ಮುಂಬಯಿಯ ಮಾಟುಂಗದ ಕಾಂಚಿಮಠದಲ್ಲಿ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ್ಯ ವೃತಾಚರಣೆ. ಈ ಸಂದರ್ಭದಲ್ಲಿ ಶ್ರದ್ಧೆಯ ಆಸ್ತಿಕರು ಭಾಗವಹಿಸಿ ಮಂತ್ರಾಕ್ಷತೆ ಸ್ವೀಕರಿಸುವುದು ಸನಾತನ ಪರಂಪರೆ. ಉಪ್ಪಿನಂಗಡಿಯ ಯಕ್ಷಕುಟುಂಬದ ಹದಿಮೂರು ಸದಸ್ಯರ ತಂಡ ಮುಂಬಯಿ ಪ್ರವಾಸದ ನೀಲನಕ್ಷೆ ಸಿದ್ಧಪಡಿಸುತ್ತಿರುವಾಗ ಅವರೊಂದಿಗೆ ಸೇರಿಕೊಂಡೆ. ಶ್ರೀರಾಮ ಪಾತಾಳರ ನೇತೃತ್ವ. ಪ್ರಸನ್ನ ಪಾತಾಳರ ಹೆಗಲೆಣೆ. ಒಂದಿಬ್ಬರ ಹೊರತುಪಡಿಸಿ ಮಿಕ್ಕೆಲ್ಲರೂ ಮುಂಬಯಿಗೆ ಹೊಸಬರು. ಹೋಗುವಾಗ ವಿಮಾನಯಾನ. ಮರಳುವಾಗ ರೈಲು ಪ್ರಯಾಣ.
(ಸಾಂದರ್ಭಿಕ ಚಿತ್ರ : ಲಕ್ಷ್ಮೀನಾರಾಯಣ ಭಟ್ ಬೆಂಗಳೂರು)
ಆಗಸ್ಟ್ 29. ಮಂಗಳವಾರ. ಹತ್ತೂವರೆಗೆ ವಿಮಾನ. ಎಂದಿನ ಮಳೆಗಾಲದ ಮಳೆ. ಯಕ್ಷಗಾನದ ರಾಮಾಯಣ ಪ್ರಸಂಗದಲ್ಲಿ ರಾವಣನ ಪುಷ್ಪಕ ವಿಮಾನದ ಬಣ್ಣನೆಯನ್ನು ಕೇಳಿದ ಅರಿವಿತ್ತು. ಆ ವಿಮಾನದಲ್ಲಿ ರಾವಣ ಹೇಗೆ ಪ್ರಯಾಣಿಸುತ್ತಿದ್ದಿರಬಹುದು ಎನ್ನುವ ಬೆರಗು ಆಟವನ್ನೋ, ಕೂಟವನ್ನೋ ನೋಡಿದ ಬಳಿಕ ಹುಟ್ಟುತ್ತಿದ್ದ ಚೋದ್ಯಗಳು. ನಿಜ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಪ್ರಾಪ್ತವಾದಾಗ ಪುಷ್ಪಕ ವಿಮಾನದ ಚೋದ್ಯ ಮರೆತುಹೋಯಿತು! ವಿಮಾನ ಟೇಕ್ಅಪ್ ಆದಾಗ ಬಹುತೇಕರಿಗೆ ಪುಳಕದ ಅನುಭವ! ಅವರ್ಣನೀಯ. ಮಾತು ಮೌನವಾಗಿತ್ತು. ಆ ಮೌನದೊಳಗೆ ಖುಷಿಗಿಂತ ದಿಗಲೇ ಹೆಚ್ಚೆನ್ನಿ!
