‘ಕಲಾವಿದ ವಿಧಿವಶರಾದಾಗ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಸಕ್ರಿಯರಾಗಿದ್ದಾಗಲೇ ಪ್ರಕಟವಾಗೇಕು’ ಆಪ್ತರೊಬ್ಬರ ಸಾತ್ವಿಕ ಸಿಟ್ಟಿನ ಕಾವು ಆರುವುದಕ್ಕಿಂತ ಮೊದಲು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ದೂರ ಸಾಗಿದರು. ಒಂದು ಸಮಾಧಾನ. ಚಿಟ್ಟಾಣಿಯವರ ರಂಗದ ಬೀಸು ಹೆಜ್ಜೆಗಳು ನೂರಾರು ಲೇಖನಗಳಿಗೆ ವಸ್ತುವಾಗಿದ್ದುವು. ಮಾತಿಗೆ ಆಹಾರವಾಗಿದ್ದರು. ಮಾತುಕತೆಗಳಿಗೆ ಹೂರಣಗಳನ್ನು ಒದಗಿಸಿದ್ದರು. ಮನೆ ಮಾತಿಗೂ ಗ್ರಾಸ ನೀಡಿದರು. ಒಂದು ತಿಟ್ಟನ್ನು ಪೂರ್ತಿಯಾಗಿ ಆವರಿಸಿದರು. ಮಾನ-ಸಂಮಾನಗಳಿಂದ ಅಲಂಕೃತರಾದರು.
2012.
ಚಿಟ್ಟಾಣಿಯವರಿಗೆ ‘ಪದ್ಮಶ್ರೀ’ಯ ಬಾಗಿನ. ಯಕ್ಷಗಾನವೇ ಖುಷಿಪಟ್ಟ ಕ್ಷಣ. ಮುಡಿಯಲ್ಲಿ ಪದ್ಮಶ್ರೀಯ ಗರಿಯು ಸ್ಥಾಪಿತವಾಗಿ ಗರಿಗೆದರಿ ಕುಣಿದಾಣಿತು. ಪ್ರಶಸ್ತಿಗೆ ಕೋಡು ಮೂಡಿತು. ಚಿಟ್ಟಾಣಿಯವರಿಗೆ ಕೋಡು ಮೂಡಲಿಲ್ಲ. ರಂಗದಲ್ಲವರು ಕುಣಿಯುತ್ತಾ ಹೋದರು. ಕುಣಿತಕ್ಕೇ ಆಯಾಸವಾಗಿರಬೇಕು. ಅಕ್ಟೋಬರ್ 3. ಅಭಿನಯಗಳಿಗೆ ವ್ಯಾಕರಣ ಬರೆದ ಚಿಟ್ಟಾಣಿಯವರು ಮೌನವಾದರು. ಕುಪ್ಪಳಿಸುತ್ತಿದ್ದ ಪದ್ಮಶ್ರೀ ನಗು ನಿಲ್ಲಿಸಿತು. ಇನ್ನದು ನಗದು. ಕಾರಣ, ಯಕ್ಷಗಾನಕ್ಕೊಂದೇ ಪದ್ಮಶ್ರೀ.
ಬಂಗಾರಮಕ್ಕಿಯ ಯಕ್ಷ ಉತ್ಸವದಲ್ಲಿ ‘ಶಂತನು’ ಕೊನೆಯ ಪಾತ್ರ. ಕರ್ಣಾವಸಾನದ ‘ಕರ್ಣ’ನ ಪಾತ್ರಾಭಿವ್ಯಕ್ತಿಯ ಆಸೆ ಈಡೇರುವುದರಲ್ಲಿತ್ತು. ಕಾಲವು ಆಸೆಯನ್ನು ಅದುಮಿತು. ಕುಟುಂಬಿಕರು, ಅಭಿಮಾನಿಗಳು ಶವಕ್ಕೆ ಕರ್ಣನ ಮುಖವರ್ಣಿಕೆಯನ್ನು ಬರೆದು ಆಸೆಯನ್ನು ಪೂರೈಸಿದರು! ಇಂತಹ ಕ್ಷಣಗಳು ಕಲಾವಿದನ ಬದುಕಿನಲ್ಲಿ ಅಪರೂಪ. ಒಂದೆರಡು ದಿವಸದ ಆಸ್ಪತ್ರೆ ವಾಸದ ಹೊರತಾಗಿ ಚಿಟ್ಟಾಣಿಯವರು ಬದುಕನ್ನು ಅನುಭವಿಸಿದರು. ಕಲಾವಿದನಾಗಿ ಪಾತ್ರಗಳನ್ನು ಅಭಿನಯಿಸಿ, ಅನುಭವಿಸಿದರು. ಪ್ರೇಕ್ಷಕರಲ್ಲೂ ಅನುಭವದ ಭಾವವನ್ನು ಊರಿದರು.
