'ಪದ್ಯಾಣ'.
ಈ ಹೆಸರಿನೊಳಗೇನಿದೆ?
ಯಕ್ಷಧ್ವನಿ,
ಚೆಂಡೆಯ ನಾದ, ಮದ್ದಳೆಯ ಉಲಿ, ಗೆಜ್ಜೆಯ ಸದ್ದು, ಅರ್ಥದ ಸ್ರೋತ, ಸಂಗೀತದ ಪಲುಕು. ಸಾಹಿತ್ಯದ ಊರ್ಮೆ.
ಪ್ರತಿಷ್ಠಿತ
ಮನೆತನ. ಆತಿಥ್ಯಕ್ಕೆ ಮಣೆ. ಕಲೆಯ ಆರಾಧನೆ. ಕಲಾವಿದರಿಗೆ ಮನ್ನಣೆ. ದಾನ ಗುಣ. ನರನಾಡಿಗಳಲ್ಲೂ ನಾದಗಳದ್ದೇ
ಸಂಚಾರ.
ಇದು
ಭಾಗವತ ಪದ್ಯಾಣ ಗಣಪತಿ ಭಟ್ಟರ ಸಂಪತ್ತಿನ ಹಿನ್ನೆಲೆ. ನಾಲ್ಕು ದಶಕಕ್ಕೂ ಮೀರಿದ ಯಕ್ಷಧ್ವನಿ. ಗಂಡುಧ್ವನಿ.
ಪುರಾಣ ಮನಸ್ಸುಗಳ ಧ್ವನಿ.
ಯಕ್ಷಗಾನ
ವೃತ್ತಿಯಲ್ಲ, ಬದುಕು. ಈ ಬದುಕು ಹೊಟ್ಟೆಪಾಡಿನದ್ದಲ್ಲ. ಹಾಗೆಂತ ಅಲ್ವೋ....? ಹೌದು... ಯಕ್ಷಗಾನಕ್ಕೆ ಸಮರ್ಪಿತ ಬದುಕು.
ಯಕ್ಷಗಾನವೇ
ಸರ್ವಸ್ವ. ಇದರೊಳಗಿದೆ, ಸ್ವಂತಕ್ಕಿಂತ - ಆಸೆ, ನಿರೀಕ್ಷೆ, ಕುಟುಂಬ, ಹೆಂಡತಿ, ಮಕ್ಕಳು, ಬಂಧುಗಳು,
ಪುರಸ್ಕಾರ, ರಾಜಕೀಯ, ಲೋಕಸುದ್ದಿಗಳು - ಹೊರತಾದ ತ್ಯಾಗ.
ಉಣ್ಣಲು
ಅನ್ನವಿದೆ. ಉಡಲು ವಸ್ತ್ರವಿದೆ. ಪವಡಿಸಲು ಸೂರಿದೆ. ಹರಟಲು ಸ್ನೇಹವಲಯವಿದೆ. ಆದರೆ 'ಮನುಷ್ಯತ್ವ'ಕ್ಕೆ
ಏರಿಸಿದ ಕಲೆಗೆ ಮೊದಲ ಮಣೆ, ಆರಾಧನೆ.
ಪದ್ಯಾಣರ
ಬಾಲ್ಯದ ಬದುಕು ದುಸ್ತರ. ಯಕ್ಷಯಾನ ರೋಚಕ. ಪದಯಾನ ಪುಳಕ. ಮೋಡಿ ಮಾಡುವ ಧ್ವನಿ. ಸೆಳೆವ ಶಕ್ತಿ.
ರಂಗದಲ್ಲಿ
ಕುಳಿತರೆ ಸಾಕು, ನಿಧಾನಕ್ಕೆ ತೆರೆದುಕೊಳ್ಳುವ ಯಕ್ಷಾವರಣ. ಅದು ದೀರ್ಘ ತಿರುಗಾಟದ ಕಾಣ್ಕೆ. ರಂಗದಲ್ಲಿಷ್ಟೂ
ಹೊತ್ತು ನಗೆ, ಹೂ ನಗೆ. ಅದು ಸಹಜ ನಗು. ಮುಗ್ಧ ನಗು.
