Wednesday, November 19, 2014

ಮರ್ಕಂಜ-ರೆಂಜಾಳದಲ್ಲಿ : ಕೀರಿಕ್ಕಾಡು-ದಾಸರಬೈಲು ನೆನಪು


            ಕಾಲ ಓಡುತ್ತಿದ್ದಂತೆ ಕಾಲಘಟ್ಟಗಳು ಇತಿಹಾಸದೊಳಗೆ ಅವಿತುಕೊಳ್ಳುತ್ತವೆ. ಅದರ ಸೃಷ್ಟಿಗೆ ಕಾರಣನಾದ ವ್ಯಕ್ತಿ ಎಂದೂ ಅಜ್ಞಾತನಾಗಿರುತ್ತಾನೆ. ಕಾಲಾಂತರದಲ್ಲಿ  ಮತ್ತೆ ಇತಿಹಾಸವನ್ನು ಕೆದಕಿದಾಗ ವ್ಯಕ್ತಿಯೂ, ಕಾಲಘಟ್ಟವೂ ಮಹತ್ತನ್ನು ಪಡೆಯುತ್ತದೆ.
           ಮಾಸ್ತರ್ ಕೀರಿಕ್ಕಾಡು ವಿಷ್ಣು ಭಟ್ಟರು ಬಾಳಿದ ಕಾಲಘಟ್ಟದಲ್ಲಿ ಸೌಕರ್ಯಗಳಿರಲಿಲ್ಲ. ಬೆರಳ ತುದಿಯಲ್ಲಿ ಪ್ರಪಂಚವನ್ನು ಕಾಣುವ ವ್ಯವಸ್ಥೆಯಿರಲಿಲ್ಲ. ಆದರೆ ತನ್ನ ಬೌದ್ಧಿಕ ಗಟ್ಟಿತನದಿಂದ ಹೊಸ ಪ್ರಪಂಚವೊಂದನ್ನು ಹಳ್ಳಿಯಲ್ಲಿ ಸೃಷ್ಟಿಸುವ ಸಾಮಥ್ರ್ಯ ಅವರಿಗಿತ್ತು. ಹಾಗಾಗಿಯೇ ಬದುಕು, ಬಾಳಿದ ದಿನಮಾನಗಳು, ರಚಿತವಾದ ಸಾಹಿತ್ಯಗಳು ನಿತ್ಯ ನೂತನ.  
            ಕಾಸರಗೋಡು-ಕರ್ನಾಾಟಕದ ಸಂಧಿಗ್ರಾಮ ದೇಲಂಪಾಡಿ. ಇಲ್ಲಿನ ಬನಾರಿ ಅಂದು ತೀರಾ ಹಳ್ಳಿ. ಈಗಲೂ ಕೂಡಾ. ಬದುಕನ್ನು ಕಟ್ಟಿಕೊಳ್ಳಲು ಆಗಮಿಸಿದ ವಿಷ್ಣು ಭಟ್ಟರು ತನ್ನ ಬದುಕಿನೊಂದಿಗೆ ಹಳ್ಳಿಯನ್ನು ಕಟ್ಟಿದರು. ಅಕ್ಷರ ವಂಚಿತ ಮನಸ್ಸುಗಳಲ್ಲಿ ಅಕ್ಷರಗಳನ್ನು ಕೆತ್ತಿದರು. ಅಕ್ಷರಕ್ಕೆ ಗೌರವ ತಂದರು.  ಸಂಸ್ಕಾರವನ್ನು ಅನುಷ್ಠಾನಿಸುತ್ತಾ ಕಲಿಸಿದರು.
            ಮನೆಯಲ್ಲೇ ಯಕ್ಷಗಾನದ ಕಲಿಕೆ. ಜತೆಗೆ ಆಟ, ಊಟ. ಬಿಡುವಿನಲ್ಲಿ ದುಡಿಮೆ. ಪೌರಾಣಿಕ ವಿಚಾರಗಳ ಪ್ರಸ್ತುತಿಯಲ್ಲಿ ಪಾತ್ರಗಳ ಗುಣ-ಸ್ವಭಾವಗಳ ದರ್ಶನ. ರಾತ್ರಿ, ಹಗಲೆನ್ನದೆ ಶಿಷ್ಯರನ್ನು ರೂಪಿಸುವ ಕಾಯಕ. ವಿಕಾರಗಳಿಗೆ ಆಕಾರ ಕೊಡುವ ಬದಲು, ಆಕಾರದ ಮೂಲಕ ವಿಕಾರಗಳನ್ನು ದೂರವಿಡುವ ಕಠಿಣ ಅಲಿಖಿತ ಪಠ್ಯ. ತಪ್ಪಿದಾಗ ಸಾತ್ವಿಕ ಶಿಕ್ಷೆ. ಸಾಲದಾದಾಗ ತನಗೆ ತಾನೇ 'ಉಪವಾಸ'ದ ಮೂಲಕ ಶಿಕ್ಷೆಯನ್ನು ಆವಾಹಿಸಿಕೊಳ್ಳುತ್ತಿದ್ದರು. ಪರಿಣಾಮ, ಮಣ್ಣಿನ ಮುದ್ದೆಗಳಲ್ಲಿ ಸಂಚಲನ. ರೂಪು ಕಂಡುಕೊಳ್ಳಲು ಸ್ವ-ಯತ್ನ. 
             ಯಕ್ಷಗಾನದ ಒಂದೊಂದು ಪಾತ್ರಗಳನ್ನು ಶಿಷ್ಯರೊಳಗೆ ಕಂಡರು. ಅವುಗಳು ನಲಿಯುವುದನ್ನು,  ಮಾತನಾಡುವುದನ್ನು ನೋಡಿದರು. ಉರುಹೊಡೆದ ವಾಕ್ಯಗಳಲ್ಲಿ ಜೀವಂತಿಕೆ ಗುರುತಿಸಿದರು. ಪಾತ್ರಗಳು ಸ್ವರ ಎಬ್ಬಿಸಿದರೆ ಸಾಲದು, ಅವು ಕುಣಿದು ಮಾತನಾಡಬೇಕು. ಇದಕ್ಕಾಗಿ ನಾಟ್ಯ ತರಗತಿಗಳ ಆಯೋಜನೆ. ಯಕ್ಷಗಾನ ನಾಟಕ ತಂಡದ ಮೂಲಕ ಪ್ರದರ್ಶನ. ಐದರ ದಶಕದ ಸುಮಾರಿಗೆ ಸುಪುಷ್ಟವಾದ ಯಕ್ಷಗಾನ ತಂಡವು ಹೊರ ಊರುಗಳಲ್ಲಿಯೂ ಪ್ರದರ್ಶನ ನೀಡಿತು.
               ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ಕೀರಿಕ್ಕಾಡು ಮಾಸ್ತರರ ಮೆದುಳಮರಿ. ಇದು ಮನಸ್ಸುಗಳನ್ನು ಪುನರ್ ಸೃಷ್ಟಿಸಿದ ತಾಣ. ತನ್ನೆಲ್ಲಾ ಸಾಹಿತ್ಯ ರಚನೆಗಳಿಗೆ ಸ್ಫೂರ್ತಿಯನ್ನು ಪಡೆದುಕೊಂಡ ನೆಲ. ಎಪ್ಪತ್ತಕ್ಕೂ ಮಿಕ್ಕಿ ಪ್ರಸಂಗಗಳು ರಚನೆಯಾಗುವುದರ ಹಿಂದೆ ಸಂಘದ ಚೆಂಡೆ-ಮದ್ದಳೆಗಳ ಸದ್ದಿದೆ. ಹಳ್ಳಿಗೆ ಮರುಜೀವ ಕೊಟ್ಟ ಸಂತೃಪ್ತಿಯಿದೆ. ಯಕ್ಷಗಾನ ಅರ್ಥಧಾರಿಯಾಗಿ ನಾಡಿನಲ್ಲೆಲ್ಲಾ ಓಡಾಡಿದ ಗಟ್ಟಿ ಅನುಭವವಿದೆ. ಹಲವು ವಿದ್ವಾಂಸರೊಂದಿಗಿನ ಒಡನಾಟದ ನಂಟಿದೆ.
               ಒಬ್ಬ ಕಲಾವಿದನಾಗಿ ತನ್ನ ಬದುಕನ್ನು ಕಲಾತ್ಮಕವನ್ನಾಗಿ ಮಾಡಿಕೊಂಡರು.  ಅದರ ನೆರಳಿನಡಿ ಹಳ್ಳಿಯ ಜೀವನಕ್ಕೂ ಕಲಾಸ್ಪರ್ಶ ಮಾಡಿದರು. ಸರಳವಾಗಿದ್ದು, ಸಹಜ ಜೀವನವನ್ನು ಒಪ್ಪಿಕೊಂಡರು, ಅಪ್ಪಿಕೊಂಡರು. ತನ್ನ ಬೌದ್ಧಿಕ ಪ್ರಖರತೆ, ವ್ಯಕ್ತಿತ್ವಗಳಿಂದಾಗಿ ಬನಾರಿಯು ನೂರಾರು ವಿದ್ವಾಂಸರನ್ನು ಸೆಳೆಯಿತು.  ಸಾಹಿತ್ಯ ಸುಧೆಯನ್ನು, ಕಲಾಮೃತವನ್ನು ಸವಿಯಲು ಕಾಯುವ ಮನಸ್ಸುಗಳಿಗಂದು ಹಬ್ಬ.
               ಪ್ರಸ್ತುತ ಕೀರಿಕ್ಕಾಡು ಜನ್ಮಶತಮಾನೋತ್ಸವ ವರ್ಷ. ವನಮಾಲ ಕೇಶವ ಭಟ್, ಡಾ.ರಮಾನಂದ ಬನಾರಿ, ಡಾ.ವಿಶ್ವವಿನೋದ ಬನಾರಿ.. ಕೀರಿಕ್ಕಾಡು ವಿಷ್ಣು ಭಟ್ಟರ ಚಿರಂಜೀವಿಗಳು. ತೀರ್ಥರೂಪರ ಯಕ್ಷ ಕಾಣ್ಕೆಗೆ ನಿರಂತರ ಬೆಳಕನ್ನೊಡ್ಡುವವರು. ಆ ಬೆಳಕು ಬನಾರಿಗೆ ಸೀಮಿತವಾಗಬಾರದು, ನಾಲ್ದೆಸೆ ಹಬ್ಬಬೇಕೆನ್ನುವ ದೂರನಿರೀಕ್ಷೆ. ಕೀರಿಕ್ಕಾಡು ಜನ್ಮಶತಮಾನೋತ್ಸವ ಸಂಭ್ರಮವು ಕನ್ನಾಡಿದ ವಿವಿದೆಡೆ ಆಚರಿಸಲ್ಪಟ್ಟಿದೆ.
ದಾಸರಬೈಲು ಚನಿಯ ನಾಯ್ಕ್ : 
ಯಕ್ಷಗಾನ ಕ್ಷೇತ್ರದಲ್ಲಿ 'ದಾಸರಬೈಲು' ಎಂದೇ ಖ್ಯಾತಿ. ಸುಳ್ಯ ತಾಲೂಕಿನ ಮರ್ಕಂಜದವರು. ಜಾತಿಯ ಬಲವಿಲ್ಲ. ಆರ್ಥಿಕವಾಗಿ ಸದೃಢರಲ್ಲ. ಸ್ವಾಭಿಮಾನದ ಬದುಕು.  ಜೀವನದ ಬಹುಪಾಲು ಕಾಲ್ನಡಿಗೆಯ ಪಯಣ. ಶಾರೀರ ಬಲದಿಂದಲೇ ಯಕ್ಷರಾತ್ರಿಗಳನ್ನು ಸಾಕ್ಷಾತ್ಕರಿಸಿದ ಭಾಗವತ ಚನಿಯರು ಎಲ್ಲಾ ಜಾತಿ, ವರ್ಗ, ಅಂತಸ್ತುಗಳನ್ನು ಮೀರಿ ನಿಂತು ಮನೆ-ಮನಗಳನ್ನು ಗೆದ್ದವರು.
              ಭಾಗವತ ಅಜ್ಜನಗದ್ದೆ ಗಣಪಯ್ಯ ಭಾಗವತರ ಕರಕಮಲಸಂಜಾತ. ಕಡತೋಕ ಮಂಜುನಾಥ ಭಾಗವತರ ಒಡನಾಡಿ. ಶ್ರೀ ಧರ್ಮಸ್ಥಳ ಮೇಳದಲ್ಲಿ ಅಲ್ಪ ತಿರುಗಾಟ. ಬಳಿಕ ಹಲವು ಮೇಳಗಳಲ್ಲಿ ವ್ಯವಸಾಯ. ಭಾಗವತ ಎಂದಾಕ್ಷಣ ಚನಿಯರೇ ನೆನಪಾಗುವಷ್ಟು ಊರಿದ ಭಾಗವತಿಕೆಯ ಛಾಪು. ಜಾಗಟೆ ಹಿಡಿದು ರಂಗದಲ್ಲಿ ಕುಳಿತಾಕ್ಷಣ ಪ್ರಕಟವಾಗುವ ಅವ್ಯಕ್ತ ರಂಗಶಿಸ್ತು.  ಪಾತ್ರವೇ ಪದ್ಯವಾಗುವ  ಅದ್ಭುತ ಕಂಠ. ಸ್ಪಷ್ಟ-ನಿಖರ ಶಬ್ದಗಳು. ಪದ್ಯಗಳ ಮಟ್ಟುಗಳ ಖಚಿತ ಜ್ಞಾನ.  ಹಾಡಿದಷ್ಟೂ ದಿವಸ ಪೌರಾಣಿಕ ಪ್ರಸಂಗಗಳ ಪದ್ಯಗಳು ಎಲ್ಲೂ ಮರುಗಿಲ್ಲ! ಪ್ರಜ್ಞೆ ತಪ್ಪಿಲ್ಲ!
                ಸರಳ ಬದುಕು. ಸುಂದರ ವ್ಯಕ್ತಿತ್ವ. ಮಿತ ಭಾಷಿ. ಇತರರು ಗೇಲಿ ಮಾಡಿದರೂ ಹಚ್ಚಿಕೊಳ್ಳದ ಸೌಜನ್ಯ. ಸಂಸಾರವನ್ನು ಮರೆಯದ ಗೃಹಸ್ಥ. ಹಲವು ಮನಸ್ಸುಗಳ ಒಡನಾಟ. ಬಡತನವೇ ಕಾರಣವಾಗಿ ಆಕಾರ-ವಿಕಾರಗಳನ್ನು ಸಮಚಿತ್ತದಿಂದ ಸ್ವೀಕರಿಸಿದ ಯಕ್ಷ ಶ್ರೀಮಂತ. ಆಟ-ಕೂಟಗಳಲ್ಲಿ ಲಭ್ಯವಾದ ಸಂಭಾವನೆಯನ್ನು ಮನೆಗೆ ಹೋದ ಬಳಿಕವೇ ಎಣಿಸುವ ಬದ್ಧತೆ. ಸಂಭಾವನೆಗಾಗಿ ಎಂದೂ ಕಾಲ್ಕೆರೆಯದ ಸ್ವ-ನಿಯಂತ್ರಣ.  ಒಬ್ಬ ಕಲಾವಿದನಿಗೆ ಇಷ್ಟು ಗುಣಗಳು ಸಾಕಲ್ವಾ.                                                                                                      
                ಹಳ್ಳಿಯ ಸೊಬಗನ್ನು ನಾಡಿಗೆ ತೋರಿಸಿದ ಕಲಾ ಪ್ರಖರತೆಗಳಿಗೆ ನವೆಂಬರ್ 1, 2014, ಶನಿವಾರ, ಅಪರಾಹ್ನ ಮರ್ಕಂಜ-ರೆಂಜಾಳ ದೇವಸ್ಥಾನದಲ್ಲಿ ನಮನ. ಹಿರಿಯ ಚೇತನಗಳ ಸ್ಮರಣೆ.