ಕಲಾವಿದನೊಬ್ಬ ಮೇಳದಲ್ಲಿ ವೇಷ ಮಾಡುತ್ತಾ ವರುಷಗಳನ್ನು ಪೂರೈಸುವುದು ಒಂದು. ಆತ ವಿಮರ್ಶೆಗಳಿಂದ ದೂರ. ಅಲ್ಲ, ವಿಮರ್ಶೆಯೆಂದರೆ ಗೊತ್ತಿರುವುದೂ ಕಡಿಮೆಯೇ. ಪಾತ್ರಗಳ ಹಿಂದು-ಮುಂದಿನ ವಿಚಾರಗಳತ್ತಲೂ ಆಸಕ್ತರಲ್ಲ. ತನ್ನ ಬಯೋಡಾಟದಲ್ಲಿ ಇಂತಿಷ್ಟು ವರುಷ ತಿರುಗಾಟ ಮಾಡಿದ್ದೇನೆ ಎಂದು ಬರೆಯಲಷ್ಟೇ ಅವರ ರಂಗಸುಖ. ಇನ್ನೊಂದು ವರ್ಗ ಹಾಗಲ್ಲ. ಮಾಡಿದ ಪಾತ್ರಗಳಲ್ಲಿ ಸ್ವಂತಿಕೆಯ ಛಾಪನ್ನು ಊರಿ, ಅದನ್ನು ಜನಮಾನಸದಲ್ಲಿ ಇಳಿಬಿಡುತ್ತಾರೆ.
ಚಿಟ್ಟಾಣಿಯವರು ಆರು ದಶಕಕ್ಕೂ ಮಿಕ್ಕಿ ವೇಷ ಮಾಡಿದರು. ವಿಮರ್ಶೆಯನ್ನು ಸ್ವೀಕರಿಸಿದರು. ತಾವು ಬೆಳೆದರು. ರಂಗವನ್ನು ಬೆಳೆಸಿದರು. ರಂಗಕ್ಕೆ ಮಾನ ತಂದರು. ಪ್ರೇಕ್ಷಕರನ್ನು ಸೃಷ್ಟಿಸಿದರು. ಟೀಕೆಗಳಿಗೆ ಉತ್ತರ ಕೊಡುತ್ತಾ ಸರ್ವಶ್ರೇಷ್ಠರಾದರು.
ಇವರು ಹೊಸಾಕುಳಿ ರಾಮಚಂದ್ರ ಹೆಗಡೆ. ಉತ್ತರ ಕನ್ನಡದ ಹೊಸಾಕುಳಿಯ ಪಂಚಗ್ರಾಮದಲ್ಲಿ ‘ಚಿಟ್ಟಾಣಿ’ಯೂ ಒಂದು. ಇದು ಹದಿನೆಂಟು ಮನೆಗಳ ಕೇರಿ. ಹೆಸರಿನೊಂದಿಗೆ ಊರು ಹೊಸೆಯಿತು. ಬಡತನದ ಕುಟುಂಬ. ಹೊಟ್ಟೆ ತಂಪಿಗೆ ಕೃಷಿ. ವಿಶ್ರಾಂತಿಯಿಲ್ಲದ ಶ್ರಮ. ಮನೆಗಳಲ್ಲಿ ಯಕ್ಷಗಾನ ಹೊರತು ಬೇರೆ ಸಂಭಾಷಣೆಗಳಿದ್ದಿರಲಿಲ್ಲ. ಇಂತಹ ವಾತಾವರಣದಲ್ಲಿ ಬೆಳೆದ ಹೆಗಡೆಯವರಿಗೆ ಶಾಲಾಭ್ಯಾಸದತ್ತ ಒಲವು ಕಡಿಮೆ. ಬಣ್ಣ ಹಚ್ಚುವುದು ಹಿರಿಯರಿಗೆ ಇಷ್ಟವಿಲ್ಲ. ದೈಹಿಕ, ಮಾನಸಿಕ ಪೆಟ್ಟುಗಳನ್ನು ತಿನ್ನುತ್ತಾ ಬಣ್ಣಗಳೇ ಹೊಳಪಾದುವು!
