ಕೊರಿಯಾ ರಾಷ್ಟ್ರದ ಕಲಾಪ್ರಿಯ ಯಂಗ್ಸೂನ್ ಕೊ ಕುಟುಂಬದೊಂದಿಗೆ ರಮೇಶ್
ಅಹಮದಾಬಾದಿನಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡದ ಪ್ರದರ್ಶನ. ಪ್ರಸಂಗ : ಗರುಡ ಗರ್ವಭಂಗ. ಕಾರ್ಯಕ್ರಮಕ್ಕೆ ಮಂಗಳ ಹಾಡಿ ಹೊರಗೆ ಕಾಲಿಡುವಷ್ಟರಲ್ಲಿ ಕಲಾಪ್ರಿಯರೊಬ್ಬರು ಶಿರಬಾಗಿ ವಂದಿಸಿದರು. ಒಂದು ಕ್ಷಣ ರಮೇಶ್ ತಬ್ಬಿಬ್ಬು! “ನಿಮ್ಮ ಬೊಂಬೆಗಳು ಮಾತನಾಡ್ತವೆ. ಸುಂದರವಾಗಿವೆ” ಎಂದರಂತೆ. ಅವರು ಯಾಕೆ ಅಷ್ಟೊಂದು ವಿನೀತದಿಂದ ನಮಸ್ಕರಿಸಿದರು - ಇನ್ನೂ ಬಿಡಿಸಲಾಗದ ಚೋದ್ಯ! “ಕಲೆಯೊಂದು ಮನಸ್ಸನ್ನಾವರಿಸಿದ ಬಗೆ ಮತ್ತು ಅವರೊಳಗೆ ಕಲೆಯು ವಿನೀತತೆಯನ್ನು ಬೆಸೆದಿರಬೇಕು.” ಎನ್ನುತ್ತಾರೆ ರಮೇಶ್.
ಅಹಮದಾಬಾದಿನಲ್ಲಿ ಕನ್ನಡದಲ್ಲಿ ಪ್ರಸ್ತುತಿಯಾಗಿದ್ದ ಯಕ್ಷಗಾನ ಬೊಂಬೆಯಾಟಕ್ಕೆ ಬೆರಗಿನ ಸ್ವಾಗತ. ನಲವತ್ತು ನಿಮಿಷಗಳ ಪ್ರದರ್ಶನ. ಪ್ರತಿ ಸನ್ನಿವೇಶಕ್ಕೂ ಸ್ಪಂದನಗಳ ಮಹಾಪೂರ. ಕೊರಿಯಾದ ಕಲಾಭಿಮಾನಿ ಯಂಗ್ಸೂನ್ ಕೊ ಬೊಂಬೆಗಳ ಅಂದಕ್ಕೆ ಮಾರುಹೋದರು. ಜಾಲತಾಣದಿಂದ ಇಳಿಸಿದ ಬೊಂಬೆಗಳ ಮಾಹಿತಿಗಳ ಪ್ರಿಂಟ್ಔಟಿಗೆ ರಮೇಶರ ಸಹಿಗಳನ್ನು ಪಡೆಯಲು ಪೈಪೋಟಿ! “ಕಲೆಯೊಂದಕ್ಕೆ ಭಾಷೆಗಳ ಹಂಗಿಲ್ಲ. ಅಹಮದಾಬಾದಿನ ಕಲಾ ಮನಸಿಗರು ಯಕ್ಷಗಾನವನ್ನು ಸ್ವೀಕರಿಸಿದ್ದಾರೆ, ಆಸ್ವಾದಿಸಿದ್ದಾರೆ. ಅಲ್ಲಿನ ಪತ್ರಿಕೆಗಳು ಉತ್ತಮ ರೀತಿಯಲ್ಲಿ ಬೊಂಬೆಗಳಿಗೆ ಮಾತು ಕೊಟ್ಟಿದ್ದಾರೆ.” ಕೆ.ವಿ.ರಮೇಶ್ ಖುಷಿಯನ್ನು ಹಂಚಿಕೊಂಡರು. ತಂಡಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಆಶ್ರಯ. ಸೆ.24 ರಿಂದ 28ರ ತನಕ ‘ಭಾರತ ಸಾಂಸ್ಕøತಿಕ ವೈಭವ’ ಸಂಪನ್ನವಾಗಿತ್ತು.