Saturday, October 25, 2014

ದಶಕದ ಮಿರುಗಿನಲ್ಲಿ ಎಡನೀರು ಮೇಳ


               ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠವು ಕಲಾರಾಧನೆಯ ಕ್ಷೇತ್ರ. ಇಲ್ಲಿ ಸದಾ ಸಂಗೀತ, ನೃತ್ಯ, ಯಕ್ಷಗಾನ ಸುಧೆಯ ಅಮೃತಪಾನ. ದಕ್ಷಿಣಾಮೂರ್ತಿ  ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯ. ಈತ ಕಲಾಪ್ರಿಯ. ಇಲ್ಲಿನ ಗುರುಗಳಾದ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಗೆ ಯಕ್ಷಗಾನ ಆರಾಧನೆ. ಇದೇ ಉಸಿರು. ಇದು ಸದಾ ಹಸಿರು.
               ಯಕ್ಷಗಾನದ ಉದ್ಧಾಮರ ವಾಗ್ಝರಿಯಲ್ಲಿ ಮಿಂದ ತಾಣವಿದು ನಡೆಯುತ್ತಿದ್ದ ತಾಳಮದ್ದಳೆಗಳೆಲ್ಲಾ  ವಿದ್ವತ್ಗೋಷ್ಠಿಯ ತರಹ. ಪೌರಾಣಿಕ ವಿಚಾರಗಳ ಸೂಕ್ಷ್ಮಾತಿಸೂಕ್ಷ್ಮಗಳ ಮಥನ. ಇದರಿಂದ ತೆಗೆದ ನವನೀತವನ್ನುಣಿಸಿದ ಕಲಾವಿದರ ಗಾಥೆಗಳನ್ನು ಸ್ವಾಮೀಜಿಯವರು ಹೇಳತೊಡಗಿಸಿದರೆ ಒಂದು ಕಾಲಘಟ್ಟದ ಯಕ್ಷ ಸಮೃದ್ಧತೆ ಅನಾವರಣಗೊಳ್ಳುತ್ತದೆ. ಶ್ರೀಮಠದಲ್ಲಿ ತಾಳಮದ್ದಳೆಗಳು ನಿರಂತರ.
                 ಯಕ್ಷಗಾನವನ್ನು ಉತ್ಸವದ ರೀತಿಯಲ್ಲಿ ನಡೆಸಿ, ಅದನ್ನು ಪವಿತ್ರ ಮನೋಭಾವದಿಂದ ನಡೆಸುವ ಉದ್ದೇಶದಿಂದ 'ತಾಳಮದ್ದಳೆ ಸಪ್ತಾಹ'ಗಳ ಪ್ರಸ್ತುತಿ. ಶ್ರೀಮಠವೂ ಸೇರಿದಂತೆ ಕುಮಟಾ, ಅಂಕೋಲ, ಯಲ್ಲಾಪುರ, ಶಿರಸಿ, ಬೆಂಗಳೂರು, ಪುತ್ತೂರು.. ಹಲವೆಡೆ ಸಪ್ತಾಹಗಳ ವೈಭವ. ಪರಿಣಾಮ, ಸಾಮಾಜಿಕವಾಗಿ ಉನ್ನತ ಸ್ತರದಲ್ಲಿರುವ ಅನೇಕರು ಯಕ್ಷಗಾನಕ್ಕೆ ಹತ್ತಿರವಾಗಿದ್ದಾರೆ.
                    ಹತ್ತು ವರುಷಗಳ ಹಿಂದೆ ಮೇಳಕ್ಕೆ ಶ್ರೀಕಾರ. 'ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ, ಎಡನೀರು' ರೂಪೀಕರಣ. ಎಲ್ಲಾ ಕ್ಷೇತ್ರಗಳಲ್ಲೂ ಯಕ್ಷಗಾನ ಮೇಳಗಳಿವೆ. ಶ್ರೀಮಠಕ್ಕೂ ಮೇಳ ಬೇಕು. ಇದರಿಂದಾಗಿ ಸಮಾಜಕ್ಕೆ ಉತ್ತಮ ಮಾನವೀಯ, ಪೌರಾಣಿಕ ಸಂದೇಶ ನೀಡಬಹುದು, ಎನ್ನುವುದು ಆಶಯ.  ಮೊದಲ ನಾಲ್ಕು ವರುಷ ಟೆಂಟ್ ಮೇಳದ ಜಯಭೇರಿ. ಪ್ರಸಿದ್ಧ ಕಲಾವಿದರ ಗಡಣ. ಶಿಸ್ತುಬದ್ಧ ಪ್ರದರ್ಶನ. ನಾಲ್ದೆಸೆಯಲ್ಲೂ ಯಶಕಂಡಿತು. ಆರ್ಥಿಕವಾಗಿ ಕೈತುಂಬದಿದ್ದರೂ ಭಾವನಾತ್ಮಕವಾಗಿ ಹಲವು ಮನಸ್ಸುಗಳು ತುಂಬಿ ಬಂದಿದ್ದುವು.
                  ಐದನೇ ವರುಷದಿಂದ ಬಯಲಾಟ ಮೇಳವಾಗಿ ಪರಿವರ್ತನೆ. ಕಾಲಮಿತಿ ಪ್ರಯೋಗಕ್ಕೆ ನಿರ್ಧಾರ.  ಸಂಘಟಕರು ಅಪೇಕ್ಷೆ ಪಟ್ಟರೆ ಪೂರ್ಣರಾತ್ರಿ ಪ್ರದರ್ಶನ. ಒಂದೊಂದು ಪ್ರದರ್ಶನದ ಹಿಂದೆ ಪೂಜ್ಯ ಶ್ರೀಗಳ ಸೂಕ್ಷ್ಮನೋಟವಿದೆ. ಪ್ರಸಂಗ ನಿಗದಿ, ಪಾತ್ರ ಹಂಚುವಿಕೆ, ಪ್ರಸಂಗದ ಎಡಿಟಿಂಗ್, ಕಾಲಮಿತಿಗೆ ಹೊಂದುವ ಕಂಪೋಸಿಂಗ್.. ಎಲ್ಲವೂ ಶ್ರೀಗಳ ಯೋಜನೆ, ಯೋಚನೆ.
               ಬಹುತೇಕ ಪ್ರದರ್ಶನಗಳು ಸೇವಾ ರೂಪದ್ದಾದ ಕಾರಣ ಶ್ರೀಮಠದಲ್ಲೇ ನಡೆಯುತ್ತವೆ. ಇಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸ್ವತಃ ಸ್ವಾಮೀಜಿಯವರು ಭಾಗವತಿಕೆ ಮಾಡುತ್ತಾರೆ. ಇವರ ಹಾಡಿನಲ್ಲಿ ಭಾವತೀವ್ರತೆ, ಭಕ್ತಿಯ ಅಭಿವ್ಯಕ್ತಿಯ ಭಾವಗಳು ಸದಾ ಜಾಗೃತ. ರಂಗದಲ್ಲಿ ಕಲಾವಿದರು ಪಾತ್ರಧಾರಿಗಳು ಸ್ಪಷ್ಟವಾಗಿ ಮಾತನಾಡಬೇಕೆನ್ನುವ ಹಪಾಹಪಿ. ಕಲಾವಿದರು ಅಧ್ಯಯನಶೀಲರಾಗಬೇಕು, ಆಗ ಮಾತ್ರ ಪಾತ್ರಗಳು ಪರಿಪುಷ್ಟವಾಗಿ ರೂಪುಗೊಳ್ಳುತ್ತವೆ ಎನ್ನುವತ್ತ ಕಾಳಜಿ.
