ಸಂಮಾನ, ಪ್ರಶಸ್ತಿಗಳ ಸಂಗ್ರಹದ 'ಬಲಿಪ ಭವನ'ದಲ್ಲಿ ಬಲಿಪರು
ಅಜ್ಜನ ಮಾತನ್ನು ಆಲಿಸುತ್ತಿರುವ ಮೊಮ್ಮಗ
ಜೂನ್ ತಿಂಗಳು. ಮಳೆಯ ಅಬ್ಬರ. ಬಲಿಪ ನಾರಾಯಣ ಭಾಗವತರ 'ಬಲಿಪ ಭವನ'ದ ವೀಕ್ಷಣೆಗಾಗಿ ಸ್ನೇಹಿತರೊಂದಿಗೆ ಭೇಟಿ ನೀಡಿದ್ದೆ. ಈ ಮಹಾನ್ ಭಾಗವತರಿಗೆ ಎರಡು ವರುಷದ ಹಿಂದೆಯಷ್ಟೇ ಅಭಿಮಾನಿಗಳು ಭವನದ ಕಾಣ್ಕೆ ನೀಡಿದ್ದರು. ಮೂರು-ಮೂರುವರೆ ದಶಕದೀಚೆಗೆ ಪಡೆದ ಸಂಮಾನ, ಪ್ರಶಸ್ತಿಗಳ ಗುಣಕಥನ ಫಲಕಗಳು ಭವನವನ್ನು ಅಲಂಕರಿಸಿದ್ದುವು. "ಅಭ್ಯಾಸಿಗಳಿಗೆ ಇದೊಂದು ಒಳ್ಳೆಯ ಜಾಗ. ಹಳ್ಳಿಯ ಪರಿಸರ. ಕಲಿಯುವವರಿಲ್ಲವಲ್ಲಾ. ಕಲಿಯದಿದ್ದರೆ ಕಲೆ ಉಳಿಯುವುದು ಹೇಗೆ? ಭಾಗವತಿಕೆ ಕಲಿಯಲು ಏನಿಲ್ಲವೆಂದರೂ ಎರಡು ವರುಷ ಬೇಕು. ಭಾಗವತಿಕೆ ಎನ್ನುವುದು ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ," ಎನ್ನುತ್ತಾ ಮಾತಿಗಿಳಿದರು. ಒಂದು ಕಾಲಘಟ್ಟದ ಸಾಮಾಜಿಕ ಬದುಕು, ಬದ್ಧತೆ, ಕಷ್ಟ-ಸುಖಗಳು, ಪ್ರಾಮಾಣಿಕತೆಗಳು, ಮೇಳ ನಿಷ್ಠೆ, ರಂಗಸುಖಗಳು ಅವರ ಮಾತಲ್ಲಿ ಮಿಂಚಿ ಮರೆಯಾಗುತ್ತಿದ್ದವು. ಕಳೆದ ಕಾಲದ ರಂಗ ಕಥನಗಳ ಬೆರಗಿನ ಝಲಕ್ಗಳನ್ನು ಬಲಿಪರೇ ಹೇಳಬೇಕು.
ಮೊದಲು ಐದು ದಿವಸದ ದೇವಿಮಹಾತ್ಮೆ ಪ್ರದರ್ಶನ ಆಗುತ್ತಿತ್ತು. ಒಂದು ಘಟನೆ ನೆನಪಾಗುತ್ತದೆ - ಜತ್ತಿ ಭಾಗವತರ ಭಾಗವತಿಕೆಯ ಉಚ್ಛ್ರಾಯ ಕಾಲ. ಮೇಳದಲ್ಲಿ ಪೆರಿಯಪ್ಪಾಡಿ ಪರಮೇಶ್ವರ ಭಟ್ಟರು ಭಾಗವತರು. ಅವರು ಮಂತ್ರವಾದಿ ಕೂಡಾ. ಒಂದು ದೇವಿ ಮಹಾತ್ಮೆ ಪ್ರಸಂಗದ ಪ್ರದರ್ಶನದಲ್ಲಿ ಜತ್ತಿಯವರು ಭಾಗವತರು. ಆಟ ನಡೆಯುತ್ತಿದ್ದಂತೆ ರಂಗಸ್ಥಳದ ಹತ್ತಿರ ಪರಮೇಶ್ವರ ಭಟ್ಟರು ಮಂತ್ರವಾದ ಮಾಡುತ್ತಾ ಆಹುತಿ ಕೊಡುತ್ತಿದ್ದರು! ರಂಗದಲ್ಲಿ ಒಬ್ಬೊಬ್ಬ ರಾಕ್ಷಸ ಸಾಯುವಾಗಲೂ ಕುಂಬಳಕಾಯಿಯನ್ನು ಕಡಿದು, 'ಕುರ್ದಿ’ಯ (ಅರಶಿನ ಅಥವಾ ಕುಂಕುಮವನ್ನು ನೀರಿಗೆ ಮಿಶ್ರ ಮಾಡಿದ ಪಾಕ) ನೀರನ್ನು ಚೆಲ್ಲುತ್ತಿದ್ದರು. 'ದೇವಿ ಮಹಾತ್ಮೆ' ಅಂದಾಗ ಜನರಲ್ಲಿ ಭಯ, ಭಕ್ತಿಯಿತ್ತು. ಆರಾಧನಾ ಭಾವದಿಂದ ಕಾಣುತ್ತಿದ್ದರು. ಬಹುಶಃ ಕಾಳಿ, ರಕ್ತೇಶ್ವರಿ ದೈವಗಳು ತೊಂದರೆ ಕೊಡಬಾರದು ಎನ್ನುವ ಕಾರಣಕ್ಕೆ ಈ ವ್ಯವಸ್ಥೆಯೋ ಏನೋ? ಪ್ರದರ್ಶನವನ್ನು ಜನರು ಮನಸಾ ಅನುಭವಿಸುತ್ತಿದ್ದರು.
ಉಳ್ಳವರು ’ದೇವಿ ಮಹಾತ್ಮ” ಪ್ರಸಂಗ ಆಡಿಸುವಾಗ ಗೌಜಿಗಾಗಿ 'ತಾಸೆ'ವಾದನ ತಂಡವನ್ನು ಆಹ್ವಾನಿಸುತ್ತಿದ್ದರು. ಕೆಲವೊಂದು ಸನ್ನಿವೇಶಗಳಿಗೆ ತಾಸೆ ಬಾರಿಸುತ್ತಿದ್ದರು. ಮಧ್ಯೆ 'ಗರ್ನಾಲು' ಸಿಡಿತ. ಇಂತಹ ಗೌಜಿಗಳಿಗೆ 'ಸಮುದ್ರ ಮಥನ' ಪ್ರಸಂಗವನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದರು. ಬರುಬರುತ್ತಾ ಗೌಜಿಗಳ ಪ್ರಮಾಣ ಹೆಚ್ಚಾಯಿತು. ಒಮ್ಮೆ ಒಂದು ಗೌಜಿಯ ಆಟದಲ್ಲಿ ಕುದ್ರೆಕೂಡ್ಲು ರಾಮ ಭಟ್ಟರು ಚೆಂಡೆ ಕೆಳಗಿಟ್ಟು, "ಚೆಂಡೆ ಇರುವುದು ಯಾಕೆ? ವೇಷಕ್ಕೆ ಯಾವುದು ಬೇಕು? ತಾಸೆಯ ನಡೆಗೆ ವೇಷಗಳು ಕುಣಿಯಲಿ? ನೋಡೋಣ" ಎಂದು ಕಡಕ್ಕಾಗಿ ಹೇಳಿದ್ದರು.
ಪೊಳಲಿ ಮೇಳದಲ್ಲಿ ವೆಂಕು ಭಾಗವತರು ಪ್ರಸಿದ್ಧರಾಗಿದ್ದರು. ತುಂಬಾ ಅಂದದ ಪದ್ಯ. ನನ್ನ ಅಜ್ಜ ಮೇಳದಲ್ಲಿ ಸಂಗೀತಗಾರರಾಗಿದ್ದರು. ಹದಿನೆಂಟು ಪ್ರಸಂಗಗಳ ಪದ್ಯಗಳು ಬಾಯಿಪಾಠ ಬಂದರೆ ಜಾಗಟೆ ಹಿಡಿಯಬಹುದು ಎಂದು ವೆಂಕು ಭಾಗವತರು ಹೇಳಿದ ಮಾತು ನೆನಪಾಗುತ್ತದೆ. ನನಗಾಗ ಹದಿನೆಂಟನೇ ವರುಷ. ನೀವು ಬಲಿಪರ ಪುಳ್ಳಿಯಲ್ವಾ. ಎಷ್ಟು ಪ್ರಸಂಗ ಬಾಯಿಗೆ ಬರುತ್ತದೆ ಎಂದು ಕೇಳಿದ್ದರು. ಮೂವತ್ತೈದು ಬರುತ್ತದೆ ಎಂದು ಖುಷಿಯಿಂದ ಉತ್ತರ ಕೊಟ್ಟಿದ್ದೆ. 'ಮಹಾಭಾರತದ ಸ್ವರ್ಗಾರೋಹಣ' ಪ್ರಸಂಗ ಬಾಯಿಗೆ ಬರುತ್ತದಾ ಎಂದು ಪ್ರಶ್ನಿಸಿದಾಗ ನಾನು ನಿರುತ್ತರನಾದೆ. ಅದನ್ನು ಕಲಿಯಿರಿ ಎಂದು ಉಪದೇಶ ಮಾಡಿದ್ದರು.
