ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಷಿಯವರು (1916-1991) ದೂರವಾಗಿ ಕಾಲು ಶತಮಾನ ಮೀರಿತು. ಬದುಕಿನಿಂದ ದೂರವಾದರೂ ಮಾತುಕತೆ, ರಂಗ ವಿಮರ್ಶೆ ಮತ್ತು ಹಾಸ್ಯಗಳ ವಿಚಾರ ಬಂದಾಗ ಮತ್ತೊಮ್ಮೆ ಬದುಕಿ ಬರುತ್ತಾರೆ! ಅವರು ಕಡೆದು ನಿಲ್ಲಿಸಿದ ಪಾತ್ರಗಳ ಮಾದರಿಗಳ ಹೊರತಾಗಿ ವರ್ತಮಾನದ ರಂಗವು ಹೆಚ್ಚೇನನ್ನೂ ಕೊಟ್ಟಿಲ್ಲ! ಕೊಟ್ಟರೂ ಅದು ಯಕ್ಷಗಾನವಾಗಿ ಉಳಿದಿಲ್ಲ, ಬೆಳೆದಿಲ್ಲ.
ಯಕ್ಷಗಾನದಲ್ಲಿ ಹಾಸ್ಯಗಾರರ ಸ್ಥಾನ ಹಿರಿದು. ಪರೋಕ್ಷವಾಗಿ ರಂಗ ಮತ್ತು ಚೌಕಿಯ ಮಧ್ಯೆ ಓಡಾಡುವ ಸೂತ್ರಧಾರ. ವೇಷಗಳನನು ಮಾಡಿಕೊಂಡು, ಸೂತ್ರತೆಯನ್ನು ನಿಭಾಯಿಸಿಕೊಳ್ಳುವುದು ಹೇಳುವಷ್ಟು ಸುಲಭವಲ್ಲ. ಜೋಷಿಯವರಂತಹ ಹಿರಿಯರು ನಿಜಾರ್ಥದ ಹಾಸ್ಯಗಾರರಾಗಿದ್ದರು. ಅವರಲ್ಲಿ ‘ಯಕ್ಷಗಾನದ ಹಾಸ್ಯ’ ಎನ್ನುವ ಸ್ಪಷ್ಟ ಜ್ಞಾನವಿತ್ತು. ನಿರ್ವಹಿಸಿದ ಪಾತ್ರಗಳೆಲ್ಲವೂ ಮಾದರಿಗಳಾದುವು. ದಂತಕಥೆಗಳಾದುವು. ಮಾತಿಗೆ ವಿಷಯಗಳಾದುವು.
ಹಾಸ್ಯ ಒಂದು ರಸ. ಹಾಸ್ಯಗಾರ ಆ ರಸಕ್ಕೆ ದೇಹವನ್ನು ಕೊಡುತ್ತಾನೆ. ಭಾಷೆಯನ್ನು ಪೋಣಿಸುತ್ತಾನೆ. ಭಾವವನ್ನು ನೆಲೆಗೊಳಿಸುತ್ತಾನೆ. ಜ್ಞಾನವನ್ನೂ ನೀಡುತ್ತಾನೆ. ಯಾವಾಗ ರಸವೇ ದೇಹವಾಯಿತೋ ಆಗ ಪಾತ್ರಗಳೊಂದಿಗೆ ರಸವೇ ಸಂವಾದ ಮಾಡುತ್ತದೆ. ಹೀಗೆ ರಸ ಮತ್ತು ಪಾತ್ರಗಳು ಸಂವಾದ ಮಾಡಿ ಕಟ್ಟಿಕೊಟ್ಟ ಗಟ್ಟಿ ಪಾಕವೇ ‘ವಿಟ್ಲ ಜೋಷಿ’ ಎನ್ನುವ ಹಾಸ್ಯಗಾರರು. ಪರಿಣಾಮ, ಇವರ ಹಾಸ್ಯ ಪಾತ್ರಗಳಿಗೆ ಹಾಸ್ಯ ರಸವೇ ನಾಚಿದೆ! ರಸದೊಳಗಿನ ಹೂರಣವನ್ನು ಪೂರ್ಣವಾಗಿ ಬಾಚಿದ್ದಾರೆ.
