Tuesday, September 19, 2017

ಕಾಲದ ಪಲ್ಲಟಕ್ಕೆ ಅಲುಗಾಡದ ಮನೆ



ಪ್ರಜಾವಾಣಿಯ - ದಧಿಗಿಣತೋ  - ಅಂಕಣ / 11-8-2017

              ನೂರು ವರುಷ ಮೀರಿದ 'ಬಡೆಕ್ಕಿಲ' ಮನೆಯ ಜಗಲಿಯಲ್ಲಿ ಪದ್ಮನಾಭ ಭಟ್ಟರು (70) ಹಾರ್ಮೋನಿಯಂನಲ್ಲಿ ಶ್ರುತಿ ಹಿಡಿಯಲು ಯತ್ನಿಸುತ್ತಿದ್ದಾರೆ. ಯಕ್ಷಗಾನಕ್ಕೂ ಮನೆಗೂ ಹೊಸೆದ ಗಾಢ ನಂಟನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೂಡ್ ಬಂದಿದೆ. ಜಾಗಟೆ ಹಿಡಿದು ಯಕ್ಷಗಾನದ ಪದ್ಯಗಳನ್ನು ಗುಣುಗುಣಿಸಲು ಸಿದ್ಧತೆ ನಡೆಸಿದ್ದಾರೆ. ಮೂರ್ನಾಲ್ಕು ತಲೆಮಾರಿನಿಂದ ಹರಿಯುತ್ತಿದ್ದ ಕಲಾವಾಹಿನಿಯ ಗುಂಗು ಬದುಕಿನ ಸಂಕಟಗಳನ್ನು ದೂರ ಮಾಡುತ್ತಿದೆ.
              ಬಂಟ್ವಾಳ (ದ.ಕ.) ತಾಲೂಕಿನ ಕೆದಿಲ ಗ್ರಾಮದಲ್ಲಿದೆ, ಬಡೆಕ್ಕಿಲ ಮನೆ.  ಎಲ್ಲಾ ಕಡೆ ಮಳೆಗಾಲದಲ್ಲಿ ಹಪ್ಪಳ ಸದ್ದು ಮಾಡಿದರೆ, ಈ ಮನೆಯಲ್ಲಿ ಚೆಂಡೆ-ಮದ್ದಳೆ ಸದ್ದು, ಬಂಧುಗಳು ವಿನೋದಕ್ಕೆ ಆಡುತ್ತಿದ್ದ ಮಾತುಗಳು. ಅಂದರೆ ಯಕ್ಷ ನಿನಾದವು ಇಲ್ಲಿ ಮಂತ್ರ. ಮೊದಲು 'ಸಣ್ಣುಞಿ ಅಜ್ಜ' ವಾಸವಾಗಿದ್ದ ಮನೆ. ಅಲ್ಲಿಂದ ಶುರುವಾದ ಕಲಾ ಪರಂಪರೆಯು ಅವರ ಮೊಮ್ಮಗ ಪದ್ಮನಾಭ ಭಟ್ಟರ ತನಕವೂ ಹರಿದಿದೆ.
              ಬಡೆಕ್ಕಿಲ ಮನೆತನದ ಯಕ್ಷಗಾನದ ವೈಭವಕ್ಕೆ ಈಗ ಮಾತಿಗೆ ಸಿಕ್ಕುವ ಹಿರಿಯರು ಪದ್ಮನಾಭ ಭಟ್. ಇವರು ಭಾಗವತರು. ಅಗರಿ ಶೈಲಿಯಿಂದ ಪ್ರಭಾವಿತ. ಒಂದು ಕಾಲಘಟ್ಟದಲ್ಲಿ ಇವರು ಭಾಗವಹಿಸುವ ನಿಶ್ಚಿತ ಕೂಟ, ಆಟಗಳಿದ್ದುವು. ಈಗಲೂ ಕುಟುಂಬ, ಆಪ್ತರ ಸಂಯೋಜನೆಯ ಕೂಟಗಳಿಗೆ ಇವರೇ ಭಾಗವತರು. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಂದು ಕಲಾರಾಧನೆಗೆ ಮಣೆ.
