Monday, September 7, 2020

ಪದ್ಯಾಣ - ‘ಪದಯಾನ’ - ಎಸಳು 42)


 

ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ

 ಗಣಪತಿ ನನ್ನ ಅಳಿಯ 


ಲೇ : ಬಿ.ಗೋಪಾಲಕೃಷ್ಣ ಭಟ್, ಪಾತೇರಿ

(ಪದ್ಯಾಣರ ಮಾವ)

          ಕಲ್ಮಡ್ಕ ಗ್ರಾಮದ ಗೋಳ್ತಾಜೆಯ ಕೃಷಿಕ ತಿರುಮಲೇಶ್ವರ ಭಟ್ಟರಿಗೆ ಐವರು ಚಿರಂಜೀವಿಗಳು. ಅವರಲ್ಲಿ ಗಣಪತಿ ತೃತೀಯರು. ನನ್ನ ಪುತ್ರಿ ಶೀಲಾಶಂಕರಿಯನ್ನು ಪಾಣಿಗ್ರಹಣ ಮಾಡಿ ಅಳಿಯನಾದ. ಮೇ 13, 1984ರಂದು ನಮ್ಮ ಮನೆಯಲ್ಲಿ ಅದ್ದೂರಿ ಮದುವೆ. ಆಗ ಅವನು ಗಣಪತಿ ಸುರತ್ಕಲ್ ಮೇಳದಲ್ಲಿ ಭಾಗವತ.

          ಮಗಳು ಶೀಲಾ ಹೈಸ್ಕೂಲ್ ಕಲಿಕೆಯೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉತ್ತಮ ಅಂಕ ಪಡೆದಿದ್ದಳು. ಆಕಾಶವಾಣಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವವಿದೆ. ಅವಳು ಬಾಲ್ಯದಿಂದಲೇ ಸಂಗೀತಪ್ರಿಯೆ.

          ಹೆಣ್ಣು ಮಕ್ಕಳಿಗೆ ಮನೆ ನಿಭಾವಣೆಯ ಎಲ್ಲಾ ಕೆಲಸಗಳ ಅರಿವಿರಬೇಕು. ಅದರಂತೆ ಶೀಲಾಳು ಕೃಷಿಯ ಕೆಲಸಗಳಲ್ಲಿ ಬಾಲ್ಯದಲ್ಲೇ ತೊಡಗಿಕೊಂಡವಳು. ಕಾಲಕಾಲಕ್ಕೆ ಕೃಷಿ ಕೆಲಸಗಳನ್ನು ಜತೆಗಿದ್ದು ಕಲಿತುಕೊಂಡಿದ್ದಾಳೆ. ಅವಳಿಗೆ  ಹೈನುಗಾರಿಕೆಯ ನಿರ್ವಹಣೆ, ಗೃಹಕೃತ್ಯದ ಕೆಲಸಗಳ ಸೂಕ್ಷ್ಮತೆಗಳ ಅರಿವಿದೆ. ಶಾಲಾ ಕಲಿಕೆ ಮತ್ತು ಸಂಗೀತ ಕಲಿಕೆಯೊಂದಿಗೆ ಇದನ್ನೆಲ್ಲಾ ಪ್ರೀತಿಯಿಂದ ಅರಿತಿದ್ದಾಳೆ.

          ಗೋಳ್ತಾಜೆ ಮನೆಯನ್ನು ಹೊಕ್ಕ ಶೀಲಾ ಅಧೀರಳಾಗಲಿಲ್ಲ. ತವರು ಮನೆಯ ಕಲಿಕೆಗಳೆಲ್ಲವೂ ಅವಳಿಗೆ ಗಂಡನ ಮನೆಯಲ್ಲಿ ಹೊಂದಾಣಿಕೆಗೆ ಪೂರಕವಾಯಿತು. ಯಾವುದೇ ಕೆಲಸಕ್ಕೂ ಇಲ್ಲ ಎನ್ನುವಂತೆ ಬೆಳೆಸಿದ್ದೇನೆ.

          ಗೋಳ್ತಾಜೆ ಮನೆಯ ಆತಿಥ್ಯ ಒಂದು ಮಾದರಿ. ಕಲಾವಿದರು, ನೆಂಟರು, ಊರವರು.. ಹೀಗೆ ಒಬ್ಬರಲ್ಲ ಒಬ್ಬರು ತಪ್ಪುವುದೇ ಇಲ್ಲ. ಅವರೆಲ್ಲರನ್ನೂ ಆದರಿಸುವ, ಸತ್ಕರಿಸುವ ಶೀಲಾ ಗಂಡನ ಮನೆಯ ಒಲವನ್ನು ಬಹುಬೇಗ ಗಳಿಸಿದ್ದಳು.

          ಅಳಿಯನನ್ನು ಗಣಪತಿ ಎಂದರೆ ಸಾಲದು! ಪದ್ಯಾಣ ಗಣಪತಿ ಭಟ್ ಎಂದರೇನೇ ತೂಕ! ಯಾಕೆಂದರೆ ಯಕ್ಷಗಾನ ಕಲೆಯು ಅವನನ್ನು ಸ್ವೀಕರಿಸಿದ್ದೇ ಹೀಗೆ. ಅಗಾಧವಾದ ಜನಾನುರಾಗ, ಯಕ್ಷಗಾನ ಕ್ಷೇತ್ರದ ಖ್ಯಾತಿಯನ್ನು ಪಡೆದ ಗಣಪತಿಯು ನನ್ನ ಅಳಿಯ ಎನ್ನಲು ಹೆಮ್ಮೆ. ಸ್ವ-ಶಿಸ್ತನ್ನು ರೂಢಿಸಿದ ವ್ಯಕ್ತಿತ್ವ ಅವನದು.

          ಗಣಪತಿಗೆ ಬೇಸಿಗೆಯೆಂದಿಲ್ಲ, ಮಳೆಗಾಲಯೆಂದಿಲ್ಲ.. ಮನೆಯಲ್ಲಿ ಇರುವುದೇ ಕಡಿಮೆ. ಅಭಿಮಾನಿಗಳು ಹಾರಿಸಿಕೊಂಡು ಹೋಗುತ್ತಾರೆ..! ಕಾರ್ಯಕ್ರಮದ ಒತ್ತಡ. ಯೌವನದಲ್ಲಿ ಮನೆಮಂದಿಯ ಜತೆ ಮಿಳಿತವಾದುದೇ ಕಡಿಮೆ ಎನ್ನಬಹುದು. ಇಂತಹ ಸಂದರ್ಭದಲ್ಲಿ ಮಗಳು ಶೀಲಾ ಗಂಡನ ನೆರಳಾಗಿ ಮನೆಯನ್ನು, ಮನವನ್ನು ಆಧರಿಸಿದ್ದಾಳೆ.

          ಅವನ ಕುಟುಂಬ ನಗುನಗುತ್ತಾ ಇರಲಿ.


No comments:

Post a Comment