Monday, April 15, 2013

ಮಾಸ್ಟರ್ ವಿಠಲ ಶೆಟ್ಟಿಯವರಿಗೆ ಪಾತಾಳ ಪ್ರಶಸ್ತಿ ಪ್ರದಾನ

                         "ಸದ್ಗುಣ, ಸೌಜನ್ಯ ಮತ್ತು ಪ್ರಾಮಾಣಿಕತೆಗಳಿಂದ ಕಲಾವಿದ ಸಮಾಜದಲ್ಲಿ ಮಾನಿಸಲ್ಪಡುತ್ತಾನೆ. ಜತೆಗೆ ಆತನಲ್ಲಿರುವ ಕಲಾವಂತಿಕೆಯೂ ಬೆಳಗುತ್ತದೆ. ಕಲೆಯನ್ನು ಆರಾಧಿಸಿದಾಗ ಕಲೆಯೂ ಬೆಳಗುತ್ತದೆ. ಕಲಾವಿದನೂ ಬೆಳೆಯುತ್ತಾನೆ. ಇದಕ್ಕಾಗಿ ಪರಿಶ್ರಮ ಬೇಕು," ಎಂದು ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

                        ಅವರು ಸೌರಮಾನ ಯುಗಾದಿಯಂದು ಶ್ರೀ ಎಡನೀರು ಮಠದ ಶ್ರೀಕೃಷ್ಣ ರಂಗಮಂಟಪದಲ್ಲಿ ಹಿರಿಯ ನೃತ್ಯಗುರು ಮಾಸ್ಟರ್ ವಿಠಲ ಶೆಟ್ಟಿಯವರಿಗೆ 'ಪಾತಾಳ ಪ್ರಶಸ್ತಿ 2013'ಯನ್ನು ಪ್ರದಾನ ಮಾಡುತ್ತಾ, "ಮಾಸ್ಟರ್ ವಿಠಲರು ಕಲೆಯನ್ನು ಆರಾಧನಾ ಭಾವದಿಂದ ಸ್ವೀಕರಿಸಿದ್ದರಿಂದ ಕಲಾದೇವಿ ಅವರನ್ನು ಎತ್ತರಕ್ಕೇರಿಸಿದ್ದಾಳೆ," ಎಂದರು. ಹಾರ, ಶಾಲು, ಗುಣಕಥನ ಫಲಕ, ಸ್ಮರಣಿಕೆ, ಹಣ್ಣುಹಂಪಲಿನೊಂದಿಗೆ ಪ್ರಶಸ್ತಿ ಮೊತ್ತ ಐದು ಸಾವಿರ ರೂಪಾಯಿಗಳನ್ನು ಪ್ರಶಸ್ತಿ ಪುರಸ್ಕೃತರಿಗೆ ಶ್ರೀಗಳು ಪ್ರದಾನ ಮಾಡಿದರು. 

                     ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ, ಎಡನೀರು ಇದರ ವತಿಯಿಂದ ನೀಡಲಾಗುವ ಒಂಭತ್ತನೇ ವರುಷದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಕೆ.ಅನಂತಕೃಷ್ಣ ವಹಿಸಿ, "ವಿದ್ಯೆ ಇಂದು ವ್ಯಾಪಾರವಾಗುತ್ತಿದೆ. ದಾನ ಪ್ರವೃತ್ತಿ ಕಡಿಮೆಯಾಗುತ್ತಿದೆ. ಕಲೆ ಬದುಕಿಗೆ ಸುಭಗತನವನ್ನು ನೀಡುತ್ತದೆ. ಮಾಸ್ಟರ್ ವಿಠಲರು ಹಲವಾರು ಶಿಷ್ಯರನ್ನು ರೂಪಿಸಿದ ಮಹಾನ್ ಗುರು," ಎಂದರು.

                       ಯಕ್ಷಗಾನ ವಿದ್ವಾಂಸ ಡಾ.ರಮಾನಂದ ಬನಾರಿ, ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಶುಭಾಶಂಸನೆ ಮಾಡಿದರು. ಉಪನ್ಯಾಸಕ ಡಾ. ಬಿ.ಎನ್.ಮಹಾಲಿಂಗ ಭಟ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ಮತ್ತು ಅಂಬಾಪ್ರಸಾದ್ ಪಾತಾಳರು ಗುರು ವಿಠಲ ಶೆಟ್ಟರಿಗೆ ಗುರುವಂದನೆ ಸಲ್ಲಿಸಿದರು.

                       ಪಾತಾಳ ಯಕ್ಷ ಪ್ರತಿಷ್ಠಾನದ ಆಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸ್ವಾಗತಿಸಿದರು. ಶ್ರೀರಾಮ ಪಾತಾಳ, ಮಹಾಲಿಂಗ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.
               
                    ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಶ್ರೀ ಎಡನೀರು ಮೇಳದವರಿಂದ 'ಲಕ್ಷ್ಮೀ ಸ್ವಯಂವರ' ಯಕ್ಷಗಾನ ಬಯಲಾಟ ಜರುಗಿತು. ಪ್ರತಿಷ್ಠಾನದ ಹಿತೈಷಿ ಬೆಂಗಳೂರಿನ ಮಹಮ್ಮದ್ ಅನ್ವರ್ ಅವರು ಬಯಲಾಟವನ್ನು ಆಯೋಜಿಸಿದ್ದರು.

Wednesday, April 10, 2013

ಮಾಸ್ಟರ್ ವಿಠಲ ಶೆಟ್ಟರಿಗೆ 'ಪಾತಾಳ ಪ್ರಶಸ್ತಿ'


               ಹಿರಿಯ ಭರತನಾಟ್ಯ ಗುರು ಮಾಸ್ಟರ್ ವಿಠಲ ಶೆಟ್ಟರು ಈ ಸಾಲಿನ 'ಪಾತಾಳ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ಎಪ್ರಿಲ್ 14ರಂದು ರಾತ್ರಿ 8-30ಕ್ಕೆ ಶ್ರೀ ಎಡನೀರು ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಜರಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ.

                ಪೂಜನೀಯ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳ ದಿವ್ಯ ಉಪಸ್ಥಿತಿ. ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಶ್ರೀ ಕೆ. ಅನಂತಕೃಷ್ಣ ಸಭಾಧ್ಯಕ್ಷತೆ. ಹಿರಿಯ ವಿದ್ವಾಂಸ ಡಾ. ರಮಾನಂದ ಬನಾರಿ ಶುಭಾಶಂಸನೆ. ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಅಭಿನಂದನಾ ನುಡಿ. ಸಮಾರಂಭದ ಬಳಿಕ ಎಡನೀರು ಮೇಳದವರಿಂದ 'ಲಕ್ಷ್ಮೀ ಸ್ವಯಂವರ' ಬಯಲಾಟ. ಬೆಂಗಳೂರಿನ ಶ್ರೀ ಮಹಮ್ಮದ್ ಅನ್ವರ್ ಪ್ರಾಯೋಜಕತ್ವ.

