Saturday, December 29, 2018

ಸ್ವಂತ ಬಲದ ಮೇಲೆ ನೆಲೆಕಂಡ ಅನ್ವೇಷಕ


          2004ರಲ್ಲಿ ಜರುಗಿದ ಯಕ್ಷಗಾನ ಸಮ್ಮೇಳನದ ಪ್ರದರ್ಶನದ ಚಿತ್ರ

                ವಿಶಾಲವಾಗಿ ಹರಡಿರುವ ಯಕ್ಷಗಾನದ ವಿವಿಧ ಅಂಗೋಪಾಂಗಗಳಲ್ಲಿ ತನುಶ್ರಮವನ್ನು ಮರೆತು ದುಡಿದವರು ಸುದ್ದಿಯಾಗುವುದಿಲ್ಲ. ಕಲೆಯನ್ನು ಧರಿಸಿದವನು ಎಂಬರ್ಥದಲ್ಲಿ ಎಲ್ಲರೂ ಕಲಾವಿದರೇ. ವೇಷ, ಅರ್ಥಗಾರಿಕೆ, ಪ್ರಸಂಗ, ಹಿಮ್ಮೇಳ.. ಇಲ್ಲೆಲ್ಲಾ ತಂತಮ್ಮ ಬೌದ್ಧಿಕ ಕಾಣ್ಕೆಯಿಂದ ಅನೇಕ ಮಹನೀಯರು ಸಂದುಹೋಗಿದ್ದಾರೆ. ಇವರ ನೆರಳಿನಲ್ಲಿ ಯಾ ಹೊಸ ಹಾದಿಯಲ್ಲಿ ಹೊಸ ತಲೆಮಾರು ಯಕ್ಷಗಾನದ ಗುಂಗನ್ನು ಅಂಟಿಸಿಕೊಂಡಿರುವುದು ಯಕ್ಷಗಾನದ ಶ್ರೇಷ್ಠತೆ.

            ಕಾಸರಗೋಡು ಜಿಲ್ಲೆಯ ಅಡೂರು ಶ್ರೀಧರ ರಾವ್ ಅರ್ಥದಾರಿ, ವೇಷಧಾರಿ, ಸಂಘಟಕ. ಇವುಗಳಿಂದಲೂ ಹೊರತಾಗಿ ಅವರಅನ್ವೇಷಣೆಯು ಯಕ್ಷಗಾನದ ಸೌಂದರ್ಯವನ್ನು ಲಿಖಿತವಾಗಿ, ಪ್ರದರ್ಶನವಾಗಿ, ಪ್ರಾತ್ಯಕ್ಷಿಕೆಯಾಗಿ ಮತ್ತು ಮಾದರಿಗಳನ್ನು ಕಲಾಸಕ್ತರ ಮುಂದಿಡುತ್ತಾ ಬಂದರು. ತಾನು ನಂಬಿದ, ಒಪ್ಪಿದ ಸಿದ್ದಾಂತವನ್ನು ಅನುಷ್ಠಾನ ಮಾಡುವಲ್ಲಿ ರಾಜಿಯಾದವರಲ್ಲ. ಎಷ್ಟೋ ಸಲ ಇಂತಹ ಸಂದರ್ಭ ಬಂದಾಗ ಯಾರ ಹಂಗಿಗೂ ಒಳಗಾಗದೆ ವೈಯಕ್ತಿಕ ನೆಲೆಯಲ್ಲಿ ನೆಲೆ ಕಂಡುಕೊಂಡವರು. ಇದಕ್ಕೆ ಸಾಕ್ಷಿ 2004ರಲ್ಲಿ ಅವರ ಮನೆಯಲ್ಲಿ ಜರುಗಿದ ಯಕ್ಷಗಾನ ಸಮ್ಮೇಳನ ಯಾ ಕಾರ್ಯಾಗಾರ.

