Saturday, December 29, 2018

ಸಂಭ್ರಮಗಳ ಮಧ್ಯೆ ಯಕ್ಷಗಾನ ಸೆಕೆಂಡರಿಯಾಗುತ್ತಿದೆ!



            ಯಕ್ಷಗಾನ ಪ್ರದರ್ಶನಗಳಿಗೆ (ಆಟ) ಈಗ ಸಡಗರ, ಸಂಭ್ರಮ. ನವಮಾಧ್ಯಮಗಳಲ್ಲಿ (ಜಾಲತಾಣ) ರಂಗುರಂಗಿನ ಮಾತಿನ ರಿಂಗಣ. ತನ್ನ ಅಭಿಮಾನಿ ಕಲಾವಿದರನ್ನು ಬಿಟ್ಟುಕೊಡದ ಸಮರ್ಥನೆ ಮತ್ತು ವಿಮರ್ಶೆ. ಎಷ್ಟೋ ಬಾರಿ ಸಮರ್ಥಿಸುವ ಭರದಲ್ಲಿ ನಿಜ ಮಾತು ಮುದುಡುತ್ತದೆ. ಮಾತನ್ನು ಕೇಳುವ ಕಿವಿಯಿದ್ದರೂ ಮನದೊಳಗೆ ಹೊಕ್ಕಿದ ಸಂಭ್ರಮ, ಕ್ಷಣಿಕಾನಂದಗಳಿಂದ ಕ್ಷಣಿಕ ಕಿವುಡನ್ನು ರೂಢಿಸಿಕೊಂಡಿದ್ದೇವೆ. ಎಷ್ಟೋ ಸಲ ಸಂಭ್ರಮಗಳು ಗೊತ್ತಿಲ್ಲದೆ ಆವರಿಸಿಬಿಡುತ್ತವೆ

            ಸಂಭ್ರಮ ಎನ್ನುವುದು ಅನುಭವಿಸಲಿಕ್ಕಿರುವ ಅಜ್ಞಾತ ಮನಸ್ಥಿತಿ. ಅದು ಹಾಗಾಗದೆ ಮೇರೆ ಮೀರುವುದು ಹೆಚ್ಚು. ಆಗ ಅಸತ್ಯವು ಸತ್ಯವಾಗುತ್ತದೆ. ಅಪಕ್ವತೆಗಳು ಪಕ್ವತೆಯ ಸೋಗಿನಲ್ಲಿ ಎದುರಾಗುತ್ತವೆ. ಅಡ್ಡ ಮಾತುಗಳಿಗೆ ಮಾನ್ಯತೆ ಬರುತ್ತದೆ.
ಈಚೆಗೆ ಹಲವು ಆಟಗಳಿಗೆ ಪ್ರೇಕ್ಷಕನಾಗಿ ಹೋಗಿದ್ದೆ. ಗೌಜಿಗಳ ಮಧ್ಯೆ ಲೀನವಾದ ಅನುಭವ. ಬದಲಾದ ಕಾಲಘಟ್ಟ, ತಂತ್ರಜ್ಞಾನಗಳಿಂದ ಸಹಜವಾಗಿ ಮನಸ್ಸು ಪಲ್ಲಟದೆಡೆಗೆ ಜಾರುವ ಆತಂಕ. ಅನುಭವಕ್ಕೆ ಬಾರದ ಜಾರುವಿಕೆ. ಮನೆಗೆ ಮರಳಿದ ಬಳಿಕ ರಂಗವು ನೆನಪಿಂದ ಮಾಸಿತ್ತು! ಗೌಜಿಗಳು ರಿಂಗಣಿಸುತ್ತಿತ್ತು! ರಂಗದ ವಿದ್ಯಮಾನಗಳನ್ನು ತೋಚಿದಂತೆ ವಿಮರ್ಶಿಸುವ, ಮಾತನಾಡುವ, ವೈಭವೀಕರಿಸುವಸಂಭ್ರಮವನ್ನು ಗಮನಿಸಿದೆ. ಸಂಭ್ರಮವನ್ನು ಅನುಭವಿಸದೆ, ವ್ಯಾಪ್ತಿಯ ಸೀಮಾರೇಖೆಯನ್ನು ಅರಿಯದೆ ಕಲ್ಪಿತವಾದ ಸಂಭ್ರಮದ ಸೃಷ್ಟಿ ಇದೆಯಲ್ಲಾ... ಆಗ ಯಕ್ಷಗಾನ ಸೆಕೆಂಡರಿಯಾಗುತ್ತದೆ

