ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಮಂಗಲ್ಪಾಡಿ ತಿಂಬರ ಗೋಪಾಲಕೃಷ್ಣ ಮಯ್ಯರು ಅಕ್ಟೋಬರ್ 19ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು.
ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಬಹುಕಾಲ ಸೇವೆ ಸಲ್ಲಿಸಿದ ಮಯ್ಯರು ಖ್ಯಾತ ಯಕ್ಷಗಾನ ಭಾಗವತರಾಗಿದ್ದರು. ತನ್ನ ಕಂಚಿನ ಕಂಠ ಮತ್ತು ಪ್ರಸಂಗದ ಹಿಡಿತಗಳಿಂದ ಅವರ ಭಾಗವತಿಕೆಯಲ್ಲಿ ಆಟಗಳು ಯಶಸ್ಸಾಗುತ್ತಿದ್ದುವು. ವೇಷಧಾರಿಯಾಗಿಯೂ ಅನುಭವ. ದಿ.ಕುಂಬಳೆ ಶೇಷಪ್ಪ ಅವರ ನೇತೃತ್ವದಲ್ಲಿದ್ದ ಉಪ್ಪಳ ಶ್ರೀ ಭಗವತಿ ಮೇಳಕ್ಕೆ ಬಹುಕಾಲ ಅವರ ಸೇವೆ ಸಲ್ಲಲ್ಪಟ್ಟಿತ್ತು. ಅಮ್ಟಾಡಿ ಮೇಳದಲ್ಲೂ ತಿರುಗಾಟ ಮಾಡಿದ್ದರು.
ತನ್ನ ಇಳಿ ವಯಸ್ಸಲ್ಲೂ ಸ್ಥಳೀಯ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕೆಂಬ ದೃಷ್ಟಿಯಿಂದ ಕೋಡಿಬೈಲು ಎಂಬಲ್ಲಿ ಶಾಲೆಯೊಂದನ್ನು ಆರಂಭಿಸಿದ ಹೆಗ್ಗಳಿಕೆ ಇವರದು. ಇವರ ಪತ್ನಿ ಜಯಲಕ್ಷ್ಮೀ ಮಯ್ಯ. ಮಂಗಲ್ಪಾಡಿ ಗ್ರಾಮ ಪಂಚಾಯತಿನ ಪ್ರತಾಪನಗರದ ಸದಸ್ಯೆ.
ಅಗಲಿದ ಚೇತನಕ್ಕೆ ಕಂಬನಿ. ಅಕ್ಷರ ನಮನ.
Friday, October 22, 2010
Monday, October 18, 2010
ಸಂಪಾಜೆ ಯಕ್ಷೊತ್ಸವಕ್ಕೆ ಇಪ್ಪತ್ತರ ಸಂಭ್ರಮ
ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಾರಥ್ಯದಲ್ಲಿ ನಡೆಯುವ ಯಕ್ಷೊತ್ಸವಕ್ಕೆ ಈಗ ಇಪ್ಪತ್ತರ ಹರುಷ. 6 ನವೆಂಬರ್ 2010, ಶನಿವಾರ ಪೂರ್ವಾಹ್ನ ಗಂಟೆ 10 ಕ್ಕೆ ಸಂಪಾಜೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಯಕ್ಷೊತ್ಸವದ ಶುಭಾರಂಭ.
ಘನ ಅಧ್ಯಕ್ಷತೆ : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ
ಮಹಾಸ್ವಾಮಿಗಳವರು * ಆಶೀರ್ವಚನ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳವರು, ಶ್ರೀ ಪೇಜಾವರ ಮಠ, ದಿವ್ಯ ಉಪಸ್ಥಿತಿ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳವರು, ಶ್ರೀ ಸುಬ್ರಹ್ಮಣ್ಯ ಮಠ.
ಅಭಿನಂದನೆ : ಖ್ಯಾತ ಜ್ಯೋತಿಷಿ ಶ್ರೀ ವಳಕ್ಕುಂಜ ವೆಂಕಟ್ರಮಣ ಭಟ್ಟರಿಗೆ.
ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ.
ಸಾವಯವ ಕೃಷಿ ತಜ್ಞೆ ಶ್ರೀಮತಿ ಸರವು ರತ್ನವೇಣಿ ರಾಮಭಟ್ ಇವರಿಗೆ
ಸಂಮಾನ : ಯಕ್ಷಗಾನ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ.
ಶೇಣಿ ಪ್ರಶಸ್ತಿ : ಯಕ್ಷಗಾನ ಅರ್ಥಧಾರಿ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವರಿಗೆ.
ವಿಂಶತಿ ಯಕ್ಷೊತ್ಸವ ಪ್ರಶಸ್ತಿ :* ವೇ.ಮೂ.ಪರಕಜೆ ಗಣಪತಿ ಭಟ್ * ವೇ.ಮೂ.ಉಡುಪಮೂಲೆ ಗೋಪಾಲಕೃಷ್ಣ ಭಟ್ * ಖ್ಯಾತ ಜ್ಯೋತಿಷಿ ವೇ.ಮೂ.ಬೇಳ ಪದ್ಮನಾಭ ಶರ್ಮ * ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ * ಶ್ರೀ ಸೂರಿಕುಮೇರು ಗೋವಿಂದ ಭಟ್ * ಶ್ರೀ ಮಂಟಪ ಪ್ರಭಾಕರ ಉಪಾಧ್ಯ
ಕಲಾಸಾಧಕ ಪ್ರಶಸ್ತಿ:* ಶ್ರೀ ಕುಂಬಳೆ ಸುಂದರ ರಾವ್, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ.
ವಿಂಶತಿತಮ ವಿದ್ವತ್ ಪ್ರಶಸ್ತಿ:
ಗೌರವಾನ್ವಿತರಾದ * ಪ್ರೊ: ಹೆರಂಜೆ ಕೃಷ್ಣ ಭಟ್ * ಪ್ರೊ: ಅಮೃತ ಸೋಮೇಶ್ವರ * ವೇ.ಮೂ.ಮಣಿಮುಂಡ ಮಹಾಲಿಂಗ ಉಪಾಧಾಯ * ವೇ.ಮೂ.ಉಚ್ಚಿಲ ಪದ್ಮನಾಭ ತಂತ್ರಿ * ಡಾ.ಎಂ.ಪ್ರಭಾಕರ ಜೋಶಿ * ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ * ವಿದ್ವಾನ್ ಕೆರೆಕೈ ಉಮಾಕಾಂತ ಭಟ್ * ವೇ.ಮೂ.ಪಳ್ಳತಡ್ಕ ವಿಶ್ವೇಶ್ವರ ಭಟ್ * ವಿದ್ವಾನ್ ಶಿಮಂತೂರು ನಾರಾಯಣ ಶೆಟ್ಟಿ * ಜ್ಯೋತಿಷಿ ಮಧೂರು ನಾರಾಯಣ ರಂಗಭಟ್ * ಜ್ಯೋತಿಷಿ ಚೇಕೋಡು ಸುಬ್ರಹ್ಮಣ್ಯ ಭಟ್ * ರಾಘವ ನಂಬಿಯಾರ್.
