ಪ್ರಜಾವಾಣಿಯ - ದಧಿಗಿಣತೋ - ಅಂಕಣ / 21-7-2017
ಕಾಲದ ವಾಯುವೇಗಕ್ಕೆ ಬದುಕು ಹೊಂದಿಕೊಳ್ಳಲು ಏಗುತ್ತಿದೆ. ಸಂಬಂಧಗಳ ಗಾಢತೆ ಮಸುಕಾಗಿದೆ. ಒಂದು ಕ್ಲಿಕ್ಕಿನಷ್ಟು ವೇಗದಲ್ಲಿ ಸಂದ ಕಾಲವನ್ನು ಮರೆಯುತ್ತೇವೆ. ಈ ಮರೆವಿನೊಳಗೆ ಸಾಧನೆ, ವ್ಯಕ್ತಿವಿಶೇಷಗಳು, ಸಾಮಾಜಿಕ ಕೊಡುಗೆಗಳು ಕುಬ್ಜವಾಗುತ್ತವೆ. ಆದರೆ ಕಾಲದ ವೇಗಕ್ಕೆ ತನ್ನನ್ನು ಒಡ್ಡಿಕೊಂಡು ಅಲುಗಾಡದೆ ಭದ್ರವಾಗಿ ನಿಂತ ಸಾಧಕರ ಸಾಧನೆಗಳು ಮರಣದ ನಂತರವೂ ಕಾಡುತ್ತದೆ. ಈ ಕಾಡುವಿಕೆಯೊಳಗೆ ಅವರ ಅಪ್ಪಟ ತ್ಯಾಗವಿದೆ, ತಪಸ್ಸಿದೆ. ಇಂತಹ ವ್ಯಕ್ತಿತ್ವವನ್ನು ಹೊಂದಿದವರು, ಪುಚ್ಚೆಕೆರೆ ಕೃಷ್ಣ ಭಟ್. ಬಂಟ್ವಾಳ ತಾಲೂಕಿನ ಮಂಚಿಯವರು. ಅವರು ಕಟೀಲು ಶಾಲೆಯ ಮುಖ್ಯ ಗುರುವಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕಲಾವಿದ, ಸಂಘಟಕ. ಅವರು ದೂರವಾಗಿ ವರುಷ ಸಂದಿತು.
ಯಕ್ಷಗಾನ ಕ್ಷೇತ್ರದಲ್ಲಿ ಪುಚ್ಚೆಕೆರೆಯವರು ಬೌದ್ಧಿಕವಾಗಿ ಆಳವಾಗಿ ಬೇರು ಬಿಟ್ಟಿದ್ದರು. ಶಿಕ್ಷಣ ಕ್ಷೇತ್ರದಲ್ಲೂ ಗಟ್ಟಿಯಾದ ಹೆಜ್ಜೆ. ಅಸಂಖ್ಯಾತ ವಿದ್ಯಾರ್ಥಿಗಳ ನೆಚ್ಚಿನ ಗುರು. ಶಿಸ್ತಿನ ಪಾಲನೆಗಾಗಿ ಇಲಾಖೆಯ ಆದೇಶಕ್ಕಾಗಿ ಕಾಯುತ್ತಿರಲಿಲ್ಲ! ತನ್ನ ವ್ಯಕ್ತಿತ್ವದಿಂದ ತರಗತಿಗಳಲ್ಲಿ ಶಿಸ್ತನ್ನು ತಂದರು. ಎಳೆಯ ಮನಸ್ಸುಗಳನ್ನು ಓದಿದರು. ಮನ ಗೆದ್ದರು. ಹಾಗಾಗಿ ಕೃಷ್ಣ ಭಟ್ಟರನ್ನು ನೆನಪಿಸದ ಶಿಷ್ಯರು ಕಡಿಮೆ! 1964ರಲ್ಲಿ ಕಟೀಲು ಶಾಲೆಗೆ ಅಧ್ಯಾಪಕರಾಗಿ ಬಂದ ಪುಚ್ಚೆಕೆರೆಯವರಿಗೆ ನಿವೃತ್ತಿ ತನಕವೂ ಒಂದೇ ಮುಖ್ಯೋಪಾಧ್ಯಾಯ ಕೊಠಡಿ! ಅದಕ್ಕಿಂತ ಮೊದಲು ಸ್ವಲ್ಪ ಕಾಲ ಎಕ್ಕಾರು ಶಾಲೆಯಲ್ಲಿ ಅಧ್ಯಾಪನ.