ಇವರಿಗೆ ಶಾಸ್ತ್ರೀಯವಾದ ನಾಟ್ಯದ ಅಗತ್ಯವಿಲ್ಲವೆಂದು ಪಾತ್ರಗಳೇ ತಮ್ಮೊಳಗೆ ರಾಜಿ ಮಾಡಿಕೊಂಡಿದ್ದುವು. ನಿಂತರೆ ಸಾಕು, ಅದೊಂದು ಶಿಲ್ಪ. ಚಲಿಸಿದರೆ ಸಾಕು, ಚಲನೆಯೇ ಒಂದು ನೃತ್ತ. ಒಂದೊಂದು ರಂಗಕ್ರಿಯೆಗಳು ಮಾದರಿಗಳಾಗಿ ಜನಮನದೊಳಗೆ ಇಳಿದುಬಿಟ್ಟಿದೆ. ಅದಕ್ಕೆ ಪರ್ಯಾಯಗಳಿಲ್ಲ. ಅನುಕರಣೆಗೂ ಸಿಗದು. ಸಹ ಪಾತ್ರಧಾರಿಯಾಗಿದ್ದ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಹೇಳುತ್ತಾರೆ - “ಅವರು ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದುದಲ್ಲ. ತಾವೇ ಪಾತ್ರವಾಗಿ ಬಿಡುತ್ತಿದ್ದರು. ಅವರೊಬ್ಬ ಸೃಜನಶೀಲ ಹಾಸ್ಯಗಾರ.”
ಕೂಡ್ಲು ಮೇಳದಿಂದ ತೊಡಗಿ ಧರ್ಮಸ್ಥಳ ಮೇಳದ ತನಕ ಅನ್ಯಾನ್ಯ ಮೇಳಗಳಲ್ಲಿ ಸುಮಾರು ನಲವತ್ತೆಂಟು ವರುಷ ತಿರುಗಾಟ ಮಾಡಿದ್ದರು, ದಿ. ಕೊಗ್ಗಣ್ಣ ಹಾಸ್ಯಗಾರರ ಹಾಸ್ಯವು ಜೋಷಿಯವರನ್ನು ಸೆಳೆದಿತ್ತು. ಅವರಂತಾಗದೆ ಸ್ವಂತಿಕೆಯನ್ನು ಮಿಳಿತಗೊಳಿಸಿದರು. ದಿಗ್ಗಜ ಕಲಾವಿದರ ಮಧ್ಯೆ ತಾವೂ ದಿಗ್ಗಜರಾದರು. ಸವಾಲಿನ ಮೇಳದ ಬದುಕು ತಾರಾಮೌಲ್ಯ ತಂದು ಕೊಟ್ಟಿತು.
‘ಶ್ರಿಕೃಷ್ಣ ಲೀಲೆ’ ಪ್ರಸಂಗದಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಮತ್ತು ಜೋಷಿಯವರ ‘ಕೃಷ್ಣ-ವಿಜಯ’ ಜತೆಗಾರಿಕೆ ಒಂದು ಕಾಲಘಟ್ಟದ ರಂಗ ವಿಸ್ಮಯ. ದಿ.ದೇರಾಜೆ ಸೀತಾರಾಮಯ್ಯನವರ ‘ವಿಜಯ’ ಪಾತ್ರದ ಕಲ್ಪನೆಯನ್ನು ಜೋಷಿಯವರು ರಂಗದಲ್ಲಿ ಅನುಷ್ಠಾನಿಸಿದರು. ಅಂದು ಕಡೆದ ಶಿಲ್ಪವು ವರ್ತಮಾನದ ರಂಗದಲ್ಲೂ ಮಾತನಾಡುತ್ತಿದೆ! ಕೃಷ್ಣನಿಗಿಂತ ವಿಜಯನ ಪಾತ್ರವು ಎತ್ತರಕೆ ಏರದಂತೆ ಅಂತರ ಕಾಪಾಡಿಕೊಂಡಿದ್ದಾರೆ. ಅದು ರಂಗದ ಎಚ್ಚರ. ಹಾಸ್ಯಗಾರ ರಂಗದಲ್ಲಿ ಎಚ್ಚರವಾಗಿದ್ದಷ್ಟೂ ಹಾಸ್ಯ ರಸಕ್ಕೆ ಮಾನ.
‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗದಲ್ಲಿ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಮತ್ತು ಇವರ ‘ಬಪ್ಪ-ಉಸ್ಮಾನ್’ ಪಾತ್ರಗಳ ಜತೆಗಾರಿಕೆಗಳು ಐಕಾನ್. ಮಿತ ಮಾತುಗಾರನಾಗಿ, ಕಾಣುವುದಕ್ಕೆ ಮಂದತೆಯಿದ್ದರೂ ಬುದ್ಧಿವಂತ ‘ಉಸ್ಮಾನ್’ ಪಾತ್ರಕ್ಕೆ ಪ್ರಸಂಗದಲ್ಲಿ ಪದ್ಯಗಳಿಲ್ಲ! ಅದನ್ನೊಂದು ‘ಬಿಡಲಾಗದ ಪಾತ್ರ’ವನ್ನಾಗಿ ಸ್ಥಾಪಿಸಿದ್ದರು. ಉಸ್ಮಾನ್ ಬಪ್ಪನ ಸೇವಕ. ಬೆನ್ನುಬಾಗಿಸಿ, ನಿಂತಲ್ಲೇ ನಿಲ್ಲುವ ಪಾತ್ರದ ಬದ್ಧತೆಯ ಪರಿಣಾಮ, ಜೋಷಿಯವರು ಮನೆಗೆ ಹೋಗಿ ಬೆನ್ನಿಗೆ, ಕಾಲಿಗೆ ಎಣ್ಣೆ ತಿಕ್ಕಿಸುತ್ತಿದ್ದರಂತೆ. ಶಾರೀರಿಕವಾಗಿ ತೊಂದರೆಯಾದರೂ ಪಾತ್ರ ಕೆಡಬಾರದೆನ್ನುವ ಪ್ರಜ್ಞೆ.
‘ಹರಿಶ್ಚಂದ್ರ ಚರಿತೆ’ ಪ್ರಸಂಗಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರ ‘ಹರಿಶ್ಚಂದ್ರ’ ಪಾತ್ರಕ್ಕೆ ಸಂವಾದಿಯಾಗಿ ‘ನಕ್ಷತ್ರಿಕ’ ಪಾತ್ರವು ಪರಿಣಾಮಕಾರಿ. ಪ್ರಸಂಗಗಳಲ್ಲಿ ಬರುವ ‘ದೂತ’ನ ಪಾತ್ರಗಳಲ್ಲಿ ವೈಶಿಷ್ಟ್ಯದ ಛಾಪು. ರಾವಣೋದ್ಭವ ಪ್ರಸಂಗದ ದೂತನಿಗೂ, ರಾವಣ ವಧೆ ಪ್ರಸಂಗದ ದೂತನಿಗೂ ನಿರ್ವಹಣೆಯಲ್ಲಿ ವ್ಯತ್ಯಾಸಗಳು. ದೇವ ದೂತ, ರಾಕ್ಷಸದೂತ, ಬೇಟೆ ದೂತ.. ಹೀಗೆ ದೂತ ಎನ್ನುವ ಪೋಸ್ಟ್ ಒಂದೇ ಆದರೂ ಇಲಾಖೆ ಮತ್ತು ವರಿಷ್ಠರು ಬೇರೆ ಬೇರೆ ತಾನೆ! ಬೇಡರ ಕಣ್ಣಪ್ಪ ಪ್ರಸಂಗದ ‘ಕಾಶಿಮಾಣಿ’, ಚಂದ್ರಾವಳಿ ವಿಲಾಸ ಪ್ರಸಂಗದ ಅತ್ತೆ, ಪಾರಿಜಾತ ಪ್ರಸಂಗದ ‘ಮಕರಂದ’, ದಾರುಕ.. ಹೀಗೆ ವೈವಿಧ್ಯ ಪಾತ್ರಗಳು.
ವೇಷಗಳಂತೆ ಮುಖವರ್ಣಿಕೆಗಳೂ ಭಿನ್ನ. ಒಂದೆರಡು ರೇಖೆಗಳಲ್ಲಿ ನಿಜಮುಖವನ್ನು ಬದಲಾಯಿಸಬಲ್ಲ ಕೈಚಳಕ. ಸೂರಿಕುಮೇರು ಗೋವಿಂದ ಭಟ್ಟರು ವೇಷಗಳ ಪರಿಕರಗಳ ವಿನ್ಯಾಸಗಳನ್ನು ನೆನಪು ಮಾಡಿಕೊಳ್ಳುತ್ತಾರೆ, “ಅಡಿಕೆ ಸಿಪ್ಪೆ, ತೆಂಗಿನ ಗೆರಟೆ, ದಾರಿಯಲ್ಲಿ ಸಿಗುವ ಕಸಕಡ್ಡಿಗಳಿಂದಲೇ ತನ್ನ ಪಾತ್ರಗಳಿಗೆ ಬೇಕಾಗುವ ಮೀಸೆ, ಗಡ್ಡ, ಆಭರಣಗಳನ್ನು ತಯಾರಿಸುತ್ತಿದ್ದರು. ಗೆರಟೆಗಳನ್ನು ಪೋಣಿಸಿದ ಮಾಲೆಗಳನ್ನು ರಾಕ್ಷಸ ದೂತನ ಪಾತ್ರಗಳಿಗೆ ಬಳಸುತ್ತಿದ್ದರು. ಸಮುದ್ರ ಮಥನ ಪ್ರಸಂಗದ ಮೂಕಾಸುರ ಪಾತ್ರದ ಕಲ್ಪನೆ ಜೋಷಿಯವರದ್ದು.”
