Saturday, December 29, 2018

ಕಲೆಯ ಉಸಿರಲ್ಲಿ ಶ್ರದ್ಧೆಯ ಗಾಢತೆ


 

            ಯಕ್ಷಗಾನವು ಜಾನಪದ ಕಲೆ, ಆರಾಧನಾ ಕಲೆ ಮೊದಲಾದ ವೈಚಾರಿಕ ನಿಲುವುಗಳು ನಾನು ಕಣ್ತೆರೆದು ಯಕ್ಷಗಾನವನ್ನು ನೋಡುವ ಕಾಲದಿಂದಲೂ ಇದ್ದುವು. ಈಗಲೂ ಇದೆ, ಮುಂದೆಯೂ ಇರುತ್ತದೆ! ಅಭಿಪ್ರಾಯಗಳು, ಭಿನ್ನಾಭಿಪ್ರಾಯಗಳು ಏನೇ ಇರಲಿ ಯಕ್ಷಗಾನದ ಮೇಲಿನಶ್ರದ್ಧೆ, ಅಭಿಮಾನ, ಗೌರವಗಳನ್ನು ಒಪ್ಪದಿರಲು ಅಸಾಧ್ಯ.
                ಜನಪದರ ಜಾನಪದೀಯ ಅಂಶಗಳು ಕಲೆಯೊಳಗೆ ಆಯಾಯ ಕಾಲಕ್ಕೆ ಮಿಳಿತಗೊಳ್ಳುತ್ತಾ ಬಂದಿವೆ. ಅದೇ ಪ್ರಮಾಣದಲ್ಲಿ ರಂಗವೂ ಪಲ್ಲಟಗೊಂಡಿವೆ. ಬಣ್ಣಗಾರಿಕೆಯಿಂದ ತೊಡಗಿ ಪಾತ್ರಾಭಿವ್ಯಕ್ತಿಯ ವರೆಗೆ ಆವಿಷ್ಕಾರಗಳಾಗಿವೆ. ಜತೆಜತೆಗೆ ಜನರ ಮನಃಸ್ಥಿತಿಗಳೂ ವ್ಯತ್ಯಯಗೊಂಡಿವೆ. ಕಲೆಯೊಂದರ ಎಲ್ಲಾ ಮಗ್ಗುಲುಗಳಲ್ಲಿ ಬದಲಾವಣೆ, ಆವಿಷ್ಕಾರಗಳಾದರೂ ಹಿಂದಿರುವ ಆರಾಧನಾ ಭಾವಗಳು ವ್ಯತ್ಯಸ್ಥಗೊಂಡಿಲ್ಲ.
                ಶ್ರೀ ಕಟೀಲು ಮೇಳವು .2ರಂದು ಅದ್ದೂರಿಯಿಂದ ಶುಭಾರಂಭ ಮಾಡಿದೆ. ಎರಡು ದಿವಸದ ಮೊದಲು, ನಂತರ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿದ್ದ ಸಂದೇಶಗಳನ್ನು ನೋಡಿ ಬೆರಗಾದೆ. ಕಲೆಯ, ಕ್ಷೇತ್ರದ, ಕಲಾವಿದರ ಮೇಲಿನ ಅಭಿಮಾನ, ಗೌರವಗಳು ಖುಷಿ ನೀಡಿತು. ಮೇಳವೊಂದು ಗೆಜ್ಜೆಕಟ್ಟಿ ದಿಗ್ವಿಜಯಕ್ಕೆ ಹೊರಡುವ ಕ್ಷಣದಲ್ಲಿ ವಿಧಿವಿಧಾನಗಳು ನಡೆಯುತ್ತವೆ. ಅವನ್ನೆಲ್ಲಾ ಹಿರಿಯರು ರೂಢಿಸಿಕೊಂಡು ಆರಾಧನಾ ಪ್ರಕ್ರಿಯೆಗಳನ್ನು ಹೊಸೆದರು. ಅನೂಚಾನವಾಗಿ ರೂಢಿತ ವಿಧಾನಗಳು ಪಾಲಿತವಾಗುತ್ತಾ ಬರುತ್ತಿವೆ. ಇದೇ ಅಲ್ವಾ ಪರಂಪರೆ.
