ಯಾವುದೇ ಹಳ್ಳಿಗೆ ಹೋಗಿ. ಅಲ್ಲೊಂದು ಯಕ್ಷಗಾನ ಸಂಘ. ನಿತ್ಯ ಚೆಂಡೆ ಮದ್ದಳೆಗಳ ಸದ್ದು. ಆಟ, ಕೂಟಗಳ ಸುದ್ದಿ ಮಾತನಾಡುವ ಹತ್ತಾರು ವ್ಯಕ್ತಿಗಳು. ಗೂಡಂಗಡಿ, ಹೋಟೆಲ್ಗಳಲ್ಲಿ ಯಕ್ಷಗಾನದ್ದೇ ಗುಂಗು. ಟೇಪ್ರೆಕಾರ್ಡಿನಲ್ಲಿ ಮೊಳಗುವ ಭಾಗವತಿಕೆಯ ಸೊಗಸು, ಅರ್ಥಗಾರಿಕೆಯ ಗಮ್ಮತ್ತುಗಳು. ‘ಊಹನೆಗೂ ನಿಲುಕದ ವಿಮರ್ಶೆಗಳು. ‘ಇದಮಿತ್ಥಂ’ ವಿಚಾರಗಳನ್ನು ಸ್ವ-ಪ್ರತಿಷ್ಠೆಯ ನೆರಳಿನಲ್ಲಿ ಸ್ಥಾಪಿಸುವ ಮಂದಿ... ಇದು ಒಂದು ಕಾಲಘಟ್ಟದ ಯಕ್ಷಗಾನೀಯ ವಾತಾವರಣ. ಹಳ್ಳಿಯೊಂದರ ಸಾಂಸ್ಕøತಿಕ ದನಿ. ಇಂದು ನಾವೇನಾದರೂ ಬೆನ್ನು ತಟ್ಟಿಕೊಳ್ಳುವುದಿದ್ದರೆ ಅದು ಯಕ್ಷಗಾನ ಸಂಘಗಳು ಹುಟ್ಟು ಹಾಕಿದ ಕಲೆಯ ಅಡಿಪಾಯ.
ಹೀಗೆ ಬಾಳಿ ಬೆಳಗಿದ ಸಂಘಗಳಲ್ಲಿ ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘಕ್ಕೆ ಈಗ ಸುವರ್ಣದ (18-3-1968) ಕಂಪು, ತಂಪು. ಪುತ್ತೂರಿನ ಯಕ್ಷಾಸಕ್ತಿಯನ್ನು ಜೀವಂತವಾಗಿಟ್ಟ ದಿನಮಾನಗಳಿಗೆ ಸಾಕ್ಷಿಯಾಗಿ ಹಿರಿಯರು ಮಾತಿಗೆ ಸಿಗುತ್ತಾರೆ. ಕಲಾ ಮತಿಯನ್ನು ಎಚ್ಚರಿಸುತ್ತಾರೆ. ತನ್ನ ಮಿತಿಯಲ್ಲಿ ಅಲೆಯ ತೇವವನ್ನು ಸದಾ ಕಾಪಿಟ್ಟುಕೊಂಡಿದೆ. ಸಂಘಗಳ ಕಾರ್ಯಹೂರಣಗಳು ಪಲ್ಲಟವಾಗುತ್ತಿರುವ ಕಾಲಮಾನದಲ್ಲೂ ತನ್ನ ಪಲ್ಲಟಗೊಳ್ಳದೆ ಗಟ್ಟಿಯಾಗಿ ನಿಂತಿದೆ. ಕಾರಣ, ಹಿರಿಯರು ತೋರಿದ ಹಾದಿ, ದೂರದೃಷ್ಟಿ ಮತ್ತು ಅವರ ಬೌದ್ಧಿಕತೆಯ ಒಳತೋಟಿಗಳು.