ಅರ್ಧ ಶತಮಾನದ ಹಿಂದೆ ಹೊರಳೋಣ. ಕೃಷ್ಣ ಭಟ್ಟರು ಕಟೀಲಿಗೆ ಬಂದಾಗ ಕೇವಲ ಅಧ್ಯಾಪಕ. ಕಿನ್ನಿಗೋಳಿಯಲ್ಲಿ ನಡೆಯುತ್ತಿದ್ದ ತಿಂಗಳ ತಾಳಮದ್ದಳೆ ಮೂಲಕ ಅವರೊಳಗಿನ ಕಲಾವಿದನಿಗೆ ಮೇವು ಸಿಕ್ಕಿತು. ಅರ್ಥ ಹೇಳುತ್ತಾ ಬೆಳೆದರು. ಶಿಕ್ಷಣ ಕ್ಷೇತ್ರದ ಶಿಸ್ತನ್ನು ಮಿಳಿತಗೊಳಿಸಿದರು. ವೈಯಕ್ತಿಕವಾದ ಬದ್ಧತೆಯನ್ನು ಸ್ಪರ್ಷ ಮಾಡಿದರು. ಈ ಪಾಕ ಪರಿಪಕ್ವವಾಯಿತು. ಕಲಾ ಬದುಕಿನಲ್ಲಿ ಅಪ್ಪಟದ ಶುಭ್ರತೆಯನ್ನು ತಂದರು. ಅಧ್ಯಾಪಕ ಹುದ್ದೆಯಿಂದ ನಿವೃತ್ತರಾಗುವ ತನಕವೂ ಈ ಶುಭ್ರತೆಗೆ ಹೊಳಪಿತ್ತು. ಇತರರಲ್ಲೂ ಶುಭ್ರತೆಯನ್ನು ನಿರೀಕ್ಷೆ ಮಾಡುತ್ತಿದ್ದರು. ತನ್ನ ನಿಲುಕಿಗೆ ಬಾರದೇ ಇದ್ದಾಗ ಮಂದಹಾಸದೊಳಗೆ ಇಳಿದುಬಿಡುತ್ತಿದ್ದರು.
1974, ಭ್ರಾಮರಿ ಯಕ್ಷಗಾನ ಮಂಡಳಿಯ ಹುಟ್ಟು. ಕಾರ್ಯದರ್ಶಿಯಾಗಿ ದುಡಿತ. ಮಂಡಳಿಯು ಕಟೀಲಿನ ಪ್ರಧಾನ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆಯಿತು. ಹವ್ಯಾಸಿ ಸಂಘಗಳಿಗೆ ಬಯಲಾಟ ಸಪ್ತಾಹಗಳಲ್ಲಿ ಭಾಗವಹಿಸುವುದು ಹೆಮ್ಮೆಯ ವಿಚಾರವಾಯಿತು. ಸಂಘಗಳ ಪ್ರದರ್ಶನಗಳಲ್ಲಿ ರಂಗಬದ್ಧತೆಯನ್ನು ನಿರೀಕ್ಷಿಸುತ್ತಿದ್ದರು. ಸಂಘಟಕರಿಗೆ ಪ್ರತ್ಯೇಕವಾಗಿ ಕಿವಿಮಾತನ್ನೂ ಹೇಳುತ್ತಿದ್ದರು. ತನ್ನೆಲ್ಲ ಜವಾಬ್ದಾರಿಯ ಜತೆಗೆ ಸಪ್ತಾಹದ ಆಟಗಳ ನೋಟಕರಾಗಿದ್ದು ವಿಮರ್ಶಿಸುತ್ತಿದ್ದರು. ತಪ್ಪನ್ನು ಹೇಳಲು ಎಂದೂ ಹಿಂಜರಿಯುತ್ತಿದ್ದಿರಲಿಲ್ಲ. "ವಿಮರ್ಶೆ ಮುಖಸ್ತುತಿಯಾಗಬಾರದು. ಅದು ಕಲಾವಿದನ ಬೆಳವಣಿಗೆಗೆ ಮಾರಕ. ಆದರೆ ವಿಮರ್ಶೆಯು ಬೆಣ್ಣೆಯಿಂದ ಕೂದಲು ತೆಗೆದಂತಿರಬೇಕು. ವಿಮರ್ಶೆಯಲ್ಲಿ ಅಹಂ ಸಲ್ಲದು," ಎಂದು ಒಮ್ಮೆ ಹೇಳಿದ್ದರು.
