Monday, September 25, 2017

ಅಕ್ಷರಯಾನ ಮುಗಿಸಿದ ಭಾಗವತ

             ಕುಬಣೂರು ಶ್ರೀಧರ ರಾವ್ - ಶ್ರೀ ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ - ಮೇಳದ - ಮುಖ್ಯ ಭಾಗವತ.
             ಈ ಒಂದು ವಾಕ್ಯ ಅವರ ವ್ಯಕ್ತಿ ಪರಿಚಯಕ್ಕೆ ಸಾಕು. ಅಷ್ಟೇ ಅಲ್ಲವಲ್ಲಾ. ರಂಗದಲ್ಲಿದಷ್ಟು ಹೊತ್ತು ಅವರೊಬ್ಬ ಭಾಗವತ. ಪಡಿಮಂಚದಿಂದ ಇಳಿದು ಚೌಕಿ(ಬಣ್ಣದಮನೆ)ಯಲ್ಲಿ ಮಂಗಳ ಹಾಡಿದರೆ ಬದುಕಿನ ಆರಂಭ. ಕುಬಣೂರರ ಮಹತ್ತಿರುವುದು ತನ್ನ ಬದುಕಿನಲ್ಲಿ ಮಿಳಿತವಾಗಿರುವ 'ಆರಂಭ'ದಿಂದ, 'ಆರಂಭ'ಗಳಿಂದ. ಯಾವಾಗಲೂ ಹೊಸತಿನ ಆರಂಭಕ್ಕೆ ಮುನ್ನುಡಿ ಬರೆಯುವುದು ಬದುಕಿನ ಅಭ್ಯಾಸ, ಹವ್ಯಾಸ.
              ದೇವರನಾಡಿನ ಮಣ್ಣಲ್ಲಿ ಅಕ್ಷರದ ಶ್ರೀಕಾರ ಅರಳಿತು. ಮುಂದೆ ಪ್ರಸಂಗಕರ್ತರಾಗಿ, ಪತ್ರಿಕೆಯ ಸಂಪಾದಕರಾಗಿ, ಅಭಿನಂದನಾ ಗ್ರಂಥದ ಲೇಖಕರಾಗಿ ಅಕ್ಷರಯಾನವು ವಿಸ್ತಾರ ಪಡೆಯಿತು. ಬಹುಶಃ ಶ್ರೀಧರ  ರಾಯರ ಮನೋವೇಗದ ಮುಂದೆ ಅಕ್ಷರಗಳು ಶರಣಾಗಿ ಸೆ.18ರಂದು ಯಾನವನ್ನು ನಿಲ್ಲಿಸಿದುವು! ಹೀಗೆ ಬರೆಯುವಾಗ ಕೈ, ಮನ ನಡುಗುವ ಘಳಿಗೆ.
              ಅಕ್ಷರಗಳು ಪದಗಳಾಗಿ, ಪದಗಳ ಪೋಣಿಕೆಯು ಪ್ರಸಂಗವಾಗಿ, ಅದಕ್ಕೆ ರಾಗ, ತಾಳಗಳ ಸಂಯೋಗದ ಭಾಗ್ಯ ಒದಗಿ 'ಭಾಗವತಿಕೆ'ಯಾದ ಅಕ್ಷರಗಳ ಯಾನ ಇದೆಯಲ್ಲಾ; ಅದು ಸೊಗಸು, ಬೆರಗು. ತನ್ನ ಭಾಗವತಿಕೆಯಲ್ಲಿ ಕವಿಯ, ಆಶಯದ ಕಾವ್ಯಸೊಬಗನ್ನು ಹೊರಹೊಮ್ಮಿಸುತ್ತಿದ್ದ ಕುಬಣೂರರ ಗಾಯನಕ್ಕೆ ಅಕ್ಷರಗಳು ತಲೆದೂಗುತ್ತಿದ್ದುವು. ಗಾಯನದೊಂದಿಗೆ ಅವುಗಳೂ ಕರಗಿಹೋಗುತ್ತಿದ್ದುವು. ಅಕ್ಷರಗಳಿಗಿನ್ನು ಆ ಯೋಗವಿಲ್ಲ!
               ಎಲ್ಲರಂತೆ ನನ್ನ ಹುಟ್ಟು ಕೊಡಗಿನ ಭಾಗಮಂಡಲದಲ್ಲಾಯಿತು - ವಿನೋದಕ್ಕಾಡಿದ ಅವರ ಮಾತಿನ ಹಿಂದಿರುವ ನೋವಿಗೆ ಕರುಳು ಹಿಂಡಿ ಬರುತ್ತದೆ. ಕಾಸರಗೋಡು ಜಿಲ್ಲೆಯ ಚಿಕ್ಕ ಹಳ್ಳಿ 'ಕುಬಣೂರು' ಶ್ರೀಧರ ರಾಯರ ಅಜ್ಜಿಮನೆ, ಮಾವನ ಮನೆ. ಅಜ್ಜಿಮನೆಯು ಮೊಮ್ಮಕ್ಕಳ ಪ್ರೀತಿಯ ನಿಲ್ದಾಣ. ಇಲ್ಲಿರುವುದು ಮೊಗೆದು ಕೊಡುವ ಪ್ರೀತಿ. ಇಂತಹ ಪ್ರೀತಿಯ ಸಂಪನ್ಮೂಲದ ಮಧ್ಯೆ ಬೆಳೆದರು.
               ಕಲಿಕೆಯ 'ಅ'ಕಾರದಿಂದ ತೊಡಗಿ 'ತಾಂತ್ರಿಕ ಪದವೀಧರ' ಪದವಿ ಪತ್ರ ಸಿಗುವಲ್ಲಿಯ ತನಕದ ಬದುಕಿನ ಯಾನವು ಹೊಟ್ಟೆ ತಂಪಾಗದ ಕಾಲಘಟ್ಟ. ನಾಟಕ, ಯಕ್ಷಗಾನಗಳು ಹಸಿವನ್ನು ಮತ್ತು ನೋವನ್ನು ಮರೆಸುವ ಉಪಾಧಿಗಳಾಗಿದ್ದುವು. ಅವಮಾನ, ಕಷ್ಟಗಳ ಮಾಲೆಗಳು, ಹೆಜ್ಜೆಹೆಜ್ಜೆಗೂ ತೊಡಕುಗಳನ್ನು ಮೀರಿ ಹೆಜ್ಜೆಯೂರುವ ಧೈರ್ಯವು ಅಜ್ಜಿ ಮನೆಯ ಬಳುವಳಿ. ಜತೆಗೆ ಸ್ವಾಭಿಮಾನದ ಕೆಚ್ಚು. ಹೊಟ್ಟೆಪಾಡಿಗಾಗಿ ಕಂಪೆನಿಯಲ್ಲಿ ದುಡಿದರೂ ಕಲಾ ಕಂಪಿನ ಗುಂಗು ಬೆನ್ನೇರಿತು. 
              ಪರಿಸರ, ವ್ಯಕ್ತಿ, ಒಡನಾಟ, ಸ್ನೇಹ.. ಒಬ್ಬ ವ್ಯಕ್ತಿಯ ಏಳ್ಗೆಗೆ ಕಾರಣವಾಗುವ ಅಂಶಗಳು. ಶ್ರೀಧರ ರಾಯರು ಇಂತಹ ವಾತಾವರಣದಲ್ಲಿ ಬೆಳೆದು ಆರಂಭದಲ್ಲಿ ಮುಗ್ಗರಿಸಿದರೂ, ಬದುಕಿನ ಉತ್ತರಾಪಥದಲ್ಲಿ ತಲೆಎತ್ತಿ ನಡೆದರು. 'ಅದೆಲ್ಲಾ ಗ್ರಹಗತಿಗಳು ಮಾಡುವ ಕಿತಾಪತಿ' ಎಂದೊಮ್ಮೆ ನಕ್ಕಿದ್ದರು. ಸಮಸ್ಯೆಯನ್ನು ಸಮಸ್ಯೆಯನ್ನಾಗಿ ಬಿಂಬಿಸುವ ಜಾಯಮಾನದವರಾಗಿರಲಿಲ್ಲ. ಅದಕ್ಕೊಂದು ಪರಿಹಾರದ ಬೆಳಕನ್ನು ಅರಸುತ್ತಿದ್ದರು.
             ಅಕ್ಷರಗಳನ್ನು ಬಾಚುವುದು ಕುಬಣೂರರ ಸ್ವ-ಭಾವ. ಅವರ ಕಲಾಯಾನಕ್ಕೆ ಅಕ್ಷರಗಳು ಕೈತಾಂಗು ಆದುವು. ಐ.ರಘುಮಾಸ್ತರರಿಂದ ಶಾಸ್ತ್ರೀಯ ಸಂಗೀತ ಪಾಠ. ಸಂಗೀತದ ಪಾಟಾಕ್ಷರಗಳು ನಾದವಾಗಿ ತನ್ನೊಳಗೆ ಲೀನವಾಗುವಷ್ಟು ತಲ್ಲೀನತೆ. ಹಾಗೆಂದು ಅಲ್ಲಿಯೇ ತಟಸ್ಥರಾಗಲಿಲ್ಲ. ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಯಕ್ಷಗಾನದ ಮದ್ದಳೆವಾದನ ಅಭ್ಯಾಸ ಮಾಡಿದರು. ಉಪ್ಪಳ ಕೃಷ್ಣ ಮಾಸ್ತರ್, ಬೇಕೂರು ಕೇಶವರಂತಹ ಹಿರಿಯರಿಂದ ಯಕ್ಷಗಾನದ ಹೆಜ್ಜೆ ಕಲಿತರು. ಕಲಿಕೆಯ ಒಂದೊಂದು ಅಕ್ಷರಗಳು ಅವರೊಳಗೆ ಇಳಿದು ನೆಲೆಯಾಗಲು ಹವಣಿಸುತ್ತಿದ್ದುವು.
              ಊರಿನ ಹಿರಿಯ ಭಾಗವತ ಗೋಪಾಲಕೃಷ್ಣ ಮಯ್ಯರಿಂದ ಭಾಗವತಿಕೆಯ ಬಾಲಪಾಠ. ಮುಂದೆ ಮಾಂಬಾಡಿ ನಾರಾಯಣ ಭಾಗವತರಲ್ಲಿ ಆಕೃತಿಯು ಕಲಾಕೃತಿಯಾಯಿತು. ಯಕ್ಷಗಾನ ಪಾಠಗಳ ಅಕ್ಷರಗಳು ಮನದೊಳಗೆ ಇಳಿದು ನೆಲೆಯಾದುವು. ಈ ನೆಲೆಗೆ ಮೊದಲೇ ಇಳಿದು ಕಾಯುತ್ತಿದ್ದ ಅಕ್ಷರಗಳು ಸಾಥ್ ಆದುವು. ಪರಿಪುಷ್ಟ 'ಭಾಗವತ'ನಾಗುವುದಕ್ಕೆ ಬೇಕಾದ ಒಳಸುರಿಗಳನ್ನು ನೀಡಿದುವು.

ಮುಗಿದ ಗೊಣಗಾಟ - ಯಶಸ್ವಿ ತಿರುಗಾಟ

             1979ರಿಂದ ಮೇಳಗಳ ನಂಟು. ಕೂಡ್ಲು, ಕದ್ರಿ, ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಮೇಳಗಳಲ್ಲಿ ಭಾಗವತರಾಗಿ ತಿರುಗಾಟ. ಜತೆಜತೆಗೆ ವಿವಿಧ ಜವಾಬ್ದಾರಿಗಳ ಬಾಚುವಿಕೆ. ಇನ್ನೊಬ್ಬನ ನೋವನ್ನು ತನ್ನದೆನ್ನುತ್ತ ಮರುಗುವ ಸ್ವ-ಭಾವ. ಇದರಿಂದ ತೃಪ್ತಿಯ ಬದಲಿಗೆ ಗೊಣಗಾಟ ಮೇಲ್ಮೆ ಸಾಧಿಸಿತು. ಹಿತರು ಅಹಿತರಾದರು. ಇವರಲ್ಲಿದ್ದ ಸೌಜನ್ಯ, ಪ್ರಾಮಾಣಿಕತೆಗಳು ಕೈಕೊಟ್ಟವು. ಅಷ್ಟಿಷ್ಟು ಕೂಡಿಟ್ಟ ಹಣವು 'ಗ್ರಹಚಾರ ದೋಷ'ದಿಂದ ಕರಗಿದುವು. ಮಾನಕ್ಕಿಂತಲೂ ಅಪಮಾನಗಳು ಅಂಟಿದುವು. ಅದರಿಂದ ಪಾರಾಗುವುದೇ ಸವಾಲಾಗಿತ್ತು. ಕೂಡ್ಲು ಮೇಳ ಮತ್ತು ಪೇಜಾವರ ಮೇಳಗಳನ್ನು ಮುನ್ನಡೆಸುವ ಆಶಯವು ಅರ್ಧದಲ್ಲೇ ಮೊಟಕಾಗಿತ್ತು.
               1990ರಿಂದ ಶ್ರೀ ಕಟೀಲು ಮೇಳದ ಭಾಗವತನಾಗಿ ನಿಯುಕ್ತಿ ಆದಲ್ಲಿಂದ ಕುಬಣೂರು ಶ್ರೀಧರ ರಾಯರಿಗೆ ಗುರುದೆಸೆ. ಅಬ್ಬಾ... ಹನ್ನೊಂದು ವರುಷದ ಗೊಣಗಾಟದ ಬದುಕು ವಿರೋಧಿಗಳಿಗೂ ಬೇಡ. ಎಷ್ಟೋ ಬಾರಿ ಬದುಕಬೇಕಾ ಎನ್ನುವ ಯೋಚನೆಯೂ ಬಂದಿತ್ತು. ಹೋದಲ್ಲಿ ಬಂದಲ್ಲಿ ಸೋಲಿನ ಅನುಭವಗಳು. ಹಾಗಾಗಿ ಸೋಲು, ಸಮಸ್ಯೆ ಎನ್ನುವುದಕ್ಕೆ ನಾನೇ ಪರ್ಯಾಯ ಪದ. ಹಿಂದೊಮ್ಮೆ ಬೊಳ್ಳಿಂಬಳ ಪ್ರಶಸ್ತಿಯ ಪ್ರಕ್ರಿಯೆಗಾಗಿ ಅವರನ್ನು ಸಂದರ್ಶಿಸಿದಾಗ ಹೇಳಿದ ಮಾತು. ಅದು ಕಾಡುವ ಮಾತು.
               ಕಟೀಲು ಮೇಳದ ರಂಗವು ಕುಬಣೂರರ ಆವಿಷ್ಕಾರಗಳ ಸಂಶೋಧನಾಲಯ. ಹಳೆ ಪ್ರಸಂಗಗಗಳಿಗೆ ಮರುಜೀವ ಕೊಡುವತ್ತ ಯತ್ನ. ಸ್ಥಾಪಿತ ಪ್ರಸಂಗಗಳಿಗೆ ಚೌಕಟ್ಟಿನೊಳಗೆ ಜನಾಕರ್ಷಣೆಯ ಸ್ಪರ್ಶ. ವಿಶೇಷ ವಿನ್ಯಾಸಗಳ ರಂಗಪೋಣಿಕೆ. ಸಿದ್ಧ ವ್ಯವಸ್ಥೆಗಿಂತ ಆಚೆ ನೋಡುವ ಮನಃಸ್ಥಿತಿ. ಕಲಾವಿದರ ಸಾಮಥ್ರ್ಯಕ್ಕೆ ಹೊಂದಿಕೊಂಡ ರಂಗ ನಿರ್ದೇಶನ. ನಿತ್ಯ ಅಕಾಡೆಮಿಕ್ ವಿಚಾರಗಳ ರಿಂಗಣ.
               ಮೇಳದಲ್ಲಿರುವ ಕಲಾವಿದರ ಅಭಿವ್ಯಕ್ತಿಯ ಸಾಮಥ್ರ್ಯವನ್ನು ಅರಿತುಕೊಳ್ಳುವುದು ಭಾಗವತನ ಶಕ್ತಿ. ಸೂಕ್ತವಾದ ಪಾತ್ರಗಳನ್ನು ಹಂಚಿ ಅವರೊಳಗಿರುವ 'ಕಲಾವಿದ'ನನ್ನು ಪ್ರೇಕ್ಷಕರಿಗೆ ತೋರಿಸುವುದು ಸಾಮಥ್ರ್ಯ. ಕಲಾವಿದರ ವೈಯಕ್ತಿಕ ಸಮಸ್ಯೆಯತ್ತಲೂ ಕಣ್ಣೋಟ ಹರಿಸುವುದೂ ಅಗತ್ಯ. ಜತೆಜತೆಗೆ ಮೇಳದ ಶಿಸ್ತು ಕಾಪಾಡಲ್ಪಡಬೇಕು. ಇವೆಲ್ಲಾ ಓರ್ವ ಭಾಗವತನಿಗಿರುವ ವೃತ್ತಿ ಸವಾಲುಗಳು. ಕುಬಣೂರು ಭಾಗವತರು ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದ ಅವರಿದ್ದ ಕಟೀಲಿನ ನಾಲ್ಕನೇ ಮೇಳದ (ಕಟೀಲಿನಲ್ಲಿ ಆರು ಯಕ್ಷಗಾನ ಮೇಳಗಳಿವೆ) ಪ್ರದರ್ಶನಗಳು ಜನಸ್ವೀಕೃತಿ ಪಡೆದಿವೆ. ಒಡನಾಡಿ ಕಲಾವಿದ, ಉಪನ್ಯಾಸಕ ಉಜಿರೆಯ ಶ್ರುತಕೀರ್ತಿ ರಾಜ್ ಜ್ಞಾಪಿಸಿಕೊಳ್ಳುತ್ತಾರೆ.
              ಮನುಷ್ಯ ಭಾವಜೀವಿ. ಭಾವನೆಗಳಿಲ್ಲದ ಮನುಷ್ಯ ಕೊರಡಿಗೆ ಸಮಾನ. ಭಾವನೆಗಳು ಬೇಕಾಗಿಲ್ಲ ಎನ್ನುವವರೂ ಇದ್ದಾರೆ! ಬಾಲ್ಯದಲ್ಲಿ ಕುಬಣೂರರ ಬದುಕಿನ ಏಳು ಬೀಳುಗಳು ಅವರ ಭಾವಗಳ ತೇವವನ್ನು ಗಾಢವಾಗಿಸಿದೆ. ಹಾಗಾಗಿಯೇ ಇರಬೇಕು, ಶ್ರೀಧರ ರಾಯರು ಆಡಿಸುವ ಪ್ರಸಂಗಗಳಲ್ಲಿ ಭಾವನಾತ್ಮಕವಾದ ಆಖ್ಯಾನಗಳಿಗೆ ಮಣೆ. ಅಲ್ಲಿ ಬಳಸುವ ಸಾಂದರ್ಭಿಕ ರಾಗಗಳು ಭಾವಗಳ ಮೇಲಾಟದ ಟಾನಿಕ್. 'ಮಾನಿಷಾದ, ಅಕ್ಷಯಾಂಬರ, ಪರೀಕ್ಷಿತ, ಹರಿಶ್ಚಂದ್ರ, ನಳೋಪಖ್ಯಾನ..' ಪ್ರಸಂಗಗಳೇ ಕುಬಣೂರರು ಹಾಡುವುದನ್ನು ಕಾಯುತ್ತಿದ್ದುವು.

ಅಕ್ಷರಗಳ ಪದ ಯಾನ

           ಕುಬಣೂರು ಶ್ರೀಧರ ರಾಯರು 'ಯಕ್ಷಪ್ರಭಾ' ಸುದ್ದಿ ಮಾಸಿಕದ ಸಂಪಾದಕರು. ಇಪ್ಪತ್ತೆರಡು ಸಂಪುಟಗಳನ್ನು ರಜೆಯಿಲ್ಲದೆ ಪ್ರಕಾಶಿಸಿದ್ದರು. ಸಿಂಗಾಪುರ ಪ್ರವಾಸಕ್ಕಾಗಿ ಆಗಸ್ಟ್ ತಿಂಗಳ ಪತ್ರಿಕೆಯಲ್ಲಿ ರಜೆಯ ಷರಾ ಬರೆದಿದ್ದರು. ಪತ್ರಿಕೆಗಿದು ಪ್ರಥಮ ರಜೆ. ಸಂಪಾದಕರಿಗದು ಕೊನೆಯ ರಜೆ. 'ವಿದ್ಯಾವಂತನಾಗಿ, ತಾನು ದುಡಿದ ಯಕ್ಷಗಾನ ಕ್ಷೇತ್ರಕ್ಕೆ ನನ್ನಿಂದ ಸೇವೆ ಸಲ್ಲಬೇಕು' ಎನ್ನುವ ಆಶಯ ಪತ್ರಿಕೆಯ ಪ್ರಕಾಶನದ ಹಿಂದಿತ್ತು.
              ವಿದ್ವಾಂಸ ಡಾ.ಪ್ರಭಾಕರ ಜೋಶಿಯವರು ಕುಬಣೂರರ ಸಾಧನೆಗೆ ಅಕ್ಷರರೂಪ ನೀಡುತ್ತಾರೆ. "ಯಕ್ಷಗಾನಕ್ಕೊಂದು ಪತ್ರಿಕೆಯು ಬೇಕೆಂಬ ಕನಸು ನನಸಾಗಿಸಿದರು. ಕೀರ್ತಿಶೇಷ ಕಡತೋಕ ಮಂಜುನಾಥ ಭಾಗವತರ ಕಾರ್ಯವನ್ನು ಮುಂದುವರಿಸಿದ ಸಜ್ಜನ, ಸ್ನೇಹಶೀಲ."
            'ನಮ್ಮ ಊರನ್ನು ತೊರೆದು, ಹೊರ ರಾಜ್ಯಗಳಲ್ಲಿ ದುಡಿಯುತ್ತಿರುವ ಅಭಿರುಚಿಯುಳ್ಳವರಿಗೆ ಯಕ್ಷಗಾನದ ಆಗುಹೋಗುಗಳನ್ನು ತಿಳಿಸುವ ಉದ್ದೇಶ' ಎನ್ನುವ ಸ್ಪಷ್ಟ ಕಲ್ಪನೆಯಿತ್ತು. ಪತ್ರಿಕೆಯಿಂದ ಏನೇನೋ ಮಾಡಿಲ್ಲ! ಏನಕ್ಕೇನೂ ಮಾಡಿಲ್ಲ. ಜಾಹೀರಾತಿಗಾಗಿ ಕಸರತ್ತು ಮಾಡಿಲ್ಲ. ಆರಂಭದ ದಿವಸಗಳಲ್ಲಿ ಚಂದಾ, ಜಾಹೀರಾತಿಗಾಗಿ ಓಡಾಡಿ ಚಪ್ಪಲಿ ಸವೆದಿದ್ದುವು. ಪತ್ರಿಕೆಯ ನಿರ್ವಹಣೆ ವಿಚಾರದಲ್ಲಿ ಅವರದು ಏಕವ್ಯಕ್ತಿ ಸೈನ್ಯ. ಜತೆಗೆ ಮಡದಿ, ಮಕ್ಕಳ ಹೆಗಲೆಣೆ.
          ಕಾರ್ಯಕ್ರಮಗಳ ದಾಖಲಾತಿ, ವ್ಯಕ್ತಿ ಪರಿಚಯ, ವಿಚಾರ-ವಿಮರ್ಶೆ, ಕಲಾವಿಮರ್ಶೆ, ಧ್ವನಿಸುರುಳಿ-ಪುಸ್ತಕ ಪರಿಚಯ, ಕಾರ್ಯಕ್ರಮಗಳ ಮುನ್ನೋಟ, ವರದಿ...ಗಳೇ ಹೂರಣಗಳು. ಯಕ್ಷಗಾನದಂತಹ ಸಂಕೀರ್ಣ ಕಲೆಯ ಬಗ್ಗೆ ವಿಚಾರಪೂರ್ಣ ಲೇಖನ, ವಿಮರ್ಶೆಗಳಿಂದ ಪತ್ರಿಕೆಯನ್ನು ಸಮೃದ್ಧಿಗೊಳಿಸಬಹುದಿತ್ತು. ಆರ್ಥಿಕ ಭಾರವನ್ನು ಹಗುರಗೊಳಿಸುವ ಹೆಗಲುಗಳು ಸಿಗುತ್ತಿದ್ದರೆ ಕುಬಣೂರು ಎಂದೋ ಆ ಕೆಲಸ ಮಾಡುತ್ತಿದ್ದರೆನ್ನಿ.
             "ಕಟೀಲು ಮೇಳದ ಸಂಚಾಲಕರು ತನ್ನ ಮೇಳದ ಪ್ರದರ್ಶನಗಳ ಜಾಹೀರಾತು ನೀಡುವುದರೊಂದಿಗೆ, ಕಟೀಲು ಮೇಳದ ಆಟ ಆಡಿಸುವವರನ್ನು ಚಂದಾದಾರರನ್ನಾಗಿ ಮಾಡಲು ಒಪ್ಪಿಗೆ ನೀಡಿದ್ದರು. ಇದು ನಿಜವಾದ ಪ್ರೋತ್ಸಾಹ" ಎಂದೊಮ್ಮೆ ಹೇಳಿದ್ದರು. ಮೇಳದ ಯಜಮಾನ ಕಲ್ಲಾಡಿ ವಿಠಲ ಶೆಟ್ಟರ 'ಯಕ್ಷ ವಿಠಲ ವಿಜಯ' ಎನ್ನುವ ಕೃತಿಯನ್ನು ಸ್ವತಃ ಕುಬಣೂರರು ಪ್ರಕಾಶಿಸಿದ್ದಾರೆ.  
             ತನ್ನ ಕಲ್ಪನೆಯ ರಂಗತಂತ್ರಗಳಿಗೆ ಸ್ವಯಂ ರಚಿಸಿದ ಪ್ರಸಂಗಗಳನ್ನು ಪ್ರಯೋಗಕ್ಕೆ ಬಳಸುತ್ತಿದ್ದರು. ಕಾಂತಾವರ ಕ್ಷೇತ್ರ ಮಹಾತ್ಮೆ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ದಾಶರಥಿ ದರ್ಶನ, ಮಹಾಸತಿ ಮಂದಾಕಿನಿ, ಪಟ್ಟದ ಮಣೆ.. ಅಕ್ಷರಯಾನದ ರಸಘಟ್ಟಿ ಪ್ರಸಂಗಗಳು. 'ವಿದ್ಯಾವಂತರು ಯಕ್ಷಗಾನಕ್ಕೆ ಸಕ್ರಿಯರಾಗಿ ಬರಬೇಕು,' ಎಲ್ಲಾ ಕೃತಿಗಳಲ್ಲಿ, ರಂಗಪ್ರಯೋಗಗಳಲ್ಲಿ ಅವ್ಯಕ್ತವಾಗಿ ಕಾಣುವ ಸಂದೇಶ. ಅವರ ಆಶಯಗಳನ್ನು ಅರ್ಥಮಾಡಿಕೊಂಡ ಮೇಳದ ಕಲಾವಿದರ ಕೊಡುಗೆಯು ರಂಗ ಯಶದ ಹಿಂದಿರುವ ದೊಡ್ಡ ಶಕ್ತಿ.

ಸಾಧನೆಗೆ ಕನ್ನಡಿ

          ಶ್ರೀಧರ ರಾಯರಿಗೆ ಕಳೆದ ವರುಷ ನವಂಬರದಲ್ಲಿ ಕಟೀಲಿನಲ್ಲಿ ಅದ್ದೂರಿಯ ಅಭಿನಂದನೆ. ಈ ಸಂದರ್ಭದಲ್ಲಿ ಪ್ರಕಟವಾಯಿತು, 'ಯಕ್ಷಭೃಂಗ' ಅಭಿನಂದನ ಕೃತಿ. ಇವರ ಬದುಕಿನ ಪ್ರತಿಫಲನ. ಜೀವನದ ಏಳುಬೀಳುಗಳ ಜತೆ ಸ್ಥಿರತೆ, ಯಕ್ಷಗಾನದ ಏರು-ತಗ್ಗುಗಳು ಮೂಡಿಸಿದ ಎಚ್ಚರಗಳು, ಕಾಲಕಾಲದ ಯಕ್ಷಪಲ್ಲಟಗಳನ್ನು ಸರಳವಾಗಿ ಮತ್ತು ನಿಖರವಾಗಿ ಹೇಳಿದ್ದಾರೆ.
           ಮಡದಿ ಶಾರದಾ. ಮಗಳು ಶ್ರೀವಿದ್ಯಾ, ಪ್ರಕೃತ ಸಿಂಗಾಪುರ ನಿವಾಸಿ. ಮಗ ಶ್ರೀಕಾಂತ. ಕರ್ನಾಟಕ ಬ್ಯಾಂಕಿನ ಉದ್ಯೋಗಿ. ಒಮ್ಮೆ ಖಾಸಗಿ ಮಾತುಕತೆಯಲ್ಲಿ ಹೇಳಿದ್ದರು, "ಗಂಡನ ಬದುಕಿನ ಏಳು-ಬೀಳುಗಳಿಗೆ ಅಧೀರರಾಗದ ಪತ್ನಿ, ಅಪ್ಪನನ್ನು ಅರ್ಥಮಾಡಿಕೊಂಡ ಮಕ್ಕಳು - ಇವಿಷ್ಟೇ ನನ್ನ ಶಾಶ್ವತ ಆಸ್ತಿ." ಹತ್ತಾರು ಪ್ರಶಸ್ತಿ, ಪುರಸ್ಕಾರ, ಸಂಮಾನಗಳಿಂದ ಅಲಂಕೃತರು.
             ಕುಬಣೂರರ ಮರಣದ ಸುದ್ದಿಯನ್ನು ನವಮಾಧ್ಯಮಗಳು ಹೊತ್ತು ತಂದಾಗ ಈ ಮಾತುಗಳು ಕಾಡುವುದಕ್ಕೆ ಆರಂಭಿಸಿದುವು. ಹೊಣೆಯರಿತ ಗೃಹಸ್ಥನಾಗಿ ಬಾಳಿದ ಕುಬಣೂರರು ಎಲ್ಲರೆನ್ನುವಂತೆ 'ಆಟದವರಾಗಿರಲಿಲ್ಲ'! ಬದುಕಿನ ಎಷ್ಟೋ ಸಂದರ್ಭಗಳ ನಿರ್ಲಿಪ್ತತೆ ಇದೆಯಲ್ಲಾ ಅದೊಂದು ಧ್ಯಾನ. ಆ ಧ್ಯಾನದೊಳಗಿದ್ದ 'ಸಂಗೀತಗಾರ, ಭಾಗವತ, ಸಂಪಾದಕ, ಪ್ರಸಂಗಕರ್ತ, ಕೃತಿಕರ್ತ, ನಿರ್ದೇಶಕ, ತೀರ್ಪುಗಾರ' ಇವರೆಲ್ಲರೂ ಶಾಶ್ವತ ಧ್ಯಾನಕ್ಕೆ ಇಳಿದರು.
             ಕುಬಣೂರರ ವ್ಯಕ್ತಿತ್ವವನ್ನು ರೂಪಿಸಿದ, ರಂಗಕ್ಕೆ ಮಾನ-ಸಂಮಾನಗಳನ್ನು ನೀಡಿದ ನಾದಯೋಗಿಯ - ಅಕ್ಷರಯೋಗಿಯ ಬೌದ್ಧಿಕ ಸಾಮಥ್ರ್ಯದ ಅನಾವರಣದ ಮಾತಿಗೆ ಸಾರಸ್ವತ ಲೋಕವು 2017 ಸೆಪ್ಟೆಂಬರ್ 18ರ ತನಕ ಕಾಯಬೇಕಾಯಿತು. ಎಲ್ಲರ ಪಾಡು. ಇದು ಜೀವನ.
ಚಿತ್ರ : ನಟೇಶ್ ವಿಟ್ಲ

Friday, September 22, 2017

ದಿವಾಣರಿಗೆ ಗುರುವಾಣಿ : 'ನಿರಕ್ಷರಕುಕ್ಷಿಗಳಿಗೂ ನಾಟ್ಯಾಭ್ಯಾಸ ಮಾಡಿಸಬಲ್ಲ ಚತುರ'


