Tuesday, September 5, 2017

ರಂಗ-ಪ್ರಸಂಗ - ಸದ್ದಾಗಬೇಕಾದ ಸದ್ದಿಲ್ಲದ ಕೆಲಸ

ಪ್ರಜಾವಾಣಿಯ 'ದಧಿಗಿಣತೋ' ಅಂಕಣ /16-6-2017

                 ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನನಗೆ ಒಗಟಾಗಿ ಕಾಣಿಸುತ್ತಾರೆ! ತನ್ನ ವೃತ್ತಿ ಕ್ಷೇತ್ರದಲ್ಲಿ ದುಡಿಯುತ್ತಾ, ಆ ಕ್ಷೇತ್ರದ ಭವಿಷ್ಯದ ಮೆಟ್ಟಿಲಲ್ಲಿ ನಿಂತು ಯೋಚಿಸುವ ಮನಃಸ್ಥಿತಿ ಅವರಿಗೆ ಹೇಗೆ ಬಂತೋ ಗೊತ್ತಿಲ್ಲ! ಈ ಎರಡು ವಾಕ್ಯಗಳಿಗೆ ಅನ್ಯಥಾ ಭಾವಿಸದಿರಿ.
                 ಒಬ್ಬ ಕಲಾವಿದ ಸರಿಸುಮಾರು ಆರು ತಿಂಗಳು ಹಗಲನ್ನು ರಾತ್ರಿಯಾಗಿಯೂ, ರಾತ್ರಿಯನ್ನು ಹಗಲಾಗಿಯೂ ಒಪ್ಪಿಕೊಂಡು ದುಡಿಯಬೇಕಾಗುತ್ತದೆ. ರಾತ್ರಿ ರಂಗದಲ್ಲಿ ಕುಣಿದರೆ, ಹಗಲು ವಿಶ್ರಾಂತಿ ಪಡೆಯುವುದು ಅನಿವಾರ್ಯ. ಇಂತಹ ಸ್ಥಿತಿಯಲ್ಲಿ ಕಲಾವಿದನಿಗೆ ಅಧ್ಯಯನವಾಗಲೀ, ಹೊರ ಪ್ರಪಂಚದ ಗಾಢ ಆಗು ಹೋಗುಗಳತ್ತ ನಿಗಾ ವಹಿಸುವುದು ಕಷ್ಟವಾಗುತ್ತದೆ. ಏನಿದ್ದರೂ ಮಳೆಗಾಲದ ಬಿಡುವಿನ ಅವಧಿಯಲ್ಲಿ ಕಲಿಕೆ, ಓದಿನತ್ತ ಗಮನ. ಎಷ್ಟು ಮಂದಿ ಹೀಗಿರುತ್ತಾರೆ ಎನ್ನುವುದು ಬೇರೆ ವಿಚಾರ. ಕಾಲಮಿತಿ ಪ್ರದರ್ಶನಗಳು ಬಂದ ಬಳಿಕ ವಿಶ್ರಾಂತಿಗೆ ತೊಂದರೆಯಾಗಿಲ್ಲ.
                 ಸರಿ, ಕೆಲವು ಮೇಳಗಳಲ್ಲಿ ಗಮನಿಸುತ್ತಿದ್ದೇನೆ. ದೇವೇಂದ್ರನ ಬಲ (ಅಗ್ನಿ, ವರುಣ, ವಾಯು), ರಾಕ್ಷಸ ಬಲ ಪಾತ್ರಗಳನ್ನು ಮಾಡುವ ಎಳೆಯ ಮನಸ್ಸುಗಳು ಐದಾರು ವರುಷದಿಂದಲೂ ಅದೇ ಪಾತ್ರವನ್ನು ಮಾಡುತ್ತಾರೆಂದರೆ ಬೌದ್ಧಿಕತೆಯ ಕ್ಷೀಣತೆ ಎಂದರೆ ತಪ್ಪಾಗಲಾರದು. ಬೌದ್ಧಿಕವಾಗಿ ಮೇಲೇರದೆ ಪಾತ್ರವನ್ನು ನಿಭಾಯಿಸುವ, ನಿರ್ವಹಿಸುವುದಾದರೂ  ಎಂತು? ಕಲಾವಿದ ಅಂದರೆ ವೇಷ ತೊಟ್ಟು ರಂಗದಲ್ಲಿ ಕುಣಿಯುವುದು ಮಾತ್ರ ಅಲ್ಲವಲ್ಲಾ. ವೇಷ ತೊಡುವ ಹಿನ್ನೆಲೆಯಲ್ಲಿ ತನ್ನಲ್ಲಿ ಆವಾಹಿಸಿಕೊಳ್ಳಬೇಕಾದ ಅನೇಕ ಅಂಶಗಳಿವೆ. ಇದರತ್ತ ಉದಾಸೀನತೆಯನ್ನು ತೋರುವ ಮಂದಿ ಎಷ್ಟು ಬೇಕು? ಇಂತಹ ಕಲಾವಿದ ನಿಂತ ನೀರಿನಂತೆ. 'ಇಂತಹ ಮೇಳದಲ್ಲಿ ಇಂತಿಷ್ಟು ವರುಷ ತಿರುಗಾಟ ಮಾಡಿದ್ದೇನೆ' ಎನ್ನುವ ಬಯೋಡಾಟ ಬರೆಯಬಹುದಷ್ಟೇ.
