Thursday, July 30, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 4)


ಶಾಲೆಗೆ ಹೋಗುತ್ತಿರುವಾಗಲೇ ಸ್ನೇಹಿತರ ಬಳಗ ದೊಡ್ಡದು.  ಅವರಿಗೆಲ್ಲಾ ನಾನೇ ನಾಯಕ. ತಂದೆಗೆ ಬೀಡಿ ಸೇದುವ ಅಭ್ಯಾಸವಿತ್ತು. ಸೇದಿ ಬಿಸುಟ ತುಂಡು ಬೀಡಿಗೆ ನಾನೇ ಪ್ರಥಮ ಮತ್ತು ಕೊನೆಯ ಗಿರಾಕಿ. ಬೀಡಿ ಸೇದಲು ಆರಂಭಿಸಿದೆ. ಹೊಗೆ ಗಂಟಲೊಳಗೆ ಇಳಿಯುತ್ತಿದ್ದಾಗ, ಕೆಮ್ಮು ದಮ್ಮುಗಳು ಅಟ್ಟಿಸಿಕೊಂಡು ಬಂದರೂ ಏನೋ ಥ್ರಿಲ್! ಸ್ವಾನುಭವವನ್ನು ಸ್ನೇಹಿತರಲ್ಲಿ ಹಂಚಿಕೊಂಡಾಗ ಪ್ರಚೋದಿಸಿದರು, ಬೆಂಬಲಿಸಿದರು. ಅವರಿಗೆಲ್ಲಾ ಒಂದಲ್ಲ ಒಂದು ವಿಧದಲ್ಲಿ ಧೂಮಪಾನ ಅಂಟಿತ್ತು.

ತಂದೆ ಇಷ್ಟಪಟ್ಟು ಸೇದುತ್ತಿದ್ದ ಬೀಡಿಯ ಬ್ರಾಂಡ್ ಗಣೇಶ್ ಬೀಡಿ’. ಇದರ ಕಟ್ಟುಕಟ್ಟು ಸಂಗ್ರಹವಿರುತ್ತಿತ್ತು. ಕಟ್ಟಿನಿಂದ ಎರಡೋ ಮೂರೋ ಬೀಡಿಯನ್ನು ತೆಗೆದರೆ ಗೊತ್ತಾಗುತ್ತಿರಲಿಲ್ಲ. ಮುಂದೆ ಅದು ಚಟವಾಯಿತು. ಬಿಡಲಾಗದ ಸ್ಥಿತಿ. ಅಂಗಡಿಯಿಂದ ಖರೀದಿಸಲು ಹಣವಿಲ್ಲ. ಮನೆಯಲ್ಲಿ ಕೇಳುವ ಹಾಗಿಲ್ಲ. ಗೊತ್ತಾದರೆ ಛಡಿಯೇಟು. ಬೀಡಿಯ ಸಹವಾಸದ ನಂಟು ಅಂಟಾಯಿತು.

ಏಳನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದೆ. ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯಲ್ಲಿ ಮುಂದಿನ ಕಲಿಕೆ. ಕಲ್ಮಡ್ಕ ಗೋಳ್ತಾಜೆಯಿಂದ ಬಾಳಿಲಕ್ಕೆ ಏನಿಲ್ಲವೆಂದರೂ ನಾಲ್ಕು ಮೈಲಿ ದೂರ. ಕಾಲ್ನಡಿಗೆಯ ಪ್ರಯಾಣ. ನಿತ್ಯ ನಡೆದುಕೊಂಡು ಹೋಗುವ ಕಾಯಕಷ್ಟವನ್ನು ನೋಡಿ ಹೆತ್ತ ಕರುಳು ಮರುಗಿತು. ಸೈಕಲ್ ತೆಗೆದುಕೊಡುವ ನಿರ್ಧಾರ ಮಾಡಿದರು. ನಾನು ನಿರಾಕರಿಸಿದ್ದೆ. ಯಾಕೆ ಹೇಳಿ? ನಡೆದುಕೊಂಡು ಹೋಗುವಾಗ ಬೀಡಿ ಸೇದಬಹುದಲ್ಲಾ! ಗೋವಿಂದ, ಸದಾಶಿವ, ಮಮ್ಮದೆ.. ಇವರೆಲ್ಲಾ ಸ್ನೇಹಿತರು. ಬೀಡಿ ಎಳೆಯುತ್ತಾ, ಹರಟೆ ಮಾತನಾಡುತ್ತಾ ಎಂಜಾಯ್ ಮಾಡುತ್ತಿದ್ದೆವು. ಒಂದು ದಿನವೂ ಸಮಯಕ್ಕೆ ಸರಿಯಾಗಿ ತರಗತಿಗೆ ತಲುಪಿದ್ದಿಲ್ಲ.