                  ಮೇಳವೆಂದಾಗ ಸಹಜವಾಗಿ ಬರುವ, ಬರಬಹುದಾದ ಗೊಣಗಾಟಗಳನ್ನು ಸ್ವಾಮೀಜಿ ಮೌನವಾಗಿ ಅನುಭವಿಸಿದ್ದಾರೆ! ಸಮಸ್ಯೆಗಳನ್ನು ಹತ್ತಿಯಂತೆ ಹಗುರಗೊಳಿಸಿದ್ದಾರೆ. ರಾಚಿ ಬರುವ ಒತ್ತಡಗಳನ್ನು ನಿಯಂತ್ರಿಸಿಕೊಂಡಿದ್ದಾರೆ. ಮೇಳದ ನಿರ್ವಾಹಕರಾದ ಶ್ರೀಮಠದ ಜಯರಾಮ ಮಂಜತ್ತಾಯರು ಹೇಳುತ್ತಾರೆ, "ಹತ್ತು ವಿವಿಧ ಮನಸ್ಸುಗಳಿರುವಾಗ ಅಭಿಪ್ರಾಯದಲ್ಲಿ ವ್ಯತ್ಯಾಸಗಳು ಸಹಜ. ಅದೆಂದೂ ಮೇಳದ ನಿರ್ವಹಣೆ, ಆಟದ ಒಟ್ಟಂದಕ್ಕೆ ತೊಂದರೆ ಮಾಡಿಲ್ಲ. ಎಲ್ಲಾ ಕಲಾವಿದರ ಸಹಕಾರ, ಶ್ರಮ ಗುರುತರ."
                  ಮೇಳದ ಕಲಾವಿದರನ್ನು ಹೊಂದಿಕೊಂಡು ಪ್ರಸಂಗ ನಿರ್ಧಾಾರ. ಸಂಘಟಕರು ಅಪೇಕ್ಷೆ ಪಟ್ಟದ್ದನ್ನೆಲ್ಲಾ ಆಡುವಂತಿಲ್ಲ. ಮೂರು ಗಂಟೆ ಕಾಲಮಿತಿಗೆ ಹೊಂದುವ ಪ್ರಸಂಗಗಳ ಆಯ್ಕೆ. ಹಾಗಾಗಿ ಎಡನೀರು ಮೇಳದ ಆಟಗಳೆಲ್ಲಾ ಕಾಲದ ಮಿತಿಯೊಳಗೆ ಜನಮುಟ್ಟುವ ಪ್ರದರ್ಶನ ನೀಡುತ್ತದೆ. ಭಸ್ಮಾಸುರ ಮೋಹಿನಿ, ವಿಶ್ವಾಮಿತ್ರ ಮೇನಕೆ, ಅಭಿಮನ್ಯು ಕಾಳಗ, ಬಬ್ರುವಾಹನ, ಪಂಚವಟಿ, ದ್ರುಪದ ಗರ್ವಭಂಗ.. ಮೊದಲಾದ ಪ್ರಸಂಗಗಳ ನಿಜಸವಿಯನ್ನು ನೋಡಿಯೇ ಅನುಭವಿಸಬೇಕು. ಅನುಭವಿಗಳ ಗಟ್ಟಿ ಹಿಮ್ಮೇಳ ಪ್ರದರ್ಶನ ಯಶದ ಗುಟ್ಟು.
                  "ಕಳೆದ ವರುಷ ನೂರ ಅರುವತ್ತ ಮೂರು ಪ್ರದರ್ಶನಗಳಾಗಿವೆ. ಎಲ್ಲವೂ ಸೇವಾ ರೂಪದವುಗಳು. ಶ್ರೀಮಠದ ಅಭಿಮಾನಿ ಶಿಷ್ಯವೃಂದ ಮತ್ತು ಭಕ್ತರ ಪ್ರಾಯೋಜಕತ್ವ. ಬಹುತೇಕ ಪ್ರದರ್ಶನವನ್ನು ಶ್ರೀಮಠದಲ್ಲೇ ನಡೆಸುವ ಇಂಗಿತ ಇವರದ್ದು," ಎನ್ನುತ್ತಾರೆ ಜಯರಾಮ ಮಂಜತ್ತಾಯ. ಭಾಗವತರಾದ ದಿನೇಶ ಅಮ್ಮಣ್ಣಾಯ ಮತ್ತು ಹಾಸ್ಯಗಾರ ಬಾಲಕೃಷ್ಣ ಮಣಿಯಾಣಿ ಇವರಿಬ್ಬರು ಇದೇ ಮೇಳದಲ್ಲಿ ಹತ್ತೂ ವರುಷ ವ್ಯವಸಾಯ ಮಾಡಿರುವುದು ಗಮನಾರ್ಹ.
                   ಅಬ್ಬರದ ಪ್ರದರ್ಶನವನ್ನು ಅಪೇಕ್ಷಿಸುವ ಪ್ರೇಕ್ಷಕರು ಎಡನೀರು ಮೇಳದಿಂದ ಸಾತ್ವಿಕ, ಸಂದೇಶ, ಸಂವಾದವಿರುವ ಪ್ರಸಂಗಗಳನ್ನು ಅಪೇಕ್ಷಿಸುವುದು ನೋಡಿದ್ದೇನೆ. ಹೆಚ್ಚಿನ ಪ್ರದರ್ಶನಗಳಲ್ಲಿ ಪ್ರೇಕ್ಷಕರು ಕೂಡಾ ಪ್ರಸಂಗದ ಒಂದು ಪಾತ್ರವೆಂಬಂತೆ ಸ್ಪಂದಿಸುವುದು ಆಶ್ಚರ್ಯ. ದುಃಖದ ಸನ್ನಿವೇಶದಲ್ಲಿ ಪ್ರೇಕ್ಷಕರು ಅತ್ತ ಘಟನೆ ಎಷ್ಟು ಬೇಕು? ಹಾಗಾದರೆ ಮನಮುಟ್ಟುವ ಅಭಿವ್ಯಕ್ತಿಯು 'ಬದಲಾದ ಕಾಲಘಟ್ಟದಲ್ಲೂ' ಮನಸ್ಸನ್ನು ಮುಟ್ಟುತ್ತದೆ, ತಟ್ಟುತ್ತದೆ ಎನ್ನುವುದಕ್ಕೆ ಪುರಾವೆ ಬೇಕಾಗಿಲ್ಲ.
                 ಸಂವಾದಗಳು ದಾರಿತಪ್ಪಿದಾಗ, ಅರ್ಥಗಾರಿಕೆಯಲ್ಲಿ ತಪ್ಪು ನುಸುಳಿದಾಗ, ಅಬದ್ಧ ಪದಪುಂಜಗಳು ನುಸುಳಿದಾಗ ಸ್ವಾಮೀಜಿ ಎಚ್ಚರಿಸುತ್ತಾರೆ, ತಿಳಿಹೇಳುತ್ತಾರೆ.  ಹಾಗಾಗಿ ಎಡನೀರು ಮೇಳದ ಆಟಗಳ ಪಾತ್ರಧಾರಿಗಳಲ್ಲಿ ಬುದ್ಧಿಪೂರ್ವಕವಾದ ಅಬದ್ಧತೆ ತೀರಾ ತೀರಾ ಕಡಿಮೆ. ಕಲೆಯನ್ನು ಸ್ವಾಮೀಜಿ ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿ ಕಲಾವಿದರಲ್ಲೂ ಇದೆ. ಈ ಪ್ರೀತಿಯಲ್ಲಿ ಮಗುವಿನ ಮುಗ್ಧತೆಯಿದೆ.
                  ಎಡನೀರು ಮೇಳವು ಹತ್ತು ತಿರುಗಾಟವನ್ನು ಪೂರ್ತಿಗೊಳಿಸಿದೆ. ಸಾಗಿಬಂದ ದಾರಿಯನ್ನು ಮೆಲುಕು ಹಾಕಲು, ಹತ್ತರ ಖುಷಿಯನ್ನು ಹಂಚಿಕೊಳ್ಳಲು ಎಡನೀರು ಶ್ರೀಮಠದ ಶ್ರೀಕೃಷ್ಣ ಸಭಾಮಂದಿರವು ಸಜ್ಜಾಗಿದೆ. ೨೦೧೪ ಅಕ್ಟೋಬರ್ 25, ಶನಿವಾರದಂದು ದಿನಪೂರ್ತಿ ಕಲಾಪ. ವಿಚಾರಗೋಷ್ಠಿ, ತಾಳಮದ್ದಳೆ, ಬಯಲಾಟಗಳ ಸಂಪನ್ನತೆ. ಬರುತ್ತೀರಲ್ಲಾ.


