Monday, September 28, 2020

ತಂದೆಯೇ ಗುರು....


ಲೇ :  ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು,

1991-92ರ ಆಜೂಬಾಜು. ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯು ಪದ್ಯಾಣ ಗಣಪತಿ ಭಟ್ಟರ ಪರಂಪರೆಯ ಹಾಡುಗಾರಿಕೆಯ ಧ್ವನಿಸುರುಳಿ ಹೊರತಂದಿತ್ತು. ಪದ್ಯಾಣರ ಭಾಗವತಿಕೆಯ ಮೋಹಕ ಸ್ವರವು ನನ್ನನ್ನು ಆಕರ್ಶಿಸಿತ್ತು. ಆ ಧ್ವನಿಸುರುಳಿಯನ್ನು ಕೇಳಿದಷ್ಟೂ ಉತ್ಸಾಹ ಹೆಚ್ಚಾಗುತ್ತಿತ್ತು. ಊರಿನ ಸುತ್ತಮುತ್ತ ಅವರಿದ್ದ ಮೇಳ ಟೆಂಟ್ ಊರಿದಾಗಲೆಲ್ಲಾ ಆಟಕ್ಕೆ ಖಾಯಂ ಹೋಗುತ್ತಿದ್ದೆ. ಅವರ ಪದ್ಯವನ್ನು ಅನುಭವಿಸುತ್ತಿದ್ದೆ. ಪದ್ಯಾಣರ ಹಾಡನ್ನು ಕೇಳುತ್ತಾ ಕೇಳುತ್ತಾ ಭಾಗವತಿಕೆ ಕಲಿಯಬೇಕೆಂಬ ತುಡಿತವು ಮನದ ಮೂಲೆಯಲ್ಲಿ ಬೀಜಾಂಕುರ ಮಾಡಿತ್ತು.

        1992. ಬಿಎಸ್ಸಿ ಪದವಿ ಮುಗಿಸಿದ್ದೆ. ಆ ವರುಷವೇ ತಂದೆಯವರಿಂದ ಭಾಗವತಿಕೆಗೆ ಶ್ರೀಕಾರ. ಪೂರ್ವರಂಗದ ಅಭ್ಯಾಸ. ಅಂದಂದಿನ ಪಾಠವನ್ನು ಅಂದಂದೇ ಒಪ್ಪಿಸುತ್ತಿದ್ದೆ. ಕೆಲವೇ ದಿನಗಳಲ್ಲಿ ಪ್ರಸಂಗದ ಪದ್ಯಗಳನ್ನು ಹೇಳಿಸುತ್ತಿದ್ದರು. ಹೀಗೆ ತಂದೆಯೇ ಗುರುವಾಗಿ ಯಕ್ಷಗಾನದ ಬಾಲ ಪಾಠಗಳ ಮೆಟ್ಟಿಲು ಏರುತ್ತಿದ್ದೆ. ಒಂದೆಡೆ ಪದ್ಯಾಣರ ಹಾಡಿನ ಮೋಹಕ ಗುಂಗು, ಮತ್ತೊಂದೆಡೆ ತಂದೆಯವರ ಭಾಗವತಿಕೆಯ ಸೊಗಸುಗಾರಿಕೆಗಳು ನನ್ನೊಳಗೆ ಭಾಗವತನೊಬ್ಬನನ್ನು ಹುಟ್ಟುಹಾಕಿತ್ತು.

        ಕನ್ಯಾನದ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ಪಂಚವಟಿ ಪ್ರಸಂಗದ ತಾಳಮದ್ದಳೆ. ದೇವಕಾನ ಕೃಷ್ಣ ಭಟ್ಟರ ಆಯೋಜನೆ. ಆ ತಾಳಮದ್ದಳೆಯಲ್ಲಿ ಪದ್ಯ ಹೇಳಲು ಅವಕಾಶ ಸಿಕ್ಕಿತ್ತು. ಕಿರಿಯನಾದ ನನ್ನನ್ನು ಹಲವರು ಬೆನ್ನುತಟ್ಟಿದ್ದರು. ದೇವಕಾನದವರು ಮತ್ತು ಸಬ್ಬಣಕೋಡಿ ರಾಮ ಭಟ್ಟರು ಪ್ರೋತ್ಸಾಹ ನೀಡಿದರು. ಬೆಳೆಯುವ ಎಳೆಯ ಸಿರಿಗೆ ನೀರೆರೆದು ಪೋಷಿಸಿದರು.

