Friday, May 29, 2015

'ದಕ್ಷಾಧ್ವರ' - ಪ್ರಸಂಗದ ತಾಳಮದ್ದಳೆ.


ಪುತ್ತೂರು-ಹಾರಾಡಿ ಶ್ಯಾಮ ಭಟ್ಟರ 'ಅನುಗ್ರಹ'
ಗೃಹಪ್ರವೇಶ ಸಂದರ್ಭ -
'ದಕ್ಷಾಧ್ವರ' - ಪ್ರಸಂಗದ ತಾಳಮದ್ದಳೆ.

ಭಾಗವತರು : ಪದ್ಯಾಣ ಗಣಪತಿ ಭಟ್, ತೆಂಕಬೈಲು ತಿರುಮಲೇಶ್ವರ ಭಟ್
ಮದ್ದಳೆ : ಚೈತನ್ಯ ಪದ್ಯಾಣ, ಚೆಂಡೆ : ರವಿ ಭಟ್

ಪಾತ್ರವರ್ಗ : ಉಜಿರೆ ಅಶೋಕ ಭಟ್ (ಈಶ್ವರ), ಪಕಳಕುಂಜ ಶ್ಯಾಮ ಭಟ್ (ದಕ್ಷ),
ಪೆರುವೋಡಿ ನಾರಾಯಣ ಭಟ್, ಜಯಾನಂದ ಕೊಡುಂಗಾಯಿ (ವಿಪ್ರರು), ದೇವೇಂದ್ರ (ಭಾಸ್ಕರ ಬಾರ್ಯ), 

ಗಣರಾಜ ಕೆದಿಲ (ವೀರಭದ್ರ), ಚಂದ್ರಶೇಖರ ಭಟ್ ಬಡೆಕ್ಕಿಲ (ನಾರದ) ಮತ್ತು
 ನಾ.ಕಾ.ಪೆ (ದಾಕ್ಷಾಯಿಣಿ)

(ಚಿತ್ರಗಳು : ಮಧುರಾ ಗಣರಾಜ)

Tuesday, May 5, 2015

ಕುಂಜೂರು ಪಂಜ ದೇವಸ್ಥಾನದಲ್ಲಿ 'ಮುರಾಸುರ ವಧ'

ಪುತ್ತೂರು ಸನಿಹದ ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೇ 3ರಂದು ಜರುಗಿದ ಯಕ್ಷಗಾನದ ಬಯಲಾಟ. ಪ್ರಸಂಗ : ಮುರಾಸುರ ವಧೆ. ಪಾಲೆಚ್ಚಾರು ವೆಂಕಟಕೃಷ್ಣ ಇವರ ಸಂಯೋಜನೆ.
(ಚಿತ್ರ : ಪರಮೇಶ್ವರ ಮಚ್ಚಿಮಲೆ)

ಪುತ್ತೂರು ಮುಕ್ವೆಯಲ್ಲಿ ಮಲ್ಲ ಮೇಳದ ಆಟ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸಂದರ್ಭದಲ್ಲಿ ಮುಕ್ವೆಯಲ್ಲಿ ಜರುಗಿದ ಮಲ್ಲ ಮೇಳದ ಆಟ. ಪ್ರಸಂಗ : ದೇವಿ ಮಹಾತ್ಮೆ. ಅದ್ದೂರಿಯಾಗಿ ಜರುಗಿದ ಪ್ರದರ್ಶನ.

ಕೂಡ್ಲು ಮೇಳದ (koodlu mela) ದೇವಿ ಮಹಾತ್ಮೆ


ಕಾಸರಗೋಡು ಜಿಲ್ಲೆಯ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಭಾ (ರಿ) (ಕೂಡ್ಲು ಮೇಳ) ಇದರ 'ದೇವಿ ಮಹಾತ್ಮೆ' ಪ್ರಸಂಗದ ಒಂದು ದೃಶ್ಯ. (ಮಾರ್ಚ್ 2015)

Wednesday, April 15, 2015

ಭಾವದೆತ್ತರಕ್ಕೆ ಏರಿದ 'ಬ್ಯಾಲೆ'