ಭಾಗವತರಿಗೆ ಪ್ರಸಂಗಗಳು ಕಂಠಸ್ಥವಾಗಿರಬೇಕು. ಬರೆದಿಡಲು ಪರಿಕರಗಳಿಲ್ಲ. ಕೆಲವು ಓಲೆಗರಿಗಳಲ್ಲಿ ದಾಖಲಾಗುತ್ತಿದ್ದುವಷ್ಟೇ. ಒಂದು ವೇಳೆ ಬರೆದಿಟ್ಟ ಪ್ರಸಂಗವಿದ್ದರೂ ರಂಗಸ್ಥಳದಲ್ಲಿ ಅದನ್ನಿಟ್ಟು ಹಾಡುವ ವ್ಯವಸ್ಥೆಯಿಲ್ಲ. ಪಡಿಮಂಚವಿಲ್ಲದೆ ನಿಂತೇ ಹಾಡಬೇಕಾಗಿತ್ತಲ್ವಾ. ಕಲಾವಿದರಿಗೆ ಎಷ್ಟೆಷ್ಟು ಪದ್ಯ, ಆ ಪದ್ಯದ ಸೂಕ್ಷ್ಮ ಭಾವಾರ್ಥಗಳನ್ನು ಭಾಗವತ ಹೇಳಬೇಕು. ಒಂದು ಆಟದಲ್ಲಿ ತಪ್ಪಿದರೆ ಮರುದಿವಸ ಕಲಾವಿದರು ತಿದ್ದಿಕೊಳ್ಳುತ್ತಿದ್ದರು. ದಿನವಿಡೀ ನಡಿಗೆಯಲ್ವಾ. ಕಾಡು ಹರಟೆಯಿಲ್ಲ. ಪ್ರಸಂಗದ ನಡೆ, ಅರ್ಥಗಾರಿಕೆ, ನಾಟ್ಯದ ವಿಧಾನವನ್ನು ಕಲಿತುಕೊಳ್ಳುತ್ತಾ ಸಾಗುವುದು. ಊಟ ಇಲ್ಲದಿದ್ದರೂ ಕಲಾವಿದರಿಗೆ ರಂಗನಿಷ್ಠತೆಯಿತ್ತು. ರಾತ್ರಿಯಿಡೀ ಗೊಣಗಾಟವಿಲ್ಲದೆ ವೇಷ ಮಾಡುತ್ತಿದ್ದರು. ವೇಷ, ರಂಗದ ಕುರಿತು ಪ್ರೀತಿಯಿತ್ತು,
ಪ್ರತೀ ಪ್ರಸಂಗದ ಆರಂಭಕ್ಕೆ ಕಥಾಸಾರವು ಪದ್ಯರೂಪದಲ್ಲಿ ಕವಿ ಹೇಳಿರುತ್ತಾನೆ. ಅದನ್ನು ಪ್ರಸ್ತುತಪಡಿಸಿದ ಬಳಿಕವೇ ಕಥೆ ಆರಂಭ. ಪ್ರಸಂಗದ ಕೊನೆಗೆ ಕವಿಗೆ ನಮನ ಸಲ್ಲಿಸುವ ಪದ್ಯಗಳಿವೆ. ಅದನ್ನೂ ಕೂಡಾ ರಂಗದಲ್ಲಿ ಭಾಗವತ ಹೇಳಬೇಕು. ವೇಷವು ಕುಣಿಯಬೇಕು. ಇದು ಪ್ರಸಂಗ ಕವಿಗೆ ಕೊಡುವ ಗೌರವ. ಪ್ರಸಂಗಾರಂಭಕ್ಕೆ ಹಾಡುವ 'ಅಂಬುರುಹದಳನೇತ್ರೆ.. ಸ್ತುತಿಯು ಕೃಷ್ಣಸಂಧಾನ ಪ್ರಸಂಗದ್ದು. ಭಾಗವತಿಕೆ ಕಲಿಯುವವರು ಇದನ್ನು ಮೊದಲಿಗೆ ಅಭ್ಯಾಸ ಮಾಡಬೇಕಿತ್ತು. ಬಹುಶಃ ಇದೇ ಮುಂದುವರಿಯಿತು.