ಬೊಳುವಾರಿನ ಹೃದಯಭಾಗದಲ್ಲಿರುವ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯವು ಸಂಘದ ಮನೆ. ನೂರಾರು ಯಕ್ಷ ಮನಸ್ಸುಗಳು ಮನೆಯ ಸದಸ್ಯರಾಗಿದ್ದಾರೆ. ಯಕ್ಷಗಾನದಲ್ಲಿ ಭದ್ರವಾಗಿ ಕಾಲೂರಿದ್ದಾರೆ. ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ. ಹಲವರ ಮನದೊಳಗೆ ಸುಪ್ತವಾಗಿದ್ದ ಕಲಾಬೀಜದ ಮೊಳಕೆಯ ಸಾಮಥ್ರ್ಯಕ್ಕೆ ಕಾವು ನೀಡಿದೆ. ನಿಯಮಿತ ಕೂಟಗಳಿಂದ ಉಸಿರನ್ನು ಕಾಪಿಟ್ಟಿದೆ. ಇಲ್ಲಿ ರೂಪುಗೊಂಡ ಕಲಾವಿದರು ತಾನು ಅರ್ಥಧಾರಿಕೆಯನ್ನು ಕಲಿತ ಕ್ಷಣಗಳ ನೆನವರಿಕೆ ಮಾಡಿಕೊಳ್ಳುವುದು ಪುಳಕದ ಅನುಭವ. ನಾಡಿನ ಪ್ರಸಿದ್ಧರು ಸಂಘದ ಗೌರವ ಸ್ವೀಕರಿಸಿದ್ದಾರೆ. ಅವರೆಲ್ಲರೂ ಮಾತಿನ ಲೋಕದ ಸವಿಯನ್ನು ಬಿಡಿಸಿದ್ದಾರೆ.
ನಾರಾಯಣ ಭಟ್ ಬೊಳುವಾರು, ಪಿ.ಮಹಾಲಿಂಗ ಮಣಿಯಾಣಿ ಬೊಳ್ವಾರು, ರಾಮಯ್ಯ ಶೆಟ್ಟಿ, ಬಿ.ಸೇಸಪ್ಪ ಟೈಲರ್, ಬಿ.ಹೊನ್ನಪ್ಪ ಹೆಗ್ಡೆ ಬನ್ನೂರು – ಈ ಐವರಿಂದ ಆರಂಭಗೊಂಡ ಸಂಘದಲ್ಲೀಗ ನೂರಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಮಹಾಲಿಂಗ ಮಣಿಯಾಣಿಯವರು ಸ್ಥಾಪಕಾಧ್ಯಕ್ಷರು. ಪ್ರಸ್ತುತ ಭಾಸ್ಕರ ಬಾರ್ಯರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿದೆ. 1975ರಲ್ಲಿ ಬೊಳ್ವಾರು ಮಾಧವ ನಾಯಕರು ಅಧ್ಯಕ್ಷರಾಗಿದ್ದರು. ಪ್ರತೀ ವರುಷವೂ ವಾರ್ಷಿಕೋತ್ಸವವನ್ನು ನಡೆಸುತ್ತಿರುವುದು ಪರಿಪಾಠ. ಕೆಲವು ವರುಷದೀಚೆಗೆ ವಾರ್ಷಿಕೋತ್ಸವಕ್ಕೆ ಅದ್ದೂರಿಯ ಸ್ಪರ್ಶ. ಅದಕ್ಕೀಗ ಯಕ್ಷೋತ್ಸವದ ವಿನ್ಯಾಸ.
ಕಲಾವಿದರನ್ನು ರೂಪುಗೊಳಿಸುವುದು ಸಂಘದ ಹಿರಿಮೆ. ನಿಶ್ಚಿತ ತಾಳಮದ್ದಳೆ ಕೂಟಗಳ ಪ್ರಸ್ತುತಿ. ಸಾಮಾಜಿಕವಾಗಿ ಕಲಾವಿದರಿಗೆ ಪ್ರತ್ಯೇಕ ಮಣೆ. ಬರೆಪ್ಪಾಡಿ ಅನಂತಕೃಷ್ಣ ಭಟ್ಟರು ಕಾರ್ಯದರ್ಶಿಯಾಗಿ ಬಹುಕಾಲ ತಪಸ್ಸಿನಂತೆ ಮುನ್ನಡೆಸಿದ್ದರು. ಹೊಸಹೊಸ ಅರ್ಥಧಾರಿಗಳನ್ನು ಹುಡುಕಿ ಆಹ್ವಾನಿಸುತ್ತಿದ್ದರು. ಹೊಸದಾಗಿ ರಂಗಪ್ರವೇಶಿಸುವ ಆಸಕ್ತರ ಬೆನ್ನುತಟ್ಟಿ ಹುರಿದುಂಬಿಸುತ್ತಿದ್ದರು. ಇವರ ಪ್ರೋತ್ಸಾಹದಿಂದ ಬೆಳೆದ ಅನೇಕರು ಬರೆಪ್ಪಾಡಿಯವರ ಕೊಡುಗೆ ಮತ್ತು ಶ್ರಮವನ್ನು ನೆನಪಿಸಿಕೊಳ್ಳುತ್ತಾರೆ.