ಅಂದು ಮುಂಬಯಿಯಲ್ಲಿ ಬೆಳಗ್ಗಿನಿಂದಲೇ ಮುಸಲಧಾರೆಯ ಮಳೆ. ಮೂರ್ನಾಲ್ಕು ದಿವಸದಿಂದ ಮಳೆಯ ಅಬ್ಬರ. ವಿಮಾನದ ಪ್ರಯಾಣದ ಖುಷಿಯ ಗುಂಗು ನಿಲ್ದಾಣದ ಹೊರ ಬಂದಾಗ ಠುಸ್ ಆಗಿತ್ತು. ಕಾರಣ – ಮಳೆ, ಗಾಳಿ, ಗುಡುಗು, ಮಿಂಚು, ಜತೆಗೆ ಚಳಿ. ಟೂರಿಸ್ಟ್ ವಾಹನಗಳ ಕೌಂಟರ್ ಶಟ್ಡೌನ್ ಆಗಿದ್ದುವು. ದಲ್ಲಾಳಿಯೊಬ್ಬರ ಮೂಲಕ ಮಾತುಕತೆ ಕುದುರಿತು. ಬಾಡಿಗೆ ಕಾರುಗಳಲ್ಲಿ ಕುಳಿತು ಉಸ್ಸಪ್ಪಾ ಎನ್ನುವಾಗಲೇ ಯಾವುದೋ ಸ್ಥಳದಲ್ಲಿ ಎಲ್ಲರನ್ನೂ ಡೌನ್ಲೋಡ್ ಮಾಡಿ ಹೊರಟು ಹೋದಾಗ ಮುಂಬಯಿಯ ಮೋಹ ದೂರವಾಗಿತ್ತು.
ವಾಹನವಲ್ಲ, ಮನುಷ್ಯರು ನಡೆದು ಹೋಗಲಾರದಷ್ಟು ಎತ್ತರಕ್ಕೆ ಮಾರ್ಗದಲ್ಲಿ ನೆರೆ ಏರಿ ನಿಂತಿತ್ತು. ದಾಟಿದರೆ ಮುಳುಗುವಷ್ಟು ನೀರು. ದಾಟದಿದ್ದರೆ ರಾತ್ರಿಯಿಡೀ ಮಾರ್ಗವಾಸ. ಮಧ್ಯಾಹ್ನ ಒಂದು ಗಂಟೆಯಿಂದ ರಾತ್ರಿ ಎಂಟು ಗಂಟೆಯ ತನಕ ಒಂದೆಡೆ ಟೆಂಟ್ ಊರಿದ ತಂಡವು ನಿರಾಹಾರದಿಂದ ಬಳಲಿತ್ತು. ಅಂತೂ ಎಂಟರ ಬಳಿಕ ಮಳೆಯ ಅಬ್ಬರ ಕಡಿಮೆಯಾಗಿತ್ತು. ಏರಿ ನಿಂತ ನೀರು ಸೊಂಟಮಟ್ಟಕ್ಕೆ ತಲುಪಿತ್ತು. ನಾಗರಿಕರು ನೀರಿನಲ್ಲೇ ಪ್ರಯಾಣಕ್ಕೆ ಅಣಿಯಾದರು. ಅವರನ್ನು ಹಿಂಬಾಲಿಸಿ ಗಮ್ಯಸ್ಥಳಕ್ಕೆ ತಲಪುವಾಗ ರಾತ್ರಿ ಹತ್ತು ಗಂಟೆ ಮೀರಿತ್ತು.
ಸರಿ, ಮಾಟುಂಗದ ಶ್ರೀಮಠದ ಭೇಟಿಗಾಗಿ ಅತ್ತ ಉಡುಪಿಯಿಂದ ಭಾಗವತ ನಾರಾಯಣ ಶಬರಾಯರೂ ಆಗಮಿಸಿ ಎಲ್ಲೋ ಫ್ಲೈಓವರ್ ಮೇಲೆ ಶತಪಥ ನಡೆದು ದಾರಿಕಾಣದೆ ಕಂಗಾಲಾಗಿದ್ದರು. ಕೊನೆಗೆ ತನ್ನ ಲಗ್ಗೇಜ್, ಉಡುಪುಗಳನ್ನು ಗಂಟು ಕಟ್ಟಿ ತಲೆಯಲ್ಲಿ ಹೊತ್ತು ನೆರೆಯನ್ನು ದಾಟಿದರು. ಹೀಗೆ ದಾಟುವಾಗ ವಸುದೇವನು ಶ್ರೀಕೃಷ್ಣನನ್ನು ನಂದಗೋಕುಲದೆಡೆಗೆ ಒಯ್ಯಲು ತಲೆಯ ಮೇಲೆ ಹೊತ್ತು ಯಮುನೆಯನ್ನು ದಾಟುವ ಕಥಾನಕವು ಶಬರಾಯರಿಗೆ ನೆನಪಾಗಿ, “ಅಂತೂ ಬದುಕಿದೆಯಾ, ಬಡಜೀವವೇ’ ಎನ್ನುತ್ತ ಮಾಟುಂಗ ತಲಪುವಾಗ ಸಚೇಲ ಸ್ನಾನವಾಗಿತ್ತು!
