Saturday, February 3, 2018

ಅಂತರ್ಮುಖಿ ಭಾವದೆಚ್ಚರದ ಭಾಗವತ ಸಿರಿಬಾಗಿಲು

 ಸಿರಿಬಾಗಿಲು ರಾಮಕೃಷ್ಣ ಮಯ್ಯ

         2017 ಅಕ್ಟೋಬರ್ 25. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರಿಗೆ ಐವತ್ತು ವರುಷ. ಬದುಕಿನ ಸುವರ್ಣ ಘಳಿಗೆ. ಇಂತಹ ತಾರೀಕುಗಳು ಎಲ್ಲರ ಬದುಕಿನಲ್ಲೂ ಹಾದು ಹೋಗುತ್ತವೆ. ಐವತ್ತಾದರೂ ಎಲ್ಲರಿಗೂ ಘಳಿಗೆ ಸುವರ್ಣವಾಗುವುದಿಲ್ಲ! ಸುವರ್ಣ ಎನ್ನುವುದು ವರುಷದ ಲೆಕ್ಕಾಚಾರ ಒಂದು. ವೃತ್ತಿಯನ್ನು ಪ್ರೀತಿಸುತ್ತಾ ಬದುಕು ಸುವರ್ಣವಾಗಿಸುವುದು ಇನ್ನೊಂದು. ಸುವರ್ಣ ಎನ್ನುವುದು ಬದ್ಧತೆಯ ಮನಃಸ್ಥಿತಿ ಎಂಬರ್ಥದಿಂದ ಮಯ್ಯರು ಎರಡೂ ಸ್ತರಗಳನ್ನು ನವಿರಾಗಿ ಸ್ಪರ್ಶಿಸುತ್ತಾ ದಾಟಿದ್ದಾರೆ, ದಾಟುತ್ತಿದ್ದಾರೆ.
          ಮಯ್ಯರಿಗೆ ತಾನೊಬ್ಬಯಕ್ಷಗಾನ ಭಾಗವತಎಂಬ ಎಚ್ಚರವಿದೆ. ಇದಕ್ಕೆ ಅಂತರ್ಮುಖಿ ಭಾವದ ಸೆಳೆತವಿದೆ. ಹಾಗಾಗಿ ವರ್ತಮಾನ ರಂಗದಸಂಭ್ರಮಗಳಿಂದ ದೂರವಿದ್ದಾರೆ, ಅಂತರ ಕಾಪಾಡಿಕೊಂಡಿದ್ದಾರೆ. ಸಂಭ್ರಮವು ಹಾಯುತ್ತಾ ಬಂದಾಗಲೂ ಅದರಿಂದ ತಪ್ಪಿಸಿಕೊಳ್ಳುವ ಸ್ಥಿತಿ ಇದೆಯಲ್ಲಾ, ಇದನ್ನೇಎಚ್ಚರಎನ್ನುವುದು. ಕಲಾವಿದನಲ್ಲಿ ಎಚ್ಚರದ ಗಾಢತೆ ಎಷ್ಟಿರುತ್ತದೋ ಅಷ್ಟು ಅದು ರಂಗದಲ್ಲಿ ಸುಭಗತನವನ್ನು ತೋರುತ್ತದೆ. ಹಾಗಾಗಿ ಮಯ್ಯರ ಭಾಗವತಿಕೆಯುಯಕ್ಷಗಾನ ಭಾಗವತಿಕೆಯಾಗಿಯೇ ಸಂಭ್ರಮಗಳ ಮಧ್ಯೆ ಪ್ರತ್ಯೇಕತೆಯನ್ನು ಕಾದುಕೊಂಡಿದೆ. 