ವಾರ್ಷಿಕೋತ್ಸವದಲ್ಲಿ ಓರ್ವ ಹಿರಿಯರನ್ನು ಗೌರವಿಸುವ ಪರಂಪರೆ. ಯಕ್ಷಗಾನ ಕ್ಷೇತ್ರದ ಉದ್ಧಾಮರನ್ನೆಲ್ಲಾ ಗೌರವಿಸಿದೆ. ಇಲ್ಲಿ ಗೌರವ ಪಡೆಯುವುದು ಕಲಾವಿದರಿಗೂ ಖುಷಿಯ ಕ್ಷಣ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಸಾಪ್ತಾಹಿಕ ಕೂಟಗಳನ್ನು ಸಂಘವು ನಡೆಸುತ್ತಿದೆ. ನಲವತ್ತರ ಸಂಭ್ರಮದಲ್ಲಿ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದು, ಪ್ರಥಮ ಪ್ರಶಸ್ತಿಯನ್ನು ಕೀರ್ತಿಶೇಷ ಮಲ್ಪೆ ರಾಮದಾಸ ಸಾಮಗರಿಗೆ ಪ್ರದಾನಿಸಿದೆ. ಬಳಿಕ ಪ್ರತೀ ವರುಷವೂ ಪ್ರಶಸ್ತಿಯನ್ನು ಅರ್ಹರಿಗೆ ಪ್ರದಾನಿಸುತ್ತಿದೆ. ಅಲ್ಲದೆ ಹಿರಿಯ ಅರ್ಥಧಾರಿ ಬಿ.ಸುಬ್ರಾಯ ಓಕುಣ್ಣಾಯರ ಆಯೋಜನೆಯ ‘ಪಾಣಾಜೆ ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ’ದ ಪ್ರಶಸ್ತಿ ಪ್ರದಾನ ಕೂಡಾ ಜತೆಗೆ ನಡೆಯುತ್ತಿದೆ.
2005ರಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಹುಟ್ಟು. ಪುತ್ತೂರಿನ ಸುತ್ತೂರು ಅಲ್ಲದೆ ದೂರದೂರಿನಲ್ಲೂ ತಾಳಮದ್ದಳೆಗಳನ್ನು ಏರ್ಪಡಿಸುತ್ತಿದೆ. ಸದಸ್ಯೆಯರಲ್ಲಿ ಬಹುಪಾಲು ಉದ್ಯೋಗಸ್ಥರು. ಮನೆವಾರ್ತೆ, ಉದ್ಯೋಗಗಳ ಒತ್ತಡದ ಮಧ್ಯೆಯೇ ಕಲಾವಿದರಾಗಿ ರೂಪುಗೊಂಡಿದ್ದಾರೆ. ಮಹಿಳಾ ಸಂಘದ ದಶಮಾನೋತ್ಸವವು ಅದ್ದೂರಿಯಿಂದ ನಡೆದಿತ್ತು. ತಾಳಮದ್ದಳೆಯ ಗುಣಮಟ್ಟ ಮತ್ತು ಉತ್ತಮ ಪ್ರಸ್ತುತಿಗಳಿಂದಾಗಿ ಮಹಿಳಾ ತಂಡಕ್ಕಿರುವ ಬೇಡಿಕೆ ಗಣನೀಯ. ಪ್ರಸ್ತುತ ಪ್ರೇಮಲತಾ ಟಿ.ರಾವ್ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ.
ಸಂಘವು 2008ರಲ್ಲಿ ತನ್ನ ನಲವತ್ತರ ಸಂಭ್ರಮವನ್ನು ಆಚರಿಸಿತು. ‘ಯಕ್ಷ ಮಾಣಿಕ್ಯ’ ನೆನಪು ಕೃತಿಯನ್ನು ಪ್ರಕಟಿಸಿತ್ತು. ನೆನಪಿಗಾಗಿ ಆರುವತ್ತು ತಾಳಮದ್ದಳೆಗಳನ್ನು ನಡೆಸಿದೆ. “ಒಮ್ಮೆ ಸಂಘದ ತಾಳಮದ್ದಳೆ ಮುಗಿಸಿ ಮರಳುತ್ತಿದ್ದಾಗ ಸಹಕಲಾವಿದರು ವಿನೋದಕ್ಕಾಗಿ - ನಲವತ್ತರ ನೆನಪಿಗೆ ನಲವತ್ತು ತಾಳಮದ್ದಳೆ ಮಾಡಿದರೆ ಹೇಗೆ – ಆಡಿದ ಮಾತು ಅನುಷ್ಠಾನಗೊಂಡಿತು. ಕಲಾವಿದರ ಜೋಡಣೆ, ಪ್ರಾಯೋಜಕರ ಹುಡುಕಾಟದ ಸಮಸ್ಯೆಯು ಹತ್ತಿಯಂತೆ ಹಗುರವಾಯಿತು. ಸರಣಿ ತಾಳಮದ್ದಳೆ ಸಂಪನ್ಮೂಲವಾಯಿತು,” ಎಂದು ಆ ದಿವಸಗಳ ಖುಷಿಯನ್ನು ಹಂಚಿಕೊಳ್ಳುತ್ತಾರೆ ಅಧ್ಯಕ್ಷ ಭಾಸ್ಕರ ಬಾರ್ಯ.