                ಆತ್ಮೀಯರೊಬ್ಬರಲ್ಲಿ ಈಚೆಗೆ ಧರ್ಮಸ್ಥಳ ಮೇಳದ ಬಯಲಾಟ ಸಂದರ್ಭ. ಮಧ್ಯಾಹ್ನ ಮೇಳದ ದೇವರಿಗೆ ವಿಧಿವತ್ತಾದ ಆರಾಧನೆ. ಅತಿಥಿಗಳಿಗೆ ಸಮಾರಾಧನೆ. ಸಂಜೆ ಚೌಕಿಗೆ ದೇವರು ಆಗಮಿಸುವಾಗ ಅನಾವರಣಗೊಳ್ಳುವ ಭಾವಶಿಲ್ಪಗಳು. ಬಣ್ಣದ ಮನೆಯಲ್ಲಿ ದೇವರು ಆರೂಢವಾದಾಗ ಉಂಟಾಗುವ ಭಕ್ತಿಯ ಪುಳಕಗಳು. ಹಣ್ಣುಕಾಯಿ ನೈವೇದ್ಯಗಳು. ಪ್ರಸಾದ ವಿತರಣೆ. ಇವೆಲ್ಲ ಕಲೆಯೊಂದರ ಹಿಂದಿರುವ ಜ್ಞಾತ, ಅಜ್ಞಾತ ವಿಚಾರಗಳು. ವ್ಯವಸ್ಥೆಯ ಅಡಿಗಟ್ಟಿನಲ್ಲಿ ಇಂತಹ ನಂಬುಗೆಗಳಲ್ಲಿ ಮೇಳದ ಅಸ್ತಿತ್ವವಿದೆ. ಮೇಳವೊಂದರ ಸಜೀವತೆಯ ಜೀವವಿದೆ. 
                ಕಾಸರಗೋಡು ಜಿಲ್ಲೆಯ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದಮಲ್ಲ ಮೇಳವು ಹಲವು ವರುಷಗಳಿಂದ ಬಯಲಾಟವನ್ನು ಪ್ರದರ್ಶಿಸುತ್ತಿದೆ. ಎಲ್ಲವೂ ಹರಕೆ ಆಟಗಳು. ಕೇರಳ, ಕರಾವಳಿಯ ಆಸ್ತಿಕ ಮಂದಿ ನಿಯಮಿತವಾಗಿ ಆಟ ಆಡಿಸುವವರಿದ್ದಾರೆ. ಗೆಜ್ಜೆ ಕಟ್ಟುವ ದಿವಸ ಕಲಾವಿದರ ಹುಮ್ಮಸ್ಸು, ಭಕ್ತಿಗಳನ್ನು ಹತ್ತಿರವಿದ್ದು ಗಮನಿಸಬೇಕು. ‘ಇದು ನಮ್ಮ ಮೇಳವೆಂಬ ನಂಬುಗೆ. ಶ್ರೋತೃಗಳಿಗೆ ಬಿಡಿ, ಕಲಾವಿದರಿಗೆಇದು ನಮ್ಮ ಮೇಳಎನ್ನುವ ಭಾವ ಗಟ್ಟಿಯಾದರೆ ಅದುವೇ ಸಡಗರ, ಸಂಭ್ರಮ. ಮೇಳವೊಂದಕ್ಕೆ ಕಲಾವಿದರ ಕೊಡುಗೆ.
