ಗುರು ದಿವಾಣ ಶಿವಶಂಕರ ಭಟ್ಟರು ಗಿಡ ನೆಡುವ ಮೂಲಕ ಶಿಬಿರಕ್ಕೆ ಚಾಲನೆ
ಪ್ರಜಾವಾಣಿಯ - ದಧಿಗಿಣತೋ - ಅಂಕಣ / 7-7-2017ಯಕ್ಷಗಾನದ ಒಂದೊಂದು ವಿಭಾಗವು ಕಾಲದ ಓಟಕ್ಕೋ, ಮನಃಸ್ಥಿತಿಯ ವಿಕಾರಗಳಿಗೋ ಸಿಕ್ಕಿ ಒದ್ದಾಡುವ ಅನುಭವ ಹಲವರದು. ಯಾರನ್ನೂ ದೂರುವಂತಿಲ್ಲ, ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಕಾರಣರೇ! 'ಒಳಿತನ್ನು ಮಾಡಬೇಕಿಲ್ಲ, ಆದರೆ ಕೆಟ್ಟದ್ದನ್ನು ಬೆಂಬಲಿಸಬಾರದು' ಎಲ್ಲೋ ಓದಿದ ಸೊಲ್ಲು ರಂಗದ ಒದ್ದಾಟಕ್ಕೂ ಅನ್ವಯ. ರಂಗದ ನರಳಾಟಕ್ಕೆ ಕೊನೆ ಎಂದು? ಹಳಿಗೆ ತರುವವರಾರು? ರಂಗಸೊಬಗೆನ್ನುವುದು ಮರೀಚಿಕೆಯೇ? ಮುಂತಾದ ಪ್ರಶ್ನೆಗಳು ಹೊಸದೇನಲ್ಲ. 'ರಂಗದ ಕೆಲವು ವ್ಯವಸ್ಥೆಗಳನ್ನು ಈಗ ಇದ್ದಂತೆಯೇ ಮರು ನಿರ್ಮಾಣ ಮಾಡುವುದು' ಬಹುಶಃ ವರ್ತಮಾನದ ಗೊಣಗಾಟಕ್ಕೆ ಉತ್ತರವಾಗಬಹುದು. ಎಣಿಸಿದಷ್ಟು ಸುಲಭದ ಮಾತಲ್ಲ, ಕೆಲಸವಲ್ಲ.
ಮಕ್ಕಳ, ಮಹಿಳೆಯರ ತಂಡಗಳು ದೊಡ್ಡದಾಗಿ ಹೆಜ್ಜೆಯೂರಿವೆ. ಕಾಲಮಿತಿಯ ಯಕ್ಷಗಾನ ತರಗತಿಗಳಿಂದಾಗಿ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿವೆ. ಮಕ್ಕಳ ತಂಡಗಳಿಗೆ ಅಕಾಡೆಮಿಕ್ ಸ್ವರೂಪ ನೀಡುವುದು ಅವಶ್ಯ. ನಾಟ್ಯ, ಅರ್ಥ, ವೇಷಗಳು 'ಯಕ್ಷಗಾನ ಕಾರ್ಯಕ್ರಮ' ಆಗುತ್ತದಷ್ಟೇ ವಿನಾ ವಿವಿಧ ಆಯಾಮಗಳ ದರ್ಶನ ನೀಡುವುದಿಲ್ಲ. ಎಡನೀರಿನಲ್ಲಿ ಜರುಗಿದ ಯಕ್ಷಗಾನ ತರಬೇತಿ ಶಿಬಿರದಿಂದ ಮರಳುವಾಗ ಈ ಎಲ್ಲಾ ವಿಚಾರಗಳು ನನ್ನೊಳಗೆ ಗೂಡು ಕಟ್ಟಿದ್ದುವು. ಶಿಬಿರವನ್ನು ಕಾಸರಗೋಡು ಸರಕಾರಿ ಕಾಲೇಜಿನ 'ಯಕ್ಷಗಾನ ಸಂಶೋಧನಾ ಕೇಂದ್ರ' ಆಯೋಜಿಸಿತ್ತು. ಒಂದು ತಿಂಗಳ ಕಾಲ ಜರುಗಿದ ಶಿಬಿರದಲ್ಲಿ ಮೂವತ್ತೆರಡು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಸ್ತುಬದ್ಧವಾದ ಕಾರ್ಯ ಹೂರಣ. ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಸಂಯೋಜನಾಧಿಕಾರಿ. ಜತೆಗೆ ಡಾ.ರಾಜೇಶ್ ಬೆಜ್ಜಂಗಳ ಮತ್ತಿತರರು ಒಂದು ತಪಸ್ಸಿನಂತೆ ಆಯೋಜಿಸಿದ್ದರಿಂದ ಯಕ್ಷಗಾನದ ಕೆಲವು ಪ್ರಾತಿನಿಧಿಕ ವಿಚಾರಗಳನ್ನು ಪರಿಚಯಿಸಲು ಸಾಧ್ಯವಾಗಿತ್ತು. ಈಗಿರುವ ರಂಗದ ವಿನ್ಯಾಸ ಏನಿದೆಯೋ ಅದರ ಛಾಯಾಪ್ರತಿ ಆಗದೆ, ಪ್ರತ್ಯೇಕ ಹಾದಿಯನ್ನು ಕಂಡುಕೊಂಡು, ಆ ಹಾದಿಯಲ್ಲಿ ಕ್ರಮಿಸಲು ಶಿಬಿರ ಒಂದು ಕೈತಾಂಗು ಆಗಿದೆ. ನಮ್ಮ ನಡುವೆ ಇರುವ ತರಬೇತಿ ತಂಡಗಳು ಒಮ್ಮೆ ಕತ್ತು ತಿರುಗಿಸಿ ಇತ್ತ ನೋಡಬಹುದೇನೋ.