                   ಎಂಭತ್ತೇಳು ವರುಷದ ವಿಠಲ ಶೆಟ್ಟರು ತಮ್ಮ ಜೀವನ ಪೂರ್ತಿ ಭರತನಾಟ್ಯಕ್ಕೆ ಸಮರ್ಪಿಸಿಕೊಂಡ ಹಿರಿಯ ಕಲಾವಿದರು. ಮಹಾನ್ ಗುರು ರಾಜನ್ ಅಯ್ಯರ್ ಅವರಿಂದ 1940ರಲ್ಲಿ ನೃತ್ಯ ಕಲಿಕೆ. ಐದು ಸಾವಿರಕ್ಕೂ ಶಿಷ್ಯರನ್ನು ರೂಪಿಸಿದ ವಿಠಲ ಮಾಸ್ಟರ್ ವಿದೇಶದಲ್ಲೂ ಶಿಷ್ಯರನ್ನು ಹೊಂದಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಶ್ರೀ ಪಾತಾಳ ವೆಂಕಟ್ರಮಣ ಭಟ್ ಮತ್ತು ಇವರ ಚಿರಂಜೀವಿ ಪಾತಾಳ ಶ್ರೀ ಅಂಬಾಪ್ರಸಾದ್ ಇವರು ವಿಠಲ ಶೆಟ್ಟರಲ್ಲಿ ಭರತನಾಟ್ಯದ ಅಭ್ಯಾಸ ಮಾಡಿದವರು.

                      ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಗೌರವಾಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ, ಎಡನೀರು' ಇದರ ಅಧ್ಯಕ್ಷ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು. ಪ್ರತಿಷ್ಠಾನವು ಕಳೆದ ಎಂಟು ವರುಷಗಳಿಂದ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ.

Friday, November 23, 2012

'ಬೊಳ್ಳಿಂಬಳ ಪ್ರಶಸ್ತಿ' ಪುರಸ್ಕೃತ ಭಾಗವತ ಕೊರಗಪ್ಪ ನಾಯ್ಕ

ಚಿಕ್ಕ ಹಳ್ಳಿ ಮನೆ. ಜಗಲಿನಲ್ಲಿ ಭಾಗವತ ಕೊರಗಪ್ಪ ನಾಯ್ಕರು ಕುಳಿತು ಯೋಚಿಸಿದಂತೆ ಭಾಸವಾಗುತ್ತದೆ. ನೆನಪಿನ ಗೆರೆಗಳು ಮಸುಕಾಗಿವೆ. ಅಪರೂಪಕ್ಕೆ ಗೆರೆಯು ಮಿಂಚಿ ಮರೆಯಾದಾಗ ವಿಷಣ್ಣ ಮುಖ ಅರಳುತ್ತದೆ. ನೆನಪುಗಳು ರಾಚಿ ಬರುತ್ತವೆ. ಅದನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಚಡಪಡಿಸುತ್ತಾರೆ. ನಿಮಿಷದ ಬಳಿಕ ಮತ್ತದೇ ಪೂರ್ವಸ್ಥಿತಿ.

ಒಂದು ಕಾಲಘಟ್ಟದ ರಂಗ ಬದುಕಿನಲ್ಲಿ ರಾತ್ರಿಯಿಡೀ ಭಾಗವತಿಕೆ ಮಾಡಿದ ನಾಯ್ಕರು ಮಾತನಾಡಲು ಅಶಕ್ತರು. ಹತ್ತು ವರುಷಗಳಿಂದ ಬಾಧಿಸಿದ ಅಸೌಖ್ಯತೆ. ನಿತ್ಯ ಆಸ್ಪತ್ರೆ ಅಲೆದಾಟ. ಗುಣವಾಗುವ ನಿರೀಕ್ಷೆಯಲ್ಲಿ ವೈದ್ಯರುಗಳ ಭೇಟಿ. ಶುಶ್ರೂಷೆ. ಈಗ ಅತ್ತಿತ್ತ ನಡೆಯುವಷ್ಟು, ಗ್ರಹಿಸುವಷ್ಟು ಶಕ್ತ. ನೆನಪು ಮಾತ್ರ ದೂರ, ಬಹುದೂರ.

ಅವರ ಸಮಕಾಲೀನ ಕಲಾವಿದರನ್ನು ನೆನಪಿಸಿಕೊಟ್ಟರೆ, ಕಳೆದ ದಿನಗಳು ಒಂದು ಕ್ಷಣ ನೆನಪಿನಂಗಳದಲ್ಲಿ ಕುಣಿಯುತ್ತವೆ. ಪ್ರಸಂಗವನ್ನು, ಪದ್ಯವನ್ನು ಜ್ಞಾಪಿಸಿದರೆ ಪದ್ಯದ ಸೊಲ್ಲನ್ನು ತಕ್ಷಣ ಹೇಳಿಬಿಡುತ್ತಾರೆ. ಸುತ್ತೆಲ್ಲಾ ಜರಗುತ್ತಿದ್ದ ತಾಳಮದ್ದಳೆಗಳ ಸ್ವಾರಸ್ಯ ಹೇಳಿದರೆ ಸ್ಪಂದಿಸುತ್ತಾರೆ. ಎಲ್ಲವೂ ನಿಮಿಷಾರ್ಧ. ಅಸ್ಪಷ್ಟ.

ನಿವೃತ್ತ ಅಧ್ಯಾಪಕ, ಅರ್ಥಧಾರಿ ಬಿ.ಎಸ್.ಓಕುಣ್ಣಾಯರು ನಾಯ್ಕರ ಒಡನಾಡಿ. ಪಾಣಾಜೆ ಸುತ್ತಮುತ್ತ ನಡೆಯುತ್ತಿದ್ದ ಬಹುತೇಕ ತಾಳಮದ್ದಳೆಗಳಲ್ಲಿ ಕೊರಗಪ್ಪ ನಾಯ್ಕರದ್ದೇ ಭಾಗವತಿಕೆ. ಇವರಿಗೆ ನಿಕಟ ಸಂಪರ್ಕ. ಈಚೆಗೆ ಓಕುಣ್ಣಾಯರ ಜತೆ ಅವರ ಮನೆಗೆ ಭೇಟಿ ನೀಡಿದಾಗ ಇವರನ್ನು ಗುರುತಿಸುವಲ್ಲಿ ನಾಯ್ಕರು ಕಷ್ಟಪಟ್ಟಿದ್ದರು. ಗೊತ್ತಾದ ಬಳಿಕ ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದಿದ್ದರು.

ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸನಿಹದ ಖಂಡೇರಿಯು ಕೊರಗಪ್ಪ ನಾಯ್ಕರ ಹುಟ್ಟೂರು. ಪ್ರಸ್ತುತ ಸನಿಹದ ಅರೆಕ್ಕಾಡಿಯಲ್ಲಿ ಹಲವು ಸಮಯದಿಂದ ವಾಸ. ಈಗವರಿಗೆ ಅರುವತ್ತೆಂಟು ವರುಷ ಪ್ರಾಯ.