ಯಕ್ಷಗಾನದ ಹಾಸ್ಯಕ್ಕೆ ಹೊಸದಾದ ಪರಂಪರೆಯನ್ನು ಸೃಷ್ಟಿ ಮಾಡಿರುವುದು ದೊಡ್ಡ ಕಾಣ್ಕೆ. ತನಗೆ ಗೊತ್ತಿದೆಯೆಂದು ಹಾಸ್ಯಕ್ಕೆ ವಾಚಾಳಿತನವನ್ನು ತುರುಕಿಲ್ಲ. ಅತಿ ಮಾತಿನಿಂದ ಹಾಸ್ಯ ರಸ ಉತ್ಪತ್ತಿಯಾಗದು. ಕೆಲವೊಮ್ಮೆ ಎರಡು ಪದಗಳು ಸಾಕು, ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದರು. ಕ್ಷಣ ಯೋಚಿಸಿ ಮತ್ತೂ ನಗುತ್ತಿದ್ದರು. ಅವರಡಾಡುವ ಅಕ್ಷರ, ಪದ, ವಾಕ್ಯಗಳಲ್ಲಿ ವಾಗ್ದೇವಿ ಹಾಸ್ಯ ರಸವನ್ನು ಆವಾಹಿಸಿದ್ದಳು! ಜತೆಗೆ ನಾಟಕೀಯ ಪ್ರಜ್ಞೆ. ಎಲ್ಲವೂ ಸೇರಿ ಹೊರಹೊಮ್ಮಿದ ಹಾಸ್ಯವು ಯಕ್ಷಲೋಕದ ಅದಮ್ಯ ಮಾದರಿಗಳಾದುವು.
ಜೋಷಿಯವರ ಹಾಸ್ಯಾಭಿವ್ಯಕ್ತಿಯು ಯಕ್ಷಗಾನದ ಹಾಸ್ಯಕ್ಕೊಂದು ಸಂವಿಧಾನ. ಅಂದು ಕಡೆದ ಪಾತ್ರಗಳು, ಮಾತುಗಳು ಏನಿವೆಯೋ ಅದೇ ಬಿಂದು, ವಿಸರ್ಗ ಬಿಡದೆ ಈಗಲೂ ಅಭಿವ್ಯಕ್ತಿಯಾಗುತ್ತಿದೆ. ಉದಾ: ದಕ್ಷಾಧ್ವರ ಪ್ರಸಂಗದ ‘ವಿಪ್ರ’, ಕೃಷ್ಣಾರ್ಜುನ ಕಾಳಗದ ‘ಮಕರಂದ ಮತ್ತು ದಾರುಕ’, ಪಾರಿಜಾತ ಪ್ರಸಂಗದ ‘ಮಕರಂದ’.. ಮೊದಲಾದವುಗಳು. ಹೊಸ ತಲೆಮಾರಿಗೆ ಇವರ ಪರಿಚಯ ಇಲ್ಲ. ಸಂದರ್ಭ ಬಂದಾಗ ಜೋಷಿಯವರು ಹೆಸರು ಉಲ್ಲೇಖಿಸಲ್ಪಡುತ್ತದೆ.
ಜೋಷಿಯವರೊಳಗಿಳಿದ ಹಾಸ್ಯವು ತನ್ನ ವ್ಯಾಖ್ಯೆಯನ್ನು ತಾನೇ ಬದಲಾಯಿಸಿಕೊಂಡಿದೆ! ಮೌನದೊಳಗಿದೆ, ನಿರ್ಲಿಪ್ತ ಭಾವ. ನಿರ್ಲಿಪ್ತದಲ್ಲಿ ರಸ ಸೃಷ್ಟಿ ಸಾಧ್ಯವಿಲ್ಲ. ಆದರೆ ಜೋಷಿಯವರ ನಿರ್ಲಿಪ್ತದಲ್ಲೂ ಹಾಸ್ಯ ಎಚ್ಚರವಾಗಿತ್ತು. ಅವರು ರಂಗದಲ್ಲಿದ್ದಷ್ಟು ಹೊತ್ತು ರಸವು ಸಕ್ರಿಯ. ನಿಜ ಜೀವನದ ಮಾತಿನಲ್ಲೂ ಅದರ ಪ್ರತಿಫಲನ. ಈ ಭಾಗ್ಯ ಎಲ್ಲರಿಗೂ ಸಿಕ್ಕಿಲ್ಲ. ಹಾಗಾಗಿ ನೋಡಿ, ಎಲ್ಲರೂ ಹಾಸ್ಯಗಾರರು ಆಗಲು ಸಾಧ್ಯವಿಲ್ಲ. ತಾನು ನಗದೆ ರಸವೇ ನಗುವಂತೆ ಮಾಡುವ ಮಹಾನ್ ಮೋಡಿಗಾರರಾದರು. ತಾನು ನಗದೆ ಇರಲು ರಸ ಕಾರಣವಲ್ಲ. ಬದುಕಿನ ಒದ್ದಾಟ, ಗುದ್ದಾಟ.