              ಒಂದು ಕುಟುಂಬದ ಹಿರಿಯರಲ್ಲಿದ್ದ ಆಸಕ್ತಿಯು ಇತರ ಸದಸ್ಯರಲ್ಲಿರಬೇಕೇಂದೇನೂ ಇಲ್ಲ. ಇರುವುದೂ ಇಲ್ಲ. ಆಸಕ್ತಿಯು ಅವರವರ ಮನಃಸ್ಥಿತಿ ಮತ್ತು ಆಯ್ಕೆ. ಬಡೆಕ್ಕಿಲ ಮನೆಯ ಎಲ್ಲಾ ಸದಸ್ಯರಿಗೂ ಯಕ್ಷಗಾನವೆಂದರೆ ಪ್ರಿಯ. ಅದು ಮನೆಯ ಸಾಂಸ್ಕೃತಿಕ ಪರಂಪರೆ. ಇಲ್ಲಿಗೆ ವಿವಾಹವಾಗಿ ಬಂದ ಸೊಸೆಯಂದಿರೂ ಕೂಡಾ ಒಂದಲ್ಲ ಒಂದು ವಿಧದಲ್ಲಿ ಕಲಾವಿದರೇ! ದೈನಂದಿನ ಮಾತುಕತೆಗಳಲ್ಲಿ ಯಕ್ಷಗಾನ ಹೊರತಾದ ಸಂಭಾಷಣೆಗಳು ಅಪರೂಪ.
             ಮನೆಯಲ್ಲಿ ಶ್ರಾದ್ಧ, ಪೂಜೆ, ಶುಭಕಾರ್ಯಗಳಿದ್ದರೆ ತಾಳಮದ್ದಳೆ ಖಾಯಂ. ನಿರ್ಧಾರಕ್ಕೆ ಮೀನಮೇಷ ಎಣಿಸುವುದಿಲ್ಲ. ಅದು ಸ್ಥಾಪಿತ ಕಲಾಪ. ಯಾರ್ಯಾರು ಬರುತ್ತಾರೆ ಎಂದು ಮೊದಲೇ ನಿಶ್ಚಯಿಸಿ ಪ್ರಸಂಗ ನಿಗದಿ. ಜತೆಗೆ ಪಾತ್ರಗಳ ಹಂಚೋಣ. ಪದ್ಯಗಳನ್ನು ಮೊದಲೇ ಗುರುತು ಹಾಕಿ ಪದ್ಮನಾಭ ಭಟ್ಟರು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. ಹೀಗೆ ವ್ಯವಸ್ಥೆಯನ್ನು ಮಾಡಿಕೊಂಡಾಗ ಭಾಗವಹಿಸುವ ಸದಸ್ಯರಿಗೆ ಗೊಂದಲವಾಗುವುದಿಲ್ಲ.
             ಮನೆಯ ಹಲವು ಸದಸ್ಯರು ದೂರದೂರಿನಲ್ಲಿದ್ದಾರೆ. ಶುಭ ಕಾರ್ಯಗಳ ಜತೆಗೆ ತಾಳಮದ್ದಳೆಯೂ ಪೋಣಿತವಾದಾಗ ಸಮಯ ಹೊಂದಾಣಿಸಿಕೊಂಡೇ ಬರುತ್ತಾರೆ. ಎಲ್ಲಾ ಸದಸ್ಯರೂ ಭಾಗವಹಿಸುತ್ತಾರೆ. ಊಟವಾಗಿ ಕೈತೊಳೆದ ತಕ್ಷಣ ಯಾರೂ ತೆರಳುವುದಿಲ್ಲ. ಬರುವಾಗಲೇ ತೆರಳಲು ಅಡ್ವಾನ್ಸ್ ಟಿಕೇಟ್ ಮಾಡಿ ಬಂದಿರುವುದಿಲ್ಲ. ಕಲಾರಾಧನೆ ಮೂಲಕ ಹಿರಿಯರ ನೆನಪು ಪದ್ಧತಿಯಾಗಿ ರೂಪುಗೊಂಡಿದೆ, ಎನ್ನುವ ಸದಾಶಯವನ್ನು ಹಂಚಿಕೊಳ್ಳುತ್ತಾರೆ, ಕೆದಿಲ ಗಣರಾಜ ಭಟ್. ಇವರು ಅರ್ಥಧಾರಿ, ವೇಷಧಾರಿ.
