Friday, September 22, 2017

ದಿವಾಣರಿಗೆ ಗುರುವಾಣಿ : 'ನಿರಕ್ಷರಕುಕ್ಷಿಗಳಿಗೂ ನಾಟ್ಯಾಭ್ಯಾಸ ಮಾಡಿಸಬಲ್ಲ ಚತುರ'


ಪ್ರಜಾವಾಣಿ ’ದಧಿಗಿಣತೋ’ ಅಂಕಣ / 25-8-2017

             1985-86ನೇ ಇಸವಿ. ಮಂಗಳೂರಿನ ಉರ್ವಸ್ಟೋರಿನ ಚಿಲಿಂಬಿಯಲ್ಲಿ ಕೂಡ್ಲು ಮೇಳದ ಆಟ. ಕೀರ್ತಿಶೇಷ ಕಾವೂರು ಕೇಶವರ ಯಜಮಾನಿಕೆಯ ಮೇಳ. ಪ್ರಸಂಗ : ಶಬರಿಮಲೆ ಕ್ಷೇತ್ರ ಮಹಾತ್ಮೆ. ದಿವಾಣ ಶಿವಶಂಕರ ಭಟ್ಟರ 'ಕೇತಕೀವರ್ಮ' (ಪಂದಳ ರಾಜ) ಪಾತ್ರ. ವೇಷದ ಆಕರ್ಷಣೆ ಮತ್ತು ರಂಗತುಂಬುವ ಅಭಿವ್ಯಕ್ತಿ. ಸ್ಪಷ್ಟವಾದ ಮಾತು. ಚೌಕಿಯ ಹೊರಗೂ ಮನ ತುಂಬುವ ಮಾತು. ಗುರು ಗೋವಿಂದ ಭಟ್ಟರ ಗರಡಿಯಲ್ಲಿ ತಯಾರಾಗಿ ನಾಲ್ಕೈದು ವರುಷವಾಗಿತ್ತಷ್ಟೇ. ಆಗವರಿಗೆ ಇಪ್ಪತ್ತೆರಡು ವರುಷ. ಈಗಲೂ ದಿವಾಣರು ಮಾತಿಗೆ ಸಿಗುವಾಗ ಅಂದಿನ ಪಂದಳ ರಾಜ ನೆನಪಾಗುತ್ತಾನೆ. ಆ ಬಳಿಕ ಹಲವು ವೇಷಗಳನ್ನು ವೀಕ್ಷಿಸಿದರೂ ಮನದೊಳಗೆ ಇಳಿದ ಪಂದಳರಾಜನನ್ನು ಎಬ್ಬಿಸಲಾಗಲೇ ಇಲ್ಲ!
              ದಿವಾಣ ಶಿವಶಂಕರ ಭಟ್ಟರ (53) ಮನೆತುಂಬಾ ಯಕ್ಷಗಾನದ್ದೇ ಮಾತುಕತೆ. ಹಿರಿಯರೆಲ್ಲರೂ ಯಕ್ಷಗಾನದ ಹವ್ಯಾಸದ ಸತ್ವದಲ್ಲಿ ಬದುಕನ್ನು ಕಟ್ಟಿಕೊಂಡವರು. ತಂದೆ ಗಣಪತಿ ದಿವಾಣ, ಆಶು ಕವಿಗಳು. ಶ್ರೀ ಧರ್ಮಸ್ಥಳ, ಸುರತ್ಕಲ್, ಕುಂಡಾವು ಮೇಳಗಳು ಊರಿಗೆ ಬಂದಾಗ ಪ್ರೇಕ್ಷಕನಾಗಿ ಭಾಗಿ. ಯಕ್ಷಗಾನವೇ ತಾನಾದಾಗ ಅಂಗಳವೇ ರಂಗಸ್ಥಳ. ತೊಡುವ ಉಡುಪು 'ಜೌಳಿ'ಯಾದಾಗ ಶಾಲಾ ಕಲಿಕೆ ಎಂಟರಲ್ಲಿ ನಿಂತಿತು. ಸರಿಯಾದ ಗುರುಗಳಲ್ಲಿ ಕಲಿ' ಎಂದು ಧರ್ಮಸ್ಥಳ ಲಲಿತಾ ಕಲಾ ಕೇಂದ್ರದತ್ತ ಬೆರಳು ತೋರಿದವರು ಊರಿನ ಹಿರಿಯ ಕಲಾವಿದ ವೈ.ಡಿ.ನಾಯಕರು. ಆಗ ಕೇಂದ್ರದಲ್ಲಿ ಸೂರಿಕುಮೇರು ಗೋವಿಂದ ಭಟ್ಟರು ಗುರುಗಳು.
