(ಸಾಂದರ್ಭಿಕ ಚಿತ್ರ)
ಕಾಲು ಶತಮಾನ ಪೂರೈಸಿದ ಸಂಸ್ಥೆಯೊಂದರ ಮಾಹಿತಿ ಕಲೆಹಾಕುತ್ತಿದ್ದೆ. ಬಾಯ್ಮಾತಿನ ವಿಚಾರಗಳ ಹೊರತಾಗಿ ಲಿಖಿತ ದಾಖಲೆಯಿದ್ದಿರಲಿಲ್ಲ. ಅನುಭವಿಗಳ ಮಾತುಗಳನ್ನು ಲಿಪಿಗಿಳಿಸಲು ಕುಳಿತಾಗ ಮಾಹಿತಿಗಳು ಖಚಿತತೆಗಾಗಿ ಗುದ್ದಾಡುತ್ತಿದ್ದವು! ಅಷ್ಟಿಷ್ಟು ಅಕ್ಷರಗಳು ಪೋಣಿತವಾದುವು. ಇಪ್ಪತ್ತೈದರ ಸಾಧನೆಯು ಇಪ್ಪತ್ತೈದು ಪುಟಗಳಲ್ಲಿ ತುಂಬಬೇಕಾಗಿತ್ತು. ಅದು ಎರಡು ಪುಟಗಳಲ್ಲಿ ತುಂಬಿ ವಿಷಾದದ ನಗೆ ಬೀರಿತು!
ಸಂಸ್ಥೆಯೊಂದರ ವರದಿ, ಕಾರ್ಯಹೂರಣಗಳ ದಾಖಲಾತಿ, ಸ್ಮರಣ ಸಂಚಿಕೆಗಳು ವರ್ತಮಾನದಲ್ಲಿ ಪುಟ ತುಂಬುವ ಸರಕಾದರೂ ಭವಿಷ್ಯದಲ್ಲಿ ಅದೊಂದು ಕಾಲದ ಕಥನ. ಸುಳ್ಯ ತಾಲೂಕಿನ ಕಳಂಜಕ್ಕೆ ಭೇಟಿ ನೀಡಿದ್ದೆ. 1953ರಲ್ಲಿ ಸ್ಥಾಪನೆಯಾದ ಯುವಕ ಕೃಷಿಕರ ಕೂಟವು ಕೃಷಿವಲಯದಲ್ಲಿ ಸಂಚಲನ ಉಂಟು ಮಾಡಿತ್ತು. ಕೃಷಿಕರ ದನಿಯಾಗಿ ಕೆಲಸ ಮಾಡಿತ್ತು. ಹಿರಿಯ ಕೃಷಿಕ ಕೋಟೆ ರಾಧಾಕೃಷ್ಣರು ಕೂಟದ ಸಕ್ರಿಯತೆಗೆ ಸಾಕ್ಷಿಯಾದರು. ಸಂಘದಲ್ಲಿದ್ದ ಹಳೆಯ ಕಡತಗಳು ಒಂದು ಕಾಲಘಟ್ಟದ ಕೂಟದ ಬದುಕಿಗೆ ಉಸಿರಾಗಿ ಸಿಕ್ಕಿದುವು.
ಯಕ್ಷಗಾನದ ವಿಚಾರಕ್ಕೆ ಬಂದರೆ ಹವ್ಯಾಸಿ ಕ್ಷೇತ್ರದ ಗಾತ್ರ ವಿಶಾಲವಾದುದು. ಇಂದು ಯಕ್ಷಗಾನವು ಗಟ್ಟಿ ದನಿಯಲ್ಲಿ ‘ತಾನು ಗಂಡು ಕಲೆ’ ಎಂದು ಕರೆಸಿಕೊಂಡ ಹಿನ್ನೆಲೆಯಲ್ಲಿ ಹವ್ಯಾಸಿ ಸಂಘಗಳ ಕೊಡುಗೆ ಗಣನೀಯ, ಗಮನೀಯ. ಸಂಘವೊಂದು ಹಳ್ಳಿಯ ಸಾಂಸ್ಕøತಿಕ ಬದುಕಿನ ನರಕೇಂದ್ರವಾಗಿದ್ದುವು. ದಶಮಾನ, ರಜತ, ಸುವರ್ಣ ಸಂಭ್ರಮಗಳನ್ನು ಸಂಭ್ರಮಿಸಿದ ಸಂಘಗಳಿವೆ. ಈ ಮಧ್ಯೆ ರಶೀದಿ ಪುಸ್ತಕಗಳ ಹೊರತಾಗಿ ಬೇರೆ ದಾಖಲೆಗಳಿಲ್ಲದ ಸಂಘಗಳು ಎಷ್ಟು ಬೇಕು? ಸಂಘದ ಚಟುವಟಿಕೆಗಳ ದಾಖಲಾತಿ ತೀರಾ ಕಡಿಮೆ. ಬದಲಾದ ತಂತ್ರಜ್ಞಾನದಿಂದ ಈಚೆಗೆ ದಾಖಲಾತಿಗಳು ನಡೆಯುತ್ತಿವೆ.