ಬೊಳ್ವಾರು ಮಾಧವ ನಾಯಕರ ನಿಧನಾ ನಂತರ ಅವರ ಚಿರಂಜೀವಿ ರಮಾನಂದ ನಾಯಕ್ ಮತ್ತು ಅವರ ಕುಟುಂಬ ಸಂಘಕ್ಕೆ ಹೆಗಲೆಣೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಟಿ.ರಂಗನಾಥ ರಾವ್ ಅವರ ಶ್ರಮ ಗುರುತರ. ಪ್ರಸ್ತುತ ಗುಡ್ಡಪ್ಪ ಬಲ್ಯರು ಸಂಘದ ಕಾರ್ಯದರ್ಶಿ. ದುಗ್ಗಪ್ಪ ಎನ್. ಕೋಶಾಧಿಕಾರಿ. ಸಂಘದ ಕಾರ್ಯಹೂರಣಗಳು ಫಕ್ಕನೆ ನೋಡುವಾಗ ತಾಳಮದ್ದಳೆಗೆ ಸೀಮಿತ ಅಂತ ಕಂಡು ಬಂದರೂ, ಅದರ ಪರಿಣಾಮ ಮತ್ತು ಪ್ರಭಾವಗಳು ಉತ್ತಮ ವಾತಾವರಣವನ್ನು ನೀಡುತ್ತವೆ. “ನಾವು ಬೊಳ್ವಾರಿನಲ್ಲಿ ಕೂಟ ಮಾಡುವಾಗ ಎಷ್ಟೋ ಮಂದಿ ಗೇಲಿ ಮಾಡಿದ್ದಾರೆ. ಅಪಹಾಸ್ಯ ಮಾಡಿದ್ದಾರೆ. ನಮ್ಮ ಕರ್ತವ್ಯ ಎನ್ನುವ ರೀತಿಯಲ್ಲಿ ಸಂಘವನ್ನು ಮುನ್ನಡೆಸಿದ್ದೇವೆ. ಕ್ರಮೇಣ ಗೇಲಿ ಮಾಡಿದವರು ಸುಮ್ಮನಾದರು,” ಎಂದು ಕೀರ್ತಿಶೇಷ ಬರೆಪ್ಪಾಡಿ ಅನಂತಕೃಷ್ಣ ಶರ್ಮರು ಹೇಳಿದ್ದು ನೆನಪಾಗುತ್ತದೆ.
ಸಂಘಕ್ಕೀಗÀ ಸುವರ್ಣದ ಹೊಳಪು. ಮುಂದಿನ ವರುಷ ಸುವರ್ಣ ಮಹೋತ್ಸವದ ಸಂಪನ್ನತೆ. ಇದಕ್ಕೆ ಪೂರ್ವಭಾವಿಯಾಗಿ “ಶ್ರೀ ಆಂಜನೇಯ 50 - ಸುವರ್ಣಾಭಿಯಾನ 2017-18” ಶೀರ್ಷಿಕೆಯಡಿ ಐವತ್ತು ತಾಳಮದ್ದಳೆಗಳನ್ನು ಸಂಪನ್ನಗೊಳಿಸಲು ಶ್ರೀಕಾರ. ಮೊದಲ ಕಾರ್ಯಕ್ರಮವು ತಾಳಮದ್ದಳೆ ಸಪ್ತಾಹವಾಗಿ ರೂಪುಗೊಂಡಿದೆ. ಕೆಯ್ಯೂರು ನಾರಾಯಣ ಭಟ್ಟರ ನೇತೃತ್ವ. ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನÀದಲ್ಲಿ ಸೆಪ್ಟೆಂಬರ್ 6ನೇ ತಾರೀಕಿನಿಂದ 12ರ ತನಕ ಜರುಗಿದೆ.
(ಚಿತ್ರ : ಮುರಳಿ ರಾಯರಮನೆ)
No comments:
Post a Comment