ಅ
ಪ್ರತಿಭೆ ರಂಗದಲ್ಲಿ ತೆರೆದುಕೊಳ್ಳುತ್ತದೆ. ಹೊರಗೆ ಮುಚ್ಚಿಕೊಳ್ಳುತ್ತದೆ. ಮುದುಡಿಕೊಳ್ಳುತ್ತದೆ.
ಹಾಗಾಗಿಯೇ ಅದು ಯಕ್ಷಧ್ವನಿ. ಜನರ ಧ್ವನಿ. ಅರುವತ್ತರ ಹೊತ್ತಲ್ಲೂ ಝೇಂಕರಿಸುವ ಧ್ವನಿ.
ಪದ್ಯಾಣ
ಗಣಪತಿ ಭಟ್ಟರ ಪದಯಾನವನ್ನು ಅಕ್ಷರಕ್ಕಿಳಿಸುವುದು ತ್ರಾಸ. ಯಾಕೆ? ಅಕ್ಷರಕ್ಕಿಳಿಸುವಷ್ಟು ಸರಕು ತನ್ನಲ್ಲಿಲ್ಲ
ಎನ್ನುವ ಸೌಜನ್ಯತೆ. ಅಕ್ಷರ ಪೋಣಿಕೆಯಾಗುತ್ತಿರುವಾಗ ಖುಷಿಯ ಮಧ್ಯೆ ಹಾದುಹೋಗುತ್ತಿರುವ ವಿಷಾದದ ರೇಖೆಗಳ
ಸರಣಿ. ಇದುವೇ ಪದ್ಯಾಣರನ್ನು ಯಕ್ಷರಂಗದಲ್ಲಿ ಗಟ್ಟಿಗೊಳಿಸಿದೆ.
ಬಾಲ್ಯದಿಂದಲೇ
ವಿಕ್ಷಿಪ್ತಗಳ ಸರಮಾಲೆ. ಅದರಿಂದ ಕಂಡಿತು, ಸ್ವ-ನಿರ್ಮಿತದ ದಾರಿ. ಆ ದಾರಿಯು ಗಟ್ಟಿಗರನ್ನು ತೋರಿತು.
ಅವರೊಂದಿಗೆ ಬೆಳೆದರು. ಗಟ್ಟಿಯಾದರು.
ಪದ್ಯಾಣರಿಗೆ
ಪದ್ಯ ಇಷ್ಟ. ಮಾತು ಇಷ್ಟವಾಗದ ಸಂಗತಿ. ರಂಗದಲ್ಲಿ ತಾಸುಗಟ್ಟಲೆ ಕುಳಿತುಕೊಳ್ಳಬಲ್ಲರು. ಆದರೆ ಮಾತಿಗೆ
ಮಾತ್ರ ಅರ್ಧ ಗಂಟೆ ಕುಳಿತರೂ ಚಡಪಡಿಕೆ.
ಈಗ
'ಗಣಪಣ್ಣ' ಮಾತಿಗಾಗಿ ಕುಳಿತಿದ್ದಾರೆ. ಮತಿಯನ್ನು ಜಾಗೃತಿಗೊಳಿಸಿದ್ದಾರೆ. ನೆನಪುಗಳ ಬಾಗಿಲು ತೆರೆದಿವೆ.
(ಸಂ.)
ಪದುಳ
ಪ್ರಮೋದ
ಬಲ್ಲಿರೇನಯ್ಯ...
ಪುಟ್ಟುನಾರಾಯಣ
ಭಾಗವತರು ಯಾರೆಂದು ಕೇಳಿದಿರಿ? ಅವರು ನನ್ನ ಅಜ್ಜ ಎನ್ನಲು ಅಭಿಮಾನವಾಗುತ್ತದೆ......