ಚೀನಾಕ್ಕೆ ಹೋದಾಗಲೂ ವಿಶಿಷ್ಟ ಅನುಭವ. “ಪ್ರದರ್ಶನದ ದಿವಸ. ಬೊಂಬೆಯಲು ಕುಣಿಯಲು ಸಿದ್ಧವಾಗಿದ್ದುವು. ಎಲ್ಲಾ ವ್ಯವಸ್ಥೆಗಳು ಮುಗಿದಿದ್ದುವು. ಫೋಟೋ ತೆಗೆಸಿಕೊಳ್ಳುವವರು, ಅವಿರತವಾಗಿ ಪ್ರಶ್ನೆಗಳನ್ನು ಮಾಲೆ ಮಾಲೆಯಾಗಿ ಕೇಳುವವರು – ಇವರಿಗೆಲ್ಲಾ ಉತ್ತರ ಹೇಳಿ ಸುಸ್ತಾಗಿತ್ತು. ಜತೆಗೆ ಭಾಷೆಯ ಸಮಸ್ಯೆಯೂ ಕಾಡುತ್ತಿತ್ತು. ಹೇಗೋ ಸುಧಾರಿಸಿದೆ. ಅಲ್ಲೇ ಒಂದೆಡೆ ತರುಣಿಯರಿಬ್ಬರು ನನ್ನನ್ನೇ ದಿಟ್ಟಿಸುತ್ತಿದ್ದರು. ಯಾಕೆಂದು ಅರ್ಥವಾಗಲಿಲ್ಲ. ಅವರಿಗೆ ಏನೋ ಮಾತನಾಡಲು ಇದೆಯೋ ಏನೋ? ಅವರ ಬಳಿಗೆ ಹೋದೆ. ಅವರ ಇಂಗ್ಲೀಷ್ ಅರ್ಥವಾಗಲಿಲ್ಲ. ಮೂಕ ಭಾಷೆಯ ಪ್ರಯೋಗ! ಕೊನೆಗೆ ಅರಿತೆ, ಬೊಂಬೆಗಳ ಜತೆ ನಿಂತು ಅವರಿಗೆ ಫೋಟೋ ತೆಗೆಸಿಕೊಳ್ಳಬೇಕಿತ್ತಂತೆ. ಅದನ್ನು ಹೇಳಲು ಆಗದೆ ಮುಜುಗರದಿಂದ ಒದ್ದಾಡುತ್ತಾ ಇದ್ದರು. ನನ್ನಲ್ಲೂ ಭಾಷೆಯ ಒದ್ದಾಟವೂ ಇತ್ತೆನ್ನಿ! ಕೊನೆಗೆ ಹತ್ತಾರು ಫೋಟೋ ಕ್ಲಿಕ್ಕಿಸಿಗೊಂಡು ತೃಪ್ತಿಯಿಂದ ಕೈ ಬೀಸಿ ಹೋದರು. ಅಂದರೆ ಯಕ್ಷಗಾನದಂತಹ ಅಲೌಕಿಕ ಕಲೆಯು ವಿದೇಶಿಯರನ್ನು ಸೆಳೆದ ಬಗೆಗೆ ಮೂಕನಾಗಿದ್ದೆ. ಅವರು ಯಕ್ಷಗಾನವನ್ನು ಪ್ರೀತಿಸಿದರೋ ಬಿಟ್ಟರೋ ಮುಖ್ಯವಲ್ಲ. ಕಲೆಯನ್ನು ಅಲ್ಲಿಯವರು ನೋಡುವ ಮನಸ್ಸಿನಲ್ಲೂ ಕಲೆಯ ಸ್ಪರ್ಶವಿದೆ.” ಎನ್ನುತ್ತಾರೆ.
ಅಹಮದಾದ್, ಚೀನಾದ ಸುದ್ದಿಯನ್ನು ಹೇಳುತ್ತಾ ರಮೇಶ್ ತಮ್ಮ ಕಲಾಯಾನದ ಹಿನ್ನೋಟದ ಕೆಲವು ಘಟನೆಗಳತ್ತ ಹೊರಳಿದರು. ಒಂದೆಡೆ ಭಾರತದ ಕಲಾ ಮನಸಿಗರು. ಮತ್ತೊಂದೆಡೆ ವಿದೇಶಿ ಆಸಕ್ತರು. ಇಬ್ಬರ ಆಸಕ್ತಿಗಳು ಒಂದೇ. ನೋಡುವ ನೋಟ ಮಾತ್ರ ವಿಭಿನ್ನ. ಬೊಂಬೆಯಾಟ ಸಂಘದ ಚಟುವಟಿಕೆಗಳ ವೀಕ್ಷಣೆಗೆ ಫ್ರಾನ್ಸಿನಿಂದ ವಿದ್ಯಾರ್ಥಿಗಳಿಬ್ಬರು ಆಗಮಿಸಿದ್ದರು. ಕಾಸರಗೋಡು ಹೊಸ ಊರು, ಹೊಸ ಭಾಷೆ. ಹೊಸ ಸಂಸ್ಕøತಿ! ಸಂವಹನ ಕಷ್ಟವಾಯಿತು. ರಮೇಶ್ ಹೇಗೋ ಸುಧಾರಿಸಿಕೊಂಡರು. ಒಂದೇ ದಿನದಲ್ಲಿ ದೇಶ, ಭಾಷೆಯನ್ನು ಮೀರಿದ ಕಲೆಯು ಸಂವಹನ ಬೆಳೆಸುವಷ್ಟು ಭಾಷೆಯನ್ನು ಕಲಿಸಿತ್ತು!
ಇಲ್ಲಿನ ಜನಜೀವನ, ಆಹಾರ ಪದ್ಧತಿಗಳು ಫ್ರಾನ್ಸ್ ಅತಿಥಿಗಳಿಗೆ ಪರಿಚಯವಿಲ್ಲ. ಇವರು ಮನೆಯೊಳಗೆ ಕಾಲಿಡುತ್ತಿದ್ದಂತೆ ದಿಗಿಲು! ಸಂಶಯ ಪಿಶಾಚಿ ಬೆನ್ನೇರಿತ್ತು. ರಮೇಶ್ ಹೇಳುತ್ತಾರೆ, “ನಮ್ಮನ್ನು ಮನುಷ್ಯರಂತಲ್ಲ, ಪ್ರಾಣಿಗಳನ್ನು ನೋಡಿದ ಹಾಗೆ ನೋಡುತ್ತಿದ್ದ ಮುಖಭಾವ ಇನ್ನೂ ಮರೆತಿಲ್ಲ. ಶೌಚಕ್ಕೆ, ಸ್ನಾನಕ್ಕೆ ಹೋಗುವಾಗಲೆಲ್ಲಾ ಅವರ ಕೈಚೀಲ ಹೆಗಲಲ್ಲೇ ತೂಗುತ್ತಿತ್ತು! ಹೊರಗೆ ಬಿಟ್ಟು ಹೋಗುವಷ್ಟೂ ಧೈರ್ಯ ಕಳೆದುಕೊಂಡಿದ್ದರು. ಯಾಕೀ ಸಂಶಯ? ಸಮಯ ಸರಿದಂತೆ ನಮ್ಮ ವರ್ತನೆ, ಸಂಘದ ಚಟುವಟಿಕೆ, ಮನೆ ಮಂದಿಯ ಆತಿಥ್ಯವನ್ನು ಅನುಭವಿಸುತ್ತಾ ಅರ್ಧ ದಿವಸದಲ್ಲೇ ನಮ್ಮವರಾಗಿಬಿಟ್ಟರು.”