ಪ್ರಜಾವಾಣಿ ’ದಧಿಗಿಣತೋ’ ಅಂಕಣ / 25-8-2017

             1985-86ನೇ ಇಸವಿ. ಮಂಗಳೂರಿನ ಉರ್ವಸ್ಟೋರಿನ ಚಿಲಿಂಬಿಯಲ್ಲಿ ಕೂಡ್ಲು ಮೇಳದ ಆಟ. ಕೀರ್ತಿಶೇಷ ಕಾವೂರು ಕೇಶವರ ಯಜಮಾನಿಕೆಯ ಮೇಳ. ಪ್ರಸಂಗ : ಶಬರಿಮಲೆ ಕ್ಷೇತ್ರ ಮಹಾತ್ಮೆ. ದಿವಾಣ ಶಿವಶಂಕರ ಭಟ್ಟರ 'ಕೇತಕೀವರ್ಮ' (ಪಂದಳ ರಾಜ) ಪಾತ್ರ. ವೇಷದ ಆಕರ್ಷಣೆ ಮತ್ತು ರಂಗತುಂಬುವ ಅಭಿವ್ಯಕ್ತಿ. ಸ್ಪಷ್ಟವಾದ ಮಾತು. ಚೌಕಿಯ ಹೊರಗೂ ಮನ ತುಂಬುವ ಮಾತು. ಗುರು ಗೋವಿಂದ ಭಟ್ಟರ ಗರಡಿಯಲ್ಲಿ ತಯಾರಾಗಿ ನಾಲ್ಕೈದು ವರುಷವಾಗಿತ್ತಷ್ಟೇ. ಆಗವರಿಗೆ ಇಪ್ಪತ್ತೆರಡು ವರುಷ. ಈಗಲೂ ದಿವಾಣರು ಮಾತಿಗೆ ಸಿಗುವಾಗ ಅಂದಿನ ಪಂದಳ ರಾಜ ನೆನಪಾಗುತ್ತಾನೆ. ಆ ಬಳಿಕ ಹಲವು ವೇಷಗಳನ್ನು ವೀಕ್ಷಿಸಿದರೂ ಮನದೊಳಗೆ ಇಳಿದ ಪಂದಳರಾಜನನ್ನು ಎಬ್ಬಿಸಲಾಗಲೇ ಇಲ್ಲ!
              ದಿವಾಣ ಶಿವಶಂಕರ ಭಟ್ಟರ (53) ಮನೆತುಂಬಾ ಯಕ್ಷಗಾನದ್ದೇ ಮಾತುಕತೆ. ಹಿರಿಯರೆಲ್ಲರೂ ಯಕ್ಷಗಾನದ ಹವ್ಯಾಸದ ಸತ್ವದಲ್ಲಿ ಬದುಕನ್ನು ಕಟ್ಟಿಕೊಂಡವರು. ತಂದೆ ಗಣಪತಿ ದಿವಾಣ, ಆಶು ಕವಿಗಳು. ಶ್ರೀ ಧರ್ಮಸ್ಥಳ, ಸುರತ್ಕಲ್, ಕುಂಡಾವು ಮೇಳಗಳು ಊರಿಗೆ ಬಂದಾಗ ಪ್ರೇಕ್ಷಕನಾಗಿ ಭಾಗಿ. ಯಕ್ಷಗಾನವೇ ತಾನಾದಾಗ ಅಂಗಳವೇ ರಂಗಸ್ಥಳ. ತೊಡುವ ಉಡುಪು 'ಜೌಳಿ'ಯಾದಾಗ ಶಾಲಾ ಕಲಿಕೆ ಎಂಟರಲ್ಲಿ ನಿಂತಿತು. ಸರಿಯಾದ ಗುರುಗಳಲ್ಲಿ ಕಲಿ' ಎಂದು ಧರ್ಮಸ್ಥಳ ಲಲಿತಾ ಕಲಾ ಕೇಂದ್ರದತ್ತ ಬೆರಳು ತೋರಿದವರು ಊರಿನ ಹಿರಿಯ ಕಲಾವಿದ ವೈ.ಡಿ.ನಾಯಕರು. ಆಗ ಕೇಂದ್ರದಲ್ಲಿ ಸೂರಿಕುಮೇರು ಗೋವಿಂದ ಭಟ್ಟರು ಗುರುಗಳು.
               ನಾಯಕರ ನಿರ್ದೇಶನವನ್ನು ಶಿವಶಂಕರ ಭಟ್ಟರು ಆದೇಶವಾಗಿ ಸ್ವೀಕರಿಸಿದರು. ಯಕ್ಷಾಸಕ್ತಿಗೆ  ನೀರೆರೆದು ಪೋಶಿಸಿದ ಈ ಮಹನೀಯರು ನನ್ನ ಉತ್ಕರ್ಷಕ್ಕೆ ಅಡಿಗಲ್ಲಾಗಿ ಪರಿಣಮಿಸಿದರು. ನನಗೂ ಮಹಾನ್ ಕಲಾವಿದರ ಒಡನಾಟ ಮತ್ತು ಉತ್ತೇಜನವಿದ್ದುದರಿಂದ ಕಲಾವಿದನಾಗಿ ರೂಪುಗೊಳ್ಳಲು ಬೇಕಾದ ಸಮೃದ್ಧ ಸಂಪನ್ಮೂಲಗಳು ಒದಗಿದುವು. ಕೇಂದ್ರದಲ್ಲಿ ನೆಡ್ಲೆ ನರಸಿಂಹ ಭಟ್ಟರ ಗುರುತ್ವವೂ ಪ್ರಾಪ್ತವಾಗಿ ಮುಂದೆ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಆರಂಭವಾಯಿತು, ಎಂದು ಕಳೆದ ದಿನಮಾನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ದಿವಾಣರ ಕಲಾಯಾನಕ್ಕೆ ಈಗ ಮೂವತ್ತೈದು ವರುಷ.
               ಪ್ರಸ್ತುತ ಶ್ರೀ ಕಟೀಲು ಮೇಳದ ಕಲಾವಿದ. ಶ್ರೀ ಧರ್ಮಸ್ಥಳ ಮೇಳ, ಕೂಡ್ಲು ಮೇಳ, ಮಲ್ಲ, ಬಪ್ಪನಾಡು ಮೇಳಗಳಲ್ಲಿ ತಿರುಗಾಟ. ಹೊಸನಗರ ಮೇಳದಲ್ಲಿ ಸ್ವಲ್ಪ ಕಾಲ ವ್ಯವಸ್ಥಾಪಕನಾಗಿ ದುಡಿತ. ಒಂದಷ್ಟು ಕಾಲ ವಿರಾಮ. ಅಸೌಖ್ಯದ ಕಾರಣದಿಂದ 2008ರಲ್ಲಿ ಯಕ್ಷಗಾನದಿಂದ ದೂರವಿದ್ದೆ. ಪೂಜ್ಯ ಎಡನೀರು ಶ್ರೀಗಳ ಒತ್ತಾಯ ಮತ್ತು ಪ್ರೋತ್ಸಾಹದಿಂದ ಅವರ ಎಡನೀರು ಮೇಳದಿಂದ ಪುನಃ ಬಣ್ಣ ಹಚ್ಚಿದೆ. ಅಲ್ಲಿಂದ ಬದುಕಿನ ಹೊಸ ಆಧ್ಯಾಯ ಶುರು. ಆ ದಿನಮಾನಗಳನ್ನು ಮರೆಯಲು ಸಾಧ್ಯವಿಲ್ಲ, ಎಂದು ವಿನೀತರಾಗುತ್ತಾರೆ.
                ಶಿವಶಂಕರ ಭಟ್ಟರ ಕಿರೀಟ ವೇಷ ಸೊಗಸು. ರಂಗನಡೆಯೂ ಸೊಬಗು. ವಿಕಾರಗಳಿಲ್ಲದ ರಂಗಭಾಷೆ. ಗೋವಿಂದ ಭಟ್ಟರು, ಹೊಸಹಿತ್ಲು ಮಹಾಲಿಂಗ ಭಟ್, ಪುತ್ತೂರು ಕೃಷ್ಣ ಭಟ್ಟರು, ಬೇತ ಕುಂಞ.. ಇವರೆಲ್ಲರ ರಂಗತಂತ್ರಗಳ 'ಕೆಣಿ'ಗಳಿಂದ ಆಕರ್ಶಿತ. ಇದರಿಂದ 'ದಿವಾಣ ಶೈಲಿ'ಯೊಂದರ ಹುಟ್ಟು. ಫಕ್ಕನೆ ನೋಡುವಾಗ ಒಬ್ಬೊಬ್ಬರು ನೆನಪಾದರೂ ಅವರಂತೆ ಆಗದೆ ರಂಗದಲ್ಲಿ ಬೆಳೆದುದು ದಿವಾಣರ ಹೆಚ್ಚುಗಾರಿಕೆ. ಪಾತ್ರಗಳ ಸಿದ್ಧ ರಂಗ ನಡೆಯ ಬಳಕೆಯ ಜ್ಞಾನ ಮತ್ತು ಬಳಸುವಲ್ಲಿ ಎಚ್ಚರ ಕಾಣಬಹುದಾಗಿದೆ.
                  ಶಿವಶಂಕರ ಭಟ್ಟರು ಯಕ್ಷಗುರು. ಮಳೆಗಾಲದಲ್ಲಿ ಬಿಡುವಿಲ್ಲದ ಕಲಾವಿದ. ಕಾಸರಗೋಡು, ಕರಾವಳಿಗಳ ಹವ್ಯಾಸಿ ತಂಡಗಳಲ್ಲಿ ತರಬೇತಿ. ಶಿಷ್ಯರ ರಂಗನಡೆಯಲ್ಲಿ ಎದ್ದುಕಾಣುವ ದಿವಾಣರ ರಂಗಛಾಪು. ಒಬ್ಬ ವಿದ್ಯಾರ್ಥಿ ರಂಗ ಪ್ರವೇಶಿಸಲು ಎಷ್ಟು ಸಮಯ ಬೇಕು? "ಅವಸರದ ರಂಗಪ್ರವೇಶವು ಕಲಾವಿದನ ಬೆಳವಣಿಗೆಗೆ ಪೂರಕವಲ್ಲ.  ಕನಿಷ್ಠ ಒಂದು ವರುಷವಾದರೂ ಬೇಕು. ಒಬ್ಬ ಕಲಾವಿದನಾಗಿ ಹೊರಹೊಮ್ಮಲು ಮೂರು ವರುಷ ಕಾಯುವಿಕೆ ಬೇಕೇ ಬೇಕು. ನನ್ನ ತರಗತಿಗಳಲ್ಲಿ ಒಂದು ವರುಷದ ಬಳಿಕವೇ ರಂಗಪ್ರವೇಶ. ಎಷ್ಟೋ ಕಡೆ ಹೆತ್ತವರ ಒತ್ತಾಯದಿಂದ ರಂಗಪ್ರವೇಶ ಮಾಡುವುದನ್ನು ಕೇಳಿದ್ದೇನೆ. ಇದರಿಂದ ವಿದ್ಯಾರ್ಥಿಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಯಾವಾಗ ರಂಗಪ್ರವೇಶ ಮಾಡಬೇಕು ಎನ್ನುವ ನಿರ್ಧಾರವನ್ನು ಗುರುಗಳ ನಿರ್ಧಾರಕ್ಕೆ ಬಿಡಿ," ಎಂದು ಪಾಲಕರನ್ನು ವಿನಂತಿಸುತ್ತಾರೆ.
                  ಯುವಜನತೆ ಯಕ್ಷಗಾನದತ್ತ ಆಕರ್ಶಿತವಾಗಿದೆ. ಒಂದು ಉತ್ತಮ ಶ್ಲಾಘನೀಯ ಬೆಳವಣಿಗೆ. ಸಮಗ್ರ ರಂಗದ ಅಭಿಮಾನದ ಮನಃಸ್ಥಿತಿ ರೂಪುಗೊಳ್ಳಬೇಕಾಗಿದೆ. ವ್ಯಕ್ತಿ ಅಭಿಮಾನ ತಪ್ಪಲ್ಲ. ನಾಟಕ, ಸಿನೆಮಾ ರಂಗದಲ್ಲಿ ಪ್ರೇಕ್ಷಕರಿಗೆ ರಸಗ್ರಹಣ ಶಿಬಿರಗಳನ್ನು ಹಮ್ಮಿಕೊಳ್ಳುವುದಿದೆ. ಯಕ್ಷಗಾನಕ್ಕೂ ಇಂತಹ ಶಿಬಿರಗಳ ಅಗತ್ಯ ಕಂಡುಬರುತ್ತದೆ. 'ಯಕ್ಷಗಾನವನ್ನು ಯಕ್ಷಗಾನವಾಗಿಯೇ ನೋಡುವುದು ಮತ್ತು ಅನುಭವಿಸುವುದು ಹೇಗೆ' ಎನ್ನುವ ತರಬೇತಿ. ದಿವಾಣರು ಓರ್ವ ವೃತ್ತಿ ಕಲಾವಿದನಾಗಿದ್ದುಕೊಂಡು ಇಂತಹ ದೂರದೃಷ್ಟಿಯನ್ನು ಹೊಂದಿರುವುದು ವರ್ತಮಾನದ ಅನಿವಾರ್ಯತೆ.
                 "ಇಂದು ಯಕ್ಷಗಾನವನ್ನು ವೃತ್ತಿಗಾಗಿಯೇ ಆರು ತಿಂಗಳು ನಿರಂತರ ಕಲಿಯುವ ವಿದ್ಯಾರ್ಥಿಗಳಿಲ್ಲ. ಹಾಗಾಗಿ ಕೇಂದ್ರಗಳು ವಿದ್ಯಾರ್ಥಿಗಳ ಅಲಭ್ಯತೆಯಿಂದ ಸೊರಗಿದೆ," ಎನ್ನುತ್ತಾರೆ. ವೃತ್ತಿ ಭದ್ರತೆಯು ಇಲ್ಲದಿರುವುದೂ ಕಾರಣ. ದಿವಾಣರಿಗೆ ಕನ್ನಡ ನೆಲದಲ್ಲಿ ಮಾತ್ರವಲ್ಲದೆ ದೂರದ ತ್ರಿಶೂರಿನಲ್ಲೂ ವಿದ್ಯಾರ್ಥಿಗಳಿದ್ದಾರೆ. ಸರಕಾರವು ಪಠ್ಯದೊಂದಿಗೆ ಯಕ್ಷಗಾನವು ಕಲೋತ್ಸವದ ಮೂಲಕ ಮಿಳಿತಗೊಳಿಸಿದೆ. "ನಾನು ತ್ರಿಶೂರಿನಲ್ಲಿ ಬಿಡಾರ ಮಾಡಿದರೆ ಯಕ್ಷಗಾನದಿಂದಲೇ ಬದುಕಿಯೇನು," ಎನ್ನುವ ಆತ್ಮವಿಶ್ವಾಸವಿದೆ. ಒಂದೆಡೆ ವೃತ್ತಿ ರಂಗವನ್ನು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳಿಲ್ಲದೆ ಸೊರಗುವ ಕೇಂದ್ರಗಳು. ಮತ್ತೊಂದೆಡೆ ದಿವಾಣರಂತಹ ಹಿರಿಯರಿಗೆ ದೂರದ ಕೇರಳದಲ್ಲೂ ಬದುಕಬಹುದೆನ್ನುವ ಧೈರ್ಯ. ಈ ಎರಡೂ ವಿಚಾರಗಳನ್ನು ಮುಂದಿಟ್ಟು ಯೋಚಿಸಿದಾಗ ಬೇರೆ ಬೇರೆ ಉದ್ಯೋಗದಲ್ಲಿದ್ದು ವೃತ್ತಿರಂಗದಲ್ಲಿ ಕಲಾವಿದರಾಗಿರುವ ಒಂದಷ್ಟು ಮಂದಿ ಕಣ್ಮುಂದೆ ಹಾದು ಹೋದರು.
                  ಈಚೆಗೆ ಕಾಸರಗೋಡು ಜಿಲ್ಲೆಯ ಎಡನೀರಿನಲ್ಲಿ ಒಂದು ತಿಂಗಳ ಯಕ್ಷಗಾನ ತರಬೇತಿ ಶಿಬಿರ ಜರುಗಿತ್ತು. ಶಿಬಿರದಲ್ಲಿ ಪೂರ್ಣಪ್ರಮಾಣದಲ್ಲಿ ದಿವಾಣರು ಮತ್ತು ಸಬ್ಬಣಕೋಡಿ ರಾಮ ಭಟ್ಟರು ಗುರುಗಳಾಗಿ ವಿದ್ಯಾರ್ಥಿಗಳಿಗೆ ಒದಗಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ 'ಯಕ್ಷಗಾನ ಸಂಶೋಧನಾ ಕೇಂದ್ರ'ದ ಆಯೋಜನೆ. "ಶಿಬಿರದ ಯಶಸ್ಸಿನ ಹಿನ್ನೆಲೆಯಲ್ಲಿ ಸಂಯೋಜಕ ರತ್ನಾಕರ ಮಲ್ಲಮೂಲೆಯವರ ಬದ್ಧತೆ ಮತ್ತು ಗುರುಗಳ ಗುರುತ್ವವು ವಿದ್ಯಾರ್ಥಿಗಳನ್ನು ರೂಪುಗೊಳಿಸುವಲ್ಲಿ ಸಹಕಾರಿ ಇವರೆಲ್ಲರೂ ಕಲಾವಿದರಾಗದಿದ್ದರೂ, ಉತ್ತಮ ಪ್ರೇಕ್ಷಕರಾದರೆ ಸಾಕು," ಎನ್ನುವ ಕಳಕಳಿ ದಿವಾಣರದ್ದು.
                 'ನಿರಕ್ಷರಕುಕ್ಷಿಗಳಿಗೂ ನಾಟ್ಯಾಭ್ಯಾಸ ಮಾಡಿಸಬಲ್ಲ ಚತುರ' ಎಂದು ಗುರು ಗೋವಿಂದ ಭಟ್ಟರು ದಿವಾಣರಿಗೆ ನೀಡಿದ ಪ್ರಶಂಸೆಯು ಶಿಷ್ಯನಾಗಿ ದಿವಾಣರಿಗೆ ಸಾರ್ಥಕ್ಯದ ಕ್ಷಣ. ಇಲ್ಲಿ ಶಬ್ದಾರ್ಥವಲ್ಲ, ಅದರ ಹಿಂದಿರುವ ಭಾವವನ್ನು ಅರ್ಥ ಮಾಡಿಕೊಳ್ಳಬೇಕು. ಮಾತನಾಡುತ್ತಾ, ಕಥಕ್ಕಳಿಯ ಶಿಸ್ತು ನೋಡಿದಾಗ, ಬದಲಾದ ಕಾಲಘಟ್ಟದಲ್ಲೂ ಯಕ್ಷಗಾನಕ್ಕೆ ಶಿಸ್ತು ಬೇಕು. ಮೊದಲು ಅವ್ಯಕ್ತವಾಗಿ ಶಿಸ್ತು-ಭಯ ಜತೆಜತೆಗೆ ಮಿಳಿತವಾಗಿರುತ್ತಿತ್ತು. ಈಗ ಪ್ರತ್ಯೇಕವಾಗಿ ಶಿಸ್ತನ್ನು ತರಬೇಕೇನ್ನುವುದು ಯಕ್ಷಗಾನದ ಅಭಿವೃದ್ಧಿಯೋ, ಹಿಂಬೀಳಿಕೆಯೋ ನೀವೇ ಯೋಚಿಸಿ, ಎಂದು ಬುದ್ದಿಗೆ ಗ್ರಾಸ ಒದಗಿಸಿದರು.
                 ದಿವಾಣ ಶಿವಶಂಕರ ಭಟ್ಟರು ಹತ್ತಾರು ಸಂಮಾನಗಳಿಂದ ಪುರಸ್ಕೃತರು. ಸ್ವ-ರೂಢಿತ ವ್ಯಕ್ತಿತ್ವದಿಂದ ರಂಗದಲ್ಲಿ ಸ್ವ-ಶೈಲಿಯ ಹೆಜ್ಜೆಯನ್ನು ಮೂಡಿಸಿದ ದಿವಾಣರಿಗೆ ಈಚೆಗೆ ಕೇರಳದ ಮೂವತ್ತೇಳು ಕಲೆಗಳನ್ನು ಪ್ರತಿನಿಧಿಸುವ 'ಸವಾಕ್' ಸಂಸ್ಥೆಯ ಗೌರವವು ಪ್ರಾಪ್ತವಾಗಿದೆ.
(ಚಿತ್ರ ಕೃಪೆ: ಪ್ರಭಾಕರ ಮಂಜೇಶ್ವರ)



Thursday, September 21, 2017

ಕಾಲದ ದಾಖಲೆ ಒದಗಿಸಿದ ಮೊಹರು

 ಪುನಶ್ಚೇತನಗೊಂಡ ಕಲಾವರ್ಧಿನಿ ಸಂಘದ ತಾಳಮದ್ದಳೆ.
 ಕಾಂಚನದಲ್ಲಿ ಜರುಗಿದ ತಾಳಮದ್ದಳೆಯೊಂದರ ಅಪರೂಪದ ಚಿತ್ರ - ದೇರಾಜೆ ಸೀತಾರಾಮಯ್ಯ, ಎನ್.ವಿ.ಕೃಷ್ಣ ರಾವ್, ರಾಮ ಭಟ್, ಕುಕ್ಕಜೆ ಕೃಷ್ಣ ಭಟ್, ಈಶ್ವರ ಭಟ್ ಕಜೆ, ಕುಬಣೂರು ಬಾಲಕೃಷ್ಣ ರಾವ್, ನಾರಾಯಣ ಭಟ್, ಕೃಷ್ಣಶಾಸ್ತ್ರಿ (ಕಲಾವಿದರು)

ಪ್ರಜಾವಾಣಿ ’ದಧಿಗಿಣತೋ’ ಅಂಕಣ / 18-8-2017

               ಯಕ್ಷಗಾನದ ಹವ್ಯಾಸಿ ರಂಗಭೂಮಿಯ ಸಾಧ್ಯತೆಗಳು ಆ ರಂಗದಲ್ಲಿದ್ದವರಿಗೆ ಅನುಭವವೇದ್ಯ. ಸಂಘವೊಂದು ಹಳ್ಳಿಯಲ್ಲಿ ಉಸಿರಾಡುತ್ತಿದ್ದರೆ ಅದು ಅಲ್ಲಿನ ಸಾಂಸ್ಕ್ರತಿಕ ಮುಖ. ವೈಚಾರಿಕವಾದ ಭಿನ್ನಾಭಿಪ್ರಾಯಗಳು, ಅದಕ್ಕೆ ಥಳಕು ಹಾಕುತ್ತಿದ್ದ ವೈಯಕ್ತಿಕ ಪ್ರತಿಷ್ಠೆಗಳ ಮೇಲಾಟದ ಮಧ್ಯದಲ್ಲೂ ಸಂಘಗಳು ಕಲಾಮನಸ್ಸುಗಳನ್ನು ಸೃಷ್ಟಿಸುವುದಲ್ಲಿ ಸಫಲವಾಗಿದ್ದುವು. ನೋಂದಾಯಿತ ಸಂಘಗಳು ಕಾರ್ಯ ನಿರ್ವಹಿಸುವಂತೆ ಸುಪುಷ್ಟವಾದ ಕಾರ್ಯಹೂರಣಗಳನ್ನು  ಹೊಂದಿದ್ದವು.
           ಹವ್ಯಾಸಿ ಸಂಘಗಳ ಚಟುವಟಿಕೆಗಳು ದಾಖಲಾದುದು ಅಲ್ಲೋ ಇಲ್ಲೋ ಮಾತ್ರ. ಆಧುನಿಕ ತಂತ್ರಜ್ಞಾನಗಳ ಅಲಭ್ಯತೆಗಳಿಂದಾಗಿ ಸಾಂಸ್ಕೃತಿಕ ಸುದ್ದಿಗಳು ಹೊರ ಜಗತ್ತಿಗೆ ಪರಿಚಯವಾಗುತ್ತಿರಲಿಲ್ಲ. ಸೇವಾ ಭಾವದ ಹಿನ್ನೆಲೆಯಲ್ಲಿ ಅಂತಹ ವಿಚಾರಗಳಿಗೆ ಕೊನೆಯ ಸ್ಥಾನ. ಸಂಘವೊಂದರ ಹತ್ತರ, ಇಪ್ಪತ್ತರ ಸಂಭ್ರಮಗಳಿಗೆ ನೆನಪು ಸಂಚಿಕೆಗಳೂ ಹೊರಬರುತ್ತಿರಲಿಲ್ಲ. ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದ ಅಸಾಧ್ಯತೆಗಳೂ ಕಾರಣ. ಯಾವ ಕಲಾವಿದರಲ್ಲೂ ಕಾಂಚಾಣದ ಮೋಹ ಇದ್ದಿರಲಿಲ್ಲ. ಸಾಮಾಜಿಕವಾಗಿ ಅಂತಹ ವಾತಾವರಣಗಳಿದ್ದಿರಲಿಲ್ಲ. ಚಟುವಟಿಕೆಗಳು ದಾಖಲೆಗೊಳ್ಳುತ್ತಿದ್ದರೆ ಭವಿಷ್ಯದ ಯಾವುದೋ ಒಂದು ದಿವಸಕ್ಕೆ ಅದು ಭೂತಕಾಲದ ದಾಖಲೆಯಾಗಿ ಒದಗುತ್ತಿತ್ತು.
              ಬಂಟ್ವಾಳ ತಾಲೂಕಿನ - ದ.ಕ.ಜಿಲ್ಲೆ - ಕೆದಿಲದಲ್ಲಿ 'ಯಕ್ಷಗಾನ ಕಲಾವರ್ದಿನೀ ಸಭಾ' ಎನ್ನುವ ಸಂಘವೊಂದಿತ್ತು. 1955ರ ದಶಂಬರ 12ರಂದು ಉದ್ಘಾಟನೆಗೊಂಡಿತ್ತು. ತನ್ನ ಐದನೇ ವರುಷದ ವಾರ್ಶಿಕೋತ್ಸವದ - 25 ಫೆಬ್ರವರಿ 1961 - ಸಂದರ್ಭದಲ್ಲಿ ಚಿಕ್ಕ ಪುಸ್ತಿಕೆಯೊಂದನ್ನು ಪ್ರಕಟಿಸಿತ್ತು. ಅದು ಕಳೆದ ಕಾಲದ ಕಥನವನ್ನು ಸಾರುತ್ತದೆ. ಒಂದು ಪ್ರದೇಶದ ಸಾಂಸ್ಕೃತಿಕ ದಾಖಲೆಯಾಗಿ ಗೋಚರಿಸುತ್ತದೆ. ಇದನ್ನು ಒದಗಿಸಿದವರು ಕಲಾವಿದ ಕೆದಿಲ ಗಣರಾಜ ಭಟ್.
            ಯಕ್ಷಗಾನ ಸಂಘವೊಂದು ಸ್ಥಾಪನೆಯಾದರೆ ಅದು ಯಕ್ಷಗಾನದ ಹೊರತಾದ ಯಾವ ಕಲೆಯನ್ನೂ ಸ್ಪರ್ಶಿಸದು, ವೀಕ್ಷಿಸದು! ಇತರ ಕಲೆಗಳೂ ಅಷ್ಟೇ! ಕಾರಣ ಅರಿಯದು. ಸೋದರ ಕಲೆಗಳನ್ನು ಎಷ್ಟೋ ಸಂದರ್ಭಗಳಲ್ಲಿ ಗೌರವಿಸಲಾಗದಷ್ಟು ಕೃತಘ್ನರಾಗುತ್ತೇವೆ. ಕಲಾವರ್ಧಿನಿ ಸಭಾವು ಯಕ್ಷಗಾನವನ್ನು ಮುಖ್ಯವಾಗಿಟ್ಟುಕೊಂಡರೂ ಇತರೆಲ್ಲ ಕಲೆಗಳನ್ನು ಗೌರವದಿಂದ ಕಂಡಿದೆ. ಆಯೋಜನೆಯನ್ನು ಮಾಡಿದೆ. ತಾಳಮದ್ದಳೆ, ಬಯಲಾಟ, ಭಾರತ ವಾಚನ, ನಾಗಸ್ವರ ಕಛೇರಿ, ಹರಿಕಥೆ, ಉಪನ್ಯಾಸಗಳು, ಸಂಗೀತ.. ಹೀಗೆ ವೈವಿಧ್ಯ ಹೂರಣಗಳಿಂದ ಮೈತುಂಬಿದ್ದುವು.
              ಉದಾ: 9-8-1960ರಂದು ಕೆದಿಲ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ 'ಯಾಗ ನಿರ್ಧಾರ' ಎನ್ನುವ ಭಾರತ ವಾಚನ; 24-8-1960ರಲ್ಲಿ ನಾಗಸ್ವರ ಕಛೇರಿ, 3-5-1960ರಂದು ಎ.ಎಸ್.ರಾಮಕೃಷ್ಣ ಶೃಂಗೇರಿಯವರಿಂದ 'ಉತ್ತರ ಗೋಗ್ರಹಣ' ಹರಿಕಥೆ. 1957ರಲ್ಲಿ ಆಚಾರ್ಯ ವಿನೋಬಾ ಭಾವೆಯವರ ಸಮ್ಮುಖದಲ್ಲಿ ಯಕ್ಷಗಾನ. 1958ರಲ್ಲಿ ಮೂಲ್ಕಿ ಮೇಳದವರಿಗೆ ರಜತ ಕರಂಡಕ ಪ್ರದಾನ.
               ಸಂಘವೊಂದರಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಸದಸ್ಯರು.. ಹೀಗೆ ಸಾಮಾನ್ಯವಾಗಿ ಜವಾಬ್ದಾರಿ ಹಂಚೋಣವಾಗುತ್ತದೆ. ಕಲಾವರ್ಧಿನಿ ಸಭಾವು ಒಂಭತ್ತು ಮಂದಿ ಸಂಸ್ಥಾಪಕರು, ಮೂವತ್ತೈದು ಪೋಷಕರು, ನಲವತ್ತೆರಡು ಸಹಾಯಕರು, ಹದಿನಾರು ಸಾಮಾನ್ಯ ಸದಸ್ಯರು. ಇದರಲ್ಲಿ ಸಕ್ರಿಯ ಸದಸ್ಯರ ಸಂಖ್ಯೆ ಐವತ್ತೈದು. ಇಪ್ಪತ್ತು ಮಂದಿಯ ಆಡಳಿತ ಮಂಡಳಿಯಿತ್ತು.
                1961ರವರೆಗಿನ ಪದಾಧಿಕಾರಿಗಳ ವಿವರ ಹೀಗಿದೆ. ಬಿ. ಸುಬ್ಬಣ್ಣ ಭಟ್ (ಅಧ್ಯಕ್ಷರು), ಕೆ. ರಾಮ ಭಟ್ ಮತ್ತು ಕೈಂತಜೆ ಸದಾಶಿವ ಭಟ್ (ಉಪಾಧ್ಯಕ್ಷರು), ಕೈಲಾರ್ ಈಶ್ವರ ಭಟ್ (ಕೋಶಾಧಿಕಾರಿ) ಈಶ್ವರ ಭಟ್ ಕಜೆ (ಪ್ರಧಾನ ಕಾರ್ಯದರ್ಶಿ) ಬಿ. ನಾರಾಯಣ ಭಟ್ (ಜತೆ ಕಾರ್ಯದರ್ಶಿ). 1961ರ ನಂತರ - ಬಡೆಕ್ಕಿಲ ಕೃಷ್ಣ ಭಟ್ಟರು ಅಧ್ಯಕ್ಷರಾದರು. ಈಶ್ವರ ಭಟ್ ಕಜೆಯವರಿಗೆ ಕಾರ್ಯದರ್ಶಿಯ ಜವಾಬ್ದಾರಿ. ಕೈಂತಜೆ ಸೀತಾರಾಮ ಭಟ್ಟರು ಗೌರವ ಲೆಕ್ಕ ಪರಿಶೋಧಕರು. ಕೆ. ಗೋವಿಂದ ಭಟ್ಟರು ಕಾನೂನು ಸಲಹೆಗಾರರು.
                ಯಕ್ಷಗಾನ ಸಂಘವಾದರೂ ಅದು ಇತರ ಸಹಕಾರಿ ಸಂಘಗಳಂತೆ ಲೆಕ್ಕಪತ್ರಗಳು, ಆಡಳಿತ ಮಂಡಳಿಯನ್ನು ಸಂಸ್ಥೆಯ ಸುಲಭ ಮತ್ತು ಪಾರದರ್ಶಕ ವ್ಯವಹಾರಕ್ಕಾಗಿ ಹೊಂದಿತ್ತು. ಅಧ್ಯಕ್ಷ, ಕಾರ್ಯದರ್ಶಿ ಎನ್ನುವ ಹುದ್ದೆಗಳು ಅಲಂಕಾರಕ್ಕೆ ಇರುವಂತಹುದಲ್ಲ ಎನ್ನುವುದನ್ನು ಹಿರಿಯರು ತೋರಿಕೊಟ್ಟಿದ್ದಾರೆ. ಕಾಲ ಸರಿದಂತೆ ಸಂಘದ ಬಹುತೇಕ ಮಂದಿ ವಿವಿಧ ಊರುಗಳಲ್ಲಿ ವಾಸ್ತವ್ಯ ಹೊಂದಿದರು. ಕೆಲವರು ಕಾಲ ವಶವಾದರು. ಇಪ್ಪತ್ತು-ಇಪ್ಪತ್ತೈದು  ವರುಷ ಸಕ್ರಿಯವಾಗಿದ್ದ ಕಲಾವರ್ಧಿನಿ ಸಭಾ ಕಾಲನ ಪ್ರಭಾವದಿಂದ ಮರೆಗೆ ಸರಿಯಿತು. ಜನರು ಮರೆತರು. ಈ ಸಂಸ್ಥೆಯು ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಅದರ ಐದನೇ ವರುಷದ ವರದಿಯನ್ನು ಹೊಂದಿದ ಪುಸ್ತಿಕೆ ಸಾಕ್ಷಿ.
                ಈ ಹಿನ್ನೆಲೆಯಲ್ಲಿ ನಿಲುಗಡೆ ಹೊಂದಿದ ಸಂಘವು ಕಳೆದ ವರುಷ ಪುನರಾರಂಭಗೊಂಡಿತು! ಇದು ಹೇಗೆ ಸಾಧ್ಯವಾಯಿತು? ಕೆದಿಲ ಗಣರಾಜ ಭಟ್ಟರ ಮಾತಿಗೆ ಕಿವಿಯಾಗೋಣ ಅಲ್ವಾ - ನನ್ನ ಅಜ್ಜ ನಾರಾಯಣ ಭಟ್ ಬಡೆಕ್ಕಿಲ. ಅವರ ಯಕ್ಷಗಾನದ ಪುಸ್ತಕಗಳ ಸಂಗ್ರಹದ ಸಂಚಿಯನ್ನು ಹುಡುಕುತ್ತಿದ್ದಾಗ 'ಯಕ್ಷಗಾನ ಕಲಾವರ್ಧಿನಿ ಸಭಾ, ಕೆದಿಲ' ಎನ್ನುವ ರಬ್ಬರ್ ಸ್ಟಾಂಪಿನ ಮೊಹರು ಗೋಚಾರವಾಯಿತು. ಶಾಯಿ ಆರಿರಲಿಲ್ಲ! ಆ ಸಮಯದ ಚಟುವಟಿಕೆಗಳನ್ನು ನೋಡುತ್ತಾ ಇದ್ದ ವಡ್ಯದಗಯ ಭೀಮ ಭಟ್ಟರು (85) ಆಗ ಸಂಘದ ಜವಾಬ್ದಾರಿಯಿದ್ದ ಕಜೆ ಈಶ್ವರ ಭಟ್ಟರತ್ತ ಬೆರಳು ತೋರಿದರು. ಈಶ್ವರ ಭಟ್ಟರ ಮೂಲಕ ಐದನೇ ವರುಷದ ವರದಿ ಪುಸ್ತಿಕೆ ಸಿಕ್ಕಿತು. ಆರು ದಶಕದ ಹಿಂದಿನ ಯಕ್ಷಲೋಕದ ಚಿತ್ರ ಕಣ್ಮುಂದೆ ಹಾದು ಹೋದುವು.
                 ನಿಲುಗಡೆಯಾದ ಸಂಘಕ್ಕೆ ಪುನಶ್ಚೇತನ ನೀಡಲು ನಿರ್ಧಾರ. ಊರ ಹಿರಿಯ ಸಹಕಾರ. ಬಡೆಕ್ಕಿಲ ಪದ್ಮನಾಭ ಭಟ್ ಅಧ್ಯಕ್ಷರಾಗಿಯೂ, ಕುಕ್ಕಾಜೆ ಚಂದ್ರಶೇಖರ ಭಟ್ ಕಾರ್ಯದರ್ಶಿಯಾಗಿ ಸಂಘವು ಉಸಿರಾಡಲು ಶುರುವಾಯಿತು. ಆರಂಭದ ದಿವಸಗಳಲ್ಲಿ ಕಲಾವರ್ಧಿನೀ ಸಭಾದಲ್ಲಿ ಅರ್ಥ ಹೇಳಿದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಶಂಭು ಶರ್ಮ, ಲಕ್ಷ್ಮೀಶ ಅಮ್ಮಣ್ಣಾಯರೇ ಮೊದಲಾದ ಕಲಾವಿದರನ್ನು ಆಮಂತ್ರಿಸಿ ತಾಳಮದ್ದಳೆ ಆಯೋಜನೆ ಮಾಡಿ ಸಂಘಕ್ಕೆ ಮರುಜನ್ಮ ನೀಡಿದೆವು. ಹಿರಿಯರು ಹಾಕಿಕೊಟ್ಟ ಹಾದಿಯಂತೆ ಸಂಘವನ್ನು ಯಕ್ಷಗಾನಕ್ಕೆ ಸೀಮಿತಗೊಳಿಸದೆ ಎಲ್ಲಾ ಕಲೆಗೂ ಗೌರವದ ಸ್ಥಾನವನ್ನು ಕಲ್ಪಿಸಿದ್ದೇವೆ.
                    ಒಂದು ಪುಸ್ತಿಕೆ ಮತ್ತು ರಬ್ಬರ್ ಸ್ಟಾಂಪ್ ಮೊಹರು ನಿಲುಗಡೆಯಾದ ಸಂಘಕ್ಕೆ ಜೀವದಾನ ಮಾಡಿತು. ಪುನಶ್ಚೇತನಗೊಂಡ ಸಂಘವು ಹದಿನೈದು ತಾಳಮದ್ದಳೆಗಳನ್ನು ಏರ್ಪಡಿಸಿದೆ. ಪ್ರತೀ ದಶಂಬರದಲ್ಲೂ ವಾರ್ಶಿಕೋತ್ಸವವನ್ನು ಆಚರಿಸುವ ಇರಾದೆಯಿದೆ. ಜತೆಗೆ ಇತರ ಕಲೆಗಳ ಪ್ರದರ್ಶನಗಳಿಗೂ ಆದ್ಯತೆ ನೀಡಿದ್ದಾರೆ. ಬಹುಶಃ ಈ ಎರಡು ದಾಖಲೆಗಳು ಗಣರಾಜರಿಗೆ ಸಿಗದೇ ಇರುತ್ತಿದ್ದರೆ ಕಲಾವರ್ಧಿನಿ ಸಭಾ ಕಾಲಗರ್ಭದೊಳಗೆ ಪೂರ್ತಿಯಾಗಿ ಇಳಿಯುತ್ತಿತ್ತೋ ಏನೋ?
                  ಕಲಾವರ್ಧಿನಿ ಸಭಾದಂತೆ ನಮ್ಮ ನಡುವೆ ನಿಲುಗಡೆಯಾದ ಯಕ್ಷಗಾನದ ಸಂಘಗಳ ಸಂಖ್ಯೆ ಸಾಕಷ್ಟಿವೆ. ಕೆಲವೊಂದಕ್ಕೆ ಸಾಕ್ಷಿಯಾಗಿ ಹಿರಿಯರು ಮಾತಿಗೆ ಸಿಗುತ್ತಾರೆ. ಕನಿಷ್ಠ ಐದು ವರುಷಕ್ಕೊಮ್ಮೆಯಾದರೂ ಸಂಘದ ಚಟುವಟಿಕೆಗಳ ಕಿರು ಪುಸ್ತಿಕೆಗಳು ಪ್ರಕಟವಾದರೆ ಭವಿಷ್ಯಕ್ಕದು ಆಕರವಾಗುತ್ತದೆ. ಬೇಡ, ಹತ್ತು, ಇಪ್ಪತ್ತು, ಇಪ್ಪತ್ತೈದರ ಸಂಭ್ರಮಕ್ಕಾದರೂ ಲಿಖಿತವಾಗಿ ದಾಖಲಾಗಬೇಕು. ಕೆಲವು ಸಂಘಗಳು ಈಗಾಗಲೇ ಈ ಯತ್ನದಲ್ಲಿ ಯಶಸ್ಸಾಗಿವೆ. ಇಂತಹ ದಾಖಲೆಗಳಿಂದ ಸಂಘದ ಚಟುವಟಿಕೆಗಳು, ಆ ಕಾಲಘಟ್ಟದಲ್ಲಿ ಬಾಳಿದ ಕಲಾವಿದರ ಮಾಹಿತಿಗಳು ಮುಂದಿನ ತಲೆಮಾರಿನ ಆಸಕ್ತರಿಗೆ ಒಂದು ಜ್ಞಾನವಾಗಿ ಒದಗುವುದರಲ್ಲಿ ಸಂದೇಹವಿಲ್ಲ.

