Tuesday, July 28, 2020

ಪದ್ಯಾಣರ ಸ್ವಗತ (ಎಸಳು 2)


ಅಜ್ಜ ಪದ್ಯಾಣ ನಾರಾಯಣ ಭಟ್ - 'ಪುಟ್ಟುನಾರಾಯಣ ಭಾಗವತ'ರೆಂದೇ ಪ್ರಸಿದ್ಧ. ಅವರ ಸಹೋದರ ರಾಮಕೃಷ್ಣ ಭಟ್. ನನಗವರು ಸಣ್ಣಜ್ಜ.
       ನಾರಾಯಣ ಭಾಗವತರಿಗೆ ತಿರುಮಲೇಶ್ವರ, ಶಂಕರನಾರಾಯಣ ಮತ್ತು ಗೋಪಾಲಕೃಷ್ಣ - ಮೂವರು ಪುತ್ರರು. ಹೆಣ್ಣು ಸಂತತಿಯಿಲ್ಲ.
       ತಿರುಮಲೇಶ್ವರ ಭಟ್ಟರಿಗೆ ಐವರು ಗಂಡು ಮಕ್ಕಳು. ನಾರಾಯಣ, ಪರಮೇಶ್ವರ, ಗಣಪತಿ (ನಾನು), ಗೋಪಾಲಕೃಷ್ಣ ಮತ್ತು ಜಯರಾಮ.
       ನಾರಾಯಣ ಭಾಗವತರ ತಮ್ಮ ರಾಮಕೃಷ್ಣ ಭಟ್ಟರಿಗೆ ಐವರು ಗಂಡು ಮಕ್ಕಳು. ಗಣಪತಿ, ಈಶ್ವರ, ಶಂಕರನಾರಾಯಣ, ರಮೇಶ, ಶಿವರಾಮ.  ಇಬ್ಬರು ಹೆಣ್ಮಕ್ಕಳು - ಲಕ್ಷ್ಮೀ, ಸಾವಿತ್ರಿ.
       ಎಲ್ಲರೂ ಜತೆಯಾಗಿ ಆಡಿದ, ಓಡಿದ ಬಾಲ್ಯಗಳು ಮತ್ತೆ ಬಾರವು. ನೆನಪು ಸದಾ ಸಿಹಿ. ಆಗ ಪದ್ಯಾಣವು ಅಥರ್ಿಕವಾಗಿ ಶ್ರೀಮಂತ ಮನೆತನ. ಒಂದು ಸಾವಿರ ಮುಡಿ ಗೇಣಿ ಬರುವ ಆಸ್ತಿಯನ್ನು ಹೊಂದಿತ್ತು ಕುಟುಂಬ ಅಭಿವೃದ್ಧಿಯಾದಂತೆ ಸಮಸ್ಯೆ ಬರಬಾರದಲ್ಲಾ. ಆಸ್ತಿಯನ್ನು ಪಾಲು ಮಾಡಿದರೆ ಅವರವರ ಜವಾಬ್ದಾರಿಯೊಳಗೆ ಬದುಕು ನಿಭಾಯಿಸಬಹುದು. 
       'ಜವ್ವನವಿರುವಾಗಲೇ ಜವಾಬ್ದಾರಿ' ಎಂಬ ನಿಲುವಿಗೆ ಅಂಟಿಕೊಂಡ ಅಜ್ಜ ಸಕಾಲದಲ್ಲಿ ಆಸ್ತಿಯನ್ನು ಪಾಲು ಮಾಡಿದರು.  ದಾಖಲೆಯಲ್ಲಿ ಮಾತ್ರ ಹಂಚೋಣವಷ್ಟೇ. ಮನಸ್ಸು ಪಾಲಾಗಲಿಲ್ಲ. ಬಾಂಧವ್ಯದಲ್ಲಿ ಬಿರುಕಾಗಲಿಲ್ಲ. ಎರಡೂ ಕುಟುಂಬದ ಎಲ್ಲಾ ಸದಸ್ಯರು ಒಂದೇ ಸೂರಿನಡಿ ವಾಸ. ಯಾವುದೇ ಮನಸ್ತಾಪ ಇದ್ದಿರಲಿಲ್ಲ, ಎದ್ದಿರಲಿಲ್ಲ.