            ಶ್ರೀಧರ ರಾಯರು ಸಮ್ಮೇಳನದ ಆಶಯಗಳನ್ನು ಲಿಖಿತಗೊಳಿಸುವ ಪ್ರಕ್ರಿಯೆಯನ್ನು 2011ರಲ್ಲಿ ಮುಗಿಸಿದ್ದರು. ‘ಯಕ್ಷಗಾನ ವರ್ಣ ವೈಭವ (ತೆಂಕು)’ ಪುಸ್ತಕದಲ್ಲಿ ಸಮ್ಮೇಳನದ ಆಶಯದೊಂದಿಗೆ ತನ್ನ ನಿಲುವುಗಳನ್ನು ಪ್ರಕಟಿಸಿದ್ದರು. ಹಿರಿಯರು ಕಟ್ಟಿದ ಅಡೂರು ಮೇಳದ ಪಾರಂಪರಿಕ ನೆರಳು ಒಂದೆಡೆ, ಅದೇ ಜಾಡಿನಲ್ಲಿ ದೊಡ್ಡ ಹೆಜ್ಜೆಯೂರಿನ ಯಕ್ಷಗಾನದ ಕೈಂಕರ್ಯ ಮತ್ತೊಂದೆಡೆ. ಬಹುಶಃ ಎರಡೂ ಹಾದಿಗಳು ಶ್ರೀಧರ ರಾಯರಿಗೆ ಬಲ. ಎಂದೂ ಇತರರ ಬಲದ ಮೇಲೆ ಅವಲಂಬಿತವಾಗುವುದು ಅವರ ಸ್ವಭಾವವಲ್ಲ

            ಪ್ರತಿಯೊಬ್ಬರಲ್ಲೂ ಒಂದೊಂದು ಸಿದ್ದಾಂತಗಳು, ಆಶಯಗಳು, ಮಾದರಿಗಳು ಮನದೊಳಗೆ ರಿಂಗಣಿಸುತ್ತಿರುತ್ತವೆ. ಅವುಗಳಿಗೆ ಮೂರ್ತರೂಪ ಕೊಡುವಲ್ಲಿ ಅವಕಾಶಗಳು, ಸನ್ನಿವೇಶಗಳು ದೊರಕದೆ ಬೀಜರೂಪದಲ್ಲೇ ಮುರುಟುತ್ತವೆ. ಶ್ರೀಧರ ರಾಯರ ಕಲಾಯಾನವು ಇಂತಹ ಸಿದ್ದಾಂತ, ಮಾದರಿಗಳನ್ನು ಕಟ್ಟಿಕೊಡುತ್ತಾ ಸಾಗಿರುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು. ಬದಲಾದ ಕಾಲಘಟ್ಟದಲ್ಲಿ ಅಲಿಖಿತ ಸಿದ್ದಾಂತಗಳು ಎಷ್ಟು ಸ್ವೀಕೃತಿ ಪಡೆಯುತ್ತವೆ ಎನ್ನುವುದು ಬೇರೆ ಮಾತು.

               “ಜನರಲ್ಲಿ ಹಲವು ಆಶಯಗಳು. ಎಲ್ಲರ ಆಸೆ, ಆಸಕ್ತಿಯಂತೆ ಯಕ್ಷಗಾನವನ್ನು ಬಾಗಿಸುವುದಕ್ಕಾಗುವುದಿಲ್ಲ. ಹಿರಿಯರಿಂದ ಹರಿದು ಬಂದು ವಿಚಾರಗಳು ಲಿಖಿತದಲ್ಲೋ, ಅಲಿಖಿತವಾಗಿಯೋ ಅಲ್ಲಿಲ್ಲಿ ಚದುರಿರುತ್ತದೆ. ಅವನ್ನೆಲ್ಲಾ ಒಟ್ಟು ಮಾಡುವ ಕೆಲಸ ಮಾಡುತ್ತಿದ್ದೇನಷ್ಟೇ. ಇದರ ಒಂದಂಗ ಮುಖವರ್ಣಿಕೆಗಳ ಪ್ರತಿಕೃತಿ ತಯಾರಿ. ವೇಷಗಳ ಸೌಂದರ್ಯವನ್ನು ಜನರ ಹತ್ತಿರ ಒಯ್ಯಲು, ಹೊಸಬರಿಗೆ ಯಕ್ಷಗಾನವನ್ನು ಪರಿಚಯಿಸಲು ಸಹಕಾರಿಯಾಗಿದೆ. ಸಮ್ಮೇಳನದ ಮೂಲಕ ಅಲಿಖಿತವಾಗಿದ್ದ ವಿಚಾರಗಳನ್ನು ಅಕ್ಷರಕ್ಕಿಳಿಸಲು ಯತ್ನಿಸಿದೆ. ಇದು ಶಾಸ್ತ್ರ ಅಲ್ಲ ಎನ್ನುವ ಎಚ್ಚರ ನನಗಿದೆ.” ಒಂದು ಸಭೆಯಲ್ಲಿ ಶ್ರೀಧರ ರಾಯರು ಆಡಿದ ಮಾತುಗಳಿವು