Tuesday, September 19, 2017

ಕಾಲದ ಪಲ್ಲಟಕ್ಕೆ ಅಲುಗಾಡದ ಮನೆ



ಪ್ರಜಾವಾಣಿಯ - ದಧಿಗಿಣತೋ  - ಅಂಕಣ / 11-8-2017

              ನೂರು ವರುಷ ಮೀರಿದ 'ಬಡೆಕ್ಕಿಲ' ಮನೆಯ ಜಗಲಿಯಲ್ಲಿ ಪದ್ಮನಾಭ ಭಟ್ಟರು (70) ಹಾರ್ಮೋನಿಯಂನಲ್ಲಿ ಶ್ರುತಿ ಹಿಡಿಯಲು ಯತ್ನಿಸುತ್ತಿದ್ದಾರೆ. ಯಕ್ಷಗಾನಕ್ಕೂ ಮನೆಗೂ ಹೊಸೆದ ಗಾಢ ನಂಟನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೂಡ್ ಬಂದಿದೆ. ಜಾಗಟೆ ಹಿಡಿದು ಯಕ್ಷಗಾನದ ಪದ್ಯಗಳನ್ನು ಗುಣುಗುಣಿಸಲು ಸಿದ್ಧತೆ ನಡೆಸಿದ್ದಾರೆ. ಮೂರ್ನಾಲ್ಕು ತಲೆಮಾರಿನಿಂದ ಹರಿಯುತ್ತಿದ್ದ ಕಲಾವಾಹಿನಿಯ ಗುಂಗು ಬದುಕಿನ ಸಂಕಟಗಳನ್ನು ದೂರ ಮಾಡುತ್ತಿದೆ.
              ಬಂಟ್ವಾಳ (ದ.ಕ.) ತಾಲೂಕಿನ ಕೆದಿಲ ಗ್ರಾಮದಲ್ಲಿದೆ, ಬಡೆಕ್ಕಿಲ ಮನೆ.  ಎಲ್ಲಾ ಕಡೆ ಮಳೆಗಾಲದಲ್ಲಿ ಹಪ್ಪಳ ಸದ್ದು ಮಾಡಿದರೆ, ಈ ಮನೆಯಲ್ಲಿ ಚೆಂಡೆ-ಮದ್ದಳೆ ಸದ್ದು, ಬಂಧುಗಳು ವಿನೋದಕ್ಕೆ ಆಡುತ್ತಿದ್ದ ಮಾತುಗಳು. ಅಂದರೆ ಯಕ್ಷ ನಿನಾದವು ಇಲ್ಲಿ ಮಂತ್ರ. ಮೊದಲು 'ಸಣ್ಣುಞಿ ಅಜ್ಜ' ವಾಸವಾಗಿದ್ದ ಮನೆ. ಅಲ್ಲಿಂದ ಶುರುವಾದ ಕಲಾ ಪರಂಪರೆಯು ಅವರ ಮೊಮ್ಮಗ ಪದ್ಮನಾಭ ಭಟ್ಟರ ತನಕವೂ ಹರಿದಿದೆ.
              ಬಡೆಕ್ಕಿಲ ಮನೆತನದ ಯಕ್ಷಗಾನದ ವೈಭವಕ್ಕೆ ಈಗ ಮಾತಿಗೆ ಸಿಕ್ಕುವ ಹಿರಿಯರು ಪದ್ಮನಾಭ ಭಟ್. ಇವರು ಭಾಗವತರು. ಅಗರಿ ಶೈಲಿಯಿಂದ ಪ್ರಭಾವಿತ. ಒಂದು ಕಾಲಘಟ್ಟದಲ್ಲಿ ಇವರು ಭಾಗವಹಿಸುವ ನಿಶ್ಚಿತ ಕೂಟ, ಆಟಗಳಿದ್ದುವು. ಈಗಲೂ ಕುಟುಂಬ, ಆಪ್ತರ ಸಂಯೋಜನೆಯ ಕೂಟಗಳಿಗೆ ಇವರೇ ಭಾಗವತರು. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಂದು ಕಲಾರಾಧನೆಗೆ ಮಣೆ.
              ಒಂದು ಕುಟುಂಬದ ಹಿರಿಯರಲ್ಲಿದ್ದ ಆಸಕ್ತಿಯು ಇತರ ಸದಸ್ಯರಲ್ಲಿರಬೇಕೇಂದೇನೂ ಇಲ್ಲ. ಇರುವುದೂ ಇಲ್ಲ. ಆಸಕ್ತಿಯು ಅವರವರ ಮನಃಸ್ಥಿತಿ ಮತ್ತು ಆಯ್ಕೆ. ಬಡೆಕ್ಕಿಲ ಮನೆಯ ಎಲ್ಲಾ ಸದಸ್ಯರಿಗೂ ಯಕ್ಷಗಾನವೆಂದರೆ ಪ್ರಿಯ. ಅದು ಮನೆಯ ಸಾಂಸ್ಕೃತಿಕ ಪರಂಪರೆ. ಇಲ್ಲಿಗೆ ವಿವಾಹವಾಗಿ ಬಂದ ಸೊಸೆಯಂದಿರೂ ಕೂಡಾ ಒಂದಲ್ಲ ಒಂದು ವಿಧದಲ್ಲಿ ಕಲಾವಿದರೇ! ದೈನಂದಿನ ಮಾತುಕತೆಗಳಲ್ಲಿ ಯಕ್ಷಗಾನ ಹೊರತಾದ ಸಂಭಾಷಣೆಗಳು ಅಪರೂಪ.
             ಮನೆಯಲ್ಲಿ ಶ್ರಾದ್ಧ, ಪೂಜೆ, ಶುಭಕಾರ್ಯಗಳಿದ್ದರೆ ತಾಳಮದ್ದಳೆ ಖಾಯಂ. ನಿರ್ಧಾರಕ್ಕೆ ಮೀನಮೇಷ ಎಣಿಸುವುದಿಲ್ಲ. ಅದು ಸ್ಥಾಪಿತ ಕಲಾಪ. ಯಾರ್ಯಾರು ಬರುತ್ತಾರೆ ಎಂದು ಮೊದಲೇ ನಿಶ್ಚಯಿಸಿ ಪ್ರಸಂಗ ನಿಗದಿ. ಜತೆಗೆ ಪಾತ್ರಗಳ ಹಂಚೋಣ. ಪದ್ಯಗಳನ್ನು ಮೊದಲೇ ಗುರುತು ಹಾಕಿ ಪದ್ಮನಾಭ ಭಟ್ಟರು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. ಹೀಗೆ ವ್ಯವಸ್ಥೆಯನ್ನು ಮಾಡಿಕೊಂಡಾಗ ಭಾಗವಹಿಸುವ ಸದಸ್ಯರಿಗೆ ಗೊಂದಲವಾಗುವುದಿಲ್ಲ.
             ಮನೆಯ ಹಲವು ಸದಸ್ಯರು ದೂರದೂರಿನಲ್ಲಿದ್ದಾರೆ. ಶುಭ ಕಾರ್ಯಗಳ ಜತೆಗೆ ತಾಳಮದ್ದಳೆಯೂ ಪೋಣಿತವಾದಾಗ ಸಮಯ ಹೊಂದಾಣಿಸಿಕೊಂಡೇ ಬರುತ್ತಾರೆ. ಎಲ್ಲಾ ಸದಸ್ಯರೂ ಭಾಗವಹಿಸುತ್ತಾರೆ. ಊಟವಾಗಿ ಕೈತೊಳೆದ ತಕ್ಷಣ ಯಾರೂ ತೆರಳುವುದಿಲ್ಲ. ಬರುವಾಗಲೇ ತೆರಳಲು ಅಡ್ವಾನ್ಸ್ ಟಿಕೇಟ್ ಮಾಡಿ ಬಂದಿರುವುದಿಲ್ಲ. ಕಲಾರಾಧನೆ ಮೂಲಕ ಹಿರಿಯರ ನೆನಪು ಪದ್ಧತಿಯಾಗಿ ರೂಪುಗೊಂಡಿದೆ, ಎನ್ನುವ ಸದಾಶಯವನ್ನು ಹಂಚಿಕೊಳ್ಳುತ್ತಾರೆ, ಕೆದಿಲ ಗಣರಾಜ ಭಟ್. ಇವರು ಅರ್ಥಧಾರಿ, ವೇಷಧಾರಿ.
           'ಮನೆ ತಾಳಮದ್ದಳೆ'ಯು ಕಳೆದ ಕಾಲಮಾನದ ಸಂಭ್ರಮ. ಮನೆಯ ಸಮಾರಂಭಗಳಲ್ಲದೆ, ನಿಯಮಿತವಾಗಿ ನಡೆಯುವ ಕೂಟಗಳು ಆ ಕಾಲದ ದೊಡ್ಡ ಸುದ್ದಿ. ಪ್ರತಿಷ್ಠಿತ ಕಲಾವಿದರು ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. ಹಿರಿಯ ಕಲಾವಿದರೊಂದಿಗೆ ಹವ್ಯಾಸಿಗಳಿಗೂ ಕೂಟಗಳಲ್ಲಿ ಅವಕಾಶ ಸಿಗುತ್ತಿತ್ತು. ಬೌದ್ಧಿಕವಾಗಿ ಬೆಳೆಯುವುದಲ್ಲದೆ, ತಾಳಮದ್ದಳೆಯ ಸೂಕ್ಷ್ಮ ವಿಚಾರಗಳನ್ನು ತಿಳಿದಂತಾಗುತ್ತದೆ. ಹಿರಿಯರ ವಾಗ್ಯುದ್ಧ, ಅವರಲ್ಲಿರುವ ಪಾಂಡಿತ್ಯವನ್ನು ಪ್ರತ್ಯಕ್ಷ ನೋಡುವ ಅವಕಾಶಗಳು ಮನೆ ತಾಳಮದ್ದಳೆಗಳಲ್ಲಿ ಸಿಕ್ಕಿವೆ," ಎಂದು ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್ಟರು ಯಾವಾಗಲೂ ನೆನಪಿಸುವುದುಂಟು. ಬಡೆಕ್ಕಿಲ ಮನೆಯ ಕೂಟವೂ ಈ ಆಶಯದಿಂದ ಹೊರತಲ್ಲ. ಹಿರಿಯರ ಮಾರ್ಗವನ್ನು ಕಿರಿಯರು ಅನುಸರಿಸಿ ಅರ್ಥಧಾರಿಯಾಗಿ ರೂಪುಗೊಂಡಿದ್ದಾರೆ, ರೂಪುಗೊಳ್ಳುತ್ತಿದ್ದಾರೆ.
              ಬಡೆಕ್ಕಿಲ ಮನೆಯಲ್ಲಿ ಪ್ರಕೃತ ಪದ್ಮನಾಭ ಭಟ್ಟರ ವಾಸ. ಯಕ್ಷಗಾನದ ಕಳೆದ ಕಾಲದ ಕಥನಕ್ಕೆ ಸಾಕ್ಷಿಯಾಗುತ್ತಾರೆ  ನಾನು ನಾಲ್ಕನೇ ತರಗತಿ ಓದುತ್ತಿದ್ದ ಸಮಯ. ಹಾಸ್ಯರತ್ನ ಕೀರ್ತಿಶೇಷ ವಿಟ್ಲ ಗೋಪಾಲಕೃಷ್ಣ ಜೋಶಿಯವರ ಸಹೋದರ ನಮ್ಮೂರಿನ ಪಕ್ಕದಲ್ಲಿ ಅಧ್ಯಾಪಕರಾಗಿದ್ದರು. ನಮ್ಮ ಮನೆಯಲ್ಲಿ ಭೋಜನ ವ್ಯವಸ್ಥೆ. ಅವರಿಗೆ ಸಾಹಿತ್ಯ ಒಲವಿತ್ತು. ಭಾಗವತಿಕೆಯನ್ನು ಮಾಡುತ್ತಿದ್ದರು. ಅವರು ರಚಿಸಿದ ಸಾಹಿತ್ಯಗಳಿಗೆ ನನಗೆ ತಿಳಿದಂತೆ ಹೇಳುತ್ತಿದ್ದೆ. ಅವರು ತುಂಬಾ ಉತ್ತೇಜನ ನೀಡಿದರು.
                ಕೆದಿಲ ವಾಲ್ತಾಜೆಯಲ್ಲಿ ಎನ್.ವಿ.ಕೃಷ್ಣರಾಯರು ಅರ್ಥಧಾರಿ. ಅವರಿಗೆ ಕುಬಣೂರು ಬಾಲಕೃಷ್ಣ ರಾಯರೊಂದಿಗೆ ನಿಕಟ ಒಡನಾಟವಿತ್ತು. ಹಲವೆಡೆ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದರು.  ಸ್ಥಳೀಯ  ಕೂಟಗಳಲ್ಲೂ ಈ ಹಿರಿಯರು ಭಾಗವಹಿಸುವುದು ನಮಗೆಲ್ಲಾ ಖುಷಿ. ಆಗ ಅಂಡೆಪುಣಿ ಕೃಷ್ಣ ಭಟ್ಟರು ಭಾಗವತರು. ಅವರದು ಉತ್ತಮ ಕಂಠಶ್ರೀ. ಅಪೂರ್ವ ಪ್ರಸಂಗಗಳ ಜ್ಞಾನ. ಬಳಿಕ ಭಾಗವತಿಕೆಯ ಆಸಕ್ತಿ ನನಗೂ ಅಂಟಿತು. ಯಕ್ಷಗಾನದಲ್ಲಿ 'ಮಟ್ಟು' ಮುಖ್ಯ. ಈಗಿನಂತೆ ಪದ್ಯವನ್ನು ಲಂಬಿಸುವ ಕ್ರಮ ಇರಲಿಲ್ಲ. ಲಂಬಿಸಿದರೆ ಅದು ಯಕ್ಷಗಾನವೂ ಅಲ್ಲ.
              ಗತ ನೆನಪುಗಳನ್ನು ಜ್ಞಾಪಿಸಿಕೊಂಡ ಪದ್ಮನಾಭ ಭಟ್ಟರು ಒಂದು ಸ್ವಾರಸ್ಯವನ್ನು ಹೇಳಿದರು - ಊರಿನ ಪಕ್ಕದಲ್ಲೊಂದು ತಾಳಮದ್ದಳೆ. ಪ್ರಸಂಗ ವಾಲಿ ಮೋಕ್ಷ. ಹಿರಿಯರಾದ ಕರಾಯ ಕೊರಗಪ್ಪರ 'ವಾಲಿ'ಯ ಪಾತ್ರ. ಕಥೆಯಲ್ಲಿ - ವಾಲಿಯ ಎದೆಯಲ್ಲಿ ಬಾಣವು ನಾಟಿದ ನಂತರ ಆತ ರಾಮನನ್ನು ಜರೆಯುತ್ತಾನೆ. ಕೊನೆಗೆ ಪಶ್ಚಾತ್ತಾಪ ಪಡುವ ದೃಶ್ಯ. ಈ ಸನ್ನಿವೇಶದಲ್ಲಿ ತನ್ನ ತೊಡೆಯಲ್ಲಿ ಚಿಕ್ಕ ಬಾಲಕನನ್ನು ಮಲಗಿಸಿ ಅರ್ಥ ಹೇಳುತ್ತಿದ್ದರು! ಅಂದರೆ ವಾಲಿಯು ಅಂಗದನನ್ನು ತನ್ನ ತೊಡೆಯಲ್ಲಿರಿಸಿಕೊಂಡಿದ್ದಾನೆ ಎಂದರ್ಥ. ಹೀಗೆ ಮಾಡಿದರೆ ಅರ್ಥ ಹೇಳಲು ಮೂಡ್ ಬರುತ್ತಿತ್ತಂತೆ.
             ಮೊದಲು ತಾಳಮದ್ದಳೆಯಲ್ಲೂ ದೃಶ್ಯವು ಹೊಸೆದುಕೊಳ್ಳುತ್ತಿತ್ತು. ದಕ್ಷಾಧ್ವರ ಪ್ರಸಂಗದಲ್ಲಿ 'ವೀರಭದ್ರ' ಪಾತ್ರಕ್ಕೆ ಬಾರಣೆ, ದುಶ್ಶಾಸನ ವಧೆ ಪ್ರಸಂಗದಲ್ಲಿ 'ದುಶ್ಶಾಸನ'ನನ್ನು ನಿದ್ದೆಯಿಂದ ಎಬ್ಬಿಸುವ ದೃಶ್ಯ, ಭಾರ್ಗವ ವಿಜಯ ಪ್ರಸಂಗದಲ್ಲಿ ’ಜಮದಗ್ನಿಯು’ ರೇಣುಕೆಯನ್ನು ಶಿಕ್ಷಿಸುವ ಸಂದರ್ಭಗಳು 'ಲೈವ್' ಆಗಿ ಪ್ರಸ್ತುತವಾಗುತ್ತಿದ್ದುದಕ್ಕೆ ಸಾಕ್ಷಿಯಾಗಿ ಹಿರಿಯರು ಮಾತಿಗೆ ಸಿಗುತ್ತಾರೆ. ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲ. ಯಕ್ಷಗಾನವನ್ನು ಅಷ್ಟೊಂದು ಗಾಢವಾಗಿ ಅವಾಹಿಸಿಕೊಂಡಿದ್ದರು.
              ಬಡೆಕ್ಕಿಲ ಮನೆಯ ಯುವಕರು ನಗರ ಸೇರಿದ್ದಾರೆ. ಸಂತುಷ್ಟ ಉದ್ಯೋಗದಲ್ಲಿದ್ದಾರೆ. ಸಹಜವಾಗಿ ಕಲೆಯ ಗುಂಗಿಗೆ ಮಸುಕಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಹಿರಿಯರು ವಯೋಧಿಕ್ಯದಿಂದ ದೂರವಾಗಿದ್ದಾರೆ. ಕೂಟಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಾಲದ ಪಲ್ಲಟಕ್ಕೆ ಕಲಾವಿದರ ಸಂಖ್ಯೆ ಇಳಿದರೂ, ಕಲೆಯ ಆಸಕ್ತಿ ಇಳಿಯಲಿಲ್ಲ. ಈಗ ಕುಟುಂಬದಲ್ಲಿ ಏನಿಲ್ಲವೆಂದರೂ ಹತ್ತೋ ಹದಿನೈದು ಮಂದಿ ಹಿಮ್ಮೇಳಕ್ಕೋ, ಮುಮ್ಮೇಳಕ್ಕೋ ಸಿಗುತ್ತಾರೆ. ಹೊಸತಲೆಮಾರಿನಲ್ಲಿ ಯಕ್ಷಗಾನವಲ್ಲದೆ ಸಂಗೀತ, ನೃತ್ಯ, ವಯಲಿನ್, ತಬಲ.. ಹೀಗೆ ಒಂದಲ್ಲ ಒಂದು ಕಲೆಯ ಸ್ಪರ್ಶದಲ್ಲೂ ಬದುಕಿನಲ್ಲಿ ಸುಭಗತನವನ್ನು ಕಾಣುತ್ತಿದ್ದಾರೆ.
          ಎಲ್ಲರನ್ನು ಒಟ್ಟು ಮಾಡಲು ಮತ್ತು ಹಿರಿಯರ ಆಶಯವನ್ನು ಸ್ಥಾಯಿಯಾಗಿಸಲು ಬಡೆಕ್ಕಿಲ ಮನೆಯ ಯಕ್ಷಾವರಣಕ್ಕೆ ಸಂಘಟಿತ ರೂಪ ನೀಡಲಾಗಿದೆ. 2013ರಲ್ಲಿ 'ಯಕ್ಷಕೂಟ ಬಡೆಕ್ಕಿಲ' ಸಂಘವನ್ನು ಹುಟ್ಟು ಹಾಕಿದ್ದಾರೆ. ಅದರ ಮೂಲಕ ತಾಳಮದ್ದಳೆ ನಡೆಯುತ್ತಿದೆ.     ಯಕ್ಷಗಾನದ ಮನೆ ಎಂದಾಗ ಕುರಿಯ, ಪದ್ಯಾಣ, ಕೆರೆಮನೆ, ಕರ್ಕಿ.... ಹೀಗೆ ಅನೇಕ ಮನೆತನಗಳು ಯಕ್ಷಗಾನಕ್ಕೆ ತಮ್ಮದೇ ಕೊಡುಗೆ ನೀಡಿರುವುದು ಇತಿಹಾಸ. ಬಡೆಕ್ಕಿಲ ಮನೆಯೂ ಕೂಡಾ ಯಕ್ಷಗಾನ ಪರಂಪರೆಯೊಂದರ ಉಳಿಯುವಿಕೆಗೆ ಕಾಣ್ಕೆ ನೀಡಿದೆ. ಬದಲಾದ ಕಾಲಘಟ್ಟದಲ್ಲೂ ಕಲಾತೇವ ಆರದಂತೆ ನೋಡಿಕೊಂಡಿದೆ. ಇದು ಮನೆತನದ ಗಟ್ಟಿ ಬಳುವಳಿ.

Saturday, September 16, 2017

ಕೂಟಬದ್ಧತೆ ನಿಯತ್ತಿನ ಬೊಳ್ಳಿಂಬಳ


ಪ್ರಜಾವಾಣಿಯ ’ದಧಿಗಿಣತೋ’ ಅಂಕಣ / 14-7-2017
  
               ಅಧ್ಯಾಪಕ ಸಮಾಜದ ಕಣ್ಣು. ಅವರಿಗೆ ಮನಸ್ಸುಗಳನ್ನು ಕಟ್ಟುವ ಹೊಣೆಗಾರಿಕೆ. ಪ್ರತಿಯಾಗಿ ಸಮಾಜದಿಂದ ಗೌರವದ ಮಾನ-ಸಂಮಾನ. ಸಾಮಾಜಿಕ ವಲಯದೊಳಗೆ ಪ್ರಭೆಯನ್ನು ಬೀರಿ ತಾನು ಬೆಳೆಯುತ್ತಾ, ಸಮಾಜವನ್ನು ಬೆಳೆಸುತ್ತಾ ಸಾಗುವ ಒಂದು ಕಾಲಘಟ್ಟಕ್ಕೆ ಸಾಕ್ಷಿಯಾಗುತ್ತಾರೆ, ಪುತ್ತೂರು ಪಾಣಾಜೆಯ ಬಿ.ಎಸ್.ಓಕುಣ್ಣಾಯರು. (ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ) ಬಹುಕಾಲ ಪುತ್ತೂರಿನಲ್ಲಿದ್ದು ಪ್ರಸ್ತುತ ಮಂಗಳೂರಿನಲ್ಲಿ ವಾಸ. ಈಗವರಿಗೆ ಎಂಭತ್ತಮೂರು.
ಓಕುಣ್ಣಾಯರು ದೊಡ್ಡ ಕುಟುಂಬದ ಹಿರಿಯಣ್ಣ. ಯಕ್ಷಗಾನ ಅರ್ಥಧಾರಿ. ಪ್ರಾಮಾಣಿಕ ಅಧ್ಯಾಪಕ. ಸಾಮಾಜಿಕ ಒಲುಮೆಯ ನಿಲುವು. ಎದ್ದು ತೋರುವ ಗಾಂಭೀರ್ಯ. ಅದರೊಳಗೆ ಪರಿಪಕ್ವವಾಗಿರುವ ಹೂ-ಮನಸ್ಸು, ದಣಿವಿಲ್ಲದ ದುಡಿಮೆ. ಹೀಗೆ ಅವರ ಗುಣವಿಶೇಷಗಳಿಗೆ ದಶಬಾಹುಗಳು.
                ಯಕ್ಷಗಾನ ಕ್ಷೇತ್ರದಲ್ಲಿ ದಂತಕಥೆಗಳನ್ನು ಸೃಷ್ಟಿಸಿರುವ ಅರ್ಥಧಾರಿಗಳ ಒಡನಾಟದಲ್ಲಿ ಓಕುಣ್ಣಾಯರು ಸುಪುಷ್ಟವಾಗಿ ಬೆಳೆದವರು. ಅಂದಿನ ವಾಗ್ವೈಖರಿ, ಪುರಾಣ ಲೋಕದ ಜಾಲಾಟ, ಮಾತಿನ ಸರಸ-ವಿರಸಗಳು ಅವರಲ್ಲಿ ಮರುಹುಟ್ಟು ಪಡೆಯುತ್ತವೆ. ಒಂದು ಕಾಲಮಾನದ ಯಕ್ಷಗಾನದ ಸಮೃದ್ಧತೆಗೆ ಸಾಕ್ಷಿಯಾಗುತ್ತಾರೆ.
                ಇವರ ತಂದೆ ಶಂಕರನಾರಾಯಣ ಓಕುಣ್ಣಾಯರು ಕವಿಭೂಷಣ ವೆಂಕಪ್ಪ ಶೆಟ್ಟರ ಶಿಷ್ಯ. ಆ ಸಮಯದ ಹಿರಿಯರೊಂದಿಗೆ ಬಿ.ಎಸ್. ಅವರಿಗೆ ಬಾಲ್ಯದಿಂದಲೇ ಒಡನಾಟ. ತಾಳಮದ್ದಳೆಯಲ್ಲಿ ಶ್ರೋತೃವಾಗಿಯೇ ಅರ್ಥಧಾರಿಯಾಗಿ ಬೆಳೆದ ಏಕಲವ್ಯ! ಶಲ್ಯ, ಕೌರವ, ಧರ್ಮರಾಯ, ಕೌರವ, ಪ್ರಹಸ್ತ, ಕರ್ಣ, ಭೀಷ್ಮ.. ಹೀಗೆ ಪ್ರೌಢ, ವೈಚಾರಿಕ ಪಾತ್ರಗಳು ಖ್ಯಾತಿ ತಂದವು. ವಾಲಿ ಮೋಕ್ಷ ಪ್ರಸಂಗದ 'ವಾಲಿ'ಯ ಅರ್ಥಗಾರಿಕೆಯ ಸಂಪನ್ನತೆಯಿಂದಾಗಿ 'ವಾಲಿ ಓಕುಣ್ಣಾಯರು' ಎಂದು ಆಪ್ತ ವಲಯದಲ್ಲಿ ಪರಿಚಿತರು.
                   ಪಾತ್ರ ವಿಶೇಷಣವು ಹೆಸರಿನೊಂದಿಗೆ ಹೊಸೆದ ಬಗೆ ಹೇಗೆ ಎಂದು ಪ್ರಶ್ನಿಸಿದ್ದೆ. ಓಕುಣ್ಣಾಯರು ನಗುತ್ತಾ ತಾನು ಅರ್ಥಧಾರಿಯಾಗಿ ರೂಪುಗೊಂಡ ದಿನಮಾನಗಳನ್ನು ನೆನಪಿಸಿಕೊಂಡರು. ಆಗಿನ ದೊಡ್ಡ ಅರ್ಥಧಾರಿಗಳ ಜತೆ ಒಡನಾಟವಿತ್ತು. ಅದು ನನ್ನ ಕಲಾ ವ್ಯವಸಾಯಕ್ಕೆ ಪೂರಕವಾಯಿತು. ಕೆಲವೊಂದು ಪಾತ್ರಗಳ ಗತ್ತು-ಗೈರತ್ತುಗಳು ಒಬ್ಬೊಬ್ಬರಲ್ಲಿ ಒಂದೊಂದು. ಇವರೆಲ್ಲರ ಅರ್ಥಗಾರಿಗಳನ್ನು ಕೇಳುತ್ತಾ, ಹೇಳುತ್ತಾ ನನ್ನದೇ ಆದ ಶೈಲಿಯನ್ನು ರೂಪಿಸಿಕೊಂಡಿದ್ದೆ.”ವಾಲಿವಧೆ’ ಪ್ರಸಂಗದ ಕೂಟ ಇದ್ದರೆ ’ವಾಲಿ’ಯ ಅರ್ಥ ನನಗೆ ಖಚಿತ. ಹಾಗಾಗಿ ಪರಿಚಿತ ವಲಯದಲ್ಲಿ ನನ್ನ ಹೆಸರಿನೊಂದಿಗೆ ವಾಲಿಯ ಪಾತ್ರ ಹೊಸೆಯಿತು!
                    ಕಲೆಯಲ್ಲಿ  ದೈವೀಕತೆಯನ್ನು ಕಂಡುಕೊಂಡವರು. ಪಾತ್ರಗಳ ಪರಾಕಾಯ ಪ್ರವೇಶವನ್ನು ಮಾಡಬಲ್ಲ ಸಮರ್ಥ. ಪ್ರಸಂಗದ ಪದ್ಯವನ್ನು, ಕಥಾನುಭವವನ್ನು ಕಿರಿಯರಿಗೆ ಹೇಳಿಕೊಡುವಲ್ಲಿ ಅವರು ತೋರುತ್ತಿದ್ದ ಕಾಳಜಿ ಅನನ್ಯ. ರಾಮಾಯಣ, ಮಹಾಭಾರತ, ಭಾಗವತದ ಮೂಲಗ್ರಂಥಗಳನ್ನು ಅಭ್ಯಾಸ ಮಾಡಿದವರು. ಯಕ್ಷಗಾನ ಬಹುತೇಕ ಪದ್ಯಗಳು ಕಂಠಪಾಠ.
"ಓಕುಣ್ಣಾಯರದು ವೃತ್ತಿಗೆ ಅನುಗುಣವಾದ ನಿಯತ್ತಿನ ಜೀವನ. ಅರ್ಥಗಾರಿಕೆಯಲ್ಲಿ ಪಾತ್ರಗಳ ಸ್ವಭಾವವರಿತ ಅಭಿವ್ಯಕ್ತಿ. ಅವರೊಬ್ಬ ಭಾವಜೀವಿ. ಹಾಗಾಗಿ ಅವರ ಅರ್ಥಗಳೆಲ್ಲವೂ ಶ್ರೋತೃಗಳ ಮನ ಮುಟ್ಟುತ್ತದೆ, ಮೆಚ್ಚುತ್ತದೆ. ಅಪಾರ ಓದುವಿಕೆಯಿಂದಾಗಿ ನಿರ್ವಹಿಸುವ ಪಾತ್ರಗಳು ಸೊರಗುವುದಿಲ್ಲ. ತನ್ನಿದಿರು ಅರ್ಥಹೇಳಿದ ಕಲಾವಿದನ ಮನೋಧರ್ಮವನ್ನು ತಿಳಿದುಕೊಂಡು, ಸಂಭಾಷಣೆಯನ್ನು ಬೆಳೆಸುವಲ್ಲಿ ಅವರು ಅನುಸರಿಸುವ ವಿಧಾನ - ನಾನವರಲ್ಲಿ ಕಂಡುಕೊಂಡ ಧನಾತ್ಮಕ ಅಂಶ" ಎಂದು ಅವರನ್ನು ಹತ್ತಿರದಿಂದ ಬಲ್ಲ ಮಧೂರು ವೆಂಕಟಕೃಷ್ಣ ಶ್ಲಾಘಿಸುತ್ತಾರೆ.
                  "ಪುರಾಣದ ಕಥಾ ಪ್ರಸ್ತುತಿಯಲ್ಲಿ ಓಕುಣ್ಣಾಯರ ನಿಯತ್ತು ಗಾಢ. ಅರ್ಥಗಾರಿಕೆಯಲ್ಲಿ ಪುರಾಣಕ್ಕೆ ವಿರೋಧವಾದ ಅಂಶಗಳು ಬಳಕೆಯಾಗುವುದನ್ನು ಅವರು ಸಹಿಸರು. ಪದ್ಯದಿಂದ ಪದ್ಯಕ್ಕೆ ಟಚ್ ಕೊಡುತ್ತಾ ಅರ್ಥ ಹೇಳುವ ಸೊಗಸು. ಎದುರಾಳಿ ಪದ್ಯದ ಆಶಯದ ಆಚೀಚೆ ಸಂಚರಿಸಿದರೂ ಹೇಗೋ ಹೊಂದಿಸಿ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸುವ ಜಾಣ್ಮೆ ಅವರದು. ಎಷ್ಟೋ ಮಂದಿ ಪ್ರಸಂಗದ ಪದ್ಯದಲ್ಲಿರುವ ಭಾವವನ್ನು ಬಿಟ್ಟು ಎತ್ತಲೋ ವಿಷಯಾಂತರ ಮಾಡಿಬಿಡುತ್ತಾರೆ. ಇದು ತಾಳಮದ್ದಳೆಯ ಆಶಯಕ್ಕೆ ವಿರೋಧ. ಪ್ರಸಂಗದ ಅರ್ಥವ್ಯಾಪ್ತಿ ಏನಿದೆಯೋ ಅದರೊಳಗೆ ಅರ್ಥಧಾರಿ ಸಂಚರಿಸಬೇಕು", ಎನ್ನುತ್ತಾರೆ.
                ’ಅರ್ಥಧಾರಿಯು ಪಡಿಮಂಚದಲ್ಲಿ ಅರ್ಥಗಾರಿಕೆಗೆ ಕುಳಿತುಕೊಂಡು ಭಾಗವತರನ್ನು ಹಿಂತಿರುಗಿ ನೋಡಿದರೆ ಅದು ಭಾಗವತರಿಗೆ ಅವಮಾನ ಮಾಡಿದಂತೆ’ ಎನ್ನುವ ನಂಬುಗೆಯಿತ್ತು. ಕೂಟಗಳಲ್ಲಿ ಕೈಮೀರಿ ಕೆಲವೊಂದು ಘಟನೆಗಳು ನಡೆಯುತ್ತಿವೆ. ಅದನ್ನು ನಿಜವಾದ ಕಲಾವಿದನಾದವರು ರಂಗದಲ್ಲೇ ಬಿಟ್ಟು ಬರಬೇಕು. ನಿಜ ಜೀವನಕ್ಕೆ ಮಿಳಿತಗೊಳಿಸಬಾರದು. ದ್ವೇಷ ಭಾವನೆ ತಾಳಬಾರದು. ಮನಸ್ಸಿನಲ್ಲಿಟ್ಟುಕೊಂಡು ಹಗೆ ಸಾಧಿಸಬಾರದು. ಹಾಗೇನಾದರೂ ಆದರೆ ಯಕ್ಷಗಾನ ರಂಗದಲ್ಲಿ ಬೆಳೆಯಲು ಸಾಧ್ಯವಿಲ್ಲ. ಅಂತೆಯೇ ತಾಳಮದ್ದಳೆಯ ಅರ್ಥಧಾರಿಗಳು ಬಣ್ಣ ಹಚ್ಚಿ ವೇಷ ಮಾಡುವಾಗ ತಾಳಮದ್ದಳೆಯ ಗುಣಗಳು ರಂಗದಲ್ಲಿ ಬಾರದಂತೆ ಎಚ್ಚರ ಅಗತ್ಯ. ಇಲ್ಲಿ ಭಾಗವತನೇ ನಿರ್ದೇಶಕ. ಅವರ ಮಾತನ್ನು ಪಾಲಿಸುವುದು ವೇಷಧಾರಿಗಳ ಕರ್ತವ್ಯ - ಒಂದು ಕಾಲಘಟ್ಟದ ರಂಗದ ಎಚ್ಚರವನ್ನು ಓಕುಣ್ಣಾಯರು ಜ್ಞಾಪಿಸಿಕೊಳ್ಳುತ್ತಾರೆ.
                ಹಳೆಯ ತಲೆಮಾರಿನ ಅರ್ಥಗಾರಿಕೆಯ ವೈವಿಧ್ಯಕ್ಕೆ ಓಕುಣ್ಣಾಯರು ದನಿಯಾಗುತ್ತಾರೆ. ಆಗೆಲ್ಲಾ ಶಬ್ದ ಶಬ್ದಗಳನ್ನು ಹಿಂಜಿ ಮಾರಾಮಾರಿಯಾಗುವುದಿಲ್ಲ. ಅದು ಅರ್ಥಗಾರಿಕೆಯ ಧರ್ಮವೂ ಅಲ್ಲ. ಮಧ್ಯ ಮಧ್ಯೆ ರೋಚಕವಾದ ಪಂಚಿಂಗ್, ಧರ್ಮಸೂಕ್ಷ್ಮಗಳು ಅನಾವರಣಗೊಳ್ಳುತ್ತಾ ಹೋಗುವುದರಲ್ಲಿ ಸ್ವಾರಸ್ಯ. ತಾಳಮದ್ದಳೆಯ ಮೂಲಕ ಪುರಾಣದ ವಿಚಾರಗಳು ತಪ್ಪಾಗಿ ಪಸರಿಸಬಾರದು. ತಪ್ಪನ್ನು ಕೇಳಿದ ಅಭ್ಯಾಸಿಗಳು ಅದನ್ನೇ ಸರಿಯೆಂದು ಗ್ರಹಿಸಿ ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿಕೊಂಡರೆ ತಪ್ಪುಸಂದೇಶವನ್ನು ಅರ್ಥಧಾರಿ ನೀಡಿದಂತಾಗುತ್ತದೆ. ಓಕುಣ್ಣಾಯರಲ್ಲಿ ಇಂತಹ ಎಚ್ಚರದ ಕೂಟಬದ್ಧತೆಗಳು ಸದಾ ಜಾಗೃತ.
                 ಆರೇಳು ದಶಕದ ಹಿಂದೆ ಜೀವನದಲ್ಲಿ ಆತುಕೊಂಡ ಸಾಮಾಜಿಕ ಬದ್ಧತೆ, ವ್ಯವಸ್ಥೆ, ಹೊಣೆ, ಜವಾಬ್ದಾರಿಗಳು ಬದುಕಿಗೆ ಸುಭಗತನವನ್ನು ನೀಡಿದ್ದುವು.  ಅದರಲ್ಲಿ ಮಿಂದು ಪರಿಪಕ್ವಗೊಂಡುದರಿಂದ ಕೌಟುಂಬಿಕ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಸಮಸ್ಯೆಗಳನ್ನು ಹಗುರಮಾಡಿಕೊಂಡ ಜಾಣ್ಮೆ ಅವರಿಗೆ ಒಲಿದತ್ತು. ತಾನು ನಂಬಿದ ಸತ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ನಿಜದ ನೇರಕ್ಕೆ ನಡೆದು ತೋರಿದ ಹಿರಿಯ. ಪುತ್ತೂರಿನ ಶಿವಳ್ಳಿ ಸಂಪದ ಸಂಘಟನೆ, ಸಂಪದ ಟ್ರೇಡರ್ಸ್ ಗೋತ್ರ-ಪ್ರವರ ಸೂಚಿ, ಶಿವಳ್ಳಿ ಸಮಾವೇಶ.. ಮೊದಲಾದ ಕಾರ್ಯಗಳ ಜವಾಬ್ದಾರಿಯನ್ನು ನಿಭಾಯಿಸಿದವರು.
                  ತನ್ನ ತಂದೆಯವರ ನೆನಪಿಗಾಗಿ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ದ ಸ್ಥಾಪನೆ. ಅದರ ಮೂಲಕ ಹಿರಿಯರನ್ನು ಗೌರವಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ವರುಷದ ಪ್ರತಿಷ್ಠಾನಕ್ಕೆ ದಶಮಾನದ ಸಂಭ್ರಮ. ಓಕುಣ್ಣಾಯರ ಮಡದಿ ಸರೋಜ. ಮೂವರು ಹೆಣ್ಣು, ಇಬ್ಬರು ಗಂಡುಮಕ್ಕಳು. ಎಲ್ಲರೂ ಉದ್ಯೋಗಸ್ಥರು. ಸಾಮಾಜಿಕವಾಗಿ ಉನ್ನತ ಸ್ಥಾನಮಾನವನ್ನು ಪಡೆದಿರುವ ಓಕುಣ್ಣಾಯರಿಗೆ 2014ರಲ್ಲಿ  ಸಹಸ್ರಚಂದ್ರ ದರ್ಶನದ ಭಾಗ್ಯ ಒದಗಿತ್ತು.  ಈ ಸಂದರ್ಭದಲ್ಲಿ ಕಲಾಯಾನದ ಹೆಗ್ಗುರುತಾಗಿ 'ಸಾರ್ಥಕ' ಎನ್ನುವ ಅಭಿನಂದನ ಕೃತಿಯನ್ನು ಕುಟುಂಬಸ್ಥರು ಪ್ರಕಾಶಿಸಿದ್ದರು.