ದಿವಾಣ ಶಿವಶಂಕರ ಭಟ್ ಮತ್ತು ಸಬ್ಬಣಕೋಡಿ ರಾಮ ಭಟ್ - ಗುರುಗಳು. ಬಹುಕಾಲ ಅನೇಕ ಶಿಷ್ಯರನ್ನು ರೂಪಿಸಿದ ಅನುಭವಿಗಳು. ಒಂದು ತಿಂಗಳು ವಿದ್ಯಾರ್ಥಿಗಳ ಜತೆಗಿದ್ದು ಮನಸ್ಸನ್ನು, ಕಲೆಯನ್ನು ಹಂಚಿಕೊಂಡಿದ್ದಾರೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಗೈರುಹಾಜರಾಗದೆ ಸ್ಪೂರ್ತಿಯಿಂದ ಭಾಗವಹಿಸಿದ್ದು ಕಾರ್ಯಹೂರಣದ ಗಟ್ಟಿತನ. "ಉಪನ್ಯಾಸಗಳನ್ನು ಹೊರಗಿಟ್ಟು, ಪ್ರತ್ಯಕ್ಷ ಅನುಭವಕ್ಕೆ ಆದ್ಯತೆ. ಬಹುಶಃ ಉಪನ್ಯಾಸ, ಪ್ರಬಂಧ ಮಂಡನೆಗಳನ್ನು ಆಯೋಜಿಸಿದ್ದರೆ ವಿದ್ಯಾರ್ಥಿಗಳ ಆಸಕ್ತಿಗಳನ್ನು ನಾನು ಕಸಿದುಕೊಂಡಂತೆ. ವಿದ್ಯಾರ್ಥಿಗಳಿಗೆ ಥಿಯರಿಯೊಂದಿಗೆ ಪ್ರಾಕ್ಟಿಕಲ್ ಕಲಿಕೆಯೂ ಜತೆಜತೆಗೆ ಪ್ರಾಪ್ತವಾದ್ದರಿಂದ ಯಕ್ಷಗಾನದ ಸವಿಯನ್ನು ಅನುಭವಿಸಲು ಸಾಧ್ಯವಾಯಿತು," ಎನ್ನುತ್ತಾರೆ ಮಲ್ಲಮೂಲೆ.
ಶ್ರೀ ಎಡನೀರು ಮಠದಲ್ಲಿ ಹದಿನೈದು ದಿವಸಗಳ ಕಾಲ ಎಡನೀರು ಮೇಳದ ಆಟಗಳು ಸಂಪನ್ನವಾಗಿದ್ದುವು. ವಿದ್ಯಾರ್ಥಿಗಳಿಗಿದು ಬೋನಸ್. ಕಲಿತುದನ್ನು ಅನುಭವಿ ಕಲಾವಿದರ ವೇಷಗಳ ನಾಟ್ಯ ವಿನ್ಯಾಸಗಳಲ್ಲಿ ನೋಡುವ ಅವಕಾಶ. ಕಲಾವಿದರೊಂದಿಗೆ ಬೆರೆಯುವ ಕ್ಷಣ. ಅವರ ಬದುಕನ್ನು ಓದುವ ಸನ್ನಿವೇಶ. ಮೇಳದ ಆಟದಲ್ಲಿ ಭಾಗವಹಿಸಿದ ಪ್ರಾತಿನಿಧಿಕ ಕಲಾವಿದರನ್ನು ಶಿಬಿರಕ್ಕೆ ಆಹ್ವಾನಿಸಿ ಅವರಿಂದ ಪ್ರಾತ್ಯಕ್ಷಿಕೆ. ಅನುಭವ ಕಥನ. ಸೂರಿಕುಮೇರು ಗೋವಿಂದ ಭಟ್ಟರಿಂದ ನವರಸಗಳ ಪ್ರಸ್ತುತಿ, ಪುಂಡು ವೇಷಗಳ ಕುರಿತು ಪುತ್ತೂರು ಶ್ರೀಧರ ಭಂಡಾರಿ, ಸ್ತ್ರೀ ಪಾತ್ರಗಳ ಕುರಿತು ಕುಂಬಳೆ ಶ್ರೀಧರ ರಾವ್, ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಹಾಸ್ಯದ ಅನನ್ಯತೆ, ಯಕ್ಷ ಸಾಹಿತ್ಯದ ಕುರಿತು ತಾರಾನಾಥ ವರ್ಕಾಡಿ, ದೇವಕಾನ ಕೃಷ್ಣ ಭಟ್ಟರಿಂದ ಬಣ್ಣಗಾರಿಕೆ ಮತ್ತು ಕೆ.ವಿ.ರಮೇಶರಿಂದ ಬೊಂಬೆಯಾಟದ ಮಾಹಿತಿ.. ಹೀಗೆ ಅನುಭವಿಗಳ ದಂಡು ಅಯಾಚಿತವಾಗಿ ಶಿಬಿರಕ್ಕೆ ಒದಗಿದೆ.
ಕಾಸರಗೋಡು ಜಿಲ್ಲೆಯ ಕಲಾ ಮನಸ್ಸುಗಳು ಪ್ರತಿದಿನ ಶಿಬಿರಕ್ಕೆ ಭೇಟಿ ನೀಡಿರುವುದು ಹೊಸ ಉಪಕ್ರಮವಾಗಿ ಕಂಡಿತು. ಕಾಲೇಜೊಂದರ ಸಂಶೋಧನಾ ಕೇಂದ್ರವು ಆಯೋಜಿಸುವ ಶಿಬಿರವು ನಮ್ಮದು ಎನ್ನುವ ಮನಃಸ್ಥಿತಿ ಇದೆಯಲ್ಲಾ ಗ್ರೇಟ್. "ಏನಿಲ್ಲವೆಂದರೂ ತಿಂಗಳಲ್ಲಿ ಸಾವಿರಕ್ಕೂ ಮಿಕ್ಕಿ ಸಹೃದಯರು ಶಿಬಿರವನ್ನು ವೀಕ್ಷಿಸಿದ್ದಾರೆ. ನೈತಿಕ ಬೆಂಬಲ ನೀಡಿದ್ದಾರೆ. ಇಷ್ಟೊಂದು ಪ್ರೋತ್ಸಾಹ ಸಿಗಬಹುದೆನ್ನುವ ನಿರೀಕ್ಷೆಯಿರಲಿಲ್ಲ," ಎಂದು ವಿನೀತರಾಗುತ್ತಾರೆ ರತ್ನಾಕರ. ಇವರೊಂದಿಗೆ ಹೆಗಲೆಣೆಯಾಗಿ ಕಾಲೇಜಿನ ಪ್ರಾಧ್ಯಾಪಕ ವರ್ಗ, ಸ್ನೇಹಿತರು, ಹಳೆ ವಿದ್ಯಾಥರ್ಿಗಳಿದ್ದರು.
ಶಿಬಿರದ ಕಲಾಪಗಳ ವರದಿಗಾಗಿಯೇ ತೆರೆದ ವಾಟ್ಸಾಪ್ ಜಾಲತಾಣ ಗುಂಪು ಇನ್ನೂ ವಿಶ್ರಾಂತಿ ಪಡೆದಿಲ್ಲ. ವಿದ್ಯಾರ್ಥಿಗಳಿಂದ ತೊಡಗಿ ಕಲಾ ಸಂಘಟನೆ, ಕಲಾವಿದರು, ಕಲಾಭಿಮಾನಿಗಳು ಗುಂಪಿನ ಸದಸ್ಯರು. ಪೂರ್ವಾಹ್ನದಿಂದ ರಾತ್ರಿ ತನಕದ ವಿವಿಧ ಕಲಾಪಗಳನ್ನು ದಾಖಲಿಸಿ ಗುಂಪಿಗೆ ಏರಿಸುತ್ತಿದ್ದರಿಂದ ದೂರದೂರಿನವರಿಗೆ ಶಿಬಿರದ ಅಪ್ಡೇಟ್ ಸಿಕ್ಕಿದಂತಾಗುತ್ತದೆ. ವಾಟ್ಸಾಪ್ ಗುಂಪಿನ ಮಾಹಿತಿಗಳು ಮಾಧ್ಯಮಗಳಿಗೆ ಸಹಕಾರಿಯಾಗಿದ್ದುವು. ಶಿಬಿರದ ಆಗುಹೋಗುಗಳನ್ನು ಮಾಧ್ಯಮಗಳು ಬೆಳಕು ಚೆಲ್ಲಿವೆ. ಸಾಮಾಜಿಕ ಜಾಲತಾಣಗಳನ್ನು ಸದ್ದುದ್ದೇಶವೊಂದಕ್ಕೆ ಹೇಗೆ ಬಳಸಬಹುದು ಎನ್ನುವುದನ್ನು ತೋರಿಸಿದ್ದಾರೆ.
ಶಿಬಿರದಲ್ಲಿ ಭರತನಾಟ್ಯ-ಕಥಕ್ಕಳಿ ಪರಿಚಯ, ಮಂಜೇಶ್ವರದ ಗಿಳಿವಿಂಡು ಭೇಟಿ, ಉಡುಪಿಯ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರೊಂದಿಗೆ ಮಾತುಕತೆ, ವಿಮರ್ಶಕ ಡಾ.ರಾಘವ ನಂಬಿಯಾರರ ಜತೆಗೆ ಮುಖಾಮುಖಿ... ಹೀಗೆ ಮಕ್ಕಳ ಅರಿವನ್ನು ಹೆಚ್ಚಿಸುವ ಕಲಾಪಗಳು ಶಿಬಿರದ ಹೈಲೈಟ್. ಇದರಿಂದಾಗಿ ನಾಟ್ಯ, ವೇಷದ ಹೊರತಾದ ಯಕ್ಷಪ್ರಪಂಚವನ್ನು ಅರಿಯಲು ಸಾಧ್ಯವಾಗಿತ್ತು. ಶಾಲೆ, ಸಂಸ್ಥೆಗಳು, ಖಾಸಗಿಯಾಗಿ ನಡೆಯುವ ಯಕ್ಷಗಾನ ತರಬೇತಿ ತಂಡಗಳು ಕೂಡಾ ಇಂತಹ ಪ್ರವಾಸವನ್ನು ಆಯೋಜಿಸಬೇಕು.
ಶಿಬಿರ ಏನೋ ಮುಗಿಯಿತು. ಪಠ್ಯದ ಒತ್ತಡದ ಜತೆಗೆ ಮಕ್ಕಳ 'ಕಲಾ ಕಾವು' ಆರದಂತೆ ನೋಡಿಕೊಳ್ಳುವುದು ಕೂಡಾ ಸವಾಲಿನ ಕೆಲಸ. "ಭಾಗವಹಿಸಿದ ವಿದ್ಯಾರ್ಥಿಗಳು ಕಲಾವಿದರಾಗಬೇಕಿಲ್ಲ. ಒಳ್ಳೆಯ ಪ್ರೇಕ್ಷಕರಾದರೆ ಸಾಕು. ಯಕ್ಷಗಾನಕ್ಕೆ ಉತ್ತಮ ಪ್ರೇಕ್ಷಕರ ತಯಾರಿ ಆಗಬೇಕಾದುದು ಕಾಲದ ಅವಶ್ಯಕತೆ," ಎನ್ನುತ್ತಾರೆ ಎಡನೀರಿನ ಜಯರಾಮ ಮಂಜತ್ತಾಯ. ಸಂಶೋಧನಾ ಕೇಂದ್ರದ ಆಶಯವೂ ಇದೇ ಹಾದಿಯಲ್ಲಿ ಸಾಗಿರುವುದು ಶ್ಲಾಘ್ಯ.
ಬಿಡುವಿಲ್ಲದ ಕಾರ್ಯಹೂರಣದ ಶಿಬಿರವು ಮಕ್ಕಳೊಳಗೆ ಕಲಾಮನಸ್ಸಿನ ಬೀಜವೊಂದನ್ನು ಊರಿದೆ. ಇದಕ್ಕೆ ನಿರಂತರ ಕಲೆಯ ಕಾವು ಸಿಕ್ಕಿ ಮೊಳಕೆಯೊಡೆಯಬೇಕು. ಶಿಬಿರ ಮುಗಿದಾಗ ಕಲಾಮನಸ್ಸಿನ ಬೀಜವು ಮೊಳಕೆಯೊಡೆಯಲು ಸಜ್ಜಾಗಿತ್ತು. ಅದಕ್ಕೆ ಕಾಲಕಾಲಕ್ಕೆ ಬೇಕಾದ ಆರೈಕೆಗಳು ಸಿಕ್ಕಾಗ ಮಾತ್ರ ಅದು ಸಸಿಯಾಗುತ್ತದೆ. ಎಲ್ಲಾ ಶಿಬಿರಾರ್ಥಿಗಳು ಸಸಿಯಾಗಲು ಬೇಕಾದ ಎಲ್ಲಾ ಅರ್ಹತೆ ಮತ್ತು ಗಟ್ಟಿತನವನ್ನು ಪಡೆದವರಾದ್ದರಿಂದ ಇವರಲ್ಲಿರುವ ಕಲಾಗಾರಿಕೆಯನ್ನು ಪೋಶಿಸುವ ಅಗತ್ಯವಿದೆ.
ವಿದ್ಯಾರ್ಥಿಗಳಿಗೆ ವರುಷದಲ್ಲಿ ಏನಿಲ್ಲವೆಂದರೂ ಮೂರೋ ನಾಲ್ಕು ಬಾರಿ ಯಕ್ಷಗಾನದ ಸಂಬಂಧಿಯಾದ ಒಂದೊಂದು ದಿವಸದ ಕಲಾಪಗಳು ನಡೆಯಬೇಕು. ಈಗ ನೀಡಿದ ಶಿಕ್ಷಣದ ಮರುಓದು ಕೂಡಾ ಅಗತ್ಯ. ಭಾಷಣ, ಉಪನ್ಯಾಸಗಳಿಂದ ಹೊರತಾದ ಕಲಾಪಗಳು ಮಕ್ಕಳ ಮನದೊಳಗೆ ಇಳಿಯಲು ಸಹಕಾರಿ. ಮಲೆಯಾಳ ನೆಲದಲ್ಲಿ ಯಶಸ್ವಿಯಗಿ ಶಿಬಿರವೊಂದನ್ನು ಆಯೋಜಿಸಿದ ಕಾಲೇಜಿನ ಯಕ್ಷಗಾನ ಸಂಶೋಧನಾ ಕೇಂದ್ರವು ಯಕ್ಷ ಕಲಿಕಾ ಕೇಂದ್ರಗಳಿಗೆ ಹೊಸ ಸಂದೇಶ ಬೀರಿದೆ. ಹೊಸ ಮಾದರಿಯನ್ನು ತೋರಿಕೊಟ್ಟಿದೆ. ಚಿಣ್ಣರನ್ನು ಅರಿವಿನ ಹಾದಿಯಲ್ಲಿ ಒಯ್ದು ಅವರಿಂದ 'ಯಕ್ಷಗಾನ'ವನ್ನು ಅನಾವರಣಗೊಳಿಸುವುದೇ ರಂಗದ ಮರುನಿರ್ಮಾಣ.
ರತ್ನಾಕರ ಮಲ್ಲಮೂಲೆ ಬಳಗದ ಶಿಬಿರದ ಆಯೋಜನೆ ಹೂವಿನದ್ದಾಗಿರಲಿಲ್ಲ. ಅನುದಾನದಿಂದ ತೊಡಗಿ ದೈನಂದಿನ ವ್ಯವಸ್ಥೆಗಳಿಗೆ ನಿಗಾ ಕೊಡಬೇಕಿತ್ತು. ಸಹಜವಾಗಿ ಎದುರಾಗುವ ಮಾನಸಿಕ ಹಿಂಸೆಗಳನ್ನು ಸಹಿಸುತ್ತಾ ನಗುಮುಖದಿಂದ ಇರಬೇಕಾಗಿತ್ತು. ರಾಜಿಯಿಲ್ಲದೆ ಕಾರ್ಯಹೂರಣವನ್ನು ಅನುಷ್ಠಾನ ಮಾಡಬೇಕಾಗಿತ್ತು. ಬಹುಶಃ ಇವರಲ್ಲಿರುವ ಕಲಾ ಗಟ್ಟಿತನವು ಸಮಸ್ಯೆಗಳನ್ನೆಲ್ಲಾ ಹಗುರವಾಗಿಸಿದೆ.
No comments:
Post a Comment