ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ
ಬೇಕು, ಅಪ್ಪನ ಸಾಂಗತ್ಯ – ಭಾಗ 2
ಲೇ : ಸ್ವಸ್ತಿಕ್ ಪದ್ಯಾಣ
(ಪದ್ಯಾಣರ ಹಿರಿಮಗ)
ಮನದಾಳದ ಮೂವರು
ನನ್ನ ಅಮ್ಮ - ನಿಜವಾದ ಅರ್ಥದಲ್ಲಿ ಅಪ್ಪನ ಅರ್ಥಾಂಗಿ. ಜೀವನದುದ್ದಕ್ಕೂ ಏಳುಬೀಳುಗಳಲ್ಲಿ, ಮಾನ-ಸಂಮಾನಗಳಲ್ಲಿ, ಕಷ್ಟ-ಸುಖಗಳಲ್ಲಿ ತನ್ನೆಲ್ಲಾ ಸುಖಗಳನ್ನು ಬದಿಗೊತ್ತಿ ಜೀವನವನ್ನು ಸವೆಸುತ್ತಾ ಬಂದಿದ್ದಾರೆ. ಇವತ್ತು ತಂದೆಯವರ ಸಾಧನೆಯು ಸರಿಯಾದ ಪಥದಲ್ಲಿ ಧನಾತ್ಮಕವಾಗಿ ಸಾಗುತ್ತಿದ್ದರೆ, ಅದಕ್ಕೆ ಕಾರಣ ನನ್ನ ಅಮ್ಮ. ಅವರ ಮಾತನ್ನು ತಂದೆಯವರು ಮೀರಿಲ್ಲ, ಮಾನಿಸಿದ್ದಾರೆ, ಮಾನಿಸುತ್ತಿದ್ದಾರೆ.
ಟಿ.ಶ್ಯಾಮ ಭಟ್ - ಅವರು ನಮ್ಮ ಮನೆಯ ಭಾಗ್ಯದ ಬೆಳಕು. ಬದುಕು ಕುಸಿಯುತ್ತಿದ್ದಾಗ ಆಧರಿಸಿದವರು. ಅಪ್ಪನ ನೆಚ್ಚಿನ ಅಭಿಮಾನಿ. ಎಲ್ಲಿಯೂ ತಂದೆಯವರನ್ನು ಬಿಟ್ಟುಕೊಡದ ಪ್ರೇಮಿ. ತಂದೆಯವರು ಶ್ಯಾಮ ಭಟ್ಟರನ್ನು ನೆನೆಯದ ದಿನಗಳಿಲ್ಲ. ಆಗಾಗ್ಗೆ ‘ನನ್ನ ಮನೆಯ ಗೋಡೆಯ ಪ್ರತಿಯೊಂದು ಕಲ್ಲು ಕೂಡಾ ಶ್ಯಾಮಣ್ಣನ ಹೆಸರು ಹೇಳುತ್ತದೆ’ ಎನ್ನುತ್ತಾರೆ. ನಮ್ಮ ಬದುಕಿನಲ್ಲಿ ಶ್ಯಾಮಣ್ಣ confidence buidling factor.