Wednesday, September 13, 2017

ಪಾತ್ರವನ್ನು ಕಳಚದ ಪುಚ್ಚೆಕೆರೆ

ಪ್ರಜಾವಾಣಿಯ - ದಧಿಗಿಣತೋ - ಅಂಕಣ / 21-7-2017

             ಕಾಲದ ವಾಯುವೇಗಕ್ಕೆ ಬದುಕು ಹೊಂದಿಕೊಳ್ಳಲು ಏಗುತ್ತಿದೆ. ಸಂಬಂಧಗಳ ಗಾಢತೆ ಮಸುಕಾಗಿದೆ. ಒಂದು ಕ್ಲಿಕ್ಕಿನಷ್ಟು ವೇಗದಲ್ಲಿ ಸಂದ ಕಾಲವನ್ನು ಮರೆಯುತ್ತೇವೆ. ಈ ಮರೆವಿನೊಳಗೆ ಸಾಧನೆ, ವ್ಯಕ್ತಿವಿಶೇಷಗಳು, ಸಾಮಾಜಿಕ ಕೊಡುಗೆಗಳು ಕುಬ್ಜವಾಗುತ್ತವೆ. ಆದರೆ ಕಾಲದ ವೇಗಕ್ಕೆ ತನ್ನನ್ನು ಒಡ್ಡಿಕೊಂಡು ಅಲುಗಾಡದೆ ಭದ್ರವಾಗಿ ನಿಂತ ಸಾಧಕರ ಸಾಧನೆಗಳು ಮರಣದ ನಂತರವೂ ಕಾಡುತ್ತದೆ. ಈ ಕಾಡುವಿಕೆಯೊಳಗೆ ಅವರ ಅಪ್ಪಟ ತ್ಯಾಗವಿದೆ, ತಪಸ್ಸಿದೆ. ಇಂತಹ ವ್ಯಕ್ತಿತ್ವವನ್ನು ಹೊಂದಿದವರು, ಪುಚ್ಚೆಕೆರೆ ಕೃಷ್ಣ ಭಟ್. ಬಂಟ್ವಾಳ ತಾಲೂಕಿನ ಮಂಚಿಯವರು. ಅವರು ಕಟೀಲು ಶಾಲೆಯ ಮುಖ್ಯ ಗುರುವಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕಲಾವಿದ, ಸಂಘಟಕ.  ಅವರು ದೂರವಾಗಿ ವರುಷ ಸಂದಿತು.
             ಯಕ್ಷಗಾನ ಕ್ಷೇತ್ರದಲ್ಲಿ ಪುಚ್ಚೆಕೆರೆಯವರು ಬೌದ್ಧಿಕವಾಗಿ ಆಳವಾಗಿ ಬೇರು ಬಿಟ್ಟಿದ್ದರು. ಶಿಕ್ಷಣ ಕ್ಷೇತ್ರದಲ್ಲೂ ಗಟ್ಟಿಯಾದ ಹೆಜ್ಜೆ. ಅಸಂಖ್ಯಾತ ವಿದ್ಯಾರ್ಥಿಗಳ ನೆಚ್ಚಿನ ಗುರು. ಶಿಸ್ತಿನ ಪಾಲನೆಗಾಗಿ ಇಲಾಖೆಯ ಆದೇಶಕ್ಕಾಗಿ ಕಾಯುತ್ತಿರಲಿಲ್ಲ! ತನ್ನ ವ್ಯಕ್ತಿತ್ವದಿಂದ ತರಗತಿಗಳಲ್ಲಿ ಶಿಸ್ತನ್ನು ತಂದರು. ಎಳೆಯ ಮನಸ್ಸುಗಳನ್ನು ಓದಿದರು. ಮನ ಗೆದ್ದರು. ಹಾಗಾಗಿ ಕೃಷ್ಣ ಭಟ್ಟರನ್ನು ನೆನಪಿಸದ ಶಿಷ್ಯರು ಕಡಿಮೆ! 1964ರಲ್ಲಿ ಕಟೀಲು ಶಾಲೆಗೆ ಅಧ್ಯಾಪಕರಾಗಿ ಬಂದ ಪುಚ್ಚೆಕೆರೆಯವರಿಗೆ ನಿವೃತ್ತಿ ತನಕವೂ ಒಂದೇ ಮುಖ್ಯೋಪಾಧ್ಯಾಯ ಕೊಠಡಿ! ಅದಕ್ಕಿಂತ ಮೊದಲು ಸ್ವಲ್ಪ ಕಾಲ ಎಕ್ಕಾರು ಶಾಲೆಯಲ್ಲಿ ಅಧ್ಯಾಪನ.
           ಅರ್ಧ ಶತಮಾನದ ಹಿಂದೆ ಹೊರಳೋಣ. ಕೃಷ್ಣ ಭಟ್ಟರು ಕಟೀಲಿಗೆ ಬಂದಾಗ ಕೇವಲ ಅಧ್ಯಾಪಕ. ಕಿನ್ನಿಗೋಳಿಯಲ್ಲಿ ನಡೆಯುತ್ತಿದ್ದ ತಿಂಗಳ ತಾಳಮದ್ದಳೆ ಮೂಲಕ ಅವರೊಳಗಿನ ಕಲಾವಿದನಿಗೆ ಮೇವು ಸಿಕ್ಕಿತು. ಅರ್ಥ ಹೇಳುತ್ತಾ ಬೆಳೆದರು. ಶಿಕ್ಷಣ ಕ್ಷೇತ್ರದ ಶಿಸ್ತನ್ನು ಮಿಳಿತಗೊಳಿಸಿದರು. ವೈಯಕ್ತಿಕವಾದ ಬದ್ಧತೆಯನ್ನು ಸ್ಪರ್ಷ ಮಾಡಿದರು. ಈ ಪಾಕ ಪರಿಪಕ್ವವಾಯಿತು. ಕಲಾ ಬದುಕಿನಲ್ಲಿ ಅಪ್ಪಟದ ಶುಭ್ರತೆಯನ್ನು ತಂದರು. ಅಧ್ಯಾಪಕ ಹುದ್ದೆಯಿಂದ ನಿವೃತ್ತರಾಗುವ ತನಕವೂ ಈ ಶುಭ್ರತೆಗೆ ಹೊಳಪಿತ್ತು. ಇತರರಲ್ಲೂ ಶುಭ್ರತೆಯನ್ನು ನಿರೀಕ್ಷೆ ಮಾಡುತ್ತಿದ್ದರು. ತನ್ನ ನಿಲುಕಿಗೆ ಬಾರದೇ ಇದ್ದಾಗ ಮಂದಹಾಸದೊಳಗೆ ಇಳಿದುಬಿಡುತ್ತಿದ್ದರು.
             1974, ಭ್ರಾಮರಿ ಯಕ್ಷಗಾನ ಮಂಡಳಿಯ ಹುಟ್ಟು. ಕಾರ್ಯದರ್ಶಿಯಾಗಿ ದುಡಿತ. ಮಂಡಳಿಯು ಕಟೀಲಿನ ಪ್ರಧಾನ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆಯಿತು. ಹವ್ಯಾಸಿ ಸಂಘಗಳಿಗೆ ಬಯಲಾಟ ಸಪ್ತಾಹಗಳಲ್ಲಿ ಭಾಗವಹಿಸುವುದು ಹೆಮ್ಮೆಯ ವಿಚಾರವಾಯಿತು. ಸಂಘಗಳ ಪ್ರದರ್ಶನಗಳಲ್ಲಿ ರಂಗಬದ್ಧತೆಯನ್ನು ನಿರೀಕ್ಷಿಸುತ್ತಿದ್ದರು. ಸಂಘಟಕರಿಗೆ ಪ್ರತ್ಯೇಕವಾಗಿ ಕಿವಿಮಾತನ್ನೂ ಹೇಳುತ್ತಿದ್ದರು. ತನ್ನೆಲ್ಲ ಜವಾಬ್ದಾರಿಯ ಜತೆಗೆ ಸಪ್ತಾಹದ ಆಟಗಳ ನೋಟಕರಾಗಿದ್ದು ವಿಮರ್ಶಿಸುತ್ತಿದ್ದರು. ತಪ್ಪನ್ನು ಹೇಳಲು ಎಂದೂ ಹಿಂಜರಿಯುತ್ತಿದ್ದಿರಲಿಲ್ಲ. "ವಿಮರ್ಶೆ ಮುಖಸ್ತುತಿಯಾಗಬಾರದು. ಅದು ಕಲಾವಿದನ ಬೆಳವಣಿಗೆಗೆ ಮಾರಕ. ಆದರೆ ವಿಮರ್ಶೆಯು ಬೆಣ್ಣೆಯಿಂದ ಕೂದಲು ತೆಗೆದಂತಿರಬೇಕು. ವಿಮರ್ಶೆಯಲ್ಲಿ ಅಹಂ ಸಲ್ಲದು," ಎಂದು ಒಮ್ಮೆ ಹೇಳಿದ್ದರು.
               ಕಟೀಲಿನ 'ಸರಸ್ವತಿ ಸದನ'ವು ಕಲಾವಿದರಿಗೆ ಮನೆ. ಉಪಾಧ್ಯಾಯರ ಕೊಠಡಿಯಲ್ಲೇ ಆತಿಥ್ಯ. ಕಲಾವಿದರು ಹೊಟ್ಟೆ ತುಂಬಾ ತಿಂದು ತೇಗಿದಾಗ ಖುಷಿ ಪಡುವ ಜಾಯಮಾನ. ಉಪಾಹಾರಕ್ಕಿಂತಲೂ ಕೃಷ್ಣ ಭಟ್ಟರ ಆತಿಥ್ಯವೇ ಹೊಟ್ಟೆಯನ್ನು ತಂಪಾಗಿಸುತ್ತಿತ್ತು. ಆತಿಥ್ಯದ ನಿಜಾರ್ಥದ ಸಾಕಾರತೆಗೆ ಪುಚ್ಚೆಕರೆ ಒಂದು ಉಪಮೆ. ಪ್ರತೀ ಪ್ರದರ್ಶನ ಆರಂಭದಲ್ಲಿ ಕೃಷ್ಣಭಟ್ಟರ ಸ್ವಾಗತ-ಪ್ರಸ್ತಾವನೆ, ಕೊನೆಗೆ ಧನ್ಯವಾದ - ಇದು ಕೂಡಾ ಒಂದು ಪಾತ್ರವೇ. ಕಲಾವಿದರು ತಂತಮ್ಮ ಪಾತ್ರ ಮುಗಿದ ನಂತರ ಪಾತ್ರದಿಂದ ಕಳಚಿಕೊಳ್ಳುತ್ತಿದ್ದರು.  ಪುಚ್ಚೆಕೆರೆಯವರು ಪಾತ್ರಗಳನ್ನು ಕಳಚಿಕೊಳ್ಳುವುದೇ ಇಲ್ಲ!
             ಹದಿನೈದು ವರುಷದ ಹಿಂದಿನ ಮಾತಿನ್ನೂ ನೆನಪಿದೆ. ಪುತ್ತೂರಿನಲ್ಲಿ ಜರುಗಿದ ಮಕ್ಕಳ ಯಕ್ಷ ಸಂಭ್ರಮದ ವೇದಿಕೆ. ಪುಚ್ಚೆಕೆರೆಯವರ ಅಭಿಪ್ರಾಯ - "ರಂಗಬದ್ಧತೆಯನ್ನು ಮೇಳದಿಂದ ನಿರೀಕ್ಷಿಸುವುದು ಕಷ್ಟ. ಅದು ಹವ್ಯಾಸಿ ರಂಗದಿಂದ ಸಾಧ್ಯ. ಹವ್ಯಾಸಿಗಳು ಮೇಳದ ಆದರ್ಶವನ್ನು ಅನುಸರಿಸುವುದು ರಂಗದ ಅಭಿವೃದ್ಧಿ ದೃಷ್ಟಿಯಿಂದ ಸಲ್ಲದು." ಸಂದರ್ಭ ಬಂದಾಗಲೆಲ್ಲಾ ಹವ್ಯಾಸಿ ರಂಗ, ಹವ್ಯಾಸಿ ಕಲಾವಿದರ ಬದ್ಧತೆಯನ್ನು ಗಟ್ಟಿ ಸ್ವರದಲ್ಲಿ ಹೇಳುತ್ತಿರುವ ಕೃಷ್ಣ ಭಟ್ಟರ ಒಡನಾಟದ ನೆನಪಿನ ತೇವ ಅರಿಲ್ಲ. ಹವ್ಯಾಸಿಗಳು ಅಭ್ಯಾಸ ಮಾಡಿ ರಂಗವೇರಿದರೆ ವೃತ್ತಿ ರಂಗದಿಂದಲೂ ಹೆಚ್ಚಿನ ರಂಗಾಭಿವ್ಯಕ್ತಿಯನ್ನು ನಿರೀಕ್ಷಿಸಬಹುದೆಂಬ ಆಶೆ ಅವರಲ್ಲಿತ್ತು.
              "ಕಲಾವಿದರ ಕುರಿತು ಅತೀವ ಕಾಳಜಿ. ಶಿಸ್ತಿನ ನೇರ ಕಟುನುಡಿ ಅವರ ಭಾಷಣಗಳಲ್ಲಿತ್ತು. ಚುಟುಕಾಗಿ, ಹರಿತವಾದ ಮಾತುಗಳು ನಿರ್ವಹಣೆ, ಭಾಷಣಗಳಲ್ಲಿ ಕೇಳಬಹುದಿತ್ತು. ಕೂಟಗಳಲ್ಲಿ ಅಸಂಬದ್ಧ, ಲಂಬಿತ, ಅನಗತ್ಯ ಚರ್ಚೆಗಳನ್ನು ಅವರು ಸಹಿಸುತ್ತಿರಲಿಲ್ಲ." ಪ್ರೇಕ್ಷಕರನ್ನು ತನ್ನ ಮೊನಚಾದ ಚುರುಕು ಸಂಭಾಷಣೆಗಳಲ್ಲಿ ಹಿಡಿದಿಡುವ ಕಲೆ ಅವರದು ಎಂದು ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್ಟರು ಪುಚ್ಚೆಕೆರೆಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾರೆ. ಕಟೀಲಿನ ಎಲ್ಲಾ ಕೂಟಾಟಗಳ ಹೊಣೆಯನ್ನು ಪ್ರೀತಿಯಿಂದ ಹೊರುತ್ತಿದ್ದರು. ಈ ಹೊರೆಯನ್ನು ಯಾರೂ ಹೊರಿಸಿದ್ದಲ್ಲ!
              ಬಯಲಾಟ ಸಂಯೋಜನೆಯಲ್ಲಿ ಅತ್ಯಂತ ಚತುರ. ಒಂದು ರಾತ್ರಿಯಲ್ಲಿ ನಾಲ್ಕೈದು ಪ್ರಸಂಗಗಳನ್ನು ಲೀಲಾಜಾಲವಾಗಿ ಆಡಿಸುವ ಚಾಕಚಕ್ಯತೆಯಿತ್ತು. ಎಲ್ಲರೊಂದಿಗೆ ಬೆರೆಯುವ ವಿಧಾನ ಹೃದ್ಯ. ಸಾಮಾನ್ಯವಾಗಿ ಓರ್ವ ಕಲಾವಿದರ ಪರಿಚಯ, ಅವರ ವೇಷಗಾರಿಕೆಯ ವಿಶೇಷತೆ, ಪ್ರಸಂಗಗಳ ಸಮಗ್ರ ಮಾಹಿತಿಯು ಭಟ್ಟರಂತೆ ಮತ್ತೊಬ್ಬರಿಗೆ ಬಾರದು. ಸ್ನೇಹಕ್ಕೆ ತೆರೆದುಕೊಳ್ಳುವ ಗುಣ.  ಪ್ರಥಮ ಪರಿಚಯದಲ್ಲೇ 'ನಮ್ಮವ'ರಾಗುವ ಆಪ್ತತೆ. ಎಷ್ಟೋ ಸಲ ಮುಕ್ತ ಮಾತುಗಾರಿಕೆ, ಅಹಮಿಕೆ ಇಲ್ಲದ ವ್ಯಕ್ತಿತ್ವಗಳಿಂದಾಗಿ ಎಷ್ಟೊ ಮಂದಿ ತುಂಬಾ ಹಗುರವಾಗಿ ಕಂಡದ್ದನ್ನೂ ನೋಡಿದ್ದೇನೆ, ಕೇಳಿದ್ದೇನೆ. ಇದರಿಂದ ಕೃಷ್ಣ ಭಟ್ಟರು ಎಂದೂ ಹಗುರವಾದದ್ದಿಲ್ಲ.
             ಪ್ರಸಂಗಕರ್ತ ಡಿ.ಎಸ್.ಶ್ರೀಧರ್ ಅವರು ಪುಚ್ಚೆಕೆರೆಯವರ ವಿನಯವಂತಿಕೆಯನ್ನು ನೆನಪಿಸಿಕೊಳ್ಳುತ್ತಾರೆ, "ಒಮ್ಮೆ ನಮ್ಮ ಕಾಲೇಜಿಗೆ ಭಾಷಣಕ್ಕಾಗಿ ಕರೆದಿದ್ದೆ. ಮೊದಲು ಒಪ್ಪಲಿಲ್ಲ. ಯಾಕೆಂದರೆ 'ತಾನು ಪ್ರೈಮರಿ ಶಾಲೆಯ ಮಾಸ್ಟ್ರು, ನಿಮ್ಮದು ಕಾಲೇಜು. ನನ್ನ ಮಾತು ಸಾಕಾದೀತೇ.' ಇದು ಅವರ ಚಿಂತೆ. ಒತ್ತಾಯಕ್ಕೆ ಬಂದರು. ಪ್ರೌಢ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಬಿಡಿ, ಉಪಾಧ್ಯಾಯ ಮಹಾಸದರಿಗೂ ಅದು ನಿಲುಕದಷ್ಟು ಗಟ್ಟಿ ವಿಷಯಗಳಿಂದ ಕೂಡಿತ್ತು. ಕಟೀಲು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರಿಗೆ ಸಮಾನವಾಗಿ ಖಂಡಿತಾ ಮತ್ತೊಬ್ಬರಿಲ್ಲ. ಸದಾ ಓಡಾಡುತ್ತಾ, ಏಕಕಾಲಕ್ಕೆ ಹಲವು ಹೊಣೆಗಳನ್ನು ನಿರ್ವಹಿಸುವ ಚಾಕಚಕ್ಯತೆ. ಅವರಿಗೆ ಅವರೇ ಸಾಟಿ.
              ಎಷ್ಟೋ ಕಡೆ ಕಲಾವಿದರೇ ಸಂಘಟಕರಾಗುತ್ತಾರೆ. ಸಂಘಟನೆಯಲ್ಲೇ ಅವರ ಆಯುಷ್ಯ ಮುಗಿದಿರುತ್ತದೆ! ಇತ್ತ ಸಂಘಟನೆಯೂ ಬೆಳೆಯದು, ಅತ್ತ ತಾನೂ ಬೆಳೆಯಲಾರ! ಕೆಲವರಿಗದು ಇಷ್ಟವೂ ಕೂಡಾ. ಆದರೆ ಕಲಾವಿದನಾಗಿದ್ದುಕೊಂಡು ಸಂಘಟಕನಾಗಿದ್ದರೆ ಜರಗುವ ಕೂಟಾಟಗಳನ್ನು ಕೇಳುತ್ತಾ ತಾನೂ ಬೆಳೆಯಬೇಕು. ಹೀಗೆ ಬೆಳೆದವರ ಸಂಖ್ಯೆ ಗಣನೀಯವಲ್ಲ. ಪುಚ್ಚೆಕೆರೆಯವರು ಸಂಘಟನೆಯೊಂದಿಗೆ ತಾನೂ ಅರ್ಥಧಾರಿಯಾಗಿ ಬೆಳೆದರು, ವೇಷಧಾರಿಯಾಗಿ ರೂಪುಗೊಂಡರು. ಇಂದ್ರಜಿತು, ಶಿಶುಪಾಲ, ಕೃಷ್ಣ ಸಂಧಾನ ಪ್ರಸಂಗದ ವಿದುರ, ಕೃಷ್ಣ; ವಾಲಿವಧೆಯ ಸುಗ್ರೀವ.. ಇಂತಹ ಪಾತ್ರಗಳು ಕೃಷ್ಣ ಭಟ್ಟರಿಗೆ ಕಷ್ಟವಲ್ಲ. ಕಟೀಲಿನಲ್ಲಿ ನಡೆಯುತ್ತಿದ್ದ ವಿಚಾರಗೋಷ್ಠಿ, ಕಮ್ಮಟಗಳ ಹಿಂದಿನ ಶಕ್ತಿಯಾಗಿದ್ದರು, ಎಂದು ಮೂಲತಃ ಕಟೀಲಿನವರೇ ಆಗಿದ್ದ, ಪ್ರಸ್ತುತ ಕಡಲಾಚೆಯಿರುವ ಪದ್ಮನಾಭ ಕಟೀಲು ಕೃಷ್ಣ ಮಾಸ್ಟ್ರ ಜತೆಗಿನ ಒಡನಾಟಕ್ಕೆ ಮಾತು ಕೊಡುತ್ತಾರೆ.
                  ಬದುಕಿನದ್ದಕ್ಕೂ ಪುಚ್ಚೆಕೆರೆಯವರು ಮಾತನಾಡುತ್ತಾ ಬೆಳೆದವರು. ಮಾತು ಅವರ ಸರ್ವಸ್ವ. ಬದುಕಿನ ಕೊನೆಯ ಕಾಲಘಟ್ಟದಲ್ಲಿ ಮಾತು ಮೌನವಾಗಿತ್ತು. ಮೌನವಾಗಿದ್ದಾಗ ಭೇಟಿಯಾಗಿದ್ದೆ. ಅಲ್ಲ್ಲಿದ್ದಷ್ಟೂ ಹೊತ್ತು ಮೌನಕ್ಕೆ ಜಾರಿಸಿದರು! ಹಲವು ಬಾರಿ ಮುಖ ನೋಡಿದರು, ಆಗಸ ದಿಟ್ಟಿಸಿದರು! ಪರಸ್ಪರರ ಮಧ್ಯೆ ಅಂಧಕಾರ.. ಅಲ್ಲಲ್ಲ.. ಗಾಢಾಂಧಕಾರ. ಉತ್ಸಾಹದಿಂದ ಪುಟಿಯುತ್ತಾ ಇದ್ದಂತೆ ಕೃಷ್ಣ ಭಟ್ಟರು ಅಷ್ಟೇ ವೇಗದಲ್ಲಿ ಹಿಂದೆ ಸರಿದರು. ಉತ್ಸಾಹದಿಂದ ಇದ್ದಾಗ ಎಷ್ಟೊಂದು ಅಭಿಮಾನಗಳು! ಹಿಂದೆ ಸರಿದಾಗ ಅಭಿಮಾನದ ಗಾಢತೆಗೆ ಮಸುಕು. ಇದುವೇ ಜೀವ-ಜೀವನ. ಕಾಲದ ವಾಯುವೇಗದ ಪರಿಣಾಮ.
              2017 ಜುಲೈ 21 - ಪುಚ್ಚೆಕೆರೆ ಕೃಷ್ಣ ಭಟ್ಟರ ವರ್ಶಾಂತಿಕ. ಅಪರಾಹ್ನ ಮಂಚಿಯ ಲಯನ್ಸ್ ಸಭಾಭವನದಲ್ಲಿ  ಅವರ ಸ್ಮೃತಿ ಕಾರ್ಯಕ್ರಮ. ನೆನಪು ಸಂಚಿಕೆ ಅನಾವರಣ. ತಾಳಮದ್ದಳೆ. ಅಭಿಮಾನಿಗಳ, ಕುಟುಂಬದವರ ಆಯೋಜನೆ. ಸಾಮಾಜಿಕ, ಶಿಕ್ಷಣ, ಕಲಾ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಯೂರಿದ ಕಲಾ-ತ್ರಿವಿಕ್ರಮನಿಗೆ ಸಲ್ಲುವ ಗೌರವ.