       ಆಗ ದೂರದೂರಿನಲ್ಲಿ 'ಆಸ್ತಿ ಮಾಡುವುದು' ಪ್ರತಿಷ್ಠೆ, ಹೆಮ್ಮೆ! ದೊಡ್ಡ ಸುದ್ದಿ ಕೂಡಾ. ಅಜ್ಜ ಬೇರೆಡೆ ಆಸ್ತಿ ಹುಡುಕಿದ್ದರು. ಎಲ್ಲೂ ಸಮಾಧಾನವಾಗಿರಲಿಲ್ಲ. ಒಂದೊಂದರಲ್ಲಿ ಒಂದೊಂದು ಕೊರತೆ. ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ 'ಗೋಳ್ತಾಜೆ' ಆಸ್ತಿ ಸೆಳೆಯಿತು. ಅನುಭವಿಗಳು 'ಕೃಷಿಗೆ ಯೋಗ್ಯ ಭೂಮಿ' ಎಂದು ಶಿಫಾರಸು ಮಾಡಿದರು. ಕಲ್ಮಡ್ಕ ಗ್ರಾಮವು ಬ್ರಾಹ್ಮಣರ ಅಗ್ರಹಾರದಂತಿತ್ತು. ಅಜ್ಜನಿಗೆ ಗೋಳ್ತಾಜೆಯು ಸೆಳೆಯಲು ಇದೂ ಒಂದು ಕಾರಣ. ಉಡುವೆಕೋಡಿ ನಾರಾಯಣಯ್ಯ, ಎಡಪತ್ಯ ಶಿವರಾಮಯ್ಯ ಮೊದಲಾದ ಆಡ್ಯರಿದ್ದ ಊರು. ಆಸ್ತಿ ಮಾಡುವ ಹಿನ್ನೆಲೆಯಲ್ಲಿ ಅವರ ನೆರವೂ ಇತ್ತು.
       ಸುಮಾರು ಹನ್ನೆರಡು ಎಕ್ರೆ ಭೂಮಿ. ಮೂವತ್ತು ಸಾವಿರ ರೂಪಾಯಿಗೆ ವಿಕ್ರಯ. ಎಂಟು ಎಕ್ರೆ ಅಡಿಕೆ, ಗದ್ದೆ, ಗುಡ್ಡ. ಸೋಗೆ ಸೂರಿನ ಮನೆ.  ಒಂದು ಶುಭ ಮುಹೂರ್ತದಲ್ಲಿ ನಾರಾಯಣ ಭಾಗವತರ ಸಂಸಾರವು ಕಲ್ಮಡ್ಕದ ಗೋಳ್ತಾಜೆಗೆ 1954ರಲ್ಲಿ ಕಾಲಿಟ್ಟಿತು. ನೆಲೆಯಾಯಿತು. ಅಜ್ಜನೂ ಜತೆಗಿದ್ದರು.  ಚಿಕ್ಕಪ್ಪ ರಾಮಕೃಷ್ಣ ಭಟ್ಟರು ಪದ್ಯಾಣದಲ್ಲೇ ಬದುಕನ್ನು ಮುಂದುವರಿಸಿದರು. ಅಜ್ಜ ಆಗಾಗ್ಗೆ ಪದ್ಯಾಣಕ್ಕೂ ಹೋಗಿ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಿದ್ದರು.
                                   ******
       ತಂದೆ ತಿರುಮಲೇಶ್ವರ ಭಟ್ಟರು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯ. ಚೆಂಡೆ, ಮದ್ದಳೆ, ಭಾಗವತಿಕೆಯನ್ನು ಕಲಿತಿದ್ದರು. ಮೇಳಕ್ಕೆ ಹೋಗಿ ಸಂಪಾದನೆ ಮಾಡಬೇಕೆಂಬ ಇರಾದೆಯಿಂದಲ್ಲ. ಮನೆತನದ ಕಲಾವಾಹಿನಿಯನ್ನು ಮುಂದುವರಿಸುವ ದೃಷ್ಟಿಯಷ್ಟೇ.  ಮುಂದೆ ಹವ್ಯಾಸಿಯಾಗಿ ಆಟ-ಕೂಟಗಳಲ್ಲಿ ಭಾಗವಹಿಸಿದ್ದರು.