ಮೂಡ್ಕಣಿ ಮೇಳದ ಆಟ ಊರಿಗೆ ಬಂದಿತ್ತು. ಆಟದ ಮೊದಲ ಪ್ರೇಕ್ಷಕ. ಜತೆಗೆ ತಾನು ನೋಡಿದ ಮೊದಲ ಆಟ. ಗೇರು ಗುಡ್ಡ, ಮನೆಯ ಚಾವಡಿ, ಅಂಗಳವೆಲ್ಲಾ ರಂಗಸ್ಥಳ ಮಾಡಿದ ಬಾಲಕ ಚಿಟ್ಟಾಣಿ ಮನದೊಳಗೆ ಮೂಡ್ಕಣಿ ಮೇಳ ರಂಗಸ್ಥಳ ಊರಿತು. ಕೊಂಡದಕುಳಿ ರಾಮ ಹೆಗಡೆಯವರು ಮೇಳದ ಯಜಮಾನ. ಅವರ ‘ವಾಲಿ, ರಾವಣ’ ಪಾತ್ರಗಳು ಆ ಕಾಲಘಟ್ಟದಲ್ಲಿ ಮಾಸ್ಟರ್ಪೀಸ್. ಅಂದು ಕೊಂಡದಕುಳಿಯವರ ‘ವಾಲಿ’ಯ ಪಾತ್ರ. ಆಟ ನೋಡುತ್ತಿದ್ದ ಬಾಲಕ ಚಿಟ್ಟಾಣಿಯೂ ವಾಲಿಯಾದ! ‘ಕಲಾವಿದನಾಗಬೇಕು’ ಎನ್ನುವ ಆಸೆಗೆ ಬೀಜಾಂಕುರ.
ನೋಡಿದ ಎರಡನೇ ಆಟ ‘ಕಿಮ್ಮೀರ ವಿಜಯ’. ಕರ್ಕಿ ಮೇಳದ ಪರಮಯ್ಯ ಹಾಸ್ಯಗಾರರ ‘ಕಿಮ್ಮೀರ’ನ ಬಣ್ಣಗಾರಿಕೆ, ಅಭಿನಯಗಳಿಂದ ಆಸಕ್ತ. ಮುಂದೆ ಕೆರೆಮನೆ ಮೇಳದ ಶಿವರಾಮ ಹೆಗಡೆಯವರ ‘ಕೌರವ’ನ ಪಾತ್ರ. ಈ ಮೂರು ಮೇಳಗಳು, ನೋಡಿದ ಪಾತ್ರಗಳು, ಅಭಿವ್ಯಕ್ತಿಗಳು ಬಾಲಕ ಚಿಟ್ಟಾಣಿಯೊಳಗೆ ಆಟದ ಟೆಂಟನ್ನು ಊರುತ್ತಾ ಬಂದುವು. ಟೆಂಟ್ ಮೇಲೇಳುತ್ತಾ ಬಂದಂತೆ ವಿವಿಧ ಮೇಳಗಳಲ್ಲಿ ಕಲಾವಿದನಾಗಿ ಬೆಳೆದರು. ಹಿರಿಯರಿಂದ ಬೆನ್ನು ತಟ್ಟಿಸಿಕೊಂಡರು. ಅವರ ವೇಷಗಳನ್ನು ನೋಡುತ್ತಾ, ತಾನು ಅದರಂತೆ ಆಗದೆ ಸ್ವಂತಿಕೆಯ ಹೆಜ್ಜೆಯೂರಿದರು. ನೋಡಿ, ಸಾಲು ಸಾಲು ಪಾತ್ರಗಳು ಯಕ್ಷಲೋಕದ ಅಪ್ರತಿಮ ಶಿಲ್ಪಗಳಾಗಿವೆ. ‘ಭಸ್ಮಾಸುರ, ಕೀಚಕ, ಕಾರ್ತವೀರ್ಯ, ದುಷ್ಟಬುದ್ಧಿ, ಭದ್ರಸೇನ, ಸುಂದರ ರಾವಣ, ಕೌರವ’ ಪಾತ್ರಗಳು.