                ನಮ್ಮ ನಡುವೆ ಇರುವ ತೆಂಕು, ಬಡಗು ಮೇಳಗಳ ಚೌಕಿಯಲ್ಲಿ (ಬಣ್ಣದ ಮನೆ) ಆಯಾ ಮೇಳದ ಆರಾಧ್ಯ ದೇವರ ಆರಾಧನೆಯಾಗುತ್ತದೆ. ದೇವರ ಮುಂದೆ ಸ್ತುತಿ ಪದ್ಯದ ಬಳಿಕವೇ ರಂಗಕ್ಕೆ ಪ್ರವೇಶ. ಕೊನೆಗೆ ಮಂಗಳವೂ ಇಲ್ಲೆ ನಡೆಯಬೇಕು. ಇದು ಪದ್ಧತಿ. ಕಾಲ ಬದಲಾಗಿದೆ ಎನ್ನುತ್ತಾ ಪದ್ಧತಿಯನ್ನು ಬದಲಾಯಿಸಲು ಬರುವುದಿಲ್ಲ. ಕಾರಣ, ಕಲಾ ಜೀವನದೊಂದಿಗೆ ಬೆಸೆದುಕೊಂಡ ಧಾರ್ಮಿಕ ನಂಬುಗೆ. ಇದು ಇಲ್ಲದಿರುತ್ತಿದ್ದರೆ ಮುಖ್ಯವಾಗಿ ಯಕ್ಷಗಾನದಲ್ಲಿ ಪ್ರಾಯಃ ಈಗಿರುವ ಸಡಗರ ಇದ್ದಿರಲಾರದೋ ಏನೋ.
                ಹವ್ಯಾಸಿ ಕ್ಷೇತ್ರಕ್ಕೆ ಬಂದಾಗ ಗ್ರಾಮದ ಅಧಿದೇವತೆಯ ಆರಾಧನೆ. ಬಾಳೆ ಎಲೆಯ ಮೇಲೆ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ನಾಣ್ಯ.. ಇವಿಷ್ಟಿದ್ದರೆ ದೇವತಾ ಸಾನ್ನಿಧ್ಯ ಪ್ರಾಪ್ತಿ. ಬೆಳಗ್ಗಿನವರೆಗೆ ದೀಪ ಬೆಳಗುತ್ತಿರಬೇಕೆಂಬ ಹಿರಿಯರ ಆಗ್ರಹ. ತಪ್ಪಿ ಎಲ್ಲಾದರೂ ದೇವರ ಪೀಠದ ಮೇಲಿಟ್ಟಿರುವ ಬಾಳೆಹಣ್ಣನ್ನು ತೆಗೆದರೆ ಕೆರಳುತ್ತಿದ್ದ ಹಿರಿಯ ಕಲಾವಿದರು ನೆನಪಾಗುತ್ತಾರೆ. ಇವೆಲ್ಲಾ ಕಲೆಯ ಮನೆಯಲ್ಲಿ ಸ್ಥಾಪಿತವಾದ ನಂಬುಗೆಗಳು, ಆಚರಣೆಗಳು. ನಂಬುಗೆಗಳನ್ನು ಪ್ರಶ್ನಿಸಕೂಡದು! ಒಪ್ಪಿ ಅನುಷ್ಠಾನಿಸುವುದು ಕಲಾ ಬದ್ಧತೆ ಅಲ್ವಾ. ನಿಜ ಜೀವನದಲ್ಲೂ ಬದ್ಧತೆಗಳು ಹಾಸುಹೊಕ್ಕಾಗಿದೆ. ಯಾವಾಗ ಪ್ರಶ್ನಿಸುವ ಮನೋಭಾವ ಚಾಳಿಯಾದುವೋ ಆಗ ಬದುಕಿನ ಸುಭಗತನಗಳು ಇಳಿಲೆಕ್ಕಕ್ಕೆ ಜಾರಿದುವು.