ವಿಂಶತಿತಮ ಕಲಾ ಸಾಧಕ ಪ್ರಶಸ್ತಿ:
ಶ್ರೀಗಳಾದ * ಅಗರಿ ರಘುರಾಮ ಭಾಗವತ * ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ * ತಲೆಂಗಳ ಗೋಪಾಲಕೃಷ್ಣ ಭಟ್ * ಗೋಪಾಲಕೃಷ್ಣ ಕುರೂಪ್ * ಮಾಂಬಾಡಿ ಸುಬ್ರಹ್ಮಣ್ಯ ಭಟ್ * ಕಡಂದೇಲು ಪುರುಷೋತ್ತಮ ಭಟ್ * ಪೆರುವೋಡಿ ನಾರಾಯಣ ಭಟ್ * ಮಿಜಾರು ಅಣ್ಣಪ್ಪ * ಸಕ್ಕಟ್ಟು ಲಕ್ಷ್ಮೀನಾರಾಯಣ * ಬಳ್ಳಂಬೆಟ್ಟು ಶೀನಪ್ಪ ಭಂಡಾರಿ * ಮಧೂರು ಗಣಪತಿ ರಾವ್ * ಮುಳಿಯಾಲ ಭೀಮ ಭಟ್ * ಹೊಸಹಿತ್ಲು ಮಹಾಲಿಂಗ ಭಟ್ * ಕೋಳ್ಯೂರು ನಾರಾಯಣ ಭಟ್ * ಮುಂಡ್ರುಕಜೆ ರಾಮಚಂದ್ರ ಭಟ್ * ಕುಡಾನ ಗೋಪಾಲಕೃಷ್ಣ ಭಟ್ * ಜಲವಳ್ಳಿ ವೆಂಕಟೇಶ ರಾವ್ * ಕುಂಜಾಲು ರಾಮಕೃಷ್ಣ * ಕೊಕ್ಕಡ ಈಶ್ವರ ಭಟ್ * ಪೆರುವಾಯಿ ನಾರಾಯಣ ಶೆಟ್ಟಿ.
ಅಭಿನಂದನಾ ಭಾಷಣ :
ಶ್ರೀ ಉಜಿರೆ ಅಶೋಕ ಭಟ್, ಶ್ರೀ ಜಿ.ಕೆ.ಭಟ್ ಸೇರಾಜೆ, ಉಡುವೆಕೋಡಿ ಸುಬ್ಬಪ್ಪಯ್ಯ, ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್.
ಈ ಸಂದರ್ಭದಲ್ಲಿ
- ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ಟರು ಹಾಡುಗಾರಿಕೆಯ ಧ್ವನಿಸುರುಳಿ ಬಿಡುಗಡೆ.* ಶ್ರೀ ತಾರಾನಾಥ ಬಲ್ಯಾರ ಅವರ 'ಕಬ್ಬಿನ ಕೋಲು' ಕೃತಿ ಬಿಡುಗಡೆ.
ಮಧ್ಯಾಹ್ನ 1 ಗಂಟೆಯಿಂದ ಮರುದಿವಸ ಸೂರ್ಯೋದಯದ ತನಕ
ತೆಂಕು-ಬಡಗು ಕಲಾವಿದರ ಸಮ್ಮಿಳನದಲ್ಲಿ ಅಮೋಘ ಯಕ್ಷಗಾನ ಪ್ರದರ್ಶನ -
ಬೇಡರ ಕಣ್ಣಪ್ಪ, ಸುಧನ್ವಾರ್ಜುನ, ವಿಶ್ವಾಮಿತ್ರ ಪ್ರತಾಪ, ಜ್ವಾಲಾ-ಜಾಹ್ನವಿ, ಮಹಿಷೋತ್ಪತ್ತಿ
Friday, July 23, 2010
ಕುಂಬಳೆ, ಸೂರಿಕುಮೇರಿಗೆ ಯಕ್ಷ ಕಲಾನಿಧಿ ಪ್ರಶಸ್ತಿ
ಹೊಸದಿಲ್ಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯು 2010ನೇ ಸಾಲಿನ 'ಯಕ್ಷ ಕಲಾನಿಧಿ' ಪ್ರಶಸ್ತಿಗಾಗಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾವ್ ಮತ್ತು ಶ್ರೀ ಸೂರಿಕುಮೇರು ಗೋವಿಂದ ಭಟ್ ಇವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 16ರಂದು ನಡೆಯಲಿದೆ. ಪ್ರಶಸ್ತಿಯು ಹನ್ನೆರಡು ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶಿತವಾಗಲಿದೆ. ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯು ಕಳೆದ ಐದು ವರುಷಗಳಲ್ಲಿ ಶ್ರೀಗಳಾದ ಕಟೀಲು ಪುರುಶೋತ್ತಮ ಭಟ್, ಪೆರುವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ, ಮಲ್ಪೆ ರಾಮದಾಸ ಸಾಮಗ, ಕೋಳ್ಯೂರು ರಾಮಚಂದ್ರ ರಾವ್ ಇವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತುThursday, April 29, 2010
ಮರೆಯಾದ ಮಾತಿನ 'ಮಾಣಿಕ್ಯ'!


ಹರಿದಾಸ ಮಲ್ಪೆ ರಾಮದಾಸ ಸಾಮಗ - 'ಸಣ್ಣ ಸಾಮಗ'ರು. ಇವರಣ್ಣ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗ 'ದೊಡ್ಡ ಸಾಮಗ'ರು. ಇಬ್ಬರದೂ 'ದೊಡ್ಡ ವ್ಯಕ್ತಿತ್ವ'. ಅರ್ಥಗಾರಿಕೆಯಲ್ಲಿ 'ದೊಡ್ಡ ಹೆಜ್ಜೆ'. ಇವರ ಮಾತಿನ ಝರಿಯ ಮುಂದೆ ಮಾಣಿಕ್ಯದ ಪ್ರಭೆಯೂ ಮಸುಕಾಗುತ್ತಿತ್ತು! ಆದರೆ ಮಾತಿನ ಲೋಕದಲ್ಲೀಗ ಮೌನ! ಎಂಭತ್ತನಾಲ್ಕು ಸಂವತ್ಸರದ ಮಾತಿನ ಬದುಕಿಗೆ ವಿರಾಮ.ರಾಮದಾಸ ಸಾಮಗರು - ಹರಿದಾಸರು. ಸಂಗೀತ ಅವರಿಗೆ ಖುಷಿ. ರಾಗ, ತಾಳ, ಲಯಗಳಲ್ಲಿ ಬಿಗಿ. ಒಂದು ಕಾಲಘಟ್ಟದಲ್ಲಿ ಮೃದಂಗವಾದಕರು. ಇವೆಲ್ಲವೂ ಹರಿಕೀರ್ತನೆ(ಕಥೆ)ಯಲ್ಲಿ ಮೇಳೈಸುತ್ತಿದ್ದುವು.
