Tuesday, September 1, 2020

ಪದ್ಯಾಣ - ‘ಪದಯಾನ’ - ಎಸಳು 37


ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ -  (ಎಸಳು 37)        

 ಪದಯಾನದಲ್ಲಿ ಸೋಲರಿಯದ ಹೆಜ್ಜೆ - 2

ಲೇ : ಶೀಲಾ ಗಣಪತಿ ಭಟ್

(ಪದ್ಯಾಣರ ಪತ್ನಿ)

ಮಳೆಗಾಲ ಕಳೆದು ಮೇಳ ಶುರುವಾಯಿತು. ಇವರು ತಿಂಗಳುಗಟ್ಟಲೆ ಬರುವುದಿಲ್ಲ ಎಂದು ಗೊತ್ತಾದ ಬಳಿಕ ತವರು ಮನೆಗೆ ಹೋಗುತ್ತಿದ್ದೆ. ನನ್ನ ನೋವನ್ನು ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಕ್ರಮೇಣ ಹೊಂದಿಕೊಂಡಿದ್ದೆ.  ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಟೆಂಟಿನೊಳಗೆ ಕುಳ್ಳಿರಿಸಿ ಅವರು ಚೌಕಿಗೆ ಹೋಗುತ್ತಿದ್ದರು. ಆಟ ಶುರುವಾಗಿ ಅರ್ಧ ಗಂಟೆಯಲ್ಲಿ ನಿದ್ದೆಗೆ ಜಾರುತ್ತಿದ್ದೆ!

          ಅವರು ಐದು ಮಂದಿ ಅಣ್ಣ ತಮ್ಮಂದಿರು. ಬಹಳ ಅನ್ಯೋನ್ಯತೆ. ವೈಮನಸ್ಸು ಎಂಬ ಶಬ್ದದ ಅರ್ಥವೇ ಗೊತ್ತಿಲ್ಲದವರು. ತುಂಬು ಸಂಸಾರ. ಅಪಾರ ನೆಂಟರಿಷ್ಟರು. ಕೆಲಸಕ್ಕೆ ಬೇಕಾದಷ್ಟು ಆಳುಗಳು. ಲೋಪವಿಲ್ಲದ ಸೌಕರ್ಯ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಅವರು ಇರುತ್ತಿದ್ದುದು ಮಾತ್ರ ಆಟದ ಟೆಂಟಿನೊಳಗೆ! ಆಟ ಎನ್ನುವುದು ತಪಸ್ಸು! ಬೇರೆ ಯಾವ ಚಿಂತೆಯೂ ಇಲ್ಲ. ಮದುವೆ, ಉಪನಯನ, ನೆಂಟರಿಷ್ಟರಲ್ಲಿ ಕಾರ್ಯಕ್ರಮ.. ಇದಾವುದೂ ಅವರಿಗೆ ಬೇಕಾಗಿಲ್ಲ. ನಾನೇ ನಿಭಾಯಿಸುತ್ತಿದ್ದೆ. ಈ ರೀತಿಯ ಕೌಟುಂಬಿಕ ಕಾರ್ಯಗಳ ತಿರುಗಾಟಕ್ಕಾಗಿ ಮೇಳಕ್ಕೆ ರಜೆ ಮಾಡರು. ಅನ್ನ ನೀಡುವ ಮೇಳಕ್ಕೆ  ದ್ರೋಹ ಮಾಡಬಾರದು ಎನ್ನುವುದು ಅವರ ನಿಷ್ಠೆ.

          ಪದ್ಯಾಣರ ಬದುಕು ಸರಳ. ಬಿಚ್ಚು ಮನಸ್ಸಿನ ಸ್ವಭಾವ. ಮಗುವಿನ ಮುಗ್ಧತೆ. ಅವರಿಗೆ ಬಿಳಿ ಇರುವುದೆಲ್ಲವೂ ಹಾಲು! ಪೂರ್ವಾಪರ ಯೋಚಿಸದೆ ಬಹುಬೇಗನೆ ನಂಬುವ ಗುಣ. ಸ್ವ-ಶಿಸ್ತಿನ ಸ್ವ-ನಿರ್ಮಿತ ಜೀವನಶೈಲಿ. ಸಮಯ ಪ್ರಜ್ಞೆಯಲ್ಲಿ ಕಟ್ಟುನಿಟ್ಟು. ಫಕ್ಕನೆ ಜಗ್ಗದ ಹಠಮಾರಿ. ನುಡಿದಂತೆ ನಡೆವ ಜಾಯಮಾನ.