ಕಟೀಲಿನ 'ಸರಸ್ವತಿ ಸದನ'ವು ಕಲಾವಿದರಿಗೆ ಮನೆ. ಉಪಾಧ್ಯಾಯರ ಕೊಠಡಿಯಲ್ಲೇ ಆತಿಥ್ಯ. ಕಲಾವಿದರು ಹೊಟ್ಟೆ ತುಂಬಾ ತಿಂದು ತೇಗಿದಾಗ ಖುಷಿ ಪಡುವ ಜಾಯಮಾನ. ಉಪಾಹಾರಕ್ಕಿಂತಲೂ ಕೃಷ್ಣ ಭಟ್ಟರ ಆತಿಥ್ಯವೇ ಹೊಟ್ಟೆಯನ್ನು ತಂಪಾಗಿಸುತ್ತಿತ್ತು. ಆತಿಥ್ಯದ ನಿಜಾರ್ಥದ ಸಾಕಾರತೆಗೆ ಪುಚ್ಚೆಕರೆ ಒಂದು ಉಪಮೆ. ಪ್ರತೀ ಪ್ರದರ್ಶನ ಆರಂಭದಲ್ಲಿ ಕೃಷ್ಣಭಟ್ಟರ ಸ್ವಾಗತ-ಪ್ರಸ್ತಾವನೆ, ಕೊನೆಗೆ ಧನ್ಯವಾದ - ಇದು ಕೂಡಾ ಒಂದು ಪಾತ್ರವೇ. ಕಲಾವಿದರು ತಂತಮ್ಮ ಪಾತ್ರ ಮುಗಿದ ನಂತರ ಪಾತ್ರದಿಂದ ಕಳಚಿಕೊಳ್ಳುತ್ತಿದ್ದರು. ಪುಚ್ಚೆಕೆರೆಯವರು ಪಾತ್ರಗಳನ್ನು ಕಳಚಿಕೊಳ್ಳುವುದೇ ಇಲ್ಲ!
ಹದಿನೈದು ವರುಷದ ಹಿಂದಿನ ಮಾತಿನ್ನೂ ನೆನಪಿದೆ. ಪುತ್ತೂರಿನಲ್ಲಿ ಜರುಗಿದ ಮಕ್ಕಳ ಯಕ್ಷ ಸಂಭ್ರಮದ ವೇದಿಕೆ. ಪುಚ್ಚೆಕೆರೆಯವರ ಅಭಿಪ್ರಾಯ - "ರಂಗಬದ್ಧತೆಯನ್ನು ಮೇಳದಿಂದ ನಿರೀಕ್ಷಿಸುವುದು ಕಷ್ಟ. ಅದು ಹವ್ಯಾಸಿ ರಂಗದಿಂದ ಸಾಧ್ಯ. ಹವ್ಯಾಸಿಗಳು ಮೇಳದ ಆದರ್ಶವನ್ನು ಅನುಸರಿಸುವುದು ರಂಗದ ಅಭಿವೃದ್ಧಿ ದೃಷ್ಟಿಯಿಂದ ಸಲ್ಲದು." ಸಂದರ್ಭ ಬಂದಾಗಲೆಲ್ಲಾ ಹವ್ಯಾಸಿ ರಂಗ, ಹವ್ಯಾಸಿ ಕಲಾವಿದರ ಬದ್ಧತೆಯನ್ನು ಗಟ್ಟಿ ಸ್ವರದಲ್ಲಿ ಹೇಳುತ್ತಿರುವ ಕೃಷ್ಣ ಭಟ್ಟರ ಒಡನಾಟದ ನೆನಪಿನ ತೇವ ಅರಿಲ್ಲ. ಹವ್ಯಾಸಿಗಳು ಅಭ್ಯಾಸ ಮಾಡಿ ರಂಗವೇರಿದರೆ ವೃತ್ತಿ ರಂಗದಿಂದಲೂ ಹೆಚ್ಚಿನ ರಂಗಾಭಿವ್ಯಕ್ತಿಯನ್ನು ನಿರೀಕ್ಷಿಸಬಹುದೆಂಬ ಆಶೆ ಅವರಲ್ಲಿತ್ತು.