                   ತಿರುಗಾಟ ಮಾಡಿದ ಮೇಳದಲ್ಲಿ ಎಂತಹ ಪಾತ್ರ ಮಾಡುತ್ತಿದ್ದರು? ಮಾಡಿದ ಪಾತ್ರವನ್ನು ರಂಗ ಒಪ್ಪಿತ್ತೇ? ಜನ ಸ್ವೀಕೃತಿ ಪಡೆದಿದೆಯಾ? ಎಲ್ಲಕ್ಕಿಂತ ಮುಖ್ಯವಾಗಿ ಅದು ಯಕ್ಷಗಾನವಾಗಿತ್ತೇ? ಇವೇ ಮೊದಲಾದ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳು ಕಲಾವಿದನೊಬ್ಬರ ಉತ್ಕರ್ಷಕ್ಕೆ ಹಾದಿಯಾಗುತ್ತದೆ. ಯಕ್ಷಗಾನದ ಅಭ್ಯಾಸಿಗಳಿಗೆ ಇಂದು ತರಬೇತಿಗಳು ಸಾಕಷ್ಟಿವೆ. ಅನುಭವಿ ಕಲಾವಿದರು ಗುರುಗಳಾಗಿ ಒದಗುತ್ತಾರೆ. ಒಂದೆರಡು ವರುಷದ ತರಬೇತಿಯ ಬಳಿಕ ಅಭ್ಯಾಸಿಯೇ ತಾನು ಕಲಾವಿದನಾಗಲು ಬೇಕಾದ ಬೌದ್ಧಿಕತೆಯನ್ನು ರೂಢಿಸಿಕೊಳ್ಳಬೇಕು. ಮೊದಲೆಲ್ಲಾ ಹಿರಿಯರೊಂದಿಗಿದ್ದು ಕಲಿಯಬೇಕಾದ ವಾತಾವರಣವಿತ್ತು. ಅಂತಹ ಹೊತ್ತಲ್ಲಿ ಪಾತ್ರದ ಸಮಗ್ರ ಚಿತ್ರವು ಪ್ರಾಕ್ಟಿಕಲ್ ಮೂಲಕ ಕಲಾವಿದ ಕಲಿಯಬಹುದಾಗಿತ್ತು.  ಇಂದೂ ಇಲ್ಲವೆಂದಲ್ಲ. ಆದರೆ ಕಲಿಯುವ ಆಸಕ್ತಿ ಅಭ್ಯಾಸಿಗಳಿಗಿದೆಯೇ? "ಮೊಬೈಲ್ ಕೈಗೆ ಬಂದ ಮೇಲೆ ಬಾಲ ಕಲಾವಿದರಿಗೆ ರಂಗ ಕಲಿಕೆಯತ್ತ ಆಸಕ್ತಿ ಕಡಿಮೆಯಾಗಿದೆ. ಸ್ಮಾರ್ಟ್ ಫೋನನ್ನು ಉಜ್ಜುವುದರಲ್ಲೇ ಕಾಲ ಕಳೆಯುತ್ತಾರೆ" ಎಂದು ಕಲಾವಿದ ಪೆರ್ಮುುದೆ ಜಯಪ್ರಕಾಶ್ ಶೆಟ್ಟಿಯವರು ಆಟದ ಚೌಕಿಯಲ್ಲೊಮ್ಮೆ ಗೊಣಗಾಡಿದ ಕ್ಷಣ ನೆನಪಾಗುತ್ತದೆ.  