ಮತ್ತೊಂದೆಡೆ ಕಲಾವಿದ ಸ್ನೇಹಿತ ಕೃಷ್ಣಪ್ರಕಾಶ್ ಉಳಿತ್ತಾಯರು ಮಧ್ಯಾಹ್ನವೇ ಮುಂಬಯಿ ತಲುಪಿದ್ದರು. ಒಂದು ಗಂಟೆಗೆ ಬಸ್ಸೇರಿ ಕುಳಿತವರು ರಾತ್ರಿಯಾದರೂ ತಲಪುವಲ್ಲಿಗೆ ತಲುಪದೆ ಒದ್ದಾಡಿದ್ದರು. ಕೈಕೈ ಹಿಸುಕಿಕೊಂಡರೂ ನಿಷ್ಪ್ರಯೋಜಕ. ಕೊನೆಗೂ ಆಪ್ತರ ಮನೆಗೆ ತಲಪುವಾಗ ಬಹುಶಃ ಮಧ್ಯರಾತ್ರಿ ಸನಿಹವಾಗಿತ್ತು. “ಬಸ್ಸಿನಲ್ಲಿದ್ದ ಮಹಿಳೆಯರಿಗೆ ತುಂಬಾ ತೊಂದರೆಯಾಗಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ ಮುಂಬಯಿ ನಾಗರಿಕರ ಮಾನವೀಯ ಮಿಡಿತಗಳು, ಸಹಕಾರಗಳು ನಿಜಕ್ಕೂ ಆದರ್ಶದಾಯಕ ಮತ್ತು ಶ್ಲಾಘನೀಯ,” ನೆನಪಿಸಿಕೊಳ್ಳುತ್ತಾರೆ.
ಒಂದು ವಿಚಾರ ಮರೆತೆ. ನೆರೆಯಲ್ಲಿ ಈಜುನಡಿಗೆ ಮಾಡುತ್ತಿದ್ದಾಗ ಯಕ್ಷಗಾನದ ಸುದ್ದಿ ಮಾತನಾಡುತ್ತಾ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ದಾಟುತ್ತಿದ್ದ ಮಂದಿ ಗಮನ ಸೆಳೆದರು. ಅವರೆಲ್ಲಾ ಯಕ್ಷ ಪ್ರಿಯರು. ಕರಾವಳಿ ಮೂಲದವರು. ತಿಂಗಳ ಹಿಂದೆ ಕರಾವಳಿಯ ಮೇಳವೊಂದು ಮುಂಬಯಿಗೆ ಆಗಮಿಸಿ ಮಳೆಯಿಂದಾಗಿ ಪ್ರದರ್ಶನ ನೀರಸವಾದ ವಿಚಾರಗಳನ್ನು ಹಂಚಿಕೊಂಡರು. ನೆರೆಯ ಆತಂಕದ ಮಧ್ಯೆ ಯಕ್ಷಗಾನ ಸುದ್ದಿಗಳು ಮನಸ್ಸನ್ನು ಹಗುರ ಮಾಡಿತ್ತು.