Tuesday, July 15, 2014

ಅಪೂರ್ವ ಅನುಭವ.

           2009-2010 ಇರಬೇಕು, ಎಡನೀರು ಶ್ರೀಮಠದಲ್ಲಿ ಪಾತಾಳ ಯಕ್ಷ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದ ಕ್ಷಣ. ಪ್ರಸಂಗ : ದಮಯಂತಿ ಪುನರ್ ಸ್ವಯಂವರ. ಪರಮಪೂಜ್ಯ ಎಡನೀರು ಶ್ರೀಗಳ ಭಾಗವತಿಕೆ. ಕೀರ್ತಿಶೇಷ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆ. ಪದ್ಯಾಣ ಶಂಕರನಾರಾಯಣ ಭಟ್ಟರ ಚೆಂಡೆ.
        ಪೆರುವಡಿ ನಾರಾಯಣ ಹಾಸ್ಯಗಾರರ 'ಬಾಹುಕ.'   ಹಿರಿಯ ಕಲಾವಿದ ಶ್ರೀ ಪಾತಾಳ ವೆಂಕಟ್ರಮಣ ಭಟ್ ’ದಮಯಂತಿ’ಪಾತ್ರದಲ್ಲಿ 
        ಅವರ ಜತೆಪಾತ್ರ 'ಚೇದಿರಾಣಿ'ಯಾಗಿ ಭಾಗವಹಿಸುವ ಅವಕಾಶ ನನಗೆ ಪ್ರಾಪ್ತವಾಗಿತ್ತು.
          ಅದೊಂದು ಅಪೂರ್ವ ಅನುಭವ.

Tuesday, July 8, 2014

ಒಮ್ಮೊಮ್ಮೆ ಹೀಗಾಗುತ್ತೆ...!


        ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ 'ಮಹಿಷ ವಧೆ' ಕಥಾನಕ. ಪುತ್ತೂರು ಸನಿಹದ ಪದಾಳದಲ್ಲಿ ಜರುಗಿದ ಆಟ.

Monday, March 17, 2014

ಯಕ್ಷಗಾನ ಸಹವಾಸ - ಸ್ವಾನುಭವ



ಸ್ವಾನುಭವ : 1
- ಹವ್ಯಾಸಿ, ವೃತ್ತಿ ರಂಗಭೂಮಿಯ ಪ್ರದರ್ಶನಗಳಲ್ಲಿ ಬಹುತೇಕ ವೀರರಸ ಪ್ರಧಾನವಾಗುಳ್ಳ ಕಥಾನಕಗಳನ್ನೇ ಆರಿಸುತ್ತಾರೆ. 'ಆಟ ರೈಸಲು' ಓಕೆ.
- ಈಚೆಗೆ ಒಂದು ಆಟದಲ್ಲಿ ಪಾತ್ರಧಾರಿಯಾಗಿ ಭಾಗವಹಿಸಿದ್ದೆ. ಪ್ರಸಂಗ : ತ್ರಿಜನ್ಮ ಮೋಕ್ಷ. ಹಿರಣ್ಯಕಶ್ಯಪು-ಕಯಾದು-ಪ್ರಹ್ಲಾದ : ಈ ಸನ್ನಿವೇಶಗಳು ಸಹಜವಾಗಿ ದುಃಖ-ಕರುಣ ರಸವೇ ಪ್ರಧಾನವಾಗುಳ್ಳದ್ದು. ಈ ಸನ್ನಿವೇಶವು 'ಅವಸರವನ್ನು' ಸಹಿಸುವುದಿಲ್ಲ. ಆದರೆ ಅಂದಿನ ಯುವ ಭಾಗವತರು - ತಾರಾಮೌಲ್ಯ ಇದೆ ಎಂದು ಗ್ರಹಿಸಿದ - ಕಯಾದು ಪದ್ಯಗಳಿಗೆಲ್ಲಾ ಕತ್ತರಿ ಹಾಕಿ, ಎರಡು ಪದ್ಯದಲ್ಲೇ ಮುಗಿಸಿಬಿಟ್ಟರು.
- ಯಾಕೆ ಹೀಗೆ ಎಂದು ಪ್ರಶ್ನಿಸಿದೆ. 'ಸೌಮ್ಯ ಪದ್ಯ ಅಲ್ವೋ, ಪ್ರೇಕ್ಷಕರಿಗೆ ಬೋರ್ ಆಗುತ್ತದೆ. ಆಟ ಮೇಲೆ ಬೀಳುವುದಿಲ್ಲ' (ಯಕ್ಷಗಾನದ ಪರಿಭಾಷೆ) ಎಂಬ ಉತ್ತರ. ಆಶ್ಚರ್ಯವಾಯಿತು. ಪ್ರೇಕ್ಷಕರು ಪ್ರದರ್ಶನವನ್ನು ಆಸ್ವಾದಿಸಿದ್ದರು. ಯಾರು ಆಕಳಿಸಿದ್ದನ್ನು ನಾನು ನೋಡಿಲ್ಲ. ಆದರೂ ಅಂದಿನ ಭಾಗವತರಿಗೆ 'ಬೋರ್' ಆಯಿತು!
- ಮತ್ತೆ ತಿಳಿಯಿತು. ಇವರು 'ವೀರರಸ ಪದ್ಯಗಳ ಪ್ರಿಯ'ರೆಂದು! ಸೌಮ್ಯ ಪದ್ಯಗಳು ಬಂದಾಗ 'ಪ್ರಸಿದ್ಧರ ಬಣ್ಣ' ಬಯಲಾಗುತ್ತದೆ. ಹಾಗಾಗಿ ಇಂತಹ ಬುದ್ಧಿವಂತಿಕೆಯನ್ನು ಮಾಡುವುದು ಮಾಮೂಲಿ.
- ನೋಡಿ, ಒಬ್ಬನ ದೌರ್ಬಲ್ಯಕ್ಕೆ ಇಡೀ ರಂಗ, ರಂಗವ