ಆಗಿನ ಮದ್ರಾಸು ಸರಕಾರದ ವರಿಷ್ಠರು ಪಾತ್ರವನ್ನು ನೋಡಿ ‘ರಸಿಕರತ್ನ’ ಬಿರುದನ್ನು ನೀಡಿದರು. ಅಲ್ಲಿಂದ ಹೆಸರಿನೊಂದಿಗೆ ಬಿರುದು ಹೊಸೆಯಿತು. ಇವರೊಳಗಿನ ರಸವು ಬಿರುದಿನಿಂದ ಬೀಗಿತು, ಮಾಗಿತು. ಪರಿಪುಷ್ಟವಾಯಿತು. ಪಾತ್ರಗಳೆಲ್ಲಾ ಭವಿಷ್ಯದ ಪಠ್ಯವಾದುವು. ಈ ಪಠ್ಯದೊಳಗೆ ಜೋಷಿಯವರ ಹೆಸರು ಕೆತ್ತಲ್ಪಟ್ಟಿದೆ. ಅದರ ಹೊಳಪು ಮಾಸದು. ಕಾಲು ಶತಮಾನ ಕಳೆದರೂ ಹೊಳಪಿಗೆ ಪ್ರಖರತೆಯಿದೆ.
ಯಕ್ಷಗಾನಕ್ಕೆ ಹೊಸ ತಲೆಮಾರು ಪ್ರವೇಶ ಮಾಡಿದೆ. ಹೊಸತನದ ಹುಡುಕಾಟದಲ್ಲಿ ಬದಲಾವಣೆಗಳು ನುಗ್ಗುತ್ತಿವೆ. ಬದಲಾದ ಕಾಲಘಟ್ಟದಲ್ಲಿ ಹಾಸ್ಯ ರಸಗಳು ನಗುವನ್ನು ನಿಲ್ಲಿಸಿವೆ! ಪಾತ್ರಧಾರಿಯ ನಗುವೇ ಹಾಸ್ಯ ರಸವೆಂದು ಬಿಂಬಿತವಾಗಿದೆ. ಎಲ್ಲವೂ ತಿರುಗುಮುರುಗು. ಈ ಹೊತ್ತಲ್ಲಿ ಹಿರಿಯ ಪ್ರೇಕ್ಷಕರಿಗೆ ವಿಟ್ಲ ಜೋಷಿಯವರು ನೆನಪಾಗುತ್ತಾರೆ.
ಅವರ ಬದುಕು, ರಂಗ ಬದುಕನ್ನು ಅವರ ಚಿರಂಜೀವಿಗಳು, ಬಂಧುಗಳು ‘ರಸಿಕರತ್ನ’ (ಸಂಪಾದಕ : ಹಿರಣ್ಯ ವೆಂಕಟೇಶ್ವರ ಭಟ್) ಕೃತಿಯಲ್ಲಿ ಪೋಣಿಸಿದ್ದಾರೆ. ಪರ್ಕಳದ ‘ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ (ರಿ) ಕೃತಿಯನ್ನು ಪ್ರಕಾಶಿಸಿದ್ದಾರೆ. “ಯಕ್ಷಗಾನ ರಂಗದಲ್ಲಿ ಪಾತ್ರಗಳನ್ನು ಕಡೆದರೆ, ಬದುಕಿನಲ್ಲಿ ಬದುಕುವ ಜಾಣ್ಮೆಯನ್ನು ತಂದೆಯವರು ಕಲಿಸಿಕೊಟ್ಟಿದ್ದಾರೆ,” ಎನ್ನುತ್ತಾರೆ ಹರೀಶ್ ಜೋಷಿ.
(ಪ್ರಜಾವಾಣಿಯ ದಧಿಗಿಣತೋ ಅಂಕಣ / 29-9-2017)
No comments:
Post a Comment