           'ಮನೆ ತಾಳಮದ್ದಳೆ'ಯು ಕಳೆದ ಕಾಲಮಾನದ ಸಂಭ್ರಮ. ಮನೆಯ ಸಮಾರಂಭಗಳಲ್ಲದೆ, ನಿಯಮಿತವಾಗಿ ನಡೆಯುವ ಕೂಟಗಳು ಆ ಕಾಲದ ದೊಡ್ಡ ಸುದ್ದಿ. ಪ್ರತಿಷ್ಠಿತ ಕಲಾವಿದರು ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. ಹಿರಿಯ ಕಲಾವಿದರೊಂದಿಗೆ ಹವ್ಯಾಸಿಗಳಿಗೂ ಕೂಟಗಳಲ್ಲಿ ಅವಕಾಶ ಸಿಗುತ್ತಿತ್ತು. ಬೌದ್ಧಿಕವಾಗಿ ಬೆಳೆಯುವುದಲ್ಲದೆ, ತಾಳಮದ್ದಳೆಯ ಸೂಕ್ಷ್ಮ ವಿಚಾರಗಳನ್ನು ತಿಳಿದಂತಾಗುತ್ತದೆ. ಹಿರಿಯರ ವಾಗ್ಯುದ್ಧ, ಅವರಲ್ಲಿರುವ ಪಾಂಡಿತ್ಯವನ್ನು ಪ್ರತ್ಯಕ್ಷ ನೋಡುವ ಅವಕಾಶಗಳು ಮನೆ ತಾಳಮದ್ದಳೆಗಳಲ್ಲಿ ಸಿಕ್ಕಿವೆ," ಎಂದು ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್ಟರು ಯಾವಾಗಲೂ ನೆನಪಿಸುವುದುಂಟು. ಬಡೆಕ್ಕಿಲ ಮನೆಯ ಕೂಟವೂ ಈ ಆಶಯದಿಂದ ಹೊರತಲ್ಲ. ಹಿರಿಯರ ಮಾರ್ಗವನ್ನು ಕಿರಿಯರು ಅನುಸರಿಸಿ ಅರ್ಥಧಾರಿಯಾಗಿ ರೂಪುಗೊಂಡಿದ್ದಾರೆ, ರೂಪುಗೊಳ್ಳುತ್ತಿದ್ದಾರೆ.
              ಬಡೆಕ್ಕಿಲ ಮನೆಯಲ್ಲಿ ಪ್ರಕೃತ ಪದ್ಮನಾಭ ಭಟ್ಟರ ವಾಸ. ಯಕ್ಷಗಾನದ ಕಳೆದ ಕಾಲದ ಕಥನಕ್ಕೆ ಸಾಕ್ಷಿಯಾಗುತ್ತಾರೆ  ನಾನು ನಾಲ್ಕನೇ ತರಗತಿ ಓದುತ್ತಿದ್ದ ಸಮಯ. ಹಾಸ್ಯರತ್ನ ಕೀರ್ತಿಶೇಷ ವಿಟ್ಲ ಗೋಪಾಲಕೃಷ್ಣ ಜೋಶಿಯವರ ಸಹೋದರ ನಮ್ಮೂರಿನ ಪಕ್ಕದಲ್ಲಿ ಅಧ್ಯಾಪಕರಾಗಿದ್ದರು. ನಮ್ಮ ಮನೆಯಲ್ಲಿ ಭೋಜನ ವ್ಯವಸ್ಥೆ. ಅವರಿಗೆ ಸಾಹಿತ್ಯ ಒಲವಿತ್ತು. ಭಾಗವತಿಕೆಯನ್ನು ಮಾಡುತ್ತಿದ್ದರು. ಅವರು ರಚಿಸಿದ ಸಾಹಿತ್ಯಗಳಿಗೆ ನನಗೆ ತಿಳಿದಂತೆ ಹೇಳುತ್ತಿದ್ದೆ. ಅವರು ತುಂಬಾ ಉತ್ತೇಜನ ನೀಡಿದರು.
