ಕೀರ್ತಿಶೇಷ ಪುಟ್ಟು ನಾರಾಯಣ ಭಾಗವತರು
ತೆಂಕಬೈಲು ಭಾಗವತರಿಗೆ ಪದ್ಯಾಣ ಪ್ರಶಸ್ತಿ ಪ್ರದಾನ
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣವು ವಿದ್ಯಾವಂತರಿಂದ ಸಂಪನ್ನವಾದ ದೊಡ್ಡ ಕುಟುಂಬ. ಯಕ್ಷಗಾನ ಭಾಗವತ ಪುಟ್ಟು ನಾರಾಯಣ ಭಾಗವತರು ಕುಟುಂಬದ ಹಿರಿಯ. ಯಕ್ಷಗಾನದಲ್ಲಿ ಜನಾನುರಾಗಿ. ಇವರು ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರಿಗೆ ಗುರುಸದೃಶ. ದೊಡ್ಡ ಬಲಿಪ ನಾರಾಯಣ ಭಾಗವತರು, ಕುಂಡೆಚ್ಚ ಭಾಗವತರು ತಾವಿದ್ದ ಮೇಳಕ್ಕೆ ರಜೆಯಾದಾಗ ಪುಟ್ಟು ನಾರಾಯಣ ಭಾಗವತರು ಆ ಸ್ಥಾನವನ್ನು ತುಂಬುತ್ತಿದ್ದ ಕಾಲಘಟ್ಟವನ್ನು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಅವರಿಗೆ ನೂರಾರು ಪ್ರಸಂಗಗಳು ಕಂಠಸ್ಥವಾಗಿದ್ದುವು. ಆಗ ಯಕ್ಷಗಾನದಲ್ಲಿ ‘ಬಲಿಪ ಮತ್ತು ಅಗರಿ’ ಶೈಲಿಗಳೆರಡೇ ಪ್ರಚಲಿತವಿದ್ದುವು. ಪುಟ್ಟು ಭಾಗವತರದು ಬಲಿಪ ಶೈಲಿಯನ್ನು ಹೋಲುವ ಭಾಗವತಿಕೆ.
ಇವರು ಯಕ್ಷಗಾನಕ್ಕೆ ಗೌರವ ತಂದವರು. ಹಿರಿಯರ ಜತೆ ಒಟನಾಟವಿದ್ದವರು. ಅವರ ನಂತರದ ತಲೆಮಾರಿಗೆಲ್ಲಾ ಯಕ್ಷಗಾನವು ಆರಾಧನೆ. ಅದೇ ಉಸಿರು. ಬದುಕಿನೊಂದಿಗೆ ಮಿಳಿತವಾದ ಘಳಿಗೆ. ಕುಟುಂಬದ ಎಲ್ಲಾ ಸದಸ್ಯರಲ್ಲೂ ಕಲಾವಾಹಿನಿ ಹರಿದಿದೆ. ಭಾಗವತಿಕೆ, ಚೆಂಡೆ, ಮದ್ದಳೆ, ಸಂಗೀತ, ಭಜನೆ, ನೃತ್ಯ, ಮೃದಂಗ, ವೇಷಗಾರಿಕೆ.. ಹೀಗೆ ಒಂದೊಂದು ಆಸಕ್ತಿಗಳು.
ಪುಟ್ಟು ನಾರಾಯಣ ಭಾಗವತರ ಕುಟುಂಬದ ಒಂದು ಕವಲು ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ನೆಲೆಯಾಗಿದ್ದಾರೆ. ಪದ್ಯಾಣ ಗಣಪತಿ ಭಟ್ಟರು ದೀರ್ಘಕಾಲ ಮೇಳಗಳಲ್ಲಿ ಭಾಗವತರಾಗಿದ್ದು, ‘ಅಗರಿ ಶೈಲಿ, ಬಲಿಪ ಶೈಲಿ’ಯಂತೆ ಸ್ವ-ಸಾಧನೆಯಿಂದ ‘ಪದ್ಯಾಣ ಶೈಲಿ’ಯ ಹುಟ್ಟಿಗೆ ಕಾರಣರು ಎನ್ನುವುದು ಸ್ಥಾಪಿತವಾದ ಸತ್ಯ. ಇವರ ಸಹೋದರ ಪದ್ಯಾಣ ಜಯರಾಮ ಭಟ್ ಮದ್ದಳೆಗಾರ. ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ ಹಿಮ್ಮೇಳದ ಭಾಷಾವಿದ. ಇವರ ತಮ್ಮನ ಮಗ ಚೈತನ್ಯಕೃಷ್ಣ ಪದ್ಯಾಣ ಹನುಮಗಿರಿ ಮೇಳದಲ್ಲಿ ಚೆಂಡೆ-ಮದ್ದಳೆ ವಾದಕರು. ಹೀಗೆ ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬರದು ತ್ರಿವಿಕ್ರಮ ಹೆಜ್ಜೆ.
ಪದ್ಯಾಣ ಕುಟುಂಬದ ಕಲಾಯಾನವು ಸದಸ್ಯರಿಗೆ ಸ್ಥಾನ-ಮಾನ ನೀಡಿದೆ. ಸಾಮಾಜಿಕವಾಗಿ ಹಿರಿದಾದ ಅಂಗೀಕಾರ ಪಡೆದಿದೆ. ಬದುಕಿನಲ್ಲಿ ಕಲೆಯ ಸ್ಪರ್ಶವಿದ್ದಾಗ ಬೌದ್ಧಿಕತೆಯು ಸುಭಗತನದಿಂದ ಮಾಗುತ್ತದೆ ಎಂಬ ಸತ್ಯವನ್ನು ಅನುಭವಿಸಿದ್ದಾರೆ. ಯಕ್ಷ ಕಲೆಯು ಪದ್ಯಾಣ ಮನೆತನವನ್ನೇ ಎತ್ತರಕ್ಕೇರಿಸಿದೆ. ಇದರ ‘ಕಲಾಕೃತಜ್ಞತೆ’ಯ ದ್ಯೋತಕವಾಗಿ ಹಿರಿಯರಾದ ಪುಟ್ಟು ನಾರಾಯಣ ಭಾಗವತರ ನೆನಪಿನಲ್ಲಿ ‘ಪದ್ಯಾಣ ಪ್ರಶಸ್ತಿ’ ಸ್ಥಾಪನೆಗೊಂಡಿದೆ. ಇದು ಕೇವಲ ಪ್ರಶಸ್ತಿ ಪ್ರಕ್ರಿಯೆಗೆ ಸೀಮಿತವಲ್ಲ. ಅಶಕ್ತರಿಗೆ ನೆರವು, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಪ್ರಕಾಶನ... ಮೊದಲಾದ ಕಲೆಗೆ, ಕಲಾ ಬದುಕಿಗೆ ನೆರವಾಗುವ ಕಾರ್ಯಹೂರಣಗಳನ್ನು ಹಮ್ಮಿಕೊಂಡಿದೆ. ಕುಟುಂಬದ ಅನೇಕ ಮಂದಿ ಇಂದು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದು ಆರ್ಥಿಕವಾಗಿ ಸಬಲರಾಗಿದ್ದಾರೆ. ಇವರೆಲ್ಲರ ಸಹಕಾರಗಳು ಯೋಜಿತ ಕಾರ್ಯಗಳಿಗೆ ವಿನಿಯೋಗವಾಗುತ್ತದೆ.
2016ರಲ್ಲಿ ಮಂಗಳೂರಿನಲ್ಲಿ ಗಣಪತಿ ಭಟ್ಟರ ಅಭಿನಂದನಾ ಸಮಾರಂಭ À ‘ಪದ್ಯಾಣ ಪದಯಾನ’ ಸಂಪನ್ನವಾಗಿತ್ತು. ಮೊದಲ ಪ್ರಶಸ್ತಿಯನ್ನು ಅಗರಿ ರಘುರಾಮ ಭಾಗವತರಿಗೆ ಪ್ರದಾನ ಮಾಡಲಾಗಿತ್ತು. ಕಳೆದ ವರುಷ ಹಿರಿಯರಾದ ಬಲಿಪ ನಾರಾಯಣ ಭಾಗವತರಿಗೆ ಪ್ರಶಸ್ತಿ. ಈ ಬಾರಿ ತೆಂಕಬೈಲು ಶಾಸ್ತ್ರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ತೆಂಕುತಿಟ್ಟಿನ ಹಳೆಯ ಪಾರಂಪರಿಕೆ ಶೈಲಿಯೊಂದಕ್ಕೆ ಸಲ್ಲುವ ಗೌರವಗಳಿವು. ಬಲಿಪರಿಗೆ ಎಂಭತ್ತೊಂದು ವರುಷವಾದರೆ ತೆಂಕಬೈಲು ಶಾಸ್ತ್ರಿಗಳಿಗೆ ಎಪ್ಪತ್ತೈದು.
ಶಾಸ್ತ್ರಿಗಳ ಶಾರೀರ ಮತ್ತು ಅನುಭವಗಳ ಗಾಢತೆಯನ್ನು ಪದ್ಯಾಣ ಗಣಪತಿ ಭಟ್ಟರು ಸ್ವಾನುಭವದಿಂದ ಹೇಳುತ್ತಾರೆ, “ ಸುಮಾರು ನಾಲ್ಕೂವರೆ ದಶಕದ ಹಿಂದಿನ ನೆನಪು. ಮಿತ್ತನಡ್ಕದಲ್ಲಿ ಕುಂಡಾವು ಮೇಳದ ಆಟ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಭಾಗವತಿಕೆ. ನಾನು ಮಾಂಬಾಡಿ ನಾರಾಯಣ ಭಾಗವತರಲ್ಲಿ ಕಲಿತ ವರುಷ. ಅಂದಿನ ಆಟಕ್ಕೆ ನೆಲದಲ್ಲಿ ಕುಳಿತ ಪ್ರೇಕ್ಷಕರಲ್ಲಿ ನಾನೂ ಒಬ್ಬ. ಶಾಸ್ತ್ರಿಗಳ ‘ಮಾಯಗಾರನು ನೀನೆ ಮಹಿಮನು ನೀನೆ..’ ಎನ್ನುವ ನಾಟಿ ರಾಗದ ಪದ್ಯದ ಸೊಗಸಿಗೆ ದಿಗಿಲುಗೊಂಡಿದ್ದೆ ಎಲ್ಲಾ ಹಿರಿಯ ಭಾಗವತರ ಪದ್ಯಗಳ ಅಂದವನ್ನು ಸವಿದಿದ್ದೆ. ಆದರೆ ಶಾಸ್ತ್ರಿಗಳಷ್ಟು ಸುಮಧುರವಾದ ಈ ಪದ್ಯವನ್ನು ಬೇರಾರಲ್ಲೂ ಕೇಳಿಲಿಲ್ಲ! ಅಂದಿನಿಂದ ನಾನು ಅವರ ಅಭಿಮಾನಿಯಾದೆ.”
“ದಾಮೋದರ ಮಂಡೆಚ್ಚರು, ಅಗರಿ ಶ್ರೀನಿವಾಸ ಭಾಗವತರು, ಕಡತೋಕ ಮಂಜುನಾಥ ಭಾಗವತರು, ಬಲಿಪ ನಾರಾಯಣ ಭಾಗವತರು.. ಹೀಗೆ ಉದ್ಧಾಮ ಭಾಗವತರುಗಳ ಮಧ್ಯೆಯೂ ತೆಂಕಬೈಲು ಅವರ ಪದ್ಯಗಳು ಮಿಂಚುತ್ತಿದ್ದುವು. ಮೋಹಕ ಸ್ವರ. ಅವರ ‘ಹಿಂದೋಳ, ಮಧ್ಯಮಾವತಿ’ ರಾಗಗಳ ಹಾಡುಗಳನ್ನು ಕೇಳುವುದೇ ಆನಂದ. ಯಾರದ್ದೇ ಅನುಕರಣೆಯಿಲ್ಲದ ಸ್ವ-ಸ್ಥಾಪಿತ ಶೈಲಿ.”
ಗಣಪತಿ ಭಟ್ಟರು ಸ್ವತಃ ವೃತ್ತಿ ಭಾಗವತರಾಗಿದ್ದುಕೊಂಡು ಇನ್ನೋರ್ವ ಭಾಗವತರ ಗುಣಗಳನ್ನು ಕೊಂಡಾಡುವುದು, ಒಳ್ಳೆಯತನವನ್ನು ಒಪ್ಪಿಕೊಳ್ಳುವುದು, ತನಗೆ ಅವರಿಂದ ದೊರೆದ ಅನುಭವಗಳನ್ನು ಗೌಪ್ಯವಾಗಿಡದಿರುವುದು.. ಇವೆಲ್ಲಾ ಕುಟುಂಬದ ಬಳುವಳಿ. ಪದ್ಯಾಣ ಪ್ರಶಸ್ತಿ ಸಮಾರಂಭದಲ್ಲಿ ತೆಂಕಬೈಲು ಶಾಸ್ತ್ರಿಗಳು ಕೂಡಾ ಉಲ್ಲೇಖಿಸಿದರು, “ಒಬ್ಬನ ರಾಗಕ್ಕೆ ಇನ್ನೊಬ್ಬ ಭಾಗವತ ಸೋಲುವುದು, ಅದನ್ನು ಅದರ್ಶವೆಂದು ಸ್ವೀಕರಿಸುವ ವಿದ್ಯಮಾನ ಅಚ್ಚರಿ. ಈ ವಿಚಾರ ಇಂದಷ್ಟೇ ತಿಳಿಯಿತು.”.
ಬದುಕು ಕಲೆಯಾಗಬೇಕು. ಆದರೆ ಬದುಕಿಗೆ ‘ಕಲೆ’ ಸೋಂಕಬಾರದು! ಎರಡೂ ವಾಕ್ಯಗಳಲ್ಲಿ ಬರುವ ‘ಕಲೆ’ ಶಬ್ದವು ಸ್ಫುರಿಸುವ ಅರ್ಥ, ಭಾವಗಳು ಭಿನ್ನ. ಬದುಕು ಕಲೆಯಾಗದಿದ್ದರೆ, ಕಲೆಯಾಗಿಸದಿದ್ದರೆ ಜಾಣ್ಮೆಯ ಒಳಸುರಿಗಳು ಮೌನವಾಗುತ್ತವೆ. ಇವು ಸದ್ದಾಗದಿದ್ದರೆ ‘ಇದ್ದೂ ಇಲ್ಲದಂತಿರುವುದು’ ಅಷ್ಟೇ. ಬದುಕಿನಲ್ಲಿ ಕಲೆಯ ಮಿಳಿತ ಸುಲಭವಲ್ಲ. ಪಾರಂಪರಿಕ ಹಿನ್ನೆಲೆ, ಮನೆಯ ವಾತಾವರಣ, ಮನದ ಸಾಧ್ಯತೆ-ಸಿದ್ಧತೆ, ಪ್ರೀತಿ, ಆರಾಧನೆಗಳು ಪೂರಕ. ಎಷ್ಟೋ ಮಂದಿ ಗೊಣಗಾಡುವುದನ್ನು ಕೇಳಿದ್ದೇನೆ, “ಅಯ್ಯೋ, ನಮ್ಮ ಕಾಲಕ್ಕೆ ಸಾಕು. ಮಕ್ಕಳ ಕಾಲಕ್ಕೆ ಇದು ಬೇಡ,”. ಕಲಾನೋಟದಲ್ಲಿ ನೋಡಿದಾಗ ಈ ನಿಲುವು ಸಹ್ಯವಾಗುವುದಿಲ್ಲ. ಆದರೆ ದಶಕಕ್ಕೂ ಮಿಕ್ಕಿ ಕಲೆಯಲ್ಲಿ ತೊಡಗಿಸಿದ ಕಲಾವಿದರ ಅನುಭವ ಹೀಗಿರುವಾಗ ಅದರ ಹಿಂದಿನ ನೋವಿನ ಬದುಕು ಅರ್ಥವಾಗುತ್ತದೆ. ಆಗದಿದ್ದರೆ ಅರ್ಥ ಮಾಡಿಕೊಳ್ಳಬೇಕು.
ಬದುಕಿನಲ್ಲಿ ಕಲೆ ಮಿಳಿತವಾಗದಿದ್ದರೆ ‘ಸಂಬಂಧ’ವೇ ಇಲ್ಲದಂತೆ ಇದ್ದುಬಿಡುತ್ತೇವೆ. ರಂಗದಲ್ಲಿದ್ದಷ್ಟು ಹೊತ್ತು ‘ಕಲಾವಿದ’ ಅಷ್ಟೇ. ರಂಗವಿಳಿದರೆ ಕಲೆಗೂ, ಕಲಾವಿದನಿಗೂ ಸಂಪರ್ಕವೇ ಇಲ್ಲ! ಈ ಮನಃಸ್ಥಿತಿಯನ್ನು ಕಲೆಯೂ ಸ್ವೀಕರಿಸುವುದಿಲ್ಲ. ಆದರೆ ನಮ್ಮೊಳಗಿನ ‘ಕಲಾವಿದ’ ಸದಾ ಜಾಗೃತನಾಗಿದ್ದರೆ ನಮಗರಿವಿಲ್ಲದೆ ಬದುಕೂ ಕಲೆಯಾಗುತ್ತದೆ. ಹೀಗೆ ಬದುಕನ್ನು ಕಲೆಯಾಗಿಸಿದ ಉದಾಹರಣೆ ‘ಪದ್ಯಾಣ ಕುಟುಂಬ’ ಮುಂದಿದೆ.
ಪದ್ಯಾಣ ಕುಟುಂಬ - ಎಂದಾಕ್ಷಣ ಅದರ ಹಿರಿದಾದ ವ್ಯಾಪ್ತಿ ಧುತ್ತೆಂದು ನಿಲ್ಲುತ್ತದೆ. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಒಂದೆಡೆ ಉಲ್ಲೇಖಿಸುತ್ತಾರೆ, “ಪದ್ಯಾಣ ಕುಟುಂಬವು ವಿದ್ಯಾವಂತರ ನೆಲೆವೀಡು. ಇಲ್ಲಿ ಉನ್ನತ ವ್ಯಾಸಂಗವನ್ನು ಗೈದವರಿದ್ದಾರೆ. ಸರಕಾರ ಮತ್ತು ಸಾರ್ವಜನಿಕ ವಲಯಗಳಲ್ಲಿ ಉನ್ನತೋನ್ನತವಾಗಿರುವ ಹುದ್ದೆಗಳನ್ನು ಅಲಂಕರಿಸಿದವರಿದ್ದಾರೆ. ಅಧ್ಯಾಪಕರಿದ್ದಾರೆ. ಸಂಗೀತ ಶಿಕ್ಷಕರಿದ್ದಾರೆ. ಯಕ್ಷಗಾನ ಕಲಾವಿದರು - ಗುರುಗಳು, ಸಂಗೀತಗಾರರು, ಗಮಕಿಗಳು, ಕಲಾಭಿಮಾನಿಗಳು ಮತ್ತು ಕಲಾ ಪ್ರೋತ್ಸಾಹಕರಿರುವ ಈ ಕುಟುಂಬವು ಸಾಂಸ್ಕøತಿಕವಾಗಿ ಔನ್ನತ್ಯವನ್ನು ಹೊಂದಿದೆ. ಸಂಗೀತ, ಯಕ್ಷಗಾನಕ್ಕೆ ಪಾರಂಪರಿಕಾ ಕೊಡುಗೆಯನ್ನು ನೀಡಿರುವ ಕುಟುಂಬವಿದು.”
ಕುಟುಂಬದ ಹಿರಿಯರಾದ ಪುಟ್ಟು ನಾರಾಯಣ ಭಾಗವತರ ಕುರಿತು ಅವರ ಮೊಮ್ಮಗ ಗಣಪತಿ ಭಟ್ಟರು ನೆನಪಿಸಿಕೊಳ್ಳುತ್ತಾರೆ, “ಅಜ್ಜನ ಮಡಿಲಲ್ಲಿ ಕಳೆದ ಬಾಲ್ಯದ ನೆನಪುಗಳು ಮಸುಕಾಗಿವೆ. ನನಗೆ ಬುದ್ಧಿ ಬಲಿಯುವ ಹೊತ್ತಿಗೆ ಅವರು ದೈವಾಧೀನರಾಗಿದ್ದರು. ಬಹುಶಃ ಆಗ ನನಗೆ ಹನ್ನೆರಡು ವರುಷ ಪ್ರಾಯ. ಅವರು ಖ್ಯಾತ ಭಾಗವತರೆಂದು ಗೊತ್ತಿತ್ತು. ಪದ್ಯ ಕೇಳಲಿಲ್ಲ. ಊರಿನ ಒಂದೆರಡು ತಾಳಮದ್ದಳೆಯಲ್ಲಿ ಭಾಗವಹಿಸಿದ್ದರಂತೆ. ಈಗಲೂ ಹಿರಿಯರು ಆ ಚೇತನವನ್ನು ಸ್ಮರಿಸುತ್ತಾರೆ ಎಂದಾದರೆ ಆ ಕಾಲಘಟ್ಟದ ಭಾಗವತಿಕೆಯ ಗಟ್ಟಿತನ ಎಷ್ಟಿದ್ದಿರಬಹುದು? ಊಹಿಸಿದಾಗ ಪುಳಕಗೊಳ್ಳುತ್ತೇನೆ.”
ದಧಿಗಿಣತೋ / 29-11-2018
No comments:
Post a Comment