                ವೇಷಧಾರಿಗಳು ರಂಗಪ್ರವೇಶಿಸುವಾಗ ಚೌಕಿಯಲ್ಲಿ ದೇವರಿಗೆ ನಮಸ್ಕಾರ ಮಾಡಿ, ಹಿರಿಯರಿಗೆ ವಂದಿಸುವ ರೂಢಿಯು ಮೇಳಗಳಲ್ಲೂ, ಹವ್ಯಾಸಿ ಆಟಗಳಲ್ಲೂ ಚಾಲ್ತಿಯಲ್ಲಿದೆ. ವೇಷಗಳು ರಂಗಸ್ಥಳಕ್ಕೆ ಪ್ರವೇಶ ಮಾಡುವಾಗಲೂ ನೆಲಸ್ಪರ್ಶಿಸಿ ವಂದಿಸಿದ ಬಳಿಕವೇ ರಂಗ ಪ್ರವೇಶ. ಕಾಲಿಗೆ ಗೆಜ್ಜೆ ಕಟ್ಟುವಾಗ, ವೇಷ ಕಳಚಿ ಗೆಜ್ಜೆ ಬಿಡಿಸುವಾಗಲೂ ಭಕ್ತಿಯ ಭಾವದ ವಂದನೆ. ಚೌಕಿ, ರಂಗಸ್ಥಳ, ವೇಷಕ್ಕೆ ಧರಿಸುವ ಎಲ್ಲಾ ಪರಿಕರಗಳಲ್ಲೂ ಗೌರವ ಮೂಡಿಸುವ ಆರಾಧನಾ ವಿಧಾನವು ಕಲಾಯಾನದಲ್ಲಿ ಅಂಟಿಕೊಂಡಿದೆ.
                ತರಬೇತಿ ಕೇಂದ್ರಗಳಲ್ಲಿ ರಂಗಪ್ರವೇಶ ಮಾಡಿಸುವ ದಿವಸ ಚೌಕಿಯನ್ನೊಮ್ಮೆ ಗಮನಿಸಿ. ಚಿಣ್ಣರಿಗಂದು ಕುತೂಹಲ, ಕಾತರ, ಗಾಬರಿ! ಮಕ್ಕಳ ಹೆತ್ತವರು ಚೌಕಿಯಲ್ಲಿ ತುಂಬಿರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಹಿರಿಯರ ಪಾದಸ್ಪರ್ಶಿಸಿ, ನಮಸ್ಕರಿಸಿ, ಗೆಜ್ಜೆಯನ್ನು ಅವರ ಕೈಗೆ ಕೊಟ್ಟು ವಂದಿಸಿ, ಬಳಿಕ ಪಡೆದು ಗೆಜ್ಜೆ ಕಟ್ಟುವ ಪರಿಪಾಠವಿದೆ. ಕಾಲಿಗೆ ಗೆಜ್ಜೆ ಕಟ್ಟುವ ಪ್ರಕ್ರಿಯೆಯ ಹಿಂದೆ ಹಿರಿಯರು ಹಾಕಿದ ಹಾದಿಯಲ್ಲಿ ಭಕ್ತಿಯ ಬುನಾದಿಯಿದೆ. ಭಯ, ಭಕ್ತಿ, ಶ್ರದ್ಧೆಗಳು ಕಲಾವಿದನಲ್ಲಿ ರೂಢಿತವಾದರೆ ಕಲೆಯು ಬಹುಬೇಗ ಒಲಿಯುತ್ತದೆ -  ಹಿರಿಯರು ಹೇಳುತ್ತಿದ್ದ ಶುಭವಾಕ್ಯಗಳ ಹಿಂದೆ ಮಹತ್ತಿದೆ.
                ತಾಳಮದ್ದಲೆಗಳಲ್ಲಿ ಕೂಡಾ ಭಕ್ತಿ, ಶ್ರದ್ಧೆಯನ್ನು ಕಾಣಬಹುದು. ಗಣಪತಿ ಸ್ತುತಿ ಹಾಡುವ ಮೊದಲು ಹಿಮ್ಮೇಳದವರು ಪರಸ್ಪರ ಚೆಂಡೆ, ಮದ್ದಲೆ, ಜಾಗಟೆಯನ್ನು ಸ್ಪರ್ಶಿಸಿ ಎದೆಗೆ, ಹಣೆಗೊತ್ತಿಕೊಳ್ಳುತ್ತಾರೆ. ಅರ್ಥದಾರಿಗಳು ಕೂಡಾ ಅರ್ಥಕ್ಕೆ ಕುಳಿತುಕೊಳ್ಳುವಾಗ ಹಿಮ್ಮೇಳಕ್ಕೆ ವಂದಿಸಿದ ಬಳಿಕವೇ ಅರ್ಥ ಹೇಳುತ್ತಾರೆ. ಕೀರ್ತಿಶೇಷ ಮಲ್ಪೆ ರಾಮದಾಸ ಸಾಮಗರು ತಮ್ಮ ಅರ್ಥ ಆರಂಭವಾಗುವ ಮೂರ್ನಾಲ್ಕು ನಿಮಿಷವಿರುವಾಗಲೇ ಪಡಿಮಂಚವನ್ನು ಏರಿ, ಹಿಮ್ಮೇಳಕ್ಕೆ, ಸಭಾಸದರಿಗೆ ಕೈಮುಗಿದು ವಂದಿಸಿದ ಬಳಿಕವೇ ಅರ್ಥ ಶುರುಮಾಡುತ್ತಿದ್ದರು. ಚಿತ್ರಣದಲ್ಲಿ ತುಂಬಿದ ಬೌದ್ಧಿಕ ಸಾಮಥ್ರ್ಯವನ್ನು ಗ್ರಹಿಸಲು ಸಾಧ್ಯವಿತ್ತು.