ತಂದೆ ಐತು ನಾಯ್ಕ. ತಾಯಿ ಅಮ್ಮು. ಮೂರರ ತನಕ ವಿದ್ಯಾಭ್ಯಾಸ. ಬಾಲ್ಯದಿಂದಲೇ ಯಕ್ಷಗಾನದತ್ತ ಒಲವು. ಅದರಲ್ಲೂ ಭಾಗವತನಾಗಬೇಕೆಂಬ ಹಂಬಲ. ಕೇಳಿ ಕಲಿತುದೇ ಹೆಚ್ಚು. ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಪಾಠ. ಬಣ್ಣದ ಕುಂಞಿರಾಮರಿಂದ ನಾಟ್ಯಾಭ್ಯಾಸ. ಲಕ್ಷ್ಮಣ ಆಚಾರ್ಯರಿಂದ ಮದ್ದಳೆಯ ಕಲಿಕೆ. ಮುಂದೆ ನಿಡ್ಲೆ ನರಸಿಂಹ ಭಟ್ಟರು ಚೆಂಡೆಗೆ ಗುರುವಾದರು.

ಯಕ್ಷ ಪ್ರಚಂಡರ ಜತೆಗಿದ್ದ ಅನುಭವವು ಕೊರಗಪ್ಪ ನಾಯ್ಕರ ಮೇಳ ಜೀವನದ ಸುಭಗತನಕ್ಕೆ ಹೊಸ ದಿಕ್ಕು ತೋರಿತು. ಮೂವತ್ತೇಳು ವರುಷ ಶ್ರೀ ಕಟೀಲು ಮೇಳವೊಂದರಲ್ಲೇ ತಿರುಗಾಟ. ಸಂಗೀತಗಾರನಾಗಿ ಪಡಿಮಂಚವೇರಿದ ಭಾಗವತ ಮುಂದೆ ಇಡೀ ರಾತ್ರಿ ಆಟವನ್ನು ಆಡಿಸುವ ತನಕ ನಿಷ್ಣಾತರಾದರು.

ಕಟೀಲು ಮೇಳ ಸೇರುವ ಪೂರ್ವದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಒಂದು ವರುಷ, ಕುಂಡಾವಿನಲ್ಲಿ ಒಂದು ವರುಷ ಮತ್ತು ಪುತ್ತೂರು ಮೇಳಗಳಲ್ಲಿ ವ್ಯವಸಾಯ. ಮಳೆಗಾಲದಲ್ಲಿ ಸ್ಥಳೀಯವಾಗಿ ತಾಳಮದ್ದಳೆಗಳಲ್ಲಿ ಭಾಗಿ.

ತಾಳಮದ್ದಳೆಯ ಬಿರುಬಿನ ಕಾಲ. ಮನೆಗಳಲ್ಲಿ ಶುಭ ಸಮಾರಂಭಗಳು ನಡೆದಾಗ ಅಲ್ಲೆಲ್ಲಾ ತಾಳಮದ್ದಳೆಗೆ ಮೊದಲ ಮಣೆ. ಉದ್ಧಾಮರ ಕೂಟಗಳು. ಆ ದಿನಗಳಲ್ಲಿ ನಾಯ್ಕರಿಗೆ ಬಿಡುವಿರದ ದುಡಿಮೆ. ಸಮಯ ಸಿಕ್ಕಾಗ ಆಸಕ್ತರಿಗೆ ಭಾಗವತಿಕೆ ಕಲಿಸಿಕೊಟ್ಟುದೂ ಇದೆ.
'
ಕರ್ನಾಟಕ ಮೇಳದಲ್ಲಿ ತುಳು ಪ್ರಸಂಗಗಳನ್ನು ಆಡುವ ಸಂದರ್ಭದಲ್ಲಿ ಇವರನ್ನು ವಿಶೇಷವಾಗಿ ಭಾಗವತಿಕೆಗೆ ಮೇಳದ ಯಜಮಾನರು ಆಹ್ವಾನಿಸುತ್ತಿದ್ದರು. ತುಳು ಭಾಷೆಯ ಕುರಿತು ಇವರಿಗಿದ್ದ ಅನುಭವವೇ ಇದಕ್ಕೆ ಕಾರಣ,' ಎಂದು ಗಂಡನಿಗೆ ಸಾಥ್ ಆಗುತ್ತಾರೆ ಮಡದಿ ಲಕ್ಷ್ಮೀ.

ಅವರು ಇನ್ನು ಹಾಡುವುದಿಲ್ಲ! ಅವರು ಹಾಡಿದ ಒಂದು ಕ್ಯಾಸೆಟ್ ಎಲ್ಲಾದರೂ ಸಿಕ್ಕರೆ ಅದು ದಾಖಲೆಯಾಗುತ್ತಿತ್ತು, ಎನ್ನುವ ಆಶಯ ಲಕ್ಷ್ಮೀಯವರಿಗಿದೆ. ಗಂಡನ ಆಸಕ್ತಿಯನ್ನು ಗೌರವದಿಂದ ಕಾಣುವ, ಹೆಮ್ಮೆ ಪಟ್ಟುಕೊಳ್ಳುವ ಲಕ್ಷ್ಮೀಯವರ ಆಸೆ ಹುಸಿಯಾಗದು.
 
ಪ್ರಸ್ತುತ ಲಕ್ಷ್ಮೀ ಗಂಡನಿಗೆ ಆಸರೆ. ನಾಯ್ಕರಿಗೆ ದನಿ. ಅಸ್ಪಷ್ಟ ಮಾತುಗಳಿಗೆ ಸ್ಪಷ್ಟತೆಯ ಸ್ಪರ್ಶ ನೀಡುವ ಮಾರ್ಗದರ್ಶಕಿ. ಸರಕಾರದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಲ್ಪಕಾಲ ಕೆಲಸ. ಮಗ ದೇವಿಪ್ರಸಾದ್ ಸ್ವ-ಉದ್ಯೋಗದ ದುಡಿಮೆ. ನಾಯ್ಕರ ಅಸೌಖ್ಯತೆಗೆ ಇವರೆಲ್ಲರ ದುಡಿಮೆಯಲ್ಲಿ ಏನಿಲ್ಲವೆಂದರೂ ತಿಂಗಳಿಗೆ ಒಂದು ಸಾವಿರ ರೂಪಾಯಿ ಔಷಧಿಗೆ ಮೀಸಲಿಡುವಂತಹ ಸ್ಥಿತಿ.
 
ಮಾಸಾಶನಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎರಡು ವರುಷಗಳು ಸಂದುಹೋದುವು. ಇಂತಹ ಅಶಕ್ತ ಸ್ತಿತಿಯಲ್ಲಿ ಕಲಾವಿದನಿದ್ದಾಗ ಸಿಗುವ ಕಿಂಚಿತ್ ಮೊತ್ತವು ಕೊನೇ ಪಕ್ಷ ಔಷಧಿವೆಚ್ಚವನ್ನಾದರೂ ಸರಿದೂಗಿಸಿತಲ್ವಾ.
ಕಾಟುಕುಕ್ಕೆ ಕೊರಗಪ್ಪ ನಾಯ್ಕರ ಸೇವಾತತ್ಪರತೆಗೆ ಲಭ್ಯವಾದ ಪ್ರಶಸ್ತಿಗಳು ಹಲವು. ಕುಂಬಳೆಯ ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನ, ಬೊಂಡಾಳ ಪ್ರಶಸ್ತಿ, ಅಳಿಕೆ ರಾಮಯ್ಯ ರೈ ಸ್ಮಾರಕ ಪ್ರಶಸ್ತಿಗಳ ಜತೆಗೆ; ವಿವಿಧ ಸಂಮಾನ, ಪುರಸ್ಕಾರಗಳು ಪ್ರಾಪ್ತವಾಗಿವೆ. (ಅಶಕ್ತರಿಗೆ ಶಕ್ತಿ ಕೊಡಲು ಮಿಡಿಯುವ ಮನಸ್ಸುಗಳಿಗಾಗಿ ಕೊರಗಪ್ಪರ ಚಿರಂಜೀವಿ ದೇವಿಪ್ರಸಾದರ ಸಂಪರ್ಕ ಸಂಖ್ಯೆ 09496560392)
 
ಪಾಣಾಜೆಯ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ನೀಡುವ ಈ ಬಾರಿಯ 'ಬೊಳ್ಳಿಂಬಳ ಪ್ರಶಸ್ತಿ'ಗೆ ಕಾಟುಕುಕ್ಕೆ ಕೊರಗಪ್ಪ ನಾಯ್ಕರಿಗೆ ಪ್ರಾಪ್ತಿ. ನವೆಂಬರ್ 25ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಜರುಗಿದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಶಿಕೋತ್ಸವದ ಸಂದರ್ಭದಲ್ಲಿ ನಾಯ್ಕರಿಗೆ ಪ್ರಶಸ್ತಿ ಪ್ರದಾನ.

Saturday, November 10, 2012

ಉಡುಪಿ ಕಲಾರಂಗ ಪ್ರಶಸ್ತಿ ಪ್ರಕಟ

               ಕಲಾರಂಗ ಉಡುಪಿ ಇದರ 2012ರ ಪ್ರಶಸ್ತಿ ಪ್ರಕಟವಾಗಿದೆ. ಈ ಸಾಲಿನ ವಿಶ್ವೇಶತೀರ್ಥ ಪ್ರಶಸ್ತಿಯು ಕಾಸರಗೋಡು ಜಿಲ್ಲೆಯ ಪೆರ್ಲದ ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರಕ್ಕೆ ಪ್ರಾಪ್ತವಾಗಿದೆ.

                 ಶ್ರೀಗಳಾದ - ಬೋಳಾರ ಸುಬ್ಬಯ್ಯ ಶೆಟ್ಟಿ (ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ), ಭಟ್ಕಳದ ಕೊಪ್ಪದಮಕ್ಕಿ ಈರಪ್ಪ ಜಟ್ಟಿ ಭಾಗವತ (ನಿಟ್ಟೂರು ಸುಂದರ ಶೆಟ್ಟಿ-ಮಹೇಶ್ ಡಿ.ಶೆಟ್ಟಿ ಪ್ರಶಸ್ತಿ), ಪಡುಕೋಣೆಯ ಸುರೇಶ್ ಗಾಣಿಗ (ಪ್ರೊ:ಬಿ.ವಿ.ಆಚಾರ್ಯ ಪ್ರಶಸ್ತಿ), ಕುಂಬಳೆ ಶ್ರೀಧರ ರಾವ್ (ಬಿ.ಜಗಜ್ಜೀವನದಾಸ್ ಶೆಟ್ಟಿ ಪ್ರಶಸ್ತಿ), ಜನ್ನಾಲೆ ವಿಶ್ವೇಶ್ವರ ಸೋಮಯಾಜಿ (ಭಾಗವತ ನಾರಣಪ್ಪ ಉಪ್ಪೂರ ಪ್ರಶಸ್ತಿ), ಹೆಮ್ಮಾಡಿ ರಾಮಚಂದನ್ (ಭಾಗವತ ವಾದಿರಾಜ ಹೆಬ್ಬಾರ್ ಪ್ರಶಸ್ತಿ), ಎಂ.ಕೆ.ರಮೇಶ್ ಆಚಾರ್ಯ (ಕೋಟ ವೈಕುಂಠ ಪ್ರಶಸ್ತಿ), ಬೆಲ್ತೂರು ರಮೇಶ್ ನಾಯ್ಕ್ (ಶಿರಿಯಾರ ನಾಯ್ಕ್ ಪ್ರಶಸ್ತಿ), ಕುಡಾನ ಗೋಪಾಲಕೃಷ್ಣ ಭಟ್ (ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ), ಉದ್ಯಾವರ ಜಯಕುಮಾರ್ (ವಿಶ್ವಜ್ಞ ಶೆಟ್ಟಿ ಪ್ರಶಸ್ತಿ), ಬಿರ್ತಿ ಬಾಲಕೃಷ್ಣ ಗಾಣಿಗ (ಐರೋಡಿ ರಾಮ ಗಾಣಿಗ ಪ್ರಶಸ್ತಿ), ಕರ್ಕಿ ಕೃಷ್ಣ ಹಾಸ್ಯಗಾರ (ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ), ಎಂ.ಟಿ.ಎಸ್.ಕುಲಾಲ (ಶ್ರೀಮತಿ ಪ್ರಭಾವತಿ ವಿ.ಶೆಣೈ, ಯು.ವಿಶ್ವನಾಥ ಶೆಣೈ ಪ್ರಶಸ್ತಿ) ಮತ್ತು ಯಕ್ಷಚೇತನ ಪ್ರಶಸ್ತಿಗೆ ಯು.ಉಪೇಂದ್ರ - ಆಯ್ಕೆಯಾಗಿದ್ದಾರೆ.

                ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 18, ಭಾನುವಾರ, ಅಪರಾಹ್ನ ಗಂಟೆ 3 ರಿಂದ ರಾತ್ರಿ 9 ರ ತನಕ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದೆ. ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶ್ರೀಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ.

                ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಶುಭಾಶಂಸನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಇವರು ವಾರ್ಶಿಕ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ:ಎಂ.ಎಲ್.ಸಾಮಗ ಮತ್ತು ಕಾಪು ಬಂಟರ ಯಾನೆ ನಾಡವರ ಸಂಘದ ಬಿ.ಸಚ್ಚಿದಾನಂದ ಶೆಟ್ಟಿ ಆಗಮಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ, ಉಪನ್ಯಾಸಕ ಡಾ.ಶ್ರೀಧರ ಉಪ್ಪೂರ ಅವರು ಡಾ.ಬಿ.ಬಿ.ಶೆಟ್ಟಿ ಸಂಸ್ಮರಣೆ ಮಾಡಲಿದ್ದಾರೆ.
             