        ಆ ಕಾಲಘಟ್ಟದಲ್ಲಿ ತಂದೆಯವರು ಹವ್ಯಾಸಿ ಕ್ಷೇತ್ರದಲ್ಲಿ ಖ್ಯಾತರಾಗಿದ್ದರು. ದಿನವೂ ಆಟ. ನನ್ನನ್ನೂ ಜತೆಗೆ ಕರೆದೊಯ್ಯುತ್ತಿದ್ದರು. ಅವರು ಭಾಗವತಿಕೆ ಮಾಡುತ್ತಿದ್ದಾಗ ನಾನು ಚಕ್ರತಾಳ ಬಾರಿಸುತ್ತಿದ್ದೆ. ಪ್ರಸಂಗದ ನಡೆ, ತಾಳ, ಯಾವ ಸಂದರ್ಭಕ್ಕೆ ಯಾವ ರಾಗ, ರಂಗನಡೆಗಳ ಸೂಕ್ಷ್ಮಗಳನ್ನು ತಿಳಿಯುವುದಕ್ಕೆ, ಕಲಿಯುವುದಕ್ಕೆ ಸಾಧ್ಯವಾಯಿತು. ದಕ್ಷಾಧ್ವರ, ಕಂಸವಧೆ, ದೇವಿಮಹಾತ್ಮೆ, ಅತಿಕಾಯ-ಇಂದ್ರಜಿತು ಕಾಳಗ, ಕರ್ಣಪರ್ವ.. ಮೊದಲಾದ ಪ್ರಸಂಗಗಳ ಪದ್ಯಗಳ ನಡೆಗಳು, ಲಯಗಳೂ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ.

        ತಂದೆಯವರು ಪ್ರಸಂಗದ ಪದ್ಯಗಳನ್ನು ಪ್ರತ್ಯೇಕವಾಗಿ ಕೈಬರಹದಲ್ಲಿ ಬರೆಯುತ್ತಿದ್ದರು. ಅದರಲ್ಲಿ ಪ್ರಸಂಗದ ಸೂಕ್ಷ್ಮ ಮಾಹಿತಿಗಳು, ಪಾತ್ರಗಳ ನಡೆಗಳ ಮಾಹಿತಿಯಿರುತ್ತಿತ್ತು. ಇದರಿಂದಾಗಿ ಮುಂದೆ ನನಗೆ ಪ್ರಸಂಗವನ್ನು ಆಡಿಸಲು ಅವರ ಪುಸ್ತಕಗಳು ಪಠ್ಯದಂತೆ ನೆರವಾಗಿತ್ತು. ಹಿರಿಯ ಮದ್ಲೆಗಾರ್ ಪುಂಡಿಕಾಯಿ ಕೃಷ್ಣ ಭಟ್ಟರು (ದಿ.) ಮತ್ತು ಪೆರುವಾಯಿ ನಾರಾಯಣ ಭಟ್ಟರು ನನ್ನ ತಾಳ, ಲಯಗಳನ್ನು ತಿದ್ದಿದ ಗುರುಸದೃಶರು.

        ಭಾಗವತಿಕೆಯಲ್ಲಿ ಪ್ರತ್ಯೇಕವಾದ ಛಾಪನ್ನು ಊರಿದ ತಂದೆಯವರ ಖ್ಯಾತಿಗೆ ಹೆಮ್ಮೆ ಪಟ್ಟಿದ್ದೇನೆ. ಅವರಂತೆ ಅಲ್ಲದಿದ್ದರೂ ಅವರ ಹಾದಿಯಲ್ಲಿ ಯಥಾಮತ್ ಕ್ರಮಿಸುತ್ತಿದ್ದೇನೆ

 (2018ರಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರಿಗೆ ಪದ್ಯಾಣ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ಸಂದರ್ಭದಲ್ಲಿ ಅವರ ಕಲಾಯಾನದ ಕುರಿತಾದ ಚಿಕ್ಕ ಪುಸ್ತಿಕೆ ಪ್ರಕಟವಾಗಿತ್ತು. ಅದರಲ್ಲಿ ಪ್ರಕಟವಾದ ಮುರಳೀಕೃಷ್ಣರ ಲೇಖನವಿದು - ಮುರಳಿಕೃಷ್ಣರು ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಧ್ಯಾಪಕರು)

 

 

No comments:

Post a Comment