          ಭಾಗವತಿಕೆಯನ್ನು ಧ್ಯಾನವಾಗಿ ಬದುಕಿನಲ್ಲಿ ಅನುಷ್ಠಾನಿಸಿದವರು ಪುತ್ತಿಗೆ ರಾಮಕೃಷ್ಣ ಜೋಯಿಸರು. ಇವರು ಸಿರಿಬಾಗಿಲು ಮಯ್ಯರ ಅಜ್ಜ ಯಾ ತಾಯಿಯ ತಂದೆ. ಸೋದರ ಮಾವ ಪುತ್ತಿಗೆ ರಘುರಾಮ ಹೊಳ್ಳರು. ತಂದೆ ಸಿರಿಬಾಗಿಲು ವೆಂಕಪ್ಪಯ್ಯನವರು. ಇವರು ತಾಳೆಗರಿಯಲ್ಲಿದ್ದ ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳನ್ನು ಸಂಗ್ರಹಿಸಿ ಅದಕ್ಕೆ ಬೆಳಕ್ಕೊಡ್ಡಿದವರು. ಗಟ್ಟಿ ಹಿನ್ನೆಲೆಯ ಯಕ್ಷಗಾನ ಕುಟುಂಬದಲ್ಲಿ ಚಿಗುರಿದ ರಾಮಕೃಷ್ಣ ಮಯ್ಯರಿಗೆ ಭಾಗವತಿಕೆ ಕಲಿತು ಬರಬೇಕಾಗಿಲ್ಲ! ಹುಟ್ಟಿನಿಂದಲೇ ಅಂಟಿಕೊಂಡು ಬಂದ ಬಿಡಿಸಲಾಗದ ಬಂಧ.
           ಇಂತಹ ಬಂಧಗಳಿಗೆ ಪರಂಪರೆಯ ಹಿನ್ನೆಲೆಯಿದ್ದರೂ ಸ್ವ-ಛಾಪು ಮತ್ತು ಸ್ವ-ಪ್ರಕಾಶದ ಹೊಳಪು ಕಡಿಮೆ. ಸ್ವಂತಿಕೆಯಿಲ್ಲದಿದ್ದರೆ ರಂಗದಲ್ಲಿ ನೆಲೆಯೂರುವುದು ತ್ರಾಸ. ಹಿರಿಯರೆಲ್ಲಾ ಸ್ವಂತಿಕೆಗೆ ಮಾನ ತಂದ ಮಹನೀಯರು. ಇದೇ ಹಾದಿಯಲ್ಲಿ ಸಾಗಿ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಸ್ವಂತಿಕೆಯ ನೆಲೆಯನ್ನು ಕಂಡುಕೊಂಡರು. ಭಾಗವತಿಕೆಯ ಜ್ಞಾನಕ್ಕೆ ಕುಟುಂಬದ ಜ್ಞಾನವೂ ಮಿಳಿತಗೊಂಡಿತು. ಮೂರು ವರುಷ ಕಟೀಲು, ಒಂದು ವರುಷ ಬಪ್ಪನಾಡು ಮೇಳದ ತಿರುಗಾಟ. ಬಳಿಕ ಇಪ್ಪತ್ತೆಂಟು ವರುಷಗಳಿಂದ ಶ್ರೀ ಧರ್ಮಸ್ಥಳ ಮೇಳದ ಭಾಗವತ. ಒಂದೇ ರಂಗದಲ್ಲಿ ಮಾವ (ರಘುರಾಮ ಹೊಳ್ಳರು) ಮತ್ತು ಅಳಿಯನ ಕರಾಮತ್ತು! ಇವರಿಬ್ಬರು ಎಲ್ಲೇ ಹಾಡಲಿ, ಅಲ್ಲಿ ಧರ್ಮಸ್ಥಳ ಮೇಳದಸ್ಥಾಪಿತ ಆಟದ ಗುಂಗುನಮ್ಮನ್ನಾವರಿಸಿಬಿಡುತ್ತದೆ. ಭಾಗವತರ ತಾಕತ್ತು ಮತ್ತು ಭಾಗವತಿಕೆಯ ಸಶಕ್ತತೆಯಿದು.