               ನಾಯಕರ ನಿರ್ದೇಶನವನ್ನು ಶಿವಶಂಕರ ಭಟ್ಟರು ಆದೇಶವಾಗಿ ಸ್ವೀಕರಿಸಿದರು. ಯಕ್ಷಾಸಕ್ತಿಗೆ  ನೀರೆರೆದು ಪೋಶಿಸಿದ ಈ ಮಹನೀಯರು ನನ್ನ ಉತ್ಕರ್ಷಕ್ಕೆ ಅಡಿಗಲ್ಲಾಗಿ ಪರಿಣಮಿಸಿದರು. ನನಗೂ ಮಹಾನ್ ಕಲಾವಿದರ ಒಡನಾಟ ಮತ್ತು ಉತ್ತೇಜನವಿದ್ದುದರಿಂದ ಕಲಾವಿದನಾಗಿ ರೂಪುಗೊಳ್ಳಲು ಬೇಕಾದ ಸಮೃದ್ಧ ಸಂಪನ್ಮೂಲಗಳು ಒದಗಿದುವು. ಕೇಂದ್ರದಲ್ಲಿ ನೆಡ್ಲೆ ನರಸಿಂಹ ಭಟ್ಟರ ಗುರುತ್ವವೂ ಪ್ರಾಪ್ತವಾಗಿ ಮುಂದೆ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಆರಂಭವಾಯಿತು, ಎಂದು ಕಳೆದ ದಿನಮಾನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ದಿವಾಣರ ಕಲಾಯಾನಕ್ಕೆ ಈಗ ಮೂವತ್ತೈದು ವರುಷ.
               ಪ್ರಸ್ತುತ ಶ್ರೀ ಕಟೀಲು ಮೇಳದ ಕಲಾವಿದ. ಶ್ರೀ ಧರ್ಮಸ್ಥಳ ಮೇಳ, ಕೂಡ್ಲು ಮೇಳ, ಮಲ್ಲ, ಬಪ್ಪನಾಡು ಮೇಳಗಳಲ್ಲಿ ತಿರುಗಾಟ. ಹೊಸನಗರ ಮೇಳದಲ್ಲಿ ಸ್ವಲ್ಪ ಕಾಲ ವ್ಯವಸ್ಥಾಪಕನಾಗಿ ದುಡಿತ. ಒಂದಷ್ಟು ಕಾಲ ವಿರಾಮ. ಅಸೌಖ್ಯದ ಕಾರಣದಿಂದ 2008ರಲ್ಲಿ ಯಕ್ಷಗಾನದಿಂದ ದೂರವಿದ್ದೆ. ಪೂಜ್ಯ ಎಡನೀರು ಶ್ರೀಗಳ ಒತ್ತಾಯ ಮತ್ತು ಪ್ರೋತ್ಸಾಹದಿಂದ ಅವರ ಎಡನೀರು ಮೇಳದಿಂದ ಪುನಃ ಬಣ್ಣ ಹಚ್ಚಿದೆ. ಅಲ್ಲಿಂದ ಬದುಕಿನ ಹೊಸ ಆಧ್ಯಾಯ ಶುರು. ಆ ದಿನಮಾನಗಳನ್ನು ಮರೆಯಲು ಸಾಧ್ಯವಿಲ್ಲ, ಎಂದು ವಿನೀತರಾಗುತ್ತಾರೆ.