Saturday, September 9, 2017

ಕಲಾಮನಸ್ಸಿನ ಬೀಜ ಊರಿದ ಶಿಬಿರ

ಗುರು ದಿವಾಣ ಶಿವಶಂಕರ ಭಟ್ಟರು ಗಿಡ ನೆಡುವ ಮೂಲಕ ಶಿಬಿರಕ್ಕೆ ಚಾಲನೆ
ಪ್ರಜಾವಾಣಿಯ - ದಧಿಗಿಣತೋ - ಅಂಕಣ  / 7-7-2017

                    ಯಕ್ಷಗಾನದ ಒಂದೊಂದು ವಿಭಾಗವು ಕಾಲದ ಓಟಕ್ಕೋ, ಮನಃಸ್ಥಿತಿಯ ವಿಕಾರಗಳಿಗೋ ಸಿಕ್ಕಿ ಒದ್ದಾಡುವ ಅನುಭವ ಹಲವರದು. ಯಾರನ್ನೂ ದೂರುವಂತಿಲ್ಲ, ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಕಾರಣರೇ!  'ಒಳಿತನ್ನು ಮಾಡಬೇಕಿಲ್ಲ, ಆದರೆ ಕೆಟ್ಟದ್ದನ್ನು ಬೆಂಬಲಿಸಬಾರದು' ಎಲ್ಲೋ ಓದಿದ ಸೊಲ್ಲು ರಂಗದ ಒದ್ದಾಟಕ್ಕೂ ಅನ್ವಯ. ರಂಗದ ನರಳಾಟಕ್ಕೆ ಕೊನೆ ಎಂದು? ಹಳಿಗೆ ತರುವವರಾರು? ರಂಗಸೊಬಗೆನ್ನುವುದು ಮರೀಚಿಕೆಯೇ? ಮುಂತಾದ ಪ್ರಶ್ನೆಗಳು ಹೊಸದೇನಲ್ಲ. 'ರಂಗದ ಕೆಲವು ವ್ಯವಸ್ಥೆಗಳನ್ನು ಈಗ ಇದ್ದಂತೆಯೇ ಮರು ನಿರ್ಮಾಣ ಮಾಡುವುದು' ಬಹುಶಃ ವರ್ತಮಾನದ ಗೊಣಗಾಟಕ್ಕೆ ಉತ್ತರವಾಗಬಹುದು. ಎಣಿಸಿದಷ್ಟು ಸುಲಭದ ಮಾತಲ್ಲ, ಕೆಲಸವಲ್ಲ.
                     ಮಕ್ಕಳ, ಮಹಿಳೆಯರ ತಂಡಗಳು ದೊಡ್ಡದಾಗಿ ಹೆಜ್ಜೆಯೂರಿವೆ. ಕಾಲಮಿತಿಯ ಯಕ್ಷಗಾನ ತರಗತಿಗಳಿಂದಾಗಿ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿವೆ. ಮಕ್ಕಳ ತಂಡಗಳಿಗೆ ಅಕಾಡೆಮಿಕ್ ಸ್ವರೂಪ ನೀಡುವುದು ಅವಶ್ಯ. ನಾಟ್ಯ, ಅರ್ಥ, ವೇಷಗಳು 'ಯಕ್ಷಗಾನ ಕಾರ್ಯಕ್ರಮ' ಆಗುತ್ತದಷ್ಟೇ ವಿನಾ ವಿವಿಧ ಆಯಾಮಗಳ ದರ್ಶನ ನೀಡುವುದಿಲ್ಲ. ಎಡನೀರಿನಲ್ಲಿ ಜರುಗಿದ ಯಕ್ಷಗಾನ ತರಬೇತಿ ಶಿಬಿರದಿಂದ ಮರಳುವಾಗ ಈ ಎಲ್ಲಾ ವಿಚಾರಗಳು ನನ್ನೊಳಗೆ ಗೂಡು ಕಟ್ಟಿದ್ದುವು. ಶಿಬಿರವನ್ನು ಕಾಸರಗೋಡು ಸರಕಾರಿ ಕಾಲೇಜಿನ 'ಯಕ್ಷಗಾನ ಸಂಶೋಧನಾ ಕೇಂದ್ರ' ಆಯೋಜಿಸಿತ್ತು. ಒಂದು ತಿಂಗಳ ಕಾಲ ಜರುಗಿದ ಶಿಬಿರದಲ್ಲಿ ಮೂವತ್ತೆರಡು ವಿದ್ಯಾರ್ಥಿಗಳು ಭಾಗವಹಿಸಿದ್ದರು.
                  ಶಿಸ್ತುಬದ್ಧವಾದ ಕಾರ್ಯ ಹೂರಣ. ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಸಂಯೋಜನಾಧಿಕಾರಿ. ಜತೆಗೆ ಡಾ.ರಾಜೇಶ್ ಬೆಜ್ಜಂಗಳ ಮತ್ತಿತರರು ಒಂದು ತಪಸ್ಸಿನಂತೆ ಆಯೋಜಿಸಿದ್ದರಿಂದ ಯಕ್ಷಗಾನದ ಕೆಲವು ಪ್ರಾತಿನಿಧಿಕ ವಿಚಾರಗಳನ್ನು ಪರಿಚಯಿಸಲು ಸಾಧ್ಯವಾಗಿತ್ತು. ಈಗಿರುವ ರಂಗದ ವಿನ್ಯಾಸ ಏನಿದೆಯೋ ಅದರ ಛಾಯಾಪ್ರತಿ ಆಗದೆ, ಪ್ರತ್ಯೇಕ ಹಾದಿಯನ್ನು ಕಂಡುಕೊಂಡು, ಆ ಹಾದಿಯಲ್ಲಿ ಕ್ರಮಿಸಲು ಶಿಬಿರ ಒಂದು ಕೈತಾಂಗು ಆಗಿದೆ. ನಮ್ಮ ನಡುವೆ ಇರುವ ತರಬೇತಿ ತಂಡಗಳು ಒಮ್ಮೆ ಕತ್ತು ತಿರುಗಿಸಿ ಇತ್ತ ನೋಡಬಹುದೇನೋ.
                   ದಿವಾಣ ಶಿವಶಂಕರ ಭಟ್ ಮತ್ತು ಸಬ್ಬಣಕೋಡಿ ರಾಮ ಭಟ್ - ಗುರುಗಳು. ಬಹುಕಾಲ ಅನೇಕ ಶಿಷ್ಯರನ್ನು ರೂಪಿಸಿದ ಅನುಭವಿಗಳು. ಒಂದು ತಿಂಗಳು ವಿದ್ಯಾರ್ಥಿಗಳ ಜತೆಗಿದ್ದು ಮನಸ್ಸನ್ನು, ಕಲೆಯನ್ನು ಹಂಚಿಕೊಂಡಿದ್ದಾರೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಗೈರುಹಾಜರಾಗದೆ ಸ್ಪೂರ್ತಿಯಿಂದ ಭಾಗವಹಿಸಿದ್ದು  ಕಾರ್ಯಹೂರಣದ ಗಟ್ಟಿತನ. "ಉಪನ್ಯಾಸಗಳನ್ನು ಹೊರಗಿಟ್ಟು, ಪ್ರತ್ಯಕ್ಷ ಅನುಭವಕ್ಕೆ ಆದ್ಯತೆ. ಬಹುಶಃ ಉಪನ್ಯಾಸ, ಪ್ರಬಂಧ ಮಂಡನೆಗಳನ್ನು ಆಯೋಜಿಸಿದ್ದರೆ ವಿದ್ಯಾರ್ಥಿಗಳ ಆಸಕ್ತಿಗಳನ್ನು ನಾನು ಕಸಿದುಕೊಂಡಂತೆ. ವಿದ್ಯಾರ್ಥಿಗಳಿಗೆ ಥಿಯರಿಯೊಂದಿಗೆ ಪ್ರಾಕ್ಟಿಕಲ್ ಕಲಿಕೆಯೂ ಜತೆಜತೆಗೆ ಪ್ರಾಪ್ತವಾದ್ದರಿಂದ ಯಕ್ಷಗಾನದ ಸವಿಯನ್ನು ಅನುಭವಿಸಲು ಸಾಧ್ಯವಾಯಿತು," ಎನ್ನುತ್ತಾರೆ ಮಲ್ಲಮೂಲೆ.
               ಶ್ರೀ ಎಡನೀರು ಮಠದಲ್ಲಿ ಹದಿನೈದು ದಿವಸಗಳ ಕಾಲ ಎಡನೀರು ಮೇಳದ ಆಟಗಳು ಸಂಪನ್ನವಾಗಿದ್ದುವು. ವಿದ್ಯಾರ್ಥಿಗಳಿಗಿದು ಬೋನಸ್. ಕಲಿತುದನ್ನು ಅನುಭವಿ ಕಲಾವಿದರ ವೇಷಗಳ ನಾಟ್ಯ ವಿನ್ಯಾಸಗಳಲ್ಲಿ ನೋಡುವ ಅವಕಾಶ. ಕಲಾವಿದರೊಂದಿಗೆ ಬೆರೆಯುವ ಕ್ಷಣ. ಅವರ ಬದುಕನ್ನು ಓದುವ ಸನ್ನಿವೇಶ. ಮೇಳದ ಆಟದಲ್ಲಿ ಭಾಗವಹಿಸಿದ ಪ್ರಾತಿನಿಧಿಕ ಕಲಾವಿದರನ್ನು ಶಿಬಿರಕ್ಕೆ ಆಹ್ವಾನಿಸಿ ಅವರಿಂದ ಪ್ರಾತ್ಯಕ್ಷಿಕೆ. ಅನುಭವ ಕಥನ. ಸೂರಿಕುಮೇರು ಗೋವಿಂದ ಭಟ್ಟರಿಂದ ನವರಸಗಳ ಪ್ರಸ್ತುತಿ, ಪುಂಡು ವೇಷಗಳ ಕುರಿತು ಪುತ್ತೂರು ಶ್ರೀಧರ ಭಂಡಾರಿ, ಸ್ತ್ರೀ ಪಾತ್ರಗಳ ಕುರಿತು ಕುಂಬಳೆ ಶ್ರೀಧರ ರಾವ್, ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಹಾಸ್ಯದ ಅನನ್ಯತೆ, ಯಕ್ಷ ಸಾಹಿತ್ಯದ ಕುರಿತು ತಾರಾನಾಥ ವರ್ಕಾಡಿ, ದೇವಕಾನ ಕೃಷ್ಣ ಭಟ್ಟರಿಂದ ಬಣ್ಣಗಾರಿಕೆ ಮತ್ತು ಕೆ.ವಿ.ರಮೇಶರಿಂದ ಬೊಂಬೆಯಾಟದ ಮಾಹಿತಿ.. ಹೀಗೆ ಅನುಭವಿಗಳ ದಂಡು ಅಯಾಚಿತವಾಗಿ ಶಿಬಿರಕ್ಕೆ ಒದಗಿದೆ.
                  ಕಾಸರಗೋಡು ಜಿಲ್ಲೆಯ ಕಲಾ ಮನಸ್ಸುಗಳು ಪ್ರತಿದಿನ ಶಿಬಿರಕ್ಕೆ ಭೇಟಿ ನೀಡಿರುವುದು ಹೊಸ ಉಪಕ್ರಮವಾಗಿ ಕಂಡಿತು. ಕಾಲೇಜೊಂದರ ಸಂಶೋಧನಾ ಕೇಂದ್ರವು ಆಯೋಜಿಸುವ ಶಿಬಿರವು ನಮ್ಮದು ಎನ್ನುವ ಮನಃಸ್ಥಿತಿ ಇದೆಯಲ್ಲಾ ಗ್ರೇಟ್. "ಏನಿಲ್ಲವೆಂದರೂ ತಿಂಗಳಲ್ಲಿ ಸಾವಿರಕ್ಕೂ ಮಿಕ್ಕಿ ಸಹೃದಯರು ಶಿಬಿರವನ್ನು ವೀಕ್ಷಿಸಿದ್ದಾರೆ. ನೈತಿಕ ಬೆಂಬಲ ನೀಡಿದ್ದಾರೆ. ಇಷ್ಟೊಂದು ಪ್ರೋತ್ಸಾಹ ಸಿಗಬಹುದೆನ್ನುವ ನಿರೀಕ್ಷೆಯಿರಲಿಲ್ಲ," ಎಂದು ವಿನೀತರಾಗುತ್ತಾರೆ ರತ್ನಾಕರ. ಇವರೊಂದಿಗೆ ಹೆಗಲೆಣೆಯಾಗಿ ಕಾಲೇಜಿನ ಪ್ರಾಧ್ಯಾಪಕ ವರ್ಗ, ಸ್ನೇಹಿತರು, ಹಳೆ ವಿದ್ಯಾಥರ್ಿಗಳಿದ್ದರು.
                   ಶಿಬಿರದ ಕಲಾಪಗಳ ವರದಿಗಾಗಿಯೇ ತೆರೆದ ವಾಟ್ಸಾಪ್ ಜಾಲತಾಣ ಗುಂಪು ಇನ್ನೂ ವಿಶ್ರಾಂತಿ ಪಡೆದಿಲ್ಲ. ವಿದ್ಯಾರ್ಥಿಗಳಿಂದ ತೊಡಗಿ ಕಲಾ ಸಂಘಟನೆ, ಕಲಾವಿದರು, ಕಲಾಭಿಮಾನಿಗಳು ಗುಂಪಿನ ಸದಸ್ಯರು. ಪೂರ್ವಾಹ್ನದಿಂದ ರಾತ್ರಿ ತನಕದ ವಿವಿಧ ಕಲಾಪಗಳನ್ನು ದಾಖಲಿಸಿ ಗುಂಪಿಗೆ ಏರಿಸುತ್ತಿದ್ದರಿಂದ ದೂರದೂರಿನವರಿಗೆ ಶಿಬಿರದ ಅಪ್ಡೇಟ್ ಸಿಕ್ಕಿದಂತಾಗುತ್ತದೆ. ವಾಟ್ಸಾಪ್ ಗುಂಪಿನ ಮಾಹಿತಿಗಳು ಮಾಧ್ಯಮಗಳಿಗೆ ಸಹಕಾರಿಯಾಗಿದ್ದುವು. ಶಿಬಿರದ ಆಗುಹೋಗುಗಳನ್ನು ಮಾಧ್ಯಮಗಳು ಬೆಳಕು ಚೆಲ್ಲಿವೆ. ಸಾಮಾಜಿಕ ಜಾಲತಾಣಗಳನ್ನು ಸದ್ದುದ್ದೇಶವೊಂದಕ್ಕೆ ಹೇಗೆ ಬಳಸಬಹುದು ಎನ್ನುವುದನ್ನು ತೋರಿಸಿದ್ದಾರೆ.
                 ಶಿಬಿರದಲ್ಲಿ ಭರತನಾಟ್ಯ-ಕಥಕ್ಕಳಿ ಪರಿಚಯ, ಮಂಜೇಶ್ವರದ ಗಿಳಿವಿಂಡು ಭೇಟಿ, ಉಡುಪಿಯ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರೊಂದಿಗೆ ಮಾತುಕತೆ, ವಿಮರ್ಶಕ ಡಾ.ರಾಘವ ನಂಬಿಯಾರರ ಜತೆಗೆ ಮುಖಾಮುಖಿ... ಹೀಗೆ ಮಕ್ಕಳ ಅರಿವನ್ನು ಹೆಚ್ಚಿಸುವ ಕಲಾಪಗಳು ಶಿಬಿರದ ಹೈಲೈಟ್. ಇದರಿಂದಾಗಿ ನಾಟ್ಯ, ವೇಷದ ಹೊರತಾದ ಯಕ್ಷಪ್ರಪಂಚವನ್ನು ಅರಿಯಲು ಸಾಧ್ಯವಾಗಿತ್ತು. ಶಾಲೆ, ಸಂಸ್ಥೆಗಳು, ಖಾಸಗಿಯಾಗಿ ನಡೆಯುವ ಯಕ್ಷಗಾನ ತರಬೇತಿ ತಂಡಗಳು ಕೂಡಾ ಇಂತಹ ಪ್ರವಾಸವನ್ನು ಆಯೋಜಿಸಬೇಕು.
               ಶಿಬಿರ ಏನೋ ಮುಗಿಯಿತು. ಪಠ್ಯದ ಒತ್ತಡದ ಜತೆಗೆ ಮಕ್ಕಳ 'ಕಲಾ ಕಾವು' ಆರದಂತೆ ನೋಡಿಕೊಳ್ಳುವುದು ಕೂಡಾ ಸವಾಲಿನ ಕೆಲಸ. "ಭಾಗವಹಿಸಿದ ವಿದ್ಯಾರ್ಥಿಗಳು ಕಲಾವಿದರಾಗಬೇಕಿಲ್ಲ. ಒಳ್ಳೆಯ ಪ್ರೇಕ್ಷಕರಾದರೆ ಸಾಕು. ಯಕ್ಷಗಾನಕ್ಕೆ ಉತ್ತಮ ಪ್ರೇಕ್ಷಕರ ತಯಾರಿ ಆಗಬೇಕಾದುದು ಕಾಲದ ಅವಶ್ಯಕತೆ," ಎನ್ನುತ್ತಾರೆ ಎಡನೀರಿನ ಜಯರಾಮ ಮಂಜತ್ತಾಯ. ಸಂಶೋಧನಾ ಕೇಂದ್ರದ ಆಶಯವೂ ಇದೇ ಹಾದಿಯಲ್ಲಿ ಸಾಗಿರುವುದು ಶ್ಲಾಘ್ಯ.
                   ಬಿಡುವಿಲ್ಲದ ಕಾರ್ಯಹೂರಣದ ಶಿಬಿರವು ಮಕ್ಕಳೊಳಗೆ ಕಲಾಮನಸ್ಸಿನ ಬೀಜವೊಂದನ್ನು ಊರಿದೆ. ಇದಕ್ಕೆ ನಿರಂತರ ಕಲೆಯ ಕಾವು ಸಿಕ್ಕಿ ಮೊಳಕೆಯೊಡೆಯಬೇಕು. ಶಿಬಿರ ಮುಗಿದಾಗ ಕಲಾಮನಸ್ಸಿನ ಬೀಜವು ಮೊಳಕೆಯೊಡೆಯಲು ಸಜ್ಜಾಗಿತ್ತು. ಅದಕ್ಕೆ ಕಾಲಕಾಲಕ್ಕೆ ಬೇಕಾದ ಆರೈಕೆಗಳು ಸಿಕ್ಕಾಗ ಮಾತ್ರ ಅದು ಸಸಿಯಾಗುತ್ತದೆ. ಎಲ್ಲಾ ಶಿಬಿರಾರ್ಥಿಗಳು ಸಸಿಯಾಗಲು ಬೇಕಾದ ಎಲ್ಲಾ ಅರ್ಹತೆ ಮತ್ತು ಗಟ್ಟಿತನವನ್ನು ಪಡೆದವರಾದ್ದರಿಂದ ಇವರಲ್ಲಿರುವ ಕಲಾಗಾರಿಕೆಯನ್ನು ಪೋಶಿಸುವ ಅಗತ್ಯವಿದೆ.
                 ವಿದ್ಯಾರ್ಥಿಗಳಿಗೆ ವರುಷದಲ್ಲಿ ಏನಿಲ್ಲವೆಂದರೂ ಮೂರೋ ನಾಲ್ಕು ಬಾರಿ ಯಕ್ಷಗಾನದ ಸಂಬಂಧಿಯಾದ ಒಂದೊಂದು ದಿವಸದ ಕಲಾಪಗಳು ನಡೆಯಬೇಕು. ಈಗ ನೀಡಿದ ಶಿಕ್ಷಣದ ಮರುಓದು ಕೂಡಾ ಅಗತ್ಯ. ಭಾಷಣ, ಉಪನ್ಯಾಸಗಳಿಂದ ಹೊರತಾದ ಕಲಾಪಗಳು ಮಕ್ಕಳ ಮನದೊಳಗೆ ಇಳಿಯಲು ಸಹಕಾರಿ. ಮಲೆಯಾಳ ನೆಲದಲ್ಲಿ ಯಶಸ್ವಿಯಗಿ ಶಿಬಿರವೊಂದನ್ನು ಆಯೋಜಿಸಿದ ಕಾಲೇಜಿನ ಯಕ್ಷಗಾನ ಸಂಶೋಧನಾ ಕೇಂದ್ರವು ಯಕ್ಷ ಕಲಿಕಾ ಕೇಂದ್ರಗಳಿಗೆ ಹೊಸ ಸಂದೇಶ ಬೀರಿದೆ. ಹೊಸ ಮಾದರಿಯನ್ನು ತೋರಿಕೊಟ್ಟಿದೆ. ಚಿಣ್ಣರನ್ನು ಅರಿವಿನ ಹಾದಿಯಲ್ಲಿ ಒಯ್ದು ಅವರಿಂದ 'ಯಕ್ಷಗಾನ'ವನ್ನು ಅನಾವರಣಗೊಳಿಸುವುದೇ ರಂಗದ ಮರುನಿರ್ಮಾಣ.
                 ರತ್ನಾಕರ ಮಲ್ಲಮೂಲೆ ಬಳಗದ ಶಿಬಿರದ ಆಯೋಜನೆ ಹೂವಿನದ್ದಾಗಿರಲಿಲ್ಲ. ಅನುದಾನದಿಂದ ತೊಡಗಿ ದೈನಂದಿನ ವ್ಯವಸ್ಥೆಗಳಿಗೆ ನಿಗಾ ಕೊಡಬೇಕಿತ್ತು. ಸಹಜವಾಗಿ ಎದುರಾಗುವ ಮಾನಸಿಕ ಹಿಂಸೆಗಳನ್ನು ಸಹಿಸುತ್ತಾ ನಗುಮುಖದಿಂದ ಇರಬೇಕಾಗಿತ್ತು. ರಾಜಿಯಿಲ್ಲದೆ ಕಾರ್ಯಹೂರಣವನ್ನು ಅನುಷ್ಠಾನ ಮಾಡಬೇಕಾಗಿತ್ತು. ಬಹುಶಃ ಇವರಲ್ಲಿರುವ ಕಲಾ ಗಟ್ಟಿತನವು ಸಮಸ್ಯೆಗಳನ್ನೆಲ್ಲಾ ಹಗುರವಾಗಿಸಿದೆ. 

Thursday, September 7, 2017

ರಂಗದ ಒಳಸುಳಿಗಳನ್ನು ಕಟ್ಟಿಕೊಟ್ಟ ಬಲಿಪರು

 ಸಂಮಾನ, ಪ್ರಶಸ್ತಿಗಳ ಸಂಗ್ರಹದ 'ಬಲಿಪ ಭವನ'ದಲ್ಲಿ ಬಲಿಪರು
ಅಜ್ಜನ ಮಾತನ್ನು ಆಲಿಸುತ್ತಿರುವ ಮೊಮ್ಮಗ
 
ಪ್ರಜಾವಾಣಿಯ - ದಧಿಗಿಣತೋ - ಅಂಕಣ  / 30-6-2017

              ಜೂನ್ ತಿಂಗಳು. ಮಳೆಯ ಅಬ್ಬರ. ಬಲಿಪ ನಾರಾಯಣ ಭಾಗವತರ 'ಬಲಿಪ ಭವನ'ದ ವೀಕ್ಷಣೆಗಾಗಿ ಸ್ನೇಹಿತರೊಂದಿಗೆ ಭೇಟಿ ನೀಡಿದ್ದೆ. ಈ ಮಹಾನ್ ಭಾಗವತರಿಗೆ ಎರಡು ವರುಷದ ಹಿಂದೆಯಷ್ಟೇ ಅಭಿಮಾನಿಗಳು ಭವನದ ಕಾಣ್ಕೆ ನೀಡಿದ್ದರು. ಮೂರು-ಮೂರುವರೆ ದಶಕದೀಚೆಗೆ ಪಡೆದ ಸಂಮಾನ, ಪ್ರಶಸ್ತಿಗಳ ಗುಣಕಥನ ಫಲಕಗಳು ಭವನವನ್ನು ಅಲಂಕರಿಸಿದ್ದುವು. "ಅಭ್ಯಾಸಿಗಳಿಗೆ ಇದೊಂದು ಒಳ್ಳೆಯ ಜಾಗ. ಹಳ್ಳಿಯ ಪರಿಸರ. ಕಲಿಯುವವರಿಲ್ಲವಲ್ಲಾ. ಕಲಿಯದಿದ್ದರೆ ಕಲೆ ಉಳಿಯುವುದು ಹೇಗೆ? ಭಾಗವತಿಕೆ ಕಲಿಯಲು ಏನಿಲ್ಲವೆಂದರೂ ಎರಡು ವರುಷ ಬೇಕು. ಭಾಗವತಿಕೆ ಎನ್ನುವುದು ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ," ಎನ್ನುತ್ತಾ ಮಾತಿಗಿಳಿದರು. ಒಂದು ಕಾಲಘಟ್ಟದ ಸಾಮಾಜಿಕ ಬದುಕು, ಬದ್ಧತೆ, ಕಷ್ಟ-ಸುಖಗಳು, ಪ್ರಾಮಾಣಿಕತೆಗಳು, ಮೇಳ ನಿಷ್ಠೆ, ರಂಗಸುಖಗಳು ಅವರ ಮಾತಲ್ಲಿ ಮಿಂಚಿ ಮರೆಯಾಗುತ್ತಿದ್ದವು. ಕಳೆದ ಕಾಲದ ರಂಗ ಕಥನಗಳ ಬೆರಗಿನ ಝಲಕ್ಗಳನ್ನು ಬಲಿಪರೇ ಹೇಳಬೇಕು.
               ಮೊದಲು ಐದು ದಿವಸದ ದೇವಿಮಹಾತ್ಮೆ ಪ್ರದರ್ಶನ ಆಗುತ್ತಿತ್ತು. ಒಂದು ಘಟನೆ ನೆನಪಾಗುತ್ತದೆ - ಜತ್ತಿ ಭಾಗವತರ ಭಾಗವತಿಕೆಯ ಉಚ್ಛ್ರಾಯ ಕಾಲ. ಮೇಳದಲ್ಲಿ ಪೆರಿಯಪ್ಪಾಡಿ ಪರಮೇಶ್ವರ ಭಟ್ಟರು ಭಾಗವತರು.  ಅವರು ಮಂತ್ರವಾದಿ ಕೂಡಾ. ಒಂದು ದೇವಿ ಮಹಾತ್ಮೆ ಪ್ರಸಂಗದ ಪ್ರದರ್ಶನದಲ್ಲಿ ಜತ್ತಿಯವರು ಭಾಗವತರು. ಆಟ ನಡೆಯುತ್ತಿದ್ದಂತೆ ರಂಗಸ್ಥಳದ ಹತ್ತಿರ ಪರಮೇಶ್ವರ ಭಟ್ಟರು ಮಂತ್ರವಾದ ಮಾಡುತ್ತಾ ಆಹುತಿ ಕೊಡುತ್ತಿದ್ದರು! ರಂಗದಲ್ಲಿ ಒಬ್ಬೊಬ್ಬ ರಾಕ್ಷಸ ಸಾಯುವಾಗಲೂ ಕುಂಬಳಕಾಯಿಯನ್ನು ಕಡಿದು,  'ಕುರ್ದಿ’ಯ (ಅರಶಿನ ಅಥವಾ ಕುಂಕುಮವನ್ನು ನೀರಿಗೆ ಮಿಶ್ರ ಮಾಡಿದ ಪಾಕ) ನೀರನ್ನು ಚೆಲ್ಲುತ್ತಿದ್ದರು. 'ದೇವಿ ಮಹಾತ್ಮೆ' ಅಂದಾಗ ಜನರಲ್ಲಿ ಭಯ, ಭಕ್ತಿಯಿತ್ತು. ಆರಾಧನಾ ಭಾವದಿಂದ ಕಾಣುತ್ತಿದ್ದರು. ಬಹುಶಃ ಕಾಳಿ, ರಕ್ತೇಶ್ವರಿ ದೈವಗಳು ತೊಂದರೆ ಕೊಡಬಾರದು ಎನ್ನುವ ಕಾರಣಕ್ಕೆ ಈ ವ್ಯವಸ್ಥೆಯೋ ಏನೋ? ಪ್ರದರ್ಶನವನ್ನು ಜನರು ಮನಸಾ ಅನುಭವಿಸುತ್ತಿದ್ದರು.
              ಉಳ್ಳವರು ’ದೇವಿ ಮಹಾತ್ಮ” ಪ್ರಸಂಗ ಆಡಿಸುವಾಗ ಗೌಜಿಗಾಗಿ 'ತಾಸೆ'ವಾದನ ತಂಡವನ್ನು ಆಹ್ವಾನಿಸುತ್ತಿದ್ದರು. ಕೆಲವೊಂದು ಸನ್ನಿವೇಶಗಳಿಗೆ ತಾಸೆ ಬಾರಿಸುತ್ತಿದ್ದರು. ಮಧ್ಯೆ 'ಗರ್ನಾಲು' ಸಿಡಿತ. ಇಂತಹ ಗೌಜಿಗಳಿಗೆ 'ಸಮುದ್ರ ಮಥನ' ಪ್ರಸಂಗವನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದರು. ಬರುಬರುತ್ತಾ ಗೌಜಿಗಳ ಪ್ರಮಾಣ ಹೆಚ್ಚಾಯಿತು. ಒಮ್ಮೆ ಒಂದು ಗೌಜಿಯ ಆಟದಲ್ಲಿ ಕುದ್ರೆಕೂಡ್ಲು ರಾಮ ಭಟ್ಟರು ಚೆಂಡೆ ಕೆಳಗಿಟ್ಟು, "ಚೆಂಡೆ ಇರುವುದು ಯಾಕೆ? ವೇಷಕ್ಕೆ ಯಾವುದು ಬೇಕು? ತಾಸೆಯ ನಡೆಗೆ ವೇಷಗಳು ಕುಣಿಯಲಿ? ನೋಡೋಣ" ಎಂದು ಕಡಕ್ಕಾಗಿ ಹೇಳಿದ್ದರು.
                 ಪೊಳಲಿ ಮೇಳದಲ್ಲಿ ವೆಂಕು ಭಾಗವತರು ಪ್ರಸಿದ್ಧರಾಗಿದ್ದರು. ತುಂಬಾ ಅಂದದ ಪದ್ಯ. ನನ್ನ ಅಜ್ಜ ಮೇಳದಲ್ಲಿ ಸಂಗೀತಗಾರರಾಗಿದ್ದರು. ಹದಿನೆಂಟು ಪ್ರಸಂಗಗಳ ಪದ್ಯಗಳು ಬಾಯಿಪಾಠ ಬಂದರೆ ಜಾಗಟೆ ಹಿಡಿಯಬಹುದು ಎಂದು ವೆಂಕು ಭಾಗವತರು ಹೇಳಿದ ಮಾತು ನೆನಪಾಗುತ್ತದೆ. ನನಗಾಗ ಹದಿನೆಂಟನೇ ವರುಷ. ನೀವು ಬಲಿಪರ ಪುಳ್ಳಿಯಲ್ವಾ. ಎಷ್ಟು ಪ್ರಸಂಗ ಬಾಯಿಗೆ ಬರುತ್ತದೆ ಎಂದು ಕೇಳಿದ್ದರು. ಮೂವತ್ತೈದು ಬರುತ್ತದೆ ಎಂದು ಖುಷಿಯಿಂದ ಉತ್ತರ ಕೊಟ್ಟಿದ್ದೆ. 'ಮಹಾಭಾರತದ ಸ್ವರ್ಗಾರೋಹಣ' ಪ್ರಸಂಗ ಬಾಯಿಗೆ ಬರುತ್ತದಾ ಎಂದು ಪ್ರಶ್ನಿಸಿದಾಗ ನಾನು ನಿರುತ್ತರನಾದೆ. ಅದನ್ನು ಕಲಿಯಿರಿ ಎಂದು ಉಪದೇಶ ಮಾಡಿದ್ದರು.
            ಭಾಗವತರಿಗೆ ಪ್ರಸಂಗಗಳು ಕಂಠಸ್ಥವಾಗಿರಬೇಕು. ಬರೆದಿಡಲು ಪರಿಕರಗಳಿಲ್ಲ. ಕೆಲವು ಓಲೆಗರಿಗಳಲ್ಲಿ ದಾಖಲಾಗುತ್ತಿದ್ದುವಷ್ಟೇ. ಒಂದು ವೇಳೆ ಬರೆದಿಟ್ಟ ಪ್ರಸಂಗವಿದ್ದರೂ ರಂಗಸ್ಥಳದಲ್ಲಿ ಅದನ್ನಿಟ್ಟು ಹಾಡುವ ವ್ಯವಸ್ಥೆಯಿಲ್ಲ. ಪಡಿಮಂಚವಿಲ್ಲದೆ ನಿಂತೇ ಹಾಡಬೇಕಾಗಿತ್ತಲ್ವಾ. ಕಲಾವಿದರಿಗೆ ಎಷ್ಟೆಷ್ಟು ಪದ್ಯ, ಆ ಪದ್ಯದ ಸೂಕ್ಷ್ಮ ಭಾವಾರ್ಥಗಳನ್ನು ಭಾಗವತ ಹೇಳಬೇಕು. ಒಂದು ಆಟದಲ್ಲಿ ತಪ್ಪಿದರೆ ಮರುದಿವಸ ಕಲಾವಿದರು ತಿದ್ದಿಕೊಳ್ಳುತ್ತಿದ್ದರು. ದಿನವಿಡೀ ನಡಿಗೆಯಲ್ವಾ. ಕಾಡು ಹರಟೆಯಿಲ್ಲ. ಪ್ರಸಂಗದ ನಡೆ, ಅರ್ಥಗಾರಿಕೆ, ನಾಟ್ಯದ ವಿಧಾನವನ್ನು ಕಲಿತುಕೊಳ್ಳುತ್ತಾ ಸಾಗುವುದು. ಊಟ ಇಲ್ಲದಿದ್ದರೂ ಕಲಾವಿದರಿಗೆ ರಂಗನಿಷ್ಠತೆಯಿತ್ತು. ರಾತ್ರಿಯಿಡೀ ಗೊಣಗಾಟವಿಲ್ಲದೆ ವೇಷ ಮಾಡುತ್ತಿದ್ದರು. ವೇಷ, ರಂಗದ ಕುರಿತು ಪ್ರೀತಿಯಿತ್ತು,
               ಪ್ರತೀ ಪ್ರಸಂಗದ ಆರಂಭಕ್ಕೆ ಕಥಾಸಾರವು ಪದ್ಯರೂಪದಲ್ಲಿ ಕವಿ ಹೇಳಿರುತ್ತಾನೆ. ಅದನ್ನು ಪ್ರಸ್ತುತಪಡಿಸಿದ ಬಳಿಕವೇ ಕಥೆ ಆರಂಭ. ಪ್ರಸಂಗದ ಕೊನೆಗೆ ಕವಿಗೆ ನಮನ ಸಲ್ಲಿಸುವ ಪದ್ಯಗಳಿವೆ. ಅದನ್ನೂ ಕೂಡಾ ರಂಗದಲ್ಲಿ ಭಾಗವತ ಹೇಳಬೇಕು. ವೇಷವು ಕುಣಿಯಬೇಕು. ಇದು ಪ್ರಸಂಗ ಕವಿಗೆ ಕೊಡುವ ಗೌರವ. ಪ್ರಸಂಗಾರಂಭಕ್ಕೆ ಹಾಡುವ 'ಅಂಬುರುಹದಳನೇತ್ರೆ.. ಸ್ತುತಿಯು ಕೃಷ್ಣಸಂಧಾನ ಪ್ರಸಂಗದ್ದು. ಭಾಗವತಿಕೆ ಕಲಿಯುವವರು ಇದನ್ನು ಮೊದಲಿಗೆ ಅಭ್ಯಾಸ ಮಾಡಬೇಕಿತ್ತು. ಬಹುಶಃ ಇದೇ ಮುಂದುವರಿಯಿತು.
              ಚೌಕಿಯಲ್ಲಿ (ಬಣ್ಣದ ಮನೆ) ಗಣಪತಿ ಪೂಜೆಯ ಬಳಿಕ ಮಂಗಳದ ವರೆಗೆ ರಂಗಸ್ಥಳದ ಸವರ್ಾಧಿಕ್ಯ ವ್ಯಕ್ತಿ ಭಾಗವತ. ಅವನ ಒಪ್ಪಿಗೆ ಪಡೆಯದೆ ರಂಗಕ್ಕೆ ವೇಷಗಳ ಹೊರತು ಮಿಕ್ಕವರಿಗೆ ಪ್ರವೇಶವಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ತೀರಾ ಅನಿವಾರ್ಯವಾದರೆ ಭಾಗವತರಲ್ಲಿ ವಿನಂತಿಸಿ, ಒಪ್ಪಿಗೆ ಪಡೆದೇ ರಂಗಸ್ಥಳಕ್ಕೆ ಹೋಗಬಹುದು. ಮೇಳದ ಹಾಸ್ಯಗಾರರು ಪ್ರಸಂಗದ ಮಧ್ಯದಲ್ಲಿ ಧನ್ಯವಾದ ಕೊಡುತ್ತಾರೆ. ಅವರು ಕೂಡಾ ವೇಷದಲ್ಲಿದ್ದಾಗಲೇ ಈ ಜವಾಬ್ದಾರಿಯನ್ನು ನಿಭಾಯಿಸಬೇಕು. ವೇಷ ತೆಗೆದು ಪ್ಯಾಂಟ್, ಅಂಗಿ ತೊಟ್ಟು ರಂಗಕ್ಕೆ ಬರುವಂತಿಲ್ಲ. ಯಥಾಸಾಧ್ಯ ನಾನು ರಂಗದಲ್ಲಿ ಇರುವ ತನಕ ಇಂತಹ ಶಿಸ್ತನ್ನು ಪಾಲಿಸಿದ್ದೇನೆ. ಭಾಗವತನಿಗೆ ಯಕ್ಷಗಾನವು ಕೊಟ್ಟ ಈ ಗೌರವವನ್ನು ಎಲ್ಲರೂ ಪಾಲಿಸಬೇಕು.
              ಮದ್ದಳೆಯ 'ಛಾಪು' ಇದೆಯಲ್ಲಾ, ಅದಕ್ಕೂ ಗೌರವವಿದೆ. ಮನಸ್ಸಿಗೆ ಬಂದಂತೆ ಛಾಪು ಹಾಕುವಂತಿಲ್ಲ. ಅರ್ಥ ಹೇಳುವಾಗ ಛಾಪು ನುಡಿತ ಸಲ್ಲದು. ವೇಷಧಾರಿಯ ಅರ್ಥ ನಿಂತ ಕೂಡಲೇ ಮದ್ಲೆಗಾರ ಛಾಪು ಹಾಕುವುದು ಕ್ರಮ. ಒಂದು ವೇಳೆ ಅರ್ಥದ ಮಧ್ಯೆ ಛಾಪು ಹಾಕಿದರೆ 'ಬೇಗ ಮುಗಿಸಿ' ಎನ್ನುವ ಸೂಚನೆ. ಎರಡನೇ ಛಾಪು ಬರುವಲ್ಲಿಯ ತನಕ ವೇಷಧಾರಿ ಅವಕಾಶ ಮಾಡಿಕೊಡಕೂಡದು. ಎರಡನೇ ಛಾಪು ಬಿತ್ತೋ, 'ಅರ್ಥ ನಿಲ್ಲಿಸಿ' ಎಂದರ್ಥ. ಒಂದು ಛಾಪಿನಲ್ಲಿ ಇಷ್ಟು ಅರ್ಥವಿದೆ. ಇದು ಮದ್ಲೆಗಾರರ ಅರ್ಹತೆ. ಆಕಸ್ಮಿಕವಾಗಿ ಹಾರ್ಮೋನಿಯಂ ಕೈಕೊಟ್ಟಿತು ಎಂದಾದರೆ ಮದ್ದಳೆಯ ಛಾಪಿನ ಶ್ರುತಿಯಲ್ಲೇ ಭಾಗವತ ಪದ್ಯ ಹಾಡಬೇಕು. ನಾನು ಹಾಡಿದ್ದೇನೆ.
               ಚೌಕಿ ಎನ್ನುವುದು ಕಲಾವಿದರ ಮನೆ. ಅದರೊಳಗೆ ಅನ್ಯರಿಗೆ ಪ್ರವೇಶವಿಲ್ಲ. ವೇಷಧಾರಿಗಳ ಪೆಟ್ಟಿಗೆಯ ಮೇಲೆ ಅನ್ಯರು ಬಿಡಿ, ವೇಷಧಾರಿಗಳೂ ಕುಳಿತುಕೊಳ್ಳಬಾರದು. ಕಾರಣ ಮತ್ತೇನಿಲ್ಲ. ಆ ಪೆಟ್ಟಿಗೆಯೊಳಗೆ ಆತ ಧರಿಸುವ ವೇಷಭೂಷಣಗಳು ಇವೆಯಲ್ಲಾ. ಅದಕ್ಕೆ ಪಾವಿತ್ರ್ಯ ಕೊಡುವ ದೃಷ್ಟಿಯಿಂದ ಹಿರಿಯ ಕಲಾವಿದರು ಈ ಶಿಸ್ತನ್ನು ಪಾಲಿಸುತ್ತಿದ್ದರು. ಚೌಕಿಯಲ್ಲಿ ಕಲಾವಿದರೊಳಗೆ ಏನಾದರೂ ಸಮಸ್ಯೆ ಬಂದರೆ ಪರಸ್ಪರ ಮಾತುಕತೆಯಿಂದ ಮುಗಿಸಬೇಕು.  ಭಾಗವತರ ತನಕ ದೂರು ಹೋದರೆ, ಭಾಗವತ ಈ ವಿವಾದವನ್ನು ಯಜಮಾನರಿಗೆ ತಲುಪಿಸಲೇಬೇಕು.  ಯಜಮಾನರಿಂದಲೇ ಕೊನೆಯ ತೀರ್ಪುು.
              ವೇಷಧಾರಿಗೆ ಬೇಕಾದಂತೆ ಮದ್ದಳೆಯನ್ನೋ, ಚೆಂಡೆಯನ್ನೋ ನುಡಿಸುವುದು ಯಕ್ಷಗಾನವಲ್ಲ. ನುಡಿತಗಳ ಚೌಕಟ್ಟಿನೊಳಗೆ ವೇಷವು ಕುಣಿದಾಗಲೇ ಅದು ಯಕ್ಷಗಾನ. ಪದ್ಯ ಹೇಳಲೂ ನಿಶ್ಚಿತವಾದ ಮಾನದಂಡವಿದೆ. ಲೆಕ್ಕಾಚಾರವಿದೆ. ಪಾರ್ತಿಸುಬ್ಬನ ಪ್ರಸಂಗವು ತುಂಬಾ ಸರಳ. ಪದ್ಯ ಹೇಳುವಾಗಲೇ ಅದು ಮಾತನಾಡಿದ ಹಾಗಿರಬೇಕು ಎನ್ನುವುದು ಕವಿಯ ಆಶಯ. ಪದ್ಯ ಹೇಳುವಾಗ ಒಂದು ಅಕ್ಷರ ಲೋಪ ಆಗಬಾರದು. ಅದು ಕವಿತಾ ದೋಷ. ಭಾಗವತನು ಕವಿಗೆ ಮಾಡುವ ಅವಮಾನ.
             ಬಲಿಪ ನಾರಾಯಣ ಭಾಗವತರು ಭೂತಕಾಲದ ರಂಗಕ್ಕೆ ದನಿಯಾದಾಗ ನಾನು ಕಿವಿಯಾದೆ. ಕೊನೆಗೆ ನನ್ನಲ್ಲಿ ಉಳಕೊಂಡದ್ದು ಬೆರಗು ಮಾತ್ರ.