                ರಾಮಕೃಷ್ಣ ಮಯ್ಯರು ಇಂತಹ ಯಕ್ಷ ಅಭ್ಯಾಸಿಗಳಿಗೆ, ಕುತೂಹಲಿಗಳಿಗೆ ಅನುಕೂಲವಾಗಲೆಂದು 'ರಂಗ-ಪ್ರಸಂಗ' ಎನ್ನುವ ಸರಣಿಯನ್ನು ಆರಂಭಿಸಿದ್ದಾರೆ. ಸರಣಿಯ ನಾಲ್ಕನೇ ಪ್ರದರ್ಶನವು ೨೦೧೭ ಜೂನ್ 10ರಂದು ಉಡುಪಿ ರಾಜಾಂಗಣದಲ್ಲಿ ಜರುಗಿತು. ಕಲಿಯಬೇಕೆನ್ನುವ ಹಟವಿದ್ದವರಿಗೆ, ರಂಗ ನಡೆಗಳನ್ನು ನೋಡಬೇಕೆನ್ನುವ ಕುತೂಹಲಿಗಳಿಗೆ, ಪ್ರಸಂಗವೊಂದರ ಓಟವನ್ನು ಕವಿಯ ಆಶಯದಂತೆ ಪ್ರಸ್ತುತಪಡಿಸುವ ಕ್ಷಣಗಳಿಗೆ ಸಾಕ್ಷಿಯಾದರೆ ಕಲಾವಿದ ಬೌದ್ಧಿಕತೆಯತ್ತ ಸಾಗುತ್ತಿದ್ದಾನೆ ಎನ್ನಬಹುದೇನೋ? ಇದಕ್ಕೆ ಸರಿಯಾದ ಹಾದಿಯನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ತೋರುತ್ತಿದ್ದಾರೆ.
                ಒಂದೆರಡು ಪ್ರದರ್ಶನವನ್ನಿಟ್ಟು, ಆ ಪ್ರಸಂಗದ ಸರ್ವಾಂಗೀಣ ಆಶಯ, ರಂಗತಂತ್ರಗಳು, ಪ್ರಸ್ತುತಿ ವಿಧಾನ, ಅರ್ಥಗಾರಿಕೆಯ ವ್ಯಾಪ್ತಿಗಳನ್ನು ದಾಖಲಿಸುತ್ತಾರೆ. ಹೀಗೆ ದಾಖಲಾತಿಯ ಮುನ್ನ ಹಿರಿಯರ ಜತೆ ಸಮಾಲೋಚಿಸುತ್ತಾರೆ. ಪ್ರಸಂಗದ ಪಾತ್ರಗಳಿಗೆ ಒಪ್ಪುವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರದರ್ಶನ ಪೂರ್ವದಲ್ಲಿ ಸಮಾಲೋಚನೆ ಮಾಡುತ್ತಾರೆ. ಪ್ರಸಂಗ, ದೃಶ್ಯಾವಳಿಗಳನ್ನು ಪ್ರತ್ಯೇಕವಾಗಿ ಪ್ರತಿ ಮಾಡಿ ಕಲಾವಿದರ ಕೈಗಿಡುತ್ತಾರೆ.  ಪ್ರದರ್ಶನವೊಂದರ ಯಶದ ಹಿಂದೆ ಇಷ್ಟೆಲ್ಲಾ ಯತ್ನಗಳು ನೇಪಥ್ಯದಲ್ಲಿ ನಡೆಯುತ್ತದೆ. ಆರಂಭದಲ್ಲಿ ನಾನು ಉಲ್ಲೇಖಿಸಿದಂತೆ ಯಕ್ಷಗಾನದ ಭವಿಷ್ಯದ ಮೆಟ್ಟಿಲಲ್ಲಿ ನಿಂತು ಮಯ್ಯರು ಯೋಚಿಸಿದ್ದರಿಂದ ಅವರಿಗೆ ಆಯೋಜನೆ ಸಾಧ್ಯವಾಯಿತು. ಯಾಕೆಂದರೆ ತಾನು ಮಾಡುವ ಕೆಲಸದಲ್ಲಿ ಸ್ಪಷ್ಟ ಫಲಿತಾಂಶವನ್ನು ಪಡೆವ ನಿರೀಕ್ಷೆಯಿದೆ.