ರಾಮ ಜೋಯಿಸ್ ಬೆಳ್ಳಾರೆ - ಮನೆಯ ಸದಸ್ಯ. ಮನೆಯ ಮಗ! ನನಗೆ ರಾಮ ಮಾವ. ಬುದ್ಧಿ ಬಂದಾಗಿನಿಂದಲೂ ನಮ್ಮ ಮನೆಯ/ಕುಟುಂಬದಲ್ಲಿ ಓರ್ವ. ತಂದೆಯವರಿಗೆ ನಾವು ಮಕ್ಕಳಾಗಿ ಮಾಡಬೇಕಾದ ಮತ್ತು ಮಾಡಲಾಗದ ಸೇವೆಯನ್ನು ಒಂದಿನಿತೂ ಚ್ಯುತಿ ಬಾರದಂತೆ ಮಾಡಿದ್ದಾರೆ. ಹಗಲು ರಾತ್ರಿಯೆನ್ನದೆ, ಖರ್ಚನ್ನು ಲೆಕ್ಕಿಸದೆ, ನೂರಾರು ಬಾರಿ ತನ್ನ ವಾಹನದಲ್ಲಿ ದೂರದೂರದ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿದ್ದಾರೆ. ತನ್ನ ಅಭಿಮಾನದ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಸುಮಾರು ಇಪ್ಪತ್ತೈದು ವರುಷಗಳ ಅಭಿಮಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಗಾಢತೆಗೆ ಮಸುಕಾಗಿಲ್ಲ. ನಿಜಾರ್ಥದಲ್ಲಿ ಪದ್ಯಾಣಕ್ಕೆ, ಪದ್ಯಾಣದವರಿಗೆ ತನ್ನನ್ನು ತಾನು ಸಮರ್ಪಿಸಿಸಿಕೊಂಡ ವ್ಯಕ್ತಿತ್ವ. ಅಭಿಮಾನಿ ಪದಕ್ಕೆ ಪರ್ಯಾಯ ಶಬ್ದ - ರಾಮ ಜೋಯಿಸರು.
ತಂದೆಯವರು ಮೇಳಗಳ ತಿರುಗಾಟಗಳಲ್ಲಿ ನೊಂದ ಕಲಾವಿದರ
ಕಣ್ಣೀರು ಒರೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕಷ್ಟಕ್ಕೆ ನೆರವಾಗಿದ್ದಾರೆ. ಮಡದಿ, ಮಕ್ಕಳ
ನೆನಪನ್ನು ಮರೆತು ಸಹಾಯಹಸ್ತ ನೀಡಿದ್ದಾರೆ.
ಮಾಗಿದ ಹಣ್ಣು
ಅಭಿಮಾನಿಗಳ ಅಭಿಮಾನದ ಹೊನಲಿಗೆ ಕಲಾವಿದ ಕೊಚ್ಚಿ ಹೋಗಬಾರದಲ್ಲಾ. ಅವ್ಯಕ್ತ ಭಯವೊಂದು ಕಾಡಿಸುತ್ತಿದೆ. ಕಲಾವಿದನ ತನುಶ್ರಮ, ಆತನ ಆರೋಗ್ಯ, ನಿದ್ದೆ, ಶಾರೀರಿಕ ಸ್ವಸ್ಥತೆಗಳಾವುದೂ ಅಭಿಮಾನಿಗೆ ಬೇಕಾಗಿಲ್ಲ. ಸಹಜ ಕೂಡಾ. ಇಂತಹ ಹೊತ್ತಲ್ಲೆಲ್ಲಾ ರಂಗಪ್ರಸ್ತುತಿಗಳ ಪ್ರಕಾಶ ಕಡಿಮೆಯಾದಾಗ ಪ್ರಯೋಜನವಿಲ್ಲ ಎಂದು ತೀರ್ಪು ಕೊಡುವ ಚಾಳಿ ನೋಡುತ್ತಿದ್ದೇನೆ. ಇದಕ್ಕೆ ತಂದೆ ಬಲಿಯಾಗುತ್ತಿದ್ದಾರೋ ಎನ್ನುವ ಗುಮಾನಿಯೂ ಹೆಚ್ಚಾಗುತ್ತಿದೆ.