                ಶಿವಶಂಕರ ಭಟ್ಟರ ಕಿರೀಟ ವೇಷ ಸೊಗಸು. ರಂಗನಡೆಯೂ ಸೊಬಗು. ವಿಕಾರಗಳಿಲ್ಲದ ರಂಗಭಾಷೆ. ಗೋವಿಂದ ಭಟ್ಟರು, ಹೊಸಹಿತ್ಲು ಮಹಾಲಿಂಗ ಭಟ್, ಪುತ್ತೂರು ಕೃಷ್ಣ ಭಟ್ಟರು, ಬೇತ ಕುಂಞ.. ಇವರೆಲ್ಲರ ರಂಗತಂತ್ರಗಳ 'ಕೆಣಿ'ಗಳಿಂದ ಆಕರ್ಶಿತ. ಇದರಿಂದ 'ದಿವಾಣ ಶೈಲಿ'ಯೊಂದರ ಹುಟ್ಟು. ಫಕ್ಕನೆ ನೋಡುವಾಗ ಒಬ್ಬೊಬ್ಬರು ನೆನಪಾದರೂ ಅವರಂತೆ ಆಗದೆ ರಂಗದಲ್ಲಿ ಬೆಳೆದುದು ದಿವಾಣರ ಹೆಚ್ಚುಗಾರಿಕೆ. ಪಾತ್ರಗಳ ಸಿದ್ಧ ರಂಗ ನಡೆಯ ಬಳಕೆಯ ಜ್ಞಾನ ಮತ್ತು ಬಳಸುವಲ್ಲಿ ಎಚ್ಚರ ಕಾಣಬಹುದಾಗಿದೆ.
                  ಶಿವಶಂಕರ ಭಟ್ಟರು ಯಕ್ಷಗುರು. ಮಳೆಗಾಲದಲ್ಲಿ ಬಿಡುವಿಲ್ಲದ ಕಲಾವಿದ. ಕಾಸರಗೋಡು, ಕರಾವಳಿಗಳ ಹವ್ಯಾಸಿ ತಂಡಗಳಲ್ಲಿ ತರಬೇತಿ. ಶಿಷ್ಯರ ರಂಗನಡೆಯಲ್ಲಿ ಎದ್ದುಕಾಣುವ ದಿವಾಣರ ರಂಗಛಾಪು. ಒಬ್ಬ ವಿದ್ಯಾರ್ಥಿ ರಂಗ ಪ್ರವೇಶಿಸಲು ಎಷ್ಟು ಸಮಯ ಬೇಕು? "ಅವಸರದ ರಂಗಪ್ರವೇಶವು ಕಲಾವಿದನ ಬೆಳವಣಿಗೆಗೆ ಪೂರಕವಲ್ಲ.  ಕನಿಷ್ಠ ಒಂದು ವರುಷವಾದರೂ ಬೇಕು. ಒಬ್ಬ ಕಲಾವಿದನಾಗಿ ಹೊರಹೊಮ್ಮಲು ಮೂರು ವರುಷ ಕಾಯುವಿಕೆ ಬೇಕೇ ಬೇಕು. ನನ್ನ ತರಗತಿಗಳಲ್ಲಿ ಒಂದು ವರುಷದ ಬಳಿಕವೇ ರಂಗಪ್ರವೇಶ. ಎಷ್ಟೋ ಕಡೆ ಹೆತ್ತವರ ಒತ್ತಾಯದಿಂದ ರಂಗಪ್ರವೇಶ ಮಾಡುವುದನ್ನು ಕೇಳಿದ್ದೇನೆ. ಇದರಿಂದ ವಿದ್ಯಾರ್ಥಿಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಯಾವಾಗ ರಂಗಪ್ರವೇಶ ಮಾಡಬೇಕು ಎನ್ನುವ ನಿರ್ಧಾರವನ್ನು ಗುರುಗಳ ನಿರ್ಧಾರಕ್ಕೆ ಬಿಡಿ," ಎಂದು ಪಾಲಕರನ್ನು ವಿನಂತಿಸುತ್ತಾರೆ.
                  ಯುವಜನತೆ ಯಕ್ಷಗಾನದತ್ತ ಆಕರ್ಶಿತವಾಗಿದೆ. ಒಂದು ಉತ್ತಮ ಶ್ಲಾಘನೀಯ ಬೆಳವಣಿಗೆ. ಸಮಗ್ರ ರಂಗದ ಅಭಿಮಾನದ ಮನಃಸ್ಥಿತಿ ರೂಪುಗೊಳ್ಳಬೇಕಾಗಿದೆ. ವ್ಯಕ್ತಿ ಅಭಿಮಾನ ತಪ್ಪಲ್ಲ. ನಾಟಕ, ಸಿನೆಮಾ ರಂಗದಲ್ಲಿ ಪ್ರೇಕ್ಷಕರಿಗೆ ರಸಗ್ರಹಣ ಶಿಬಿರಗಳನ್ನು ಹಮ್ಮಿಕೊಳ್ಳುವುದಿದೆ. ಯಕ್ಷಗಾನಕ್ಕೂ ಇಂತಹ ಶಿಬಿರಗಳ ಅಗತ್ಯ ಕಂಡುಬರುತ್ತದೆ. 'ಯಕ್ಷಗಾನವನ್ನು ಯಕ್ಷಗಾನವಾಗಿಯೇ ನೋಡುವುದು ಮತ್ತು ಅನುಭವಿಸುವುದು ಹೇಗೆ' ಎನ್ನುವ ತರಬೇತಿ. ದಿವಾಣರು ಓರ್ವ ವೃತ್ತಿ ಕಲಾವಿದನಾಗಿದ್ದುಕೊಂಡು ಇಂತಹ ದೂರದೃಷ್ಟಿಯನ್ನು ಹೊಂದಿರುವುದು ವರ್ತಮಾನದ ಅನಿವಾರ್ಯತೆ.