                  ಉಡುಪಿಯಲ್ಲಿ 'ಬ್ರಹ್ಮಕಪಾಲ, ಸೈಂದವ ವಧೆ ಮತ್ತು ಇಂದ್ರಜಿತು' ಪ್ರಸಂಗಗಳನ್ನು ದಾಖಲಾತಿಗೆ ಒಳಪಡಿಸಲಾಗಿತ್ತು. ಕುರಿಯ ಗಣಪತಿ ಶಾಸ್ತ್ರಿಗಳು, ಬಲಿಪ ನಾರಾಯಣ ಭಾಗವತರು, ಪ್ರಸಾದ್ ಬಲಿಪ, ಶಿವಶಂಕರ ಬಲಿಪರು ಪ್ರಸಂಗವನ್ನು ಮುನ್ನಡೆಸಿದ್ದರು. ಮುಖ್ಯವಾಗಿ 'ಸೈಂದವ ವಧೆ' ಪ್ರಸಂಗವು ರಂಗತಾಂತ್ರಿಕತೆಯನ್ನು ಹೊಂದಿದ ಆಖ್ಯಾನ. ಕುರುಕ್ಷೇತ್ರ ಯುದ್ಧದ ಮಧ್ಯೆ ಬರುವ ಸಣ್ಣ ಪ್ರಸಂಗ. ಅದರಲ್ಲಿ ಬರುವ ಪಾತ್ರಗಳು, ಪಾತ್ರಗಳ ಕುಶಲತೆಗಳು, ತಾಂತ್ರಿಕ ಜಾಣ್ಮೆ, ಚಿಕ್ಕ ಪುಟ್ಟ ಕುಸುರಿಗಳು ಪ್ರಸಂಗದ ಜೀವಾಳ. ಹಿರಿಯರಾದ ಬಲಿಪರು ಕಲಾವಿದರನ್ನೆಲ್ಲಾ ಕುಳ್ಳಿರಿಸಿಕೊಂಡು ಪಾತ್ರದ ನಡೆಯವನ್ನು ಹೇಳಿದ್ದರಿಂದ ಪ್ರಸಂಗ ಯಶ ಕಂಡಿತು.
                  ಪ್ರದರ್ಶನದಂದು ಸಂಜೆ ಬಲಿಪ ಭಾಗವತರ ಸುತ್ತ ಕಲಾವಿದರು ಸುತ್ತುವರಿದಿದ್ದರು. ಎಲ್ಲರ ಕೈಯಲ್ಲೂ ಪ್ರಸಂಗ ಪಠ್ಯದ ಪ್ರತಿಯಿತ್ತು. ಪ್ರಸಂಗದ ನಡೆಯನ್ನು ಬಲಿಪರು ಹೇಳುತ್ತಾ ಹೋದಂತೆ ಮೂಡಿದ ಸಂಶಯಕ್ಕೆ ಅಲ್ಲಲ್ಲೇ ಪರಿಹಾರ ಹೇಳುತ್ತಿದ್ದರು. "ಇಂತಹ ಸಮಾಲೋಚನೆಗಳು ಪ್ರಸಂಗವೊಂದರ ಯಶಕ್ಕೆ ಮುಖ್ಯ ಕಾರಣವಾಗುತ್ತದೆ. ಮೇಳಗಳಲ್ಲೂ ಕೂಡಾ ಸಮಾಲೋಚನೆ ಬೇಕು. ರಂಗದಲ್ಲಿ ಎದುರಾಗುವ ಪಾತ್ರಗಳ ಕುರಿತು ಕಲಾವಿದರು ಸಮಾಲೋಚನೆಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಇಂತಹ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಎಷ್ಟು ಮಂದಿಗೆ ಇಂತಹ ಮನಃಸ್ಥಿತಿ ಇದೆ," ಎಂದು ಪ್ರಶ್ನಿಸುತ್ತಾರೆ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು.