                ಕೆದಿಲ ವಾಲ್ತಾಜೆಯಲ್ಲಿ ಎನ್.ವಿ.ಕೃಷ್ಣರಾಯರು ಅರ್ಥಧಾರಿ. ಅವರಿಗೆ ಕುಬಣೂರು ಬಾಲಕೃಷ್ಣ ರಾಯರೊಂದಿಗೆ ನಿಕಟ ಒಡನಾಟವಿತ್ತು. ಹಲವೆಡೆ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದರು.  ಸ್ಥಳೀಯ  ಕೂಟಗಳಲ್ಲೂ ಈ ಹಿರಿಯರು ಭಾಗವಹಿಸುವುದು ನಮಗೆಲ್ಲಾ ಖುಷಿ. ಆಗ ಅಂಡೆಪುಣಿ ಕೃಷ್ಣ ಭಟ್ಟರು ಭಾಗವತರು. ಅವರದು ಉತ್ತಮ ಕಂಠಶ್ರೀ. ಅಪೂರ್ವ ಪ್ರಸಂಗಗಳ ಜ್ಞಾನ. ಬಳಿಕ ಭಾಗವತಿಕೆಯ ಆಸಕ್ತಿ ನನಗೂ ಅಂಟಿತು. ಯಕ್ಷಗಾನದಲ್ಲಿ 'ಮಟ್ಟು' ಮುಖ್ಯ. ಈಗಿನಂತೆ ಪದ್ಯವನ್ನು ಲಂಬಿಸುವ ಕ್ರಮ ಇರಲಿಲ್ಲ. ಲಂಬಿಸಿದರೆ ಅದು ಯಕ್ಷಗಾನವೂ ಅಲ್ಲ.
              ಗತ ನೆನಪುಗಳನ್ನು ಜ್ಞಾಪಿಸಿಕೊಂಡ ಪದ್ಮನಾಭ ಭಟ್ಟರು ಒಂದು ಸ್ವಾರಸ್ಯವನ್ನು ಹೇಳಿದರು - ಊರಿನ ಪಕ್ಕದಲ್ಲೊಂದು ತಾಳಮದ್ದಳೆ. ಪ್ರಸಂಗ ವಾಲಿ ಮೋಕ್ಷ. ಹಿರಿಯರಾದ ಕರಾಯ ಕೊರಗಪ್ಪರ 'ವಾಲಿ'ಯ ಪಾತ್ರ. ಕಥೆಯಲ್ಲಿ - ವಾಲಿಯ ಎದೆಯಲ್ಲಿ ಬಾಣವು ನಾಟಿದ ನಂತರ ಆತ ರಾಮನನ್ನು ಜರೆಯುತ್ತಾನೆ. ಕೊನೆಗೆ ಪಶ್ಚಾತ್ತಾಪ ಪಡುವ ದೃಶ್ಯ. ಈ ಸನ್ನಿವೇಶದಲ್ಲಿ ತನ್ನ ತೊಡೆಯಲ್ಲಿ ಚಿಕ್ಕ ಬಾಲಕನನ್ನು ಮಲಗಿಸಿ ಅರ್ಥ ಹೇಳುತ್ತಿದ್ದರು! ಅಂದರೆ ವಾಲಿಯು ಅಂಗದನನ್ನು ತನ್ನ ತೊಡೆಯಲ್ಲಿರಿಸಿಕೊಂಡಿದ್ದಾನೆ ಎಂದರ್ಥ. ಹೀಗೆ ಮಾಡಿದರೆ ಅರ್ಥ ಹೇಳಲು ಮೂಡ್ ಬರುತ್ತಿತ್ತಂತೆ.
             ಮೊದಲು ತಾಳಮದ್ದಳೆಯಲ್ಲೂ ದೃಶ್ಯವು ಹೊಸೆದುಕೊಳ್ಳುತ್ತಿತ್ತು. ದಕ್ಷಾಧ್ವರ ಪ್ರಸಂಗದಲ್ಲಿ 'ವೀರಭದ್ರ' ಪಾತ್ರಕ್ಕೆ ಬಾರಣೆ, ದುಶ್ಶಾಸನ ವಧೆ ಪ್ರಸಂಗದಲ್ಲಿ 'ದುಶ್ಶಾಸನ'ನನ್ನು ನಿದ್ದೆಯಿಂದ ಎಬ್ಬಿಸುವ ದೃಶ್ಯ, ಭಾರ್ಗವ ವಿಜಯ ಪ್ರಸಂಗದಲ್ಲಿ ’ಜಮದಗ್ನಿಯು’ ರೇಣುಕೆಯನ್ನು ಶಿಕ್ಷಿಸುವ ಸಂದರ್ಭಗಳು 'ಲೈವ್' ಆಗಿ ಪ್ರಸ್ತುತವಾಗುತ್ತಿದ್ದುದಕ್ಕೆ ಸಾಕ್ಷಿಯಾಗಿ ಹಿರಿಯರು ಮಾತಿಗೆ ಸಿಗುತ್ತಾರೆ. ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲ. ಯಕ್ಷಗಾನವನ್ನು ಅಷ್ಟೊಂದು ಗಾಢವಾಗಿ ಅವಾಹಿಸಿಕೊಂಡಿದ್ದರು.