ಸಾಮಗರದು ಕಾವ್ಯಪ್ರಧಾನ ಅರ್ಥಗಾರಿಕೆ. ಕಾವ್ಯಾತ್ಮಕ ಶೈಲಿ-ವಾಕ್ಸರಣಿ. ಭಾವಾತ್ಮಕ ಧೋರಣೆ. ಧರ್ಮಶಾಸ್ತ್ರದ ಕಾವ್ಯಾತ್ಮಕ ಜ್ಞಾನ. ಶಬ್ಧಾಲಂಕಾರ ಹೆಚ್ಚು. ವೇಗದ ನುಡಿ.
ತಾಳಮದ್ದಳೆಯಲ್ಲಿ ಹಿಮ್ಮೇಳವನ್ನು ಪೂರ್ತಿ 'ಅನುಭವಿಸುವ' ಅರ್ಥಧಾರಿ. ಭಾಗವತಿಕೆ, ಚೆಂಡೆ, ಮದ್ದಳೆಯೊಂದಿಗೆ ಸಾಗುತ್ತದೆ-ಅಭಿವ್ಯಕ್ತಿ ಸಂಸಾರ. ಲಹರಿ ಬಂದಾಗ ಭಾಗವತರೊಂದಿಗೆ 'ಭಾಗವತ'ರಾಗುವುದೂ ಇದೆ. ರಂಗದಲ್ಲಿದ್ದಷ್ಟೂ ಹೊತ್ತು ಪಾತ್ರ - ಪಾತ್ರಧಾರಿ ಒಂದೇ.
ಸಾಮಗರ ವೇಷಭೂಷಣ - ಜುಟ್ಟು, ಜುಬ್ಬಾ, ಕಚ್ಚೆ, ಶಾಲು. ಆಧುನಿಕದ ಸೋಂಕಿಲ್ಲ. ಕಚ್ಚೆಯ 'ಮುನ್ನಿ'ಯ ತುದಿಯನ್ನು ಎಡಗೈ ಮೇಲೆ ಬಿಟ್ಟು ಮಾತಿನ ಮಂಚವನ್ನು ಏರುವುದೇ ಸಂಭ್ರಮ! ಮೊದಲ ವಂದನೆ ಭಾಗವತರಿಗೆ. ಅದೂ ಪೂರ್ಣಪ್ರಮಾಣದ ನಮಸ್ಕಾರ. ಇದು ಶ್ರಾವ್ಯ ವೇದಿಕೆಯ 'ದೃಶ್ಯ'. ತನ್ನದೇ ಆದ ಪರಂಪರೆ. ವೇದಾಂತ, ತರ್ಕ, ಮಂಡನೆ, ಕಥೆ-ಉಪಕಥೆಗಳಿಂದ ಆವರಿಸಿದ 'ಸ್ವಗತ'. ಯಾವುದೂ ಪೂರ್ವ ನಿರ್ಧರಿತವಲ್ಲ, ಅಲ್ಲಲ್ಲಿನ ಸ್ಪುರಣೆ.
ಪಾತ್ರ ವೈಭವ
ಕೂಡ್ಲು, ಮೂಲ್ಕಿ, ಕರ್ನಾಟಕ, ಇರಾ, ಸುರತ್ಕಲ್, ಕದ್ರಿ, ಬಪ್ಪನಾಡು, ಅಮೃತೇಶ್ವರೀ, ಶಿರಸಿ, ಪೆರ್ಡೂರು ಮೇಳಗಳಲ್ಲಿ ವೇಷಧಾರಿಯಾಗಿ ವ್ಯವಸಾಯ. ಬಯಲಾಟದ ಅರ್ಥಗಾರಿಕೆಗೆ ಸೊಗಸು ತಂದ ದಿನಗಳೀಗ ನೆನಪು. ನಾಟ್ಯ ಕೊರತೆಯನ್ನು 'ಮಾತಿನ ಕುಣಿತ'ದಿಂದ ತುಂಬಿದ್ದಾರೆ. ಪೂರ್ತಿ ರಂಗವನ್ನಾವರಿಸುವ ಮಾತು - ಸಹಜ ಅಂಗಾಭಿನಯ.
ಪಟ್ಟಾಭಿಷೇಕ ಪ್ರಸಂಗದ 'ದಶರಥ', ರುಕ್ಮಾಂಗದ ಚರಿತ್ರೆಯ 'ರುಕ್ಮಾಂಗದ', ಕರ್ಮಬಂಧದ 'ಭೀಷ್ಮ', ಬ್ರಹ್ಮಕಪಾಲದ 'ಈಶ್ವರ', ದಕ್ಷಾಧ್ವರದ 'ಶಿವ', ಅಕ್ಷಯಾಂಬರದ 'ಶಕುನಿ', ಪಾರಿಜಾತದ 'ಕೃಷ್ಣ', ಯಾವುದೇ ಪ್ರಸಂಗದ 'ರಾಮ'-'ಕೃಷ್ಣ' ಪಾತ್ರಗಳು ಮತ್ತು 'ಶಂತನು', 'ಉತ್ತರಕುಮಾರ', - ಮಾತಲ್ಲೇ ಮರುಹುಟ್ಟು ಪಡೆದಿವೆ. ಬಯಲಾಟದಲ್ಲಿ 'ವಿಶ್ವಾಮಿತ್ರ', 'ನಳ', 'ಹರಿಶ್ಚಂದ್ರ', 'ಕೈಲಾಸ ಶಾಸ್ತ್ರಿ', 'ಮಾಧವ ಭಟ್ಟ' ಪಾತ್ರಗಳಿಗೆ ಮುಗಿಬೀಳುವ ದಿನಗಳಿದ್ದುವು. ಕೋಳ್ಯೂರು ರಾಮಚಂದ್ರ ರಾವ್ ಮತ್ತು ಸಾಮಗರ 'ಯಕ್ಷದಾಂಪತ್ಯ'ವು ನಿಜದಾಂಪತ್ಯಕ್ಕೊಂದು ಆದರ್ಶ! ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿಯರು ರಂಗದಲ್ಲಿ ಅತ್ತರೆ ಸಾಕು, ಪ್ರೇಕ್ಷಕರೂ ಕೂಡಾ ಕಣ್ಣೊರೆಸಿಕೊಳ್ಳುತ್ತಿದ್ದರು.