          ಯುವ ಮನಸ್ಸುಗಳು ಯಕ್ಷಗಾನವನ್ನು ಅಪ್ಪಿಕೊಂಡಿದ್ದಾರೆ, ಒಪ್ಪಿಕೊಂಡಿದ್ದಾರೆ. ಹತ್ತಾರು ಪ್ರದರ್ಶನಗಳು ನಡೆಯುತ್ತಿವೆ. ಸಂಘಟಕರು ರೂಪುಗೊಳ್ಳುತ್ತಿದ್ದಾರೆ. ಆಯೋಜಕರು ಸ್ಪಂದಿಸುತ್ತಿದ್ದಾರೆ. ಕಲಾವಿದರಿಗೂ ಸುಗ್ಗಿ. ವರ್ತಮಾನದ ಯಕ್ಷಗಾನವು ಕುಟುಂಬವನ್ನು ಸಾಕುವಷ್ಟು ಸುದೃಢವಾಗಿ ಬೆಳೆದಿದೆ, ಬೆಳೆಯುತ್ತಿದೆ. ಹೆಮ್ಮೆ ಪಡಬೇಕಾದ ವಿಚಾರ. ಕಲಾವಿದರನ್ನು ಹಗುರವಾಗಿ ಕಾಣುವ ಕಾಲಘಟ್ಟವೊಂದಿತ್ತು. ಈಗ ಕಲಾವಿದರಿಗೂ ಮಾನ ಬಂದಿದೆ. ತಾರಾಮೌಲ್ಯ ಬರುತ್ತಿದೆ. ಬಹುತೇಕ ಅಭಿಮಾನಿಗಳ ಕರಾಮತ್ತು. ಕಲೆಯ ತಾಕತ್ತು ಸಿಂಹಪಾಲು. ಕಲೆಯೊಂದು ಬದುಕನ್ನು ಕಟ್ಟಿಕೊಡುವ ರೀತಿ ಅನನ್ಯ

           ಯಕ್ಷಗಾನ ಕಲೆಗೆ ಚುಂಬಕ ಶಕ್ತಿಯಿದೆ. ಸೆಳೆಯುವ ಮಾಂತ್ರಿಕತೆಯಿದೆ. ಸೆಳೆತಕ್ಕೆ ಒಮ್ಮೆ ಸಿಕ್ಕರೆ ಮತ್ತೆ ತಪ್ಪಿಸಿಕೊಳ್ಳದಷ್ಟು ಬಲೆಯ ಬಲಿತವಿದೆ. ಹಾಗಾಗಿ ನೋಡಿ, ಇಂದು ನವಮಾಧ್ಯಮಗಳಲ್ಲಿ ರಂಗಕ್ಕೆ ಮಾತು ಕೊಡುವ ಚರ್ಚೆಗಳು ನಿರಂತರ ನಡೆಯುತ್ತಿರುತ್ತದೆ. ಪ್ರಸಂಗ, ಕಲಾವಿದರಿಗೆ ಅಭಿಮಾನಿಗಳು ದನಿಯಾಗುತ್ತಿದ್ದಾರೆ. ಎಲ್ಲವೂ ಸರಿ, ಪ್ರದರ್ಶನಕ್ಕೆ ಸೀಮಿತವಾಗಿ ತಮ್ಮ ಅಭಿಮಾನವೋ, ವಿಮರ್ಶೆಯೋ ನಡೆಯುತ್ತಿರುತ್ತದೆ ವಿನಾ ಸಮಗ್ರ ಯಕ್ಷಗಾನದ ಕುರಿತಾದ ಮಾತುಕತೆಗಳು ಎಷ್ಟು ನಡೆಯುತ್ತವೆ? ನಡೆದರೂ ಅದರ ಗಾಢತೆ ಎಷ್ಟು? ವರುಷದ ಹಿಂದೆ ವಾಟ್ಸಾಪ್ ಗುಂಪಿನಲ್ಲಿ ಪ್ರಶ್ನೆಯೊಂದನ್ನು ಎತ್ತಿದಾಗ ಉಡಾಫೆಯ ಉತ್ತರಗಳನ್ನು ಎದುರಿಸಿದ್ದೆ. ನಂತರದ ದಿವಸಗಳಲ್ಲಿ ಗುಂಪಿನಿಂದ ಹೊರಬಂದು ಬಚಾವಾದೆ! ಪ್ರಶ್ನೆಗಳಿಗೆ, ಚೋದ್ಯಗಳಿಗೆ, ಸಂಗತಗಳಿಗೆ, ಅಸಂಗತಗಳಿಗೆ ಉತ್ತರವನ್ನು ಕೊಡುವಷ್ಟಾದರೂ ಬೆಳೆಯಬೇಡವೇ