            ಮೇಳದಲ್ಲಿದ್ದ ಕಡತೋಕ ಮಂಜುನಾಥ ಭಾಗವತರು ಪುತ್ತಿಗೆ ಹೊಳ್ಳರನ್ನು ಪ್ರಭಾವಿಸಿದರೂ ಕಡತೋಕರ ಛಾಯೆಯಾಗಲಿಲ್ಲ. ಪುತ್ತಿಗೆಯವರ ಪ್ರಖರತೆ ಮಯ್ಯರನ್ನು ಸ್ಪರ್ಶಿಸಿತು. ಆದರೆ ಮಯ್ಯರು ಪುತ್ತಿಗೆಯವರ ಜೆರಾಕ್ಸ್ ಆಗಲಿಲ್ಲ! ಮೇಲ್ನೋಟಕ್ಕೆ ಫಕ್ಕನೆ ಹಾಗೆ ಮಿಂಚಿದರೂ ತನ್ನ ಶಾರೀರ, ಅನುಭವ ಮತ್ತು ಎಚ್ಚರದ ಮನಃಸ್ಥಿತಿಯಿಂದ ಪ್ರತ್ಯೇಕ ಹಾದಿ ಹಿಡಿದರು. ಸ್ವ-ಶೈಲಿಯಲ್ಲೇ ಮುಂದುವರಿದರು. ಅದು ಸರ್ವಸ್ವೀಕೃತಿ ಪಡೆಯಿತು. ಅದು ಯಕ್ಷಗಾನವಾಯಿತು. ಅದು ಯಕ್ಷಗಾನವಾದ್ದರಿಂದಲೇ ಮಯ್ಯರಿಗೆ ಅದರೊಳಗಿಂದ ಕಳಚಿಕೊಳ್ಳಲು ಸಾಧ್ಯವಾಗುತ್ತಿಲ್ಲ!
            ಪ್ರಸಂಗವೊಂದರಎಡಿಟಿಂಗ್ ಮತ್ತು ಕಂಪೋಸಿಂಗ್ಮಾಡುವಲ್ಲಿ ಪ್ರದರ್ಶನ ಯಶಸ್ಸಾಗುತ್ತದೆ. ‘ಫೋಕಸಿಂಗ್ಕೂಡಾ ಪ್ರೇಕ್ಷಕರ ಮೇಲೆ ಪರಿಣಾಮ ನೀಡುತ್ತದೆ. ಸಿರಿಬಾಗಿಲು ಮಯ್ಯರಿಗೆ ಟೆಕ್ನಿಕ್ ಗೊತ್ತಿರುವುದರಿಂದ ಪ್ರದರ್ಶನ ಗೆಲ್ಲುತ್ತದೆ. ಪಾತ್ರಗಳನ್ನು ರಂಗದಲ್ಲಿ ದುಡಿಸುವುದು ಪ್ರತ್ಯೇಕ ಕಲೆ. ಪುತ್ತಿಗೆ ಹೊಳ್ಳರೊಳಗೆ ಕಲೆಯುಸದಾ ಜಾಗೃತ. ಬಹುಶಃ ಕಡತೋಕ, ಪುತ್ತಿಗೆಯವರ ಪ್ರಭಾವವೂ ಮಯ್ಯರಿಗೆ ಇರಬಹುದೇನೋ, ರಂಗದಲ್ಲಿ ಕುಳಿತರೆ ಒಂದರ್ಥದಲ್ಲಿ ನಿರ್ದೇಶಕನೇ ಆಗಿಬಿಡುತ್ತಾರೆ. ಎಲ್ಲಾ ಭಾಗವತರಿಗೂ ಇಂತಹ ಗುಣ ಬರುವುದಿಲ್ಲ.