       ಚೊಕ್ಕಾಡಿಯ ಅಜ್ಜನಗದ್ದೆ ಗಣಪಯ್ಯ ಭಾಗವತರಿಗೆ ತಂದೆಯವರದೇ ಮದ್ದಳೆ ಸಾಥ್. ಅಜ್ಜನಗದ್ದೆಯವರು ಭಾವಜೀವಿ. ಇವರಿಬ್ಬರ ಹೊಂದಾಣಿಕೆಯು ಆಗ ಮಾತಿಗೆ ವಿಷಯ. ಯಕ್ಷಗಾನವನ್ನು ತಂದೆ ಎಷ್ಟು ಗಾಢವಾಗಿ ಹಚ್ಚಿಕೊಂಡಿದ್ದರೋ, ಅಷ್ಟೇ ಕೃಷಿ ಕಾರ್ಯಗಳತ್ತಲೂ ಗಮನ. 'ಯಕ್ಷಗಾನದಿಂದ ಉಣ್ಣಲು ಸಾಧ್ಯವಿಲ್ಲ' ಎನ್ನುವ ಅರಿವು. 'ಸಂಸ್ಕಾರಕ್ಕಾಗಿ ಕಲೆಯ ನಂಟು' ಎನ್ನುವ ವಿಶ್ವಾಸ.
                                   ******
       ನನ್ನ ಜನನ (21-1-1955) ಗೋಳ್ತಾಜೆಯಲ್ಲಾಯಿತು. ಮನೆತನ ಹಿರಿದು. ಆಥರ್ಿಕವಾಗಿ ಸದೃಢವಲ್ಲದ ಕಿರಿದು ಬದುಕು. ಆಸ್ತಿ ಖರೀದಿಗಾಗಿ ಮಾಡಿದ ಸಾಲಗಳು ಸಂದಾಯವಾಗುತ್ತಿದ್ದುವಷ್ಟೇ. ಜತೆಗೆ ತೋಟದ ಉತ್ಪತ್ತಿಯೂ ಅಷ್ಟಕ್ಕಷ್ಟೇ. ಕುಟುಂಬದ ಪೋಷಣೆಯನ್ನು ಹೆತ್ತವರು  ಜಾಣ್ಮೆಯಿಂದ ನಿಭಾಯಿಸುತ್ತಿದ್ದರು.
       ನನಗಾಗ ಮೂರು ವರುಷ ಪ್ರಾಯ. ಯಾವುದೋ ಕಾಯಿಲೆ ಅಂಟಿಕೊಂಡಿತು. ನಡೆಯಲಾರದ ಸ್ಥಿತಿ. ತಾಯಿಯವರು ಕಂಗಾಲು. ಬದುಕುವ ಆಸೆ ಬಿಟ್ಟಿದ್ದರು! ತಂದೆಯವರು ಅಧೀರರಾಗಿದ್ದರು. ಈಗಿನಂತೆ ವೈದ್ಯಕೀಯ ವ್ಯವಸ್ಥೆಯಿರಲಿಲ್ಲ. ಹಳ್ಳಿಮದ್ದೋ, ಆಯುರ್ವೇದವನ್ನೆ ಅವಲಂಬಿಸಬೇಕಾಗಿತ್ತು. ನಮ್ಮ ಅದೃಷ್ಟಕ್ಕೆ ಗುಣವಾದರೆ ಆಯಿತು. ಇಲ್ಲದಿದ್ದರೆ.. ದೇವರೇ ಗತಿ.