                     ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇದರ ಆಶ್ರಯದಲ್ಲಿ ರಾಮಕೃಷ್ಣ ಮಯ್ಯರು ಯಕ್ಷ ದಾಖಲಾತಿ ಮಾಡುತ್ತಿದ್ದಾರೆ. ಅವರ ಆಶಯವನ್ನು ಅರ್ಥಮಾಡಿಕೊಂಡ ಬಳಗವು ಅವರೊಂದಿಗಿದೆ. ಯಾವುದೇ 'ಇಸಂ'ಗಳಿಗೆ ಒಳಗಾಗದೆ, 'ಗುಂಪಿನಲ್ಲಿ' ಕಾಣಿಸಿಕೊಳ್ಳದ ಮಯ್ಯರ ಯಕ್ಷ ಕಾಳಜಿಗೆ ಶರಣು. ಒಂದೊಂದು ಪ್ರದರ್ಶನದ ವ್ಯವಸ್ಥೆಗೆ ಲಕ್ಷಗಟ್ಟಲೆ ಹಣ ಬೇಕಾಗುತ್ತದೆ. ದಾನಿಗಳಿಂದ ಹೇಗೋ ಹೊಂದಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸ್ವಂತ ದುಡಿಮೆಯ ಗಳಿಕೆಯನ್ನೂ ವಿನಿಯೋಗಿಸಿದ್ದಿದೆ.
                  ಇಂತಹ ದಾಖಲಾತಿಗಳು ಅಭ್ಯಾಸಿಗಳಿಗೆ ಕೈತಾಂಗು ಇದ್ದಂತೆ. ಕುರಿಯ, ಬಲಿಪರಂತಹ ಹಿರಿಯ ಭಾಗವತರ ನಿರ್ದೇಶನಗಳು ದಾಖಲೀಕರಣಕ್ಕೊಂಡು ತುರಾಯಿ ಇದ್ದಂತೆ. ರಂಗದ ಒಂದು ವ್ಯವಸ್ಥೆಯು ಈ ಇಬ್ಬರಲ್ಲೂ ಹಲವು ಕಾಲದಿಂದ ಹರಿದು ಬಂದಿದ್ದು, ಅದನ್ನು ಉಳಿಸುವ, ಬೆಳೆಸುವ ಮತ್ತು ಭವಿಷ್ಯಕ್ಕೆ ಹಸ್ತಾಂತರಿಸುವ ರಾಮಕೃಷ್ಣ ಮಯ್ಯರ ಶ್ರಮಕ್ಕೆ ನಾವೆಲ್ಲಾ ಕೈಜೋಡಿಸಬೇಕು.
                    ಲೇಖನಾರಂಭದಲ್ಲಿ ಹೇಳಿದಂತೆ ರಾಮಕೃಷ್ಣ ಮಯ್ಯರು ಒಗಟಾಗಿ ಕಾಣುವುದು ಈ ಎಲ್ಲಾ ಕಾರಣಗಳಿಂದ. ಒಬ್ಬ ಭಾಗವತನಾಗಿ ಎಲ್ಲರಂತೆ ತನ್ನ ಪಾಳಿಯಲ್ಲಿ 'ಡ್ಯೂಟಿ' ಮುಗಿಸಿ ಚೌಕಿಯಲ್ಲಿ ಗಡದ್ದಾಗಿ ನಿದ್ದೆ ಮಾಡಬಹುದಿತ್ತು. ಯಕ್ಷಗಾನ ಹೇಗೂ ಇರಲಿ, ಹೇಗೂ ಸಾಗಲಿ, ನಾನಿರುವುದೇ ಹೀಗೆ ಎನ್ನುವ ಮನಃಸ್ಥಿತಿಯನ್ನು ಹೊಂದಬಹುದಾಗಿತ್ತು. ಮಾನವ ಸಹಜ ಎಂದೆನ್ನುವ ಪರದೂಷಣೆ, ನಿಂದೆ, ಗೇಲಿ ಮತ್ತು ಸ್ವ-ವೈಭವದಲ್ಲಿ ಕಾಲ ಕಳೆಯಬಹುದಾಗಿತ್ತು. ಆದರೆ ತನಗೆ ಅನ್ನ ಕೊಟ್ಟ, ಕೀರ್ತಿ ನೀಡಿದ ರಂಗಕ್ಕೆ ನ್ಯಾಯ ಸಲ್ಲಿಸುವ ಮನಃಸ್ಥಿತಿಯು ಅವರಿಗೆ ಹಿರಿಯ ಬಳುವಳಿ. ಅಂತಹ ಚೇತನಗಳ ಅದರ್ಶದಡಿ ಬದುಕನ್ನು ರೂಪಿಸಿದ ರಾಮಕೃಷ್ಣ ಮಯ್ಯರ ಇಂತಹ ಸದ್ದಿಲ್ಲದ ಕೆಲಸವೂ ದಾಖಲಾಗಬೇಡವೇ? 
(ಚಿತ್ರ: ಉದಯ ಕಂಬಾರ್, ನೀರ್ಚಾಲು)


No comments:

Post a Comment