ಇಂತಹ ಸಂಶಯವು ಅವರಲ್ಲಿ ಯಾವ ಭಾವವನ್ನು ಮೂಡಿಸಿದ್ದಿರಬಹುದು? “ನಾನು ಪ್ರಶ್ನಿಸಿದ್ದೆ. ಉತ್ತರವನ್ನು ಕೇಳಿ ಆಶ್ಚರ್ಯವಾಯಿತು. ಭಾರತದಲ್ಲಿ ಪ್ರಾಮಾಣಿಕತೆಯಿಲ್ಲ. ಎಲ್ಲೆಲ್ಲೂ ಮೋಸ, ವಂಚನೆ. ಹೆಣ್ಣನ್ನು ಕಂಡರೆ ಅಮಾನುಷವಾಗಿ ವರ್ತಿಸುತ್ತಾರೆ. ವಿದೇಶಿಯರೆಂದರೆ ಅನಾದರ... ಇವೇ ಮೊದಲಾದ ಭಾವಗಳನ್ನು ಅಲ್ಲಿನ ಮಾಧ್ಯಮಗಳು ಬಿಂಬಿಸುತ್ತಲೇ ಇವೆಯಂತೆ. ಇದನ್ನು ನೋಡುತ್ತಾ ನೋಡುತ್ತಾ ಭಾರತದ, ಭಾರತೀಯರ ಕುರಿತು ಕೆಟ್ಟ ಭಾವನೆಯ ಮನಸ್ಥಿತಿಯನ್ನು ಹೊಂದಿದ್ದರು.”
ರಮೇಶರ ಮನೆಯವರ ವರ್ತನೆ, ಆತಿಥ್ಯ ಮತ್ತು ಕಲಾ ಸಂಸ್ಕøತಿಯ ಅನುಷ್ಠಾನವನ್ನು ನೋಡುತ್ತಾ ನೋಡುತ್ತಾ ಬದಲಾದರು. ತಮ್ಮ ಆರಂಭದ ವರ್ತನೆಗೆ ತಾವೇ ನಾಚಿಕೊಂಡರು. ಒಂದೇ ದಿವಸದಲ್ಲಿ ಮನೆಯವರಾದರು. ತಮ್ಮ ತಲೆಯೊಳಗೆ ಭಾರತದ ಕುರಿತು ಹರಿಯಬಿಟ್ಟ ಅಸತ್ಯದ ಹುಳ ಸತ್ಯವಲ್ಲ ಎಂದು ಮನವರಿಕೆಯಾಯಿತು. ಅತಿಥಿಗಳನ್ನು ರಮೇಶರು ಪೈವಳಿಕೆಯ ದೇವಕಾನ ಕೃಷ್ಣ ಭಟ್ಟರಲ್ಲಿಗೆ ಯಕ್ಷಗಾನದ ವೇಷಭೂಷಣಗಳನ್ನು ತೋರಿಸಲು ಕರೆದೊಯ್ದರು. ಯಕ್ಷಗಾನ ಪ್ರದರ್ಶನವನ್ನೂ ತೋರಿಸಿದ್ದರು. ಈ ಎಲ್ಲಾ ಮನಸ್ಥಿತಿಯನ್ನು ನೋಡುತ್ತಾ ಮರಳಿ ತಮ್ಮ ದೇಶಕ್ಕೆ ಹೋಗುವಾಗ ರಮೇಶರಿಗೆ ಏನು ಹೇಳಿರಬಹುದು? “ನಿಮ್ಮನ್ನು, ದೇಶವನ್ನು ತುಂಬಾ ಕೆಟ್ಟದಾಗಿ ಅರ್ಥ ಮಾಡಿಕೊಂಡಿದ್ದೆವು. ಹಾಗಲ್ಲ ಎನ್ನುವುದು ಅರಿವಾಯಿತು. ಭಾರತ ಸುಸಂಸ್ಕøತ ದೇಶ. ಇಲ್ಲಿ ಕಲೆಗೆ ಸ್ಥಾನವಿದೆ, ಮಾನವಿದೆ.”!
