Wednesday, July 29, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 3)

ನನ್ನ ಚಿಕ್ಕಮ್ಮ ನಿಜಾರ್ಥದಲ್ಲಿ ದೇವತೆ. ಪುನರ್ಜನ್ಮ ನೀಡಿದ ಮಹಾತಾಯಿ. ರೋಗ ಗುಣವಾಗಿ ಮನೆಗೆ ಬಂದಾಗ ತಾಯಿಯವರು ಸಂತೋಷದಿಂದ ಅತ್ತಿದ್ದರು! ತಂಗಿಯನ್ನು ಬಿಗಿದಪ್ಪಿಕೊಂಡಿದ್ದರಂತೆ. ಒಬ್ಬನ ಬದುಕಿಗೆ ಆಸರೆಯಾಗುವುದು ಇದೆಯಲ್ಲಾ ಅದು ದೇವರ ಕೆಲಸ!  ಸ್ವಂತ ಮಗನಂತೆ ಸಾಕಿದ್ದರು. ತುತ್ತು ನೀಡಿ ಬೆಳೆಸಿದರು. ಬಾಲ್ಯಸಹಜವಾದ ಕೀಟಲೆಯನ್ನು ಸಹಿಸಿದರು.

ಚಿಕ್ಕಮ್ಮನಿಗಾಗ ಕಲಿಯುವ ವಯಸ್ಸು. ನನ್ನ ಆರೈಕೆಗಾಗಿ ಸಂಗೀತದ ಕಲಿಕೆಯನ್ನೇ ಮೊಟಕುಗೊಳಿಸಿದ್ದರು. ಅಕ್ಕನ ಮಗನ ಚಿಕಿತ್ಸೆಗಾಗಿ ತನ್ನ ಬದುಕಿಗೆ ನೆರವಾಗಲಿದ್ದ ಸಂಗೀತ ಕಲಿಕೆಯನ್ನು ತ್ಯಜಿಸಿದ ತ್ಯಾಗಿ. ಗುಣಮುಖನಾದ ನನ್ನನ್ನು ಗೋಳ್ತಾಜೆಗೆ ಕರೆದುಕೊಂಡು ಬಂದರು. ಥೇಟ್ ಶವದ ಸ್ಥಿತಿಯಲ್ಲಿದ್ದವ ಎರಡೇ ವರುಷದಲ್ಲಿ ಮನುಷ್ಯನಾದೆ. ಋಣವನ್ನು ಹೇಗೆ ತೀರಿಸಲಿ? ಚಿಕ್ಕಮ್ಮ ತ್ಯಾಗ ಎನ್ನುವುದನ್ನು ಬದುಕಿನಲ್ಲಿ ಅನುಷ್ಠಾನಿಸಿ ತೋರಿಸಿದ್ದಾರೆ. 
**********
ಐದನೇ ವರುಷಕ್ಕೆ ಬೆಳೆದು ನಿಂತಿದ್ದೆ. ಕಲ್ಮಡ್ಕ ಸರಕಾರಿ ಶಾಲೆಯಿಂದ ಒಂದನೇ ತರಗತಿಗೆ ದಾಖಲಾದೆ. ಯಾಕೋ ಏನೋ ಕಲಿಕೆಯಲ್ಲಿ ಹೇಳುವಂತಹ ಉತ್ಸಾಹವಿರಲಿಲ್ಲ. ಪಾಠವೆಂದರೆ ಅಲರ್ಜಿ.  ಆಟದಲ್ಲೇ ಗಮನ. ಉಪಾಧ್ಯಾಯರು ಪಾಠ ಮಾಡುತ್ತಿದ್ದಾಗ ಎತ್ತಲೋ ಗಮನ. ಪಠ್ಯದ ಹೊರತಾದ ಮಿಕ್ಕ ಎಲ್ಲಾ ವಿಚಾರಗಳಲ್ಲಿ ಆಸಕ್ತಿಯಿತ್ತು. ಸಹಪಾಠಿಗಳು ಶೃದ್ಧೆಯಿಂದ ಕಲಿಯುತ್ತಿದ್ದಾಗ ಗೇಲಿ, ಕೀಟಲೆ ಮಾಡುತ್ತಿದ್ದೆ.

ತರಗತಿಯಲ್ಲಿ ದಡ್ಡನಾಗಿ ಗುರುತಿಸಲ್ಪಟ್ಟಿದ್ದೆ. ಅಧ್ಯಾಪಕರು ಅರ್ಥವಾಗುವಂತೆ ಪಾಠ ಹೇಳುತ್ತಿದ್ದರು. ಒಮ್ಮೆ ಅರ್ಥವಾಗುತ್ತದೆ, ಮತ್ತೆ ಕೇಳಿದರೆ.. ಉಹೂಂ. ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲೆಲ್ಲಾ ಕೆಂಪುಶಾಯಿಯ ಷರಾಗಳು! ಐದು ಅಂಕ ಸಿಕ್ಕಿದರೆ ಪುಣ್ಯ. ತಿರುಮಲೇಶ್ವರ ಭಟ್ರ ಮಗ ಎನ್ನುವ ಕಾರಣಕ್ಕಾಗಿ ಒಂದರಿಂದ ಆರನೇ ತರಗತಿ ವರೆಗೆ ತೇರ್ಗಡೆಗೊಳಿಸಿದ್ದರು. ಓದದಿದ್ದರೂ, ಬರೆಯದಿದ್ದರೂ ಪಾಸ್ ಮಾಡುತ್ತಾರಲ್ಲಾ!

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ. ಮನೆಯಲ್ಲಿ ಅಪ್ಪ, ಅಮ್ಮನಿಂದ ಓದಿಸುವ ಶಿಕ್ಷೆ! ಅವರ ಕಣ್ಣುತಪ್ಪಿಸಿ ಸ್ವಚ್ಛಂದವಾಗಿ ಓಡಾಡಿದರೂ ರಾತ್ರಿ ಒತ್ತಾಯದ ಪಾಠ. ಪಾಡು ನನಗಲ್ಲ, ವಿರೋಧಿಗಳಿಗೂ ಬೇಡ!  ಇವರೆಲ್ಲಾ ಯಾಕೆ ಇಷ್ಟು ಕಷ್ಟಪಡುತ್ತಾರೆ? ನಾನೇನು ಅಷ್ಟು ದಡ್ಡನಾ? ಪಾಸಾಗುತ್ತಿದ್ದೇನಲ್ಲಾ.. ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ. ಅಂತೂ ಇಂತೂ ಏಳನೇ ತರಗತಿಯಲ್ಲಿ ಜಸ್ಟ್ ಪಾಸ್. ಅಮ್ಮ, ಅಪ್ಪನಿಗೆ ಖುಷಿಯೋ ಖುಷಿ. ಎಲ್ಲಾ ವಿಷಯಗಳಲ್ಲೂ ಮೂವತ್ತೈದರಿಂದ ಮೂವತ್ತೆಂಟು ಅಂಕ. 

No comments:

Post a Comment