Monday, July 27, 2020

ನಮನಗಳು

ಪದ್ಯಾಣ ಗಣಪತಿ ಭಟ್ಟರು ನನಗೆ ಗುರುಸಮಾನ. ಅವರ ಪೂರ್ತಿ ಹೆಸರನ್ನು ಉಚ್ಚರಿಸಿದರೆ ಅವರಿಗೆ ಅಗೌರವವಾಗಬಹುದೆನ್ನುವ ಭೀತಿ ನನಗಿದೆ. ಸುಮಾರು ಎರಡೂವರೆ ದಶಕದಿಂದ ನನಗೂ, ಪದ್ಯಾಣ ಕುಟುಂಬಕ್ಕೂ ನಂಟು, ಮನೆಯ ಸದಸ್ಯನಂತೆ ನೋಡಿಕೊಂಡಿದ್ದಾರೆ. ಪ್ರೀತಿ ತೋರಿದ್ದಾರೆ. ನಂಬಿದ್ದಾರೆ.
                ನನಗೂ ಪದ್ಯಾಣರಿಗೂ ಅಣ್ಣ - ತಮ್ಮ ಬಂಧ. ಅಭಿಮಾನಿ-ಅಭಿಮಾನದ ಸಂಬಂಧ. ಗುರು, ಶಿಷ್ಯ ಭಾವ. ಒಟ್ಟಿನಲ್ಲಿ ಪದ್ಯಾಣರು ಮತ್ತು ಅವರ ಪದ್ಯದ ಹೊರತಾದ ಪ್ರಪಂಚವನ್ನು ಹೆಚ್ಚು ನಾನು ಹಚ್ಚಿಕೊಳ್ಳುವುದಿಲ್ಲ. ಅದರರ್ಥ ಉಳಿದವರಿಗೆ ತೋರುವ ಅನಾದರವಲ್ಲ.
                ಪದ್ಯಾಣರ ಜತೆ ಅಸಂಖ್ಯ ಆಟ, ಕೂಟಗಳಲ್ಲಿ ಭಾಗವಹಿಸಿದ್ದೇನೆ. ಚಕ್ರತಾಳಕ್ಕೆ ದನಿ ನೀಡಿದ್ದೇನೆ. ಪದ್ಯವನ್ನು ಸುಖಿಸಿದ್ದೇನೆ. ಆಟ ಆಡಿಸುವ ಜಾಣ್ಮೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಪ್ರತಿಭಾ ಸಾಮಥ್ರ್ಯಕ್ಕೆ ಬೆರಗಾಗಿದ್ದೇನೆ.
                ನಮ್ಮಿಬ್ಬರ ಸಾಂಗತ್ಯವನ್ನು ಎಷ್ಟೋ ಮಂದಿ ಗೇಲಿ ಮಾಡಿದರು. ಹಗುರವಾಗಿ ಕಂಡರು. ವ್ಯಂಗ್ಯದ ನೋಟ ಬೀರಿದರು. ಪದ್ಯಾಣರೊಂದಿಗಿದ್ದಷ್ಟು ಕಾಲ ಇದಾವುದೂ ಪರಿಣಾಮ ಬೀರಲಿಲ್ಲ.
                ನಮ್ಮಿಬ್ಬರ ಸ್ನೇಹ ಬಂಧ ಅಷ್ಟು ಗಾಢವಾಗಿದೆ. ನಾನು ಪದ್ಯಾಣರನ್ನು ಒಪ್ಪಿದ್ದೇನೆ. ಅವರು ನನ್ನನ್ನು ಒಪ್ಪಿದ್ದಾರೆ. ನಾನೂ ಅವರ ಕುಟುಂಬದ ಓರ್ವ ಸದಸ್ಯ. ಅವರೆಂದೂ ಬೇರೆಯವನಂತೆ ನೋಡಿದ್ದಿಲ್ಲ, ವ್ಯವಹರಿಸಿದ್ದಿಲ್ಲ.
                ಪದ್ಯಾಣರಿಗೆ ಈಗ ಅರುವತ್ತರ ಹರೆಯ. ಪದಯಾನ ಸಂಭ್ರಮ. ಖುಷಿಯಲ್ಲಿ ಭಾಗಿಯಾಗುವ ಯೋಗ-ಭಾಗ್ಯ. ಪದಯಾನ ಅಭಿನಂದನಾ ಸಮಿತಿ ರೂಪೀಕರಣವಾಗುವಾಗ ಸಮಿತಿಯ ಕಾರ್ಯದಶರ್ಿಯ ಹೊಣೆ ನನ್ನ ಹೆಗಲೇರಬಹುದೆಂದು ಗ್ರಹಿಸಿರಲಿಲ್ಲ.  ಪಾಲಿಗೆ ಬಂದಾಗ ಪದ್ಯಾಣರ ಮೇಲಿನ ಸ್ನೇಹಭಾವ, ಗುರುಭಾವದಿಂದ ಒಪ್ಪಿಕೊಂಡಿದ್ದೇನೆ.
                ಸಮಿತಿಯ ಗೌರವಾಧ್ಯಕ್ಷರಾದ ಟಿ. ಶ್ಯಾಮ ಭಟ್ಟರ ಕಾಲಕಾಲದ ಸೂಚನೆಗಳನ್ನು ಪಾಲಿಸಿದ್ದೇನೆ, ನಾವೆಲ್ಲಾ ಪಾಲಿಸಿದ್ದೇವೆ. ಪದ್ಯಾಣ ಯಕ್ಷ ಯಾನವನ್ನು ಅಕ್ಷರಕ್ಕಿಳಿಸುವ ಕಾಯಕಕ್ಕೆ ಸಂಪಾದಕ ಸಮಿತಿ ದುಡಿದಿದೆ.
                ಎಲ್ಲಾ ಸದಸ್ಯರು ಪ್ರಾಂಜಲವಾಗಿ ಸ್ಪಂದಿಸುತ್ತಿದ್ದಾರೆ. ಆಥರ್ಿಕವಾಗಿ ಸಹೃದಯರು ನೆರವಾಗಿದ್ದಾರೆ. ಪದ್ಯಾಣರ ಮೇಲಿನ ಅಭಿಮಾನದಿಂದ ನೂರಾರು ಅಲ್ಲ, ಸಾವಿರಾರು ಮಂದಿ ಕೈಜೋಡಿಸಿದ್ದಾರೆ.
                ಇವರಿಗೆಲ್ಲಾ ಹೃದಯ ತುಂಬಿದ ನಮನಗಳು.

ರಾಮ ಜೋಯಿಸ್ ಬೆಳ್ಳಾರೆ
ಕಾರ್ಯದರ್ಶಿ,  ಪದಯಾನ ಅಭಿನಂದನಾ ಸಮಿತಿ
23-05-2016         


No comments:

Post a Comment