ಬಾಳಿಲದ ವಿದ್ಯಾಬೋಧಿನೀ ಶಾಲೆಯು ಶೈಕ್ಷಣಿಕ ಸಂಸ್ಥೆಗಳಲ್ಲೇ ಮುಂದು. ದೂರದೂರಿನಿಂದ ವಿದ್ಯಾರ್ಥಿಗಳು ಪ್ರವೇಶ ಅಪೇಕ್ಷಿಸಿ ಆಗಮಿಸುತ್ತಿದ್ದರು. ಅದಕ್ಕಾಗಿ ಪೈಪೋಟಿ ಆಗುತ್ತಿತ್ತು. ಪ್ರತಿಭಾವಂತರಿಗೆ ಅವರ ಪ್ರತಿಭೆಯೇ ಮಾನದಂಡವಾಗಿ ಪ್ರವೇಶ ಸಿಗುತ್ತಿತ್ತು. ಬಿ.ವಿ.ಶಗ್ರಿತ್ತಾಯರು, ಕುಶಾಲಪ್ಪ ಗೌಡರು, ನಾರಾಯಣ ಭಟ್, ರಾಜಗೋಪಾಲ ರಾವ್.... ಹೀಗೆ ಅನುಭವಿ ಅಧ್ಯಾಪಕ ವರ್ಗ. ಶ್ರೀನಿವಾಸ ಉಡುಪರು ಮುಖ್ಯ ಗುರು. ಅವರು ಬಡಗುತಿಟ್ಟು ಯಕ್ಷಗಾನ ವೇಷಧಾರಿ. ಇವರ ಮುಂದಾಳ್ತದಲ್ಲಿ ಯಕ್ಷಗಾನಗಳು ನಡೆಯುತ್ತಿದ್ದುವು.

ಒಮ್ಮೆ ಸ್ಕೂಲ್ಡೇ ಕಾರ್ಯಕ್ರಮಕ್ಕೆ ಯಕ್ಷಗಾನ. ನೀನು ಪದ್ಯಾಣದವನಲ್ವಾ. ವೇಷ ಮಾಡು ಎಂದು ಮುಖ್ಯ ಗುರುವಿನ ಕಟ್ಟಾಜ್ಞೆ. ಒಲ್ಲದ ಮನಸ್ಸಿನಿಂದ ಒಪ್ಪಿದ್ದೆ. ಅಟೆಂಡರ್ ಕೃಷ್ಣಪ್ಪರಿಂದ ನಾಟ್ಯಾಭ್ಯಾಸ. ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತು ಪಾತ್ರ. ಅರ್ಥಗಾರಿಕೆ, ರಂಗಕ್ರಮವನ್ನು ಉಡುಪರೂ ಹೇಳಿಕೊಟ್ಟಿದ್ದರು. ಸಂಜೆ ಶಾಲೆ ಮುಗಿದ ಬಳಿಕ ಅಭ್ಯಾಸ. ಮನೆಗೆ ತಲಪುವಾಗ ರಾತ್ರಿಯಾಗುತ್ತಿತ್ತು. ಬಹಳ ಖುಷಿ. ಯಾಕೆ ಹೇಳಿ? ಬೀಡಿ ಸೇದಬಹುದಲ್ಲಾ...!