             ಹಲವು ಸಮಯದಿಂದ ಇಂತಹ ವಿಚಾರಗಳು ಮನದೊಳಗೆ ಹೊಕ್ಕಿ ಮನಸ್ಥಿತಿಯನ್ನು ಕೆಡಿಸುತ್ತಿತ್ತು! ಎಲ್ಲೂ ಪ್ರಶ್ನಿಸದ, ಪ್ರಶ್ನಿಸಿದರೂ ಉತ್ತರ ಸಿಗದ ಕಾಲವೊಂದು ಎದುರಿಗಿದೆ. ಪಲ್ಲಟಗಳ ನೆರಳಿನಡಿ ಸ್ವಚ್ಛಂದವಾಗಿ ವಿಹರಿಸುವ, ಯಾರೂ ಪ್ರಶ್ನಿಸಲಾರರು ಎಂಬ ಧೈರ್ಯದಿಂದ, ಪ್ರಶ್ನಿಸಿದರೂನೋಡಿಕೊಳ್ಳುವಹತ್ತಾರು ವ್ಯವಸ್ಥೆಗಳು ಮುಂದಿವೆ. ಮಧ್ಯೆ ನಿಜಕಾಳಜಿಯ, ಸಮಗ್ರ ಯಕ್ಷಗಾನದ ದೂರದೃಷ್ಟಿಯಿರುವ ಅನೇಕರು ಮಾತನಾಡುತ್ತಿಲ್ಲ. ಮಾತನಾಡದೇ ಇರುವುದರಿಂದ ಸ್ವ-ಪಲ್ಲಟಗಳು ಓತಪ್ರೋತ ಸಂಚಾರವನ್ನು ಸೃಷ್ಟಿಸಿದೆ. ಒಳಿತಿನ ಬೌದ್ಧಿಕ ಹಾದಿಯತ್ತ ಹೊರಳದÀ ನೂರಾರು ಮನಸ್ಸುಗಳಿವೆ. ಹೇಳುವವರು ಯಾಕೆ ಮೌನವಾಗಿದ್ದಾರೆ? ಬಹುಶಃ ಅರ್ಥವಾಗುವಂತೆ ಹೇಳುವ ಹಿರಿ ಮನಸ್ಸುಗಳೇ ಹೊಸದಾಗಿ ರೂಪುಗೊಳ್ಳಬೇಕೇನೋ? ಒಟ್ಟಿನಲ್ಲಿ ಮಾತನಾಡುವವರು ಬೇಕಾಗಿದ್ದಾರೆ