ಇಂಗ್ಲೇಂಡಿನಿಂದ ಮಹಿಳೆಯೋರ್ವರು ಅಧ್ಯಯನಕ್ಕಾಗಿ ಬಂದಿದ್ದರು. ಇವರಲ್ಲೂ ಕೂಡಾ ಮೇಲಿನಂತಹುದೇ ಭಾವವಿದ್ದರೂ ಅಷ್ಟೊಂದು ಗಾಢವಾಗಿರಲಿಲ್ಲ. ರಮೇಶರ ಅಮ್ಮನಿಗೆ ಅವರ ಭಾಷೆ ಬರುವುದಿಲ್ಲ, ಇಂಗ್ಲೇಡಿನ ಅತಿಥಿಗೆ ಇಲ್ಲಿನ ಭಾಷೆಯ ತೊಡಕು! “ಅವರು ಮನೆಯಲ್ಲಿದ್ದಷ್ಟೂ ದಿವಸ ಅಮ್ಮ ಮಾತನಾಡುತ್ತಿದ್ದರು!” ಎನ್ನುತ್ತಾರೆ ರಮೇಶ್, “ಭಾರತದಲ್ಲಿ ಇಷ್ಟೊಂದು ಪ್ರಾಮಾಣಿಕತೆ, ಕಲೆಯ ವೈಭವ, ಬದುಕಿನಲ್ಲಿ ಸಂಸ್ಕøತಿಯ ಅನುಷ್ಠಾನಗಳಿರುವುದು ನಿಜಕ್ಕೂ ಅಚ್ಚರಿ. ನಮ್ಮ ದೇಶದಲ್ಲಿ ಭಾರತವನ್ನು ಕೆಟ್ಟದಾಗಿ ಚಿತ್ರಿಸುತ್ತಾರೆ. ನಾವೆಲ್ಲಾ ಸತ್ಯವೆಂದು ನಂಬಿದ್ದೆವು. ಇಲ್ಲಿಗೆ ಬಂದಾಗ ಸತ್ಯದ ಅರಿವಾಯಿತು.”
ಈ ಎರಡು ನೈಜ ಚಿತ್ರಣವು ಭಾರತದ ಕುರಿತು ವಿದೇಶಿಯರಿಗಿದ್ದ ಭಾವಗಳ ಪ್ರಕಟೀಕರಣ. ಭಾರತವನ್ನು ತುಚ್ಛವಾಗಿ ಕಾಣುತ್ತಾರೆ ಮತ್ತು ಅದನ್ನು ಸ್ಥಾಪಿಸುತ್ತಾರೆ ಎನ್ನುವುದಕ್ಕೆ ಕಾಸರಗೋಡಿಗೆ ಬಂದ ಅತಿಥಿಗಳ ಮಾತುಗಳು ಸಾಕ್ಷಿಯಾಗಿ ನಿಲ್ಲುತ್ತದೆ. ಯಾಕೆ ಹೀಗಾಗುತ್ತಿದೆ? ನಾವು ಮಾಧ್ಯಮಗಳ ಮೇಲೆ ಗೂಬೆ ಕೂರಿಸಬಹುದು. ಇತಿಹಾಸದತ್ತ ಬೆರಳು ತೋರಬಹುದು. ಪಕ್ಕದ ರಾಷ್ಟ್ಟಗಳತ್ತ ಕತ್ತು ಹೊರಳಿಸಬಹುದು. ಇಲ್ಲಿನ ಇತಿಹಾಸ, ಸಂಸ್ಕøತಿಯನ್ನು ವಿದೇಶಿ ಮಾಧ್ಯಮಗಳು ತಮಗೆ ಬೇಕಾದಂತೆ ತಿರುಚಿ ಪ್ರಸಾರಿಸುತ್ತದೆ. ಅದಕ್ಕೆ ನಮ್ಮ ದೇಶದ ಕೆಲವು ವ್ಯವಸ್ಥೆಗಳ ಕುಮ್ಮಕ್ಕಿದೆ!