          ಬಡವರೆಂದರೆ ಪ್ರೀತಿ. ತನಗಿಲ್ಲದಿದ್ದರೂ ದಾನ ಮಾಡುವ ಸ್ವಭಾವ. ಇನ್ನೊಬ್ಬರ ನೋವನ್ನು ಸಹಿಸುವುದು ಅವರಿಗೆ ಕಷ್ಟ. ಅವರ ಮುಂದೆ ದೀನ ಭಾವದಿಂದ ನಿಂತರಂತೂ ಕುಬ್ಜರಾಗಿ ಬಿಡುತ್ತಾರೆ. ಕೈಯಲ್ಲಿದ್ದುದನ್ನು ಕೊಟ್ಟುಬಿಡುತ್ತಾರೆ. ಮನೆಯ ಕೆಲಸದವರಿಗೆ ಇವರೆಂದರೆ ಪ್ರೀತಿ. ಕೇಳಿದ್ದನ್ನು, ಕೇಳಿದಷ್ಟು ಕೊಡುತ್ತಾರೆ ಎನ್ನುವ ನಂಬುಗೆ. ಹಾಗಾಗಿ ನಮ್ಮಲ್ಲಿ ತೋಟದ ಕೆಲಸಕ್ಕೆ ಸಹಾಯಕರ  ಸಮಸ್ಯೆ ಉಂಟಾದುದೇ ಇಲ್ಲ.

          ಯಕ್ಷಲೋಕದಲ್ಲಿ ಅವರ ಕಂಠಶ್ರೀ ಮನೆಮಾತು. ಸ್ವರವನ್ನು ಬಹಳ ಜತನದಿಂದ ಕಾಪಾಡಿಕೊಳ್ಳುತ್ತಾರೆ. ಏಕಾಂಗಿಯಾಗಿರುವುದು ಅವರಿಗೆ ಸಹ್ಯವಲ್ಲ. ಹಾಡಿನ ಕುರಿತು ನಾವಿಬ್ಬರು ಮಾತನಾಡುತ್ತೇವೆ, ಚರ್ಚೆ ಮಾಡುತ್ತೇವೆ. ಜಗಳವಾದುದೂ ಇದೆ! ಆಟ, ಕೂಟ ಇಲ್ಲದ ಹೊತ್ತಲ್ಲಿ ಮನೆಯಲ್ಲಿರುತ್ತಾರೆ. ಆಗ ನೋಡಬೇಕು, ಅವರಿಗೆ ಊಟದ್ದೇ ಚಿಂತೆ!

          ತಿನ್ನುವ ವಿಷಯದಲ್ಲಂತೂ ಕಾಳಜಿ. ಅದು ಅಚ್ಚುಕಟ್ಟಾಗಿರಬೇಕು. ಅಡುಗೆಯಲ್ಲಿ ಎಷ್ಟು ಬಗೆ ಇದ್ದರೂ ಕಡಿಮೆಯೇ. ತರಕಾರಿಯಲ್ಲಿ ಬದನೆ, ಹಾಗಲಕಾಯಿ; ಸಿಹಿಯಲ್ಲಿ ಜಿಲೇಬಿ, ಕೇಸರಿಬಾತ್; ಉಳಿದಂತೆ ಪತ್ರೊಡೆ, ರೊಟ್ಟಿ, ಬೇರೆ ಬೇರೆ ರೀತಿಯ ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿ ಇಷ್ಟ. ಬದನೆಯನ್ನು ಕೆಂಡದಲ್ಲಿ ಸುಟ್ಟು ಮಾಡಿದ ಗೊಜ್ಜು ಇದ್ದರೆ ನಾಲ್ಕು ತುತ್ತು ಹೆಚ್ಚು ಉದರಕ್ಕಿಳಿಸುತ್ತಾರೆ. ಅತಿಥಿಗಳಿಗೆ ಆತಿಥ್ಯ ಕಡಿಮೆಯಾದರೆ ಗೊಣಗುತ್ತಾರೆ. ಬಡವರಲ್ಲಿಗೆ ಹೋಗಿ ಉಣ್ಣಲು ಬಹಳ ಪ್ರೀತಿ. ಕಳೆದ ಎಂಟು ವರುಷಗಳಿಂದ ಆಟವು ಕಾಲಮಿತಿಯಾದ ಬಳಿಕ ಸಾಮಾನ್ಯವಾಗಿ ಮನೆಯಲ್ಲೇ ಊಟ-ತಿಂಡಿ. 

 (ಲೇಖನದ ಉಳಿದ ಭಾಗ ನಾಳೆಗೆ..)

 

No comments:

Post a Comment