                 "ಇಂದು ಯಕ್ಷಗಾನವನ್ನು ವೃತ್ತಿಗಾಗಿಯೇ ಆರು ತಿಂಗಳು ನಿರಂತರ ಕಲಿಯುವ ವಿದ್ಯಾರ್ಥಿಗಳಿಲ್ಲ. ಹಾಗಾಗಿ ಕೇಂದ್ರಗಳು ವಿದ್ಯಾರ್ಥಿಗಳ ಅಲಭ್ಯತೆಯಿಂದ ಸೊರಗಿದೆ," ಎನ್ನುತ್ತಾರೆ. ವೃತ್ತಿ ಭದ್ರತೆಯು ಇಲ್ಲದಿರುವುದೂ ಕಾರಣ. ದಿವಾಣರಿಗೆ ಕನ್ನಡ ನೆಲದಲ್ಲಿ ಮಾತ್ರವಲ್ಲದೆ ದೂರದ ತ್ರಿಶೂರಿನಲ್ಲೂ ವಿದ್ಯಾರ್ಥಿಗಳಿದ್ದಾರೆ. ಸರಕಾರವು ಪಠ್ಯದೊಂದಿಗೆ ಯಕ್ಷಗಾನವು ಕಲೋತ್ಸವದ ಮೂಲಕ ಮಿಳಿತಗೊಳಿಸಿದೆ. "ನಾನು ತ್ರಿಶೂರಿನಲ್ಲಿ ಬಿಡಾರ ಮಾಡಿದರೆ ಯಕ್ಷಗಾನದಿಂದಲೇ ಬದುಕಿಯೇನು," ಎನ್ನುವ ಆತ್ಮವಿಶ್ವಾಸವಿದೆ. ಒಂದೆಡೆ ವೃತ್ತಿ ರಂಗವನ್ನು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳಿಲ್ಲದೆ ಸೊರಗುವ ಕೇಂದ್ರಗಳು. ಮತ್ತೊಂದೆಡೆ ದಿವಾಣರಂತಹ ಹಿರಿಯರಿಗೆ ದೂರದ ಕೇರಳದಲ್ಲೂ ಬದುಕಬಹುದೆನ್ನುವ ಧೈರ್ಯ. ಈ ಎರಡೂ ವಿಚಾರಗಳನ್ನು ಮುಂದಿಟ್ಟು ಯೋಚಿಸಿದಾಗ ಬೇರೆ ಬೇರೆ ಉದ್ಯೋಗದಲ್ಲಿದ್ದು ವೃತ್ತಿರಂಗದಲ್ಲಿ ಕಲಾವಿದರಾಗಿರುವ ಒಂದಷ್ಟು ಮಂದಿ ಕಣ್ಮುಂದೆ ಹಾದು ಹೋದರು.