"ಕಲಾವಿದರ ಕುರಿತು ಅತೀವ ಕಾಳಜಿ. ಶಿಸ್ತಿನ ನೇರ ಕಟುನುಡಿ ಅವರ ಭಾಷಣಗಳಲ್ಲಿತ್ತು. ಚುಟುಕಾಗಿ, ಹರಿತವಾದ ಮಾತುಗಳು ನಿರ್ವಹಣೆ, ಭಾಷಣಗಳಲ್ಲಿ ಕೇಳಬಹುದಿತ್ತು. ಕೂಟಗಳಲ್ಲಿ ಅಸಂಬದ್ಧ, ಲಂಬಿತ, ಅನಗತ್ಯ ಚರ್ಚೆಗಳನ್ನು ಅವರು ಸಹಿಸುತ್ತಿರಲಿಲ್ಲ." ಪ್ರೇಕ್ಷಕರನ್ನು ತನ್ನ ಮೊನಚಾದ ಚುರುಕು ಸಂಭಾಷಣೆಗಳಲ್ಲಿ ಹಿಡಿದಿಡುವ ಕಲೆ ಅವರದು ಎಂದು ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್ಟರು ಪುಚ್ಚೆಕೆರೆಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾರೆ. ಕಟೀಲಿನ ಎಲ್ಲಾ ಕೂಟಾಟಗಳ ಹೊಣೆಯನ್ನು ಪ್ರೀತಿಯಿಂದ ಹೊರುತ್ತಿದ್ದರು. ಈ ಹೊರೆಯನ್ನು ಯಾರೂ ಹೊರಿಸಿದ್ದಲ್ಲ!
ಬಯಲಾಟ ಸಂಯೋಜನೆಯಲ್ಲಿ ಅತ್ಯಂತ ಚತುರ. ಒಂದು ರಾತ್ರಿಯಲ್ಲಿ ನಾಲ್ಕೈದು ಪ್ರಸಂಗಗಳನ್ನು ಲೀಲಾಜಾಲವಾಗಿ ಆಡಿಸುವ ಚಾಕಚಕ್ಯತೆಯಿತ್ತು. ಎಲ್ಲರೊಂದಿಗೆ ಬೆರೆಯುವ ವಿಧಾನ ಹೃದ್ಯ. ಸಾಮಾನ್ಯವಾಗಿ ಓರ್ವ ಕಲಾವಿದರ ಪರಿಚಯ, ಅವರ ವೇಷಗಾರಿಕೆಯ ವಿಶೇಷತೆ, ಪ್ರಸಂಗಗಳ ಸಮಗ್ರ ಮಾಹಿತಿಯು ಭಟ್ಟರಂತೆ ಮತ್ತೊಬ್ಬರಿಗೆ ಬಾರದು. ಸ್ನೇಹಕ್ಕೆ ತೆರೆದುಕೊಳ್ಳುವ ಗುಣ. ಪ್ರಥಮ ಪರಿಚಯದಲ್ಲೇ 'ನಮ್ಮವ'ರಾಗುವ ಆಪ್ತತೆ. ಎಷ್ಟೋ ಸಲ ಮುಕ್ತ ಮಾತುಗಾರಿಕೆ, ಅಹಮಿಕೆ ಇಲ್ಲದ ವ್ಯಕ್ತಿತ್ವಗಳಿಂದಾಗಿ ಎಷ್ಟೊ ಮಂದಿ ತುಂಬಾ ಹಗುರವಾಗಿ ಕಂಡದ್ದನ್ನೂ ನೋಡಿದ್ದೇನೆ, ಕೇಳಿದ್ದೇನೆ. ಇದರಿಂದ ಕೃಷ್ಣ ಭಟ್ಟರು ಎಂದೂ ಹಗುರವಾದದ್ದಿಲ್ಲ.