ಒಂದು ವಾರದಲ್ಲಿ ಯಕ್ಷಗಾನ ತಂಡ ಸಿದ್ಧವಾಯಿತು. ಅಧ್ಯಾಪಕ ಅರ್ನಾಡಿ ಶಿವರಾಮ ಭಟ್ಟರ ಭಾಗವತಿಕೆ. ವೃಷಕೇತು ಪಾತ್ರವನ್ನು ಎಲ್ಲರೂ ಮೆಚ್ಚಿದ್ದರು. ನನಗೆ ಮಾತ್ರ ಬಣ್ಣದ ಮನೆ, ವೇಷಭೂಷಣಗಳು ಹರಟೆಯಾಗಿ ಕಾಡುತ್ತಿದ್ದುವು.  ಅಂತೂ ವೃಷಕೇತು ಎಲ್ಲರ ಪ್ರಶಂಸೆಗೆ ಒಳಗಾಗಿದ್ದ.  ಇವರೆಲ್ಲಾ ಯಾಕೆ ಹೊಗಳುತ್ತಾರೋ ಎಂಬ ಚೋದ್ಯವೂ ಉಂಟಾಗಿತ್ತು.

 ಬಾಳಿಲ ಶಾಲೆಗೆ ಸೇರ್ಪಡೆಗೊಂಡಂದಿನಿಂದ ಪಾಠದಲ್ಲಿ ಒಲವಿಲ್ಲ. ಅಧ್ಯಾಪಕರು ಹೇಳಿದ ಹೋಂವರ್ಕ್ ರಗಳೆ! ತರಗತಿ ಪರೀಕ್ಷೆಗಳೆಲ್ಲಾ ಕಳೆದು ಎಂಟನೇ ತರಗತಿಯ ಅಂತಿಮ ಪರೀಕ್ಷೆಗೆ ವಿದ್ಯಾರ್ಥಿಗಳೂ ಸಜ್ಜಾಗುತ್ತಿದ್ದರು. ರಾತ್ರಿ ಹಗಲು ಓದುವಿಕೆ. ನಿಮಗೇನೋ ಹುಚ್ಚು ಹಿಡಿದಿದೆ ಎಂದು ಸಹಪಾಠಿಗಳಲ್ಲಿ ಗೊಣಗುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ಮನೆಯವರು ಒತ್ತಡ ಹಾಕುತ್ತಿದ್ದರೂ ನಾನು ನಿಶ್ಚಿಂತೆ. ಎಲ್ಲರೂ ಮಲಗುವ ಮೊದಲೇ ಚಾಪೆ ಸೇರುತ್ತಿದ್ದೆ! ಪರೀಕ್ಷೆ ಕಳೆದು ಫಲಿತಾಂಶ ನೋಡ್ತೇನೆ - ಫೈಲ್! ಏಳರ ತನಕ ಫೈಲ್ ಆಗದ ಪ್ರತಿಭಾವಂತನಾದ ನಾನು ಎಂಟರಲ್ಲಿ ಫೈಲ್ ಆದೆ! ಅಬ್ಬಾ.... ನಿರಾಳ.

 ಫೈಲ್ ಆದುದು ಅನಿರೀಕ್ಷಿತವೇನಲ್ಲ. ಓದದಿದ್ದರೆ ಬರೆಯುವುದೇನನ್ನು? ಮುಂದಿನ ವರುಷದ ಕಲಿಕೆ ಎಂಟರಲ್ಲೇ ಮುಂದುವರಿಯಿತು. ನೋಡಿ. ಒಂದೇ ತರಗತಿಯಲ್ಲಿ ಎರಡು ವರುಷ ಕಲಿಯುವುದೆಂದರೆ ಸಾಮಾನ್ಯವೇ ಎಂದು ಸಹಪಾಠಿಗಳನ್ನು ಛೇಡಿಸುತ್ತಿದ್ದೆ. ಯಾರು ಏನೇ ಹೇಳಲಿ, ನನ್ನ ಮಾತೇ ಮುಂದಾಗುತ್ತಿತ್ತು.


No comments:

Post a Comment