                ಈಚೆಗಿನ ದಿವಸಗಳಲ್ಲಿ ವಂದಿಸುವ ಪರಂಪರೆ ಯಾಕೋ ಕ್ಷೀಣವಾದಂತೆ ಕಾಣಿಸುತ್ತದೆ. ಇಲ್ಲವೆಂದಲ್ಲ. ಬಹುತೇಕ ವಿದ್ಯಾವಂತರೆನಿಸಿಕೊಂಡವರಿಗೆ, ‘ಇದರಲ್ಲಿ ಅರ್ಥವಿಲ್ಲವೆಂದು ಕಂಡಿತೋ ಏನೋ? ನಮಸ್ಕರಿಸದೆ ಅರ್ಥ ಹೇಳಿದ್ದರಿಂದ ಯಾವುದೇ ಶಾಪ ತಟ್ಟದು. ಅರ್ಥದಲ್ಲೂ ವ್ಯತ್ಯಾಸಗೊಳ್ಳದು. ಅದು ಅವರವರ ನಂಬುಗೆ. ಆದರೆ ಅನುಸರಿಸುತ್ತಾ ಬಂದಿರುವ ಒಂದು ಕಲಾ ಪ್ರಾಕಾರದ ನಂಬುಗೆಗೆ ತಮ್ಮ ಬೌದ್ಧಿಕ ದಾಷ್ಟ್ರ್ಯವನ್ನು ಸ್ಪರ್ಶಿಸುವ ಹಠ ಯಾಕೆಂದು ಅರ್ಥವಾಗುತ್ತಿಲ್ಲ. ಬಹುಶಃ ಸ್ವ-ಸ್ಥಾಪಿತ ಮನಸ್ಥಿತಿ ಇರಬಹುದೋ ಏನೋ. ಕಲಾ ಕ್ಷೇತ್ರದಲ್ಲಿ ರೂಢಿತವಾದ ಸತ್ ಸಂಪ್ರದಾಯವನ್ನು ಪಾಲಿಸುವುದು ಕೂಡಾ ಕ್ಷೇತ್ರದ ಅಭಿವೃದ್ಧಿಗೆ ನಾವು ಕೊಡುವ ಕಾಣ್ಕೆಯಾಗುತ್ತದೆ.