            ಈಚೆಗೆ ಸಾಗರದಲ್ಲಿ ಕೃಷಿಕರ ಮನೆಯಲ್ಲಿ ಉಳಕೊಳ್ಳುವ ಸಂದರ್ಭ ಬಂದಿತ್ತು. ಮಲೆನಾಡು ಅಂದ ಮೇಲೆ ಕೇಳಬೇಕೇ, ಅತಿಥ್ಯಗಳ ಮಾಲೆ ಮಾಲೆ. ಅವರೂ ಯಕ್ಷಗಾನದ ಅಭಿಮಾನಿ. ಒಂದು ದಿವಸ ಪೂರ್ತಿ ಅವರಲ್ಲಿದ್ದೆ. ಅಷ್ಟೂ ಹೊತ್ತು ಋಣಾತ್ಮಕ ವಿಚಾರಗಳು ಮಾತುಕತೆಯಲ್ಲಿ ರಾಚಲಿಲ್ಲ. ಗೊಣಗಾಟಗಳು ಕಿವಿಗೆ ಬಿದ್ದಿಲ್ಲ. ಇಲ್ಲಗಳ ಸೊಲ್ಲು ಇಲ್ಲವೇ ಇಲ್ಲ! ಆಶ್ಚರ್ಯ. “ನಿಮ್ಮಲ್ಲಿ ನೆಗೆಟಿವ್ ಮಾತುಗಳನ್ನು ಕೇಳಿಲ್ಲ. ಏನಿದರ ಗುಟ್ಟು?” ಕೇಳಿದ್ದೆ. ಏನು ಹೇಳಿರಬಹುದು. “ಲೋಕವೇ ನೆಗೆಟಿವ್ನಲ್ಲಿ ಮುಳುಗಿದೆ. ನಾವ್ಯಾಕೆ ಮಾತನಾಡಬೇಕು. ಅದನ್ನು ಮಾತನಾಡಲು ಹಲವಾರು ಮಂದಿ ಸಜ್ಜಾಗಿದ್ದಾರೆ, ಸಜ್ಜಾಗುತ್ತಿದ್ದಾರೆ. ಧನಾತ್ಮಕ ಮಾತುಗಳನ್ನಾಡಲು ಜನವೇ ಇಲ್ಲ! ಹಾಗಾಗಿ ನಾವು ಧನಾತ್ಮಕವಾಗಿ ಮಾತನಾಡಲು ರೂಢಿಸಿಕೊಂಡಿದ್ದೇವೆ.”

           ಬೆರಗಾಗುವ ಸರದಿ ನನ್ನದು. ಹೌದಲ್ಲಾ.. ಇವರ ಮಾತನ್ನೇ ಯಕ್ಷಗಾನಕ್ಕೆ ಸಮೀಕರಿಸಿದೆ. ಎಷ್ಟು ಧನಾತ್ಮಕ ವಿಚಾರಗಳು ರಾಶಿರಾಶಿ ಬಿದ್ದಿವೆ! ನೋಡುವ ಕಣ್ಣುಗಳಿಲ್ಲ. ಋಣಾತ್ಮಕವೇ ಯಾಕೆ ಹಾರಿ ಬರುತ್ತವೆ. ಒಬ್ಬೊಬ್ಬ ಕಲಾವಿದ, ಕಲಾಭಿಮಾನಿಯಲ್ಲಿ ಯಾಕೆ ಇಂತಹ ವ್ಯಕ್ತಿತ್ವ ರೂಢನೆಗಳು ಅಂತರ್ಗತವಾಗುತ್ತಿವೆ.  ಎಲ್ಲವನ್ನೂ ಕಾಲದ ಮೇಲೆ ಯಾಕೆ ಆರೋಪಿಸಬೇಕು? ವಿಚಾರವನ್ನು ಕೇಳುವ, ತಿಳಿದುಕೊಳ್ಳುವ, ತಪ್ಪು-ಸರಿಗಳನ್ನು ಪರಾಮರ್ಶಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳಲು ಇನ್ನೆಷ್ಟು ದಿವಸ ಬೇಕೋ?  

        ಇಷ್ಟೆಂದಾಗ ಯಕ್ಷಗಾನ ಹಾಳಾಗುತ್ತಿದೆಯೇ? ಎನ್ನುವಮಾಮೂಲಿ ಪ್ರಶ್ನೆಎದುರಾಗುತ್ತದೆ. ಯಕ್ಷಗಾನದಂತಹ ಕಲೆಯು ಎಂದೂ ಹಾಳಾಗುವುದಕ್ಕೆ ಸಾಧ್ಯವಿಲ್ಲ. ಕಲೆಗೆ ಸಾವಿಲ್ಲ. ಅದು ನಿತ್ಯ ನೂತನ. ಕಾಲ ಬದಲಾದಂತೆ ಕಾಲದ ಒಂದಷ್ಟು ಅಂಶಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ, ಬೇಡವಾದುದನ್ನು ವಿಸರ್ಜಿಸುತ್ತಾ ಬೆಳೆಯುತ್ತಿರುತ್ತದೆ. ಇಂತಹ ಹೊತ್ತಲ್ಲಿ ಅಸಂಗತ ಬೆಳವಣಿಗೆಗಳೂ ರಂಗದಲ್ಲಿ ಅನೇಕ ಬಾರಿ ನಡೆದುಹೋಗುತ್ತದೆ. ಮೇಲ್ನೋಟಕ್ಕೆ ರಂಗ ಸ್ವೀಕರಿಸಿದೆ ಎಂದು ಬೀಗಿದರೂ, ರಂಗವೇ ಅಂತಹ ಅಸಂಗತಗಳನ್ನು ಬದಿಗೆ ಸರಿಸುವ ದೃಷ್ಟಾಂತಗಳು ಈಗ ಇತಿಹಾಸವಾಗಿವೆ