              ಕಾಲಮಿತಿ ಪ್ರದರ್ಶನದ ಕಾಲಘಟ್ಟದಲ್ಲಿದ್ದೇವೆ. ಸೀಮಿತ ಸಮಯದೊಳಗೆ ಪ್ರಸಂಗವನ್ನು ಸುಂದರವಾಗಿ ಮುಗಿಸುವುದು ಸವಾಲು. ಮಯ್ಯರ ಎಡಿಟಿಂಗ್ ಜ್ಞಾನವು ಇಂತಹ ಸವಾಲುಗಳನ್ನು ಗೆದ್ದಿದೆ. ಪ್ರಸಂಗಗಳು ಕಂಠಸ್ತವಾಗಿ, ರಂಗತಂತ್ರಗಳು ಕರಗತವಾಗಿ, ರಂಗಭಾಷೆಯನ್ನು ಅರತವರಾದ ಮಯ್ಯರು ಬೀಗಿದ್ದನ್ನು ನಾನು ನೋಡಿಲ್ಲ. ಮುದುಡುವುದು ಅವರ ಜಾಯಮಾನ. ಇದು ದೌರ್ಬಲ್ಯವಲ್ಲ, ಸೌಜನ್ಯ. ಇದನ್ನು ದೌರ್ಬಲ್ಯವೆಂದು ನೋಡುವವರಿದ್ದಾರೆ! ಮಯ್ಯರ ಮುದುಡುವಿಕೆ ಇದೆಯಲ್ಲಾ, ಅದು ನಿಜಾರ್ಥದ ಯಕ್ಷಗಾನದ ಎಚ್ಚರದ ಪ್ರತಿಫಲನ. ಇದೇನೂ ಹೊಗಳಿಕೆಯಲ್ಲ, ಉತ್ಪ್ರೇಕ್ಷೆಯಲ್ಲ. ಅವರ ಆಪ್ತತೆಯ ಕವಚದೊಳಗೆ ಸೇರಿಬಿಟ್ಟರೆ ಅನುಭವ ಎಲ್ಲರಿಗೂ ಆಗುತ್ತದೆ.
            ಒಬ್ಬ ಕಲಾವಿದ ಹೇಗಿರಬೇಕು? ಎನ್ನುವ ಪ್ರಶ್ನೆಗೆ ಇಂತಹುದೇ ಉತ್ತರವಿಲ್ಲ. ಮೇಳ ಸೇರಿಕೊಂಡರೆ ಆಯಿತು, ಆರು ತಿಂಗಳು ಪೂರ್ತಿ ವ್ಯವಸಾಯ. ‘ಸ್ಥಾಪಿತ ಕಲಾವಿದರಿಗೆ ಮಳೆಗಾಲದಲ್ಲೂ ಪುರುಸೊತ್ತಿಲ್ಲ ಎನ್ನುವುದೂ ಖುಷಿಯ ವಿಚಾರ. ಖುಷಿಯ ಹಿಂದೆ ರಂಗದ ವಿಷಾದವೂ ಸೇರಿದೆ, ಬಿಡಿ! ಸಿರಿಬಾಗಿಲು ಮಯ್ಯರುಬದ್ಧತೆಯ ಅಡಿಗಟ್ಟಿನಲ್ಲಿಖುಷಿ ಕಾಣುತ್ತಾರೆ, ತೃಪ್ತಿ ಪಡುತ್ತಾರೆ. ಅನ್ನ ನೀಡಿದ ಕ್ಷೇತ್ರಕ್ಕೆ ನ್ಯಾಯ ಸಲ್ಲಿಸುವ ಮನಃಸ್ಥಿತಿಯು ವೃತ್ತಿ ಕಲಾವಿದನೊಬ್ಬನಲ್ಲಿ ಹಸಿರಾಗಿ ಬೆಳೆಯುತ್ತಿದೆ ಎಂದರೆ ವರ್ತಮಾನದ ಕಣ್ಣೀನದಲ್ಲದು ಗ್ರೇಟ್. ಹಿನ್ನೆಲೆಯಲ್ಲಿ ರಾಮಕೃಷ್ಣ ಮಯ್ಯರು ಎಷ್ಟೋ ಬಾರಿ ನನಗೆ ಕಲಾವಿದನಾಗಿ ಕಾಣುವುದಿಲ್ಲ! ರಂಗದ ದನಿಯಾಗಿ ಕಾಣುತ್ತಾರೆ.
          ಮಯ್ಯರ ಯೋಚನೆಯರಂಗಪ್ರಸಂಗಪ್ರಸ್ತುತಿಯು ಮರೆತುಹೋದ ಪ್ರಸಂಗಗಳ, ಪ್ರದರ್ಶನಗಳ ಮರು ಓದು. ಅದನ್ನು ದಾಖಲಿಸಿ ಆಸಕ್ತರಿಗೆ ನೀಡುವ ಯೋಜನೆ. ಕಲಾಭಿಮಾನಿಗಳು, ಅಭಿಮಾನಿಗಳು, ವಿಮರ್ಶಕರು, ಮಾಧ್ಯಮಗಳುರಂಗ ಪಲ್ಲಟಗೊಳ್ಳುತ್ತಿದೆಎಂದು ಬೆರಳು ತೋರುತ್ತಿದ್ದಾರೆ. ಆದರೆ ವೃತ್ತಿ ಕಲಾವಿದನೊಬ್ಬರಂಗ ಬದಲಾಗುತ್ತಿದೆಎಂದು ರಂಗ-ಪ್ರಸಂಗದಂತಹ ಕಲಾಪವನ್ನು ಏರ್ಪಡಿಸುವುದು ಇದೆಯಲ್ಲಾ, ಇವರ ಶ್ರಮ ಮತ್ತು ರಂಗಬದ್ಧತೆಯ ಕಾಳಜಿಯತ್ತ ಕಲಾವಿದರು ಕತ್ತು ಹೊರಳಿಸಿ ಒಮ್ಮೆ ನೋಡಬೇಕು. ರಂಗಪ್ರಸಂಗದಿಂದ ರಂಗ ಭವಿಷ್ಯ ಹಸನಾಗುತ್ತದೋ ಇಲ್ಲವೋ ಬೇರೆ ಮಾತು. ಆದರೆ ಮಯ್ಯರಿಗೆ ವರ್ತಮಾನದಲ್ಲಿ ನಿಂತು ರಂಗವನ್ನುತಮಗೆ ಬೇಕಾದಂತೆ ಹಿಂಡುತ್ತಾಸರ್ವಾದರ ಪಡೆಯಬಹುದಿತ್ತು. ಹಾದಿಯನ್ನು ತುಳಿಯಲು ಅವರೊಳಗಿನ ಎಚ್ಚರ ಬಿಟ್ಟಿಲ್ಲ. ಹಳಿ ತಪ್ಪಿದ ರಂಗಸೂಕ್ಷ್ಮತೆಯನ್ನು ಪುನಃ ಹಳಿಗೆ ತರುವತ್ತ ಯೋಚಿಸುವುದೂ ನಿಜಾರ್ಥದ ಕಲಾವಂತಿಕೆ. ಒಂದಷ್ಟು ಆಸಕ್ತರ, ಆಪ್ತರ ಸಹಕಾರದೊಂದಿಗೆ ತನ್ನ ಗಳಿಕೆಯನ್ನೂ ವ್ಯಯಿಸಿದ್ದಾರೆ ಎಂದರೆ ಮಯ್ಯರಿಗೆ ಮುಜುಗರವಾಗಬಹುದು. ತಾಳಮದ್ದಳೆಯ ಅರ್ಥಗಾರಿಕೆಯನ್ನು ಕೇಂದ್ರೀಕರಿಸಿಅರ್ಥಾಂತರಂಗಈಚೆಗಿನ ಹೊಸ ಯೋಚನೆ.