ಸ್ವಾನುಭವ - 2
- ಅದೊಂದು ಆಟ. ಪ್ರಸಂಗ: ದೇವಿಮಹಾತ್ಮೆ. ಯಾವ್ಯಾವ ಕಲಾವಿದರು ಎಂದು ನಿಶ್ಚಯವಾಗಿತ್ತು. ಕಾರ್ಯಕ್ರಮದ ದಿವಸ ಹತ್ತಿರವಾಗುತ್ತಿದ್ದಂತೆ ಪ್ರಸಿದ್ಧರೆಂದು ಹಣೆಪಟ್ಟಿ ಅಂಟಿಸಿಕೊಂಡ ಕಲಾವಿದರೊಬ್ಬರು ಆ ಸಮಾರಂಭಕ್ಕೆ 5000 ರೂಪಾಯಿ ದೇಣಿಗೆ ನೀಡಿ, 'ಮಹಿಷಾಸುರ' ಪಾತ್ರ ತನಗೆ ನೀಡಬೇಕೆಂದು ಮನವಿ ಸಲ್ಲಿಸಿದರು. ಇವರ ಐದು ಸಾವಿರದಿಂದ ಸಂಘಟಕರು ನಿಶ್ಚಿಂತೆಯಿಂದ ಉಸಿರು ಬಿಟ್ಟರಾದರೂ, ಅವರ ಬೇಡಿಕೆ ಇರಿಸು ಮುರಿಸು ಉಂಟು ಮಾಡಿತ್ತು. ಸರಿ, ದಾಕ್ಷಿಣ್ಯಕ್ಕೆ ಒಪ್ಪಿಕೊಂಡರು.
-  ಆಟದ ದಿವಸ. ಮಹಿಷಾಸುರ ಚೌಕಿಯಲ್ಲಿ ಸಿದ್ಧವಾಗಿತ್ತು. ರಂಗದಿಂದ ಸ್ವಲ್ಪ ದೂರದಿಂದ ಮಹಿಷನ ಪ್ರವೇಶ ಹೊರಡುವುದೆಂದು ನಿಶ್ಚಯವಾಗಿತ್ತು. ಚೌಕಿಯಲ್ಲಿ ಆಗಲೇ ಅರ್ಧ ಅಮಲೇರಿದ್ದರು. ಮಹಿಷಾಸುರನ ಆವಾಹನೆಯಾಗಿತ್ತು! ಅವರಿಗೆ ಬೇಕಾದಷ್ಟು ಮದಿರೆಯನ್ನು ಸಪ್ಲೈ ಮಾಡುವ ಅಭಿಮಾನಿ ವರ್ಗವೂ ಇತ್ತು. ಹಾಗಾಗಿ ಮಹಿಷ ರಂಗಸ್ಥಳದ ಹತ್ತಿರಕ್ಕೆ ಅಬ್ಬರದ ಪ್ರವೇಶ ಮಾಡುತ್ತಾ ಬರುವಾಗಲೇ ಬಸವಳಿದಿದ್ದರು. ಹೇಗೋ ರಂಗಸ್ಥಳ ಪ್ರವೇಶ ಮಾಡಿದರೆನ್ನಿ. ಆಮೇಲೆ ಬಂದವರು ಚೌಕಿಯಲ್ಲಿ ವಿಶ್ರಮಿಸಿದರಿಗೆ ಎಚ್ಚರವಾದುದು ಬೆಳಿಗ್ಗೆ ಮಂಗಲವಾದ ಬಳಿಕವೇ!
- ಇವರ ಅವಸ್ಥೆ ನೋಡಿ ಚೌಕಿಯಲ್ಲಿದ್ದ ಸಹ ಕಲಾವಿದರು ಮತ್ತೆ ಮಹಿಷರಾದರು! ಆಟ ಮಾತ್ರ ಮೂವತ್ತು ನಿಮಿಷ ಸ್ಥಬ್ದವಾಗಿತ್ತು. ಇನ್ನೊಬ್ಬ ಮಹಿಷ ಸಿದ್ಧನಾಗಬೇಕಲ್ಲಾ...!
- ಇಲ್ಲಿ ಘಟನೆ ಮುಖ್ಯವಲ್ಲ. ಅಭಿಮಾನದ ಹುಚ್ಚು ಅಮಲಿನಲ್ಲಿ ಕಲಾವಿದರಿಗೆ 'ಗಮ್ಮತ್ತು ಮಾಡುವ, ಮಾಡಿಸುವ' ಅಭಿಮಾನಿಗಳಿಗೆ 'ಆಟ ಕುಲಗೆಟ್ಟರೂ ತೊಂದರೆಯಿಲ್ಲ, ಕಲಾವಿದರಿಗೆ ಖುಷಿಯಾಗಬೇಕು' ಎನ್ನುವ ಜಾಯಮಾನ ಇದೆಯಲ್ಲಾ, ಇದೂ ಕಲೆಗೆ ಮಾರಕ...!ಏನಂತೀರಿ?
- ಕಲಾವಿದರನ್ನು ತೃಪ್ತಿ ಪಡಿಸುವುದರಲ್ಲೇ ತನ್ನ ಸಾರ್ಥಕ್ಯ ಎಂದಿದ್ದರೆ ಬೆಳಿಗ್ಗೆನ್ನು ಒಪ್ಪಿದ ಪ್ರೇಕ್ಷಕರು, ಸಂಘಟಕರು = ಹೀಗೆ ಎಲ್ಲರೂ ಬಲಿಪಶುಗಳಾಗುತ್ತಾರೆ.

ಸ್ವಾನುಭವ 3 
- ಯಕ್ಷಗಾನದ ಚೌಕಿಯನ್ನು ಆಟಕ್ಕೆ ಬಂದ ಬಹುತೇಕ ಕಲಾಭಿಮಾನಿಗಳು ಒಮ್ಮೆ ಇಣುಕಿ, ತಮಗೆ ಇಷ್ಟಪಟ್ಟ ಕಲಾವಿದರನ್ನು ಮಾತನಾಡಿಸಿ ಹೋಗುವುದು. ಇದು ಯಕ್ಷಗಾನದ ಕುರಿತಾದ ಅಭಿಮಾನ. ಜತೆಗೆ ಕಲಾವಿದನ ಅಭಿಮಾನವೂ ಕೂಡಾ. ಹಾಗಾಗಿ ಚೌಕಿಯಲ್ಲಿ ಕನಿಷ್ಠ ಶಿಸ್ತನ್ನು ಕಾಪಾಡಿಕೊಳ್ಳುವ (ಹವ್ಯಾಸಿ ರಂಗದಲ್ಲಿ) ಹೊಣೆ ಎಲ್ಲಾ ಕಲಾವಿದರದ್ದು. ಮದ್ಯಪಾನ ಮಾಡಿ ಚೌಕಿಯಲ್ಲೇ ರಾದ್ಧಾಂತ ಎಬ್ಬಿಸುತ್ತಾ ಇದ್ದರೆ, ಹಗುರ ಮಾತುಗಳಿಂದ ತಾನು ಶ್ರೇಷ್ಠ ಎಂದು ಪ್ರತಿಷ್ಠಾಪಿಸಲು ಹೊರಟರೆ ಕಲಾಭಿಮಾನಿಗಳು ಕಲಾವಿದರಿಂದ, ಯಕ್ಷಗಾನದಿಂದ ದೂರವಾಗುತ್ತಾರೆ. ಹೀಗಾಗದಂತೆ ಎಚ್ಚರ ಅಗತ್ಯ.
- ಮದ್ಯಪಾನ ಮಾಡುವುದು ಅವನವನ ವೈಯಕ್ತಿಕ ವಿಚಾರ. ಅದನ್ನು ಪ್ರಶ್ನಿಸುವಮತಿಲ್ಲ. ಆದರೆ ಸಾಮಾಜಿಕ ಕಾಳಜಿ ಮತ್ತು ಬದ್ಧತೆ ಇದೆಯಲ್ಲಾ.... ಈ ಹಿನ್ನೆಲೆಯಲ್ಲಿ ಚೌಕಿಯ ಪಾವಿತ್ರ್ಯತೆ ಯನ್ನು ಕಾಪಾಡಲೇಬೇಕು.
- ಪಾವಿತ್ರ್ಯತೆ ಎಲ್ಲಿಂದ ಬರಬೇಕು? ಕಲಾವಿದನಲ್ಲಿ ಶಿಸ್ತು, ನಂಬುಗೆ ಮತ್ತು ಪಾವಿತ್ರ್ಯದ ಭಾವಗಳಿಂದರೆ ತನ್ನಿಂತಾತೆ ಪಾವಿತ್ರ್ಯ ಅನಾವರಣಗೊಳ್ಳುತ್ತದೆ.

ಸ್ವಾನುಭವ - 4
 - ಯಕ್ಷಗಾನದ ಬಣ್ಣದ ಮನೆ(ಚೌಕಿ)ಗೆ ಪಾವಿತ್ರ್ಯದ ನಂಬುಗೆ. ನಮ್ಮೆಲ್ಲಾ ಹಿರಿಯ ಕಲಾವಿದರು ಯಕ್ಷಗಾನವನ್ನು 'ದೇವತಾರಾಧನೆ' ಎಂಬ ನಂಬುಗೆಯಿಂದ ಕಲಾ ವ್ಯವಸಾಯ ಮಾಡಿದವರು. ಚೌಕಿಯನ್ನು, ರಂಗವನ್ನು ಪೂಜ್ಯ ಭಾವನೆಯಿಂದ ಕಂಡವರು. ಈಗಲೂ ಹಲವು ಕಲಾವಿದರಲ್ಲಿ ಅಂತಹ ಭಾವನೆಗಳು ತುಂಬಿವೆ.
- ಇಂತಹ ಭಾವನೆಗಳಿಗೆ ಯಕ್ಷಗಾನದ ಹವ್ಯಾಸಿ ರಂಗಭೂಮಿಯೂ ಹೊರತಲ್ಲ. ಹವ್ಯಾಸಿ ಕ್ಷೇತ್ರದಲ್ಲಿ ಅನುಭವಿಗಳನ್ನು ಕಲೆ ಹಾಕಿ ಅದಕ್ಕೊಂದು ಸಂಘಟಿತ ರೂಪ ಕೊಟ್ಟು ಮೇಳವಾಗಿ ತಿರುಗಾಟ ಮಾಡುವುದನ್ನು ಕಾಣಬುಹುದು. ಇಲ್ಲೂ ಕೂಡಾ ದೇವತಾರಾಧನೆಯ ಭಾವ, ಭಾವನೆ.
- ಆದರೆ ಇದೆಲ್ಲವನ್ನೂ ಕಡೆಗಣಿಸಿ ಚೌಕಿಯಲ್ಲಿ ಧೂಮಪಾನ ಮಾಡುತ್ತಾ, ಸ್ವೇಚ್ಛೆಯಿಂದ ಇರುವ; ಮದ್ಯಪಾನ ಮಾಡಿ, ಅಮಲೇರಿ ಚೌಕಿಯಲ್ಲಿ ಹೇಸಿಗೆ ಹುಟ್ಟಿಸುವ, ಲಘುವಾಗಿ ಮಾತನಾಡುವ, ವ್ಯಕ್ತಿಗಳು (ಕಲಾವಿದರು ಅನ್ನಿಸಕೊಂಡ) ಇದ್ದಾರೆ. ಇವರಿಂದಾಗಿ ಇಡೀ ತಂಡಕ್ಕೆ ಕೆಟ್ಟ ಹೆಸರು. ಇಂತಹವರನ್ನು ಕಲಾವಿದರೇ ದೂರವಿಟ್ಟರೆ ತಂಡಕ್ಕೂ, ಪ್ರದರ್ಶನಕ್ಕೂ ಕ್ಷೇಮ.

Saturday, January 4, 2014

ಉಳಿಯ ಯಕ್ಷಗಾನ ಸಂಘ : ಮೆರೆದು ಮಿರುಗಿದ ಸುವರ್ಣ







               ಮಧೂರು ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘವು ಕಳೆದ ವಾರ ಚಿನ್ನದ ಹೊಳಪಿನಿಂದ ಮೆರೆಯಿತು. ವೈವಿಧ್ಯ ಹೂರಣಗಳಿಂದ ಮೆರೆಸಿತು. ಬಹುಕಾಲ ಮೆರುಗುವಂತೆ ಮಾಡಿತು. ಸಂಘವೊಂದರ ಗರಿಷ್ಠ ಸಾಧ್ಯತೆಗಳನ್ನು ಸಾಕಾರಗೊಳಿಸಿತು.
                  ಎಷ್ಟು ಬೇಕೋ ಅಷ್ಟು ಸಭಾ ಕಲಾಪ. ಒಂದು ನೆನಪು ಸಂಚಿಕೆ ಅನಾವರಣಕ್ಕೆ, ಇನ್ನೊಂದು ಸಮಾರೋಪ. ಮಿಕ್ಕ ಸಮಯವೆಲ್ಲವೂ ಯಕ್ಷಗಾನದ ವಿವಿಧ ವೈವಿಧ್ಯಗಳ ಪ್ರಸ್ತುತಿ. ಹಿರಿಯ ಕಲಾವಿದರ ಉಪಸ್ಥಿತಿ. ಕಾಪಿಟ್ಟ ಕಲಾ ಔಚಿತ್ಯದ ಮಿತಿ.
ಸಂಘವು ಚಿನ್ನದ ಹಬ್ಬಕ್ಕಾಗಿ ಐವತ್ತು ತಾಳಮದ್ದಳೆ ನಡೆಸಿತ್ತು. ಅಭಿಮಾನಿಗಳಿಂದ ಅಭಿಯಾನಕ್ಕೆ ತುಂಬು ಅಭಿಮತ. ಇಲ್ಲಿ ಪ್ರೇಕ್ಷಕರು ಮುಖ್ಯವಾಗಿರಲಿಲ್ಲ. ಮನೆ ಮಂದಿ ತಾಳಮದ್ದಳೆ ವೀಕ್ಷಿಸಬೇಕು. ಯಕ್ಷಗಾನೀಯ ವಾತಾವರಣವು ಮನೆ ಮನಗಳಲ್ಲಿ ಬೆಳಗಬೇಕು. ಆ ಮೂಲಕ ಯಕ್ಷಗಾನ ಬದುಕಬೇಕು ಎನ್ನುವ ದೂರದೃಷ್ಟಿ.
                ಅಭಿಯಾನವನ್ನು ಪ್ರಾಂಜಲವಾಗಿ ಸಮಾಜ ಸ್ವೀಕರಿಸಿದೆ. ಮನೆಯ ಜಗಲಿಯಲ್ಲಿ ಜಾಗ ಕೊಟ್ಟಿದೆ. ಅಭಿಮಾನದ ಹೊನಲು ಹರಿಸಿದೆ. ಸುವರ್ಣಾಭಿಯಾನ ಯಶದ ಹಿನ್ನೆಲೆಯಲ್ಲಿ ಚಿನ್ನದ ಹಬ್ಬದಲ್ಲಿ ಮೊದಲ ಸೆಶನ್ - ಸಂಘದ ಕಲಾವಿದರಿಂದ ತಾಳಮದ್ದಳೆ. ಅಪರಾಹ್ನ ಶ್ರೀ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನಿದರ್ೇಶನದಲ್ಲಿ 'ಪೂರ್ವರಂಗ' ಪ್ರಾತ್ಯಕ್ಷಿಕೆ.
                  ಹಿಂದೆಲ್ಲಾ ಪೂರ್ವರಂಗವು ಸರಿಸುಮಾರು ರಾತ್ರಿ ಎಂಟು ಗಂಟೆಗೆ ಆರಂಭವಾಗಿ ಹತ್ತು ಗಂಟೆಯ ತನಕ ಪ್ರದರ್ಶಿತವಾಗುತ್ತಿದ್ದುವು. ಆಗಷ್ಟೇ ರಂಗಪ್ರವೇಶಿಸುವ ಕಲಾವಿದನಿಗೆ ಪೂರ್ವರಂಗ ಎನ್ನುವುದು ಕಲಿಕಾ ಶಾಲೆ. ಎಲ್ಲಾ ತಾಳ, ನಡೆಗಳ ಅಭ್ಯಾಸ. ಸಮರ್ಥವಾಗಿ ಪೂರ್ವರಂಗವನ್ನು ಅಭ್ಯಾಸ ಮಾಡಿದ ಕಲಾವಿದ ಮುಂದೆ ಎಂತಹ ಪಾತ್ರವನ್ನಾದರೂ ಮಾಡಬಹುದಾದಷ್ಟು ಸಮರ್ಥನಾಗಬಲ್ಲ. ಬಾಲಗೋಪಾಲರಲ್ಲಿಂದ ಪೀಠಿಕೆ ಸ್ತ್ರೀವೇಷದ ತನಕ ವಿವಿಧ ಪಾತ್ರಗಳ ಅಭಿವ್ಯಕ್ತಿ. ಈಗಾಗಲೇ ರಂಗದಿಂದ ಮರೆಯಾದ ಷಣ್ಮುಖ ಸುಬ್ರಾಯ ಕುಣಿತ ಮತ್ತು ಅರ್ಧನಾರೀಶ್ವರ ಪಾತ್ರಗಳ ಪ್ರಸ್ತುತಿಗಳು ಬಹುತೇಕರಲ್ಲಿ ಕುತೂಹಲ ಮೂಡಿಸಿದುವು.
                     ಸಂಜೆ 'ಅಭಿಮನ್ಯು ಕಾಳಗ', ಮತ್ತು 'ದುಶ್ಶಾಸನ ವಧೆ' ಪ್ರಸಂಗಗಳ ಪ್ರದರ್ಶನ. ಅಭಿಮನ್ಯು ಕಾಳಗವು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆಯಲ್ಲಿ ವಿಜೃಂಬಿಸಿದರೆ, ದುಶ್ಶಾಸನ ಕಾಳಗ ಪ್ರಸಂಗವು ಹಿರಿಯ ಕಲಾವಿದ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ಯಶ ಕಂಡಿತು. ಚಂದ್ರಶೇಖರ ಧರ್ಮಸ್ಥಳ ಅವರ ಸಮರ್ಥ ಅಭಿಮನ್ಯು. ನೃತ್ಯ, ಅಭಿನಯ, ಮಾತಿನ ಸಮಪಾಕ. ಆರೋಹಣ ಕ್ರಮದ ಬೀಸು ನಡೆ. ಕೊನೆಯವರೆಗೆ 'ಅಭಿಮನ್ಯು' ಎನ್ನುವುದನ್ನು ಮರೆಯದ ಅಭಿವ್ಯಕ್ತಿ. ಬೀಸುಹೆಜ್ಜೆಯ ಪಾತ್ರಗಳಲ್ಲಿ ಭಾವಾಭಿನಯಕ್ಕೆ ಅವಕಾಶ ಕಡಿಮೆ. ತ್ರಾಸವೂ ಕೂಡಾ. ಚಂದ್ರಶೇಖರ್ ಇದನ್ನು ಸಮನ್ವಯಗೊಳಿಸಿದ್ದಾರೆ. ಖುಷಿ ನೀಡಿದ ಪಾತ್ರ. ಬಹುಕಾಲ ನೆನಪಿನಲ್ಲಿ ಉಳಿವ ಅಭಿವ್ಯಕ್ತಿ.
                      ಕುರಿಯ ಗಣಪತಿ ಶಾಸ್ತ್ರಿಗಳ ಹಾಡುಗಾರಿಕೆಯಲ್ಲಿ 'ದುಶ್ಶಾಸನ ವಧೆ' ಪ್ರಸಂಗ. ಈ ಪ್ರಸಂಗದಲ್ಲಿರುವ ಪಾರಂಪರಿಕ ಮತ್ತು ಖಚಿತ ನಡೆಗಳಿಂದಾಗಿ ಮೇಳದ ಕಲಾವಿದರು ಕೂಡಾ ಆಡಲು ಹಿಂದೇಟು ಹಾಕುವುದುಂಟು. ಆದರೆ ಕುರಿಯ, ಪದ್ಯಾಣ ಜತೆಗಾರಿಕೆಗೆ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರ 'ರುದ್ರಭೀಮ' ಉತ್ತಮ ಸಾಥ್. ನಿಧಾನಗತಿಯಲ್ಲಿ ಸಾಗುವ ಪ್ರಸಂಗದ ಆರಂಭ, ಅದಕ್ಕೆ ಸರಿಯಾದ ಚೆಂಡೆಯ ನುಡಿ, ಭಾಗವತಿಕೆಯ ವೇಗ, ಪ್ರಸಂಗ ಸಾಹಿತ್ಯ...ಗಳು ಕಲಾವಿದರಿಗೆ ಸವಾಲು. ಈ ಸವಾಲಿಗೆ ಎಲ್ಲಾ ಕಲಾವಿದರು ಉತ್ತರ ನೀಡಿ ಉತ್ತಮ ಪ್ರದರ್ಶನ ನೀಡಿರುವುದು ಸುವರ್ಣ ಹಬ್ಬದ ಹೈಲೈಟ್.
                    ಮರುದಿವಸ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ ಮತ್ತು ದಿನೇಶ ಅಮ್ಮಣ್ಣಾಯರಿಂದ ಗಾನವೈವಿಧ್ಯ. ಪಾರಂಪರಿಕ ಪದ್ಯಗಳ ಪ್ರಸ್ತುತಿ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ ಮತ್ತು ದೇಲಂತಮಜಲು ಸುಬ್ರಹ್ಮಣ್ಯ ಭಟ್. ವಾಸುದೇವ ರಂಗಾಭಟ್ಟರ ನಿರೂಪಣೆ. ಮೂರೂ ಭಾಗವತರಲ್ಲಿ ರಾಗಗಳು ವಿಸ್ತಾರವಾಗುವ ಬಗೆ, ಸಾಹಿತ್ಯದ ಸ್ಪಷ್ಟತೆ, ಮಟ್ಟುಗಳು, ಸಂಗೀತ ರಾಗಗಳ ಬಳಕೆ.. ಹೀಗೆ ವಿವಿಧ ಸ್ತರಗಳಲ್ಲಿ ಸಂಪನ್ನ. 'ಭೀಷ್ಮ ಪ್ರತಿಜ್ಞೆ' ತಾಳಮದ್ದಳೆ ಮತ್ತು 'ಶಿವಪಂಚಾಕ್ಷರಿ ಮಹಿಮೆ' ಬಯಲಾಟಗಳು - ಹೀಗೆ ಚಿನ್ನದ ಹಬ್ಬದಲ್ಲಿ ಸಮೃದ್ಧ ಹೂರಣ.
                      ಉದ್ಘಾಟನಾ ಸಮಾರಂಭದಲ್ಲಿ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿಯವರು ಪ್ರಸ್ತುತ ಕಾಲಘಟ್ಟದ ಯಕ್ಷರಂಗವನ್ನು ವಿಮರ್ಶೆ ಮಾಡಿದರು - ಯಕ್ಷಗಾನದ ಪ್ರಸ್ತುತಿಗಳು ಹೃಸ್ವವಾಗುತ್ತಿವೆ. ಲಘುಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಟ, ಕೂಟಗಳಲ್ಲೂ ಇಂತಹ ಲಘುತ್ವ ಕಾಣಬಹುದಾಗಿದೆ. ಕಾಲಮಿತಿ ಪ್ರದರ್ಶನವು ಕಾಲದ ಕರೆ. ಯಕ್ಷಗಾನ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ, ವಿಮರ್ಶೆ, ಪರಿಷ್ಕರಣೆ ಆಗಬೇಕಾಗಿದೆ.
                      ಡಾ.ಶೇಣಿಯವರು ಓಡಾಡಿದ ಕಾಸರಗೋಡು ನೆಲದಲ್ಲಿ ಅವರಿಗೆ ಉತ್ತಮವಾದ ಸ್ಮಾರಕ ಇನ್ನೂ ನಿರ್ಮಾಣಗೊಂಡಿಲ್ಲ. ಶೇಣಿಯವರು ಬದುಕಿರುವಾಗಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕಿತ್ತು. ಬಂದಿಲ್ಲ. ಆ ಯತ್ನಗಳು ಆಗಿಲ್ಲ, ಎಂದ ಜೋಶಿಯವರು ಮಾತು ಮರೆತು ಬಿಡುವಂತಹುದಲ್ಲ.

