Saturday, December 29, 2018

ಆಂಜನೇಯ ಸಂಘದ ಸುವರ್ಣಯಾನ ಪರ್ವ

         ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘಕ್ಕೆ ಸುವರ್ಣ ಸಡಗರ. ಸಂಘವೊಂದು ಉಸಿರು ನಿಲ್ಲಿಸದೆ ದೀರ್ಘಯಾನ ಮಾಡಿರುವುದು ಹೆಗ್ಗುರುತು. ಕಲೆಯ ತೇವವನ್ನು ಆರಬಿಡದ ಬದ್ಧತೆ. ನಿರಂತರ ಚಟುವಟಿಕೆಯತ್ತ ನಿಗಾ. ಗುಣಮಟ್ಟಕ್ಕಿಂತಲೂ ಚಲನಶೀಲತೆಯ ಗುರಿ. ಇವೆಲ್ಲಾ ಐವತ್ತರ ಯಶದ ಗುಟ್ಟು. ನೂರಾರು ಅರ್ಥದಾರಿಗಳನ್ನು ರೂಪಿಸಿದ ಹಿರಿಮೆ. ಬೊಳ್ವಾರು ವೃತ್ತದಲ್ಲಿರುವಶ್ರೀ ಶಕ್ತಿ ಆಂಜನೇಯ ಮಂತ್ರಾಲಯವು ಸಂಘಕ್ಕೆ ಹಿರಿಮನೆ.  
 
                ಕೀರ್ತಿಶೇಷ ಪಿ.ಮಹಾಲಿಂಗ ಮಣಿಯಾಣಿ ಸಂಘದ ಸ್ಥಾಪಕರು. ಇವರು ದೈವಭಕ್ತರು. ವೈದ್ಯಕೀಯ ಮತ್ತು ಮಂತ್ರವಾದದ ಮೂಲಕ ಜನಾನುರಾಗಿ. ಸ್ಥಳೀಯ ಕಲಾವಿದರನ್ನು ಬೆಳೆಸುವ ಕಲಾಪ್ರೇಮಿ. ತನ್ನ  ಮಂತ್ರಾಲಯದಲ್ಲಿ ಎಲ್ಲಾ ಕಲೆಗಳಿಗೂ ಆಶ್ರಯ. ಯಕ್ಷಗಾನಕ್ಕೆ ಮೊದಲ ಮಣೆ. ತಾಳಮದ್ದಳೆಯ ಆಶಯವನ್ನಿಟ್ಟು ರೂಪುಗೊಂಡ ಮಣಿಯಾಣಿಯವರ ಮೆದುಳಮರಿಗೆ ಈಗ ಐವತ್ತರ ಪ್ರಾಯ. ಪ್ರಕೃತ ಅವರÀ ಚಿರಂಜೀವಿ ನಾರಾಯಣ ಮಣಿಯಾಣಿಯವರ ಹಿರಿತನ.

                18 ಮಾರ್ಚ್ 1968ರಲ್ಲಿ ಸಂಘದ ಹುಟ್ಟು. ಕೆ.ನಾರಾಯಣ ಭಟ್, ಪಿ.ಮಹಾಲಿಂಗ ಮಣಿಯಾಣಿ, ಬೊಳ್ವಾರು ಬಿ.ರಾಮಯ್ಯ ಶೆಟ್ಟಿ, ವಿದ್ವಾನ್ ಬಿ.ಸೇಸಪ್ಪ ಟೈಲರ್, ಬಿ.ಹೊನ್ನಪ್ಪ ಹೆಗ್ಡೆ ಹಿರಿಯರೆಲ್ಲಾ ಹೆಗಲು ನೀಡಿದ ಪ್ರಾತಃಸ್ಮರಣೀಯರು.  ಪ್ರತಿ ಶನಿವಾರ ತಾಳಮದ್ದಳೆ. ದೂರದೂರಿನಿಂದ ಕಲಾವಿದರು ಆಗಮಿಸುತ್ತಿದ್ದ ಕಾಲಘಟ್ಟವನ್ನು ಹಿರಿಯರು ಸ್ಮರಿಸುತ್ತಾರೆ. ಮುಂದಿನ ದಿನಗಳಲ್ಲಿ ಬೊಳ್ವಾರು ಮಾಧವ ನಾಯಕರಿಗೆ ಸಂಘದ ಹೊಣೆ. ಬರೆಪ್ಪಾಡಿ ಅನಂತಕೃಷ್ಣ ಭಟ್ಟರಿಗೆ ಕಾರ್ಯದರ್ಶಿಯ ಜವಾಬ್ದಾರಿ. ಕ್ರಮೇಣ ವಾರದ ಕೂಟವು ಎರಡು ವಾರಕೊಮ್ಮೆ ಬದಲಾಯಿತು.

                ಬರೆಪ್ಪಾಡಿಯವರ ಸಮರ್ಪಿತ ಕಾಯಕವು ಸಂಘಕ್ಕೆ ದೊಡ್ಡ ಚಾಲನಾಶಕ್ತಿ. ಆರ್ಥಿಕತೆಯ ಲಕ್ಷ್ಯವಿಲ್ಲದೆ  ಕಲೆಯ ಮೇಲಿನ ಪ್ರೀತಿಯಿಂದ ಹಿರಿಯ ಕಲಾವಿದರು ಭಾಗವಹಿಸುತ್ತಿದ್ದುದು ವಿಶೇಷ. ಹೀಗೆ ಭಾಗವಹಿಸಿದವರಿಗೆಲ್ಲಾ ನೀಡುವ ಆತಿಥ್ಯವು ಪ್ರಾಯಃ ಯಕ್ಷಗಾನ ಕ್ಷೇತ್ರದಲ್ಲಿ ಬಾಯ್ಮತು. “ಸಂಘದ ಆತಿಥ್ಯ ಮರೆಯುವಂತಹುದಲ್ಲ. ಲಭ್ಯ ಸಂಪನ್ಮೂಲದಲ್ಲಿ ಕಲಾವಿದರಿಗೆ ಉಪಾಹಾರ ಒದಗಣೆ. ತಾಳಮದ್ದಳೆ ಮುಗಿಯುವಾಗ ಕಲಾವಿದರು ಆಗಮಿಸಿದರೂಅರ್ಥ ಹೇಳದಿದ್ದರೂ - ಉಪಾಹಾರ ನೀಡಿ ಆತಿಥ್ಯ ನೀಡುವುದು ಸಂಘದ ಪರಿಪಾಠವಾಗಿತ್ತು.” ಎಂದು ಜ್ಞಾಪಿಸಿಕೊಳ್ಳುತ್ತಾರೆ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್.

                ಸಂಘಕ್ಕೆ ಕಲಾವಿದರನ್ನು ಗೌರವಿಸುವುದು ಖುಷಿ ನೀಡುವ ವಿಚಾರ. ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಕೊಳಂಬೆ ಪುಟ್ಟಣ್ಣ ಮಾಸ್ತರ್, ದೇರಾಜೆ ಸೀತಾರಾಮಯ್ಯ, ಮಲ್ಪೆ ಶಂಕರನಾರಾಯಣ ಸಾಮಗ, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ಎನ್.ವಿ.ಕೃಷ್ಣ ರಾವ್.. ಹೀಗೆ ಅನೇಕ ಉದ್ಧಾಮರನ್ನು ಗೌರವಿಸಿದೆ. ನಿರಂತರ ತಾಳಮದ್ದಳೆಗಳಲ್ಲದೆ ಹೊರ ಪ್ರದೇಶದಲ್ಲೂ ಕೂಟಗಳಾಗಿವೆ

                ಸಂಘದ ಯಶದ ಯಾನದಲ್ಲಿ ಬರೆಪ್ಪಾಡಿಯವರದು ಅಜ್ಞಾತ ದುಡಿಮೆ. ಕಾರ್ಯದರ್ಶಿಯಾಗಿ ಕಾಲು ಶತಮಾನ ಹೆಗಲು ನೀಡಿದ್ದಾರೆ. ದುಡಿತದ ಗಳಿಕೆಯನ್ನು ಬಳಸಿದ್ದಾರೆ. ಯಕ್ಷಗಾನದ ಉಸಿರನ್ನು ಜೀವಂತವಿಟ್ಟವರು. ಅವರಿಗೆ ಸಂಘವೇ ಸರ್ವಸ್ವ. ಪಾಕ್ಷಿಕವಾಗಿ ಕೂಟವನ್ನು ನಡೆಸುವ ಬದ್ಧತೆ. ಸದಸ್ಯರಲ್ಲಿನಮ್ಮ ಸಂಘಎಂಬ ಅಭಿಮಾನವನ್ನು ಮೂಡಿಸುವಲ್ಲಿ ಸಫಲರಾಗಿದ್ದರು. ಪುತ್ತೂರಿಗೆ ಹೊಸಬರು ಬಂದರೆ ಅವರ ಚಿತ್ತಕ್ಕೆ ಹೇಗೋ ತಿಳಿದುಬಿಡುತ್ತಿತ್ತು! ಅವರನ್ನು ಹುಡುಕಿ ಆಹ್ವಾನಿಸಿ, ಅರ್ಥ ಹೇಳಿಸಿ ತಾನೂ ಸಂತೋಷ ಪಡುತ್ತಿದ್ದರು.

                ಮಾಧವ ನಾಯಕರು ಮತ್ತು ಬರೆಪ್ಪಾಡಿ ಅನಂತಕೃಷ್ಣರು ವಿಧಿವಶರಾದ ಬಳಿಕ ಸಂಘವನ್ನು ಮುನ್ನಡೆಸುತ್ತಿದ್ದಾರೆ - ನಾಯಕರ ಪುತ್ರ ಬೊಳ್ವಾರು ರಮಾನಂದ ನಾಯಕ್, ಇವರು ಗೌರವಾಧ್ಯಕ್ಷರು ಮತ್ತು ಅಧ್ಯಕ್ಷರಾಗಿ ಭಾಸ್ಕರ ಬಾರ್ಯ. ಸದಸ್ಯರೊಳಗೆ ನಡೆಯುತ್ತಿದ್ದ ವಾರ್ಷಿಕೋತ್ಸವವನ್ನು ಸಮಾವೇಶವಾಗಿ ಬದಲಾಯಿಸಿ ಅದನ್ನೊಂದು ಯಕ್ಷೋತ್ಸವವಾಗಿ ಬದಲಾಯಿಸಿದರು. ದೂರ ನಿಂತು ಧನಾತ್ಮಕವಾಗಿ ಸ್ಪಂದಿಸುತ್ತಿದ್ದವರನ್ನು  ತನ್ನೆಡೆಗೆ ಸೆಳೆದರು. ಹಗುರವಾಗಿ ಕಂಡವರ, ಹಿಯಾಳಿಸಿದವರ ಕೈಕುಲುಕಿ ಆಮಂತ್ರಣ ನೀಡಿ ಆಹ್ವಾನ. ಸಂಘದ ನಲವತ್ತರ ಹಬ್ಬದಿಂದಶ್ರೀ ಯಕ್ಷಾಂಜನೇಯ ಪ್ರಶಸ್ತಿಸ್ಥಾಪಿತವಾಯಿತು. ತಾಳಮದ್ದಳೆಗಳ ವ್ಯಾಪ್ತಿ ಹಿರಿದಾಯಿತು.

                ಸಂಘದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ತಂಡವಿದೆ. ನಾಡಿನಾದ್ಯಂತ ತಾಳಮದ್ದಳೆಗಳು ನಡೆದಿವೆ. ಪ್ರತಿಷ್ಠಿತ ವೇದಿಕೆಗಳಲ್ಲಿ ಅವಕಾಶ ಪ್ರಾಪ್ತವಾದುವು. ಕಲಾವಿದರ ಪ್ರಸ್ತುತಿಗಳಿಗೆ ಮಾಧ್ಯಮಗಳು ಬೆಳಕು ಬೀರಿವೆ. ಮಹಿಳಾ ಸಂಘದ ಬೆಳವಣಿಗೆಯಲ್ಲಿ ಬರೆಪ್ಪಾಡಿಯವರ ಮನಶ್ರಮ ಗುರುತರ. “2005 ಜೂನ್ 26ರಂದು ಮಹಿಳಾ ಸಂಘವನ್ನು ಶ್ರೀಮತಿ ಸವಿತಾ ರಾಮ ಭಟ್ ಉದ್ಘಾಟಿಸಿದ್ದರು.  ಕೆಲವರು ಉದ್ಯೋಗಸ್ಥರು, ಹಲವರು ಮನೆ ವಾರ್ತೆಗಳಲ್ಲಿ ತೊಡಗಿಸಿಕೊಂಡಿದ್ದು ಎಲ್ಲರೂ ಉತ್ಸಾಹದಿಂದ ಭಾಗವಹಿಸುವುದರಿಂದ ಸಂಘವು ಹದಿಮೂರರ ಖುಷಿಯಲ್ಲಿ ಮುಂದುವರಿಯುತ್ತಿದೆ,” ಎನ್ನುತ್ತಾರೆ ಅಧ್ಯಕ್ಷೆ ಟಿ.ಪ್ರೇಮಲತಾ ರಾವ್

                ಸಂಘದ ನಲವತ್ತರ (2008) ಸಡಗರದಲ್ಲಿ ಮನೆಮನೆ ತಾಳಮದ್ದಳೆ ನಡೆದಿದ್ದುವು. ಕಲಾ ಪೋಷಕರು ಕಾರ್ಯಹೂರಣವನ್ನು ಮೆಚ್ಚಿಕೊಂಡು ತಂತಮ್ಮ ಮನೆಗೆ ಸ್ವಾಗತಿಸಿದ್ದರು. ಸಂಘಗಳು, ಭಜನಾ ಸಂಘಗಳು, ದೇವಾಲಯಗಳಲ್ಲಿ ಅವಕಾಶಗಳು ಪ್ರಾಪ್ತವಾದುವು. ಬೊಳ್ವಾರು ರಮಾನಂದ ನಾಯಕರ ಮತ್ತು ಭಾಸ್ಕರ ಬಾರ್ಯರ ಸಾಮಾಜಿಕ ಸಂಪರ್ಕವು ಸಂಘದ ಉನ್ನತೀಕರಣದಲ್ಲಿ ದೊಡ್ಡ ಪಾಲು. ಸಂಘದ ಚಟುವಟಿಕೆಗಳಿಗೆ ಪುತ್ತೂರು ನಗರದಲ್ಲಿ ಮನಸಾ ಆರ್ಥಿಕ ಸಹಕಾರ ನೀಡುವ ಕಲಾಭಿಮಾನಿಗಳಿದ್ದಾರೆ.  

                ಸಂಘದ ಚಟುವಟಿಕೆಯನ್ನು ಬಹುಕಾಲದಿಂದ ಹತ್ತಿರದಿಂದ ಗಮನಿಸಿದ್ದೇನೆ. ಸಾಂದರ್ಭಿಕವಾಗಿ ಭಾಗವಹಿಸಿದ್ದೇನೆ. ಕಲಾವಿದರು ಸುದ್ದಿಗಳನ್ನು ಪರಸ್ಪರ ಖುಷಿಯಿಂದ ವಿನಿಮಯ ಮಾಡಿಕೊಳ್ಳುವದಕ್ಕೆ ಕಿವಿಯಾಗಿದ್ದೇನೆ. ತೀರಾ ಹಗುರವಾಗಿ ಮಾತನಾಡಿದವರೂ, ಮಾತನಾಡುವವರ ದನಿಯ ಪರಿಚಯವಿದೆ! ಬಹುಶಃ ರೀತಿಯ ವರ್ತನೆಗಳು ತೋರುವುದೂ ಒಂದು ಢಾಳು ಪ್ರತಿಷ್ಠೆ! ಇಂತಹುಗಳನ್ನೆಲ್ಲಾ ನೋಡುತ್ತಾ ನೋಡುತ್ತಾ ಸಂಘವಂತೂ ಎತ್ತರಕ್ಕೆ ಬೆಳೆದುಬಿಟ್ಟಿದೆ! “ಹಿರಿಯರು ಕಟ್ಟಿದ ಸಂಸ್ಥೆಯನ್ನು ಸದಸ್ಯರೆಲ್ಲರ ಸಹಕಾರದಿಂದ ಎಚ್ಚರದಿಂದ ಮುನ್ನಡೆಸುತ್ತಿದ್ದೇವೆ. ಪುತ್ತೂರು ನಾಗರಿಕರು ಸಂಘವನ್ನು ಮತ್ತು ಕಲೆಯನ್ನು ಸ್ವೀಕರಿಸಿದ ಬಗೆಗೆ ಬೆರಗಾಗಿದ್ದೇನೆ.” ಎನ್ನುತ್ತಾರೆ ಅಧ್ಯಕ್ಷ ಭಾಸ್ಕರ ಬಾರ್ಯ

                ಸಂಘದ ನಲವತ್ತರ ಸಂಭ್ರಮದಲ್ಲಿ ಸಕ್ರಿಯರಾಗಿದ್ದ ದಿ.ಪ್ರೊ.ಬಿ.ಜೆ.ಸುವರ್ಣರು ಹೇಳಿದ ಮಾತು ನೆನಪಾಗುತ್ತದೆ. “ಕಲಾಭಿಮಾನಿಗಳ ಪ್ರೀತಿ ಮತ್ತು ಸಹಕಾರ, ಕಲಾವಿದರ ಆಸಕ್ತಿ ಮತ್ತು ಕರ್ತವ್ಯಪರತೆ ಮುಪ್ಪುರಿಗೊಂಡಾಗ ಮಾತ್ರ ಕಲಾ ಸಂಘಟನೆಗಳು ಉಳಿಯಬಹುದು ಮತ್ತು ಬೆಳೆಯಬಹುದು.” ಆಂಜನೇಯ ಸಂಘದ ಬೆಳವಣಿಗೆಯಲ್ಲಿ ಸುವರ್ಣರು ಹೇಳಿದ ಮಾತುಗಳು ಅಕ್ಷರಶಃ ನಿಜವಾಗಿದೆ. ಕಲಾವಿದರಿಗೆ, ಸದಸ್ಯರಿಗೆ ಆರ್ಥಿಕ ನೋಟವಿಲ್ಲ. ಭಾಗವಹಿಸುವಿಕೆಯೇ ಮುಖ್ಯ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಶಾರದಾ ಮಂದಿರದ ಆಡಳಿತ ಮಂಡಳಿಗಳು ಚಟುವಟಿಕೆಗಳಿಗೆ ಹೆಗಲೆಣೆ ನೀಡುತ್ತಿವೆ

                ಐವತ್ತರ ನೆನಪಿಗೆ ಐವತ್ತು ತಾಳಮದ್ದಳೆಗಳನ್ನು ನಡೆಸುವ ಸಂಕಲ್ಪ. “ ಸಂಖ್ಯೆಯನ್ನು ಮೀರಿದ್ದೇವೆ. ಅನೇಕ ಅಭಿಮಾನಗಳು ತಾಳಮದ್ದಳೆಗಳನ್ನು ಆಯೋಜಿಸಿದ್ದಾರೆ. ಸಪ್ತಾಹಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪರಿಚಿತರಲ್ಲದವರು ಕರೆದು ಕಾರ್ಯಕ್ರಮ ನಡೆಸಿದ್ದಾರೆ.” ಎನ್ನುವ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಕಾರ್ಯದರ್ಶಿ ಗುಡ್ಡಪ್ಪ ಬಲ್ಯ. ಸಂಘವು ದೊಡ್ಡ ಮಟ್ಟದ ಅದ್ದೂರಿ ಆಟ, ಕೂಟ, ಯಕ್ಷೋತ್ಸವಗಳನ್ನು ನಡೆಸದೇ  ಇರಬಹುದು, ಆದರೆ ಸಮಾಜದೊಳಗೆ ಸಾಂಸ್ಕøತಿಕ ವಾಹಿನಿಯೊಂದರ ಹರಿವಿಗೆ ಪೂರಕವಾದ ಸಂಗತಿಗಳನ್ನು ಅನುಷ್ಠಾನಿಸುತ್ತಿರುವುದು ಫಕ್ಕನೆ ಕಣ್ಣಿಗೆ ಕಾಣದು.  

                ಸಂಘಕ್ಕೀಗ ಐವತ್ತರ ಮಧ್ಯವಯಸ್ಸು. ಪಂಚದಶಯಾನದ ಆನಂದವನ್ನು ಅನಾವರಣಗೊಳಿಸಲು ವೇದಿಕೆ ಸಜ್ಜಾಗುತ್ತಿದೆ. ಕಲಾಪೋಷಕ ಬಲರಾಮ ಆಚಾರ್ಯರ ಗೌರವಾಧ್ಯಕ್ಷತೆಯಲ್ಲಿ ಸುವರ್ಣಯಾನದ ತಂಡ ಸಿದ್ಧವಾಗಿದೆ.  2018 ದಶಂಬರ 22 ಮತ್ತು 23ರಂದು ದಿನಪೂರ್ತಿ ಕಲಾಪ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದನಟರಾಜ ವೇದಿಕೆಯಲ್ಲಿಶ್ರೀ ಆಂಜನೇಯ ಸುವರ್ಣಯಾನ ಪರ್ವ ಸಂಪನ್ನತೆ.. ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರಿಗೆಶ್ರೀ ಯಕ್ಷಾಂಜನೇಯ ಪ್ರಶಸ್ತಿ, ಮಲ್ಪೆ ವಾಸುದೇವ ಸಾಮಗರಿಗೆಸುವರ್ಣ ನೆನಪಿನ ಸಂಮಾನ ಗೌರವ, ಮತ್ತು ಹಾಸ್ಯಗಾರ ಶ್ರೀ ಪೆರುವೋಡಿ ನಾರಾಯಣ ಭಟ್ಟರಿಗೆಬೊಳ್ಳಿಂಬಳ ಪ್ರಶಸ್ತಿಪ್ರದಾನಿಸಲಾಗುತ್ತದೆ. ಸಾಧಕ ಸಂಮಾನ, ವಿವಿಧ ಗೋಷ್ಠಿಗಳು, ತಾಳಮದ್ದಳೆಗಳು, ಬಯಲಾಟ          
ಪ್ರಜಾವಾಣಿ / ದಧಿಗಿಣತೋ / 20-12-2018
                                                                                                                                                                                                                                                                                                                                                                                                                                                                                                                                                                                                                                                                       


No comments:

Post a Comment