           ಇವನ್ನೆಲ್ಲಾ ತನ್ನ ತೀರ್ಥರೂಪರಾದ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಪ್ರತಿಷ್ಠಾನದಡಿ ಏರ್ಪಡಿಸುತ್ತಿದ್ದಾರೆ. ಪ್ರತೀ ವರುಷವೂ ತಂದೆಯ ನೆನಪಿನಲ್ಲಿ ಹಿರಿಯ ಕಲಾವಿದರನ್ನು ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ಸಂಶೋಧಕ ದೇಶಮಂಗಳ ಕೃಷ್ಣ ಕಾರಂತರ ಜನ್ಮಶತಮಾನೋತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ ಮಯ್ಯರ ಕಾಣದ ದುಡಿತವಿದೆ. ‘ಯಕ್ಷಶ್ರೀಕರಸರಣಿ ತಾಳಮದ್ದಳೆಯನ್ನು ಏರ್ಪಡಿಸಿದ್ದಾರೆ. “ನನ್ನೆಲ್ಲಾ ಯೋಚನೆಗಳಿಗೆ ಸ್ಪಂದಿಸುವ ಮಿತ್ರರು, ದಾನಿಗಳ ಶ್ರಮವೇ ಹೊರತು ನನ್ನದೇನಿಲ್ಲ,” ಎಂದು ವಿನಮ್ರವಾಗುವ ಮಯ್ಯರ ದೂರಗಾಮಿ ಚಿಂತನೆಗಳು ಆಶ್ಚರ್ಯಹುಟ್ಟಿಸುತ್ತದೆ, “ಈಗ ಮುಖ್ಯವಾಗಿ ಆಗಬೇಕಾದ್ದು ಕಲಾವಿದರು ಕಲೆಯನ್ನು ಉಳಿಸುವ ಕೆಲಸ. ಕಲಾವಿದರನ್ನು ಉಳಿಸಿ, ಬೆಳೆಸಲು ಹತ್ತು ಹಲವು ಕೈಗಳಿವೆ. ಆದರೆ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲಾವಿದರು ಯೋಚಿಸಬೇಕು.”
           ಇಂತಹ ಯೋಚನೆಗಳಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಮನಸ್ಸು ಸುವರ್ಣವಾಗಿದೆ. ಐವತ್ತರ ಖುಷಿಯನ್ನು ವಿಶಿಷ್ಟವಾಗಿ ಹಂಚಿಕೊಳ್ಳಲಿದ್ದಾರೆ. ಕಾಸರಗೋಡು ಸನಿಹದ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಅಕ್ಟೋಬರ್ 25ರಂದು ಬೆಳಿಗ್ಗೆಸುವರ್ಣ ಯಕ್ಷಾರ್ಚನೆಯನ್ನು ಸ್ಮರಣೀಯವಾಗಿಸಲಿದ್ದಾರೆ. ಐವತ್ತು ಯಕ್ಷಗಾನ ಕವಿಗಳ ಪರಿಚಯದೊಂದಿಗೆ ಐವತ್ತು ಯಕ್ಷಗಾನೀಯ ಮಟ್ಟುಗಳನ್ನು ಹಾಡಲಿದ್ದಾರೆ. ಅಪರಾಹ್ನ ಹಿರಿಯ ಭಾಗವತರುಗಳಿಂದಯಕ್ಷಗಾನಾರ್ಚನೆನಡೆಯಲಿದೆ. ಹಾರ-ತುರಾಯಿ-ಬಹುಪರಾಕು ಮತ್ತು ಸ್ವ-ಪ್ರಚಾರಗಳಿಂದ ದೂರನಿಂತು, ಐವತ್ತರ ಖುಷಿಯನ್ನು ಗಾನಾರ್ಚನೆಗಳ ಮೂಲಕ ಸಂಪನ್ನಗೊಳಿಸುವ ಮನಃಸ್ಥಿತಿಯು ರಂಗದ ಎಚ್ಚರದ ದ್ಯೋತಕ.

(ಚಿತ್ರ : ಶ್ಯಾಮಪ್ರಸಾದ್ ಕುಂಚಿನಡ್ಕ)
ಪ್ರಜಾವಾಣಿಯ ದಧಿಗಿಣತೋ ಅಂಕಣ / 20-10-2017


No comments:

Post a Comment