ಮರುದಿವಸ ಆಗಸ್ಟ್ 30. ಹಿಂದಿನ ದಿನದ ಕಹಿಗಳನ್ನೆಲ್ಲಾ ಮುಂಬಯಿ ಮರೆತಿತ್ತು. ನೂರಾರು ಕಡೆ ಏರಿ ನಿಂತ ನೆರೆಯೂ ಇಳಿದು ನಿರಾಳವಾಗಿತ್ತು. ಬೇರೆ ಬೇರೆ ಕಂತುಗಳಲ್ಲಿ (ಕಾಕತಾಳೀಯ) ಹೊರಟ ಉಪ್ಪಿನಂಗಡಿಯ ತಂಡ, ಭಾಗವತ ಶಬರಾಯರು, ಉಳಿತ್ತಾಯರು ಮಾಟುಂಗದ ಕಾಂಚಿ ಮಠದಲ್ಲಿ ಒಟ್ಟಾದಾಗ ಎಲ್ಲರಿಗೂ ನೆರೆಯ ಮಹಾತ್ಮೆಯನ್ನು ಹೇಳುವ ತವಕ. “ಎಲ್ಲರೂ ಒಟ್ಟಾದಿರಲ್ಲಾ, ತಾಳಮದ್ದಳೆ ಮಾಡೋಣ” ಎಡನೀರು ಶ್ರೀಗಳ ಆದೇಶ. ಇದಕ್ಕೆ ಕಾರಣವೂ ಇದೆ.
ಕಾಸರಗೋಡಿನ ಎಡನೀರು ಶ್ರೀಮಠದಲ್ಲಿ ಯಕ್ಷ ಕಲಾರಾಧನೆಗೆ ಮೊದಲ ಮಣೆ. ವಿಶೇಷ ಸಮಾರಂಭಗಳಲ್ಲೆಲ್ಲಾ ತಾಳಮದ್ದಳೆ, ಆಟಗಳು ಸಂಪನ್ನವಾಗುತ್ತಿವೆ. ಮಹಾ ಉದ್ಧಾಮರೆಲ್ಲಾ ಕೂಟ, ಆಟಗಳಲ್ಲಿ ಮೆರೆದ, ಬೆಳೆದ ಸ್ಥಳವಿದು. ಎಡನೀರು ಶ್ರೀಗಳ ಚಾತುರ್ಮಾಸ್ಯದಲ್ಲಿ ಯಕ್ಷಗಾನದ ಸಪ್ತಾಹಗಳು ನಡೆಯುತ್ತವೆ. ಪ್ರಸಿದ್ಧ ಅರ್ಥಧಾರಿಗಳು ಭಾಗವಹಿಸುತ್ತಾರೆ. ಅರ್ಥಗಾರಿಕೆಯನ್ನು ಕೇಳುವುದಕ್ಕಾಗಿಯೇ ದೂರದೂರಿನಿಂದ ಆಗಮಿಸುವ ಪ್ರೇಕ್ಷಕ ಸಂದೋಹವಿದೆ.
ಮುಂಬಯಿಯ ಕಾಂಚಿ ಮಠದಲ್ಲಿ ಎಡನೀರು ಶ್ರೀಗಳ ಈ ಬಾರಿಯ ಚಾತುರ್ಮಾಸ್ಯದಲ್ಲಿ ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಸಂಪನ್ಮೂಲಗಳು ವಿರಳ. ಆಟ, ಕೂಟಕ್ಕೆ ಬೇಕಾದ ಕಲಾವಿದರನ್ನು, ಪರಿಕರಗಳನ್ನು ಹೊಂದಾಣಿಸುವುದು ನಗರದಲ್ಲಿ ತ್ರಾಸದಾಯಕ. ಆದರೂ ಮೂರ್ನಾಲ್ಕು ತಾಳಮದ್ದಳೆಗಳು ನಡೆದಿದ್ದುವು. ಮುಂಬಯಿ ಮೇಘಸ್ಪೋಟದ ಆ ಮಳೆಯಲ್ಲಿ ತೇಲಿಯೋ ಮುಳುಗಿಯೋ ಮಾಟುಂಗ ಸೇರಿದಾಗ ‘ತಾಳಮದ್ದಳೆ ಮಾಡೋಣ’ ಎನ್ನುವ ಶ್ರೀಗಳ ಅಪೇಕ್ಷೆಯು ನೆರೆ ಗುಂಗಿನಿಂದ ಯಕ್ಷಗುಂಗಿನೆಡೆಗೆ ವಾಲಿಸಿತು. ಹಿಮ್ಮೇಳ ಪರಿಕರಗಳು ಒಟ್ಟಾದುವು. ‘ವಾಲಿವಧೆ’ ಪ್ರಸಂಗದ ದೀಢೀರ್ ತಾಳಮದ್ದಳೆ.