              ಬಡೆಕ್ಕಿಲ ಮನೆಯ ಯುವಕರು ನಗರ ಸೇರಿದ್ದಾರೆ. ಸಂತುಷ್ಟ ಉದ್ಯೋಗದಲ್ಲಿದ್ದಾರೆ. ಸಹಜವಾಗಿ ಕಲೆಯ ಗುಂಗಿಗೆ ಮಸುಕಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಹಿರಿಯರು ವಯೋಧಿಕ್ಯದಿಂದ ದೂರವಾಗಿದ್ದಾರೆ. ಕೂಟಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಾಲದ ಪಲ್ಲಟಕ್ಕೆ ಕಲಾವಿದರ ಸಂಖ್ಯೆ ಇಳಿದರೂ, ಕಲೆಯ ಆಸಕ್ತಿ ಇಳಿಯಲಿಲ್ಲ. ಈಗ ಕುಟುಂಬದಲ್ಲಿ ಏನಿಲ್ಲವೆಂದರೂ ಹತ್ತೋ ಹದಿನೈದು ಮಂದಿ ಹಿಮ್ಮೇಳಕ್ಕೋ, ಮುಮ್ಮೇಳಕ್ಕೋ ಸಿಗುತ್ತಾರೆ. ಹೊಸತಲೆಮಾರಿನಲ್ಲಿ ಯಕ್ಷಗಾನವಲ್ಲದೆ ಸಂಗೀತ, ನೃತ್ಯ, ವಯಲಿನ್, ತಬಲ.. ಹೀಗೆ ಒಂದಲ್ಲ ಒಂದು ಕಲೆಯ ಸ್ಪರ್ಶದಲ್ಲೂ ಬದುಕಿನಲ್ಲಿ ಸುಭಗತನವನ್ನು ಕಾಣುತ್ತಿದ್ದಾರೆ.
          ಎಲ್ಲರನ್ನು ಒಟ್ಟು ಮಾಡಲು ಮತ್ತು ಹಿರಿಯರ ಆಶಯವನ್ನು ಸ್ಥಾಯಿಯಾಗಿಸಲು ಬಡೆಕ್ಕಿಲ ಮನೆಯ ಯಕ್ಷಾವರಣಕ್ಕೆ ಸಂಘಟಿತ ರೂಪ ನೀಡಲಾಗಿದೆ. 2013ರಲ್ಲಿ 'ಯಕ್ಷಕೂಟ ಬಡೆಕ್ಕಿಲ' ಸಂಘವನ್ನು ಹುಟ್ಟು ಹಾಕಿದ್ದಾರೆ. ಅದರ ಮೂಲಕ ತಾಳಮದ್ದಳೆ ನಡೆಯುತ್ತಿದೆ.     ಯಕ್ಷಗಾನದ ಮನೆ ಎಂದಾಗ ಕುರಿಯ, ಪದ್ಯಾಣ, ಕೆರೆಮನೆ, ಕರ್ಕಿ.... ಹೀಗೆ ಅನೇಕ ಮನೆತನಗಳು ಯಕ್ಷಗಾನಕ್ಕೆ ತಮ್ಮದೇ ಕೊಡುಗೆ ನೀಡಿರುವುದು ಇತಿಹಾಸ. ಬಡೆಕ್ಕಿಲ ಮನೆಯೂ ಕೂಡಾ ಯಕ್ಷಗಾನ ಪರಂಪರೆಯೊಂದರ ಉಳಿಯುವಿಕೆಗೆ ಕಾಣ್ಕೆ ನೀಡಿದೆ. ಬದಲಾದ ಕಾಲಘಟ್ಟದಲ್ಲೂ ಕಲಾತೇವ ಆರದಂತೆ ನೋಡಿಕೊಂಡಿದೆ. ಇದು ಮನೆತನದ ಗಟ್ಟಿ ಬಳುವಳಿ.

No comments:

Post a Comment