ಒಂದೂವರೆ ದಶಕಕದೀಚೆಗೆ ಕಲಾವಿದರ ಅಭಿನಂದನಾ ಗ್ರಂಥಗಳು, ಸಂಸ್ಮರಣ ಕೃತಿಗಳು; ಸಂಘಟನೆಗಳ ನೆನಪು ಸಂಚಿಕೆಗಳು ಹೊರಬರುತ್ತಿವೆ. ಕಲಾವಿದರ ಸೇವೆ ದಾಖಲಾಗುತ್ತಿರುವುದು ಶ್ಲಾಘ್ಯ. ರಂಗಬದುಕಿನ ಕಾಣದ ಸತ್ಯಗಳು, ನೇಪಥ್ಯದ ಕಷ್ಟಗಳು, ಕೌಟುಂಬಿಕ ಪರಿಚಯಗಳತ್ತ ಗ್ರಂಥಗಳು ಬೆರಳು ತೋರುತ್ತವೆ. ಇವೆಲ್ಲ ವರ್ತಮಾನದಲ್ಲಿ ಮಹತ್ವ ಪಡೆಯದಿದ್ದರೂ ಭವಿಷ್ಯಕ್ಕೊಂದು ಆಕರ, ಇತಿಹಾಸ. ಒಂದು ಕಾಲಘಟ್ಟದ ಸಾಂಸ್ಕøತಿಕ ಬದುಕಿನ ದರ್ಶನ. ಕೃತಿಯ ಮೂಲಕ ಇತರ ಸಹ ಕಲಾವಿದರ ಅಭಿವ್ಯಕ್ತಿಗಳ ಚಿತ್ರಣಗಳೂ ಸಿಗುತ್ತವೆ.
ಒರ್ವ ಕಲಾವಿದನಿಗೆ ಅದ್ದೂರಿ ಸಂಮಾನ ಏರ್ಪಡುವಾಗ, ಅಭಿನಂದನ ಗ್ರಂಥದ ತಯಾರಿಗೂ ಬೀಜಾಂಕುರವಾಗುತ್ತದೆ. ಕೆಲವೆಡೆ ಬದ್ಧತೆಯಿಂದ ಕಾರ್ಯ ನಡೆದರೆ, ಬಹುತೇಕ ಕಡೆಗಳಲ್ಲಿ ಕಾಟಾಚಾರವಷ್ಟೇ. ಅದಕ್ಕೊಂದು ಸಮಿತಿ, ಜತೆಗೆ ಸಂಪಾದಕ ಮಂಡಳಿಯ ರೂಪೀಕರಣ. ಪುಸ್ತಕ ತಯಾರಿ ಆಗುತ್ತಿದ್ದಂತೆ ಕೊನೆಗೆ ಏಕಾಂಗಿಯಾಗುವುದು ಸಂಪಾದಕ ಮಾತ್ರ! ಪ್ರಥಮ ಸಭೆಯಲ್ಲಿ ಗ್ರಂಥದ ರೂಪುರೇಷೆಯು ವೈವಿಧ್ಯವಾಗಿ ಕಾಗದದಲ್ಲಿ ದಾಖಲಾಗುತ್ತವೆ. ದಿನ ಸರಿದಂತೆ ಆ ದಾಖಲೆಯ ಮಸಿ ಮಾಸುತ್ತಾ ಬರುತ್ತದೆ!