ಚೌಕಿಯಲ್ಲಿ (ಬಣ್ಣದ ಮನೆ) ಗಣಪತಿ ಪೂಜೆಯ ಬಳಿಕ ಮಂಗಳದ ವರೆಗೆ ರಂಗಸ್ಥಳದ ಸವರ್ಾಧಿಕ್ಯ ವ್ಯಕ್ತಿ ಭಾಗವತ. ಅವನ ಒಪ್ಪಿಗೆ ಪಡೆಯದೆ ರಂಗಕ್ಕೆ ವೇಷಗಳ ಹೊರತು ಮಿಕ್ಕವರಿಗೆ ಪ್ರವೇಶವಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ತೀರಾ ಅನಿವಾರ್ಯವಾದರೆ ಭಾಗವತರಲ್ಲಿ ವಿನಂತಿಸಿ, ಒಪ್ಪಿಗೆ ಪಡೆದೇ ರಂಗಸ್ಥಳಕ್ಕೆ ಹೋಗಬಹುದು. ಮೇಳದ ಹಾಸ್ಯಗಾರರು ಪ್ರಸಂಗದ ಮಧ್ಯದಲ್ಲಿ ಧನ್ಯವಾದ ಕೊಡುತ್ತಾರೆ. ಅವರು ಕೂಡಾ ವೇಷದಲ್ಲಿದ್ದಾಗಲೇ ಈ ಜವಾಬ್ದಾರಿಯನ್ನು ನಿಭಾಯಿಸಬೇಕು. ವೇಷ ತೆಗೆದು ಪ್ಯಾಂಟ್, ಅಂಗಿ ತೊಟ್ಟು ರಂಗಕ್ಕೆ ಬರುವಂತಿಲ್ಲ. ಯಥಾಸಾಧ್ಯ ನಾನು ರಂಗದಲ್ಲಿ ಇರುವ ತನಕ ಇಂತಹ ಶಿಸ್ತನ್ನು ಪಾಲಿಸಿದ್ದೇನೆ. ಭಾಗವತನಿಗೆ ಯಕ್ಷಗಾನವು ಕೊಟ್ಟ ಈ ಗೌರವವನ್ನು ಎಲ್ಲರೂ ಪಾಲಿಸಬೇಕು.
ಮದ್ದಳೆಯ 'ಛಾಪು' ಇದೆಯಲ್ಲಾ, ಅದಕ್ಕೂ ಗೌರವವಿದೆ. ಮನಸ್ಸಿಗೆ ಬಂದಂತೆ ಛಾಪು ಹಾಕುವಂತಿಲ್ಲ. ಅರ್ಥ ಹೇಳುವಾಗ ಛಾಪು ನುಡಿತ ಸಲ್ಲದು. ವೇಷಧಾರಿಯ ಅರ್ಥ ನಿಂತ ಕೂಡಲೇ ಮದ್ಲೆಗಾರ ಛಾಪು ಹಾಕುವುದು ಕ್ರಮ. ಒಂದು ವೇಳೆ ಅರ್ಥದ ಮಧ್ಯೆ ಛಾಪು ಹಾಕಿದರೆ 'ಬೇಗ ಮುಗಿಸಿ' ಎನ್ನುವ ಸೂಚನೆ. ಎರಡನೇ ಛಾಪು ಬರುವಲ್ಲಿಯ ತನಕ ವೇಷಧಾರಿ ಅವಕಾಶ ಮಾಡಿಕೊಡಕೂಡದು. ಎರಡನೇ ಛಾಪು ಬಿತ್ತೋ, 'ಅರ್ಥ ನಿಲ್ಲಿಸಿ' ಎಂದರ್ಥ. ಒಂದು ಛಾಪಿನಲ್ಲಿ ಇಷ್ಟು ಅರ್ಥವಿದೆ. ಇದು ಮದ್ಲೆಗಾರರ ಅರ್ಹತೆ. ಆಕಸ್ಮಿಕವಾಗಿ ಹಾರ್ಮೋನಿಯಂ ಕೈಕೊಟ್ಟಿತು ಎಂದಾದರೆ ಮದ್ದಳೆಯ ಛಾಪಿನ ಶ್ರುತಿಯಲ್ಲೇ ಭಾಗವತ ಪದ್ಯ ಹಾಡಬೇಕು. ನಾನು ಹಾಡಿದ್ದೇನೆ.
