ಪುನಶ್ಚೇತನಗೊಂಡ ಕಲಾವರ್ಧಿನಿ ಸಂಘದ ತಾಳಮದ್ದಳೆ.
ಕಾಂಚನದಲ್ಲಿ ಜರುಗಿದ ತಾಳಮದ್ದಳೆಯೊಂದರ ಅಪರೂಪದ ಚಿತ್ರ - ದೇರಾಜೆ ಸೀತಾರಾಮಯ್ಯ,
ಎನ್.ವಿ.ಕೃಷ್ಣ ರಾವ್, ರಾಮ ಭಟ್, ಕುಕ್ಕಜೆ ಕೃಷ್ಣ ಭಟ್, ಈಶ್ವರ ಭಟ್ ಕಜೆ, ಕುಬಣೂರು
ಬಾಲಕೃಷ್ಣ ರಾವ್, ನಾರಾಯಣ ಭಟ್, ಕೃಷ್ಣಶಾಸ್ತ್ರಿ (ಕಲಾವಿದರು)
ಪ್ರಜಾವಾಣಿ ’ದಧಿಗಿಣತೋ’ ಅಂಕಣ / 18-8-2017
ಯಕ್ಷಗಾನದ ಹವ್ಯಾಸಿ ರಂಗಭೂಮಿಯ ಸಾಧ್ಯತೆಗಳು ಆ ರಂಗದಲ್ಲಿದ್ದವರಿಗೆ ಅನುಭವವೇದ್ಯ. ಸಂಘವೊಂದು ಹಳ್ಳಿಯಲ್ಲಿ ಉಸಿರಾಡುತ್ತಿದ್ದರೆ ಅದು ಅಲ್ಲಿನ ಸಾಂಸ್ಕ್ರತಿಕ ಮುಖ. ವೈಚಾರಿಕವಾದ ಭಿನ್ನಾಭಿಪ್ರಾಯಗಳು, ಅದಕ್ಕೆ ಥಳಕು ಹಾಕುತ್ತಿದ್ದ ವೈಯಕ್ತಿಕ ಪ್ರತಿಷ್ಠೆಗಳ ಮೇಲಾಟದ ಮಧ್ಯದಲ್ಲೂ ಸಂಘಗಳು ಕಲಾಮನಸ್ಸುಗಳನ್ನು ಸೃಷ್ಟಿಸುವುದಲ್ಲಿ ಸಫಲವಾಗಿದ್ದುವು. ನೋಂದಾಯಿತ ಸಂಘಗಳು ಕಾರ್ಯ ನಿರ್ವಹಿಸುವಂತೆ ಸುಪುಷ್ಟವಾದ ಕಾರ್ಯಹೂರಣಗಳನ್ನು ಹೊಂದಿದ್ದವು.
ಹವ್ಯಾಸಿ ಸಂಘಗಳ ಚಟುವಟಿಕೆಗಳು ದಾಖಲಾದುದು ಅಲ್ಲೋ ಇಲ್ಲೋ ಮಾತ್ರ. ಆಧುನಿಕ ತಂತ್ರಜ್ಞಾನಗಳ ಅಲಭ್ಯತೆಗಳಿಂದಾಗಿ ಸಾಂಸ್ಕೃತಿಕ ಸುದ್ದಿಗಳು ಹೊರ ಜಗತ್ತಿಗೆ ಪರಿಚಯವಾಗುತ್ತಿರಲಿಲ್ಲ. ಸೇವಾ ಭಾವದ ಹಿನ್ನೆಲೆಯಲ್ಲಿ ಅಂತಹ ವಿಚಾರಗಳಿಗೆ ಕೊನೆಯ ಸ್ಥಾನ. ಸಂಘವೊಂದರ ಹತ್ತರ, ಇಪ್ಪತ್ತರ ಸಂಭ್ರಮಗಳಿಗೆ ನೆನಪು ಸಂಚಿಕೆಗಳೂ ಹೊರಬರುತ್ತಿರಲಿಲ್ಲ. ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದ ಅಸಾಧ್ಯತೆಗಳೂ ಕಾರಣ. ಯಾವ ಕಲಾವಿದರಲ್ಲೂ ಕಾಂಚಾಣದ ಮೋಹ ಇದ್ದಿರಲಿಲ್ಲ. ಸಾಮಾಜಿಕವಾಗಿ ಅಂತಹ ವಾತಾವರಣಗಳಿದ್ದಿರಲಿಲ್ಲ. ಚಟುವಟಿಕೆಗಳು ದಾಖಲೆಗೊಳ್ಳುತ್ತಿದ್ದರೆ ಭವಿಷ್ಯದ ಯಾವುದೋ ಒಂದು ದಿವಸಕ್ಕೆ ಅದು ಭೂತಕಾಲದ ದಾಖಲೆಯಾಗಿ ಒದಗುತ್ತಿತ್ತು.
ಬಂಟ್ವಾಳ ತಾಲೂಕಿನ - ದ.ಕ.ಜಿಲ್ಲೆ - ಕೆದಿಲದಲ್ಲಿ 'ಯಕ್ಷಗಾನ ಕಲಾವರ್ದಿನೀ ಸಭಾ' ಎನ್ನುವ ಸಂಘವೊಂದಿತ್ತು. 1955ರ ದಶಂಬರ 12ರಂದು ಉದ್ಘಾಟನೆಗೊಂಡಿತ್ತು. ತನ್ನ ಐದನೇ ವರುಷದ ವಾರ್ಶಿಕೋತ್ಸವದ - 25 ಫೆಬ್ರವರಿ 1961 - ಸಂದರ್ಭದಲ್ಲಿ ಚಿಕ್ಕ ಪುಸ್ತಿಕೆಯೊಂದನ್ನು ಪ್ರಕಟಿಸಿತ್ತು. ಅದು ಕಳೆದ ಕಾಲದ ಕಥನವನ್ನು ಸಾರುತ್ತದೆ. ಒಂದು ಪ್ರದೇಶದ ಸಾಂಸ್ಕೃತಿಕ ದಾಖಲೆಯಾಗಿ ಗೋಚರಿಸುತ್ತದೆ. ಇದನ್ನು ಒದಗಿಸಿದವರು ಕಲಾವಿದ ಕೆದಿಲ ಗಣರಾಜ ಭಟ್.
ಯಕ್ಷಗಾನ ಸಂಘವೊಂದು ಸ್ಥಾಪನೆಯಾದರೆ ಅದು ಯಕ್ಷಗಾನದ ಹೊರತಾದ ಯಾವ ಕಲೆಯನ್ನೂ ಸ್ಪರ್ಶಿಸದು, ವೀಕ್ಷಿಸದು! ಇತರ ಕಲೆಗಳೂ ಅಷ್ಟೇ! ಕಾರಣ ಅರಿಯದು. ಸೋದರ ಕಲೆಗಳನ್ನು ಎಷ್ಟೋ ಸಂದರ್ಭಗಳಲ್ಲಿ ಗೌರವಿಸಲಾಗದಷ್ಟು ಕೃತಘ್ನರಾಗುತ್ತೇವೆ. ಕಲಾವರ್ಧಿನಿ ಸಭಾವು ಯಕ್ಷಗಾನವನ್ನು ಮುಖ್ಯವಾಗಿಟ್ಟುಕೊಂಡರೂ ಇತರೆಲ್ಲ ಕಲೆಗಳನ್ನು ಗೌರವದಿಂದ ಕಂಡಿದೆ. ಆಯೋಜನೆಯನ್ನು ಮಾಡಿದೆ. ತಾಳಮದ್ದಳೆ, ಬಯಲಾಟ, ಭಾರತ ವಾಚನ, ನಾಗಸ್ವರ ಕಛೇರಿ, ಹರಿಕಥೆ, ಉಪನ್ಯಾಸಗಳು, ಸಂಗೀತ.. ಹೀಗೆ ವೈವಿಧ್ಯ ಹೂರಣಗಳಿಂದ ಮೈತುಂಬಿದ್ದುವು.
ಉದಾ: 9-8-1960ರಂದು ಕೆದಿಲ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ 'ಯಾಗ ನಿರ್ಧಾರ' ಎನ್ನುವ ಭಾರತ ವಾಚನ; 24-8-1960ರಲ್ಲಿ ನಾಗಸ್ವರ ಕಛೇರಿ, 3-5-1960ರಂದು ಎ.ಎಸ್.ರಾಮಕೃಷ್ಣ ಶೃಂಗೇರಿಯವರಿಂದ 'ಉತ್ತರ ಗೋಗ್ರಹಣ' ಹರಿಕಥೆ. 1957ರಲ್ಲಿ ಆಚಾರ್ಯ ವಿನೋಬಾ ಭಾವೆಯವರ ಸಮ್ಮುಖದಲ್ಲಿ ಯಕ್ಷಗಾನ. 1958ರಲ್ಲಿ ಮೂಲ್ಕಿ ಮೇಳದವರಿಗೆ ರಜತ ಕರಂಡಕ ಪ್ರದಾನ.
ಸಂಘವೊಂದರಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಸದಸ್ಯರು.. ಹೀಗೆ ಸಾಮಾನ್ಯವಾಗಿ ಜವಾಬ್ದಾರಿ ಹಂಚೋಣವಾಗುತ್ತದೆ. ಕಲಾವರ್ಧಿನಿ ಸಭಾವು ಒಂಭತ್ತು ಮಂದಿ ಸಂಸ್ಥಾಪಕರು, ಮೂವತ್ತೈದು ಪೋಷಕರು, ನಲವತ್ತೆರಡು ಸಹಾಯಕರು, ಹದಿನಾರು ಸಾಮಾನ್ಯ ಸದಸ್ಯರು. ಇದರಲ್ಲಿ ಸಕ್ರಿಯ ಸದಸ್ಯರ ಸಂಖ್ಯೆ ಐವತ್ತೈದು. ಇಪ್ಪತ್ತು ಮಂದಿಯ ಆಡಳಿತ ಮಂಡಳಿಯಿತ್ತು.
1961ರವರೆಗಿನ ಪದಾಧಿಕಾರಿಗಳ ವಿವರ ಹೀಗಿದೆ. ಬಿ. ಸುಬ್ಬಣ್ಣ ಭಟ್ (ಅಧ್ಯಕ್ಷರು), ಕೆ. ರಾಮ ಭಟ್ ಮತ್ತು ಕೈಂತಜೆ ಸದಾಶಿವ ಭಟ್ (ಉಪಾಧ್ಯಕ್ಷರು), ಕೈಲಾರ್ ಈಶ್ವರ ಭಟ್ (ಕೋಶಾಧಿಕಾರಿ) ಈಶ್ವರ ಭಟ್ ಕಜೆ (ಪ್ರಧಾನ ಕಾರ್ಯದರ್ಶಿ) ಬಿ. ನಾರಾಯಣ ಭಟ್ (ಜತೆ ಕಾರ್ಯದರ್ಶಿ). 1961ರ ನಂತರ - ಬಡೆಕ್ಕಿಲ ಕೃಷ್ಣ ಭಟ್ಟರು ಅಧ್ಯಕ್ಷರಾದರು. ಈಶ್ವರ ಭಟ್ ಕಜೆಯವರಿಗೆ ಕಾರ್ಯದರ್ಶಿಯ ಜವಾಬ್ದಾರಿ. ಕೈಂತಜೆ ಸೀತಾರಾಮ ಭಟ್ಟರು ಗೌರವ ಲೆಕ್ಕ ಪರಿಶೋಧಕರು. ಕೆ. ಗೋವಿಂದ ಭಟ್ಟರು ಕಾನೂನು ಸಲಹೆಗಾರರು.
ಯಕ್ಷಗಾನ ಸಂಘವಾದರೂ ಅದು ಇತರ ಸಹಕಾರಿ ಸಂಘಗಳಂತೆ ಲೆಕ್ಕಪತ್ರಗಳು, ಆಡಳಿತ ಮಂಡಳಿಯನ್ನು ಸಂಸ್ಥೆಯ ಸುಲಭ ಮತ್ತು ಪಾರದರ್ಶಕ ವ್ಯವಹಾರಕ್ಕಾಗಿ ಹೊಂದಿತ್ತು. ಅಧ್ಯಕ್ಷ, ಕಾರ್ಯದರ್ಶಿ ಎನ್ನುವ ಹುದ್ದೆಗಳು ಅಲಂಕಾರಕ್ಕೆ ಇರುವಂತಹುದಲ್ಲ ಎನ್ನುವುದನ್ನು ಹಿರಿಯರು ತೋರಿಕೊಟ್ಟಿದ್ದಾರೆ. ಕಾಲ ಸರಿದಂತೆ ಸಂಘದ ಬಹುತೇಕ ಮಂದಿ ವಿವಿಧ ಊರುಗಳಲ್ಲಿ ವಾಸ್ತವ್ಯ ಹೊಂದಿದರು. ಕೆಲವರು ಕಾಲ ವಶವಾದರು. ಇಪ್ಪತ್ತು-ಇಪ್ಪತ್ತೈದು ವರುಷ ಸಕ್ರಿಯವಾಗಿದ್ದ ಕಲಾವರ್ಧಿನಿ ಸಭಾ ಕಾಲನ ಪ್ರಭಾವದಿಂದ ಮರೆಗೆ ಸರಿಯಿತು. ಜನರು ಮರೆತರು. ಈ ಸಂಸ್ಥೆಯು ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಅದರ ಐದನೇ ವರುಷದ ವರದಿಯನ್ನು ಹೊಂದಿದ ಪುಸ್ತಿಕೆ ಸಾಕ್ಷಿ.
ಈ ಹಿನ್ನೆಲೆಯಲ್ಲಿ ನಿಲುಗಡೆ ಹೊಂದಿದ ಸಂಘವು ಕಳೆದ ವರುಷ ಪುನರಾರಂಭಗೊಂಡಿತು! ಇದು ಹೇಗೆ ಸಾಧ್ಯವಾಯಿತು? ಕೆದಿಲ ಗಣರಾಜ ಭಟ್ಟರ ಮಾತಿಗೆ ಕಿವಿಯಾಗೋಣ ಅಲ್ವಾ - ನನ್ನ ಅಜ್ಜ ನಾರಾಯಣ ಭಟ್ ಬಡೆಕ್ಕಿಲ. ಅವರ ಯಕ್ಷಗಾನದ ಪುಸ್ತಕಗಳ ಸಂಗ್ರಹದ ಸಂಚಿಯನ್ನು ಹುಡುಕುತ್ತಿದ್ದಾಗ 'ಯಕ್ಷಗಾನ ಕಲಾವರ್ಧಿನಿ ಸಭಾ, ಕೆದಿಲ' ಎನ್ನುವ ರಬ್ಬರ್ ಸ್ಟಾಂಪಿನ ಮೊಹರು ಗೋಚಾರವಾಯಿತು. ಶಾಯಿ ಆರಿರಲಿಲ್ಲ! ಆ ಸಮಯದ ಚಟುವಟಿಕೆಗಳನ್ನು ನೋಡುತ್ತಾ ಇದ್ದ ವಡ್ಯದಗಯ ಭೀಮ ಭಟ್ಟರು (85) ಆಗ ಸಂಘದ ಜವಾಬ್ದಾರಿಯಿದ್ದ ಕಜೆ ಈಶ್ವರ ಭಟ್ಟರತ್ತ ಬೆರಳು ತೋರಿದರು. ಈಶ್ವರ ಭಟ್ಟರ ಮೂಲಕ ಐದನೇ ವರುಷದ ವರದಿ ಪುಸ್ತಿಕೆ ಸಿಕ್ಕಿತು. ಆರು ದಶಕದ ಹಿಂದಿನ ಯಕ್ಷಲೋಕದ ಚಿತ್ರ ಕಣ್ಮುಂದೆ ಹಾದು ಹೋದುವು.
ನಿಲುಗಡೆಯಾದ ಸಂಘಕ್ಕೆ ಪುನಶ್ಚೇತನ ನೀಡಲು ನಿರ್ಧಾರ. ಊರ ಹಿರಿಯ ಸಹಕಾರ. ಬಡೆಕ್ಕಿಲ ಪದ್ಮನಾಭ ಭಟ್ ಅಧ್ಯಕ್ಷರಾಗಿಯೂ, ಕುಕ್ಕಾಜೆ ಚಂದ್ರಶೇಖರ ಭಟ್ ಕಾರ್ಯದರ್ಶಿಯಾಗಿ ಸಂಘವು ಉಸಿರಾಡಲು ಶುರುವಾಯಿತು. ಆರಂಭದ ದಿವಸಗಳಲ್ಲಿ ಕಲಾವರ್ಧಿನೀ ಸಭಾದಲ್ಲಿ ಅರ್ಥ ಹೇಳಿದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಶಂಭು ಶರ್ಮ, ಲಕ್ಷ್ಮೀಶ ಅಮ್ಮಣ್ಣಾಯರೇ ಮೊದಲಾದ ಕಲಾವಿದರನ್ನು ಆಮಂತ್ರಿಸಿ ತಾಳಮದ್ದಳೆ ಆಯೋಜನೆ ಮಾಡಿ ಸಂಘಕ್ಕೆ ಮರುಜನ್ಮ ನೀಡಿದೆವು. ಹಿರಿಯರು ಹಾಕಿಕೊಟ್ಟ ಹಾದಿಯಂತೆ ಸಂಘವನ್ನು ಯಕ್ಷಗಾನಕ್ಕೆ ಸೀಮಿತಗೊಳಿಸದೆ ಎಲ್ಲಾ ಕಲೆಗೂ ಗೌರವದ ಸ್ಥಾನವನ್ನು ಕಲ್ಪಿಸಿದ್ದೇವೆ.
ಒಂದು ಪುಸ್ತಿಕೆ ಮತ್ತು ರಬ್ಬರ್ ಸ್ಟಾಂಪ್ ಮೊಹರು ನಿಲುಗಡೆಯಾದ ಸಂಘಕ್ಕೆ ಜೀವದಾನ ಮಾಡಿತು. ಪುನಶ್ಚೇತನಗೊಂಡ ಸಂಘವು ಹದಿನೈದು ತಾಳಮದ್ದಳೆಗಳನ್ನು ಏರ್ಪಡಿಸಿದೆ. ಪ್ರತೀ ದಶಂಬರದಲ್ಲೂ ವಾರ್ಶಿಕೋತ್ಸವವನ್ನು ಆಚರಿಸುವ ಇರಾದೆಯಿದೆ. ಜತೆಗೆ ಇತರ ಕಲೆಗಳ ಪ್ರದರ್ಶನಗಳಿಗೂ ಆದ್ಯತೆ ನೀಡಿದ್ದಾರೆ. ಬಹುಶಃ ಈ ಎರಡು ದಾಖಲೆಗಳು ಗಣರಾಜರಿಗೆ ಸಿಗದೇ ಇರುತ್ತಿದ್ದರೆ ಕಲಾವರ್ಧಿನಿ ಸಭಾ ಕಾಲಗರ್ಭದೊಳಗೆ ಪೂರ್ತಿಯಾಗಿ ಇಳಿಯುತ್ತಿತ್ತೋ ಏನೋ?
ಕಲಾವರ್ಧಿನಿ ಸಭಾದಂತೆ ನಮ್ಮ ನಡುವೆ ನಿಲುಗಡೆಯಾದ ಯಕ್ಷಗಾನದ ಸಂಘಗಳ ಸಂಖ್ಯೆ ಸಾಕಷ್ಟಿವೆ. ಕೆಲವೊಂದಕ್ಕೆ ಸಾಕ್ಷಿಯಾಗಿ ಹಿರಿಯರು ಮಾತಿಗೆ ಸಿಗುತ್ತಾರೆ. ಕನಿಷ್ಠ ಐದು ವರುಷಕ್ಕೊಮ್ಮೆಯಾದರೂ ಸಂಘದ ಚಟುವಟಿಕೆಗಳ ಕಿರು ಪುಸ್ತಿಕೆಗಳು ಪ್ರಕಟವಾದರೆ ಭವಿಷ್ಯಕ್ಕದು ಆಕರವಾಗುತ್ತದೆ. ಬೇಡ, ಹತ್ತು, ಇಪ್ಪತ್ತು, ಇಪ್ಪತ್ತೈದರ ಸಂಭ್ರಮಕ್ಕಾದರೂ ಲಿಖಿತವಾಗಿ ದಾಖಲಾಗಬೇಕು. ಕೆಲವು ಸಂಘಗಳು ಈಗಾಗಲೇ ಈ ಯತ್ನದಲ್ಲಿ ಯಶಸ್ಸಾಗಿವೆ. ಇಂತಹ ದಾಖಲೆಗಳಿಂದ ಸಂಘದ ಚಟುವಟಿಕೆಗಳು, ಆ ಕಾಲಘಟ್ಟದಲ್ಲಿ ಬಾಳಿದ ಕಲಾವಿದರ ಮಾಹಿತಿಗಳು ಮುಂದಿನ ತಲೆಮಾರಿನ ಆಸಕ್ತರಿಗೆ ಒಂದು ಜ್ಞಾನವಾಗಿ ಒದಗುವುದರಲ್ಲಿ ಸಂದೇಹವಿಲ್ಲ.
No comments:
Post a Comment