             ಅಪರಾಹ್ನ ಗಂಟೆ 3 ರಿಂದ 5ರ ತನಕ 'ಸಂಗೀತ ಸಮನ್ವಯ' ಎಂಬ ವಿಶಿಷ್ಟ ಸಂಗೀತಾರಾಧನೆ. ಬಲಿಪ ನಾರಾಯಣ ಭಾಗವತ, ನೆಬ್ಬೂರು ನಾರಾಯಣ ಭಾಗವತ, ಕುರಿಯ ಗಣಪತಿ ಶಾಸ್ತ್ರಿ, ತೋನ್ಸೆ ಜಯಂತ ಕುಮಾರ್ (ಯಕ್ಷಗಾನ), ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ (ಸಂಗೀತ). ಸಂಜೆ ಆರೂವರೆ ಬಳಿಕ 'ದಕ್ಷಯಕ್ಷ' ಪ್ರಸಂಗದ ಬಯಲಾಟ.

Wednesday, October 17, 2012

ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ


          ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಎರಡು ವರುಷಗಳ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ.
          2011-12: ಉಪ್ಪಿನಕುದ್ರು ವಾಮನ ಪೈ (ಯಕ್ಷಗಾನ ಗೊಂಬೆಯಾಟ), ಕುಡಾಣ ಗೋಪಾಲಕೃಷ್ಣ ಭಟ್ (ಯಕ್ಷಗಾನ), ಪೆರುವಾಯಿ ನಾರಾಯಣ ಶೆಟ್ಟಿ (ಯಕ್ಷಗಾನ), ಪೇತ್ರಿ ಮಾಧವ ನಾಯಕ್ (ಯಕ್ಷಗಾನ), ಹಳ್ಳದಾಚೆ ವೆಂಕಟ್ರಮಣಯ್ಯ ಮೂಡಿಗೆರೆ (ಯಕ್ಷಗಾನ), ಬಸವಣ್ಣಯ್ಯ ಮಠಪತಿ (ಶ್ರೀಕೃಷ್ಣ ಪಾರಿಜಾತ), ಅಡಿವಯ್ಯ ಎಸ್.ಹಿರೇಮಠ (ದೊಡ್ಡಾಟ), ರಾಮಚಂದ್ರಪ್ಪ ಅರ್ಕಸಾಲಿ (ಮೂಡಲಪಾಯ), ಡಾ.ರಮಾನಂದ ಬನಾರಿ (ತಾಳಮದ್ದಳೆ), ದೇವಕಾನ ಕೃಷ್ಣ ಭಟ್ (ಪ್ರಸಾಧನ)

             2012-13: ಇಡಗುಂಜಿ ಕೃಷ್ಣಯಾಜಿ (ಯಕ್ಷಗಾನ), ಕೆ.ಎಚ್.ದಾಸಪ್ಪ ರೈ (ಯಕ್ಷಗಾನ), ಪದ್ಯಾಣ ಶಂಕರನಾರಾಯಣ ಭಟ್ (ಯಕ್ಷಗಾನ), ದಯಾನಂದ ನಾಗೂರು (ಯಕ್ಷಗಾನ), ಹೊಳ ಬಸಯ್ಯ ಸಂಬಾಳದ (ಶ್ರೀಕೃಷ್ಣ ಪಾರಿಜಾತ), ಈರಮಾಳಪ್ಪ ಮಧುಗಿರಿ (ಮೂಡಲಪಾಯ), ವಿರೂಪಾಕ್ಷ ಅಂಗಡಿ (ಸಣ್ಣಾಟ), ಮುಕಾಂಬಿಕಾ ವಾರಂಬಳ್ಳಿ (ಮಹಿಳಾ ಯಕ್ಷಗಾನ), ವಿಶ್ವನಾಥ ಶೇಟ್ ಹಾರ್ಸಿಕಟ್ಟಾ (ಪ್ರಸಾಧನ), ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ, ಅಂಬಲಪಾಡಿ (ಸಂಘಟನೆ).

            ಪ್ರಶಸ್ತಿ ಪ್ರದಾನ ಸಮಾರಂಭವು ದಶಂಬರ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಪ್ರೊ: ಎಂ.ಎಲ್.ಸಾಮಗ ತಿಳಿಸಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ದಿನಾಂಕ 16-10-2012ರಂದು ಉಡುಪಿಯ ಎಂಜಿಎಂ ಯಕ್ಷಗಾನ ಕೇಂದ್ರದಲ್ಲಿ ಜರುಗಿದ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಯ ಆಯ್ಕೆ ನಡೆಯಿತು.

             ಅಕಾಡೆಮಿಯ ರಿಜಿಸ್ಟ್ರಾರ್ ಮೈಥಿಲಿ, ಸದಸ್ಯರಾದ - ಸರಪಾಡಿ ಅಶೋಕ ಶೆಟ್ಟಿ, ರಮೇಶ್ ಬೇಗಾರು, ಭಾಸ್ಕರ ಬಾರ್ಯ, ಉಜಿರೆ ಆಶೋಕ ಭಟ್, ಗೌರಿ ಸಾಸ್ತಾನ, ದುಗ್ಗಪ್ಪ ಯು, ಶ್ರೀಶೈಲ ಉದ್ದಾರ್, ಆಶೋಕ್ ಮೋದಿ, ಯಕ್ಷಗಾನ ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಉಪಸ್ಥಿತಿ.

Monday, October 15, 2012

ಮಾಧವ ಪೇತ್ರಿಯವರಿಗೆ ಡಾ. ಕಾರಂತ 'ಬಾಲವನ ಪ್ರಶಸ್ತಿ'


                   ಹಿರಿಯ ಕಲಾವಿದ ಉಡುಪಿ ಜಿಲ್ಲೆಯ ಎಚ್.ಮಾಧವ ಪೇತ್ರಿ(73)ಯವರಿಗೆ ಅಕ್ಟೋಬರ್ 10ರಂದು 'ಬಾಲವನ ಪ್ರಶಸ್ತಿ' ಪ್ರಾಪ್ತಿ. ಪುತ್ತೂರಿನ ಬಾಲವನದಲ್ಲಿ ಕಾರಂತ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ. ಪ್ರಶಸ್ತಿ ಮೊತ್ತ ಹತ್ತು ಸಾವಿರ ರೂಪಾಯಿ.

          ಪೇತ್ರಿಯವರು ಹದಿನಾಲ್ಕನೇ ವಯಸ್ಸಿನಿಂದಲೇ ಬಣ್ಣ ಹಚ್ಚಿದವರು. ಐವತ್ತೈದು ವರುಷಗಳ ತಿರುಗಾಟ. ಅದರಲ್ಲಿ ಮೂರು ದಶಕ ಕಾಲ ಡಾ. ಕಾರಂತರ ಒಡನಾಟ. ಅವರೊಂದಿಗೆ ದೇಶ ವಿದೇಶಗಳಿಗೆ ಹಾರಾಟ. ಬಣ್ಣದ ವೇಷಧಾರಿಯಾಗಿ ಖ್ಯಾತಿ.

          ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿ ಇವರ ಜಂಟಿ ಹೆಗಲೆಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪೇತ್ರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸದಸ್ಯ ಭಾಸ್ಕರ ಬಾರ್ಯ ಅಭಿನಂದನ ಭಾಷಣ ಮಾಡಿದರು. 