ಪ್ರಸಂಗಕರ್ತ ಡಿ.ಎಸ್.ಶ್ರೀಧರ್ ಅವರು ಪುಚ್ಚೆಕೆರೆಯವರ ವಿನಯವಂತಿಕೆಯನ್ನು ನೆನಪಿಸಿಕೊಳ್ಳುತ್ತಾರೆ, "ಒಮ್ಮೆ ನಮ್ಮ ಕಾಲೇಜಿಗೆ ಭಾಷಣಕ್ಕಾಗಿ ಕರೆದಿದ್ದೆ. ಮೊದಲು ಒಪ್ಪಲಿಲ್ಲ. ಯಾಕೆಂದರೆ 'ತಾನು ಪ್ರೈಮರಿ ಶಾಲೆಯ ಮಾಸ್ಟ್ರು, ನಿಮ್ಮದು ಕಾಲೇಜು. ನನ್ನ ಮಾತು ಸಾಕಾದೀತೇ.' ಇದು ಅವರ ಚಿಂತೆ. ಒತ್ತಾಯಕ್ಕೆ ಬಂದರು. ಪ್ರೌಢ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಬಿಡಿ, ಉಪಾಧ್ಯಾಯ ಮಹಾಸದರಿಗೂ ಅದು ನಿಲುಕದಷ್ಟು ಗಟ್ಟಿ ವಿಷಯಗಳಿಂದ ಕೂಡಿತ್ತು. ಕಟೀಲು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರಿಗೆ ಸಮಾನವಾಗಿ ಖಂಡಿತಾ ಮತ್ತೊಬ್ಬರಿಲ್ಲ. ಸದಾ ಓಡಾಡುತ್ತಾ, ಏಕಕಾಲಕ್ಕೆ ಹಲವು ಹೊಣೆಗಳನ್ನು ನಿರ್ವಹಿಸುವ ಚಾಕಚಕ್ಯತೆ. ಅವರಿಗೆ ಅವರೇ ಸಾಟಿ.
ಎಷ್ಟೋ ಕಡೆ ಕಲಾವಿದರೇ ಸಂಘಟಕರಾಗುತ್ತಾರೆ. ಸಂಘಟನೆಯಲ್ಲೇ ಅವರ ಆಯುಷ್ಯ ಮುಗಿದಿರುತ್ತದೆ! ಇತ್ತ ಸಂಘಟನೆಯೂ ಬೆಳೆಯದು, ಅತ್ತ ತಾನೂ ಬೆಳೆಯಲಾರ! ಕೆಲವರಿಗದು ಇಷ್ಟವೂ ಕೂಡಾ. ಆದರೆ ಕಲಾವಿದನಾಗಿದ್ದುಕೊಂಡು ಸಂಘಟಕನಾಗಿದ್ದರೆ ಜರಗುವ ಕೂಟಾಟಗಳನ್ನು ಕೇಳುತ್ತಾ ತಾನೂ ಬೆಳೆಯಬೇಕು. ಹೀಗೆ ಬೆಳೆದವರ ಸಂಖ್ಯೆ ಗಣನೀಯವಲ್ಲ. ಪುಚ್ಚೆಕೆರೆಯವರು ಸಂಘಟನೆಯೊಂದಿಗೆ ತಾನೂ ಅರ್ಥಧಾರಿಯಾಗಿ ಬೆಳೆದರು, ವೇಷಧಾರಿಯಾಗಿ ರೂಪುಗೊಂಡರು. ಇಂದ್ರಜಿತು, ಶಿಶುಪಾಲ, ಕೃಷ್ಣ ಸಂಧಾನ ಪ್ರಸಂಗದ ವಿದುರ, ಕೃಷ್ಣ; ವಾಲಿವಧೆಯ ಸುಗ್ರೀವ.. ಇಂತಹ ಪಾತ್ರಗಳು ಕೃಷ್ಣ ಭಟ್ಟರಿಗೆ ಕಷ್ಟವಲ್ಲ. ಕಟೀಲಿನಲ್ಲಿ ನಡೆಯುತ್ತಿದ್ದ ವಿಚಾರಗೋಷ್ಠಿ, ಕಮ್ಮಟಗಳ ಹಿಂದಿನ ಶಕ್ತಿಯಾಗಿದ್ದರು, ಎಂದು ಮೂಲತಃ ಕಟೀಲಿನವರೇ ಆಗಿದ್ದ, ಪ್ರಸ್ತುತ ಕಡಲಾಚೆಯಿರುವ ಪದ್ಮನಾಭ ಕಟೀಲು ಕೃಷ್ಣ ಮಾಸ್ಟ್ರ ಜತೆಗಿನ ಒಡನಾಟಕ್ಕೆ ಮಾತು ಕೊಡುತ್ತಾರೆ.