ಮುಂದಿನ ಕತೆಯನ್ನು ಲಕ್ಷ್ಮೀ ಚಿಕ್ಕಮ್ಮ (ತಾಯಿಯ ತಂಗಿ) ಹೇಳಬೇಕು -
..ನಮ್ಮದು ಬಾಯಾರು ಸನಿಹದ ಕುಂಡೇರಿ ಮನೆತನ. ಗೋಳ್ತಾಜೆಯ ತಿರುಮಲೇಶ್ವರ ಭಟ್ಟರೊಂದಿಗೆ ಅಕ್ಕ ಸಾವಿತ್ರಿಯ ವಿವಾಹವಾಗಿತ್ತು. ಅಕ್ಕ, ಭಾವನೊಂದಿಗೆ ಮಾತನಾಡಿ ಹೋಗಲು ಆಗಾಗ್ಗೆ ಬರುತ್ತಿದ್ದೆವು. ನಾನಾಗ ಚಿಕ್ಕವಳು. ಸಂಗೀತವೆಂದರೆ ಒಲವು. ಕಾಂಚನ ಪಾಠಶಾಲೆ. ಒಂದಿವಸ ತಂದೆಯೊಂದಿಗೆ ಗೋಳ್ತಜೆಗೆ ಬಂದಿದ್ದೆ.  ಅಕ್ಕ ಬೇಸರದಲ್ಲಿದ್ದಳು. ಮಗ ಗಣಪತಿ ಅಸ್ವಸ್ಥನಾಗಿದ್ದ. ಇಂದೋ ನಾಳೆಯೋ ಎನ್ನುವಂತಹ ಸ್ಥಿತಿ. ಅವನನ್ನು 'ಬಾಲಪೀಡೆ' ಬಾಧಿಸಿತ್ತು. ಇವನ ಸ್ಥಿತಿಯನ್ನು ನೋಡಿ ಅಕ್ಕ ಅತ್ತೂ ಅತ್ತೂ ಸುಸ್ತಾಗಿದ್ದಳು.
ಅಪ್ಪನಿಗೆ ಮಗುವಿನ ಅವಸ್ಥೆ ನೋಡಿ ಮರುಕವಾಯಿತು. 'ಇವನನ್ನು ನಾವು ಕೊಂಡೊಯ್ದು ಔಷಧಿ ಮಾಡುವಾ, ಮಂತ್ರವಾದ ಮಾಡಿಸಿ ಗುಣಪಡಿಸುವ,' ಎಂದರು. ನಾನೂ ಒಪ್ಪಿದೆ. 'ಬಾಲಪೀಡೆ' ಕಾಯಿಲೆಯು ವಿಚಿತ್ರ, ವಿಕ್ಷಿಪ್ತವಾದ ರೋಗ. ಸಿಕ್ಕಸಿಕ್ಕಲ್ಲಿ ತಲೆಯನ್ನು ಜಜ್ಜಿಸಿಕೊಳ್ಳುವುದು ಇದರ ಗುಣ. ಜಜ್ಜಿಸಿಕೊಳ್ಳದಂತೆ ಕಣ್ಗಾವಲು ಮಾಡುವುದು ದೊಡ್ಡ ಕೆಲಸ. ರಾತ್ರಿ, ಹಗಲು ಕಣ್ಣಿಗೆ ಕಣ್ಣಿಟ್ಟು ಜಾಗರಣೆ ಮಾಡಿದೆ. 'ಅಕ್ಕನ ಮಗನನ್ನು ಉಳಿಸಬೇಕು' ಎಂಬ ಒಂದೇ ಲಕ್ಷ್ಯ.
       ಮಂತ್ರವಾದ ಮಾಡಿದರು. ಪೈವಳಿಕೆಯ ವೈದ್ಯರೊಬ್ಬರಿಂದ ಚಿಕಿತ್ಸೆ ಶುರು. ಇವನನ್ನು ರಕ್ಷಿಸುವ ಉದ್ದೇಶದಿಂದ ನನಗೆ ಆಗ ರಾತ್ರಿಯೂ ಹಗಲೂ ಒಂದೇ! ಹಠವಾದಿ.... ಪೋಕ್ರಿ..! ಸುಮಾರು ಒಂದೂವರೆ ವರುಷದಲ್ಲಿ ಚೇತರಿಸಿ ಮೊದಲಿಂತಾದ. ಕಾಲನ ಮನೆಯ ಮೆಟ್ಟಿಲನ್ನು ತುಳಿದು ಹಿಂದೆ ಬಂದು ಬದುಕಿದ. ಪುನಃ ಆತನನ್ನು ಅಕ್ಕನ ಮಡಿಲಿಗೆ ಹಾಕಿದೆವು. ಈಗ ನೋಡಿ.... ಎಷ್ಟು ಬೆಳೆದಿದ್ದಾನೆ...!..      


No comments:

Post a Comment