Sunday, September 30, 2012

'ಪಾಪಣ್ಣ ಭಟ್ಟ'ರಿಗೆ 'ಕುರಿಯ' ಗೌರವದ ಬಾಗಿನ


                'ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದ ಸಮಯ. ಧರ್ಮಸ್ಥಳ ಮೇಳದ ಪ್ರದರ್ಶನವೊಂದರಲ್ಲಿ ಡಾ. ಶಿವರಾಮ ಕಾರಂತರ ಉಪಸ್ಥಿತಿ. ಪ್ರಸಂಗ 'ಚೂಡಾಮಣಿ'. ಕುರಿಯ ವಿಠಲ ಶಾಸ್ತ್ರಿಗಳ ಹನುಮಂತನ ಪಾತ್ರ. ಖುಷಿಯಾದ ಕಾರಂತರು 'ಆಟವನ್ನು ಸಿನೆಮಾ ಮಾಡೋಣ' ಎಂದರಂತೆ. ಹೆಗ್ಗಡೆಯವರ ಸಮ್ಮತಿ. ಶೂಟಿಂಗಿಗೆ ಹಗಲು ಸೂಕ್ತ ಸಮಯ. ಕಲಾವಿದರು ಒಲ್ಲದ ಮನಸ್ಸಿನಿಂದ ಒಪ್ಪಿ ಸಹಕರಿಸಿದರು. ಮೊದಲ ದಿನ ಆರ್ಧ ಚಿತ್ರೀಕರಣ. ಮುಂದಿನದು ಮೂಡುಬಿದಿರೆಯಲ್ಲಿ ಎಂದು ನಿಗದಿಯಾಯಿತು. ಹಗಲು ವೇಷ ನಿರ್ವಹಿಸಲು ಕಲಾವಿದರ ಅಸಮ್ಮತಿ. ಹಾಗಾಗಿ ಶೂಟಿಂಗ್ ಅರ್ಧದಲ್ಲಿ ನಿಂತುಬಿಟ್ಟಿತು. ಆ ಪ್ರಸಂಗದಲ್ಲಿ ನಾನೂ ಪಾತ್ರ ವಹಿಸಿದ್ದೆ. ಕಾರಂತರು ಚೆನ್ನಾಗಿ ನೋಡಿಕೊಂಡಿದ್ದರು', ಎಂದು ನೆನಪಿನ ಸುರುಳಿಯನ್ನು ಬಿಚ್ಚಿದರು, ಹಾಸ್ಯಗಾರ ಪೆರುವಡಿ (ಪೆರ್ವಡಿ, ಪೆರುವೋಡಿ) ನಾರಾಯಣ ಭಟ್ಟರು. (Hasyagar Peruvody Narayana Bhat)

                ಉಭಯತಿಟ್ಟುಗಳಲ್ಲಿ 'ರಾಜಾಹಾಸ್ಯ' ಎಂಬ ನೆಗಳ್ತೆಯನ್ನು ಪಡೆದ ಪೆರುವಡಿ ನಾರಾಯಣ ಭಟ್ಟರು ಮಾತಿಗಿಳಿದರೆ ಒಂದು ಕಾಲಘಟ್ಟದ ಯಕ್ಷಗಾನದ ಬದುಕು, ಸಾಮಾಜಿಕ ಜವಾಬ್ದಾರಿ, ಕಲಾವಿದನ ಹೊಣೆ.. ಹೀಗೆ ಮಿಂಚುತ್ತದೆ. 'ಹಾಸ್ಯವೆಂದರೆ ವಿಕಾರವಲ್ಲ. ಅದೊಂದು ರಸ. ಅದನ್ನು ಕಲಾವಿದ ಅನುಭವಿಸಬೇಕು. ಕಲಾವಿದನ ಅಭಿವ್ಯಕ್ತಿಯಂತೆ ಪ್ರೇಕ್ಷಕನೂ ಅನುಭವಿಸಬೇಕು. ಯಕ್ಷಗಾನದ ಹಾಸ್ಯವೆಂದರೆ ನಕ್ಕು ನಲಿವ ಹಾಸ್ಯವಲ್ಲ. ಸಮಾಜದ ವಿಕಾರಗಳನ್ನು ಎತ್ತಿ ತೋರಿಸಿ, ಅದನ್ನು ತಿದ್ದುವ ಕೆಲಸವನ್ನೂ ಹಾಸ್ಯಗಾರ ಮಾಡಬೇಕಾಗುತ್ತದೆ' ಎನ್ನುತ್ತಾರೆ.

               ಪೆರುವಡಿಯವರ ತಿರುಗಾಟದ ಕಾಲದ ಸಾಮಾಜಿಕ ವ್ಯವಸ್ಥೆಗಳು ತಪ್ಪನ್ನು ಎತ್ತಿ ತೋರಿದಾಗ ಒಪ್ಪಿಕೊಳ್ಳುವ, ರಂಗದ ಅಭಿವ್ಯಕ್ತಿಯನ್ನು 'ಕಲೆ' ಎಂದು ಸ್ವೀಕರಿಸುವ ಮನಃಸ್ಥಿತಿಯಿತ್ತು. ಈಗ ಕಾಲ ಬದಲಾದುದೋ, 'ಬೌದ್ಧಿಕವಾಗಿ ಮುಂದುವರಿದ' ಫಲವೋ ಗೊತ್ತಿಲ್ಲ, ರಂಗದ ಅಭವ್ಯಕ್ತಿಗೆ ಜಾತಿಯನ್ನೋ, ಅಂತಸ್ತನ್ನೋ ಪೋಣಿಸುವ ವಿಪರೀತ ಸ್ಥಿತಿಯನ್ನು ಕಾಣಬಹುದು. ಪಾತ್ರವೊಂದು ಪ್ರೇಕ್ಷಕರ ಅಭಿರುಚಿಯಂತೆ, ಆಸಕ್ತಿಯಂತೆ ರಂಗದಲ್ಲಿ ಓಡಾಡುವಂತಹ ಪರೋಕ್ಷ ನಿಯಂತ್ರಣ.
ಪೆರುವಡಿಯವರು ಹಾಸ್ಯಕ್ಕೆ ಗೌರವವನ್ನು ತಂದು ಕೊಟ್ಟ ಹಾಸ್ಯಗಾರ. ದಕ್ಷಾಧ್ವರ ಪ್ರಸಂಗದಲ್ಲಿ ಬರುವ 'ಬ್ರಾಹ್ಮಣ'ನ ಅಭಿವ್ಯಕ್ತಿಯಲ್ಲಿ ಗೇಲಿಯಿಲ್ಲ, ಶ್ರೀ ರಾಮ ವನಗಮನ ಪ್ರಸಂಗದ 'ಗುಹ' ಪಾತ್ರವು ಜಾತಿಯನ್ನು ಲೇವಡಿ ಮಾಡುವುದಿಲ್ಲ. ಜರಾಸಂಧ ಪ್ರಸಂಗದ 'ಶೇಂದಿ ಮಾರಾಟಗಾರ' ಪಾತ್ರವು ಯಾವುದೇ ವರ್ಗವನ್ನು ನೋಯಿಸುವುದಿಲ್ಲ. ಆದರೆ ಆ ಪಾತ್ರದ ಸುತ್ತ ಮುತ್ತ ಇರುವ ವಿಕಾರಗಳನ್ನು ಎತ್ತಿ ತೋರಿಸುತ್ತಿದ್ದರು. ಹೀಗೆ ಮಾಡುತ್ತಿದ್ದಾಗಲೆಲ್ಲಾ ವಿಪರೀತದ ಸೋಂಕಿಲ್ಲ. ನಕ್ಕು ನಲಿಯುವುದಿಲ್ಲ!