ನಾರಾಯಣ ಶಬರಾಯರ ಭಾಗವತಿಕೆ, ಮದ್ದಳೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯರು. ಶೇಣಿ ಶ್ಯಾಮ ಭಟ್ (ವಾಲಿ), ರಾಜೇಂದ್ರ ಕಲ್ಲೂರಾಯ (ಸುಗ್ರೀವ), ಗೀತಾ ಆರ್.ಭಟ್ (ತಾರೆ) ಮತ್ತು ನಾರಾಯಣ (ಶ್ರೀರಾಮ) - ಹೀಗೆ ಜರುಗಿದ ತಾಳಮದ್ದಳೆಯು ಸುಂದರವಾಗಿ ಮೂಡಿತು. ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಚಿರಂಜೀವಿ ಶ್ಯಾಮ ಭಟ್ಟರು ಮುಂಬಯಿ ನಿವಾಸಿ. ಅವರ ಶಾರೀರ, ವಿಚಾರ ಪ್ರಸ್ತುತಿಗಳು ಡಾ.ಶೇಣಿಯವರನ್ನು ನೆನಪಿಸಿತು. ಸಜ್ಜನ ವ್ಯಕ್ತಿ. ಆಳ ಅನುಭವ. ಅವರೊಂದಿಗೆ ಮಾತನಾಡುವ, ಹರಟುವ ಬಹುಕಾಲದ ಆಶಯ ಫಲಿಸಿತು.
ಮುಂಬಯಿ ಹಲವು ಅನುಭವಗಳನ್ನು ಕಟ್ಟಿಕೊಟ್ಟಿತು. ತಾಳಮದ್ದಳೆಯು ಅನುಭವವು ನೋವನ್ನು ಮರೆಸಿತ್ತು. ನೆರೆಯ ನೀರಿನಲ್ಲಿ ಕೊಚ್ಚಿ ಹೋದ ಸುದ್ದಿಗಳು ಸಂಜೆಯಾಗುವಾಗ ವಾಹಿನಿಗಳಲ್ಲಿ ಬಿತ್ತರವಾಗುತ್ತದ್ದುವು. ಮನೆಕುಸಿದು ನಾಶ-ನಷ್ಟವಾದ ನ್ಯೂಸ್ಗಳು ಪತ್ರಿಕೆಯಲ್ಲಿ ಅಚ್ಚಾಗಿದ್ದುವು. ತಂಡದ ಎಲ್ಲರೂ ಸುದ್ದಿಯನ್ನು ಓದಿ ‘ಅಬ್ಬಾ, ಊರು ಸೇರಿದರೆ ಸಾಕು’ – ಎಂದು ಮಂಗಳ ಪದ್ಯಕ್ಕೆ ತಯಾರಾಗಿದ್ದರು!
ಊರಿನತ್ತ ಮುಖ ಮಾಡುವಾಗ ರೈಲಿನಲ್ಲಿ ತಾಳಮದ್ದಳೆಯು ಕಟ್ಟಿಕೊಟ್ಟ ಅರ್ಥಗಾರಿಕೆಯ ರೋಚಕತೆಯದ್ದೇ ಮಾತುಕತೆ. ಇದರಲ್ಲಿ ಮೇಘಸ್ಫೋಟದ ಸುದ್ದಿ ನುಸುಳಲೇ ಇಲ್ಲ! ನೆರೆಯಲ್ಲಿ ಮಾಡಿದ ಈಜುನಡಿಗೆಯ ಭಯ, ಆತಂಕವನ್ನು ತಾಳಮದ್ದಳೆಯು ದೂರಮಾಡಿತ್ತು. ಅದು ಯಕ್ಷಗಾನದ ತಾಕತ್ತು. ಅಂತೂ ಮನೆ ತಲುಪಿದಾಗ ಎಲ್ಲರ ಮನದಲ್ಲಿ ‘ವಾಲಿವಧೆ’ ಗೂಡುಕಟ್ಟಿತ್ತು. ಮುಂಬಯಿಯ ನೆರೆಯ ಅನುಭವ ಮಾಸಿತ್ತು.
ಪ್ರಜಾವಾಣಿಯ
ದಧಿಗಿಣತೋ ಅಂಕಣ / 15-9-2017
No comments:
Post a Comment