ಅಭಿನಂದನಾ ಗ್ರಂಥ ಅಂದಾಗ ಒಂದಷ್ಟು ಮಂದಿಯ ಲೇಖನಗಳನ್ನು ಆಹ್ವಾನಿಸಿ ಪ್ರಕಟಿಸುವುದು ಒಂದು. ಯಾರ ಕುರಿತಾಗಿ ಗ್ರಂಥ ಸಿದ್ಧ ಪಡಿಸುತ್ತೇವೆಯೋ ಆ ಕಲಾವಿದರದ್ದೇ ಅತ್ಮಕಥನದ ಪ್ರಸ್ತುತಿ ಇನ್ನೊಂದು. ಎರಡನೇ ವರ್ಗದ ಗ್ರಂಥದಲ್ಲಿ ಪುನರುಕ್ತಿಗಳಿರುವುದಿಲ್ಲ. ಕಲಾವಿದರೇ ಸ್ವಗತ ಹೇಳುವಂತೆ ಅತ್ಮಕಥನವನ್ನು ನಿರೂಪಿಸುವುದು ಆಪ್ತವಾಗುತ್ತದೆ, ಓದಿಸುತ್ತದೆ. ಈ ಅನುಭವಗಳನ್ನು ದಾಖಲಿಸುವುದೂ ಸಂಪಾದಕ ಯಾ ನಿರೂಪಕನ ಜಾಣ್ಮೆ. ಪ್ರಶ್ನೆಗಳನ್ನು ಕೆದಕುತ್ತಾ ಮಾಹಿತಿಗಳನ್ನು ಪೋಣಿಸಬೇಕಾಗುತ್ತದೆ.
ಕಲಾವಿದನ ಅಭಿಮಾನಿಗಳು, ಪರಿಚಿತರು, ಆಪ್ತರಿಂದ ಲೇಖನವನ್ನು ಆಹ್ವಾನಿಸಿ ಪ್ರಕಟಿಸುವ ಗ್ರಂಥಗಳು ಸಿಂಹಪಾಲು. ಪ್ರಕಟವಾಗುವ ಹೊತ್ತಿಗೆ ಸಂಪಾದಕನ ರಕ್ತದೊತ್ತಡ ಏರಿರುತ್ತದೆ! ಮನಸ್ಸೂ ಕೆಟ್ಟಿರುತ್ತದೆ! ಪ್ರತಿ ಲೇಖನದಲ್ಲೂ ಪುನರುಕ್ತಿಗಳು. ಒಂದೆರಡು ಲೇಖನವನ್ನು ಓದಿದರೆ ಸಾಕಾಗುತ್ತದೆ. ಮಿಕ್ಕೆಲ್ಲಾ ಬರಹಗಳ ಜಾಡು ಏಕರೀತಿ. “ನನ್ನ ಲೇಖನದಲ್ಲಿ ಬಿಂದು, ವಿಸರ್ಗವನ್ನು ತೆಗೆಯದೆ ಪ್ರಕಟಿಸಬೇಕು,” ಎಂದು ತಾಕೀತು ಮಾಡುವ ಲೇಖಕರೂ ಇದ್ದಾರೆ! ತಪ್ಪನ್ನು ಸರಿ ಮಾಡಿದರೂ ಗೊಣಗುವವರು ಇದ್ದಾರೆ! ‘ನನ್ನ ಲೇಖನವನ್ನು ತಿದ್ದಲು ಅವರಿಗೇನು ಅರ್ಹತೆ” ಎಂದು ತಮ್ಮ ಬೆನ್ನನ್ನು ತಟ್ಟುವ ಅಕ್ಷರಪ್ರೇಮಿಗಳೂ ಇಲ್ಲದಿಲ್ಲ!
ಒಬ್ಬೊಬ್ಬ ಲೇಖಕರಲ್ಲೂ ಕಲಾವಿದನ ಬದುಕಿನ ಒಂದೊಂದು ಕೋನವನ್ನು ಗುರುತಿಸಿ ನಿರ್ದಿಷ್ಟವಾಗಿ ಬರೆಯಲು ಕೋರಿಕೊಳ್ಳಬಹುದು. ಲೇಖಕರನ್ನು ಆಯ್ಕೆ ಮಾಡುವಾಗಲೂ ಮಾನದಂಡಗಳಿದ್ದರೆ ವಿಷಯಕ್ಕೆ ನ್ಯಾಯ ಸಲ್ಲಿಸಬಹುದೇನೋ. ‘ನೀವೊಂದು ಬರೆಯಿರಿ’ ಎಂದು ದಾಕ್ಷಿಣ್ಯಕ್ಕೆ ಒಳಗಾಗುವ ಸೌಜನ್ಯದಿಂದ ಗ್ರಂಥ ಹೂರಣದ ಅಂದಗೆಡುತ್ತದೆ. ಬಿಡುಗಡೆಯ ಬಳಿಕವೂ ಗ್ರಂಥವನ್ನು ತೆರೆಯುವ, ಓದುವತ್ತ ಓದುಗರನ್ನು ಸೆಳೆಯುವುದು ಮುಖ್ಯವಾಗುತ್ತದೆ. ‘ಸಮಾರಂಭದ ಸಮಾರೋಪವಾಗುವಾಗ ಗ್ರಂಥವೂ ಸಮಾರೋಪವಾಗುತ್ತದೆ,” ಎನ್ನುವ ವಾಸ್ತವದ ಮಾತನ್ನು ದೂರ ಮಾಡಬೇಕಾಗಿದೆ.