                 'ಪಾಪಣ್ಣ ವಿಜಯ' ಪ್ರಸಂಗದ 'ಪಾಪಣ್ಣ' ಪಾತ್ರವು ಪೆರುವಡಿಯವರ ರಂಗಛಾಪನ್ನು ಎತ್ತರಕ್ಕೇರಿಸಿತು. ಹೆಸರಿನೊಂದಿಗೆ 'ಪಾಪಣ್ಣ ಭಟ್ರು' ಹೊಸೆಯಿತು. ಒಂದು ವರ್ಷವಲ್ಲ, ಹಲವು ಕಾಲ ಈ ಪ್ರಸಂಗವು ವಿಜೃಂಭಿಸಿತು. 'ಇದನ್ನು ಮೊದಲು ಆಡುವಾಗ ಹೆದರಿಕೆಯಿತ್ತು. ಪೌರಾಣಿಕ ಪ್ರಸಂಗವನ್ನು ಒಪ್ಪಿಕೊಂಡ ಕಲಾಭಿಮಾನಿಗಳು ಸಾಮಾಜಿಕ ಕಥೆಯನ್ನು ರಂಗದಲ್ಲಿ ಸ್ವೀಕರಿಸಬಹುದೇ? ಇದಕ್ಕಾಗಿ ಕಾಫಿ ಎಸ್ಟೇಟ್ನಲ್ಲಿ ಮೊದಲ ಪ್ರಯೋಗವನ್ನು ಮಾಡಿದೆವು. ಹತ್ತಾರು ಪ್ರದರ್ಶನವಾದ ಬಳಿಕ ಧೈರ್ಯ ಬಂತು' ಎಂದು ಪಾಪಣ್ಣನ ಬದುಕನ್ನು ಮುಂದಿಡುತ್ತಾರೆ.

                 ಪೆರುವಡಿಯವರದು ಸಹಜ ಹಾಸ್ಯ. ಕೃಷ್ಣಲೀಲೆ ಪ್ರಸಂಗದ 'ವಿಜಯ', ಕೃಷ್ಣಾರ್ಜುನ ಕಾಳಗದ 'ಮಕರಂದ', ದೇವ ದೂತ, ರಾಕ್ಷಸದೂತ.. ಹೀಗೆ ಪ್ರತೀ ಪಾತ್ರಗಳಿಗೂ ಪ್ರತ್ಯಪ್ರತ್ಯೇಕವಾದ ಅಭಿವ್ಯಕ್ತಿ. ರಂಗದಲ್ಲಿ ದೊರೆಯನ್ನೋ, ರಾಜನನ್ನೋ ಮೀರಿಸುವ ಆಳಲ್ಲ. ದೇವೇಂದ್ರನ ಸ್ಥಾನಗೌರವವನ್ನು ಅರಿತ ದೇವದೂತ. ನಾರದನಂತಹ ಭಕ್ತಿ ಹಿನ್ನೆಲೆಯ ಪಾತ್ರಗಳಲ್ಲಿ ಹಾಸ್ಯದ ಸೋಂಕಿಲ್ಲ. ಶ್ರೀದೇವಿಯಲ್ಲಿ ಸಂಧಾನಕ್ಕೆ ಬರುವ ಶುಂಭನ ಸಚಿವ 'ಸುಗ್ರೀವ' ಹಾಸ್ಯಗಾರನಾಗುವುದಿಲ್ಲ! ಹೀಗೆ ಒಂದಲ್ಲ ಒಂದು ಪಾತ್ರಗಳನ್ನು ಹಿಡಿದು ಮಾತನಾಡಿದರೆ ಪೆರುವಡಿಯವರ ಪಾತ್ರವೈಶಿಷ್ಟ್ಯದ ಪಾರಮ್ಯ ಅರ್ಥವಾಗುತ್ತದೆ.
ಪೆರುವಡಿಯವರಿಗೆ ಈಗ ಎಂಭತ್ತೈದು ವರುಷ. ಪಾತ್ರದ, ಕಲಾವ್ಯವಸಾಯದ ದಿವಸಗಳನ್ನು ಮೆಲುಕು ಹಾಕುವಾಗ ಅವರ ವಯಸ್ಸು ಹಿಂದೋಡುತ್ತದೆ. 

               'ಔಚಿತ್ಯ ಪ್ರಜ್ಞೆಯ ಸುಳಿವಿಲ್ಲದ ಹಾಸ್ಯ ನಗೆಗೀಡು. ರಂಗಕ್ಕೆ ಅನ್ಯಾಯ. ಪರೋಕ್ಷವಾಗಿ ತನಗೆ ತಾನು ಮಾಡಿಕೊಂಡ ಅಪಮಾನ. ಪ್ರೇಕ್ಷಕರು ನಗುತ್ತಾರೆ ಎಂದು ತೋಚಿದ್ದನ್ನು ಗೀಚುವುದಲ್ಲ. ಹಾಸ್ಯಗಾರನ ಪ್ರವೇಶ ಯಾವಾಗ ಆಗುತ್ತೆ ಎಂದು ಸಭಿಕರು ಕಾಯುವಂತಹ ಸ್ಥಿತಿಯನ್ನು ಹಾಸ್ಯಗಾರ ನಿರ್ಮಾಣ ಮಾಡಬೇಕು' ಎನ್ನುತ್ತಾರೆ.

              ಪ್ರಸಿದ್ಧ ಪದ್ಯಾಣ ಮನೆತನ. 1927ರಲ್ಲಿ ಜನನ. ಆರರ ತನಕ ವಿದ್ಯಾಭ್ಯಾಸ. ಸಂಕಯ್ಯ ಭಾಗವತರು ಮತ್ತು ಈಶ್ವರ ಭಾಗವತರು ಇವರ ಅಜ್ಜ. ಎಂಟನೇ ವರುಷದಿಂದ ತಾಳಮದ್ದಳೆಯಲ್ಲಿ ಭಾಗಿ. ಸ್ವಲ್ಪ ಸಂಸ್ಕೃತ ಅಭ್ಯಾಸ. ಕುರಿಯ ವಿಠಲ ಶಾಸ್ತ್ರಿಗಳ 'ಕೃಷ್ಣ'ನ ಪಾತ್ರದಿಂದ ಪ್ರಭಾವಿ. ಪಾತ್ರದ ಗುಂಗು ಅಂಟಿತು. ಅದು ಬಿಡಿಸಲಾರದ ಅಂಟು. ಬಣ್ಣದ ಗೀಳು ಹೆಚ್ಚಾಯಿತು. ಮೇಳ ಕೈಬೀಸಿ ಕರೆಯಿತು. ಪಾರಂಪರಿಕವಾದ ಆರಂಭಿಕ ಕಲಿಕೆ. ಮುಂದೆ ದೇಹ, ಭಾಷೆ, ಶಾರೀರಗಳು ಹಾಸ್ಯ ರಸದ ಒತ್ತಿಗಿದ್ದುದರಿಂದ 'ಹಾಸ್ಯಗಾರ'ರಾದುದು ಇತಿಹಾಸ.