ತುಳು ಯಕ್ಷಗಾನವನ್ನು ಜ್ಞಾಪಿಸಿಕೊಳ್ಳಿ. 'ತುಳು' ಭಾಷೆಯನ್ನು ಅಲ್ಲಿ ಹುಡುಕಬೇಕು! ಸಾಮಗರು ನಿರ್ವಹಿಸಿದ ಪಾತ್ರಗಳು 'ತುಳು'ವಿಗೊಂದು ಸಂಭ್ರಮ. ಹೊಸಹೊಸ ಶಬ್ಧಗಳು. 'ತುಳುವರು ಹುಬ್ಬೇರುವಷ್ಟು ಭಾಷಾ ಪ್ರಯೋಗ ಅವರಿಗೆ ಸಿದ್ಧಿ. 'ಕೋಳ್ಯೂರು-ಸಾಮಗರ ಮತ್ತು 'ಸಾಮಗ-ಮಿಜಾರು ಅಣ್ಣಪ್ಪ ಹಾಸ್ಯಗಾರರ' ಅಂದಿನ ರಂಗಪಾತ್ರಗಳ ವೈಭವ ಒಂದು 'ತುಳು ಪಠ್ಯ'! ಕೋಟಿಚೆನ್ನಯ್ಯ ಪ್ರಸಂಗದ 'ಬುದ್ಧಿವಂತ', ತುಳುನಾಡ ಸಿರಿಯ 'ಕಾಂತುಪೂಂಜ', ಕಾಡಮಲ್ಲಿಗೆಯ 'ಉದಯವರ್ಮ' - ಮತ್ತೆ ಮತ್ತೆ ಕಾಡುವ ಪಾತ್ರಗಳು.
ಮಾತಿನ ದಿಂಙಣ
ಸಾಮಗರದು 'ಚಿಂತನೆ ಮತ್ತು ರಂಜನೆ'ಯ ಮಾತು. ಅರ್ಥಗಾರಿಯಲ್ಲಿ 'ಚಿತ್ರಕ ಸಾಮಥ್ರ್ಯ'. ಒಂದು ವಸ್ತುವಿಷಯವನ್ನು ತಂದು ಕಣ್ಣಿಗೆ ಕಟ್ಟುವಂತೆ ಸನ್ನಿವೇಶವನ್ನು ನಿರ್ಮಿಸುವ ಅಪೂರ್ವತೆ.' ಮೂಲದಲ್ಲಿ ಕಥೆ ಒಂದು, ಪ್ರಸಂಗದಲ್ಲಿ ಇನ್ನೊಂದು. ಇಂತಹ ವೈರುಧ್ಯದ ಹೊತ್ತಲ್ಲಿ ವಾದ-ವಿವಾದಗಳು ಏರ್ಪಟ್ಟರೆ ತುದಿಮುಟ್ಟುವುದು ತ್ರಾಸ. ಈ ಎರಡನ್ನೂ ತಮ್ಮ ಅರ್ಥಗಾರಿಕೆಯಲ್ಲಿ ಸಮನ್ವಯ ಮಾಡಿ, ಪಾತ್ರಕ್ಕೆ ನ್ಯಾಯ ಸಲ್ಲಿಸುವತ್ತ ಗಮನ. ಮೊಗೆಮೊಗೆದು ಉಂಡ ಜ್ಞಾನದ ಫಲ!
ಸಾಮಗರ ಅರ್ಥಗಾರಿಕೆ ಅಂದರೆ 'ವ್ಯಾಕರಣ ಪಾಠ' ಎಂದು ವಿನೋದಕ್ಕೆ ಹೇಳುವುದುಂಟು. ಇಲ್ಲಿ ಪ್ರಜ್ಞಾಪೂರ್ವಕವಾದ ಶುದ್ಧ ಕನ್ನಡ. 'ಶುದ್ಧ ಪ್ರಯೋಗಗಳು ಅರ್ಥಗಾರಿಕೆಯಲ್ಲಿ ಬರಬೇಕು' ಎನ್ನುತ್ತಾ 'ಇದು ಕನ್ನಡ ಭಾಷೆ ಉಳಿಸಲು ಯಕ್ಷಗಾನದ ಕೊಡುಗೆ' ಎಂದು ಪ್ರತಿಪಾದಿಸುತ್ತಿದ್ದರು.
ಸಾಮಾನ್ಯವಾಗಿ ಅರ್ಥಧಾರಿ ಎಲ್ಲಿ ತಪ್ಪುತ್ತಾನೋ - ಇದಿರು ಅರ್ಥಧಾರಿ ಕಾಯುತ್ತಿರುತ್ತಾನೆ - ಆಕ್ರಮಣ ಮಾಡಲು! ಸಾಮಗರು ಇದಿರಿದ್ದಾಗ ಸಣ್ಣ ಅರ್ಥಧಾರಿ ಬೆವರಬೇಕಾದ್ದಿಲ್ಲ. ಒಂದು ವೇಳೆ ತಪ್ಪಿದರೂ, ತಾನೇ ಸರಿಪಡಿಸುತ್ತಾ, ತನ್ನ ಪಾತ್ರವನ್ನು ಕೆಡಿಸಿಕೊಂಡಾದರೂ ಇದಿರಿನ ಪಾತ್ರವನ್ನೂ ಪೋಶಿಸುವ ಗುಣ. ಮನೋಭಂಗ ಮಾಡುವುದಿಲ್ಲ. ಇವರಿಂದಾಗಿ ಅಸಂಖ್ಯ ಪ್ರತಿಪಾತ್ರಗಳು ವಿಜೃಂಭಿಸಿವೆ.
ವಾದ-ಪ್ರತಿವಾದಗಳ ಹರಹು ತನ್ನ ನಿರ್ಣಯದ-ದಾರಿಯ ಚೌಕಟ್ಟಿನೊಳಗೆ ಸಂಚರಿಸುತ್ತವೆ. ಒಣಚರ್ಚೆಗಳಿಲ್ಲ. ಪಾತ್ರದ ಗೌರವವುಳಿಸಿಕೊಂಡೇ ಮಾತು. ಕೆಲವೊಂದು ಸಲ ವೀರರಸದ ಸಂದರ್ಭದಲ್ಲಿ ಕೆರಳುವಾಗ ಹಿಮ್ಮೇಳವೂ ಒಂದು ಕ್ಷಣ ಬೆರಗಾಗುತ್ತಿತ್ತು!
ಸಾಮಗರ ಅರ್ಥದಲ್ಲಿ ಚಿಂತನಗ್ರಾಹ್ಯ ವಿಚಾರಗಳ ಮಳೆ! ಉದಾ. 'ಅಮರಾವತಿಯೋ, ಅಮರವತಿಯೋ' ದ್ವಾರಾವತಿಯೋ, ದ್ವಾರವತಿಯೋ..ಏನೋ..ನನಗೆ ಗೊತ್ತಿಲ್ಲ' ಅಂತ ನಿಲ್ಲಿಸಿಬಿಡುತ್ತಾರೆ. ಅಂದರೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಅಷ್ಟಕ್ಕೆ ನಿಲ್ಲಿಸಿ ಮುಂದಕ್ಕೆ ಹೋಗುತ್ತಾರೆ. ಇದನ್ನು 'ವಿನೋದ -ಗೇಲಿ'ಯಾಗಿ ಸ್ವೀಕರಿಸಿದವರೇ ಹೆಚ್ಚು. ಅದಕ್ಕೆ ಹಾಗೊಂದು ಅರ್ಥ ಇದೆಯಾ ಅಂತ ಆಲೋಚಿಸಿದವರು ಕಡಿಮೆ.