ಬರೆಯಲು ಅರ್ಹತೆ, ಪಕ್ವತೆ ಇದೆಯೋ ಇಲ್ಲವೋ ಎಂದು ಯೋಚಿಸದೆ ಲೇಖನವನ್ನು ಕೋರುವುದುಂಟು. ಹೀಗೆ ಕೋರಿದಾಗ ಆ ಲೇಖಕ ಅನ್ಯಾನ್ಯ ಸ್ಥಾಪಿತ ಮನಃಸ್ಥಿತಿಗಳಿಂದಾಗಿ ಲೇಖನ ಬರೆಯುವಲ್ಲಿ ತಡಮಾಡಿದಾಗ ಸಂಪಾದಕನೇ ಲೇಖಕರ ಮನೆಗೆ ಲಗ್ಗೆ ಹಾಕುವ ಸ್ಥಿತಿಯೂ ಬಂದುದಿದೆ! ಅಭಿನಂದನ ಕೃತಿಯು ಎಷ್ಟು ಪುಟ ತುಂಬಿಕೊಂಡಿದೆ ಮುಖ್ಯವಲ್ಲ. ತುಂಬಿದ ಪುಟದಲ್ಲಿ ಸುಪುಷ್ಟವಾದ ಹೂರಣ ಎಷ್ಟಿದೆ ಎನ್ನುವುದು ಮುಖ್ಯ. ಯಾಕೆಂದರೆ ಇಂದು ತಯಾರಾಗುವ ದಾಖಲೆಯು ಭವಿಷ್ಯದಲ್ಲಿ ಇತಿಹಾಸವಾಗುತ್ತದೆ.
ಮೂರ್ನಾಲ್ಕು ದಶಕದ ಹಿಂದೆ ಪ್ರಕಟವಾದ ಕೆಲವೊಂದು ಗ್ರಂಥಗಳನ್ನು ಮೆಲುಕು ಹಾಕುತ್ತಿದ್ದೆ. ಯಾರ ಕುರಿತಾದ ಗ್ರಂಥ ರಚನೆಯಾಗಿದೆಯೋ ಅವರ ಪರಿಚಯಾತ್ಮಕ ಬರಹಗಳು ಹತ್ತೊ ಹದಿನೈದು ಪುಟಗಳಲ್ಲಿ ವ್ಯಾಪಿಸಿರುತ್ತದೆ. ಮಿಕ್ಕೆಲ್ಲಾ ಪುಟಗಳಲ್ಲಿ ಯಕ್ಷಗಾನದ ವಿವಿಧ ಆಯಾಮಗಳ ಸರಕುಗಳು. ಅವೂ ಕೂಡಾ ಒಂದು ಕಾಲಘಟ್ಟದ ಯೋಚನೆ, ಮನಃಸ್ಥಿತಿಯ ದಾಖಲೆಗಳು. ಅಕಾಡೆಮಿಕ್ ಚಿಂತನೆಗಳಿರುವ ಬರಹಗಳು ನಿತ್ಯ ಜೀವಂತ. ಉದಾ: ಈಚೆಗೆ ಕೊಕ್ಕಡ ಈಶ್ವರ ಭಟ್ಟರ ಕುರಿತಾದ ‘ಈಶಾನ’ ಗ್ರಂಥ. ಈಶ್ವರ ಭಟ್ಟರ ಸ್ತ್ರೀಪಾತ್ರಧಾರಿಯಾಗಿ ಪ್ರಸಿದ್ಧರು. ಆ ಕೃತಿಯಲ್ಲಿ ವಿವಿಧ ಸ್ತ್ರೀಪಾತ್ರಗಳ ನಿರ್ವಹಣೆ, ಪಾತ್ರ ವಿನ್ಯಾಸಗಳ ಸಮಗ್ರ ನಿರೂಪಣೆಯಿದೆ. ಇಂತಹ ಗುಣಮಟ್ಟದ ಮಾಹಿತಿಗಳಿಂದ ಗ್ರಂಥವು ಭಾರವಾಗಬೇಕು. ಇಲ್ಲದಿದ್ದರೆ ಆರ್ಥಿಕವಾಗಿ ‘ಭಾರ’ವೇ ಸರಿ!