ದಕ್ಷಿಣ
ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿದೆ, ಪದ್ಯಾಣ. ಎಲ್ಲಾ ಸ್ಥಳನಾಮಗಳಂತೆ ಪದ್ಯಾಣವೂ
ಒಂದು. ಯಕ್ಷಗಾನ ಹಿನ್ನೆಲೆಯಲ್ಲಿ ಪದ್ಯಾಣಕ್ಕೆ ಪ್ರತ್ಯೇಕ ಸ್ಥಾನ. ಕಲೆಯ ಸೊಡರೊಂದು ಹಬ್ಬಿಸಿದ ಪ್ರಕಾಶದ
ಪ್ರಭಾವವು ಪದ್ಯಾಣ ಊರಿಗೆ ಮಾನ ತಂದಿದೆ, ಸಂಮಾನ ತಂದಿದೆ.
ಇಲ್ಲಿನ
ಪುಟ್ಟುನಾರಾಯಣ ಭಾಗವತರು ಯಕ್ಷಗಾನದಲ್ಲಿ ಜನಾನುರಾಗಿ. ಇವರು ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರಿಗೆ
ಗುರುಸದೃಶ. ದೊಡ್ಡ ಬಲಿಪ ನಾರಾಯಣ ಭಾಗವತರು, ಕುಂಡೆಚ್ಚ ಭಾಗವತರು ಮೇಳಕ್ಕೆ ರಜೆಯಾದಾಗ ಪುಟ್ಟುನಾರಾಯಣ
ಭಾಗವತರು ಆ ಸ್ಥಾನವನ್ನು ತುಂಬುತ್ತಿದ್ದರು. ಅವರಿಗೆ ನೂರಾರು ಪ್ರಸಂಗಗಳು ಕಂಠಸ್ಥ. ಆಗ ಯಕ್ಷಗಾನದಲ್ಲಿ
ಬಲಿಪ ಮತ್ತು ಅಗರಿ ಶೈಲಿಗಳೆರಡೇ ಪ್ರಚಲಿತವಿದ್ದುವು. ಪುಟ್ಟು ಭಾಗವತರದು ಬಲಿಪ ಶೈಲಿಯನ್ನು ಹೋಲುವ
ಭಾಗವತಿಕೆ. ಹವ್ಯಾಸಿಯಾಗಿ ಸಾಕಷ್ಟು ಪ್ರಸಿದ್ಧ.
ಅಜ್ಜನ
ಮಡಿಲಲ್ಲಿ ಕಳೆದ ಬಾಲ್ಯದ ನೆನಪುಗಳು ಮಸುಕಾಗಿವೆ. ನನಗೆ ಬುದ್ಧಿ ಬಲಿಯುವ ಹೊತ್ತಿಗೆ ಅವರು ದೈವಾಧೀನರಾಗಿದ್ದರು.
ಬಹುಶಃ ಆಗ ನನಗೆ ಹನ್ನೆರಡು ವರುಷ ಪ್ರಾಯ. ಅವರು ಖ್ಯಾತ ಭಾಗವತರೆಂದು ಗೊತ್ತಿತ್ತು. ಪದ್ಯ ಕೇಳಲಿಲ್ಲ.
ಊರಿನ ಒಂದೆರಡು ತಾಳಮದ್ದಳೆಯಲ್ಲಿ ಭಾಗವಹಿಸಿದ್ದರಂತೆ. ಈಗಲೂ ಹಿರಿಯರು ಆ ಚೇತನವನ್ನು ಸ್ಮರಿಸುತ್ತಾರೆ
ಎಂದಾದರೆ ಆ ಕಾಲಘಟ್ಟದ ಭಾಗವತಿಕೆಯ ಗಟ್ಟಿತನ ಎಷ್ಟಿದ್ದಿರಬಹುದು? ಊಹಿಸಿದಾಗ ಪುಳಕಗೊಳ್ಳುತ್ತೇನೆ
No comments:
Post a Comment