ಯಕ್ಷಗಾನ ರಂಗದಲ್ಲಿ ಹೋಲಿಕೆಗಳು ಸಹಜ. ಈಗಲೂ ಬಣ್ಣದ ಕುಟ್ಯಪ್ಪು, ಬಣ್ಣದ ಮಹಾಲಿಂಗ, ಅಳಿಕೆ ರಾಮಯ್ಯ ರೈ... ಹೀಗೆ ಸಂದು ಹೋದ ಹಿರಿಯ ಉದ್ಧಾಮರನ್ನು ಉದ್ಧರಿಸುತ್ತಾರೆ. ಭಾಗವತಿಕೆಯಲ್ಲೂ ಕೂಡಾ ಕಡತೋಕರು, ಕಾಳಿಂಗ ನಾವಡರು, ಮಂಡೆಚ್ಚರು... ಹೀಗೆ. ಕಲಾವಿದ ಶಾರೀರಿಕವಾಗಿ ಅಸಹಾಯಕನಾದಾಗ ಇಂತಹ ಹೋಲಿಕೆಗಳು ಅಭಿಮಾನಿಗಳೊಳಗೆ ಹರಿದಾಡುತ್ತಿರುತ್ತವೆ.
ಈ ಎಲ್ಲಾ ಕಾರಣಗಳಿಂದ ಅವರ ಮಗನಾಗಿ ಅನ್ನಿಸುತ್ತದೆ, ಇನ್ನು ತಿರುಗಾಟ ಸಾಕು! ವಯೋಸಹಜವಾಗಿ ದೇಹ ಮಾಗಿದೆ. ಶಾರೀರದ ಗಾಢತೆಯು ಇಳಿಲೆಕ್ಕದತ್ತ ವಾಲುತ್ತಿದೆ. ಮನಸ್ಸು ಹಸಿಯಾಗಿದೆ. ಹಣ್ಣು ಮಾಗಿದೆ. ರುಚಿ ನೀಡಿದೆ. ರುಚಿಯನ್ನು ಉಳಿಸಿಕೊಂಡಿದೆ. ರುಚಿಯ ಸ್ವಾದದ ನೆನಪು ಸದಾ ಇರಬೇಕಲ್ವಾ.
ಮೊದಲಿನಂತೆ ಹಾಡಲು ಕಷ್ಟ ಎನ್ನುವ ಮತಿಯೂ ತಂದೆಯವರಿಗೆ ಹೊಳೆದಿದೆ. ಮಾನಸಿಕವಾಗಿ ಈ ದಿಸೆಯಲ್ಲಿ ದೃಢ ಹೆಜ್ಜೆಯೂರಲು ಯತ್ನಿಸುತ್ತಿದ್ದಾರೆ.
ಅಮ್ಮನ ಬದುಕಿನ ಬಹುಪಾಲು, ನಮ್ಮ ಬದುಕಿನ ಪೂರ್ವಾರ್ಧಗಳಲ್ಲಿ ಅಪ್ಪನೊಂದಿಗೆ ಕಳೆಯುವ ದಿನಗಳಿಂದ ವಂಚಿತರಾದೆವು. ಅಪ್ಪನ ಪ್ರೀತಿಯ ಸ್ಪ್ಪರ್ಶಸುಖವನ್ನ್ಪು ಅನುಭವಿಸಲಿಲ್ಲ. ಒಂದರ್ಥದಲ್ಲಿ ಅನಾಥರಂತೆ ಬೆಳೆದೆವು. ಅಮ್ಮ ಆದರಿಸಿದರು.
ಬೆಳೆದು ದೊಡ್ಡವರಾಗಿದ್ದೇವೆ. ಆರ್ಥಿಕತೆಯ ಆತಂಕವಿಲ್ಲ. ಈಗ ನಮಗೆ ಬೇಕು, ಅಪ್ಪನ ಸಾಂಗತ್ಯ - ಈ ಬೇಡಿಕೆ ಯಕ್ಷರಂಗಕ್ಕೆ ಕೇಳಿಸಬಹುದೇ? ಕೇಳಿಸಿಕೊಂಡರೂ ಮಾನ್ಯ ಮಾಡೀತೇ?
ಮನೆಯಲ್ಲಿ ಅಪ್ಪನ ಇರುವಿಕೆಯನ್ನು ಅಮ್ಮ ಕಾಯುತ್ತಿದ್ದಾರೆ.
(ಇದು 2016ರ ಬರಹ)
No comments:
Post a Comment