                ಹರಕೆ ಆಟಗಳತ್ತ ಕತ್ತು ತಿರುಗಿಸಿ. ಅದ್ದೂರಿ, ಗೌಜಿ, ದುಂದುವೆಚ್ಚ... ಗೊಣಗಾಟದ ಮಾತನ್ನು ಕೇಳುತ್ತೇವೆ. ಸರಿ, ಒಂದು ಕ್ಷಣ ಇವನ್ನೆಲ್ಲಾ ಮರೆತುಬಿಡಿ. ಮುಂದಿನ ಹತ್ತಾರು ವರುಷಗಳ ಆಟಗಳು ಈಗಾಗಲೇ ಬುಕ್ ಆಗಿರುವುದನ್ನು ಗಮನಿಸಿದಾಗ ಕಲೆಯ ಮೇಲೆ ಭಕ್ತಿಯ ಅರಿವಾಗುತ್ತದೆ. ಯಕ್ಷಗಾನದಂತಹ ಕಲೆಯು ಕಷ್ಟ-ಕಾರ್ಪಣ್ಯವನ್ನು ಬಗೆಹರಿಸಿದೆ. ಇಷ್ಟಾನಿಷ್ಟಗಳಿಗೆ ಸ್ಪಂದಿಸಿದೆ. ಬದುಕು ಹಸನಾಗಿದೆ. ಉದ್ದೇಶ ಸಿದ್ಧಿಸಿದೆ. ಇವರೆಲ್ಲರ ಬದುಕಿನಲ್ಲಿ ಹರಕೆಗಳು ಫಲಿತವಾಗಿದೆ. ಕಲೆಯೇ ಧಾರ್ಮಿಕತೆ, ಧಾರ್ಮಿಕತೆಯೇ ಕಲೆ. ಒಂದನ್ನು ಬಿಟ್ಟು ಒಂದಿರಲಾರದು. ಕಲೆ, ಧಾರ್ಮಿಕತೆ ಎರಡು ಪದಗಳಿಗೆ ವಿಪರೀತಾರ್ಥವನ್ನು ಹುಡುಕಬೇಕಾಗಿಲ್ಲ. ಕಲೆಯ ಬಲೆಯೊಳಗೆ ಬಂಧಿಯಾಗಿರುವ ಅರ್ಥವ್ಯಾಪ್ತಿಯನ್ನು ಗ್ರಹಿಸಿದರೆ ಸಾಕು. ಶ್ರದ್ಧೆ ಮತ್ತು ಭಕ್ತಿಯ ತಾಕತ್ತು ಅರ್ಥವಾಗುತ್ತದೆ. ಇವೆರಡರ ಮಧ್ಯೆ ಕಲೆಯೊಂದು ಶಾಶ್ವತವಾಗಿ ಉಸಿರಾಡುತ್ತದೆ.
                ಉಸಿರಿಗೆ ಕಲಾವಿದರು ಅಂದವನ್ನು ನೀಡುತ್ತಾರೆ, ನೀಡಬೇಕು. ವೈಯಕ್ತಿಕವಾದ ಹಿತಾಸಕ್ತಿಗಳು ಏನೇ ಇರಲಿಚೌಕಿ, ರಂಗ, ತಾವು ನಿರ್ವಹಿಸುವ ಪಾತ್ರಗಳನ್ನು ಪ್ರೀತಿಸಿದರೆ ಸಾಕು, ಇದಕ್ಕಿಂತ ಹೆಚ್ಚು ಯಕ್ಷಗಾನವು ಕಲಾವಿದರಿಂದ ನಿರೀಕ್ಷಿಸುವುದಿಲ್ಲ. ಬಹುತೇಕರಿಗೆ ಯಕ್ಷಗಾನವುಹೊಟ್ಟೆಪಾಡುಎಂದು ಗೊತ್ತಿದೆ. ಗೊತ್ತಿದ್ದೂ  ಗೊತ್ತಿಲ್ಲದಂತೆ ವರ್ತಮಾನದ ರಾಗವಿಕಾರಗಳಿಗೆ ಮನಃಸ್ಥಿತಿಯನ್ನು ಟ್ಯೂನ್ ಮಾಡಿಕೊಂಡಿರುವ ಕೆಲವರ ವರ್ತನೆಗಳನ್ನು ನೋಡುವಾಗ ಮರುಕವಾಗುತ್ತದೆ. ಕಲಾವಿದರಿಲ್ಲದೆ ಕಲೆಯಿಲ್ಲ, ಕಲೆಗೆ ಕಲಾವಿದರು ಬೇಕು. ಎರಡೂ ಹೊಕ್ಕುಳ ಬಳ್ಳಿಗಳು.
(ಸಾಂದರ್ಭಿಕ ಚಿತ್ರ : ಕೃಪೆ ಜಾಲತಾಣ)
ಪ್ರಜಾವಾಣಿ / ದಧಿಗಿಣತೋ / 6-12-2018

No comments:

Post a Comment