           ನಮ್ಮ ಯಕ್ಷಗಾನ ಪಾತ್ರಗಳು ಯಾಕೆ ಭಾವ ಶುಷ್ಕವಾಗಿದೆ. ಮಾತು, ಕುಣಿತಗಳ ಮಧ್ಯೆ ಭಾವಗಳು ಯಾಕೆ ಅದ್ರ್ರತೆಯನ್ನು ಕಳೆದುಕೊಂಡಿದೆ. ಒಂದು ಕಾಲಘಟ್ಟದಲ್ಲಿ ನಳದಮಯಂತಿ, ಹರಿಶ್ಚಂದ್ರ ಪ್ರಸಂಗಗಳು ರಂಗದಲ್ಲಿ ವೈಭವ ಪಡೆದಿತ್ತಲ್ಲಾ. ಈ ಪ್ರಸಂಗಗಳು ಯಾಕೆ ನೇಪಥ್ಯಕ್ಕೆ ಸರಿಯುತ್ತಿದೆ.  ರಂಗಭೂಮಿಯ ಮಿತಿಯೋ? ಭಾವದೆತ್ತರಕ್ಕೆ ಏರಲಾಗದ ಕಲಾವಿದನ ಅಸಹಾಯಕತೆಯೋ? ಅಥವಾ ಕಾಲದ ಕಾಟವೋ..?
          ಪುತ್ತೂರಿನಲ್ಲಿ ಜರುಗಿದ 'ಪಂಚವಟಿ' ಪ್ರಸಂಗದ 'ಯಕ್ಷಗಾನದ ಬ್ಯಾಲೆ'ಯನ್ನು ವೀಕ್ಷಿಸುತ್ತಿದ್ದಾಗ ಮಿಂಚಿ ಮರೆಯಾದ ಸಂದೇಹಗಳಿವು. ಪಂಚವಟಿ ಆಖ್ಯಾನವು ತೆಂಕು-ಬಡಗುಗಳಲ್ಲಿ ತಾಳಮದ್ದಳೆ, ಆಟಗಳ ಮೂಲಕ ಹೆಚ್ಚು ಪ್ರದರ್ಶನಗಳಾಗುತ್ತಿವೆ. ಹವ್ಯಾಸಿ ಕ್ಷೇತ್ರದಲ್ಲಂತೂ ಈ ಪ್ರಸಂಗವನ್ನು ಬಿಟ್ಟಿರಲಾರದಷ್ಟು ಬಂಧ. ರಂಗದಲ್ಲಿ ಮುಖ್ಯವಾಗಿ ರಾಮ, ಸೀತೆ, ಮಾಯಾ ಶೂರ್ಪನಖಿ, ರಾವಣ ಸನ್ಯಾಸಿ.. ಪಾತ್ರಗಳು 'ಪದ್ಯಕ್ಕೆ ಅರ್ಥಹೇಳುವ ಜೀವಂತ ಮೂರ್ತಿ'ಗಳಾದುವೋ ಎಂದು ತೋರುತ್ತವೆ. ರಾಮನಲ್ಲಿ ದುಗುಡವನ್ನು ಹೇಳಿಕೊಳ್ಳುವ ಸೀತೆಯ ಮುಖ ಬಾಡುವುದಿಲ್ಲ, ಮಾಯಾಶೂರ್ಪನಖೆಯಲ್ಲಿ ಲಾಸ್ಯದ ಬದಲಿಗೆ ರಂಗವಿಡೀ ಕುಣಿಯುವ ಹಠ.. ಕುಣಿಸುವವರಿದ್ದಾಗ ಕುಣಿಯುವವರಿದ್ದಾರೆನ್ನಿ...!
               ಭಾವನೆಗಳನ್ನು ಮೊಗೆದು ಕೊಡುವಲ್ಲಿ ಬ್ಯಾಲೆ ಯಶಸ್ಸಾಗಿದೆ. ಸೀತೆ, ಮಾಯಾ ಶೂರ್ಪನಖಿ, ಲಕ್ಷ್ಮಣ, ಘೋರ ಶೂರ್ಪನಖಿ, ರಾವಣ ಸನ್ಯಾಸಿ, ಜಟಾಯು.. ಪಾತ್ರಗಳು ಉತ್ತಮವಾಗಿ ಮೂಡಿ ಬಂದುವು. ಪಾತ್ರಗಳ ಅಭಿನಯಗಳು ಅವ್ಯಕ್ತವಾಗಿ ಪ್ರೇಕ್ಷಕನ ಮನದಲ್ಲಿ ಮಾತಾಗುವಷ್ಟು ಪರಿಣಾಮ ಬೀರಿದೆ. ಒಂದು ಪ್ರದರ್ಶನದ ಗರಿಷ್ಠ ಸಾಧ್ಯತೆ ಇಷ್ಟಾದರೂ ಆಗಬೇಕಲ್ಲಾ. ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರ ಸುಶ್ರಾವ್ಯ ಭಾಗವತಿಕೆ, ವಿದ್ವಾನ್ ಅನಂತ ಪಾಠಕ್ ಅವರ ಮೃದಂಗದ ದನಿಭಾಷೆ, ರಾಮ ಬಾಯರಿಯವರ ಚೆಂಡೆಯ ನುಡಿತಗಳು ರಂಗದೊಳಗೆ ಮಿಳಿತಗೊಂಡಿದ್ದುವು.  ಪಾತ್ರಗಳಲ್ಲಿ ಭಾವವನ್ನು ಎತ್ತಿ ಕೊಟ್ಟ, ಪ್ರೇಕ್ಷಕರ ಹೃದಯ ತಟ್ಟುವಲ್ಲಿ ಗೆದ್ದ ರವಿಕುಮಾರ್ ಮೈಸೂರು ಅವರ ವಯೋಲಿನ್ ಮೆಚ್ಚಿಕೊಂಡವರು ನೂರಾರು ಮಂದಿ. ಬೆಳ್ತಂಗಡಿಯ ಹರಿದಾಸ ಡೋಗ್ರ ಅವರ ಸ್ಯಾಕ್ಸೋಫೋನ್ ವಾದನ.
           "ಕಾರಂತರು ಯಕ್ಷಗಾನವನ್ನು ಮಾತಿಲ್ಲದ ಮೂಕಿಯನ್ನಾಗಿ ಮಾಡಿದರು," ಎನ್ನುವ ಅಪವಾದ ಬ್ಯಾಲೆಯ ಆರಂಭದ ದಿವಸಗಳಲ್ಲಿ ಬಂದಿತ್ತು. ನನಗನ್ನಿಸುತ್ತದೆ, ಪಾತ್ರಗಳನ್ನು ಮೂಕ ಮಾಡಿದ್ದರಿಂದ ಅವುಗಳಿಗೂ ಒಂದು ಮನಸ್ಸಿದೆ, ಭಾವವಿದೆ, ಉದ್ದೇಶವಿದೆ ಎಂದು ಅಭಿನಯದಿಂದಲೇ ತಿಳಿಯುವಂತಾಯಿತು. ಒಂದಷ್ಟು ಸಮಯದ ಹಿಂದಿನ ನಮ್ಮ ಆಟದ ರಂಗದಲ್ಲಿ ಕುಣಿದ ಕಲಾವಿದರು ಪಾತ್ರಗಳಿಗೆ ಭಾವ ತುಂಬಿದ್ದರಿಂದ ಅವೆಲ್ಲಾ ಈಗ ದಂತಕತೆಗಳಾಗಿವೆ. ಹಾಗಾದರೆ ಈಗಿನ ಪಾತ್ರಗಳು ಮುಂದೆ ಹೇಗೆ ದಂತಕಥೆಗಳಾದಾವು? ನೋಡೋಣ.
           ಬೆಂಗಳೂರಿನ ಕರ್ನಾಾಟಕ ಕಲಾ ದರ್ಶಿನಿ(ರಿ)ಯ ತಂಡ ಡಾ.ಕೆ.ಶಿವರಾಮ ಕಾರಂತ ಉತ್ಸವದ ಆಶಯವನ್ನಿಟ್ಟುಕೊಂಡು ಕನ್ನಾಡಿನಾದ್ಯಂತ ಬ್ಯಾಲೆಯನ್ನು ಪ್ರದರ್ಶನ ಮಾಡುತ್ತಿದೆ. ತರಬೇತಿಯನ್ನು ಪಡೆದ ಕಲಾವಿದರ ಪರಿಶ್ರಮ ರಂಗದಲ್ಲಿ ಎದ್ದು ಕಾಣುತ್ತದೆ. ಕಾರಂತರಿದ್ದಾಗ ಬ್ಯಾಲೆಯ ಒಂದೆರಡು ಪ್ರದರ್ಶನವನ್ನು ನೋಡಿದ ನೆನಪು. ಆಗಿನಷ್ಟಲ್ಲದಿದ್ದರೂ ಆ ಪರಂಪರೆಯನ್ನು ಉಳಿಸುವ, ಕಾರಂತರ ಕೂಸಿನ ಆಶಯಕ್ಕೆ ಮರುಹುಟ್ಟು ಕೊಡುವ ಕಲಾದರ್ಶಿನಿಯ ಮುಖ್ಯಸ್ಥ ಶ್ರೀನಿವಾಸ ಸಾಸ್ತಾನರ ಆಶಯ ಈ ಕಾಲದ ಅನಿವಾರ್ಯ.
            ಡಾ.ಕಾರಂತರಿಗೆ ಸಾಹಿತ್ಯ ಎನ್ನುವುದು ಮನಸ್ಸು. ಕಲೆ ಅವರ ಹೃದಯ. ಹಾಗಾಗಿ ಯಕ್ಷಗಾನದ ಕುರಿತಾದ ಆಧ್ಯಯನ, ಲೇಖನ, ಪ್ರದರ್ಶನಗಳು ನೂರಾರು. ರಂಗದಲ್ಲಿ ಸೌಂದರ್ಯ ದೃಷ್ಟಿ, ಸಂಶೋಧನಾತ್ಮಕ ಪ್ರೇರಣೆ, ರಂಗ ಮಾಧ್ಯಮಕ್ಕೆ ವಿಶಿಷ್ಟ ಸಾಧ್ಯತೆಯನ್ನು ತೋರಿದ್ದಾರೆ. ತಾಯ್ನೆಲದಲ್ಲಿ ಬ್ಯಾಲೆಗೆ ಗೊಣಗಾಟ ಕೇಳಿಬಂದರೂ ಕನ್ನಡೇತರ ನೆಲದಲ್ಲಿ ಪಾತ್ರಗಳು ಕುಣಿದಿವೆ, ಪ್ರಸಂಗ ಆಶಯ-ಸಂದೇಶವನ್ನು ಅನಾವರಣಗೊಳಿಸಿವೆ.
           ಕಲೆಯ ಕುರಿತ ದೀರ್ಘ ಉಪನ್ಯಾಸ, ಟೀಕೆಗಳು ಅವನ್ನು ಸುಧಾರಿಸುವ ಪಾಠಗಳಲ್ಲ, ಎನ್ನುವುದು ಕಾರಂತರ ಅಭಿಮತವಾಗಿತ್ತು. ಬ್ಯಾಲೆಯ ಪಂಚವಟಿ ಪ್ರಸಂಗದಲ್ಲಿ ಬರುವ 'ಶೂರ್ಪನಖಿ' ಪಾತ್ರವನ್ನು ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳು ಮೆಚ್ಚಿಕೊಂಡಿದ್ದರಂತೆ. ಸುಮಾರು ಒಂದು ದಶಕ ಕಾಲ ರಂಗವಾಳಿದ ಬ್ಯಾಲೆಯು ಕಾರಂತರಿಗೆ, ಮಣ್ಣಿಗೆ, ಕಲೆಗೆ ಕೀರ್ತಿ ತಂದುಕೊಟ್ಟಿತು. ಪುತ್ತೂರಿನ ಕರ್ನಾಾಟಕ ಸಂಘವು 'ಯಕ್ಷರಂಗಕ್ಕಾಗಿ..' ಎನ್ನುವ ಪುಸ್ತಕವನ್ನು (ಸಂ. ಮಾಲಿನಿ ಮಲ್ಯ) ಪ್ರಕಟಿಸಿದೆ.
            ಕರ್ನಾಾಟಕ ಕಲಾದರ್ಶಿನಿಯು ಶ್ರೀನಿವಾಸ ಸಾಸ್ತಾನ ಮತ್ತು ಗೌರಿ ಶ್ರೀನಿವಾಸರ ನೇತೃತ್ವದಲ್ಲಿ ರೂಪುಗೊಂಡ ಸಂಸ್ಥೆ. ಗಣರಾಜ್ಯೋತ್ಸವದಲ್ಲಿ ಎರಡು ಬಾರಿ ಪ್ರದರ್ಶನ ನೀಡಿದ ಹಿರಿಮೆ. ಅಮೇರಿಕಾ, ಚೀನಾ, ದುಬೈ, ಕುವೈತ್, ಬೆಹರಿನ್, ಜರ್ಮನಿ, ನೇಪಾಳದಲ್ಲಿ ಪ್ರದರ್ಶನವನ್ನು ನೀಡಿದ ಗರಿಮೆ. ಯಕ್ಷಶಿಕ್ಷಣಕ್ಕಾಗಿ 'ಯಕ್ಷಗುರುಕುಲ' ಸ್ಥಾಪನೆ. ವಿಶ್ವಕನ್ನಡ ಸಮ್ಮೇಳನದಲ್ಲಿ 1200 ಜಾನಪದ ಕಲಾವಿದರಿಗೆ ನೃತ್ಯ ಸಂಯೋಜನೆ, ಸುವರ್ಣ ಕರ್ನಾಾಟಕ ಉತ್ಸವದಲ್ಲಿ ಐನೂರು ಮಂದಿ ಯಕ್ಷಗಾನ ಕಲಾವಿದರ ನೃತ್ಯ ಸಂಯೋಜನೆ ಹಾಗೂ ದೇಶದ ಎಲ್ಲಾ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಸಂಸ್ಥೆ ನೀಡಿದೆ.
          ಕಲಾ ದರ್ಶಿನಿಯು 2015ರ ಡಾ.ಕೆ.ಶಿವರಾಮ ಕಾರಂತ ಉತ್ಸವದ ಯಾನವನ್ನು ಮಾರ್ಚ್  22ರಂದು ಮೈಸೂರಿನಿಂದ ಆರಂಭಿಸಿತು. 28ರಂದು ಉಡುಪಿಯಲ್ಲಿ ಸಂಪನ್ನಗೊಳ್ಳಲಿದೆ. ಪಂಚವಟಿ ಮತ್ತು ಅಭಿಮನ್ಯು ಕಾಳಗದ ಬ್ಯಾಲೆ ಪ್ರದರ್ಶನ, ಕಾರಂತರ ಕುರಿತಾದ ವಿಚಾರ ಸಂಕಿರಣಗಳು ಯಾನದ ಹೂರಣ. ಉತ್ತಮ ನಿರ್ದೇಶಿತ ಶಿಸ್ತಿನ ತಂಡ. ಒಂದಷ್ಟು ಸಮಯದ ಬಳಿಕ ಡಾ.ಕಾರಂತರನ್ನು ಬ್ಯಾಲೆ ಮೂಲಕ ನೆನಪು ಮಾಡಿಕೊಟ್ಟ ಕರ್ನಾಾಟಕ ಕಲಾ ದರ್ಶಿನಿಗೆ ಅಭಿನಂದನೆ.


Monday, April 6, 2015

ಗದಾಯುದ್ಧ ಪ್ರಸಂಗದ 'ಕೃಷ್ಣ'

ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ಬಜಕ್ಕೂಡ್ಲು ದೇವಸ್ಥಾನದಲ್ಲಿ ಮಾರ್ಚ್ 31ರಂದು ರಾತ್ರಿ ಜರುಗಿದ ಯಕ್ಷಗಾನ ಪ್ರದರ್ಶನ. ಪ್ರಸಂಗ : ಗದಾಯುದ್ಧ. ಕಾಲಮಿತಿ ಪ್ರದರ್ಶನ. ಸತ್ಯನಾರಾಯಣ ಪುಣಿಂಚಿತ್ತಾಯರ ಸುಶ್ರಾವ್ಯ ಭಾಗವತಿಕೆ. ಶ್ರೀಧರ ಪಡ್ರೆಯವರ ಚೆಂಡೆಯ ನುಡಿತ. ಸಬ್ಬಣಕೋಡಿ ರಾಮ ಭಟ್ಟರ ಕೌರವನ ಪಾತ್ರ, ಉಪನ್ಯಾಸಕ ಭೀಮ ಭಾರದ್ವಾಜರ ಬಲರಾಮ, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆಯವರ ಧರ್ಮರಾಯ, ಜನಾರ್ಧನ ಅವರ ಭೀಮ.....

Saturday, March 7, 2015

ಇತಿಹಾಸಕ್ಕೆ ಯಕ್ಷ ಬೆಳಕು : 'ಜಗಜಟ್ಟಿ ಬಾಚ'

              'ಬಾಚ'ನ ಪಾತ್ರದಲ್ಲಿ ಮಧೂರು ರಾಧಾಕೃಷ್ಣ ನಾವಡ ಮತ್ತು ರಾಜನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
               ಕಲಾವಿದರು : ಈಶ್ವರ ಪ್ರಸಾದ್ ಧರ್ಮಸ್ಥಳ, ಪುತ್ತೂರು ಶ್ರೀಧರ ಭಂಡಾರಿ, ಉಬರಡ್ಕ ಉಮೇಶ ಶೆಟ್ಟಿ    


 ತುಳುನಾಡಿನ ಸಾಂಸ್ಕೃತಿಕ ಇತಿಹಾಸವು ಸಮೃದ್ಧ. ವಿವಿಧ ಉಪಾಧಿಗಳ ಮೂಲಕ ಜೀವಂತ. ಸಂಶೋಧಕರು ಅಲ್ಲಿಲ್ಲಿ ಸಿಗುವ ವಿರಳ ದಾಖಲೆಗಳ ಎಸಳುಗಳ ಜಾಡಿನಲ್ಲಿ ಸಾಗಿ ಸತ್ಯಾಂಶವನ್ನು ಇತಿಹಾಸಕ್ಕೆ ಹೊಸೆದಿದ್ದಾರೆ. ಕಾಲಗರ್ಭದಲ್ಲಿ ಸಂದು ಹೋದ ಇಂತಹ ಐತಿಹಾಸಿಕ ವ್ಯಕ್ತಿ 'ಪುಳ್ಕೂರು ಬಾಚ'ನ ಸಾಹಸಗಾಥೆಯನ್ನು ಈಚೆಗೆ ಯಕ್ಷಗಾನ ರಂಗದಲ್ಲಿ ಪ್ರದರ್ಶಿಸಲಾಯಿತು. ಕರ್ಣಾಕರ್ಣೀಕೆಯಾಗಿ ದಂತಕಥೆಗಳ ಮೂಲಕ ಬಾಚನ ಬದುಕನ್ನು ಕೇಳಿದ್ದ ಮಂದಿಗೆ ಅಂದು ಪುಳಕದ ಅನುಭವ.
              ಮಾರ್ಚ್  1. ಕಾಸರಗೋಡು ಜಿಲ್ಲೆಯ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ. 'ಜಗಜಟ್ಟಿ ಬಾಚ' ಎನ್ನುವ ಆಖ್ಯಾನದ ಯಕ್ಷಗಾನದ ಪ್ರದರ್ಶನ. ವೃತ್ತಿ, ಹವ್ಯಾಸಿ ಕಲಾವಿದರ ಸಮ್ಮಿಲನ. ಪ್ರದರ್ಶನದ ಸಂಪನ್ನತೆಗೆ ಸಾಕ್ಷಿಯಾದವರು ಮೂರು ಸಾವಿರಕ್ಕೂ ಮಿಕ್ಕಿದ ಯಕ್ಷಾಭಿಮಾನಿಗಳು. ಶ್ರದ್ಧೆಯ ಚೇತನ 'ಬಾಚ'ನ ಜೀವನ ಸಂದೇಶವನ್ನು ಬಾಚಿಕೊಳ್ಳುವ ಅವಕಾಶ.
             ಮಧೂರು ಸಮೀಪದ ಸಿರಿಬಾಗಿಲು ಗ್ರಾಮೀಣ ಪ್ರದೇಶ.  ಪುಳ್ಕೂರು ಕ್ಷೇತ್ರಕ್ಕೂ ಬಾಚನಿಗೂ ಹತ್ತಿರದ ಸಂಬಂಧ. ತನ್ನ ಬದುಕಿನ ವಿವಿಧ ಕ್ಷಣಗಳನ್ನು ಪುಳ್ಕೂರು, ಕೂಡ್ಲು... ಪರಿಸರದಲ್ಲಿ ಕಳೆದ ಬಾಚನ ಹೆಸರು ಈ ಭಾಗದಲ್ಲಿ ಮನೆಮಾತು. ಐತಿಹಾಸಿಕ ವಿಚಾರ ಒಂದಾದರೆ, ಜನರ ಬಾಯಲ್ಲಿ ವಿವಿಧ ದಂತಕಥೆಗಳ ಮೂಲಕ ಬಾಚ ಈಗಲೂ ಪ್ರಸ್ತುತ.
            ಸಂಶೋಧಕ, ಸಾಹಿತಿ ಕೀರ್ತಿಶೇಷ ಸಿರಿಬಾಗಿಲು ವೆಂಕಪ್ಪಯ್ಯಯವರು ಇತಿಹಾಸದ ಒಳಹೊಕ್ಕು ಹೊರಗೆಳೆದ ಬಾಚನ ಜೀವನ ಚರಿತ್ರೆಯು ಕಾಸರಗೋಡು ಜಿಲ್ಲೆಯ ಕನ್ನಡ ಪಾಠದಲ್ಲಿ ಪಠ್ಯವಾಗಿತ್ತು. ಅದನ್ನು ಯಕ್ಷಗಾನದ ಪ್ರಸಂಗಕ್ಕೆ ಹೊಂದುವಂತೆ ಅವರ ಚಿರಂಜೀವಿ, ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಕಥಾ ಹಂದರ ರೂಪಿಸಿದ್ದರು. ಇದಕ್ಕೆ ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ ಪದ್ಯಗಳನ್ನು ರಚಿಸಿದ್ದಾರೆ. ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಎಂ.ನಾ ಚಂಬಲ್ತಿಮಾರ್ ಕಥೆಗೆ ಪೂರಕವಾದ ಇತಿಹಾಸ ಶೋಧನೆ ಮಾಡಿದರೆ, ರಾಮಕೃಷ್ಣ ಮಯ್ಯರೊಂದಿಗೆ ಶೇಣಿ ವೇಣುಗೋಪಾಲ ರಂಗವಿನ್ಯಾಸ ಮಾಡಿದ್ದಾರೆ. ಹೀಗೆ ವಿವಿಧ ಕಲಾ ಮನಸ್ಸುಗಳ ರಸಪಾಕ 'ಜಗಜಟ್ಟಿ ಬಾಚ'.
               ಬಾಚನ ಕಥೆ ಅಂದಾಗ ಕೇವಲ ಆತನ ಚರಿತ್ರೆ ಮಾತ್ರವಲ್ಲ. ತುಳುನಾಡಿದ ಪ್ರಬುದ್ಧ ಜನಜೀವನ, ಅಲ್ಲಿನ ಸಹಬಾಳ್ವೆ, ಕ್ರೀಡೆಗಳು, ಮನೋರಂಜನೆ, ಕೃಷಿ, ಕಂಬಳ.. ಎಲ್ಲವೂ ಮಿಳಿತವಾಗಿದೆ. ಕುಂಬಳೆಯ ಜಯಸಿಂಹ ಮಹಾರಾಜನ ಇತಿಹಾಸ, ಪುಳ್ಕೂರು ದೇವಳದ ಐತಿಹ್ಯ, ಕದಂಬ ವಂಶಸ್ಥರ ಆಳ್ವಿಕೆ, ಕೂಡ್ಲು ಶ್ಯಾನುಭಾಗ್ ಮನೆತನದ ಚರಿತ್ರೆಗಳು ಪ್ರಸಂಗದಲ್ಲಿವೆ. ಜಟ್ಟಿ ಕಾಳಗದ ಮಲ್ಲ ಬಾಚನ ಶಾರೀರಿಕ ಶಕ್ತಿಯ ದ್ಯೋತಕವಾದ - ಬಂಡೆಕಲ್ಲು, ಅರೆಯುವ ಕಲ್ಲು, ವೀರಕಲ್ಲು ಎತ್ತುವ, ಕೈಯಿಂದಲೇ ಕೊಬ್ಬರಿಯನ್ನು ಹಿಂಡಿ ಎಣ್ಣೆ ತೆಗೆಯುವ - ವಿವಿಧ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಕಲಾವಿದರು ಪ್ರದರ್ಶಿಸಿದರು.
              ಪ್ರಸಿದ್ಧ ಕಲಾವಿದ ರಾಧಾಕೃಷ್ಣ ನಾವಡ ಮಧೂರು 'ಬಾಚ'ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕುರಿಯ ಗಣಪತಿ ಶಾಸ್ತ್ರಿ, ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಿರಿಕಂಠದ ಭಾಗವತಿಕೆ. ಪುತ್ತೂರು ಶ್ರೀಧರ ಭಂಡಾರಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಉಬರಡ್ಕ ಉಮೇಶ ಶೆಟ್ಟಿ, ಶೇಣಿ ವೇಣಗೋಪಾಲ, ಮೊವ್ವಾರು ಬಾಲಕೃಷ್ಣ, ಮಹಾಬಲೇಶ್ವರ ಭಟ್ ಭಾಗಮಂಡಲ, ಪಡುಮಲೆ ಜಯರಾಮ ಪಾಟಾಳಿ, ಸೂರಂಬೈಲು ರಾಮಚಂದ್ರ ಹೊಳ್ಳ... ಮೊದಲಾದ ಕಲಾವಿದರು ಭಾಗವಹಿಸಿದ್ದರು.
            ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಆಯೋಜನೆಯ ಈ ಕಾರ್ಯಕ್ರಮದ ರೂವಾರಿ ರಾಮಕೃಷ್ಣ ಮಯ್ಯ ಹೇಳುತ್ತಾರೆ, "ಪುಳ್ಕೂರಿನಂತಹ ಹಳ್ಳಿ ಪ್ರದೇಶದಲ್ಲಿ ಜರುಗಿದ ಈ ಪ್ರಸಂಗಕ್ಕೆ  ಸಾವಿರಗಟ್ಟಲೆ ಕಲಾಭಿಮಾನಿಗಳು ಸಾಕ್ಷಿಯಾದುದು ಹೆಮ್ಮೆಯ ವಿಚಾರ. ಐತಿಹಾಸಿಕ ಪುರುಷ, ಈ ಪ್ರದೇಶದ ಅಭಿಮಾನದ ಮೂರ್ತಿಯನ್ನು ಜನರು ಸ್ವೀಕರಿಸಿದ ಬಗೆ ಅನನ್ಯ."
              ಪುಳ್ಕೂರು ಮಹಾದೇವನಿಗೆ ಬ್ರಹ್ಮಕಲಶದ ಮೂಲಕ ಚೈತನ್ಯ ವೃದ್ಧಿಯಾಗುವ ಸಂಭ್ರಮ. ಇದೇ ಕ್ಷೇತ್ರದ ಇತಿಹಾಸಕ್ಕೆ ಸೇರಿ ಹೋದ ಬಾಚನ ಬದುಕಿನ ಗಾಥಾಕ್ಕೆ ಅಕ್ಷರ ರೂಪ, ಕಲಾ ರೂಪ ನೀಡುವ ಮೂಲಕ ಚೈತನ್ಯವನ್ನು ಮರಳಿ ತಂದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಅವರ ಹೆಗಲೆಣೆಗಾಗಿ ದುಡಿದ ಎಲ್ಲರ ಅಜ್ಞಾತ ಶ್ರದ್ಧಾ ಮನಸ್ಸುಗಳ ಶ್ರಮಕ್ಕೆ ನಮನ.