ನಮ್ಮಲ್ಲಿ ಪ್ರತಿಭೆಯನ್ನು ಒಪ್ಪಲು, ಪ್ರಶಂಸಿಸಲು ಮಾತಿನ ದಾರಿದ್ರ್ಯ ಕಾಣುತ್ತೇವೆ. ಒಬ್ಬ ಅರ್ಥಧಾರಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಾಗ, ಕೀಳರಿಮೆಯನ್ನು ಆವಾಹಿಸಿಕೊಳ್ಳುವ ಸಹವರ್ತಿಗಳು ಎಷ್ಟು ಮಂದಿ ಬೇಕು? ಸಾಮಗರಿಗೆ ತನ್ನಿದಿರಿನ ಅರ್ಥಧಾರಿಗೆ ಪ್ರಶಂಸೆ ಸಿಕ್ಕಿದಾಗ, ತಾನೂ ಅದರೊಂದಿಗೆ ಬೆರೆಯುತ್ತಾರೆ. ಮುಖವರ್ತನೆಯಿಂದ ತಿಳಿಸುತ್ತಾರೆ. ಮುಂದಿನ ಅರ್ಥದಲ್ಲಿ ತಂದೇ ತರುತ್ತಾರೆ.
ಯಕ್ಷಗಾನದ ಚೌಕಟ್ಟಿನೊಳಗೆ ಪೌರಾಣಿಕವಾದ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದರು. ರಾಜಕಾರಣ ಅವರ ಆರ್ಥಗಾರಿಕೆಯಲ್ಲಿಲ್ಲ. ಇವರ ಬಹುಕಾಲದ ಒಡನಾಡಿ ಕೋಳ್ಯೂರು ರಾಮಚಂದ್ರ ರಾಯರು ಒಂದೆಡೆ ಹೇಳುತ್ತಾರೆ -'ಪತ್ರಿಕೆಯ ಭಾಷೆಯನ್ನು ಪಾತ್ರ ಚಿತ್ರಣದಲ್ಲಿ ಬಳಸಿಕೊಂಡಿರುವುದನ್ನು ನಾನು ನೋಡಿಲ್ಲ'!
ಮದುಡುವ ಮಗು-ಮನಸ್ಸು
ಬದುಕಿನಲ್ಲೂ ಸಾಮಗರು ಸರಳ, ಭಾವಜೀವಿ. ಮಗುವಿನ ಮನಸ್ಸು. ಭೇಟಿಗೆ ಬಂದವರನ್ನು ಪ್ರೀತಿಪೂರ್ವಕವಾಗಿ ಮಾತನಾಡಿಸಿ ತಾನು ಪಡೆವ ಸತ್ಕಾರವನ್ನು ಅವರಿಗೂ ಕೊಡಿಸುವ ಗುಣ. ಬಟ್ಟಲಿನ ದೋಸೆಯನ್ನು ಹಂಚಿ ತಿನ್ನುವ ಮನೋಭಾವ.
ಧುತ್ತೆಂದು ಎರಗಿದ ಶಾರೀರಿಕ ಅಸಹಾಯಕತೆ ಸಾಮಗರನ್ನು ಹಿಂಡಿ-ಹಿಪ್ಪೆ ಮಾಡಿತ್ತು. ರಂಗದಲ್ಲಿ ಶನಿಕಾಟಕ್ಕೆ ತುತ್ತಾದ 'ನಳ' ಪಾತ್ರದ ಭಾವವೇ ಯೋಗವಾಗಿ ಬಂತೋ ಏನೋ? ಕಳೆದೆರಡು ವರುಷಗಳಿಂದ ಹಾಸಿಗೆಗೆ ಒರಗಿದ 'ಮಾತಿನ ಮಾಣಿಕ್ಯ'ದ ಹೊಳಪು ಮಸುಕಾಗಿತ್ತು. ಈಗ ಪೂರ್ತಿ ಮೌನ. ಮಡದಿ ನಾಗರತ್ನ. ಇಬ್ಬರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳ ಸಂಸಾರ. ಎಪ್ರಿಲ್ 27, ೨೦೧೦ರಂದು ಎಂಭತ್ತನಾಲ್ಕು ಸಂವತ್ಸರ ಬಾಳಿದ ರಾಮದಾಸ ಸಾಮಗರ (20-6-1926) ಬದುಕು ಪೂರ್ತಿಯಾಯಿತು.
ಡಾ. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ರಾಮದಾಸ ಸಾಮಗ - ಎಂಬ ಮಾತಿನ ಮಂಟಪದ ಎರಡು ಪ್ರಧಾನ ಸ್ತಂಭಗಳು ಕಳಚಿಬಿದ್ದುವು. ಇಹದಿಂದ ದೂರವಾದ ಮಲ್ಪೆ ರಾಮದಾಸ ಸಾಮಗರಿಗಿದು ನುಡಿನಮನ.
ಹಳ್ಳಿ ಸೊಗಸಿನ ಕಲಾವರಣ
ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದ 'ಸಾವಿರ ಸಂಭ್ರಮ'ವು ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಸಂಪನ್ನಗೊಂಡಿತು. ಅಂದು ಕೇರಳದ ಪ್ರಸಿದ್ಧ 'ಕಥಕ್ಕಳಿ'ಯ ಪ್ರದರ್ಶನವಿತ್ತು.ಕಥಕ್ಕಳಿಗೂ ಹಿಮ್ಮೇಳವಿದೆ ತಾನೆ. ಅದರ ಹಿಮ್ಮೇಳದವರು ಬರಿಮೈಯಲ್ಲಿ ರಂಗಸ್ಥಳಕ್ಕೆ ಬಂದಾಗ, ಓರ್ವ ಸುಶಿಕ್ಷಿತ ಮಹನೀಯ, 'ಛೇ.. ಇವರು ಕಾಲದಲ್ಲಿದ್ದಾರೆ... ಸಮವಸ್ತ್ರವನ್ನಾದರೂ ಧರಿಸಬಹುದಿತ್ತಲ್ಲಾ. ನಾವಿಷ್ಟು ಮಂದಿ ಪ್ರೇಕ್ಷಕರಿದ್ದಾಗ ಬರಿಮೈಯಲ್ಲಿ ರಂಗಕ್ಕೆ ಬರುವುದು ಆಶ್ಲೀಲವಲ್ವಾ' ತಮ್ಮ ಮಾತನ್ನು ಇತರರು ಕೇಳಿಸಿಕೊಳ್ಳಲೇಬೇಕು ಎಂಬ ಹಠದಲ್ಲಿದ್ದಂತೆ ವರ್ತಿಸುದ್ದರು.
ಕಥಕ್ಕಳಿಯ ಹಿಮ್ಮೇಳ ಕಲಾವಿದರು 'ಬರಿಮೈ'ಯಲ್ಲಿ ಬಂದಿರುವುದು ಇವರಿಗೆ ಅಶ್ಲೀಲ! ಇಂತಹ 'ಅಪೂರ್ವ ಆಲೋಚನೆ' ಅಲ್ಲಿ ಸೇರಿದ್ದ ಬೇರ್ಯಾವ ವಿದ್ವಾಂಸರಿಗೂ ಹೊಳೆಯಲೇ ಇಲ್ಲ. ಅದು ಆ ಕಲೆಯ ಸೊಗಸು-ಸೊಗಡು. ಬಹುಶಃ ಕಥಕ್ಕಳಿಯ ಪರಿಚಯವಿರುತ್ತಿದ್ದರೆ, ನೋಡಿರುತ್ತಿದ್ದರೆ ಪ್ರಾಯಃ ಅವರು ಹೀಗನ್ನುತ್ತಿರಲಿಲ್ಲವೋ ಏನೋ? ಬಿಳಿವಸ್ತ್ರ, ಹಣೆಯಲ್ಲಿ ಭಸ್ಮ-ತಿಲಕ ಧರಿಸಿ, ವಾದನ ಪರಿಕರಗಳೊಂದಿಗೆ ರಂಗದಲ್ಲಿ ನಿಂತಾದ ಕಥಕ್ಕಳಿಯ ಲೋಕವೊಂದು ಅನಾವರಣಗೊಳ್ಳುತ್ತದೆ. ಆದರೂ ಅವರ 'ಸಮವಸ್ತ್ರದ ಕಲ್ಪನೆ' ಆಲೋಚಿಸುವಂತಾದ್ದು.
ಭಾರತೀಯ ಕಲೆಗಳು ಇತ್ತೀಚೆನ ದಿನಗಳಲ್ಲಿ 'ಆದುನಿಕ ಸ್ಪರ್ಶಕ್ಕೆ' ಒಳಗಾಗುತ್ತಿವೆ. ಬಹುಶಃ ಕಥಕ್ಕಳಿಯ ಬಗ್ಗೆ 'ಬರಿಮೈ' ವಿಮರ್ಶೆಯನ್ನು ಮಾಡಿದ ಮಹನೀಯರು ಕೂಡಾ ಆಧುನಿಕ ಸ್ಪರ್ಶಕ್ಕೆ ಒಳಗಾಗಿರಬಹುದು. ಕಲೆಯನ್ನು ನೋಡುವ ನಮ್ಮ ಕಣ್ಣುಗಳಿಗೆ ಮೊದಲಾದ್ಯತೆಯಲ್ಲಿ ಚಿಕಿತ್ಸೆಯಾಗಬೇಕು ಅನ್ನಿಸುತ್ತದೆ. ಹೆಚ್ಚಿನ ಸಮಾರಂಭಗಳಲ್ಲಿ ನೋಡಿದ್ದೇನೆ - ವಸ್ತುವಿನೊಳಗೆ ಇಳಿಯದೆ, ಸುತ್ತಾಡದೆ 'ತಕ್ಷಣದ ಪ್ರತಿಕ್ರಿಯೆ' ನೀಡಿ ಸುಭಗನಂತೆ ಕಾಣಿಸಿಕೊಳ್ಳುವ ಮಂದಿಗಳನ್ನು!
ಇರಲಿ, ಯಕ್ಷಗಾನವನ್ನು ನೋಡಿದರೆ ಕೆಲವೊಂದು ವೇಷಭೂಷಣಗಳಲ್ಲಿ ಮಾತ್ರ ಯಕ್ಷಗಾನವನ್ನು ಗುರುತಿಸಬಹುದೇ ವಿನಾ, ಮತ್ತೆಲ್ಲಾ ಬಹುತೇಕ ಪರಿಷ್ಕಾರವಾಗಿದೆ. ಈ ಬದಲಾವಣೆ, ಪರಿಷ್ಕಾರವನ್ನು 'ಅಭಿವೃದ್ಧಿ' ಎಂದು ವ್ಯಾಖ್ಯಾನಿಸುತ್ತೇವೆ. ಕಾಲದ ಪರಿಮಾಣಕ್ಕೆ ತಕ್ಕಂತೆ ಚೌಕಟ್ಟಿನೊಳಗೆ ಬದಲಾವಣೆ ಗ್ರಾಹ್ಯ. ಬದಲಿಗೆ ಯಕ್ಷಗಾನ ಭಾಗವತಿಕೆಯಲ್ಲಿ ಜಾನಪದ ಹಾಡನ್ನೋ, ಹಿಂದಿ ಹಾಡಿನ ನಡೆಯನ್ನೋ ಬಳಸಿದರೆ 'ಆಟ ಮುಗಿಯುತ್ತದೆ- ಬೆಳಗಾಗುತ್ತದೆ' ಅಷ್ಟೇ.
ನಮ್ಮ ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ, ಯುವಕ ಮಂಡಲಗಳ ವಾರ್ಷಿಕೋತ್ಸವ, ಜಾತ್ರಾ ಸಮಯಗಳ ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಳ್ಳಿ ಸೊಗಸಿದ್ದ ದಿನಗಳಿದ್ದುವು. ಹೇಳುವಂತಹ 'ಫಿನಿಶಿಂಗ್' ಇಲ್ಲದೆ, ಅಲ್ಲಲ್ಲಿನ ಸಂಪನ್ಮೂಲಗಳನ್ನು ಬಳಸಿ ಅಭಿವ್ಯಕ್ತಗೊಳ್ಳುತ್ತಿದ್ದುವು. ನಾಟಕವೊಂದು ನಿಶ್ಚಿತವಾದರೆ, ಒಂದೆರಡು ತಿಂಗಳ ಹಿಂದೆಯೇ ಅದಕ್ಕೆ ತಾಲೀಮು. ಸ್ಟೇಜ್ ಪ್ರಾಕ್ಟೀಸ್. ಯಕ್ಷಗಾನವಾದರೆ ಮೂರ್ನಾಲ್ಕು ತಿಂಗಳಿಂದಲೇ ತರಬೇತಿ-ಆಧ್ಯಯನ.
ಇಂತಹ ಸ್ಥಿತಿ ಬದಲಾಗಿದೆ. ಎಲ್ಲಾ ಕಡೆ 'ರೆಡಿ ಟು ಈಟ್'! ಜನಪ್ರಿಯತೆಯ ಗುಂಗು ಹಳ್ಳಿ ಪ್ರತಿಭೆಗಳನ್ನೂ ಬಿಟ್ಟಿಲ್ಲ. ಸಿನಿಮಾ ಢಾಂಢೂಂ ಹಾಡುಗಳು, ಕುಣಿತಗಳು, ಮೈಕುಲುಕಾಟ.. ಇತ್ಯಾದಿಗಳು ಹಳ್ಳಿ ಸ್ಟೇಜ್ಗಳನ್ನೂ ಬಿಟ್ಟಿಲ್ಲ. ಇದರಿಂದಾಗಿ ಪಾರಂಪರಿಕವಾಗಿ ನಡೆಯುತ್ತಿದ್ದ ನಾಟಕ, ಯಕ್ಷಗಾನ, ದೇವರನಾಮ.. ಗಳು ಮಸುಕಾಗಿವೆ.
ಮೊನ್ನೆ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅರುವತ್ತಾರನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈ ಎಲ್ಲಾ ವಿಚಾರಗಳು ಗಿರಕಿ ಹೊಡೆದುವು! ಕನ್ನಾಡು-ಕೇರಳದ ಗಡಿಯಂಚಿನ ಗ್ರಾಮ 'ಬನಾರಿ'. ಯಕ್ಷಗಾನದ ಪ್ರಾತಃಸ್ಮರಣೀಯ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ - ಆರೇಳು ದಶಕಗಳ ಹಿಂದೆ ಹುಟ್ಟು ಹಾಕಿದ ಸಾಂಸ್ಕೃತಿಕ ವೇದಿಕೆಯು ಬದುಕನ್ನರಳಿಸುವ ಉಪಾದಿ.
ಕೀರ್ತಿಶೇಷ ಗುಡ್ಡಪ್ಪ ಗೌಡರು ಒಮ್ಮೆ ಹೇಳಿದ್ದರು - 'ಬನಾರಿ ಸುತ್ತೆಲ್ಲಾ ಅಕ್ಷರಾಭ್ಯಾಸಿಗಳು ಕಡಿಮೆಯಿದ್ದ ಕಾಲದಲ್ಲಿ, ಕೈಹಿಡಿದು ಅಕ್ಷರ ಬರೆಸಿದವರು ವಿಷ್ಣು ಭಟ್ಟರು. ಹಿಂದೆಲ್ಲಾ ಋಷ್ಯಾಶ್ರಮದಲ್ಲಿರುವ ಗುರುಕುಲ ಮಾದರಿಯಂತಹುದನ್ನು ಬನಾರಿಯಲ್ಲಿ ಕಟ್ಟಿ, ಶಿಷ್ಯರನ್ನು ರೂಪಿಸಿ, ಅವರ ಮೂಲಕ ತನ್ನಾಶಯದ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುತ್ತಿದ್ದ ಪರಿ ಅನ್ಯಾದೃಶ'.
ಬನಾರಿಯ ನೆಲದಲ್ಲಿ ಕುಣಿದ, ಮಾತನಾಡಿದ ಎಷ್ಟೋ ಕಲಾವಿದರು 'ಹೆಸರು' ಮಾಡಿದವರೇ. ನಿರಕ್ಷರಿಗಳಿಗೆ ಅಕ್ಷರಪ್ರೀತಿಯನ್ನು ಹುಟ್ಟಿಸಿ, ಓದುವ ಅಭ್ಯಾಸವನ್ನು ಮಾಡಿಸಿದ ಮಾಸ್ತರರು ಬನಾರಿ ನೆಲದಲ್ಲಿ ಜೀವಂತ.
ತಾನು ಗೆಜ್ಜೆ ಕಟ್ಟಿದರು. ವೇಷ ತೊಟ್ಟರು. ಕುಣಿದರು. ತನ್ನ ಶಿಷ್ಯರಲ್ಲೂ ಅದನ್ನೇ ನಿರೀಕ್ಷಿಸಿದ್ದರು. ಊಟ, ವಸತಿ ಕೊಟ್ಟು ಒಂದಷ್ಟು ಯಕ್ಷಗಾನ ಕಲಾವಿದರನ್ನು ರೂಪಿಸಿದ ಮಾಸ್ತರ್ ವಿಷ್ಣು ಭಟ್ಟರ ಬನಾರಿ ನೆಲ ಯಕ್ಷಗಾನಕ್ಕೆ ವಿಶ್ವವಿದ್ಯಾನಿಲಯ.
ಭೂಒಡಲಲ್ಲಿ ಸಿಕ್ಕ ಕೃಷ್ಣನ ಸುಂದರ ಮೂರ್ತಿಗೆ ಚಿಕ್ಕ ಆಲಯ ಕಟ್ಟಿಸಿ, ಅದಕ್ಕೆ ಯಕ್ಷಗಾನವನ್ನು ಥಳಕು ಹಾಕಿ, ಆರಾಧನಾ ಕಲೆಯಾದ ಯಕ್ಷಗಾನಕ್ಕೆ ಮತ್ತಷ್ಟು ದೇವತಾ ಸ್ಪರ್ಶ ಕೊಟ್ಟರು. ಕಲಾವಿದರಲ್ಲಿ ಭಯ-ಭಕ್ತಿ ಹುಟ್ಟಿತು. ಕಲೆಯ ಬಗ್ಗೆಯೂ ಆದರ ಹೆಚ್ಚಾಯಿತು.
ತನ್ನ ಶಿಷ್ಯರ ಕುಡಿತವನ್ನು ಬಿಡಿಸಲು ತಾನೇ 'ಅನ್ನ ಸತ್ಯಾಗ್ರಹ' ಮಾಡಿ ಯಶಸ್ವಿಯಾದ ಬಗೆ ಕಾಲದ ಕಥನ. ತಪ್ಪಿದವರಿಗೆ ಸಾತ್ವಿಕ ಶಿಕ್ಷೆ ಕಾದಿತ್ತು. ಅವರ ಕೋಪದ, ಶಿಕ್ಷೆಯ ಹಿಂದೆ ಇದ್ದುದು - ತಾಯಿಯ ಪ್ರೀತಿ-ಮಮತೆ. ನಮ್ಮ ಎಷ್ಟು ಯಕ್ಷಗಾನದ ಗುರುಗಳಲ್ಲಿ ಈ ಭಾವವಿದೆ ಹೇಳಿ? ಯಕ್ಷಗಾನವನ್ನು ಮನೆಯ ಅಂಗವಾಗಿ, ಕುಟುಂಬ ಸದಸ್ಯರ ಮಿಳಿತದೊಂದಿಗೆ ಕಟ್ಟಿದ ಆ ಕಾಲದ ವಾತಾವರಣವಿದೆಯಲ್ಲಾ, ಅದೇ ಈಗಲೂ ಮುಂದುವರಿಯುತ್ತಿರುವುದು ವಿಷ್ಣು ಭಟ್ಟರ ತಪ್ಪಸ್ಸಿನ ಫಲ.
ವಿಷ್ಣು ಭಟ್ಟರ ಚಿರಂಜೀವಿಗಳು ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ. ಜರಗುವ ಎಲ್ಲಾ ಕಾರ್ಯಕ್ರಮಗಳಿಗೂ 'ಆರಾಧನಾ ಸ್ಪರ್ಶ'. ಆಧುನಿಕತೆಯ ಥಳಕು ಕಡಿಮೆ. ಊರಿನ ಜನರಿಗೂ ಅಷ್ಟೇ - ಇದು ನಮ್ಮದು ಎಂಬ ಭಾವ. ಹಾಗಾಗಿ ಬನಾರಿ ನೆಲದಲ್ಲಿ ಜರಗುವ ಎಲ್ಲಾ ಕಲಾ ಸಂಬಂಧಿ ಕಾರ್ಯಕ್ರಮಗಳಂದು ಬಹುತೇಕ ಎಲ್ಲಾ ಮನೆಗಳಿಗೂ ಬೀಗ!
ತೀರಾ ಹಳ್ಳಿ ಸೊಗಸಿನಲ್ಲಿ ಸಹಜವಾಗಿ ನಡೆಯುವ ಬನಾರಿಯ ಯಕ್ಷಗಾನ ವಾರ್ಷಿಕೋತ್ಸವದಲ್ಲಿ ಭಾಗವಹಿಸುವುದು ಮುದ ನೀಡುವ ಸಂಗತಿ. ಕೈಯಲ್ಲಿ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುವ ಮನಸ್ಸುಗಳಿಲ್ಲಿ ಗೆಜ್ಜೆಕಟ್ಟಿ, ವೇಷತೊಟ್ಟು ಕುಣಿಯುತ್ತವೆ; ತಾಳ ಹಿಡಿದು ಹಾಡುತ್ತವೆ. ಇಂತಹ ಮನಸ್ಸುಗಳ ರೂಪೀಕರಣ ಕಾಲದ ಆವಶ್ಯಕತೆ.
Wednesday, April 28, 2010
ಮಲ್ಪೆ ಹರಿದಾಸ ರಾಮದಾಸ ಸಾಮಗ ವಿಧಿವಶ
ಯಕ್ಷರಂಗದ ಮೇರು, ಹರಿದಾಸ ಮಲ್ಪೆ ರಾಮದಾಸ ಸಾಮಗರು ಎಪ್ರಿಲ್ 27, ಮಂಗಳವಾರ ಅಪರಾಹ್ನ ನಿಧನರಾದರು. ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಬಯಲಾಟಗಳಲ್ಲಿ ಸುಮಾರು ಐದಾರು ದಶಕಗಳ ಕಾಲ ಮಿಂಚಿ, ಹೊಸ ಹುರುಪನ್ನು ಸ್ಥಾಪಿಸಿದವರು. ಸಂಸ್ಕೃತ, ಕನ್ನಡ, ಸಾಹಿತ್ಯ, ಸಂಗೀತ ಕ್ಷೇತ್ರದ ಆಳ ವಿದ್ವತ್ ಹೊಂದಿದ ಸಾಮಗರು, ತುಳು ಭಾಷೆಗೆ ತನ್ನ ಪಾತ್ರಗಳ ಮೂಲಕ ಕೊಟ್ಟ ಕೊಡುಗೆ ಅಪಾರ. ತೆಂಕು-ಬಡಗು ತಿಟ್ಟುಗಳ ವಿವಿಧ ಮೇಳಗಳಲ್ಲಿ ವ್ಯವಸಾಯ ಮಾಡಿದ ಸಾಮಗರು ಎರಡು ವರುಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ, ಒಂದು ಕಾಲನ್ನು ಕಳೆದುಕೊಂಡರು. ಅಲ್ಲಿಂದೀಚೆಗೆ ಪತ್ನಿ ನಾಗರತ್ನ ಅವರ ಆಸರೆ.
* ಜನನ ದಿನಾಂಕ : 20-6-1926 * ತಂದೆ : ಮಲ್ಪೆ ಲಕ್ಷ್ಮೀನಾರಾಯಣ ಸಾಮಗ * ತಾಯಿ : ಲಕ್ಷ್ಮೀ ಅಮ್ಮ * ಅಣ್ಣ : ಮಲ್ಪೆ ಶಂಕರನಾರಾಯಣ ಸಾಮಗ * ಮಲ್ಪೆ ಎಲಿಮೆಂಟರಿ ಶಾಲೆ, ಕೊಡವೂರು ಹಾಯರ್ ಪ್ರೈಮರಿ ಶಾಲೆಗಳಲ್ಲಿ ಓದು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಪಾಸ್. ನಂತರ ಉಡುಪಿ ಸಂಸ್ಕ್ರತ ಕಾಲೇಜಿನಲ್ಲಿ ವಿದ್ಯಾರ್ಜನೆ. * 1947ರಲ್ಲಿ ನಾಗರತ್ನ ಇವರೊಂದಿಗೆ ವಿವಾಹ * ಐವರು ಮಕ್ಕಳು - ವಾರಿಜಾ, ವಾಸುದೇವ, ಅಶೋಕ (ದಿವಂಗತ), ಮಾಲಿನಿ, ಅಂಬುಜಾ * ರಾಮದಾಸ ಸಾಮಗರ ನಿಧನ - 27-4-2010 - ಮಣಿಪಾಲ ಆಸ್ಪತ್ರೆಯಲ್ಲಿ * ದೇಹಸಂಸ್ಕಾರ - 28-4-2010, ಬೆಳಿಗ್ಗೆ 9-45, ಕೊಡವೂರು ಗ್ರಾಮದ ಮೂಡಬೆಟ್ಟು ಸ್ವಗೃಹದಲ್ಲಿ.
- ಅಗಲಿದ ಹಿರಿಯ ಚೇತನಕ್ಕೆ ಕಂಬನಿ -
Friday, April 23, 2010
ಪೊಳಲಿ ಲೋಕಯ್ಯ ನಿಧನ
ಯಕ್ಷಗಾನದ ಹಿರಿಯ ಸ್ತ್ರೀಪಾತ್ರಧಾರಿ ಪೊಳಲಿ ಲೋಕಯ್ಯ (೭೦) ಎಪ್ರಿಲ್ 20, ೨೦೧೦ರಂದು ಪೊಳಲಿಯ ತಮ್ಮ ಗೃಹದಲ್ಲಿ ನಿಧನರಾದರು. ಕೆಲವು ದಿವಸಗಳಿಂದ ಅವರು ಅನಾರೋಗ್ಯಪೀಡಿತರಾಗಿದ್ದರು. ಲೋಕಯ್ಯರಿಗೆ ಕ್ರಿಶ್ಚಿಯನ್ ಬಾಬು ಗುರು. ಸ್ತ್ರೀವೇಷಗಳಲ್ಲೇ ಪ್ರಸಿದ್ಧಿ. ಸೀತೆ, ಗೌರಿ, ಮಂಡೋದರಿ, ಕೈಕೆ ಮುಂತಾದ ಪಾತ್ರಗಳಲ್ಲಿ ಖ್ಯಾತಿ. ಸಿರಿ, ಕಿನ್ನಿದಾರ, ಪುಲ್ಲುಪೆರ್ಗಡ್ತಿ ಇತ್ಯಾದಿ ಪಾತ್ರಗಳು ಅವರ ಮಾಸ್ಟರ್ ಪೀಸ್. ತುಳು ಭಾಷೆಯ ದೇಸೀ ಸೊಗಡು, ಗಾದೆ, ಕತೆ, ಕವಿತೆ..ಗಳು ಅವರ ಪಾತ್ರಗಳನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದುವುದು. ಅಗಲಿದ ಚೇತನಕ್ಕೆ ನುಡಿನಮನ.
Subscribe to:
Posts (Atom)