        ಹಿಂದಿನ ಹಿರಿ ತಲೆಮಾರು ಉತ್ತಮ ಜೀವನ ಮೌಲ್ಯದ ಕಲೆಯೊಂದನ್ನು ಹಸ್ತಾಂತರಿಸಿದೆ. ನಾವು ಮುಂದಿನ ತಲೆಮಾರಿಗೆ ಇದ್ದ ಸ್ಥಿತಿಯಲ್ಲಿ ಅಲ್ಲದಿದ್ದರೂಬದಲಾಯಿಸದೆದಾಟಿಸುವ ದೊಡ್ಡ ಜವಾಬ್ದಾರಿಯಿಲ್ವಾ. ಕ್ಷಣಿಕ ಸಂಭ್ರಮದೊಳಗೆ ಎಷ್ಟು ದಿವಸ ತೇಲಾಡಬೇಕು? ವರ್ತಮಾನದ ಮನಸ್ಸುಗಳು ಕಣ್ಣುಬಿಟ್ಟಾಗ ಕಂಡ ರಂಗ ಏನಿದೆಯೋ ಅದೇ ಸತ್ಯ ಅಲ್ಲವಲ್ಲಾ. ಹಾಗಾದರೆ ಸುದೃಢವಾಗಿ ಕಟ್ಟಿದ ಹಿರಿಯರು ಅಸಂಖ್ಯ ಸಂಖ್ಯೆಯಲ್ಲಿದ್ದಾರೆ. ಅವರ ಅನುಭವ ಇನ್ನೊಮ್ಮೆ ರಂಗದಲ್ಲಿ ಸ್ಥಾಪಿಸಲ್ಪಡಬೇಕು

          ರಂಗದಲ್ಲಿ ರಾವಣನಂತಹ ಬಣ್ಣದ ವೇಷಕ್ಕೆ, ವೇಷದ ಸೊಗಸುಗಾರಿಕೆಗೆ, ಸೌಂದರ್ಯ ಅನಾವರಣಕ್ಕೆ ನಿಶ್ಚಿತವಾದ ನಡೆಯ ವೇಗವನ್ನು ಹಿಂದಿನವರು ಪಾಲಿಸಿದ್ದಾರೆ. ರಾವಣನ ಪಾತ್ರ ಪುಂಡುವೇಷದಲ್ಲಿ ಕುಣಿದರೆ  ಕಲಾವಿದನಿಗೆ ಸೊಂಟತ್ರಾಣ ಇದೆಯೆನ್ನಬಹುದಷ್ಟೇ. ಕಿರೀಟ ವೇಷಕ್ಕೂ ನಡೆಯಿದೆ. ಸ್ತ್ರೀವೇಷವೆಂದರೆ ಗಂಟೆಗಟ್ಟಲೆ ಬೆವರಿಳಿಸಿ ಕುಣಿದುಕುಪ್ಪಳಿಸುವಪಾತ್ರವಲ್ಲವಲ್ಲ... ಇಂತಹ ಅಸಂಗತಗಳಿಗೆ ವರ್ತಮಾನವು ಕಾಯಕಲ್ಪಕ್ಕಾಗಿ ಕಾಯುತ್ತಿವೆ! ಕಲಾವಿದನ ಕುರಿತಾದ ಅಭಿಮಾನ ವೈಯಕ್ತಿಕ. ಅದು ತಪ್ಪಲ್ಲ. ಇಂದು ಸಿನಿಮಾ ರಂಗದಲ್ಲಿ ಅಭಿಮಾನಿಗಳು ಎಷ್ಟಿಲ್ಲ. ಹಿನ್ನೆಲೆಯಲ್ಲಿ ತಮ್ಮ ಜೀವಮಾನವನ್ನು ಯಕ್ಷಗಾನಕ್ಕೆ ತೇದ ಕಲಾವಿದನಿಗೆ ಅಭಿಮಾನಿಗಳು ಸೃಷ್ಟಿಯಾಗಿರುವುದು ಕಲೆಯ, ಕಲಾವಿದನ ಭಾಗ್ಯ