ಇಂದು ಸಂಮಾನ, ಪ್ರಶಸ್ತಿಗಳನ್ನು ಕಲಾವಿದರಿಗೆ ಪ್ರದಾನಿಸಲಾಗುತ್ತದೆ. ಸಂಮಾನದ ಜತೆಗೆ ಧನವೂ ಸೇರಿದರೆ ಪ್ರತಿಷ್ಠೆ ಹೆಚ್ಚು ಎನ್ನಲಾಗುತ್ತಿದೆ! ಪ್ರಶಸ್ತಿ ಪ್ರದಾನದ ಮುಂಚಿತವಾಗಿ ಮುನ್ನೋಟ, ಪರಿಚಯ ಬರಹ ಮತ್ತು ಸಮಾರಂಭದ ವರದಿ ಪ್ರಕಟವಾದಲ್ಲಿಗೆ ಎಲ್ಲವೂ ಸಮಾರೋಪಗೊಳ್ಳುತ್ತವೆ. ಯಾವ ಕಲಾವಿದರನ್ನು ಸಂಮಾನಿಸುತ್ತೇವೆಯೋ ಅವರ ವ್ಯಕ್ತಿಚಿತ್ರವನ್ನು ಚಿಕ್ಕ ಪುಸ್ತಿಕೆ ರೂಪದಲ್ಲಿ ಪ್ರಕಟಿಸಿ ಪ್ರೇಕ್ಷಕರ ಕೈಗಿಡಬಹುದು! ಈ ಪ್ರಸ್ತಾಪವನ್ನು ಒಂದಿಬ್ಬರಲ್ಲಿ ಮುಂದಿಟ್ಟಾಗ, ‘ಯರು ಒದುತ್ತಾರೆ ಮಾರಾಯ್ರೆ? ಯಾರಿಗೆ ಬೇಕು,” ಎಂದರು. ಪುಸ್ತಕ ಕೊಟ್ಟಾಗ ನಿರಾಕರಿಸುವಷ್ಟು ಪ್ರೇಕ್ಷಕ, ಅಭಿಮಾನಿಗಳು ಕೃತಘ್ನರಲ್ಲ. ಒಂದು ಚಿಕ್ಕ ಪ್ರಸಂಗ ಪುಸ್ತಕ ಗಾತ್ರದ ಪುಸ್ತಿಕೆಗಳು ಪ್ರಕಟಗೊಳ್ಳಬೇಕು. ಸಂಮಾನ ಸಮಾರಂಭಗಳಿಗೆ ಅದ್ದೂರಿ ಖರ್ಚು ಮಾಡುವಾಗ ಇದಕ್ಕೊಂದಿಷ್ಟು ಮೊತ್ತವನ್ನು ವೆಚ್ಚ ಮಾಡಿದರೆ ಹೊರೆಯಾಗದು.
ಗ್ರಂಥ ಪ್ರಕಟಣೆಯ ಜತೆಗೆ ವೀಡಿಯೋ, ಆಡಿಯೋ ದಾಖಲಾತಿಗಳೂ ಕೂಡಾ ತಂತ್ರಜ್ಞಾನದ ಕೊಡುಗೆ. ಇದಕ್ಕಾಗಿ ವ್ಯಯಿಸುವ ಸಮಯ, ಶ್ರಮ ಮತ್ತು ಆರ್ಥಿಕ ಹೊಂದಾಣಿಕೆಗಳು ಸಫಲವಾಗಬೇಕು. ಕಾಲದ ಕಥನಗಳ ಅಕ್ಷರ ವಿಷಾದವು ದೂರವಾಗಬೇಕು. ಬದ್ಧತೆಗಳು ಮಹತ್ತಾಗಬೇಕು.
ಪ್ರಜಾವಾಣಿಯ ‘ದಧಿಗಿಣತೋ’ ಅಂಕಣ / 13-10-2017
No comments:
Post a Comment