆಪಾಡು ಮುಖ್ಯ. ಇವರಿಂದ ನೀವು ರಂಗಕ್ಕೆ ಕೊಡುಗೆಯನ್ನು ನಿರೀಕ್ಷಿಸುವಂತಿಲ್ಲ. ಕಳೆದ ವರುಷ ಏನು ರಂಗದಲ್ಲಿ ಅರ್ಥ ಹೇಳಿದ್ರೋ, ಈ ವರುಷವೂ ಅದರದ್ದೇ ಮರುಕಳಿಕೆ. ಎಷ್ಟೋ ಮಂದಿ ಪ್ರೇಕ್ಷಕರಿಗೆ ಇಂತಹ ಕಲಾವಿದ ಏನು ಅರ್ಥ ಹೇಳ್ತಾನೆ ಎನ್ನುವುದೂ ಕಂಠಸ್ತವಾಗಿರುತ್ತದೆ!
                 ಪಾತ್ರಾಭಿವ್ಯಕ್ತಿಯಲ್ಲಿ ಭಾವನೆಗಳು ದೂರವಾಗಿವೆ. ಪಾತ್ರಗಳು ಭಾವನಾತ್ಮಕವಾಗಿ ಕಾಣಿಸಿಕೊಂಡರೆ ಪ್ರೇಕ್ಷಕನೊಳಗೂ ಅದು ರಸಸೃಷ್ಟಿಯನ್ನು ಮಾಡುತ್ತದೆ. ಪ್ರೇಕ್ಷಕನನ್ನು ಹಿಡಿದಿಡುವುದು ಕಲಾವಿದನ ಕರ್ತವ್ಯ. ದಿವಂಗತ ಮಹಾಬಲ ಹೆಗಡೆಯವರು 'ಅಶ್ವತ್ಥಾಮ' ಪಾತ್ರ ವಹಿಸಿ ಪ್ರೇಕ್ಷಕರ ಮಧ್ಯೆ ಓಡಿ ಹೋಗುವ ಸಂದರ್ಭದಲ್ಲಿ ಪ್ರೇಕ್ಷಕರೇ ಹಿಡಿದು ಕೊಟ್ಟ ದೃಷ್ಟಾಂತ ಬಹಳಷ್ಟಿದೆ! ಹರಿಶ್ಚಂದ್ರ ಚರಿತೆ ಪ್ರಸಂಗದಲ್ಲಿ ’ಚಂದ್ರಮತಿ’ ಅಳುತ್ತಿರುವಾಗ, ಈ ದುಃಖ ನೋಡಲು ನಾವು ಆಟಕ್ಕೆ ಬರಬೇಕಾ, ನಮಗೆ ಸಹಿಸುವುದಕ್ಕೆ ಆಗುವುದಿಲ್ಲ, ನಾವು ಹೋಗುವ' ಎಂದು ದುಃಖ ತಡೆಯದೆ ಅರ್ಧದಿಂದ ಎದ್ದು ಹೋದವರೂ ಇದ್ದಾರೆ. ಇಂತಹ ರಸಸೃಷ್ಟಿಯ ಕಾಲಘಟ್ಟದಲ್ಲಿ ನಿವೃತ್ತಿ ಹೊಂದಿದೆ.
               ಡಾ.ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದ್ದೇನೆ ಎನ್ನಲು ಹೆಮ್ಮೆ. ತುಂಬಾ ನಿಯತ್ತಿನ, ಶಿಸ್ತಿನ ಮನುಷ್ಯ. ಅವರ ತರಬೇತಿಗೆ ಹೋಗುವುದೆಂದರೆ ಹೆದರಿಕೆ. ಸ್ವಲ್ಪ ತಪ್ಪಿದರೂ ಗದರುತ್ತಿದ್ದರು. ಸ್ವತಃ ಕುಣಿತು ಕಲಿಸುತ್ತಿದ್ದರು. ಅವರ ಊಹನೆಯ ಮಟ್ಟಕ್ಕೆ ಕಲಾವಿದ ಬೆಳೆಯುವಲ್ಲಿಯ ತನಕ ಕಲಿಸಿ ಕೊಡುತ್ತಾರೆ. ಅವರ ಬ್ಯಾಲೆ ತಂಡದಲ್ಲಿ ಐದು ವರುಷ ದುಡಿದಿದ್ದೇನೆ. ವಿದೇಶಕ್ಕೂ ಹಾರಿದ್ದೇನೆ. ಖುಷಿ ಪಟ್ಟಿದ್ದೇನೆ. ಕಲಾವಿದನ ಬೆಳವಣಿಗೆಗೆ ಶ್ರದ್ಧೆ, ಭಕ್ತಿ ಮತ್ತು ಹೆದರಿಕೆ ಮುಖ್ಯ ಎನ್ನುವುದನ್ನು ಮನಗಂಡಿದ್ದೇನೆ.
                  ಮೊದಲು ಸ್ತ್ರೀಪಾತ್ರಗಳಿಗೆ ಶಿರೋಭೂಷಣ ಇರಲಿಲ್ಲ. ಸಮಾಜದ ಮಧ್ಯೆ ಇರುವ ಸಾಮಾನ್ಯ ಸ್ತ್ರೀಯರಂತೆ ಪುರಾಣದ ಪಾತ್ರಗಳು ರಂಗಕ್ಕೆ ಬರುತ್ತಿದ್ದುವು. ಈ ರೀತಿಯ ವೇಷಗಳು ರಂಗಕ್ಕೆ ಆಗಮಿಸಿದರೆ ಕಾರಂತರಿಗೆ ಸಹ್ಯವಾಗುತ್ತಿರಲಿಲ್ಲ. ತಿರುಗಿ ಕುಳಿತುಕೊಳ್ಳುತ್ತಿದ್ದರು. ಅವರ ಬ್ಯಾಲೆ ತಂಡದಲ್ಲಿ ಸ್ತ್ರೀಪಾತ್ರಕ್ಕೆ ಶಿರೋಭೂಷಣ ಧರಿಸುವಂತೆ 'ಆರ್ಡರ್' ಮಾಡಿದ್ದರು.
                ಮಂದಾರ್ತಿ ಮೇಳದ ತಿರುಗಾಟದಲ್ಲಿದ್ದಾಗ ದೃಷ್ಟಿ ದೋಷ ಬಂದು ಮೇಳಕ್ಕೆ ವಿದಾಯ ಹೇಳಿದೆ. ಸ್ವಲ್ಪ ಕಾಲ ಹವ್ಯಾಸಿ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಈಗಂತೂ ಪೂರ್ತಿಯಾಗಿ ನಿವೃತ್ತ. ವರುಷ ಎಂಭತ್ತಾಯಿತು. ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಈಗಿನ ಯಕ್ಷಗಾನದ ವೈಭವವನ್ನು ಕೇಳಲು ಖುಷಿಯಾಗುತ್ತದೆ. ಇದರಿಂದ ನಿಜವಾಗಿಯೂ ಯಕ್ಷಗಾನವು ವೈಭವಗೊಂಡಿದೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

No comments:

Post a Comment