         ಯಕ್ಷಗಾನದಲ್ಲಿ ಸಂಗತ, ಅಸಂಗತಗಳು ಅಲಿಖಿತವಾಗಿ ಗೋಚರವಾಗುತ್ತಿದೆ. ಹಾಗೆಂದು ಕರಾರುವಾಕ್ಕಾಗಿ ದಾಖಲಿಸಲು ಅಸಾಧ್ಯ. ನಿತ್ಯ ಜೀವನದ ಸೊಗಸುಗಾರಿಕೆ ಇರಬಹುದು, ಕಲೆಯ ಹರಿಯುವಿಕೆ ಇರಬಹುದು... ಇಂತಹುದೇ ಮಾದರಿಗಳು ಎಂದಿಲ್ಲ. ಹಿಂದಿನವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುವುದೇ ಜೀವನ. ಹಾದಿಯನ್ನು ಸೌಂದರ್ಯಗೊಳಿಸೋಣ. ಕಲ್ಲು, ಮುಳ್ಳುಗಳನ್ನು ಬದಿಗೆ ಸರಿಸೋಣ. ಆದರೆ ಹಾದಿ ಹಳೆಯದೆಂದು ಹೊಸದು ಮಾಡಿದರೆ ಹೊಸ ಹಾದಿ ಆದೀತಷ್ಟೇ

         ಇಂತಹ ವಿಚಾರಗಳನ್ನು ಕಲಾವಿದರಲ್ಲಿ ಖಾಸಗಿಯಾಗಿ ಮಾತನಾಡಿದರೆ ಅಸಹಾಯಕತೆಯನ್ನು ತೋರುತ್ತಾರೆ. ತಾವು ಮಾಡುತ್ತಿರುವುದು ಅಸಂಗತ ಎಂದೂ ಗೊತ್ತಿದೆ. ಅಭಿಮನ್ಯು ಪಾತ್ರವು ರಕ್ತಬೀಜನಂತೆ ಅಲ್ಲ ಎನ್ನುವುದೂ ತಿಳಿದಿದೆ. ಕಲಾವಿದರ ಅನುಭವದ ಅರಿವಿನ ವ್ಯಾಪ್ತಿ ದೊಡ್ಡದು. ಅರಿವನ್ನು ಅರಿಯುವತ್ತ ನಾವು ಯೋಚಿಸಬೇಕಾಗಿದೆ. ಹೀಗಾಗಬೇಕಾದರೆ ಗೌಜಿ, ಗಮ್ಮತ್ತುಗಳನ್ನು ಒಂದು ಕ್ಷಣ ಮರೆಯಲೇಬೇಕು. ಅದೇನೂ ಕಷ್ಟವಲ್ಲ. ಕಲಾವಿದನಿಗೆ ತನ್ನ ಅಭಿವ್ಯಕ್ತಿ ಹೇಗಾಗಬೇಕೆಂದು ಅನುಭವ ಕಲಿಸಿಕೊಟ್ಟಿದೆ. ರಂಗದಲ್ಲಿ ಎಷ್ಟು ಕಸುಬು ಮಾಡಬೇಕೆಂದು ಗೊತ್ತಿದೆ. ಪ್ರೇಕ್ಷಕರಾದ ನಾವು ಕಲಾವಿದನ ಕಲಾಭಿಜ್ಞತೆಯನ್ನು ನೋಡುವ ಸೂಕ್ಷ್ಮನೋಟದ ಅರಿವನ್ನು ರೂಢಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಸ್ವಲ್ಪ ಮಟ್ಟಿನ ಅಧ್ಯಯನವೂ ಬೇಕು. ಆಗ ಅಸಂಗತದ ಹಾದಿ ತನ್ನಿಂತಾನೇ ಮುಚ್ಚಿಹೋಗುತ್ತದೆ.  
(ಸಾಂದರ್ಭಿಕ ಚಿತ್ರ : ಅನಿಲ್ ಎಸ್. ಕರ್ಕೇರಾ)

1 comment: