Friday, January 2, 2015

ಹತ್ತನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ (2-1-2015) ಉದ್ಘಾಟನೆಯ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಮೂಡಂಬೈಲು ಶ್ರೀ ಸಿ.ಗೋಪಾಲಕೃಷ್ಣ ಶಾಸ್ತ್ರಿಯವರು ಮಾಡಿದ ಅಧ್ಯಕ್ಷೀಯ ಭಾಷಣದ ಆಯ್ದ ಭಾಗ : -

          ".. ಕಲೆಯು ಧನ ಸಂಪಾದನೆಯ ಉದ್ಯಮವಾಗುವಾಗ ಅವನತಿಗೆ ಅವಕಾಶ ಹೆಚ್ಚು. ದೇಶಮಟ್ಟದಲ್ಲಿ ಸಿನೆಮಾ ಹಣ ಗಳಿಸುವ ಅತ್ಯಂತ ದೊಡ್ಡ ಕ್ಷೇತ್ರ. ಅಲ್ಲಿಯೂ ಕಲಾತ್ಮಕತೆ ನಷ್ಟವಾಗುತ್ತಾ ಬಂದಿದೆ. ಆ ಪರಿಸ್ಥಿತಿ ಯಕ್ಷಗಾನಕ್ಕೆ ಬರಬಾರದು. ಈಗ ದಿನಪತ್ರಿಕೆಗಳಲ್ಲಿ ಕಾಣುವಂತೆ, 30-35 ವೃತ್ತಿನಿರತ ಮೇಳಗಳು ಪ್ರತಿದಿನ ಪ್ರದರ್ಶನವನ್ನೀಯುತ್ತಿವೆ. ಜಾತ್ರೆ, ವಾರ್ಶಿಕೋತ್ಸವ, ಬ್ರಹ್ಮಕಲಶ.. ಇತ್ಯಾದಿಗಳಲ್ಲಿ ಬೇರೆಯೇ ಬಯಲಾಟಗಳಿರುತ್ತವೆ. ಕಾಲಬೇಧವಿಲ್ಲದೆ ಪ್ರತಿದಿನ ನೂರಾರು ತಾಳಮದ್ದಳೆಗಳು ಜರುಗುತ್ತಿವೆ. ಮುಂಬಯಿ, ಬೆಂಗಳೂರು, ಮೈಸೂರು ಮುಂತಾದ ದೂರದ ಪಟ್ಟಣಗಳನ್ನೂ ಗಣಿಸಿದರೆ, ಪ್ರತಿದಿನ 200-300ಕ್ಕಿಂತ ಹೆಚ್ಚು ಪ್ರದರ್ಶನಗಳೂ, ಕೂಟಗಳೂ ಜರಗುತ್ತಿವೆ ಎಂಬುದರಲ್ಲಿ ಸಂದೇಹವಿಲ್ಲ. ಗತ ಶತಮಾನದಲ್ಲಿ ಟೆಂಟ್ ಮೇಳಗಳು ಬಹು ಸಂಖ್ಯಾತವಾಗಿದ್ದು, ಪ್ರತಿದಿನ ಲಕ್ಷಾಂತರ ರೂಪಾಯಿ ಗಳಿಕೆಯ ಕೇಂದ್ರಗಳಾಗಿದ್ದುವು. ಕನ್ನಡ ಮಾತ್ರವಲ್ಲದೆ ತುಳು ಭಾಷಾ  ಪ್ರೇಮವೂ ಆಟಗಳಲ್ಲಿ ಬೆಸೆದು ಹೋಗಿತ್ತು. ಯಕ್ಷಗಾನ ಕಲೆಗಾಗಿ ಅಲ್ಲ, ಹಣಕ್ಕಾಗಿ ಎಂಬಂತಾಗಿತ್ತು. ಆಗ ಆಟದ ಪೂರ್ವರಂಗ ಪೂರ್ಣಮಯವಾಗಿ, ನೃತ್ಯ, ಕೋಲಾಟ ಇತ್ಯಾದಿಗಳೂ ಆ ಸ್ಥಾನಕ್ಕೆ ಬಂದಿದ್ದುವು. ಕೆಲವರು ಕೋಳಿ ಕಾಳಗ, ಕಂಬಳದ ಕೋಣ, ಭೂತದ ವೇಷ.. ಇತ್ಯಾದಿಗಳಿಗೂ ಅವಕಾಶ ಕಲ್ಪಿಸಿದ್ದರು. ಏಳು ಮಂದಿ ಭಾಗವತರು, ಒಬ್ಬನೇ ಏಕಕಾಲದಲ್ಲಿ 7-8 ಮದ್ದಳೆ ನುಡಿಸುವುದು, ದೇವಿಯ ವೇಷ ಆಕಾಶದಿಂದ ಇಳಿಯುವುದು, ಸಂಶಪ್ತಕರು ಏಳು ಮಂದಿ ಎಂಬ ತಪ್ಪು ಕಲ್ಪನೆ ಮಾಡಿಕೊಂಡು, ಏಳು ಕೇಸರಿ ತಟ್ಟಿ ವೇಷಗಳೂ ರಂಗಸ್ಥಳಕ್ಕೆ ಬಂರುವುದು (ಸಂಶಪ್ತಕರು ಏಳು ಮಂದಿ ಅಲ್ಲ. ಅವರು ರಾಕ್ಷಸರೂ ಅಲ್ಲ. ತ್ರಿಗರ್ತರಾಜ ಸಹೋದರರು) - ಹೀಗೆ ಇನ್ನೆಷ್ಟೋ ಅಸಂಬದ್ಧ, ಹೊಸ ಎಂಬ ವಿಶೇಷಣಯುಕ್ತ ಆಕರ್ಷಣೆಗಳು, ಪರಂಪರಾಗತ ಯಕ್ಷಗಾನ ಕಲೆಯನ್ನೂ ಮುರಿದು, ಮುಕ್ಕಿ ತೇಗಿದುವು! ಹಣ ಸಂಪಾದನೆಗಾಗಿ ಮಾಡುತ್ತಿದ್ದ ಈ ರೀತಿಯ ಕುತ್ಸಿತ ಪ್ರದರ್ಶನಗಳನ್ನು, ಪ್ರಾರಂಭದಲ್ಲಿ ಪ್ರೇಕ್ಷಕರು ಸಹಜ ಕುತೂಹಲದಿಂದ ಪ್ರೋತ್ಸಾಹಿಸಿದರೂ ಅನಂತರ ಸಾರಾಸಗಟಾಗಿ ತಿರಸ್ಕರಿಸಿದರು...
        ..ಜಾತಿಯತೆ ಒಂದು ಅಂಟು ಜಾಡ್ಯ. ಅದು ಸಾಮಾಜಿಕ ಕ್ಷೇತ್ರವನ್ನು ಸಾವಿರಾರು ವರ್ಷ ಹಾಳು ಮಾಡಿತು. ರಾಜಕೀಯ ಕ್ಷೇತ್ರವಂತೂ ಈ ಪಿಡುಗಿಗೆ ಬಲಿಯಾಗಿ ದೇಶವನ್ನೇ ಬಲಿಕೊಟಿತು. ಇದೀಗ ಯಕ್ಷಗಾನವನ್ನೂ ಆಕ್ರಮಿಸುತ್ತಿದೆಯೇ ಎಂಬ ಭಯಕ್ಕೆ ಕಾರಣವಾಗಿದೆ. ಜಾತಿ, ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಎಂಬ ಸರ್ವಜ್ಞನ ವಚನವನ್ನು ರಂಗಸ್ಥಳದಲ್ಲಿ, ವೇದಿಕೆಗಳಲ್ಲಿ ಸಾರುತ್ತಿರುವ ಯಕ್ಷಗಾನ ಕಲಾವಿದರನ್ನು ಒಡೆದು, ಕಲಾಕ್ಷೇತ್ರವನ್ನೇ ಆಳುವ ಹುನ್ನಾರ, ಕೆಲವು ಸ್ಥಾಪಿತ ಹಿತಾಸಕ್ತರಿಂದ ನಡೆಯುತ್ತಿರುವುದು ವಿಷಾದನೀಯ ಹಾಗೂ ಖಂಡನೀಯ. ನೂರಾರು ವರ್ಷಗಳಿಂದ ಪಂಡಿತ ಪಾಮರನ್ನೆಲ್ಲಾ ರಂಜಿಸುತ್ತಾ, ಕಾಂತಾ ಸಮ್ಮಿತ ಮಾರ್ಗದಿಂದ, ಸಮಾಜದ ನೈತಿಕ ಮಟ್ಟವನ್ನೂ, ಸಂಸ್ಕಾರ ಸಾರವನ್ನೂ ಕಾಯ್ದುಕೊಡು ಬಂದಿರುವ ಯಕ್ಷಗಾನ, ಕೆಲವೇ ಮಂದಿ ಸ್ವಾರ್ಥ, ಸಂಕುಚಿತ ಮನೋಭಾವವುಳ್ಳವರ ಕೈಗೆ ಸಿಲುಕಿ, ಸರ್ವನಾಶವಾಗುವ ಸ್ಥಿತಿಗೆ ಬಂದಿರುವುದು, ಅತ್ಯಂತ ದುಃಖಕಾರಕ ವಿಚಾರ. ಯಕ್ಷಗಾನದಲ್ಲಿ ಬ್ರಾಹ್ಮಣ, ಬಂಟ, ಬೋವಿ, ಕುಡುಬಿ, ಕೋಲಾರಿ, ಗಾಣಿಗ, ನೇಕಾರ, ಹೆಗ್ಗಡೆ, ವಿಶ್ವಕರ್ಮ ಎಂಬ ಯಾವ ವರ್ಗ ವ್ಯತ್ಯಾಸವೂ ಇಲ್ಲದೆ, ಒಂದೇ ಚೌಕಿಯಲ್ಲಿ, ಒಂದೇ ವೇದಿಕೆಯಲ್ಲಿ ಮೇಲು ಕೀಳನ್ನು ಪರಿಗಣಿಸದೆ, ಅಣ್ಣ-ತಮ್ಮ, ಗಂಡ-ಹೆಂಡತಿ, ತಂದೆ-ಮಗನ ಪಾತ್ರ ವಹಿಸುತ್ತಿದ್ದ, ಹೃದಯ ವೈಶಾಲ್ಯವುಳ್ಳ ಕಲಾವಿದರನ್ನು ಪ್ರತ್ಯೇಕಿಸುವುದು. ಜಾತಿ ವರ್ಗವೆಂಬ ವಿಷಕನ್ಯೆಯನ್ನು ಬೆಳೆಸುತ್ತಿರುವುದು, ಕಲಾವೇದಿಕೆಯಲ್ಲೂ ಜಾತೀಯ ಸಂಘರ್ಷವನ್ನು ಹುಟ್ಟು ಹಾಕುವುದು - ಸುಸಂಸ್ಕೃತ ಸಮಾಜಕ್ಕೆ ಶೋಭೆಯಲ್ಲ. ಆದುದರಿಂದ ಇಂತಹ ಅನಿಷ್ಟಕಾರಕ, ಅವಾಂತರಕಾರಿ ಮುಳ್ಳುಕಂಟೆಗಳನ್ನು, ಮೊಳಕೆಯಲ್ಲೇ ಚಿವುಟಬೇಕೆಂದು ಎಲ್ಲಾ ಕಲಾವಿದರಲ್ಲೂ, ಪ್ರಾಯೋಜಕರಲ್ಲೂ ನನ್ನ ಕಳಕಳಿಯ ಪ್ರಾರ್ಥನೆ.