ಭಾರತದಂತಹ ಸಂಸ್ಕøತಿಭೂಯಿಷ್ಠವಾದ ದೇಶದ ನೈಜ ಸಂಪತ್ತನ್ನು ಅರಿಯದ ಅಪಕ್ವ ಮನಸ್ಸುಗಳು ವಿದೇಶಿ ನೆಲದಲ್ಲಿ ಭಾರತವನ್ನು ಹಗುರವಾಗಿ ಮತ್ತು ವ್ಯವಸ್ಥಿತವಾಗಿ ಬಿಂಬಿಸುತ್ತಾರೆ. ಅದಕ್ಕೆ ಪೂರಕವಾಗಿ ಚಿತ್ರಗಳನ್ನು, ವೀಡಿಯೋಗಳನ್ನು ಹರಿಯಬಿಡುತ್ತಾರೆ. ಇಲ್ಲಿ ನಡೆವ ಚಿಕ್ಕ ವಿದ್ಯಮಾನವನ್ನೂ ರಾಷ್ಟ್ರೀಯ ಸಮಸ್ಯೆಯೆಂದು ಚಿತ್ರಿಸುತ್ತಾರೆ. ಭಾರತದ ಮೇಲಿನ ಶ್ರದ್ಧೆಯನ್ನು ವಿದೇಶಿ ನೆಲದಲ್ಲಿ ಹಳಿಯಲಾಗುತ್ತದೆ. ಇಷ್ಟೆಲ್ಲಾ ಮಾಡುವವರು ಯಾರು? ಇದಕ್ಕೆ ಆದ್ಯತೆ ನೀಡುವವರು ಯಾರು? ಸರಿಯಾಗಿ ಪೋಸ್ಟ್ ಮಾರ್ಟಂ ಮಾಡಿದರೆ ಕಾರಣರು ನಾವೇ!
ಭಾರತವು ಜಾಗತಿಕ ಮಟ್ಟದಲ್ಲಿ ಎತ್ತರದ ಸ್ಥಾನದತ್ತ ಏರುತ್ತಿದೆ. ಭಾರತೀಯರಲ್ಲಿ ‘ನಾವು ಭಾರತೀಯರು’ ಎನ್ನುವ ಎಚ್ಚರ ಮೂಡುತ್ತಿದೆ. ಈ ಎಚ್ಚರದ ಸ್ಥಿತಿಯಲ್ಲಿ ಅಪ್ಪಟ ಭಾರತೀಯತೆಯಿದೆ, ಸ್ಥಳೀಯತೆಯಿದೆ. ಇದೇ ಭಾರತದ ಜೀವಸತ್ವ. ಇದರ ಬೆಲೆಯನ್ನು, ಮಹತ್ವವನ್ನು ಅರಿಯದೆ ಬಾಯಿಗೆ ಬಂದಂತೆ ವಿದೇಶಿ ನೆಲದಲ್ಲಿ ನಿಂತು ಭಾರತದತ್ತ ಮುಖಮಾಡಿ ಭಾರತವನ್ನು ಹಳಿಯುವ ಭಾರತೀಯ ಮನಸ್ಸುಗಳನ್ನು ನೋಡಿದಾಗ ನಾಚಿಕೆಯಾಗುತ್ತದೆ. ನಮಗೆ ನಾವೇ ಮಾಡಿಕೊಳ್ಳುವ ಅವಮಾನ.
ಕಾಸರಗೋಡಿನ ಬೊಂಬೆಯಾಟದ ಸೊಬಗನ್ನು ವೀಕ್ಷಿಸಲು ಬಂದ ವಿದೇಶಿಯರಿಗೆ ಬೊಂಬೆಗಳು ಇಲ್ಲಿನ ಸಂಸ್ಕøತಿಯನ್ನು, ಕಲೆಯ ಸೊಬಗನ್ನು ತೋರಿಸಿದೆ! ಭಾರತೀಯರೇ ಭಾರತವನ್ನು ದೂರದ ನೆಲದಲ್ಲಿ ನಿಂತು ಯಾಕೆ ಹಳಿಯುತ್ತಾರೆ ಹೇಳಿ? ಅವರ ಬದುಕಿನಲ್ಲಿ ಕಲೆಯಿಲ್ಲ. ಕಲೆಯ ಬದುಕಿಲ್ಲ. ಅವರಲ್ಲಿರುವುದು, ಬೌದ್ಧಿಕ ವಿಕಾರದ ಕಲೆ!
ಪ್ರಜಾವಾಣಿ / ದಧಿಗಿಣತೋ / 1-11-2018
No comments:
Post a Comment