                  ಈಚೆಗೆ ಕಾಸರಗೋಡು ಜಿಲ್ಲೆಯ ಎಡನೀರಿನಲ್ಲಿ ಒಂದು ತಿಂಗಳ ಯಕ್ಷಗಾನ ತರಬೇತಿ ಶಿಬಿರ ಜರುಗಿತ್ತು. ಶಿಬಿರದಲ್ಲಿ ಪೂರ್ಣಪ್ರಮಾಣದಲ್ಲಿ ದಿವಾಣರು ಮತ್ತು ಸಬ್ಬಣಕೋಡಿ ರಾಮ ಭಟ್ಟರು ಗುರುಗಳಾಗಿ ವಿದ್ಯಾರ್ಥಿಗಳಿಗೆ ಒದಗಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ 'ಯಕ್ಷಗಾನ ಸಂಶೋಧನಾ ಕೇಂದ್ರ'ದ ಆಯೋಜನೆ. "ಶಿಬಿರದ ಯಶಸ್ಸಿನ ಹಿನ್ನೆಲೆಯಲ್ಲಿ ಸಂಯೋಜಕ ರತ್ನಾಕರ ಮಲ್ಲಮೂಲೆಯವರ ಬದ್ಧತೆ ಮತ್ತು ಗುರುಗಳ ಗುರುತ್ವವು ವಿದ್ಯಾರ್ಥಿಗಳನ್ನು ರೂಪುಗೊಳಿಸುವಲ್ಲಿ ಸಹಕಾರಿ ಇವರೆಲ್ಲರೂ ಕಲಾವಿದರಾಗದಿದ್ದರೂ, ಉತ್ತಮ ಪ್ರೇಕ್ಷಕರಾದರೆ ಸಾಕು," ಎನ್ನುವ ಕಳಕಳಿ ದಿವಾಣರದ್ದು.
                 'ನಿರಕ್ಷರಕುಕ್ಷಿಗಳಿಗೂ ನಾಟ್ಯಾಭ್ಯಾಸ ಮಾಡಿಸಬಲ್ಲ ಚತುರ' ಎಂದು ಗುರು ಗೋವಿಂದ ಭಟ್ಟರು ದಿವಾಣರಿಗೆ ನೀಡಿದ ಪ್ರಶಂಸೆಯು ಶಿಷ್ಯನಾಗಿ ದಿವಾಣರಿಗೆ ಸಾರ್ಥಕ್ಯದ ಕ್ಷಣ. ಇಲ್ಲಿ ಶಬ್ದಾರ್ಥವಲ್ಲ, ಅದರ ಹಿಂದಿರುವ ಭಾವವನ್ನು ಅರ್ಥ ಮಾಡಿಕೊಳ್ಳಬೇಕು. ಮಾತನಾಡುತ್ತಾ, ಕಥಕ್ಕಳಿಯ ಶಿಸ್ತು ನೋಡಿದಾಗ, ಬದಲಾದ ಕಾಲಘಟ್ಟದಲ್ಲೂ ಯಕ್ಷಗಾನಕ್ಕೆ ಶಿಸ್ತು ಬೇಕು. ಮೊದಲು ಅವ್ಯಕ್ತವಾಗಿ ಶಿಸ್ತು-ಭಯ ಜತೆಜತೆಗೆ ಮಿಳಿತವಾಗಿರುತ್ತಿತ್ತು. ಈಗ ಪ್ರತ್ಯೇಕವಾಗಿ ಶಿಸ್ತನ್ನು ತರಬೇಕೇನ್ನುವುದು ಯಕ್ಷಗಾನದ ಅಭಿವೃದ್ಧಿಯೋ, ಹಿಂಬೀಳಿಕೆಯೋ ನೀವೇ ಯೋಚಿಸಿ, ಎಂದು ಬುದ್ದಿಗೆ ಗ್ರಾಸ ಒದಗಿಸಿದರು.
                 ದಿವಾಣ ಶಿವಶಂಕರ ಭಟ್ಟರು ಹತ್ತಾರು ಸಂಮಾನಗಳಿಂದ ಪುರಸ್ಕೃತರು. ಸ್ವ-ರೂಢಿತ ವ್ಯಕ್ತಿತ್ವದಿಂದ ರಂಗದಲ್ಲಿ ಸ್ವ-ಶೈಲಿಯ ಹೆಜ್ಜೆಯನ್ನು ಮೂಡಿಸಿದ ದಿವಾಣರಿಗೆ ಈಚೆಗೆ ಕೇರಳದ ಮೂವತ್ತೇಳು ಕಲೆಗಳನ್ನು ಪ್ರತಿನಿಧಿಸುವ 'ಸವಾಕ್' ಸಂಸ್ಥೆಯ ಗೌರವವು ಪ್ರಾಪ್ತವಾಗಿದೆ.
(ಚಿತ್ರ ಕೃಪೆ: ಪ್ರಭಾಕರ ಮಂಜೇಶ್ವರ)



No comments:

Post a Comment