ಮೂಡ್ಕಣಿ ಮೇಳ, ಗುಂಡಬಾಳ, ಬಂಗಾರಮಕ್ಕಿ ಸಾಲಿಗ್ರಾಮ, ಅಮೃತೇಶ್ವರಿ, ಶಿರಸಿ, ಕೊಳಗಿಬೀಸ್ ಮೇಳ, ಪೆರ್ಡೂರು, ಬಚ್ಚಗಾರು... ಹೀಗೆ ವಿವಿಧ ಮೇಳಗಳನ್ನೇ ಪಾತ್ರಾಭಿವ್ಯಕ್ತಿಯಿಂದ ಆಳುತ್ತಿದ್ದರು. “ನಾನು ಹುಟ್ಟಿದ್ದು 18 ಸೆಪ್ಟೆಂಬರ್ 1935. ಹುಟ್ಟಿದಾಗಲೇ ಅಸ್ವಸ್ಥ. ಕೃತ್ತಿಕಾ ನಕ್ಷತ್ರದ ದೋಷ! ಹುಟ್ಟಿದಾಗ ಕಣಿರೋಗ. ತಲೆ ಸೀಳು ಬಿಡುವ ರೋಗ. ಅದನ್ನು ಸುಟ್ಟು, ಬರೆಹಾಕಿದಾಗ ಗುಣಮುಖ. ಹಾಗೆ ಹುಟ್ಟಿದಾಗಲೇ ನನ್ನ ತಲೆಗೆ ಅಗ್ನಿಸಂಸ್ಕಾರವಾಯಿತು! ಅದಕ್ಕೆ ಸಾಕ್ಷಿಯಾಗಿ ಒಂಭತ್ತು ಕಲೆಗಳು ತಲೆಯಲ್ಲಿವೆ. ಈ ಅರ್ಥದಲ್ಲಿ ನಾನು ಹುಟ್ಟು ಕಲಾಧರ!” ಆತ್ಮಕಥನದಲ್ಲಿ ಚಿಟ್ಟಾಣಿಯವರ ಸ್ವ-ಗತವಿದು. ಮುಂದೆ ಕಾಳಿದಾಸ ಪ್ರಸಂಗದ ‘ಕಲಾಧರ’ನ ಪಾತ್ರವು ರಂಗಬದುಕಿನ ಟರ್ನಿಂಗ್.
ಪಾತ್ರವೊಂದು ಪ್ರವೇಶ ಮಾಡಿ ಹತ್ತೋ ಹದಿನೈದು ನಿಮಿಷದ ಬಳಿಕ ರಂಗದಲ್ಲಿ ಸ್ಥಾಪಿತವಾಗುತ್ತದೆ. ಅದು ಕಲಾವಿದರ ವೈಯಕ್ತಿಕ ಖುಷಿ, ದುಃಖ, ವ್ಯವಹಾರ, ಒತ್ತಡ... ಎಲ್ಲವನ್ನು ಮರೆಯಲು ಇಷ್ಟು ಹೊತ್ತು ಬೇಕು. ಚಿಟ್ಟಾಣಿಯವರ ಪಾತ್ರವು ರಂಗ ಪ್ರವೇಶ ಮಾಡುವಾಗಲೇ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿತ್ತು. ಅದು ಯಕ್ಷಗಾನವಾಗುತ್ತಿತ್ತು. ಅರಳುವ ನಗು, ರಂಗಚಲನೆ, ಮುಖದ ಕಂಪನ, ಕಣ್ಣೋಟ, ಭಾವದ ಭಾಷೆ, ಹುಬ್ಬುಗಳ ಚಲನೆ, ದೀರ್ಘವಲ್ಲದ ಅರ್ಥಗಾರಿಕೆ.. ಹೀಗೆ ಒಂದು ಪುರಾಣ ಶಿಲ್ಪವೇ ರಂಗಕ್ಕಿಳಿಯುತ್ತಿದ್ದುವು. ಅದು ಚಿಟ್ಟಾಣಿಯವರು ಸ್ಥಾಪಿಸಿದ ರಂಗ ತಾಕತ್ತು.
“ಯಕ್ಷಗಾನ ನೃತ್ಯ ಪ್ರಧಾನವಾದದ್ದು. ಅದನ್ನು ಉಳಿದ ಅಂಗಗಳು ನುಂಗಿ ಹಾಕಬಾರದು. ಇತರ ಯಾವ ಅಂಗದ ಮೇಲುಗೈಯನ್ನು ಅದು ಸಹಿಸಲಾರದು. ಹಾಗೆಯೇ ಯಾವ ಅಂಶ ಲೋಪವಾದರೂ ಅದರ ಮೂಲರೂಪ ಉಳಿಯದು. ಹಾಗೆ ಆದರೆ ಅದೊಂದು ಏನೇನೋ ಹೊಸ ಪ್ರಯೋಗ ಆಗಬಹುದು,” ಒಂದೆಡೆ ಚಿಟ್ಟಾಣಿಯವರು ಹೇಳಿದ ಮಾತನ್ನು ಬದುಕಿನಲ್ಲಿ ಅನುಷ್ಠಾನಿಸಿದರು. ನೃತ್ಯ, ಅಭಿನಯಗಳು ಪ್ರಸಂಸೆಗೆ ಒಳಗಾದಷ್ಟು ಟೀಕೆಗೂ ತುತ್ತಾಗಿತ್ತು. ಅವೆಲ್ಲದಕ್ಕೂ ಭಾವ ಭಾಷೆಯಲ್ಲೇ ಉತ್ತರ ನೀಡಿದ ಚಿಟ್ಟಾಣಿಯವರು ಒಂದರ್ಥದಲ್ಲಿ ರಂಗದ ಚೌಕಟ್ಟನ್ನು ಮೀರಿ ಬೆಳೆದರು. ಆದರದು ಮೀರಿದ ಚೌಕಟ್ಟಾಗಿರಲಿಲ್ಲ ಎನ್ನುವುದು ಅಷ್ಟೇ ಸತ್ಯ.