Tuesday, November 12, 2013

ಹೆಮ್ಮೆಯ ಕಲೆಗೊಂದು ಹಬ್ಬ


            ಯಕ್ಷಗಾನ ಶುರುವಾಗುವಾಗ ಸಂಜೆ ಗಂಟೆ ಐದು. ಮುಗಿಯುವಾಗ ಮರುದಿವಸ ಮಧ್ಯಾಹ್ನ ಒಂದು ಮೀರಿತ್ತು! ನಾಡಿನ ಖ್ಯಾತ ಕಲಾವಿದರ ಸಮ್ಮಿಲನ. ಪೈಪೋಟಿಯ ಅಭಿವ್ಯಕ್ತಿ. ತುಳುಕಿದ ಯಕ್ಷಪ್ರೇಮಿಗಳ ಸಂದೋಹ. ತಂತಮ್ಮೊಳಗೆ ವಿಮರ್ಶೆ. ಮಾತುಕತೆ, ಜಿಜ್ಞಾಸೆ. ಉಭಯ ಜಿಲ್ಲೆಗಳೆರಡರಿಂದಲೂ ಪ್ರೋತ್ಸಾಹ. ಸಂಪಾಜೆಯ 'ಯಕ್ಷೊತ್ಸವ' ಸಂಪನ್ನವಾಗಿ ಬಸ್ಸನ್ನೇರುವಾಗ ಯಕ್ಷಗಾನದ್ದೇ ಗುಂಗು. ಛೇ.. ಮುಗಿಯಿತಲ್ಲಾ ಎನ್ನುವ ಪೆಚ್ಚುಮೋರೆ.

              ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಾರಥ್ಯದಲ್ಲಿ ನಡೆಯುವ ಯಕ್ಷೊತ್ಸವಕ್ಕೆ ಅದೇ ಸಾಟಿ. ವರುಷದಿಂದ ವರುಷಕ್ಕೆ ಏರುಗತಿ. ಕಲಾವಿದರಿಗೂ ಪ್ರತಿಷ್ಠೆ. ಒಂದೆಡೆ ಬೆರೆಯುವ ಅವಕಾಶ. ಕಲಾಭಿಮಾನಿಗಳಿಗೂ ನೆಚ್ಚಿನ ಕಲಾವಿದರನ್ನು ಒಂದೇ ಸೂರಿನಡಿ ನೋಡುವ, ಮಾತನಾಡುವ ಹಪಾಹಪಿ. ಮೂರ್ನಾಲ್ಕು ಪ್ರಸಂಗವಿದ್ದರೂ ಸಮಯವಿಲ್ಲವೆಂದು ಕತೆಯನ್ನು ಕುಗ್ಗಿಸುವ ಜಾಯಮಾನವೇ ಇಲ್ಲ. ಪ್ರಸಂಗದ ಸಾರಸರ್ವಸ್ವದ ಸಾಕಾರ.

              ಹಬ್ಬ ಎಂದಾಕ್ಷಣ ಅಲ್ಲಿ ಗೌಜಿ, ಗಮ್ಮತ್ತು ಇರಲೇಬೇಕಲ್ವಾ. ಸಂತೋಷವೇ ಆಶಯ.  ಮನಸ್ಸಿಗೆ ಮುದ ನೀಡುವ ಹೂರಣ. ಕಲಾವಿದನ ಅರ್ಹತೆಗೆ ತಕ್ಕ ಪಾತ್ರಗಳು. ಕಲಾವಿದನಿಗೂ ಮಾನ, ಸಂಮಾನ. ಮನ ತುಂಬುವ  ಸಂಭಾವನೆ. ಹಬ್ಬವಾದ್ದರಿಂದ ಪ್ರದರ್ಶನದಲ್ಲಿ ಹೆಚ್ಚು  ಗುಣಮಟ್ಟವನ್ನು ನಿರೀಕ್ಷಿಸಲಾಗದು. ನಿರೀಕ್ಷಿಸಬಾರದು. ಅದು ಸಾಧ್ಯವೂ ಇಲ್ಲ. ಆದರೆ ಚೌಕಟ್ಟನ್ನು ಮೀರದ ಎಚ್ಚರ ಸಂಘಟಕರಲ್ಲೂ ಇದೆ, ಕಲಾವಿದರಲ್ಲೂ ಇದೆ. 

             ಯಕ್ಷ ಹಬ್ಬಕ್ಕೆ ಆಗಮಿಸಿದ ಎಲ್ಲರಿಗೂ ಹೊಟ್ಟೆ ಬಿರಿಯುವಷ್ಟು ದಾಸೋಹ. ಆಟ ಮುಗಿದರೂ ಅಡುಗೆ ಶಾಲೆಯ ಬಳಿ ಕ್ಯೂ! ಬಗೆಬಗೆಯ ತಿಂಡಿಗಳು, ಸಿಹಿ, ಕಾಫಿ, ಚಹಾ.  ಬೇಕಾದ್ದನ್ನು ಬೇಕಾದಷ್ಟು ಹೊತ್ತಿಗೆ ಸವಿಯುವ ಅವಕಾಶ ಅದು ಸಂಪಾಜೆಯ ಯಕ್ಷೊತ್ಸವದಲ್ಲಿ ಮಾತ್ರ! ಆಟದ ಸಿಹಿಯೊಂದಿಗೆ ತೆರಳಿದ ಯಕ್ಷಪ್ರೇಕ್ಷಕರು ಅಲ್ಲಿನ ವರ್ತಮಾನವನ್ನು, ಅಡುಗೆ ಮನೆಯ ವಿಶೇಷಗಳನ್ನು ಸ್ನೇಹಿತರಲ್ಲಿ, ಬಂಧುಗಳಲ್ಲಿ ಹೇಳಿಕೊಂಡಷ್ಟೂ ಅಭಿಮಾನ.

             ಪಾತ್ರ ಪರಿಚಯದ ದೊಡ್ಡ ಗಾತ್ರದ ಕರಪತ್ರವನ್ನು ಆಗಾಗ್ಗೆ ತೆರೆದು ರಂಗಕ್ಕೆ ಪ್ರವೇಶವಾಗುವ ವೇಷ, ವೇಷಧಾರಿಗಳ ಪರಿಚಯ ಮಾಡಿಕೊಳ್ಳುತ್ತಿದ್ದುದು ಗಮನಾರ್ಹ. ಇದರಿಂದಾಗಿ ಪ್ರಸಂಗವೊಂದರಲ್ಲಿ ಎಷ್ಟು ಪಾತ್ರಗಳಿವೆ ಎನ್ನುವ ಕನಿಷ್ಠ ಜ್ಞಾನವಾದರೂ ಪ್ರಾಪ್ತವಾಗುವುದು ನೇಪಥ್ಯ ಸತ್ಯ.

              ನೀವಿಂದು ಯಾರನ್ನೇ ಕೇಳಿ, 'ಪುರುಸೊತ್ತಿಲ್ಲಾ, ಮಾರಾಯ್ರೆ' ಎಂಬ ಸಿದ್ಧ ಢಾಳು ಉತ್ತರ ರಾಚುತ್ತದೆ. ಸಂಪಾಜೆಯ ಹಬ್ಬ ಇಂತಹ ಮನಸ್ಸುಗಳನ್ನು ಎರಡು ದಿವಸ ಸೆಳೆದಿದೆ. ತನ್ನಲ್ಲಿ ಸೇರಿಸಿಕೊಂಡಿದೆ. ಬ್ಯುಸಿಗೆ ಉತ್ತರ ನೀಡಿದೆ.  ಬ್ಯುಸಿಯು ಮೊಬೈಲುಗಳ ಬಳಕೆಯ ವೇಗವನ್ನು ಕಡಿಮೆಗೊಳಿಸಿದೆ. ಇದು ಉತ್ರೇಕ್ಷೆಯಲ್ಲ. ಇದು ಫೇಸ್ ಬುಕ್ಕಿನ ಕಾಲ. ಅದಕ್ಕಾಗಿ ಫೋಟೋ ಕ್ಲಿಕ್ಕಿಸುವ, ಮೊಬೈಲ್ ಫೋಟೋ ತೆಗೆವ, ಅದನ್ನು ಪೇಸ್ಬುಕ್ಕಿಗೆ ಏರಿಸಿ, ಖುಷಿ ಪಡುವವರು ತಮ್ಮ ಪಾಡಿಗೆ ತಾವಿದ್ದರು! 

           ಯಕ್ಷಾಭಿಮಾನಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿ. ಕೆಲವರಿಗೆ ಭಾಗವತಿಕೆ ಇಷ್ಟ. ಹಲವರಿಗೆ ಪುಂಡುವೇಷ ಪ್ರಿಯ. ಸ್ತ್ರೀವೇಷವನ್ನು ಮೆಚ್ಚಿಕೊಳ್ಳುವ ಇನ್ನೊಂದು ವರ್ಗ. ಮಾತುಗಾರಿಕೆಯನ್ನು ಪ್ರೀತಿಸುವ, ಪುಂಡುವೇಷಗಳ ದಿಂಗಿಣವನ್ನು ನೋಡುವ, ದಿಂಗಿಣವನ್ನು ಲೆಕ್ಕ ಹಾಕುವ, ಹಾಸ್ಯ ರಸವನ್ನು ಸವಿಯುವ, ರಾಕ್ಷಸ ಪಾತ್ರಗಳ ಅತಿಮಾನುಷತೆಯನ್ನು ಕಣ್ತುಂಬಿಕೊಳ್ಳವ.. ಹೀಗೆ ವಿವಿಧ ವೈವಿಧ್ಯ ಮನಸ್ಸುಗಳು. ತಂತಮ್ಮ ಅಭಿಮಾನಿ ಕಲಾವಿದರು ಬಂದಾಗ ಕರತಾಡನದ ಬೆಂಬಲ. 

            ಸಂಪಾಜೆಯ ಶಾಲಾ ವಠಾರದಲ್ಲಿ ಸೀಮಿತ ಜಾಗ ವ್ಯವಸ್ಥೆ. ಇದ್ದ ಜಾಗದಲ್ಲಿ ಕುಳಿತುಕೊಳ್ಳುವ ಏರ್ಪಾವು. ಕುಳಿತಷ್ಟೇ ಜನ ನಿಂತೇ ಆಟವನ್ನು ನೋಡಿದ್ದಾರೆ. ಇಲ್ಲಿ ಗೊಣಗಾಟವಿರಲ್ಲ. ಅತೃಪ್ತಿಯಿರಲಿಲ್ಲ. ಆಟವೊಂದೇ ಜಪ-ತಪ. ನಿಜಕ್ಕೂ ಸಂಪಾಜೆ ನೆಲದ ಗುಣ.

             ಪ್ರತಿಷ್ಠಾನವು ಶಿಕ್ಷಣ, ವೈದ್ಯಕೀಯ ಚಿಕಿತ್ಸೆಗಳಿಗೆ ಆರ್ಥಿಕ ನೆರವು ನೀಡುತ್ತದೆ. ಕಲಾವಿದರನ್ನು ಸಂಮಾನಿಸುತ್ತದೆ. ಶೇಣಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಯತಿಗಳನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಗುತ್ತದೆ. 'ಸಂಪಾಜೆಯ ಯಕ್ಷೊತ್ಸವದಲ್ಲಿ ಪಡೆದ ಸಂಮಾನವು ಕನ್ನಾಡ ರಾಜ್ಯೋತ್ಸವ ಸಂಮಾನಕ್ಕಿಂತಲೂ ಹಿರಿದು! ತೂಕದಲ್ಲಿ, ಗೌರವದಲ್ಲಿ ಮತ್ತು ಭಾವನೆಗಳಲ್ಲಿ ಎತ್ತರದಲ್ಲಿರುವ ಪ್ರಶಸ್ತಿಯನ್ನು ಪಡೆದ ಹಿರಿಯರೆಷ್ಟೋ? ಸಾಧನೆ, ವಯಸ್ಸು, ಅರ್ಹತೆಗಳ ಆಧಾರದಲ್ಲಿ ಪ್ರಶಸ್ತಿ-ಸಂಮಾನ. 

               ಕಳೆದ ಶನಿವಾರ-ರವಿವಾರ ಯಕ್ಷೊತ್ಸವ ಜರುಗಿತು. ಹಳ್ಳಿಗಳಿಗೆ ಹೋಗಿ. ಅಲ್ಲಿ ಯಕ್ಷೊತ್ಸವದ ಗುಂಗು ಇನ್ನೂ ಆರಿಲ್ಲ. ನಿರಂತರ ಮಾತುಕತೆ, ವಿಮರ್ಶೆ. ತಂತಮ್ಮ ಅಭಿಮಾನಿ ಕಲಾವಿದರ ಅಭಿವ್ಯಕ್ತಿಯನ್ನು ಬಿಟ್ಟು ಕೊಡದ ಬಿಸಿ ಬಿಸಿ ಚರ್ಚೆ. ಯಾಕೆ ಹೇಳಿ? ಅಲ್ಲಿ ಈಗಲೂ ರಸ-ಭಾವ ತುಂಬಿದ ಮನಸ್ಸುಗಳು ಬಡವಾಗಿಲ್ಲ. ಹಾಗಾಗಿ ನಿರಂತರ ಯಕ್ಷಗಾನಗಳಾಗುತ್ತಿವೆ, ನಾಟಕಗಳಾಗುತ್ತಿವೆ. ಹಳ್ಳಿ ಸೊಗಸಿನ ಸಾಂಸ್ಕೃತಿಕ ಕಾರ್ಯಕ್ರಮಗಳಾಗುತ್ತಿವೆ.

      ಹಳ್ಳಿ ಬಿಟ್ಟು ಈಚೆಗೆ ಬನ್ನಿ, ಶುರುವಾಯಿತು, ಒತ್ತಡದ ಬದುಕು, ಮೊಬೈಲಿನ ರಿಂಗಣ., ಮಿಂಚಂಚೆಗಳ ಅಬ್ಬರ. ಜಾಲತಾಣಗಳ ಅಟ್ಟಹಾಸ!ಒತ್ತಡದ ಬದುಕಿಗೆ ಬೇಕು ಯಕ್ಷೊತ್ಸವದಂತಹ ಟಾನಿಕ್. ಯಕ್ಷಗಾನ ಕ್ಷೇತ್ರದಲ್ಲೇ ಅಪೂರ್ವವಾದ ಕಲಾಪವನ್ನು ನಡೆಸಿಕೊಡುತ್ತಿರುವ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನಕ್ಕೆ ಅಭಿನಂದನೆ.