Wednesday, September 6, 2017

ಮಾಸಿದ ನೆನಪು ಸೂಸುವ ಚೆಲ್ನಗು

ಪ್ರಜಾವಾಣಿಯ - ದಧಿಗಿಣತೋ - ಅಂಕಣ /9-6-2017

             ಹಳ್ಳಿ ಮನೆ. ಜಗಲಿನಲ್ಲಿ ಭಾಗವತ ಕೊರಗಪ್ಪ ನಾಯ್ಕರು ಕುಳಿತು ಯೋಚಿಸುತ್ತಿದ್ದಾರೆ. ಅತಿಥಿಗಳು ಬಂದಾಗ ಚೆಲ್ನಗು ಬೀರುತ್ತಾರೆ. ಅವರಾಗಿಯೇ ಮಾತನಾಡಲಿ ಎಂದು ನೀವು ಬಿಗುಮಾನ ತೊರಿದರೆ ಮತ್ತದೇ ನಗು ಮತ್ತು ಗೌರವ ಭಾವದ ಸ್ವಾಗತ.
            ಅವರ ನೆನಪಿನ ಗೆರೆಗಳು ಮಸುಕಾಗಿವೆ. ಅಪರೂಪಕ್ಕೆ ಗೆರೆಯು ಮಿಂಚಿ ಮರೆಯಾದಾಗ ವಿಷಣ್ಣ ಮುಖ ಅರಳುತ್ತದೆ, ಪುಳಕಗೊಳ್ಳುತ್ತಾರೆ. ನೆನಪುಗಳು ರಾಚಿ ಬರುತ್ತವೆ. ಅದನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಚಡಪಡಿಸುತ್ತಾರೆ. ನಿಮಿಷದ ಬಳಿಕ ಮತ್ತದೇ ಪೂರ್ವಸ್ಥಿತಿಯ ಸ್ಥಿತಪ್ರಜ್ಞತೆ.
           ಒಂದು ಕಾಲಘಟ್ಟದ ರಂಗದ ಬದುಕಿನಲ್ಲಿ ರಾತ್ರಿಯಿಡೀ ಭಾಗವತಿಕೆ ಮಾಡಿದ ನಾಯ್ಕರು ಮಾತನಾಡಲು ಅಶಕ್ತರು. ಒಂದೂವರೆ ದಶಕದಿಂದ ಬಾಧಿಸಿದ ಅಸೌಖ್ಯತೆ. ಆಸ್ಪತ್ರೆ ಅಲೆದಾಟದಿಂದ 'ಬಚ್ಚಿದ' ಬದುಕು. ಗುಣವಾಗುವ ನಿರೀಕ್ಷೆಯಲ್ಲಿ ಹಲವಾರು ವೈದ್ಯರುಗಳ ಭೇಟಿ. ನಿರಂತರ ಶುಶ್ರೂಷೆ. ಈಗ ಅತ್ತಿತ್ತ ನಡೆಯುವಷ್ಟು, ಗ್ರಹಿಸುವಷ್ಟು ಶಕ್ತ. ನೆನಪು ಮಾತ್ರ ದೂರ, ಬಹುದೂರ.
             ಅವರ ಸಮಕಾಲೀನ ಕಲಾವಿದರನ್ನು ನೆನಪಿಸಿಕೊಟ್ಟರೆ, ಕಳೆದ ದಿನಗಳು ಒಂದು ಕ್ಷಣ ನೆನಪಿನಂಗಳದಲ್ಲಿ ಕುಣಿಯುತ್ತಿತ್ತು. ಪ್ರಸಂಗವನ್ನು, ಪದ್ಯವನ್ನು ಜ್ಞಾಪಿಸಿದರೆ ಪದ್ಯದ ಸೊಲ್ಲನ್ನು ತಕ್ಷಣ ಹೇಳಿಬಿಡುತ್ತಾರೆ. ಸುತ್ತೆಲ್ಲಾ ಜರಗುತ್ತಿದ್ದ ತಾಳಮದ್ದಳೆಗಳ ಸ್ವಾರಸ್ಯ ಹೇಳಿದರೆ ಸ್ಪಂದಿಸುತ್ತಾರೆ. ಎಲ್ಲವೂ ನಿಮಿಷಾರ್ಧ. ಅಸ್ಪಷ್ಟ.
              ನಿವೃತ್ತ ಅಧ್ಯಾಪಕ, ಅರ್ಥಧಾರಿ ಬಿ.ಎಸ್.ಓಕುಣ್ಣಾಯರು ನಾಯ್ಕರ ಒಡನಾಡಿ. ಪಾಣಾಜೆ ಸುತ್ತಮುತ್ತ ನಡೆಯುತ್ತಿದ್ದ ಬಹುತೇಕ ತಾಳಮದ್ದಳೆಗಳಲ್ಲಿ ಕೊರಗಪ್ಪ ನಾಯ್ಕರದ್ದೇ ಭಾಗವತಿಕೆ. ಇವರಿಗೆ ನಿಕಟ ಸಂಪರ್ಕ. ಓಕುಣ್ಣಾಯರ ಜತೆ ಅವರ ಮನೆಗೆ ಭೇಟಿ ನೀಡಿದಾಗ ಇವರನ್ನು ಗುರುತಿಸುವಲ್ಲಿ ನಾಯ್ಕರು ಕಷ್ಟಪಟ್ಟಿದ್ದರು. ಗೊತ್ತಾದ ಬಳಿಕ ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದಿದ್ದರು.
                   ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ - ಖಂಡೇರಿಯು ಕೊರಗಪ್ಪ ನಾಯ್ಕರ ಹುಟ್ಟೂರು. ಪ್ರಸ್ತುತ ಸನಿಹದ ಅರೆಕ್ಕಾಡಿಯಲ್ಲಿ ಹಲವು ಸಮಯದಿಂದ ವಾಸ. ಈಗವರಿಗೆ ಎಪ್ಪತ್ತು ವರುಷ ದಾಟಿತು. ತಂದೆ ಐತು ನಾಯ್ಕ. ತಾಯಿ ಅಮ್ಮು. ಮೂರರ ತನಕ ವಿದ್ಯಾಭ್ಯಾಸ.
               ಬಾಲ್ಯದಿಂದಲೇ ಯಕ್ಷಗಾನದದ ಒಲವು. ಅದರಲ್ಲೂ ಭಾಗವತನಾಗಬೇಕೆಂಬ ಹಂಬಲ. ಕೇಳಿ ಕಲಿತುದೇ ಹೆಚ್ಚು. ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಪಾಠ. ಬಣ್ಣದ ಕುಂಞಿರಾಮರಿಂದ ನಾಟ್ಯಾಭ್ಯಾಸ. ಲಕ್ಷ್ಮಣ ಆಚಾರ್ಯರಿಂದ ಮದ್ದಳೆಯ ಕಲಿಕೆ. ಮುಂದೆ ನಿಡ್ಲೆ ನರಸಿಂಹ ಭಟ್ಟರು ಚೆಂಡೆಗೆ ಗುರುವಾದರು.
                ಯಕ್ಷ ಪ್ರಚಂಡರ ಜತೆಗಿದ್ದ ಅನುಭವವು ಕೊರಗಪ್ಪ ನಾಯ್ಕರ ಮೇಳ ಜೀವನದ ಸುಭಗತನಕ್ಕೆ ಹೊಸ ದಿಕ್ಕು ತೋರಿತು. ಮೂವತ್ತೇಳು ವರುಷ ಶ್ರೀ ಕಟೀಲು ಮೇಳವೊಂದರಲ್ಲೇ ತಿರುಗಾಟ. ಸಂಗೀತಗಾರನಾಗಿ ಪಡಿಮಂಚವೇರಿದ ಭಾಗವತ ಮುಂದೆ ಇಡೀ ರಾತ್ರಿ ಆಟವನ್ನು ಆಡಿಸುವ ತನಕ ನಿಷ್ಣಾತರಾದರು.
               ಕಟೀಲು ಮೇಳ ಸೇರುವ ಪೂರ್ವದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಒಂದು ವರುಷ, ಕುಂಡಾವಿನಲ್ಲಿ ಒಂದು ವರುಷ ಮತ್ತು ಪುತ್ತೂರು ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು.  ಮಳೆಗಾಲದಲ್ಲಿ ಸ್ಥಳೀಯವಾಗಿ ತಾಳಮದ್ದಳೆಗಳಲ್ಲಿ ಭಾಗಿಯಾಗುತ್ತಿದ್ದರು.
             ತಾಳಮದ್ದಳೆಯ ಬಿರುಬಿನ ಕಾಲ. ಮನೆಗಳಲ್ಲಿ ಶುಭ ಸಮಾರಂಭಗಳು ನಡೆದಾಗ ಅಲ್ಲೆಲ್ಲಾ ತಾಳಮದ್ದಳೆಗೆ ಮೊದಲ ಮಣೆ. ಉದ್ಧಾಮರ ಕೂಟಗಳು. ಆ ದಿನಗಳಲ್ಲಿ ನಾಯ್ಕರಿಗೆ ಬಿಡುವಿರದ ದುಡಿಮೆ. ಸಮಯ ಸಿಕ್ಕಾಗ ಆಸಕ್ತರಿಗೆ ಭಾಗವತಿಕೆ ಕಲಿಸಿಕೊಟ್ಟುದೂ ಇದೆ.
             'ಕರ್ನಾಟಕ ಮೇಳದಲ್ಲಿ ತುಳು ಪ್ರಸಂಗಗಳನ್ನು ಆಡುವ ಸಂದರ್ಭದಲ್ಲಿ ಇವರನ್ನು ವಿಶೇಷವಾಗಿ ಭಾಗವತಿಕೆಗೆ ಮೇಳದ ಯಜಮಾನರು ಆಹ್ವಾನಿಸುತ್ತಿದ್ದರು. ತುಳು ಭಾಷೆಯ ಕುರಿತು ಇವರಿಗಿದ್ದ ಅನುಭವವೇ ಇದಕ್ಕೆ ಕಾರಣ,' ಎಂದು ಗಂಡನಿಗೆ ಸಾಥ್ ಆಗುತ್ತಾರೆ ಮಡದಿ ಲಕ್ಷ್ಮೀ.
             ಅವರು ಈಗ ಹಾಡುವುದಿಲ್ಲ! ಅವರು ಹಾಡಿದ ಒಂದು ಕ್ಯಾಸೆಟ್ ಎಲ್ಲಾದರೂ ಸಿಕ್ಕರೆ ಅದು ದಾಖಲೆಯಾಗುತ್ತಿತ್ತು, ಎನ್ನುವ ಆಶಯ ಲಕ್ಷ್ಮೀಯವರಿಗಿದೆ. ಗಂಡನ ಆಸಕ್ತಿಯನ್ನು  ಗೌರವದಿಂದ ಕಾಣುವ, ಹೆಮ್ಮೆ ಪಟ್ಟುಕೊಳ್ಳುವ ಲಕ್ಷ್ಮೀಯವರ ಆಸೆ ಹುಸಿಯಾಗದು.
                ಪ್ರಸ್ತುತ ಲಕ್ಷ್ಮೀ ಗಂಡನಿಗೆ ಆಸರೆ. ನಾಯ್ಕರಿಗೆ ದನಿ. ಅಸ್ಪಷ್ಟ ಮಾತುಗಳಿಗೆ ಸ್ಪಷ್ಟತೆಯ ಸ್ಪರ್ಶ ನೀಡುವ ಮಾರ್ಗದರ್ಶಕಿ. ಸರಕಾರದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಲ್ಪಕಾಲ ಕೆಲಸ. ಮಗ ದೇವಿಪ್ರಸಾದ್ ಸ್ವ-ಉದ್ಯೋಗದ ದುಡಿಮೆ. ನಾಯ್ಕರ ಅಸೌಖ್ಯತೆಗೆ ಇವರೆಲ್ಲರ ದುಡಿಮೆಯಲ್ಲಿ ಏನಿಲ್ಲವೆಂದರೂ ತಿಂಗಳಿಗೆ ಒಂದು, ಒಂದೂವರೆ ಸಾವಿರ ರೂಪಾಯಿ ಔಷಧಿಗೆ ಮೀಸಲಿಡುವಂತಹ ಸ್ಥಿತಿ.
                ಭಾಗವತ ಕುಬಣೂರು ಶ್ರೀಧರ ರಾಯರು ತಾನು 1991ರಲ್ಲಿ ಕಟೀಲು ಮೇಳದಲ್ಲಿದ್ದಾಗ ಕೊರಗಪ್ಪ ನಾಯ್ಕರು ಸಹ ಭಾಗವತರಾಗಿದ್ದರು ಎಂದು ತಮ್ಮ ಅಭಿನಂದನಾ ಗ್ರಂಥ 'ಯಕ್ಷಭೃಂಗ'ದಲ್ಲಿ ಉಲ್ಲೇಖಿಸುತ್ತಾರೆ.
                ಸ್ನೇಹಿತರಾದ ಪ್ರಭಾಕರ ರಾವ್ ಉಡುಪಿ ಮತ್ತು ಪಿ.ಕೆ.ನಾಯ್ಕ್ ಶಿರೋಲ್ತಡ್ಕರು ಕಾಟುಕುಕ್ಕೆಯಲ್ಲಿ ಅವರಿಗೆ ಸಂಮಾನ ಕಾರ್ಯಕ್ರಮವನ್ನಿಟ್ಟುಕೊಂಡಿದ್ದರು. ಅದಕ್ಕಿಂತ ಒಂದೆರಡು ತಿಂಗಳ ಮೊದಲು ನಾಯ್ಕರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಅಂದು ಗುರುತು ಹಿಡಿದು ಖುಷಿಯಿಂದ ಮನಸ್ಸಿನಲ್ಲೇ ಮಾತನಾಡಿದ್ದರು. ತಕ್ಷಣ ಕಣ್ಣೀರಿನ ಅಭಿಷೇಕ. ಆ ಕ್ಷಣದಲ್ಲಿ ಸುತ್ತಲಿದದವರ ಕಣ್ಣು ಆದ್ರ್ರವಾಗಿತ್ತು.
             ಬದುಕಿಗೆ ಎರವಾದ ಅಸೌಖ್ಯತೆಯು ಕೊರಗಪ್ಪ ನಾಯ್ಕರ ಯಕ್ಷ ಬದುಕು ಮಾತ್ರವಲ್ಲದೆ ಭವಿಷ್ಯವನ್ನು ಕಿತ್ತುಕೊಂಡಿತ್ತು. ಅವರೊಬ್ಬ ಸಂಪನ್ಮೂಲ ವ್ಯಕ್ತಿಯಾಗುವುದು ವಿಧಿಗೆ ಇಷ್ಟವಿರಲಿಲ್ಲ. ನೆನಪನ್ನೇ ಕಸಿದುಕೊಳ್ಳಬೇಕೆ? ಬಹುಶಃ ರಂಗದಲ್ಲಿ ನಾಯ್ಕರು ಇರುತ್ತಿದ್ದರೆ ಈಗಿನಂತೆ ಅಭಿಮಾನಿಗಳನ್ನು ಹೊಂದಿರುತ್ತಿದ್ದರು. ಫೇಸ್ಬುಕ್ಕಿನಲ್ಲಿ ಪ್ರತ್ಯೇಕ ಅಭಿಮಾನಿ ಪುಟ ತೆರೆಯಲ್ಪಡುತ್ತಿತ್ತು. ಅವರ ಹಾಡನ್ನು ಕೇಳುತ್ತಾ 'ರಾಕಿಂಗ್' ಅಂತ ವಾಟ್ಸಾಪ್ ಗುಂಪುಗಳಲ್ಲಿ ಸಿಹಿಕಮೆಂಟ್ಗಳ ಮಹಾಪೂರವೇ ಹರಿಯುತ್ತಿತ್ತು!
             ಕಾಟುಕುಕ್ಕೆ ಕೊರಗಪ್ಪ ನಾಯ್ಕರ ಸೇವಾತತ್ಪರತೆಗೆ ಲಭ್ಯವಾದ ಪ್ರಶಸ್ತಿಗಳು ಹಲವು. ಕುಂಬಳೆಯ ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನ, ಬೊಂಡಾಳ ಪ್ರಶಸ್ತಿ, ಅಳಿಕೆ ರಾಮಯ್ಯ ರೈ ಸ್ಮಾರಕ ಪ್ರಶಸ್ತಿ, ಬೊಳ್ಳಿಂಬಳ ಪ್ರಶಸ್ತಿ, ಕಲಾರಂಗ ಪ್ರಶಸ್ತಿಗಳಲ್ಲದೆ; ವಿವಿಧ ಸಂಮಾನ, ಪುರಸ್ಕಾರಗಳು ಪ್ರಾಪ್ತವಾಗಿವೆ. ಬೊಳ್ಳಿಂಬಳ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ದಿನಪತ್ರಿಕೆಯಲ್ಲಿ ಬರೆದ ಲೇಖನವು ಅವರಿಗೊಂದಿಷ್ಟು ಸಂಮಾನಗಳನ್ನು, ಪ್ರಶಸ್ತಿಯನ್ನು ತಂದುಕೊಟ್ಟಿದೆ ಎನ್ನಲು ಖುಷಿಯಾಗುತ್ತದೆ.
              ಇಂದು ಅಶಕ್ತ ಕಲಾವಿದರಿಗೆ ಗೌರವಪೂರ್ವಕವಾದ ಸಂಮಾನಗಳು, ಸಹಕಾರಗಳು ಪ್ರಾಪ್ತವಾಗುವುದನ್ನು ನೋಡುತ್ತೇವೆ. ಪುರಾಣ, ಕಲೆ, ಸಂಸ್ಕಾರಗಳನ್ನು ನಂಬದ ಸರಕಾರದ ಇಲಾಖೆಗಳಿಗೆ ನಾಯ್ಕರಂತಹ ಕಲಾವಿದರು ಪರಿಚಯವಾಗುವುದಿಲ್ಲ.
                ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿ ಐದಾರು ವರುಷವಾಯಿತು, ಏನೂ ಪ್ರಯೋಜನವಾಗಿಲ್ಲ ಎಂದು ನೆನಪಿಸುತ್ತಾರೆ ಅವರ ಚಿರಂಜೀವಿ ದೇವಿಪ್ರಸಾದ್. ಕಲಾವಿದರಿಗೆ ಕಲಾಭಿಮಾನಿಗಳೇ ಆಸರೆ. ಅಭಿಮಾನವು ಅಶಕ್ತತೆಯಲ್ಲೂ ಪ್ರಕಟವಾದಾಗ ಮಾತ್ರ ಅಂತಹ ಅಭಿಮಾನಕ್ಕೆ ಗರಿಮೆ. ಏನಂತೀರಿ.

Tuesday, September 5, 2017

ರಂಗ-ಪ್ರಸಂಗ - ಸದ್ದಾಗಬೇಕಾದ ಸದ್ದಿಲ್ಲದ ಕೆಲಸ

ಪ್ರಜಾವಾಣಿಯ 'ದಧಿಗಿಣತೋ' ಅಂಕಣ /16-6-2017

                 ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನನಗೆ ಒಗಟಾಗಿ ಕಾಣಿಸುತ್ತಾರೆ! ತನ್ನ ವೃತ್ತಿ ಕ್ಷೇತ್ರದಲ್ಲಿ ದುಡಿಯುತ್ತಾ, ಆ ಕ್ಷೇತ್ರದ ಭವಿಷ್ಯದ ಮೆಟ್ಟಿಲಲ್ಲಿ ನಿಂತು ಯೋಚಿಸುವ ಮನಃಸ್ಥಿತಿ ಅವರಿಗೆ ಹೇಗೆ ಬಂತೋ ಗೊತ್ತಿಲ್ಲ! ಈ ಎರಡು ವಾಕ್ಯಗಳಿಗೆ ಅನ್ಯಥಾ ಭಾವಿಸದಿರಿ.
                 ಒಬ್ಬ ಕಲಾವಿದ ಸರಿಸುಮಾರು ಆರು ತಿಂಗಳು ಹಗಲನ್ನು ರಾತ್ರಿಯಾಗಿಯೂ, ರಾತ್ರಿಯನ್ನು ಹಗಲಾಗಿಯೂ ಒಪ್ಪಿಕೊಂಡು ದುಡಿಯಬೇಕಾಗುತ್ತದೆ. ರಾತ್ರಿ ರಂಗದಲ್ಲಿ ಕುಣಿದರೆ, ಹಗಲು ವಿಶ್ರಾಂತಿ ಪಡೆಯುವುದು ಅನಿವಾರ್ಯ. ಇಂತಹ ಸ್ಥಿತಿಯಲ್ಲಿ ಕಲಾವಿದನಿಗೆ ಅಧ್ಯಯನವಾಗಲೀ, ಹೊರ ಪ್ರಪಂಚದ ಗಾಢ ಆಗು ಹೋಗುಗಳತ್ತ ನಿಗಾ ವಹಿಸುವುದು ಕಷ್ಟವಾಗುತ್ತದೆ. ಏನಿದ್ದರೂ ಮಳೆಗಾಲದ ಬಿಡುವಿನ ಅವಧಿಯಲ್ಲಿ ಕಲಿಕೆ, ಓದಿನತ್ತ ಗಮನ. ಎಷ್ಟು ಮಂದಿ ಹೀಗಿರುತ್ತಾರೆ ಎನ್ನುವುದು ಬೇರೆ ವಿಚಾರ. ಕಾಲಮಿತಿ ಪ್ರದರ್ಶನಗಳು ಬಂದ ಬಳಿಕ ವಿಶ್ರಾಂತಿಗೆ ತೊಂದರೆಯಾಗಿಲ್ಲ.
                 ಸರಿ, ಕೆಲವು ಮೇಳಗಳಲ್ಲಿ ಗಮನಿಸುತ್ತಿದ್ದೇನೆ. ದೇವೇಂದ್ರನ ಬಲ (ಅಗ್ನಿ, ವರುಣ, ವಾಯು), ರಾಕ್ಷಸ ಬಲ ಪಾತ್ರಗಳನ್ನು ಮಾಡುವ ಎಳೆಯ ಮನಸ್ಸುಗಳು ಐದಾರು ವರುಷದಿಂದಲೂ ಅದೇ ಪಾತ್ರವನ್ನು ಮಾಡುತ್ತಾರೆಂದರೆ ಬೌದ್ಧಿಕತೆಯ ಕ್ಷೀಣತೆ ಎಂದರೆ ತಪ್ಪಾಗಲಾರದು. ಬೌದ್ಧಿಕವಾಗಿ ಮೇಲೇರದೆ ಪಾತ್ರವನ್ನು ನಿಭಾಯಿಸುವ, ನಿರ್ವಹಿಸುವುದಾದರೂ  ಎಂತು? ಕಲಾವಿದ ಅಂದರೆ ವೇಷ ತೊಟ್ಟು ರಂಗದಲ್ಲಿ ಕುಣಿಯುವುದು ಮಾತ್ರ ಅಲ್ಲವಲ್ಲಾ. ವೇಷ ತೊಡುವ ಹಿನ್ನೆಲೆಯಲ್ಲಿ ತನ್ನಲ್ಲಿ ಆವಾಹಿಸಿಕೊಳ್ಳಬೇಕಾದ ಅನೇಕ ಅಂಶಗಳಿವೆ. ಇದರತ್ತ ಉದಾಸೀನತೆಯನ್ನು ತೋರುವ ಮಂದಿ ಎಷ್ಟು ಬೇಕು? ಇಂತಹ ಕಲಾವಿದ ನಿಂತ ನೀರಿನಂತೆ. 'ಇಂತಹ ಮೇಳದಲ್ಲಿ ಇಂತಿಷ್ಟು ವರುಷ ತಿರುಗಾಟ ಮಾಡಿದ್ದೇನೆ' ಎನ್ನುವ ಬಯೋಡಾಟ ಬರೆಯಬಹುದಷ್ಟೇ.
                   ತಿರುಗಾಟ ಮಾಡಿದ ಮೇಳದಲ್ಲಿ ಎಂತಹ ಪಾತ್ರ ಮಾಡುತ್ತಿದ್ದರು? ಮಾಡಿದ ಪಾತ್ರವನ್ನು ರಂಗ ಒಪ್ಪಿತ್ತೇ? ಜನ ಸ್ವೀಕೃತಿ ಪಡೆದಿದೆಯಾ? ಎಲ್ಲಕ್ಕಿಂತ ಮುಖ್ಯವಾಗಿ ಅದು ಯಕ್ಷಗಾನವಾಗಿತ್ತೇ? ಇವೇ ಮೊದಲಾದ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳು ಕಲಾವಿದನೊಬ್ಬರ ಉತ್ಕರ್ಷಕ್ಕೆ ಹಾದಿಯಾಗುತ್ತದೆ. ಯಕ್ಷಗಾನದ ಅಭ್ಯಾಸಿಗಳಿಗೆ ಇಂದು ತರಬೇತಿಗಳು ಸಾಕಷ್ಟಿವೆ. ಅನುಭವಿ ಕಲಾವಿದರು ಗುರುಗಳಾಗಿ ಒದಗುತ್ತಾರೆ. ಒಂದೆರಡು ವರುಷದ ತರಬೇತಿಯ ಬಳಿಕ ಅಭ್ಯಾಸಿಯೇ ತಾನು ಕಲಾವಿದನಾಗಲು ಬೇಕಾದ ಬೌದ್ಧಿಕತೆಯನ್ನು ರೂಢಿಸಿಕೊಳ್ಳಬೇಕು. ಮೊದಲೆಲ್ಲಾ ಹಿರಿಯರೊಂದಿಗಿದ್ದು ಕಲಿಯಬೇಕಾದ ವಾತಾವರಣವಿತ್ತು. ಅಂತಹ ಹೊತ್ತಲ್ಲಿ ಪಾತ್ರದ ಸಮಗ್ರ ಚಿತ್ರವು ಪ್ರಾಕ್ಟಿಕಲ್ ಮೂಲಕ ಕಲಾವಿದ ಕಲಿಯಬಹುದಾಗಿತ್ತು.  ಇಂದೂ ಇಲ್ಲವೆಂದಲ್ಲ. ಆದರೆ ಕಲಿಯುವ ಆಸಕ್ತಿ ಅಭ್ಯಾಸಿಗಳಿಗಿದೆಯೇ? "ಮೊಬೈಲ್ ಕೈಗೆ ಬಂದ ಮೇಲೆ ಬಾಲ ಕಲಾವಿದರಿಗೆ ರಂಗ ಕಲಿಕೆಯತ್ತ ಆಸಕ್ತಿ ಕಡಿಮೆಯಾಗಿದೆ. ಸ್ಮಾರ್ಟ್ ಫೋನನ್ನು ಉಜ್ಜುವುದರಲ್ಲೇ ಕಾಲ ಕಳೆಯುತ್ತಾರೆ" ಎಂದು ಕಲಾವಿದ ಪೆರ್ಮುುದೆ ಜಯಪ್ರಕಾಶ್ ಶೆಟ್ಟಿಯವರು ಆಟದ ಚೌಕಿಯಲ್ಲೊಮ್ಮೆ ಗೊಣಗಾಡಿದ ಕ್ಷಣ ನೆನಪಾಗುತ್ತದೆ.  
                ರಾಮಕೃಷ್ಣ ಮಯ್ಯರು ಇಂತಹ ಯಕ್ಷ ಅಭ್ಯಾಸಿಗಳಿಗೆ, ಕುತೂಹಲಿಗಳಿಗೆ ಅನುಕೂಲವಾಗಲೆಂದು 'ರಂಗ-ಪ್ರಸಂಗ' ಎನ್ನುವ ಸರಣಿಯನ್ನು ಆರಂಭಿಸಿದ್ದಾರೆ. ಸರಣಿಯ ನಾಲ್ಕನೇ ಪ್ರದರ್ಶನವು ೨೦೧೭ ಜೂನ್ 10ರಂದು ಉಡುಪಿ ರಾಜಾಂಗಣದಲ್ಲಿ ಜರುಗಿತು. ಕಲಿಯಬೇಕೆನ್ನುವ ಹಟವಿದ್ದವರಿಗೆ, ರಂಗ ನಡೆಗಳನ್ನು ನೋಡಬೇಕೆನ್ನುವ ಕುತೂಹಲಿಗಳಿಗೆ, ಪ್ರಸಂಗವೊಂದರ ಓಟವನ್ನು ಕವಿಯ ಆಶಯದಂತೆ ಪ್ರಸ್ತುತಪಡಿಸುವ ಕ್ಷಣಗಳಿಗೆ ಸಾಕ್ಷಿಯಾದರೆ ಕಲಾವಿದ ಬೌದ್ಧಿಕತೆಯತ್ತ ಸಾಗುತ್ತಿದ್ದಾನೆ ಎನ್ನಬಹುದೇನೋ? ಇದಕ್ಕೆ ಸರಿಯಾದ ಹಾದಿಯನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ತೋರುತ್ತಿದ್ದಾರೆ.
                ಒಂದೆರಡು ಪ್ರದರ್ಶನವನ್ನಿಟ್ಟು, ಆ ಪ್ರಸಂಗದ ಸರ್ವಾಂಗೀಣ ಆಶಯ, ರಂಗತಂತ್ರಗಳು, ಪ್ರಸ್ತುತಿ ವಿಧಾನ, ಅರ್ಥಗಾರಿಕೆಯ ವ್ಯಾಪ್ತಿಗಳನ್ನು ದಾಖಲಿಸುತ್ತಾರೆ. ಹೀಗೆ ದಾಖಲಾತಿಯ ಮುನ್ನ ಹಿರಿಯರ ಜತೆ ಸಮಾಲೋಚಿಸುತ್ತಾರೆ. ಪ್ರಸಂಗದ ಪಾತ್ರಗಳಿಗೆ ಒಪ್ಪುವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರದರ್ಶನ ಪೂರ್ವದಲ್ಲಿ ಸಮಾಲೋಚನೆ ಮಾಡುತ್ತಾರೆ. ಪ್ರಸಂಗ, ದೃಶ್ಯಾವಳಿಗಳನ್ನು ಪ್ರತ್ಯೇಕವಾಗಿ ಪ್ರತಿ ಮಾಡಿ ಕಲಾವಿದರ ಕೈಗಿಡುತ್ತಾರೆ.  ಪ್ರದರ್ಶನವೊಂದರ ಯಶದ ಹಿಂದೆ ಇಷ್ಟೆಲ್ಲಾ ಯತ್ನಗಳು ನೇಪಥ್ಯದಲ್ಲಿ ನಡೆಯುತ್ತದೆ. ಆರಂಭದಲ್ಲಿ ನಾನು ಉಲ್ಲೇಖಿಸಿದಂತೆ ಯಕ್ಷಗಾನದ ಭವಿಷ್ಯದ ಮೆಟ್ಟಿಲಲ್ಲಿ ನಿಂತು ಮಯ್ಯರು ಯೋಚಿಸಿದ್ದರಿಂದ ಅವರಿಗೆ ಆಯೋಜನೆ ಸಾಧ್ಯವಾಯಿತು. ಯಾಕೆಂದರೆ ತಾನು ಮಾಡುವ ಕೆಲಸದಲ್ಲಿ ಸ್ಪಷ್ಟ ಫಲಿತಾಂಶವನ್ನು ಪಡೆವ ನಿರೀಕ್ಷೆಯಿದೆ.
                  ಉಡುಪಿಯಲ್ಲಿ 'ಬ್ರಹ್ಮಕಪಾಲ, ಸೈಂದವ ವಧೆ ಮತ್ತು ಇಂದ್ರಜಿತು' ಪ್ರಸಂಗಗಳನ್ನು ದಾಖಲಾತಿಗೆ ಒಳಪಡಿಸಲಾಗಿತ್ತು. ಕುರಿಯ ಗಣಪತಿ ಶಾಸ್ತ್ರಿಗಳು, ಬಲಿಪ ನಾರಾಯಣ ಭಾಗವತರು, ಪ್ರಸಾದ್ ಬಲಿಪ, ಶಿವಶಂಕರ ಬಲಿಪರು ಪ್ರಸಂಗವನ್ನು ಮುನ್ನಡೆಸಿದ್ದರು. ಮುಖ್ಯವಾಗಿ 'ಸೈಂದವ ವಧೆ' ಪ್ರಸಂಗವು ರಂಗತಾಂತ್ರಿಕತೆಯನ್ನು ಹೊಂದಿದ ಆಖ್ಯಾನ. ಕುರುಕ್ಷೇತ್ರ ಯುದ್ಧದ ಮಧ್ಯೆ ಬರುವ ಸಣ್ಣ ಪ್ರಸಂಗ. ಅದರಲ್ಲಿ ಬರುವ ಪಾತ್ರಗಳು, ಪಾತ್ರಗಳ ಕುಶಲತೆಗಳು, ತಾಂತ್ರಿಕ ಜಾಣ್ಮೆ, ಚಿಕ್ಕ ಪುಟ್ಟ ಕುಸುರಿಗಳು ಪ್ರಸಂಗದ ಜೀವಾಳ. ಹಿರಿಯರಾದ ಬಲಿಪರು ಕಲಾವಿದರನ್ನೆಲ್ಲಾ ಕುಳ್ಳಿರಿಸಿಕೊಂಡು ಪಾತ್ರದ ನಡೆಯವನ್ನು ಹೇಳಿದ್ದರಿಂದ ಪ್ರಸಂಗ ಯಶ ಕಂಡಿತು.
                  ಪ್ರದರ್ಶನದಂದು ಸಂಜೆ ಬಲಿಪ ಭಾಗವತರ ಸುತ್ತ ಕಲಾವಿದರು ಸುತ್ತುವರಿದಿದ್ದರು. ಎಲ್ಲರ ಕೈಯಲ್ಲೂ ಪ್ರಸಂಗ ಪಠ್ಯದ ಪ್ರತಿಯಿತ್ತು. ಪ್ರಸಂಗದ ನಡೆಯನ್ನು ಬಲಿಪರು ಹೇಳುತ್ತಾ ಹೋದಂತೆ ಮೂಡಿದ ಸಂಶಯಕ್ಕೆ ಅಲ್ಲಲ್ಲೇ ಪರಿಹಾರ ಹೇಳುತ್ತಿದ್ದರು. "ಇಂತಹ ಸಮಾಲೋಚನೆಗಳು ಪ್ರಸಂಗವೊಂದರ ಯಶಕ್ಕೆ ಮುಖ್ಯ ಕಾರಣವಾಗುತ್ತದೆ. ಮೇಳಗಳಲ್ಲೂ ಕೂಡಾ ಸಮಾಲೋಚನೆ ಬೇಕು. ರಂಗದಲ್ಲಿ ಎದುರಾಗುವ ಪಾತ್ರಗಳ ಕುರಿತು ಕಲಾವಿದರು ಸಮಾಲೋಚನೆಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಇಂತಹ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಎಷ್ಟು ಮಂದಿಗೆ ಇಂತಹ ಮನಃಸ್ಥಿತಿ ಇದೆ," ಎಂದು ಪ್ರಶ್ನಿಸುತ್ತಾರೆ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು.
                     ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇದರ ಆಶ್ರಯದಲ್ಲಿ ರಾಮಕೃಷ್ಣ ಮಯ್ಯರು ಯಕ್ಷ ದಾಖಲಾತಿ ಮಾಡುತ್ತಿದ್ದಾರೆ. ಅವರ ಆಶಯವನ್ನು ಅರ್ಥಮಾಡಿಕೊಂಡ ಬಳಗವು ಅವರೊಂದಿಗಿದೆ. ಯಾವುದೇ 'ಇಸಂ'ಗಳಿಗೆ ಒಳಗಾಗದೆ, 'ಗುಂಪಿನಲ್ಲಿ' ಕಾಣಿಸಿಕೊಳ್ಳದ ಮಯ್ಯರ ಯಕ್ಷ ಕಾಳಜಿಗೆ ಶರಣು. ಒಂದೊಂದು ಪ್ರದರ್ಶನದ ವ್ಯವಸ್ಥೆಗೆ ಲಕ್ಷಗಟ್ಟಲೆ ಹಣ ಬೇಕಾಗುತ್ತದೆ. ದಾನಿಗಳಿಂದ ಹೇಗೋ ಹೊಂದಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸ್ವಂತ ದುಡಿಮೆಯ ಗಳಿಕೆಯನ್ನೂ ವಿನಿಯೋಗಿಸಿದ್ದಿದೆ.
                  ಇಂತಹ ದಾಖಲಾತಿಗಳು ಅಭ್ಯಾಸಿಗಳಿಗೆ ಕೈತಾಂಗು ಇದ್ದಂತೆ. ಕುರಿಯ, ಬಲಿಪರಂತಹ ಹಿರಿಯ ಭಾಗವತರ ನಿರ್ದೇಶನಗಳು ದಾಖಲೀಕರಣಕ್ಕೊಂಡು ತುರಾಯಿ ಇದ್ದಂತೆ. ರಂಗದ ಒಂದು ವ್ಯವಸ್ಥೆಯು ಈ ಇಬ್ಬರಲ್ಲೂ ಹಲವು ಕಾಲದಿಂದ ಹರಿದು ಬಂದಿದ್ದು, ಅದನ್ನು ಉಳಿಸುವ, ಬೆಳೆಸುವ ಮತ್ತು ಭವಿಷ್ಯಕ್ಕೆ ಹಸ್ತಾಂತರಿಸುವ ರಾಮಕೃಷ್ಣ ಮಯ್ಯರ ಶ್ರಮಕ್ಕೆ ನಾವೆಲ್ಲಾ ಕೈಜೋಡಿಸಬೇಕು.
                    ಲೇಖನಾರಂಭದಲ್ಲಿ ಹೇಳಿದಂತೆ ರಾಮಕೃಷ್ಣ ಮಯ್ಯರು ಒಗಟಾಗಿ ಕಾಣುವುದು ಈ ಎಲ್ಲಾ ಕಾರಣಗಳಿಂದ. ಒಬ್ಬ ಭಾಗವತನಾಗಿ ಎಲ್ಲರಂತೆ ತನ್ನ ಪಾಳಿಯಲ್ಲಿ 'ಡ್ಯೂಟಿ' ಮುಗಿಸಿ ಚೌಕಿಯಲ್ಲಿ ಗಡದ್ದಾಗಿ ನಿದ್ದೆ ಮಾಡಬಹುದಿತ್ತು. ಯಕ್ಷಗಾನ ಹೇಗೂ ಇರಲಿ, ಹೇಗೂ ಸಾಗಲಿ, ನಾನಿರುವುದೇ ಹೀಗೆ ಎನ್ನುವ ಮನಃಸ್ಥಿತಿಯನ್ನು ಹೊಂದಬಹುದಾಗಿತ್ತು. ಮಾನವ ಸಹಜ ಎಂದೆನ್ನುವ ಪರದೂಷಣೆ, ನಿಂದೆ, ಗೇಲಿ ಮತ್ತು ಸ್ವ-ವೈಭವದಲ್ಲಿ ಕಾಲ ಕಳೆಯಬಹುದಾಗಿತ್ತು. ಆದರೆ ತನಗೆ ಅನ್ನ ಕೊಟ್ಟ, ಕೀರ್ತಿ ನೀಡಿದ ರಂಗಕ್ಕೆ ನ್ಯಾಯ ಸಲ್ಲಿಸುವ ಮನಃಸ್ಥಿತಿಯು ಅವರಿಗೆ ಹಿರಿಯ ಬಳುವಳಿ. ಅಂತಹ ಚೇತನಗಳ ಅದರ್ಶದಡಿ ಬದುಕನ್ನು ರೂಪಿಸಿದ ರಾಮಕೃಷ್ಣ ಮಯ್ಯರ ಇಂತಹ ಸದ್ದಿಲ್ಲದ ಕೆಲಸವೂ ದಾಖಲಾಗಬೇಡವೇ? 
(ಚಿತ್ರ: ಉದಯ ಕಂಬಾರ್, ನೀರ್ಚಾಲು)


ರಂಗ-ಪ್ರಸಂಗ ಆಶಯ - ಹಳೆಯ ಪ್ರಸಂಗಗಳಿಗೆ ಮರುಜೀವ




ಉದಯವಾಣಿ-ಕಲಾವಿಹಾರದಲ್ಲಿ ಪ್ರಕಟಿತ - 23-6-2017

               ಉಡುಪಿಯ ರಾಜಾಂಗಣದಲ್ಲಿ 'ರಂಗ-ಪ್ರಸಂಗ' ಎನ್ನುವ ಯಕ್ಷಗಾನ ದಾಖಲಾತಿ ಕಲಾಪ. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ)ದ ಆಯೋಜನೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಕಲ್ಪನೆ. ಮೂರು ಯಕ್ಷಗಾನ ಪ್ರಸಂಗಗಳ ಪ್ರಸ್ತುತಿ.
            ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ 'ಬ್ರಹ್ಮಕಪಾಲ', ಬಲಿಪ ನಾರಾಯಣ ಭಾಗವತರ ಸಾರಥ್ಯದಲ್ಲಿ 'ಸೈಂದವ ವಧೆ' ಪ್ರಸಂಗಗಳ ಪ್ರದರ್ಶನ. ಈ ಪ್ರಸಂಗಕ್ಕೆ ಬಲಿಪ ಪ್ರಸಾದ್, ಬಲಿಪ ಶಿವಶಂಕರ ಇವರ ಸಾಥ್. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆಯಲ್ಲಿ 'ಇಂದ್ರಜಿತು' ಪ್ರಸಂಗ. ಮೊದಲ ಮತ್ತು ಕೊನೆಯ ಪ್ರಸಂಗಗಳು ಬಹುತೇಕ ಚಾಲ್ತಿಯಲ್ಲಿರುವ ಆಖ್ಯಾನಗಳು. ಎರಡನೆಯದು ಮಾತ್ರ ಎಕ್ಸ್ಕ್ಲೂಸಿವ್.
                ಪ್ರಸಂಗವೊಂದು ರಂಗಪ್ರಯೋಗವಾಗಲು ಹಲವು ಯೋಚನೆ, ಯೋಜನೆಗಳ ಒಳಸುರಿಗಳನ್ನು ಬೇಡುತ್ತದೆ. ಪ್ರಸಂಗಗಳ ಅರಿವು ಕಲಾವಿದರಿಗೆ ಇರಬೇಕಾದುದು ಅಗತ್ಯ. ಚಾಲ್ತಿಯ ಪ್ರಸಂಗವಾದರೆ ಓಕೆ. ಐದತ್ತು ನಿಮಿಷದ ಸಮಾಲೋಚನೆಯಲ್ಲಿ ಮಾನಸಿಕವಾಗಿ ರಂಗಚಲನೆಯ ಚಿತ್ರದಚ್ಚು ಸಿದ್ಧವಾಗಿರುತ್ತದೆ. ಹೊಸ ಪ್ರಸಂಗಗಳಿಗೆ ಇಂತಹ ಸಲೀಸುತನವಿಲ್ಲ ಮತ್ತು ಹಗುರವಾಗಿ ಕಾಣಲು ಪ್ರಸಂಗ ಬಿಡದು.
             'ಸೈಂದವ ವಧೆ' ಪ್ರಸಂಗದ ಕಥಾನಕ ಚಿಕ್ಕದು. ಹೇಳುವಂತಹ ಗಾಢ ಸಂದೇಶಗಳಿಲ್ಲದ ಪ್ರಸಂಗ. ಅಭಿಮನ್ಯು ಕಾಳಗದ ಮುಂದುವರಿದ ಭಾಗ. ಪ್ರಸಂಗದ ಪೂರ್ವಾರ್ಧದಲ್ಲಿ ದುಃಖ, ಕರುಣ ರಸಗಳ ಸನ್ನಿವೇಶಗಳು. ಉತ್ತರಾರ್ಧದಲ್ಲಿ ತಾಂತ್ರಿಕ ರಂಗಚಲನೆಯುಳ್ಳ ಯುದ್ಧ ಭಾಗಗಳು. ಸ್ವಲ್ಪ ಕ್ಲಿಷ್ಟ ಅನ್ನಿಸುವ  ಸಂದರ್ಭಗಳು. ಬಲಿಪ ನಾರಾಯಣ ಭಾಗವತರು ತಮ್ಮ ದಕ್ಷ ನಿರ್ದೇಶನದಲ್ಲಿ ಪ್ರಸಂಗವನ್ನು ಮುನ್ನಡೆಸಿ ಮುಗಿಸಿದಾಗ ಸಿರಿಬಾಗಿಲು ಮಯ್ಯರು ಖುಷ್!
              ಮಯ್ಯರ ಖುಷಿಗೆ ಕಾರಣ ಇಲ್ಲದಿಲ್ಲ. ಮೂರ್ನಾಲ್ಕು ತಿಂಗಳಿನಿಂದಲೇ ಸೈಂದವ ಅವರನ್ನು ಕಾಡಿದ್ದ, ಪೀಡಿಸಿದ್ದ ಕೂಡಾ! ಪ್ರಸಂಗದ ನಡೆ ಗೊತ್ತಿತ್ತೇ ವಿನಾ ರಂಗಪ್ರಯೋಗ ಮತ್ತು ಅದರ ಫಲಿತಾಂಶದ ಕುರಿತು ನಿಖರತೆ ಇದ್ದಿರಲಿಲ್ಲ. ತಾಂತ್ರಿಕ ಪ್ರಸಂಗವಾದ್ದರಿಂದ ಕಲಾವಿದರನ್ನು ಸಂಘಟಿಸುವುದೂ ಕಷ್ಟದ ಕೆಲಸವೇ. ಪಾತ್ರಕ್ಕೆ ಸರಿಯಾದ ಕಲಾವಿದರ ಆಯ್ಕೆಯೂ ಒಂದು ಸವಾಲು. ಆಪ್ತ ಕಲಾವಿದರೊಂದಿಗೆ ಮಾತುಕತೆ, ಹಿರಿಯ ಕಲಾವಿದರಿಂದ ಮಾಹಿತಿಗಳನ್ನು ಕಲೆಹಾಕುವ ಕೆಲಸ ಸಣ್ಣದಲ್ಲ.
              ಪ್ರದರ್ಶನಕ್ಕಿಂತ ಮುಂಚಿತವಾಗಿ ಬಲಿಪರು 'ಸೈಂದವ ವಧೆ' ಪ್ರಸಂಗದಲ್ಲಿ ಬಣ್ಣ ಹಚ್ಚುವ ಕಲಾವಿದರೊಂದಿಗೆ ಪ್ರಸಂಗದ ನಡೆ ಮತ್ತು ರಂಗಚಲನೆಯ ಮಾಹಿತಿಯನ್ನು ಹಂಚಿಕೊಂಡರು. ಯಾವ್ಯಾವ ಪಾತ್ರಕ್ಕೆ ಎಷ್ಟೆಷ್ಟು ಪದ್ಯ, ತಾಂತ್ರಿಕ ಮಾಹಿತಿ, ಪದ್ಯ ಸಾಗುವ ವಿಧಾನ.. ಹೀಗೆ ಸೂಕ್ಷ್ಮ ವಿಚಾರದತ್ತ ಅರ್ಥವಾಗುವಂತಹ ಮಾಹಿತಿ ನೀಡಿದ್ದು ಮತ್ತು ಆ ಮಾಹಿತಿಯಂತೆ ಕಲಾವಿದರು ರಂಗದಲ್ಲಿ ಅಭಿನಯಿಸಿದ್ದರ ಪರಿಣಾಮದಿಂದ ಸೈಂದವ ಗೆದ್ದ! ಪ್ರಸಂಗದ ಆಶಯದಂತೆ ಅರ್ಜುನ ಮತ್ತು ಕೃಷ್ಣನಿಗೆ ಸೈಂದವನನ್ನು ಕೊಲ್ಲಲು ಬರೋಬ್ಬರಿ ಮೂರುವರೆಯಿಂದ ನಾಲ್ಕು ತಾಸು ಬೇಕಾಯಿತು!
             ಈ ಪ್ರಸಂಗದ ಹಿನ್ನೆಲೆಯಲ್ಲಿ ಬಲಿಪರನ್ನು ಮಾತಿಗೆ ಎಳೆದೆ - ಮೊದಲು ಈ ರೀತಿಯ ಏರುಗತಿಯ ಪ್ರಸಂಗಗಳನ್ನು ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸಲು ಆಡಿಸುತ್ತಿದ್ದರು. ನಾನು ಗಾಂಧಿ (ಬಣ್ಣದ) ಮಾಲಿಂಗ, ಕುಟ್ಯಪ್ಪು, ಗೇರುಕಟ್ಟೆ ಗಂಗಯ್ಯ ಶೆಟ್ರು - ಈ ಮೂವರು ಬೇರೆ ಬೇರೆ ಸಂದರ್ಭದಲ್ಲಿ ಮಾಡಿದ ಸೈಂದವ ಪಾತ್ರಗಳಿಗೆ (ಪ್ರಸಂಗಗಳಿಗೆ) ಪದ್ಯ ಹೇಳಿದ್ದೇನೆ. ಈಚೆಗಂತೂ ತೀರಾ ಅಪರೂಪವಾಗಿದೆ. ಇಂತಹ ಪ್ರಸಂಗಕ್ಕೆ ರಂಗ ಮಾಹಿತಿ ಜಾಸ್ತಿ. ಅದಕ್ಕೆ ಪೂರಕವಾಗಿ ರಂಗದ ಪರಿಚಾರಕರಾದ 'ನೇಪಥ್ಯ ಕಲಾವಿದ'ರಿಗೂ ಪ್ರಸಂಗದ ಜ್ಞಾನ ಬೇಕು. ಮೊದಲು ರಂಗದ ಹಿಂದೆ ದುಡಿಯುವ ಸಹಾಯಕರಿಗೆ ಯಾವುದೇ ಪ್ರಸಂಗದ ಜ್ಞಾನವಿತ್ತು
              ಸೈಂದವ ವಧೆಯಂತಹ ತಾಂತ್ರಿಕಾಂಶಗಳನ್ನು ಬೇಡುವ ಪ್ರಸಂಗಗಳು ಬೇಕಾದಷ್ಟಿವೆ. ಉದಾ: ಸೇತುಬಂಧ, ಅಂಗದ ಸಂಧಾನ ಪ್ರಸಂಗಗಳು ತಾಳಮದ್ದಳೆಯಲ್ಲಿ ಜನಪ್ರಿಯವಾಗಿವೆ. ಹಿಂದೆ ಈ ಪ್ರಸಂಗಗಳನ್ನೂ ಆಡುತ್ತಿದ್ದ ನೆನಪು ಬಲಿಪರಿಗಿದೆ. ಬದಲಾದ ರಂಗ ಮತ್ತು ಸಾಮಾಜಿಕ ಮನಃಸ್ಥಿತಿಗಳಲ್ಲಿ ಸೈಂದವ ವಧೆ ಪ್ರಸಂಗ ಯಾಕೆ ಇಷ್ಟವಾಗುವುದಿಲ್ಲ? ಬಲಿಪರು ಹೇಳುತ್ತಾರೆ, ಅಭಿಮನ್ಯು ಕಾಳಗದ ಒತ್ತಿಗೆ ಬರುವ ಪ್ರಸಂಗವಿದು. ಇದರಲ್ಲಿ ಯಾವುದೆಲ್ಲಾ ಪಾತ್ರಗಳು ರಂಗಕ್ಕೆ ಬರುತ್ತವೋ ಅವೆಲ್ಲವೂ ಮುಂದಿನ ಪ್ರಸಂಗದಲ್ಲಿ ಮುಂದುವರಿಯಬೇಕಾಗುತ್ತದೆ. ಉದಾ: ಅರ್ಜುನ. ಪ್ರಸಂಗದ ಪೀಠಿಕೆಗೆ ಪ್ರವೇಶ. ಸೈಂದವ ವಧೆಯ ಬಳಿಕವೇ ಆತ ವೇಷ ಕಳಚಬೇಕು. ಅಷ್ಟು ಹೊತ್ತು ಅಂದರೆ ಇಡೀ ರಾತ್ರಿ ಒಬ್ಬನೇ ವೇಷ ಮಾಡುವುದೂ ತ್ರಾಸ. ಹಾಗಾಗಿ ಈ ಪ್ರಸಂಗ ಕಲಾವಿದರ ವಿಶ್ವಾಸ ಗಳಿಸಲಿಲ್ಲ!
             ಹೌದು. ಇದು ಒಂದು ಪ್ರಸಂಗದಲ್ಲಿ ಬರುವ ಕೆಲವೊಂದು ಪಾತ್ರಗಳು ಇಬ್ಬರಲ್ಲೋ, ಮೂವರಲ್ಲೋ ಹಂಚಿ ಹೋಗುವ ಕಾಲಸ್ಥಿತಿ. ಹಿಂದೆ ಮೇಳಗಳಲ್ಲಿ ಕಲಾವಿದರ ಸಂಖ್ಯೆ ಕಡಿಮೆ. ಈಗ ಜಾಸ್ತಿ. ಸಂಖ್ಯೆ ಕಡಿಮೆಯಿದ್ದಾಗ ಅಜ್ಞಾತ ಪ್ರಸಂಗಗಳೂ ರಂಗವೇರಿವೆ. ಕಲಾವಿದರು ಪ್ರಸಂಗವನ್ನು, ರಂಗವನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಅವರಿಗೆ ಕಾಯಕಷ್ಟಕ್ಕಿಂತಲೂ ಪ್ರಸಂಗದ ಯಶ ಮುಖ್ಯವಾಗಿತ್ತು. ಹಾಗಾಗಿ ಸೈಂದವ ವಧೆಯಂತಹ ಪ್ರಸಂಗಗಳು ರಂಗವೇರುತ್ತಿದ್ದುವು, ಬಲಿಪರು ಕಳೆದ ಕಾಲದ ರಂಗಯತ್ನವನ್ನು ಮಾರ್ಮಿಕವಾಗಿ ಹೇಳುತ್ತಿದ್ದಾಗ ವರ್ತಮಾನದ ರಂಗವು ನನ್ನೊಳಗೆ ಹಲವಾರು ಪ್ರಶ್ನೆಯನ್ನು ಹುಟ್ಟುಹಾಕಿತು. ಆ ಪ್ರಶ್ನೆಗಳೆಲ್ಲವೂ ಸದ್ದಿಲ್ಲದೆ ಮೌನದ ಮೂಟೆಯೊಳಗೆ ಜಾರಿದುವು!
             ಬ್ರಹ್ಮಕಪಾಲ ಪ್ರಸಂಗದಲ್ಲಿ ಸೂರಿಕುಮೇರು ಗೋವಿಂದ ಭಟ್ಟರ 'ಈಶ್ವರ', ಎಂ.ಕೆ.ರಮೇಶ್ ಆಚಾರ್ಯರ 'ಶಾರದೆ', ಸುಣ್ಣಂಬಳ ವಿಶ್ವೇಶ್ವರ ಭಟ್ಟರ 'ಬ್ರಹ್ಮ', ಹರಿನಾರಾಯಣ ಎಡನೀರು ಅವರ 'ಕಿರಾತ' ಪಾತ್ರಗಳು;  ಸೈಂದವ ವಧೆಯಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು ಅವರ 'ಅರ್ಜುುನ', ವಿಷ್ಣು ಶರ್ಮರ 'ಕೃಷ್ಣ', ಉಬರಡ್ಕ ಉಮೇಶ ಶೆಟ್ಟರ 'ದ್ರೋಣ', ಶಂಭಯ್ಯ ಕಂಜರ್ಪಣೆಯವರ 'ಕೌರವ', ಹರೀಶ ಮಣ್ಣಾಪು ಅವರ 'ಸೈಂದವ'; ಕೊನೆಯ ಪ್ರಸಂಗದಲ್ಲಿ ಮಧೂರು ರಾಧಾಕೃಷ್ಣ ನಾವಡರ 'ಇಂದ್ರಜಿತು', ಚಂದ್ರಶೇಖರ ಧರ್ಮಸ್ಥಳ ಇವರ 'ಲಕ್ಷ್ಮಣ'.. ಹೀಗೆ ಒಬ್ಬೊಬ್ಬ ಪಾತ್ರಧಾರಿಯ ವೈಯಕ್ತಿಕ ರಂಗ ಕೊಡುಗೆಗಳು ಪ್ರಸಂಗದ ಯಶಕ್ಕೆ ಕಾರಣವಾದುವು.
             "ಇಂತಹ ದಾಖಲಾತಿಗಳು ಭವಿಷ್ಯದ ಅಧ್ಯಯನ ಆಕಾಂಕ್ಷಿಗಳಿಗೆ ಆಕರವಾಗುತ್ತವೆ. ಎಲ್ಲವೂ ಸರಿ ಎಂದಲ್ಲ. ತಪ್ಪುಗಳು ಇರಬಹುದು. ತಪ್ಪು, ಸರಿ ಎನ್ನುತ್ತಾ ಏನನ್ನೂ ಮಾಡದಿದ್ದರೆ ಒಂದು ಪ್ರಾಕಾರದ ಬೆಳವಣಿಗೆ ಹೇಗೆ? ಅದು ಭವಿಷ್ಯಕ್ಕೆ ಹಸ್ತಾಂತರವಾಗುವುದೂ ಹೇಗೆ? ಯಕ್ಷಗಾನದಂತಹ ರಂಗಸೂಕ್ಷ್ಮದ ಪ್ರಸಂಗಗಳು ಇರುವಲ್ಲಿವರೆಗೂ ಸರಿ, ತಪ್ಪು ಎನ್ನುವ ವಾದ-ವಿವಾದಗಳು ಇದ್ದೇ ಇರುತ್ತವೆ. ವರ್ತಮಾನ ರಂಗದಲ್ಲಿ ಇರುವ ಹಿರಿಯರ ಅನುಭವದ ಹಿನ್ನೆಲೆಯಲ್ಲಿ ಪ್ರಸಂಗಗಳು ದಾಖಲಾಗುವುದು ಒಂದು ಉತ್ತಮ ಕೆಲಸ," ಎನ್ನುತ್ತಾರೆ ಹವ್ಯಾಸಿ ಕಲಾವಿದ, ವಿಮರ್ಶಕ ಉಡುಪಿಯ ಪ್ರಭಾಕರ ರಾವ್. 
             ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) - ಹಲವು ಕಾರ್ಯಹೂರಣಗಳನ್ನು ಹೊಂದಿದ ಮಲೆಯಾಳ ನೆಲದ ಸಂಘಟನೆ. ಕೇರಳ ಸರಕಾರವು ಕನ್ನಡವನ್ನು ಬದಿಗೊತ್ತುತ್ತಿರುವ ಕಾಲಘಟ್ಟದಲ್ಲಿ ಈ ಪ್ರತಿಷ್ಠಾನವು ತನ್ನ ಚಟುವಟಿಕೆಗಳಿಗೆ ಬೀಸು ಹೆಜ್ಜೆ ನೀಡಿದೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಕನಸಾದ 'ರಂಗ ಪ್ರಸಂಗ' ದಾಖಲಾತಿ ಕಲಾಪವು ಈ ಹಿಂದೆ ನೀರ್ಚಾಲು, ಪಾವಂಜೆಗಳಲ್ಲಿ ಜರುಗಿವೆ. ಉಡುಪಿಯದ್ದು ನಾಲ್ಕನೇ ಪ್ರಯೋಗ.
             ರಂಗ-ಪ್ರಸಂಗ ಆಯೋಜನೆಯ ಹಿಂದೆ ಯಕ್ಷಗಾನವನ್ನು ಪ್ರೀತಿಸುವ ಮತ್ತು ಒಪ್ಪಿದ ಆಸಕ್ತರ ಚಿಕ್ಕ ಗಡಣ ಮಯ್ಯರ ಹಿಂದಿದೆ. ಯಕ್ಷ ದಾನಿಗಳ ಸಹಕಾರವನ್ನೂ ಮರೆಯುವಂತಿಲ್ಲ. ಓರ್ವ ವೃತ್ತಿಪರ ಕಲಾವಿದನಾಗಿ ಯಕ್ಷಗಾನದ ಭವಿಷ್ಯ, ದಾಖಲಾತಿ ಮತ್ತು ಸಾಮಾಜಿಕ ಸಂಪರ್ಕವನ್ನು ಬದುಕಿನೊಂದಿಗೆ ಮಿಳಿತಗೊಳಿಸಿದ್ದಾರೆ.
(ಚಿತ್ರ : ಉದಯ ಕಂಬಾರು, ನೀರ್ಚಾಲು)