Tuesday, December 30, 2014

ಬಿ.ಎಸ್.ಓಕುಣ್ಣಾಯ ಸಹಸ್ರಚಂದ್ರ ದರ್ಶನ : 'ಸಾರ್ಥಕ' ಅಭಿನಂದನ ಕೃತಿ ಅನಾವರಣ

               "ಕಳೆದ ಕಾಲದ ಕಥನವನ್ನು ಅಭಿನಂದನ ಕೃತಿಗಳ ಮೂಲಕ ನೆನಪು ಮಾಡಿಕೊಳ್ಳಲು ಸಾಧ್ಯ. ಸಾಗಿ ಬಂದ ಜೀವನವನ್ನು ಮೆಲುಕು ಹಾಕುವುದರಿಂದ ವರ್ತಮಾನ ಮತ್ತು ಭವಿಷ್ಯ ಜೀವನವನ್ನು ರೂಪುಗೊಳಿಸಲು ಸಹಕಾರಿ," ಎಂದು ನಿವೃತ್ತ ಅಧ್ಯಾಪಕ ಸುರತ್ಕಲ್ಲಿನ ಪ. ಶ್ರೀರಾಮ ರಾವ್ ಹೇಳಿದರು.
            ಯಕ್ಷಗಾನ ಅರ್ಥಧಾರಿ, ನಿವೃತ್ತ ಅಧ್ಯಾಪಕ ಪಾಣಾಜೆಯ ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ಸಮಾರಂಭದಲ್ಲಿ ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ 'ಸಾರ್ಥಕ' ಅಭಿನಂದನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
           ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ನ್ಯಾಯವಾದಿ ಸುಬ್ರಹ್ಮಣ್ಯಂ ಕೊಳತ್ತಾಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಮರ್ಶಕ, ಅರ್ಥಧಾರಿ ಡಾ.ಪ್ರಭಾಕರ ಜೋಶಿ ಸುಭಾಶಂಸನೆ ಮಾಡಿದರು. ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷ ಭಾಸ್ಕರ ಬಾರ್ಯ ಅಭಿನಂದನಾ ನುಡಿಗಳನ್ನಾಡಿದರು.
             ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗಾದಿಯನ್ನೇರಿದ್ದ ಅನುಜ್ಞಾ, ಸಿ.ಎ.ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ಸ್ವಪ್ನಾ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಮುರಳೀ ಕಲ್ಲೂರಾಯ, ಸಾರ್ಥಕದ ಸಂಪಾದಕ ನಾ. ಕಾರಂತ ಪೆರಾಜೆ ಮತ್ತು ಅಭಿನಂದನ ಕೃತಿಯ ಲೇಖಕರನ್ನು ಬಿ.ಎಸ್.ಓಕುಣ್ಣಾಯ-ಸರೋಜ ದಂಪತಿಗಳು ಗೌರವಿಸಿದರು. ಪಾಣಾಜೆಯ ಬೊಳ್ಳಿಂಬಳ ಓಕುಣ್ಣಾಯ ಪ್ರತಿಷ್ಠಾನವು ಪುಸ್ತಕವನ್ನು ಪ್ರಕಾಶಿಸಿದೆ.
             ಈ ಸಂದರ್ಭದಲ್ಲಿ ಪುಂಡೂರು ದಿ.ದಾಮೋದರ ಪುಣಿಂಚಿತ್ತಾಯ ನೆನಪಿನ ಸಂಮಾನವನ್ನು ಬಿ.ಎಸ್.ಓಕುಣ್ಣಾಯ ದಂಪತಿಗಳಿಗೆ ಪ್ರದಾನಿಸಲಾಯಿತು. ರಾಜಗೋಪಾಲ ಪುಣಿಂಚಿತ್ತಾಯರು ಪ್ರಾರ್ಥನೆ ಮಾಡಿದರು. ಚಂದ್ರಶೇಖರ ಓಕುಣ್ಣಾಯ ಸ್ವಾಗತಿಸಿದರು. ಎಂ.ಶರತ್ ಕುಮಾರ್ ಶಿಬರೂರಾಯ ನಿರ್ವಹಿಸಿದರು. ನಾರಾಯಣ ಕಾರಂತ ವಂದಿಸಿದರು.  

Monday, December 29, 2014

ಪಾತಾಳರಿಗೆ 'ವಿದ್ಯಾಮಾನ್ಯ ಪ್ರಶಸ್ತಿ'

             ತೆಂಕುತಿಟ್ಟಿನ ಮೇರು ಕಲಾವಿದ ಶ್ರೀ ಪಾತಾಳ ವೆಂಕಟರಮಣ ಭಟ್ಟ್ ಇವರಿಗೆ ತ್ರತೀಯ ವರ್ಷದ ಶ್ರೀ ವಿದ್ಯಾಮಾನ್ಯ ಪ್ರಶಸ್ತಿಯನ್ನು ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಶ್ರೀ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದರು ಪ್ರದಾನ ಮಾಡಿದರು.
            
ಉಡುಪಿ ರಾಜಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ| ಕೃಷ್ಣಪ್ರಸಾದ್ , ಶ್ರೀ ರಾಮದಾಸ್ ಭಟ್ಟ್, ಶ್ರೀ ಹರಿ ಅಸ್ರಣ್ಣ , ಶ್ರೀ ಉಮೇಶ್ ಶೆಟ್ಟಿ ಉಬ್ಬರಡ್ಕ, ಯಕ್ಷರಂಗಸ್ಥಳ ಸಂಸ್ಥೆಯ ಗೌರವ ಉಪಾಧ್ಯಕ್ಷ ಶ್ರೀ ಸತೀಶ್ ರಾವ್, ಅಧ್ಯಕ್ಷ ಶ್ರೀ ಪಟ್ಟಾಭಿರಾಮ ಆಚಾರ್ಯ ಉಪಸ್ಥಿತರಿದ್ದರು.

ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ನೆನಪಿನ ಅಭಿನಂದನ ಕೃತಿ 'ಸಾರ್ಥಕ'

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ ಇವರ ಸಹಸ್ರಚಂದ್ರ ದರ್ಶನ ಸಮಾರಂಭ ನಿನ್ನೆ - 28-12-2014 - ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ‍್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಓಕುಣ್ಣಾಯರ ಜೀವನ ಗಾಥಾ 'ಸಾರ್ಥಕ' ಅಭಿನಂದನ ಕೃತಿ ಅನಾವರಣಗೊಂಡಿತು. ಪುಸ್ತಕದ ಮುಖಪುಟವನ್ನು ವಿನ್ಯಾಸಿಸಿದ್ದಾರೆ - ಆರ್ವಿ ಇಂಟರ್ ಗ್ರಾಫಿಕ್ಸ್ ಇದರ ಜ್ಞಾನೇಶ್. ಚಿತ್ರವನ್ನು ಕ್ಲಿಕ್ಕಿಸಿದವರು - ಮುರಳೀ ಕಲ್ಲೂರಾಯ, ಬೆಟ್ಟಂಪಾಡಿ. ಒಟ್ಟು ನೂರು ಪುಟಗಳು. ಸಂಪಾದಕ : ನಾ. ಕಾ. ಪೆ.

Saturday, December 27, 2014

ಬಿ.ಎಸ್.ಓಕುಣ್ಣಾಯರಿಗೆ ಸಹಸ್ರಚಂದ್ರ ದರ್ಶನ

ವಿಶ್ರಾಂತ ಮುಖ್ಯೋಪಾಧ್ಯಾಯ, ಯಕ್ಷಗಾನ ಅರ್ಥಧಾರಿ, ಸಂಘಟಕ, ವಿಮರ್ಶಕ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ (ಬಿ.ಎಸ್.ಓಕುಣ್ಣಾಯ ಪಾಣಾಜೆ) ಇವರು ದಶಂಬರ 28ರಂದು ಮಂಗಳೂರಿನಲ್ಲಿ ಸಹಸ್ರಚಂದ್ರ ದರ್ಶನದ ಹರುಷವನ್ನು ಬಂಧುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 'ಸಾರ್ಥಕ' ಎನ್ನುವ ಅಭಿನಂದನಾ ಕೃತಿಯು ಬಿಡುಗಡೆಗೊಳ್ಳಲಿರುವುದು.

bollimbala prashasthi - ಕುಬಣೂರು ಶ‍್ರೀಧರ್ ರಾವ್ ಅವರಿಗೆ ಬೊಳ್ಳಿಂಬಳ ಪ್ರಶಸ್ತಿ ಪ್ರದಾನ

- ಪಾಣಾಜೆ (ದ.ಕ.) ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನವು ಕೊಡಮಾಡುವ ಏಳನೇ ವರುಷದ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು (Bollimbala Award) ಖ್ಯಾತ ಯಕ್ಷಗಾನದ ಭಾಗವತ ಕುಬಣೂರು ಶ್ರೀಧರ ರಾವ್ (Kubanoor Shridhara Rao) ಅವರಿಗೆ ಪ್ರದಾನಿಸಲಾಯಿತು.
- ದಶಂಬರ 25ರಂದು ಪುತ್ತೂರಿನಲ್ಲಿ ಜರುಗಿದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ (Sri Anjaneya Yakshagana Kala Sangha, Puttur) 46ನೇ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
- ವಿಮರ್ಶಕ ಡಾ. ಪ್ರಭಾಕರ ಜೋಶಿ ನುಡಿ ಗೌರವ ಸಮರ್ಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ಓಕುಣ್ಣಾಯ ಪ್ರತಿಷ್ಠಾನದ ವಿವರ ನೀಡಿದರು.
- ವೇದಿಕೆಯಲ್ಲಿದ್ದಾರೆ - ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಭಾಸ್ಕರ ಬಾರ್ಯ, ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ್, ಎಸ್.ಎನ್.ಪಂಜಾಜೆ....

'ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ'ದ ಆಮಂತ್ರಣ (Invitation - All India yakshagana bayalata sahithya sammelana)