ಇವರ ಪಾತ್ರಗಳನ್ನು ಅನುಕರಿಸಿದವರೆಷ್ಟೋ ಮಂದಿ. ಒಂದು ಪಾತ್ರವನ್ನು ಇತರ ಕಲಾವಿದರು ಅನುಕರಣೆ ಮಾಡುವಷ್ಟು ಒಬ್ಬ ಕಲಾವಿದ ಸ್ಥಾಪಿತವಾಗಿದ್ದಾನೆ ಅಂದರೆ ಅದು ಆತನ ಸಿದ್ಧಿ, ಸಾಧನೆ. ಆತ್ಮಕಥನದಲ್ಲಿ ಅವರೇ ಹೇಳುತ್ತಾರೆ. “ನನ್ನನ್ನೇ ಅನುಕರಿಸಲು ಹೋಗಿ ರಂಗದಲ್ಲಿ ನಾಲ್ಕು ಕಾಲವೂ ಉಳಿಯದೇ ಹೋದವರಿದ್ದಾರೆ! ಕೇವಲ ಅನುಕರಣೆ ಉಳಿಯಲಾರದು. ಉಳಿದರೂ ಉಳಿದದ್ದು ಜನಮನದಲ್ಲಿ ನೆಲೆಗೊಳ್ಳಲಾರದು.” ವಿಮರ್ಶೆಗೆ ತೆರೆದುಕೊಳ್ಳುವ ಅಪರೂಪದ ವ್ಯಕ್ತಿತ್ವ ಚಿಟ್ಟಾಣಿಯವರಲ್ಲಿತ್ತು. ಇಂತಹ ಗುಣಗಳು ಶಂಭು ಹೆಗಡೆ, ಮಹಾಬಲ ಹೆಗಡೆ ಮೊದಲಾದ ಹಿರಿಯರಲ್ಲಿತ್ತು.
ಚಿಟ್ಟಾಣಿಯವರಿಗೆ ಅಭಿಮಾನಿಗಳು ವ್ಯಕ್ತಿಗಳಲ್ಲ, ಇಡೀ ಒಂದು ತಿಟ್ಟು ಅವರ ಅಭಿಮಾನಿ! ಕಾರಣ, ಯಕ್ಷಲೋಕದಲ್ಲಿ ಊರಿದ ಹೊಸತೊಂದು - ಹೊಸತೆಂದು ಕಾಣದ - ಹೆಜ್ಜೆ. ಜವ್ವನದ ಬೀಸು ಪಾತ್ರಗಳನ್ನು ಯಾವ ರೀತಿ ಸ್ವೀಕರಿಸಿದ್ದರೋ, ಇಳಿ ವಯಸ್ಸಿನಲ್ಲೂ ಪಾತ್ರಗಳನ್ನು ಅದೇ ಭಾವದಿಂದ ಕಾಣುವ ‘ಶಾಶ್ವತ ಅಭಿಮಾನಿ ವರ್ಗ’ವನ್ನು ಪಡೆಯುವುದು ಚಿಟ್ಟಾಣಿಯವರಿಗೆ ಮಾತ್ರ ಸಾಧ್ಯವಾಗಿತ್ತು. ಅಭಿನಯಕ್ಕೆ ವ್ಯಾಕರಣವನ್ನು ಬರೆದು, ಆ ವ್ಯಾಕರಣವನ್ನು ಅಭಿವ್ಯಕ್ತಿ ಮೂಲಕ ಪ್ರೇಕ್ಷಕರಿಗೂ ನೀಡುತ್ತಾ ಬಂದಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗಿದು ಅಕ್ಷರ ನಮನ.
(ಚಿತ್ರ : ಪ್ರಕಾಶ್ ಹೆಗಡೆ)
ಪ್ರಜಾವಾಣಿಯ ‘ದಧಿಗಿಣತೋ’ ಅಂಕಣ / 6-10-2017
No comments:
Post a Comment