Friday, September 1, 2017

ಅಹಮಿಕೆಯ ದಾಸ್ಯಕ್ಕೆ ಒಡ್ಡಿಕೊಳ್ಳದ ಮದ್ಲೆಗಾರ


ಪ್ರಜಾವಾಣಿಯ - ದಧಿಗಿಣತೋ - ಅಂಕಣ  / 23-6-2017

               ಯಕ್ಷಗಾನದ ಪಾತ್ರಗಳ ಗುಣ-ಸ್ವಭಾವಕ್ಕೆ ಅನುಗುಣವಾದ ರಂಗನಡೆಯೇ ಅದರ ಸೌಂದರ್ಯ. ಚೆಂಡೆ, ಮದ್ದಳೆಗಳ ನುಡಿತಕ್ಕೂ ಪ್ರಮಾಣವಿದೆ. ದೂರದಿಂದಲೇ ಚೆಂಡೆಯ ನುಡಿತದ ಗತಿಯನ್ನು ಆಲಿಸಿ, ನಿಖರವಾಗಿ  ಇಂತಹುದೇ ಪಾತ್ರಗಳೆನ್ನುವ ಪ್ರಾಜ್ಞರಿದ್ದರು. ಬದಲಾದ ಕಾಲಘಟ್ಟದಲ್ಲಿ ರಂಗ ಗತಿ, ನುಡಿತಗಳ ವೇಗ, ಪಾತ್ರ ಸೌಂದರ್ಯಗಳು ಮಸುಕಾದಂತಿದೆ. ತಾನು ಹವ್ಯಾಸಿ ರಂಗದಲ್ಲಿ ಬಹುಕಾಲ ವ್ಯವಸಾಯ ಮಾಡಿದ್ದರೂ ಪಾತ್ರ ಗತಿಯ ಮತ್ತು ಚೆಂಡೆಯ ನುಡಿತಗಳ ಪ್ರಮಾಣಬದ್ಧ ಜ್ಞಾನವನ್ನು ಹೊಂದಿ, ಅದನ್ನು ರಾಜಿಯಿಲ್ಲದೆ ಅನುಷ್ಠಾನಿಸಿದವರು ಮದ್ಲೆಗಾರ ವೆಂಕಟೇಶ ಉಳಿತ್ತಾಯರು (65).
               ಪುತ್ತೂರು ತಾಲೂಕಿನ ಆರ್ಲಪದವು ಹುಟ್ಟೂರು. ಅಜ್ಜ ಸುಬ್ರಾಯ ಉಳಿತ್ತಾಯರು ವೇಷಧಾರಿ. ಅಣ್ಣ ಅನಂತರಾಮ ಉಳಿತ್ತಾಯರು ಅರ್ಥಧಾರಿ, ವೇಷಧಾರಿ. ತಂದೆ ಕೃಷ್ಣ ಉಳಿತ್ತಾಯರು ಯಕ್ಷಗಾನದಲ್ಲಿ ಆಲ್ರೌಂಡರ್. ಇವರ 'ದೇವಿ ಮಹಲ್' ಹೋಟೆಲ್ ಚೆಂಡೆ ಮದ್ದಳೆಗಳ ಸದ್ದಿಲ್ಲದೆ ತೆರೆಯುತ್ತಿರಲಿಲ್ಲ! ಯಕ್ಷಗಾನವು ಸಾಂಸ್ಕೃತಿಕವಾಗಿ ಮೇಲ್ಮೆಯಲ್ಲಿದ್ದ ಕಾಲಘಟ್ಟದಲ್ಲಿ ದೇವಿ ಮಹಲಿನ ಆವರಣವು ಕಲಾವಿದರ ಹರಟೆಯ ತಾಣ. ತಾಳಮದ್ದಳೆಗಳು ಸಂಪನ್ನವಾಗುತ್ತಿದ್ದ ವೇದಿಕೆ. ಆಟಗಳ ಆಡುಂಬೊಲ.
            ದೂರದೂರಿನವರು ಆರ್ಲಪದವಿಗೆ ಬಂದಾಗ ಉಳಿತ್ತಾಯರನ್ನು ಭೇಟಿಯಾಗದೆ ಪ್ರಯಾಣ ಮುಗಿಯುತ್ತಿರಲಿಲ್ಲ. ಯಕ್ಷಗಾನದ ಸುದ್ದಿಗಳ ವಿನಿಮಯದ ಜತೆಗೆ ಉಪಾಹಾರವನ್ನು ಹೊಟ್ಟೆಗಿಳಿಸಿದ ಬಳಿಕವೇ ವಿದಾಯ. ಅತಿಥಿ ಕಲಾವಿದರ ಪಾಲಿಗೆ ಹೋಟೆಲು ಅನ್ನ ದಾಸೋಹದ ಸೇವಾಲಯ. ಮೇಳಗಳು ಬಂದರಂತೂ ಉಳಿತ್ತಾಯರು ಬ್ಯುಸಿ!  ಆತಿಥ್ಯದಿಂದ ತೊಡಗಿ ಮರುದಿವಸ ಮೇಳದ ಟೆಂಟ್ ತೆಗೆಯುವಲ್ಲಿಯ ತನಕ 'ತನ್ನದೇ ಮೇಳ'ವೆಂದ ಸುಧಾರಿಕೆ. ಉಳಿತ್ತಾಯರು ಮತ್ತು ಹೋಟೆಲ್ ಒಂದು ತೆರನಾದ ಯಕ್ಷಪಾತ್ರಗಳೇ!
                  ಇಂತಹ ಗಾಢ ಯಕ್ಷಗಾನೀಯ ವಾತಾವರಣದಲ್ಲಿ ವೆಂಕಟೇಶ ಉಳಿತ್ತಾಯರ ಬಾಲ್ಯ ಅರಳಿತ್ತು.  ಬದುಕಿನ ಒಂದೊಂದೇ ಹೆಜ್ಜೆಯ ಏರಿಕೆ. ಅಲ್ಪ ಕಾಲದ ವಿದ್ಯಾಭ್ಯಾಸ. ಮೇಳದ ಬವಣೆ, ಕಲಾವಿದರ ಜೀವನವನ್ನು ಹತ್ತಿರದಿಂದ ನೋಡಿಯೇ 'ಮೇಳದ ಕಲಾವಿದ'ನಾಗುವ ಆಸೆಯು ಮುರುಟಿತ್ತು! ಚೆಂಡೆಯ ನುಡಿತದತ್ತ ಬಾಲ್ಯದೊಲವು. ಕಲಿಕಾ ಅವಕಾಶಗಳಿಲ್ಲದೆ ಆಸೆಯು ಸುಪ್ತತೆಯತ್ತ ಜಾರಿತು. ಈ ಮಧ್ಯೆ ಕಾಲನ ದೃಷ್ಟಿಗೆ ಸಿಲುಕಿದರು. ಯೌವನವನ್ನು ರಾಜಧಾನಿ ಸೆಳೆಯಿತು. ಹೋಟೆಲಿನಲ್ಲಿ ದುಡಿತ. ಸೂಪಶಾಸ್ತ್ರಗಳ ಸೂಕ್ಷ್ಮವಿಚಾರಗಳ ಆರ್ಜನೆ. ವಿವಿಧ ತಿಂಡಿಗಳ ಜೀವಭಾವದ ಆಪೋಶನ.
              ಹನ್ನೆರಡು ವರುಷದ ಪಟ್ಟಣ ವಾಸ. ಮರಳಿ ಹುಟ್ಟೂರಿಗೆ ಬಂದಾಗ ಉಳಿತ್ತಾಯರು 'ಸೂಪಜ್ಞ'ನಾಗಿದ್ದರು. ಪುತ್ತೂರಿನ ಹೋಟೆಲ್ ಒಂದರಲ್ಲಿ ಸೂಪಕಾರ ವೃತ್ತಿ. ಕರಾವಳಿಗೆ ಅಪರೂಪದ್ದಾದ ಖಾದ್ಯಗಳ ಪರಿಚಯ. ಕೈಗುಣವು ಒಂದೊಂದು ತಿಂಡಿಯಲ್ಲೂ ಉಳಿತ್ತಾಯರ ಹೆಸರನ್ನು ಕೆತ್ತಿದುವು. ತಿಂಡಿ ಸವಿದು ತೆರಳುವ ಗ್ರಾಹಕರೆಲ್ಲರೂ ಕೈಗುಣವನ್ನು ಹೊಗಳಿದ್ದೇ ಹೊಗಳಿದ್ದು. "ಪುತ್ತೂರಿನ ಹರಿಪ್ರಸಾದ್ ಹೋಟೆಲ್ ನನ್ನ ಬದುಕಿಗೆ ಹೊಸ ತಿರುವು ನೀಡಿತು. ನನ್ನ ಜ್ಞಾನಕ್ಕೆ ಅದರ ಯಜಮಾನರು ಮಾನ ಕೊಟ್ಟರು. ಬಾಣಸಿಗ ವೃತ್ತಿಗೆ ಗೌರವ ನೀಡಿದರು. ಅದುವರೆಗೆ ಎಲ್ಲೋ ಕಳೆದುಹೋಗಿದ್ದ ನನಗೆ ಮರುಜೀವ ನೀಡಿದರು," ಎನ್ನುವಾಗ ವಿನೀತರಾಗುತ್ತಾರೆ.
            ತನ್ನ ಇಪ್ಪತ್ತೆಂಟನೇ ವರುಷದಲ್ಲಿ ಅಮರಾವತಿ ಅವರೊಂದಿಗೆ ವಿವಾಹ. ಮನದೊಳಗೆ ಕತ್ತಲೆಯಲ್ಲಿದ್ದ ಯಕ್ಷಗಾನ ಒಲವಿನ ಬೀಜಕ್ಕೆ ಬೆಳಕಿನ ಕಿರಣ. ಸುಪ್ತವಾಗಿದ್ದ ಯಕ್ಷೊಲವು ಜಾಗೃತ. ಕಡಬ ಮೋಹನ ಬೈಪಾಡಿತ್ತಾಯರಿಂದ ಯಕ್ಷಾಕ್ಷರ ಕಲಿಕೆ. ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಹೆಚ್ಚಿನ ಅಭ್ಯಾಸ. ಇಬ್ಬರು ಗುರುಗಳಲ್ಲಿ ಹದಗೊಂಡ ವೆಂಕಟೇಶರು ಚೆಂಡೆ ಹೆಗಲಿಗೇರಿಸಿದರು. ಈ ಸಂದರ್ಭಗಳಲ್ಲಿ ತನ್ನ ಅಜ್ಞಾತವಾಸದ ಅವಧಿ ಮತ್ತು ಅದಕ್ಕೆ ಕಾರಣವಾದ ಬದುಕಿನ ಜಾರುವಿಕೆಯನ್ನು ಆಪ್ತರಲ್ಲಿ ಆಗಾಗ್ಗೆ ಹಂಚಿಕೊಂಡು ಕಣ್ಣು ತೇವ ಮಾಡಿಕೊಂಡುದುಂಟು.
                 ಪುತ್ತೂರು, ಆರ್ಲಪದವು, ಪೆರ್ಲ - ಈ ಭಾಗಗಳಲ್ಲಿ ಹವ್ಯಾಸಿ ಆಟಗಳು ಯಥೇಷ್ಟ. ಹಿಮ್ಮೇಳ ಕಲಾವಿದರ ಕೊರತೆಯಿತ್ತು. ಉಳಿತ್ತಾಯರು ಯಾವಾಗ ಕಲಿಕೆ ಪೂರ್ಣಗೊಳಿಸಿ ರಂಗದಲ್ಲಿ ನಿಂತರೋ ಅಲ್ಲಿಂದ ಕೂಟ-ಆಟಗಳಿಗೆ ಬೇಡಿಕೆ. ಸಂಭಾವನೆಯ ಆಸೆಯಿಲ್ಲದೆ, ಸಂಘಟಕರಿಗೆ ಪೀಡೆ ಕೊಡದೆ ಭಾಗವಹಿಸಿದರು. ವಾಹನ ಸೌಕರ್ಯ ಇಲ್ಲದೆಡೆ ಗಂಟೆಗಟ್ಟಲೆ ನಡೆದರು. ಊಟ-ತಿಂಡಿಯ ಗೊಡವೆ ಇಲ್ಲದೆ ರಾತ್ರಿಗಳನ್ನು ಕಳೆದರು. ಪಾಲಿಗೆ ಬಂದ ಚಿಲ್ಲರೆ ಸಂಭಾವನೆಯನ್ನು ಗೊಣಗಾಟವಿಲ್ಲದೆ ಸ್ವೀಕರಿಸಿದರು.
                   ಪಾಲೆಚ್ಚಾರು ಗೋವಿಂದ ನಾಯಕರ ಭಾಗವತಿಕೆ, ಕೋನಡ್ಕ ಗೋಪಾಲಕೃಷ್ಣ ಕಲ್ಲೂರಾಯರು ಮತ್ತು ವೆಂಕಟೇಶ ಉಳಿತ್ತಾಯರ ಚೆಂಡೆ-ಮದ್ದಳೆ ಜತೆಗಾರಿಕೆಯು ಏನಿಲ್ಲವೆಂದರೂ ಎರಡು ದಶಕಗಳ ಕಾಲ ಹವ್ಯಾಸಿ ರಂಗಕ್ಕೆ ಉಸಿರಾಗಿತ್ತು. ಮೂವರು ಕೂಡಾ ಅಗ್ಗದ ಪ್ರಚಾರಕ್ಕಾಗಿ ಎಂದೂ ಹಾತೊರೆದವರಲ್ಲ. ಲೇಖನದ ಆರಂಭದಲ್ಲಿ ಉಲ್ಲೇಖಿಸಿದಂತೆ ಪ್ರಮಾಣಬದ್ಧ ನುಡಿತಗಳ ಮನಃಸ್ಥಿತಿಗಳು ಇವರಲ್ಲಿ ಮಿಳಿತವಾಗಿದ್ದುವು. ಪಾತ್ರೋಚಿತವಾದ ರಂಗನಡೆಗಳಿಗೆ ಮೂವರು ಗುರುವಾಗಿ ಪರಿಣಮಿಸಿದರು.
                ಹವ್ಯಾಸಿ ರಂಗದಲ್ಲಿ ಹಿಮ್ಮೇಳ ಪರಿಕರಗಳನ್ನು ಶ್ರುತಿ ಮಾಡುವ ಕ್ರಮಗಳು ಅಷ್ಟಕ್ಕಷ್ಟೇ. ಶ್ರುತಿ ಮಾಡುವುದು ಒಂದು ಜ್ಞಾನ. ಅದು ಅನುಭವದಿಂದಲೇ ಬರಬೇಕು. ಶ್ರುತಿ ಮಾಡಿದ ಬಳಿಕವೇ ಪ್ರದರ್ಶನವನ್ನು ಶುರು ಮಾಡುತ್ತಿದ್ದೆವು. ಇದರಿಂದಾಗಿ ವಾದನಸುಖವನ್ನು ಅನುಭವಿಸುವಂತಾಯಿತು. ಈ ಸೂಕ್ಷ್ಮವನ್ನು ಗ್ರಹಿಸಿದ ಅನೇಕ ಹಿರಿಯರು ಬೆನ್ನುತಟ್ಟಿದರು. ಹವ್ಯಾಸಿ ಕಲಾವಿದರಾದರೂ ರಂಗಕ್ಕೆ ಶಿಸ್ತು ಇತ್ತು. ಹಿಮ್ಮೇಳದವರನ್ನು ಗೌರವಿಸುತ್ತಿದ್ದರು. ಊರಿನವರಿಗೆ ಆಟ ಒಳ್ಳೆಯದಾಗಬೇಕೆನ್ನುವ ನಿರೀಕ್ಷೆಯಿದ್ದುವು. ಹಾಗಾಗಿ ಆಟ-ಕೂಟಗಳೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿ ಹೊಸ ಅನುಭವ ಕಟ್ಟಿಕೊಟ್ಟಿತು ಎಂದು ಹಳೆಯ ನೆನಪುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
               ಹವ್ಯಾಸಿಗಳಲ್ಲಿ ಕಲಿಕೆಯ ದಾಹ ಹೆಚ್ಚಾಗಿ ಹಿಮ್ಮೇಳ ತರಗತಿ ನಡೆಸುವಂತೆ ಬೇಡಿಕೆ. 'ತಾನು ಭಾಗವತಿಕೆ ಕಲಿಯದೆ ಕಲಿಸುವುದೇನನ್ನು' ಎಂದು ನಯವಾಗಿ ತಿರಸ್ಕರಿಸಿದರು. "ಹೊಣೆಯರಿತ ನಿಲುವು ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಸ್ಥಾನದ ಕುರಿತು ಸ್ಪಷ್ಟವಾದ ಸ್ವ-ವಿವೇಚನೆ. ಬಿಗಿಮುಷ್ಠಿಯಲ್ಲಿ ಚೆಂಡೆಯ ಕೋಲು ಹಿಡಿದು ಉರುಳಿಕೆ ನುಡಿಸುವವರು ವಿರಳ. ಬಿಗಿಮುಷ್ಠಿಯ ಗಟ್ಟಿತನದ ದೃಢತೆಯ ಪೆಟ್ಟುಗಳು ವೇಷಧಾರಿಗಳ ಹೆಜ್ಜೆಗಾರಿಕೆಯನ್ನು ಮತ್ತು ನಾಟ್ಯದ ಮೇಲಿನ ಹಿಡಿತವನ್ನು ಸ್ಫುಟವಾಗಿ ತೋರಿಸಲು ರಂಗ ಸಹಾಯಕವಾಗಿದ್ದುವು. ಹಿಮ್ಮೇಳ ಪರಿಕರಗಳ ರಿಪೇರಿ, ತಯಾರಿ ಎರಡರಲ್ಲೂ ಜ್ಙಾನವಿತ್ತು, ಎಂದು ಉಳಿತ್ತಾಯರ ರಂಗಕಸುಬಿಗೆ ಕನ್ನಡಿ ಹಿಡಿಯುತ್ತಾರೆ," ಮುರಳಿ ರಾಯರಮನೆ. ಹಿಂದಿನಿಂದಲೇ ಉಳಿತ್ತಾಯರ ವಾದನ ಕ್ರಮವನ್ನು ಅವಲೋಕಿಸುತ್ತಾ, ಅವರೊಂದಿಗೆ ಮದ್ದಳೆ ನುಡಿಸುತ್ತಾ ಬಂದ ಇವರೀಗ ಉಳಿತ್ತಾಯರ ಅಳಿಯ. ಮಗಳು ಪ್ರಿಯಳ ಪ್ರಿಯ.
                 ಮಗ ಕೃಷ್ಣಪ್ರಕಾಶ್. ಮಂಗಳೂರಿನ ಕರ್ನಾಟಕ ಬ್ಯಾಂಕಿನಲ್ಲಿ ಅಧಿಕಾರಿ. ಮಗನನ್ನು ವಾದನ ಲೋಕಕ್ಕೆ ಪರಿಚಯಿಸಿದ ವೆಂಕಟೇಶರ ತನುಶ್ರಮ ಅಜ್ಞಾತ. ಬಹುಶಃ ಕೃಷ್ಣಪ್ರಕಾಶ್ ಗರ್ಭದೊಳಗೆ ಮದ್ದಳೆಯ ನುಡಿತಗಳನ್ನು ಕೇಳಿಸಿಕೊಂಡಿರಬೇಕು! ಈಗ ವಾದನಲೋಕದಲ್ಲಿ ಹೊಸ ಹೆಜ್ಜೆಗಳನ್ನು ಊರಿ, ಏರುತ್ತಿದ್ದಾರೆ. ಇದು ಸ್ವ-ನಿರ್ಮಿತ 'ಜಾಗೃತ' ಏರುವಿಕೆ. ನಿತ್ಯ ಅಭ್ಯಾಸಿ, ಚಿಂತಕ. ಬೌದ್ಧಿಕವಾದ ಮಾತುಕತೆಗಳಿಗೆ  ತೆರೆದುಕೊಳ್ಳುವ ಗುಣವು ತಂದೆಯ ಬಳುವಳಿ.
                "ಮದ್ದಳೆ ವಾದನ ಕ್ಷೇತ್ರದಲ್ಲಿ ಮಗ ಪ್ರಕಾಶ್ ಮುಂದಿದ್ದಾನೆ. ಅವಕಾಶದ ಬಾಗಿಲು ತೆರೆಯುತ್ತಿದೆ. ಝೀರೋದಿಂದ ಬದುಕನ್ನು ರೂಪಿಸಿದ ನನಗೆ, ಕುಟುಂಬಕ್ಕೆ ಹೆಮ್ಮೆಯ ವಿಚಾರ. ಅವನ ಗೌರವಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ನಾನೀಗ ವಾದನ ವ್ಯವಸಾಯದಿಂದ ಹಿಂದೆ ಸರಿಯುತ್ತಿದ್ದೇನೆ, ಸರಿದಿದ್ದೇನೆ" ಎಂದು ಖುಷಿಯಿಂದ ವೆಂಕಟೇಶರು ಹೇಳುತ್ತಾರೆ.  ಮಗನ ಆಭ್ಯುದಯವನ್ನು ಮನಸಾ ಅಭನಂದಿಸಿದ ಓರ್ವ ತಂದೆಯ ನಿರ್ಧಾರದ ಹಿಂದಿರುವ ಒಳತೋಟಿಗೆ ಶರಣು.
                 ಹವ್ಯಾಸಿ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರು ಹಲವರಿದ್ದಾರೆ. ವೆಂಕಟೇಶ ಉಳಿತ್ತಾಯರಂತಹ ಬದ್ಧತೆಯ, ನಿಷ್ಠೆಯ ಮತ್ತು ತ್ಯಾಗ ಭಾವದ ಕಲಾವಿದರು ವಿರಳ. ಅಹಮಿಕೆಯ ದಾಸ್ಯಕ್ಕೆ ಒಡ್ಡಿಕೊಳ್ಳದ ಬಾಗುವ ವ್ಯಕ್ತಿತ್ವವು ಅವರ ಬದುಕಿಗೆ ಭೂಷಣ. ಈಚೆಗೆ ಪುತ್ತೂರು ಗೋಪಾಲಕೃಷ್ಣಯ್ಯ (ಗೋಪಣ್ಣ) ನೆನಪಿನ ಗೌರವ ಸ್ವೀಕರಿಸಿದರು.

Saturday, August 26, 2017

ವೃತ್ತಿಯನ್ನು ಮೀರಿದ ಮೇಳದ ಹಿತಾಸಕ್ತಿ

ಪ್ರಜಾವಾಣಿಯ 'ಧಧಿಗಿಣತೋ' ಅಂಕಣ / 2-6-2017
(ಚಿತ್ರ : ನಟೇಶ್ ವಿಟ್ಲ)

                ಕಟೀಲು ಮೇಳದ ಭಾಗವತ. ಕುಬಣೂರು ಶ್ರೀಧರ ರಾವ್, 'ಯಕ್ಷಪ್ರಭಾ' ಮಾಸಪತ್ರಿಕೆಯ ಸಂಪಾದಕ. ತಾಂತ್ರಿಕ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮ ಓದು. ತೊಡಗಿಸಿಕೊಂಡದ್ದು ಪೂರ್ಣಪ್ರಮಾಣದ ಯಕ್ಷಗಾನ ವೃತ್ತಿ. ಯಕ್ಷಗಾನದ ಅಕಾಡೆಮಿಕ್ ವಿಚಾರಗಳ ಸುತ್ತ ಯೋಚನೆ, ಯೋಜನೆ. ರಂಗಾವಿಷ್ಕಾರಗಳಲ್ಲಿ ಆಸಕ್ತ. ಹೊಸ ಪ್ರಸಂಗಗಳ ರಚನೆ-ಪ್ರದರ್ಶನ, ವಿಶೇಷ ವಿನ್ಯಾಸದ ರಂಗಜೋಡಣೆ, ಸಿದ್ಧ ವ್ಯವಸ್ಥೆಗಿಂತ ಆಚೆ ನೋಡುವ ಮನಃಸ್ಥಿತಿ ಮತ್ತು ಕಲಾವಿದರ ಸಾಮಥ್ರ್ಯಕ್ಕೆ ಹೊಂದಿಕೊಂಡ  ರಂಗ ನಿರ್ದೇಶನಗಳು ಕುಬಣೂರರ ವಿಶೇಷತೆ.
               ಕುಬಣೂರು ಶ್ರೀಧರ ರಾಯರಿಗೆ ಕಳೆದ ವರುಷ ಕಟೀಲಿನಲ್ಲಿ ಅದ್ದೂರಿಯ ಅಭಿನಂದನೆ ನಡೆದಿತ್ತು ಈ ಸಂದರ್ಭದಲ್ಲಿ 'ಯಕ್ಷಭೃಂಗ' ಅಭಿನಂದನ ಕೃತಿಯು ಪ್ರಕಟವಾಗಿತ್ತು. ಕುಬಣೂರು ಅಭಿನಂದನಾ ಸಮಿತಿಯ ಪ್ರಕಾಶನ. ಕೃತಿಯು ಶ್ರೀಧರ ರಾಯರ ಬದುಕಿನ ಪ್ರತಿಫಲನ. ಜೀವನದ ಏಳುಬೀಳುಗಳ ಜತೆ ಸ್ಥಿರತೆ, ಯಕ್ಷಗಾನದ ಏರು-ತಗ್ಗುಗಳಲ್ಲಿ ಮೂಡಿಸಿದ ಎಚ್ಚರಗಳು, ಕಾಲಕಾಲದ ಯಕ್ಷಪಲ್ಲಟಗಳನ್ನು ಸರಳವಾಗಿ ಮತ್ತು ನಿಖರವಾಗಿ ಹೇಳಿದ್ದಾರೆ.  ಯಕ್ಷಗಾನದ ವಿವಿಧ ಆಯಾಮಗಳನ್ನು ವಿವಿಧ ಕೋನಗಳಲ್ಲಿ ವಿದ್ವಾಂಸರು ಕಂಡ ಬರಹಗಳಿವೆ.
                 ಯಕ್ಷಗಾನ ಮೇಳಗಳಿಗೆ ವಿಧಿಸುತ್ತಿದ್ದ ತೆರಿಗೆ ರದ್ದಾದ ವಿದ್ಯಮಾನವನ್ನು ಕೃತಿಯಲ್ಲಿ ಹೇಳುತ್ತಾರೆ. "ಕನ್ನಾಡು, ಕೇರಳ ಯಾವುದೇ ಪ್ರದೇಶದಲ್ಲಿ ಮೇಳದ ಟೆಂಟ್ ಊರಬೇಕಾದರೆ ಅಲ್ಲಿನ ಪಂಚಾಯತಿನ  ಒಪ್ಪಿಗೆ  ಬೇಕಿತ್ತು. ನಿಗದಿಪಡಿಸಿದ ಸಾಂಸ್ಕೃತಿಕ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆಟ ಆಡಿಸುವ ದಿವಸ ಪಂಚಾಯತ್ ಕಚೇರಿಗೆ ಹೋಗಿ, ಮೇಳದ ಟಿಕೇಟ್ ಪುಸ್ತಕಗಳಿಗೆ - ಎಲ್ಲಾ ದರದ ಟಿಕೇಟುಗಳಿಗೆ - ಪಂಚಾಯತಿನ ಸೀಲು ಹಾಕಿಸಬೇಕಾಗಿತ್ತು. ಆ ರಾತ್ರಿ ಮಾರಾಟವಾದ ಟಿಕೇಟಿನ ಲೆಕ್ಕವನ್ನು ಮರುದಿವಸ ಪಂಚಾಯತಿಗೆ ಒಪ್ಪಿಸಬೇಕಿತ್ತು. ಎಷ್ಟು ಟಿಕೇಟು ಮಾರಾಟವಾಗಿತ್ತೋ ಅದಕ್ಕೆ ನಿಗದಿಯಾದ ತೆರಿಗೆಯನ್ನು ಕಟ್ಟುವುದು ಕಡ್ಡಾಯವಾಗಿತ್ತು."
                ಆ ಕಾಲಘಟ್ಟದಲ್ಲಿ ಅರ್ಥಧಾರಿ, ಸಂಘಟಕ ಹಾಗೂ ವಕೀಲರಾದ ಕುಬಣೂರು ಬಾಲಕೃಷ್ಣ ರಾಯರು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಮೇಳವು ಅನುಭವಿಸುವ ತೆರಿಗೆಯ ಭಾರದ ಬವಣೆಯನ್ನು ನಿವೇದಿಸಿದ್ದರು. ಮೇಳಕ್ಕಾಗುವ ನಷ್ಟವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಉಭಯ ರಾಜ್ಯದ ವರಿಷ್ಠರಲ್ಲೂ ವ್ಯವಹಾರ ಮಾಡಿದ್ದರು. ಫಲವಾಗಿ ಸಾಂಸ್ಕೃತಿಕ ತೆರಿಗೆ ರದ್ದಾಯಿತು. ಯಕ್ಷಗಾನ ಪ್ರದರ್ಶನಗಳಿಗೆ ಮುಕ್ತವಾದ ಅವಕಾಶ ಪ್ರಾಪ್ತವಾಯಿತು. ವರ್ತಮಾನದಲ್ಲಿ ನಿಂತು ಈ ಘಟನೆಯನ್ನು ಅವಲೋಕಿಸಿದಾಗ ಮೇಳದ ಪ್ರದರ್ಶನಕ್ಕಿದ್ದ ಕಷ್ಟ ದಿನಗಳ ಅರಿವಾಗುತ್ತದೆ.
                ಕದ್ರಿ ಮೇಳ, ನಂದಾವರ, ಅರುವ, ಬಪ್ಪನಾಡು, ಕಾಂತಾವರ ಮೇಳಗಳಲ್ಲಿ 1981 ರಿಂದ 1989ರ ತನಕ ತಿರುಗಾಟ. 1990ರಿಂದ ಶ್ರೀ ಕಟೀಲು ಮೇಳದಲ್ಲಿ ವ್ಯವಸಾಯ. ಸ್ವ-ರಚನೆಯ ಪ್ರಸಂಗಗಳು ಮೇಳದಲ್ಲಿ ಪ್ರದರ್ಶಿತವಾದುವು. ಯಶ ಕಂಡುವು. ನೂತನ ವಿನ್ಯಾಸದ ದೃಶ್ಯಗಳು ಪ್ರೇಕ್ಷಕ ಸ್ವೀಕೃತಿ ಪಡೆಯಿತು. ಮೇಳದ ತಿರುಗಾಟವಾಗುತ್ತಿದ್ದಂತೆ ಆದಂತಹ ಕೆಲವೊಂದು ರೂಢನೆಗಳನ್ನು' ಯಕ್ಷಭೃಂಗ'ದಲ್ಲಿ ದಾಖಲಿಸುತ್ತಾರೆ. ಟೆಂಟ್ ಮೇಳಗಳಲ್ಲಿ ಅನುಭವ ಹೊಂದಿದ ಶ್ರೀಧರ ರಾಯರಿಗೆ ಬಯಲಾಟ ಮೇಳವಾದ ಕಟೀಲು ಮೇಳಕ್ಕೆ ಬಂದಾಗ ಎದುರಾದ ಕೆಲವು ಸಹಜ ತೊಡಕುಗಳು ಮತ್ತು ಅದನ್ನು ನಿವಾರಿಸಿದ ಬಗೆಯನ್ನು ರೋಚಕವಾಗಿ ಹೇಳುತ್ತಾರೆ. ತೊಂದರೆ ಅನುಭವಿಸಿದರೂ ಮತ್ತೆ ಅವುಗಳು ಶಾಶ್ವತ ಪರಿಹಾರವಾದ ಒಂದೆರಡು ಘಟನೆಗಳು -
                ತೊಂಭತ್ತನೇ ಇಸವಿ. ವಿಪರೀತ ಚಳಿ. ಟೆಂಟಿನ ಮೇಳಗಳಲ್ಲಿ ಮಂಜು ಹನಿಯಿಂದ ಪಾರಾಗಲು ಅಲ್ಪಸ್ವಲ್ಪ ಟರ್ಪಾಲು ವ್ಯವಸ್ಥೆಗಳಿರುತ್ತಿದ್ದುವು. ಬಯಲಾಟಗಳಲ್ಲಿ ಆಗಸವೇ ಬಟ್ಟೆ. ರಂಗಸ್ಥಳದಲ್ಲಿ ವೇಷ ಕುಣಿಯುವ ಸ್ಥಳದಷ್ಟು  ಮೇಲೆ ಹಾಸು ಬಟ್ಟೆಯಿರುತ್ತಿತ್ತು. ಹಿಮ್ಮೇಳದವರು ಒದ್ದೆಯಾಗಿಯೇ ದುಡಿಯಬೇಕಾಗಿತ್ತು. ಆಗ ರಂಗಸ್ಥಳದ ನಿರ್ವಹಣೆ ಮೇಳದ್ದಾಗಿರಲಿಲ್ಲ. ಅದನ್ನು ಗುತ್ತಿಗೆದಾರರು ಮಾಡುತ್ತಿದ್ದರು. ಪ್ಲಾಸ್ಟಿಕ್ ಶೀಟ್ ಹಾಸದದ್ದರೆ ಭಾಗವತರ ಮೇಜನ್ನು ಎಳೆದು ಎದುರು - ಅಂದರೆ ವೇಷ ಕುಣಿಯುವಲ್ಲಿ - ಕುಳಿತುಕೊಳ್ಳುತ್ತೇವೆ ಎಂದು ರಂಗಸ್ಥಳ ನಿರ್ವಾಹಕರಲ್ಲಿ ಹೇಳಿದ್ದರು. ತಲೆಗೆ ಕಟ್ಟಲು ದೇವಸ್ಥಾನದಿಂದ ನೀಡುತಿದ್ದ ಸೀರೆ ಬಹಳಷ್ಟು ಭಾರವಾಗಿದ್ದು ಅದನ್ನು ಮುಂಡಾಸು ಕಟ್ಟಲು ಆಗುತ್ತಿರಲಿಲ್ಲ. ಅಂತೂ ಒಂದು ವಾರದಲ್ಲಿ ಮೇಲೆ ಪ್ಲಾಸ್ಟಿಕ್ ಹಾಸು ಬಂತು, ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಕುಬಣೂರು.
              ಇನ್ನೊಂದು ಸಂದರ್ಭ - ಬಂಟ್ವಾಳ ಸಮೀಪದ ಒಂದು ಆಟದಲ್ಲಿ ಸಂಘಟಕರು ರಂಗಸ್ಥಳದ ಹಿಂದೆ ಪರದೆ ಕಟ್ಟಿದ್ದರು. (ಕಟೀಲು ಮೇಳದಲ್ಲಿ ಆಗ ಪರದೆ ಇದ್ದಿರಲಿಲ್ಲ) ಹೀಗೆ ಮಾಡಿದ್ದದರಿಂದ ಕೆಲವರಿಗೆ ರಂಗದ ಹಿಂದೆ ಕುಳಿತು ಆಟ ನೋಡಲು ಕಷ್ಟವಾಯಿತು! ಆಗ ಆಟ ಆಡಿಸುವ ಆಢ್ಯರು ರಂಗಸ್ಥಳದ ಹಿಂದೆ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಪರದೆಯು ಹಿಂದಿನಿಂದ ಬೀಸುತ್ತಿದ್ದ ಚಳಿಗಾಳಿಯನ್ನು ತಡೆಯುತ್ತಿತ್ತು. ಬೆಳಿಗ್ಗೆ ರಂಗಸ್ಥಳ ನಿರ್ವಾಹಕರು ಸೇವಾಕರ್ತರಲ್ಲಿ 'ಈ ಪರದೆ ಮೇಳಕ್ಕೆ ಕೊಡಬಹುದೇ' ಎಂದು ಕೇಳಿಸಿದೆ. ಸಂತೋಷದಿಂದ ಒಪ್ಪಿದರು. ಅಂದಿನಿಂದ ನಾನಿದ್ದ ಒಂದನೇ ಮೇಳದಲ್ಲಿ ರಂಗದ ಹಿಂದೆ ಪರದೆ ಕಟ್ಟುವ ಪದ್ಧತಿ ನಿತ್ಯವಾಯಿತು. ಇದನ್ನು ನೋಡಿದ ಯಜಮಾನರು ಖುಷಿಪಟ್ಟರು. ಮುಂದಿನ ವರುಷದಿಂದ ಕಟೀಲು ಮೇಳಗಳ  ಎಲ್ಲಾ ರಂಗಸ್ಥಳಗಳಿಗೂ ಪರದೆ ಬಂತು.
               ಮೂಡುಬಿದಿರೆಯಲ್ಲಿ 'ದೇವಿ ಮಹಾತ್ಮೆ' ಆಟ. ಆ ವರುಷ ವಿಶೇಷವಾಗಿ 'ಶ್ರೀದೇವಿ ಉದ್ಭವ' ಆಗುವ ದೃಶ್ಯವನ್ನು ಸಂಯೋಜಿಸಿದ್ದರು. ಎತ್ತರದ ರಂಗವೇದಿಕೆ. ಅದರ ಬುಡದಿಂದ ದೇವಿ ನಿಧಾನವಾಗಿ ಎದ್ದೇಳುತ್ತಾ ಬರುವ ವಿನ್ಯಾಸ. ಕೈಯಲ್ಲಿ ಜಾಕ್ ತಿರುಗಿಸುತ್ತಿದ್ದಂತೆ ಇಡೀ ಪ್ಲಾಟ್ಫಾರಂ ಮೇಲೆದ್ದು ಬಂದು ಶ್ರೀದೇವಿಯ ಪಾತ್ರವು ಕಾಣಿಸಿಕೊಳ್ಳುವ ನೂತನ ಕಲ್ಪನೆ. ಅಲ್ಲಿಯ ತನಕ ಸೆಟ್ಟಿಂಗ್ ಮಾಡಲು ಎದುರಿಗೆ ಪರದೆ ಹಾಕುತ್ತಿದ್ದರು. ಆಟ ಮುಗಿದ ಬಳಿಕ ಈ ಪರದೆಯನ್ನು ನೀಡುವಂತೆ ಶ್ರೀಧರ ರಾಯರು ಆಟ ಆಡಿಸುವವರಲ್ಲಿ ವಿನಂತಿಸಿದರು. ಮುಂದಿನ ವರುಷಕ್ಕೆ ಈ ಕೋರಿಕೆ ಈಡೇರಿತು.
               ಮಂಗಳೂರಿನ ಬೋಂದೆಲಿನಲ್ಲಿ ಮೇಳದ ಯಜಮಾನರಾದ ವಿಠಲ ಶೆಟ್ಟರಿಗ ಸಂಮಾನ. ರಾಮದಾಸ ಸಾಮಗರಿಂದ ಅಭಿನಂದನಾ ಭಾಷಣ. ರಂಗಸ್ಥಳಕ್ಕೆ ಮ್ಯಾಟ್ ಹಾಸಿದ್ದರು. ಆಟವೂ ಕೂಡಾ ಮ್ಯಾಟ್ ಹಾಸಿದ ರಂಗದಲ್ಲೇ ನಡೆಯಿತು. ಬೆಳಿಗ್ಗೆ 'ಈ ಮ್ಯಾಟನ್ನು ಮೇಳಕ್ಕೆ ನೀಡುವಿರಾ' ಎಂದು ವಿನಂತಿಸಿದರು. ಅಂದಿನಿಂದ ಮೇಳದ ರಂಗಸ್ಥಳಕ್ಕೆ ಮ್ಯಾಟ್ ಹಾಸುವ ವ್ಯವಸ್ಥೆ ರೂಢಿಯಾಯಿತು. ನಮ್ಮ ಮೇಳದಲ್ಲಿ ಧೂಳು ಹಾರದಂತೆ ನೆಲಕ್ಕೆ ಚದುರಿಸುವ ಮರದ ಹುಡಿ ಮತ್ತು ಪ್ರಸಂಗದ ಕೆಲವೊಂದು ದುಃಖದ ದೃಶ್ಯಕ್ಕೆ ಪಾತ್ರಧಾರಿ ಕುಳಿತುಕೊಳ್ಳಲು ಚಾಪೆ ಹಾಸುವ ಕ್ರಮ ನಿಂತಿತು. ಮುಂದಿನ ವರುಷದಿಂದ ಎಲ್ಲಾ ಮೇಳಗಳಿಗೂ ಮ್ಯಾಟ್ ವ್ಯವಸ್ಥೆಯಾಯಿತು ಎನ್ನುತ್ತಾರೆ. ನಂತರದ ವರುಷಗಳಲ್ಲಿ ರಂಗಸ್ಥಳಕ್ಕೆ ಪ್ಲಾಟ್ಫಾರಂ ವ್ಯವಸ್ಥೆಯೂ ಆಯಿತು.
                 ಹೀಗೆ ಕೆಲವೊಂದು ವ್ಯವಸ್ಥೆಗಳು ಮೇಳದಲ್ಲಿ ರೂಢನೆಯಾದುದು ಕುಬಣೂರರಲ್ಲಿದ್ದ ಮೇಳದ ಹಿತಾಸಕ್ತಿಗೆ ಸಾಕ್ಷಿ. ಜತೆಗೆ ಮೇಳ ನಿಷ್ಠತೆಯ ಬದ್ಧತೆ. ಮೇಳದ ಬದುಕಿನಿಂದ ಬದುಕಿನ ಸುಖವನ್ನು ಅನುಭವಿಸುವ ಶ್ರೀಧರ ರಾಯರು ಮನಬಿಚ್ಚಿ ಮಾತನಾಡುತ್ತಾರೆ, ಕಟೀಲು ಮೇಳದ ಆಟಗಳು ವೈಭವೋಪೇತವಾಗಿ ಹಿಂದಿನ ಟೆಂಟಿನ ಮೇಳಕ್ಕೆ ಸಂವಾದಿಯಾಗಿ ಪ್ರದರ್ಶಿಸುತ್ತಿದೆ. ಒಂದು ಕಾಲಘಟ್ಟದಲ್ಲಿ 'ಅಲ್ಪ ಸಂಬಳ' ಎಂದು ಕಡೆಗಣಿಸಿದ್ದ ಮೇಳವಿಂದು ಪ್ರಸಿದ್ಧ ಮೇಳವಾಗಿ ಹೊರಹೊಮ್ಮಿದೆ. ಮೇಳಕ್ಕೆ ಸೇರಲು ಕಲಾವಿದರು ಕಾತರಿಸುತ್ತಿದ್ದಾರೆ. ಕಟೀಲು ಮೇಳದೊಂದಿಗೆ ಸಾಗಿದ ನನ್ನ ಜೀವನದಲ್ಲಿ ಮೇಳದ ಮಾರ್ಪಾಟಾದ ಸ್ಥಿತಿಯೊಂದಿಗೆ, ನನ್ನ ಜೀವನವೂ ಸುಭದ್ರವಾದುದನ್ನು ಅನುಭವಿಸಿದ್ದೇನೆ.
                   ಕಾಲದ ಒಂದೊಂದು ಘಟನೆಗೆ ಸಾಕ್ಷಿಯಾಗಿ 'ಯಕ್ಷಭೃಂಗ' ಕೃತಿ ನಮ್ಮೆದುರಿಗಿದೆ. ಕುಬಣೂರರು  ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟದ ಮಣೆ.. ಪ್ರಸಂಗಗಳ ರಚಯಿತರು. ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ 'ಯಕ್ಷವಿಜಯ ವಿಠಲ' ಕೃತಿಯ ಸಂಪಾದಕರು. ಕುಬಣೂರು ಶ್ರೀಧರ ರಾಯರು ಸಾತ್ವಿಕ ಹಾಗೂ ಅತಿರೇಕಗಳಿಲ್ಲದ ಭಾಗವತ.