ಚೌಕಿ ಎನ್ನುವುದು ಕಲಾವಿದರ ಮನೆ. ಅದರೊಳಗೆ ಅನ್ಯರಿಗೆ ಪ್ರವೇಶವಿಲ್ಲ. ವೇಷಧಾರಿಗಳ ಪೆಟ್ಟಿಗೆಯ ಮೇಲೆ ಅನ್ಯರು ಬಿಡಿ, ವೇಷಧಾರಿಗಳೂ ಕುಳಿತುಕೊಳ್ಳಬಾರದು. ಕಾರಣ ಮತ್ತೇನಿಲ್ಲ. ಆ ಪೆಟ್ಟಿಗೆಯೊಳಗೆ ಆತ ಧರಿಸುವ ವೇಷಭೂಷಣಗಳು ಇವೆಯಲ್ಲಾ. ಅದಕ್ಕೆ ಪಾವಿತ್ರ್ಯ ಕೊಡುವ ದೃಷ್ಟಿಯಿಂದ ಹಿರಿಯ ಕಲಾವಿದರು ಈ ಶಿಸ್ತನ್ನು ಪಾಲಿಸುತ್ತಿದ್ದರು. ಚೌಕಿಯಲ್ಲಿ ಕಲಾವಿದರೊಳಗೆ ಏನಾದರೂ ಸಮಸ್ಯೆ ಬಂದರೆ ಪರಸ್ಪರ ಮಾತುಕತೆಯಿಂದ ಮುಗಿಸಬೇಕು. ಭಾಗವತರ ತನಕ ದೂರು ಹೋದರೆ, ಭಾಗವತ ಈ ವಿವಾದವನ್ನು ಯಜಮಾನರಿಗೆ ತಲುಪಿಸಲೇಬೇಕು. ಯಜಮಾನರಿಂದಲೇ ಕೊನೆಯ ತೀರ್ಪುು.
ವೇಷಧಾರಿಗೆ ಬೇಕಾದಂತೆ ಮದ್ದಳೆಯನ್ನೋ, ಚೆಂಡೆಯನ್ನೋ ನುಡಿಸುವುದು ಯಕ್ಷಗಾನವಲ್ಲ. ನುಡಿತಗಳ ಚೌಕಟ್ಟಿನೊಳಗೆ ವೇಷವು ಕುಣಿದಾಗಲೇ ಅದು ಯಕ್ಷಗಾನ. ಪದ್ಯ ಹೇಳಲೂ ನಿಶ್ಚಿತವಾದ ಮಾನದಂಡವಿದೆ. ಲೆಕ್ಕಾಚಾರವಿದೆ. ಪಾರ್ತಿಸುಬ್ಬನ ಪ್ರಸಂಗವು ತುಂಬಾ ಸರಳ. ಪದ್ಯ ಹೇಳುವಾಗಲೇ ಅದು ಮಾತನಾಡಿದ ಹಾಗಿರಬೇಕು ಎನ್ನುವುದು ಕವಿಯ ಆಶಯ. ಪದ್ಯ ಹೇಳುವಾಗ ಒಂದು ಅಕ್ಷರ ಲೋಪ ಆಗಬಾರದು. ಅದು ಕವಿತಾ ದೋಷ. ಭಾಗವತನು ಕವಿಗೆ ಮಾಡುವ ಅವಮಾನ.
ಬಲಿಪ ನಾರಾಯಣ ಭಾಗವತರು ಭೂತಕಾಲದ ರಂಗಕ್ಕೆ ದನಿಯಾದಾಗ ನಾನು ಕಿವಿಯಾದೆ. ಕೊನೆಗೆ ನನ್ನಲ್ಲಿ ಉಳಕೊಂಡದ್ದು ಬೆರಗು ಮಾತ್ರ.
No comments:
Post a Comment