               ಶ್ರೀ ಧರ್ಮಸ್ಥಳ ಮೇಳದಿಂದ ವ್ಯವಸಾಯ. ಬದುಕಿಗಾಗಿ ಹಲವು ಮೇಳಗಳಿಗೆ 'ಜಂಪಿಂಗ್'. ಮುಂದೆ ಮೂಲ್ಕಿ ಮೇಳದ ಯಜಮಾನಿಕೆ. ಹಾಸ್ಯಗಾರ ಮಾತ್ರವಲ್ಲ, 'ಮೇಳದ ಯಜಮಾನ'ನೆಂಬ ಹೆಗ್ಗಳಿಕೆ. ಮನೆತನಕ್ಕೂ, ಕಲಾಭಿಮಾನಿಗಳಿಗೂ ಮಾನ. ಡಾ.ಶೇಣಿಯವರಿಗೆ ಸಾಥ್ ಆಗಿದ್ದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. 'ಇವರ ಯಜಮಾನಿಕೆಯ ಮೂಲ್ಕಿ ಮೇಳದ ಅಂದಿನ ಆಟಗಳ ಸ್ವಾರಸ್ಯಗಳು, ಯಶಸ್ಸು, ಸಂಪಾದನೆ, ಕಲಾವಿದರನ್ನು ಗುರುತಿಸುವ ಪರಿಯನ್ನು ಕಂಡಾಗ ಯಕ್ಷಗಾನಕ್ಕಾಗ ಸಂಭ್ರಮದ ದಿನಗಳು. ಆರ್ಥಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಖುಷಿ ಕೊಟ್ಟ ದಿನಮಾನಗಳು' ಎನ್ನುತ್ತಾರೆ ಒಡನಾಡಿ ಹಿರಿಯರಾದ ಪಾತಾಳ ವೆಂಕಟ್ರಮಣ ಭಟ್.

                 ದೇಹ ಮಾಗಿದೆ. ಕೌಟುಂಬಿಕ ಹೊಣೆ ಹೆಗಲೇರಿದೆ. ರಂಗದಲ್ಲಿ ಭಾಗವಹಿಸಲು ವಯಸ್ಸು ಅಡ್ಡಿಯಾಗಿದೆ. ದೇಹ ಓಕೆ ಅಂದರೂ, ಮನಸ್ಸು ಮುಷ್ಕರ ಹೂಡುತ್ತದೆ. ಹಾಗಾಗಿ ಪೆರುವಡಿಯವರು ಸ್ವಲ್ಪ ಮಟ್ಟಿಗೆ ರಂಗದಿಂದ ದೂರ. ಆದರೆ ಸುತ್ತೆಲ್ಲಾ ನಡೆಯುವ ಪ್ರದರ್ಶನಗಳಿಗೆ ಈಗಲೂ ಭೇಟಿ ನೀಡುವುದು, ಪ್ರದರ್ಶನವನ್ನು ಆಸ್ವಾದಿಸುವುದು, ಬಣ್ಣದ ಮನೆಗೆ ಹೋಗಿ ನೆನಪಿನ ಬುತ್ತಿಯನ್ನು 'ಅಗತ್ಯ ಬಿದ್ದರೆ' ಬಿಚ್ಚುವುದು, ತಾನು ನಿರ್ವಹಿಸುತ್ತಿದ್ದ ಪಾತ್ರಗಳು ರಂಗದಲ್ಲಿ ಇತರರಿಂದ ಕಳಪೆಯಾಗಿ ನಿರ್ವಹಿಸಲ್ಪಟ್ಟಾಗ ಮಮ್ಮಲ ಮರುಗುವುದು, ಆಪ್ತರಲ್ಲಿ ಮನಬಿಚ್ಚಿ ಮಾತನಾಡುವುದು.. ಈ ಹಿರಿಯರ ಇಳಿ ವಯಸ್ಸಿನ ಚಟುವಟಿಕೆ.

                 ಹಾಸ್ಯಬ್ರಹ್ಮ ಪೆರುವಡಿ ನಾರಾಯಣ ಭಟ್ಟರಿಗೆ ಸಂದ ಪುರಸ್ಕಾರಗಳು ಹಲವು. ಸರಕಾರಿ ಮುದ್ರೆಯ ಪುರಸ್ಕಾರಗಳನ್ನು ಎತ್ತಿ ಹೇಳುವಷ್ಟಿಲ್ಲ! ಇತರ ಪ್ರಶಸ್ತಿಗಳು, ಸಂಮಾನಗಳು, ಗೌರವಗಳು ಸಾಲು ಸಾಲು. 'ನನ್ನನ್ನು. ನನ್ನ ಹಾಸ್ಯವನ್ನು ಕಲಾಭಿಮಾನಿಗಳು ಸ್ವೀಕರಿಸಿದ್ದಾರಲ್ಲಾ, ಅದೇ ದೊಡ್ಡ ಪ್ರಶಸ್ತಿ. ಹಳಬರು ಸಿಕ್ಕಾಗಲೆಲ್ಲಾ ಅಂದಿನ ಅಭಿವ್ಯಕ್ತಿಯನ್ನು ನೆನಪಿಸಿ ಗಂಟೆಗಟ್ಟಲೆ ಮಾತನಾಡುತ್ತಾರಲ್ಲಾ.. ಇದಕ್ಕಿಂತ ಹಿರಿದಾದ ಗೌರವ ಇನ್ನೇನು ಬೇಕು ಹೇಳಿ' ಎನ್ನುತ್ತಾರೆ.

                   ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿ ಶತಮಾನೋತ್ಸವ ಸರಣಿ ಕಾರ್ಯಕ್ರಮ ನಡೆಯುತ್ತಿದೆ. ಒಂದೊಂದು ಸಮಾರಂಭದಲ್ಲಿ ಕುರಿಯ ಶಾಸ್ತ್ರಿಗಳ ಒಡನಾಡಿಗಳನ್ನು ಗೌರವಿಸುವ ಪರಿಪಾಠ. ಅಕ್ಟೋಬರ್ 2ರಂದು ಅಪರಾಹ್ನ ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ 'ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾ ಪ್ರತಿಷ್ಠಾನ'ವು ಪೆರುವಡಿ ನಾರಾಯಣ ಭಟ್ಟರನ್ನು ಗೌರವಿಸಲಿದೆ.