ಬದುಕಿನದ್ದಕ್ಕೂ ಪುಚ್ಚೆಕೆರೆಯವರು ಮಾತನಾಡುತ್ತಾ ಬೆಳೆದವರು. ಮಾತು ಅವರ ಸರ್ವಸ್ವ. ಬದುಕಿನ ಕೊನೆಯ ಕಾಲಘಟ್ಟದಲ್ಲಿ ಮಾತು ಮೌನವಾಗಿತ್ತು. ಮೌನವಾಗಿದ್ದಾಗ ಭೇಟಿಯಾಗಿದ್ದೆ. ಅಲ್ಲ್ಲಿದ್ದಷ್ಟೂ ಹೊತ್ತು ಮೌನಕ್ಕೆ ಜಾರಿಸಿದರು! ಹಲವು ಬಾರಿ ಮುಖ ನೋಡಿದರು, ಆಗಸ ದಿಟ್ಟಿಸಿದರು! ಪರಸ್ಪರರ ಮಧ್ಯೆ ಅಂಧಕಾರ.. ಅಲ್ಲಲ್ಲ.. ಗಾಢಾಂಧಕಾರ. ಉತ್ಸಾಹದಿಂದ ಪುಟಿಯುತ್ತಾ ಇದ್ದಂತೆ ಕೃಷ್ಣ ಭಟ್ಟರು ಅಷ್ಟೇ ವೇಗದಲ್ಲಿ ಹಿಂದೆ ಸರಿದರು. ಉತ್ಸಾಹದಿಂದ ಇದ್ದಾಗ ಎಷ್ಟೊಂದು ಅಭಿಮಾನಗಳು! ಹಿಂದೆ ಸರಿದಾಗ ಅಭಿಮಾನದ ಗಾಢತೆಗೆ ಮಸುಕು. ಇದುವೇ ಜೀವ-ಜೀವನ. ಕಾಲದ ವಾಯುವೇಗದ ಪರಿಣಾಮ.
2017 ಜುಲೈ 21 - ಪುಚ್ಚೆಕೆರೆ ಕೃಷ್ಣ ಭಟ್ಟರ ವರ್ಶಾಂತಿಕ. ಅಪರಾಹ್ನ ಮಂಚಿಯ ಲಯನ್ಸ್ ಸಭಾಭವನದಲ್ಲಿ ಅವರ ಸ್ಮೃತಿ ಕಾರ್ಯಕ್ರಮ. ನೆನಪು ಸಂಚಿಕೆ ಅನಾವರಣ. ತಾಳಮದ್ದಳೆ. ಅಭಿಮಾನಿಗಳ, ಕುಟುಂಬದವರ ಆಯೋಜನೆ. ಸಾಮಾಜಿಕ, ಶಿಕ್ಷಣ, ಕಲಾ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಯೂರಿದ ಕಲಾ-ತ್ರಿವಿಕ್ರಮನಿಗೆ ಸಲ್ಲುವ ಗೌರವ.

No comments:
Post a Comment