            ಅವರು ಬಹುಕಾಲ ಅಧ್ಯಯನ ಮಾಡುತ್ತಾ, ವಿಚಾರಗಳ ಎಳೆ ಹಿಡಿದು ಪ್ರವಾಸ ಮಾಡುತ್ತಾ ಸಂಗ್ರಹಿಸಿದ ಸಾರದಲ್ಲಿ ಸತ್ಯವಿಲ್ಲದೆ ಇರಬಹುದು! ಸತ್ತ್ವ ನಮಗೆ ಕಾಣದೇ ಇರಬಹುದು! ಶ್ರೀಧರ ರಾಯರು ಸತ್ಯವಲ್ಲದ ವಿಚಾರಗಳ ಬೆನ್ನು ಹತ್ತುವವರಲ್ಲ. ಆಂತಹ ವಿಚಾರಗಳನ್ನು ಕಲಾ ಲೋಕ ಒಪ್ಪಲೇಬೇಕೆಂಬ ಆಗ್ರಹ ಅವರಲ್ಲಿದ್ದಿರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನಗಳನ್ನು ಅಂಗೈಯಲ್ಲಿಟ್ಟುಕೊಂಡು ಅಪ್ಡೇಟ್ ಆಗುತ್ತಿರುವ ನಮಗೆ ಶ್ರೀಧರ ರಾಯರ ನಿಲುವುಗಳು ಢಾಳಾಗಿ ಕಾಣಬಹುದು. ಅದು ನಂನಮ್ಮ ಮನಸ್ಥಿತಿ.  ಅವರ ನಿಲುವುಗಳ, ಪ್ರತಿಪಾದನೆಗಳ ಒಂದೆಸಳು ಹೀಗಿದೆ. ಇದು ವರ್ಣವೈಭವದಲ್ಲಿ ಪ್ರಕಟಿತ

                 “ಯಕ್ಷಗಾನದ ವೇಷರಚನಾ ಸಂಪ್ರದಾಯದಲ್ಲಿ ವ್ಯಕ್ತಿ ರೂಪದ ರಚನೆಯು ವಾಸ್ತವಿಕತೆಯಿಂದ ದೂರವಿದೆ. ಅದು ಭಾವನಾತ್ಮಕ ರೂಪದ ರಚನೆ. ಸಾಂಕೇತಿಕವೇ ಪ್ರಮುಖ ಅಂಶ. ಮುಖದ ಬಣ್ಣ, ಅಳವಡಿಸುವ ರೇಖಾ ವಿನ್ಯಾಸ, ಪ್ರಮುಖ ಛಾಯೆ, ಕಟ್ಟುವ ಗಡ್ಡ ಮೀಸೆಗಳಿಂದ ಚಿತ್ರಿತವಾದ ಮುಖಕ್ಕೆಮುಖವರ್ಣಿಕೆಎನ್ನುತ್ತಾರೆ. ನಿರ್ಮಾಣಗೊಂಡ ಪಾತ್ರವು ಸಂಕೇತಗಳಿಂದ ಯಾವ ವರ್ಗಕ್ಕೆ ಸೇರಿದ ಯಾವ ವೇಷವೆಂಬುದು ಕಂಡಾಗಲೇ ಗುರುತಿಸಬಹುದು. ದೇವಾಲಯದಲ್ಲಿ ಉದಯವಾಗಿ ಬೆಳಕು ಕಂಡ ಮಹಾನ್ ಕಲೆಗೆ ಉಡುಗೆ-ತೊಡುಗೆಗಳೂ ಅಲ್ಲೇ ನಿರ್ಮಾಣಗೊಂಡುವು. ದೇವಾಲಯದ  ಪೂಜಾ ಸಾಮಗ್ರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಡವೆಗಳು ರೂಪುಗೊಂಡುವು

                                                                                                                                                                          ಪೀಠಿಕೆ ವೇಷದ ಕಿರೀಟಕ್ಕೆಕೋಲು ಕಿರೀಟ, ಪೂಂಬೆ ಕಿರೀಟ, ನವಿಲುಗೊಂಡೆ ಕಿರೀಟಗಳೆನ್ನುವರು. ದೇವಾಲಯದ ಕಲಶದ ಆಕೃತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ರೂಪುಪಡೆಯಿತು. ಕಲಶದ ಪಾತ್ರೆಗೆ ಮೇಲು ಭಾಗದಲ್ಲಿ ಮಾವಿನ ತುದಿಗಳನ್ನು ಇರಿಸುತ್ತಾರೆ. ಇದು ಒಣಗಿ ಆಕಾರ ಮತ್ತು ಬಣ್ಣ ಕೆಡುವುದರಿಂದ ನವಿಲುಗರಿಗಳನ್ನು ಹೊಂದಿಸಲಾಯಿತು. ಕಲಶದ ಪಾತ್ರೆಗೆ ನೂಲನ್ನು ಸುತ್ತುವ ಕ್ರಮವಿದೆ. ನೂಲಿನ ಬದಲಾಗಿ ಬೆಳ್ಳಿ, ತಾಮ್ರ, ಹಿತ್ತಾಳೆ, ಸರಿಗೆ ಮತ್ತು ಪಟ್ಟಿಯನ್ನು ಸುತ್ತಿದರು. ಕಿರೀಟದ ಆಕೃತಿಗಳನ್ನು ಕೆತ್ತಲು ಪ್ರಕೃತಿದತ್ತವಾದ, ಭಾರ ಕಡಿಮೆ ಇರುವ, ನಯವಾಗಿ ಆಕಾರಗಳನ್ನು ಕೆತ್ತಬಹುದಾದ ಮರಗಳನ್ನು ಆರಿಸಲಾಯಿತು. ‘ಕುಮುದ, ಕುಂಬಳ, ಕನಪ್ಪಟ್ಟಿ..’ ಜಾತಿ ಮರಗಳಿಂದ ಆಭರಣ ತಯಾರಿಸಿದರು

ಆರಂಭದಲ್ಲಿ ಮರಕ್ಕೆ ಲೋಹದ ಹೂಗಳನ್ನು ಅಂಟಿಸಲಾಗುತ್ತಿತ್ತು. ಹೀಗೆ ಅಂಟಿಸುವಾಗ ಕೆಲವೆಡೆ ಮರದ ಭಾಗ ಕಾಣಿಸುತ್ತದೆ. ಅದಕ್ಕಾಗಿ ಮೊದಲಿಗೆ ವಸ್ತ್ರದ ಹೊದಿಕೆಯನ್ನು ಅಂಟಿಸಿ ಅಲಂಕಾರ ಮಾಡಲಾಯಿತು. ಅಂಟಿಸಲುಜೇನುಮೇಣಮತ್ತುಹಲಸಿನ ಮೇಣ ಮಿಶ್ರಣ. ಮರಳಿನಲ್ಲಿ ದೊರಕುವ ಅಭ್ರಕವನ್ನು ಕತ್ತರಿಸಿ, ವಿವಿಧ ವಿನ್ಯಾಸಗೊಳಿಸಿ ಕಿರೀಟಕ್ಕೆ ಅಂಟಿಸಲಾಗುತ್ತಿತ್ತು. ಈಗ ಸ್ಥಾನಕ್ಕೆ ಕನ್ನಡಿಯ ಚೂರುಗಳು ಬಂದಿವೆ. ನವಿಲುಗರಿಯ ದಂಡನ್ನು ಬಗ್ಗಿಸಿ ಹೊಲಿದು ತಮಗೆ ಬೇಕಾದ ಆಕೃತಿಗಳಿಗೆ ಹೊಂದಿಸಿಕೊಂಡರು. ಈಗ ಕೆಲಸವನ್ನು ಮುತ್ತಿನ ಮಾಲೆಗಳಿಂದ ಮಾಡಲಾಗುತ್ತದೆ

ಕಿರೀಟಕ್ಕೆಸಕಲಾದಿಎನ್ನುವ ನೂಲನ್ನು ಹೊದಿಕೆಯಾಗಿ ಬಳಸುತ್ತಿದ್ದರು. ಕಾಲಕ್ಕೆ ಇಷ್ಟು ದಪ್ಪದ್ದು  ಬೇರೆ ಇದ್ದಿರಲಿಲ್ಲ. ಕ್ರಮೇಣ ಸಕಲಾದಿಯ ಅಲಭ್ಯತೆಯಿಂದ ಸ್ಥಾನವನ್ನುವೆಲ್ವೆಟ್ತುಂಬಿತು. ಅವುಗಳಲ್ಲಿ ಕೆಂಪು ಮತ್ತು ಕಪ್ಪು ಬಣ್ಣದವು ಮಾತ್ರ. ಅದನ್ನೆ ಸಾಂಕೇತಿಕವಾಗಿಟ್ಟು ಬೇರೆ ಬೇರೆ ತರಹದ ವೇಷಗಳ ಸಾಮಗ್ರಿಗಳಲ್ಲಿ ವ್ಯತ್ಯಾಸ ತರಲಾಯಿತು. ಕೆಂಪು ಬಣ್ಣ ಯಾ ಕುಂಕುಮದ ಬಣ್ಣವು ಶುಭಪ್ರದವೆಂದು ನಿರ್ಧರಿಸಿ, ದೇವತಾಂಶ ಪಾತ್ರಗಳ ಒಡವೆಗಳಿಗೆ ಕೆಂಪು ಸಕಲಾದಿ ಯಾ ವೆಲ್ವೆಟ್ ವಸ್ತ್ರವನ್ನು ಅಳವಡಿಸಿದರು. ರಾಕ್ಷಸರ ಪಾತ್ರಗಳ ಇದಿರುವೇಷ ಎನಿಸಿದಇಂದ್ರಜಿತು, ರಕ್ತಬೀಜಪಾತ್ರಗಳು ಬಳಸುವ ಪರಿಕರಗಳಿಗೆ ಕಪ್ಪು ವಸ್ತ್ರಗಳು

ಪಾತ್ರಗಳ ಮಧ್ಯದ ವ್ಯತ್ಯಸ್ಥ ಪಾತ್ರಗಳಾದ ಅತಿಕಾಯ (ರಾಕ್ಷಸನಾಗಿ ಜನ್ಮ, ಭಕ್ತನಾಗಿ ಮೋಕ್ಷ) ಸಾತ್ವಿಕ-ತಾಮಸ ಸ್ವಭಾವದ ಮಿಶ್ರಣ, ಲಕ್ಷ್ಮಣನ ಪಾತ್ರದಲ್ಲಿ ಸೂರ್ಯ ವಂಶದ ರಾಮನಿಗೆ ತಮ್ಮನಾದರೂ ಬೇಗ ಸಿಟ್ಟಾಗುವುದರಿಂದ ಕೆಂಪು-ಕಪ್ಪಿನ ಮಿಶ್ರಣದ ಬಟ್ಟೆ, ಗೊಂಡೆ ಮತ್ತು ಪರಿಕರಗಳ ಅಂಚಿಗೆ ನೂಲಿನ ಮಾಲೆಗಳನ್ನು ಸಾಂಕೇತಿಕವಾಗಿ ಬಳಸಲಾಯಿತು.
ಕೋಲು ಕಿರೀಟಗಳ ಕಿವಿಗಳಿಗೆ ದೇವಾಲಯದ ತ್ರಿಶೂಲದ ಇಕ್ಕೆಲಗಳ ಆಕಾರ ಹೊಂದಿಸಲಾಯಿತು. ಕಿರೀಟಗಳಿಗೆ ಕಿವಿ ಹೊಂದಿಸುವ ಕಲ್ಪನೆ ಯಕ್ಷಗಾನದಲ್ಲಿ ಅಲ್ಲದೆ ಬೇರ್ಯಾವ ಕಲಾ ಮಾಧ್ಯಮಗಳಲ್ಲಿಯೂ ಇಲ್ಲ. ಮೇಳಗಳಲ್ಲಿರುವ ಕೆಲವು ದೇವಾಲಯಗಳ ದೇವರ ಕಿರೀಟಗಳಿಗೂ ಕಿವಿಗಳನ್ನು ಹೊಂದಿಸಿ ಉಪಯೋಗಿಸಲ್ಪಡುತ್ತಿರುವುದು ಕಂಡು ಬರುತ್ತದೆ. ಶಿಕ್ಷೆಗೆ ಶೂಲದ ಆಕೃತಿ, ರಕ್ಷೆಗೆ ಕಲಶಾಕೃತಿ - ಶಿಕ್ಷೆ, ರಕ್ಷೆಗೆ ಅಧಿಕಾರವಿರುವರಾಜರು ಧರಿಸುವ ಕಿರೀಟಎಂಬುದು ಸಂಕೇತ. ಮುಖ್ಯ ಕೋಲು ಕಿರೀಟದಲ್ಲಿ ಕೆಂಪು ಬಣ್ಣ ಅಳವಡಿಸಲಾದ ಕಿರೀಟವನ್ನುಪೀಠಿಕೆ ವೇಷದ ಕಿರೀಟಎನ್ನಲಾಯಿತು..”

ಶ್ರೀಧರ ರಾಯರು ಕಿರೀಟ ವೇಷದ ಕುರಿತು ವಿಚಾರಗಳನ್ನು ಸ್ಥಾಪಿಸಿದಂತೆ; ಪೀಠಿಕೆ ಕಿರೀಟ, ಜತೆ ಪೀಠಿಕೆ, ಎದುರು ವೇಷದ ಕಿರೀಟ, ಮಿಶ್ರ ವೇಷದ ಕಿರೀಟ, ಧರ್ಮರಾಯ, ರಾವಣ, ಹನುಮಂತ, ಹೆಣ್ಣು ಬಣ್ಣ, ಪಕಡಿ, ತುರಾಯಿ.. ಹೀಗೆ ವಿವಿಧ ವೇಷಗಳ ಕಿರೀಟಗಳನ್ನು ತಮ್ಮದೇ ಅದ ವಿಮರ್ಶೆ, ಅಧ್ಯಯನಗಳಿಂದ ಪ್ರತಿಪಾದಿಸಿದ್ದರು. ವಿವಿಧ ಮೇಳಗಳಿಗೆ ಭೇಟಿಯಿತ್ತು, ಕಲಾವಿದರನ್ನು ಸಂದರ್ಶಿಸಿ ಮಾಹಿತಿಯನ್ನು ಕಲೆಹಾಕಿದ್ದರು. ಜತೆಗೆ ತನ್ನ ಮನದಲ್ಲಿದ್ದ ವಿಚಾರಗಳನ್ನು ಕಲಾವಿದರೊಂದಿಗೆ ಹಂಚಿಕೊಂಡಾಗ ಗೇಲಿ ಮಾಡಿದ ಅನೇಕರ ಹೆಸರುಗಳು ಕೊನೆಯ ಕಾಲದವರೆಗೂ (2015) ಅವರ ನೆನಪಿನಲ್ಲಿತ್ತು

Prajavani / ದಧದಿಗಿಣತೋ / 6-10-2018


No comments:

Post a Comment