Wednesday, September 2, 2020

ಪದ್ಯಾಣ - ‘ಪದಯಾನ’ - ಎಸಳು 38

 ಪದಯಾನದಲ್ಲಿ ಸೋಲರಿಯದ ಹೆಜ್ಜೆ 3

ಲೇ : ಶೀಲಾ ಗಣಪತಿ ಭಟ್

(ಪದ್ಯಾಣರ ಪತ್ನಿ)         

         ಅವರಿಗೆ ಬ್ಯಾಂಕ್, ಕಚೇರಿ, ಕಾಲೇಜು.. ಇಲ್ಲೆಲ್ಲಾ ವ್ಯವಹಾರ ಮಾಡಲು ಅಲರ್ಜಿ.  ತನಗೆ ಇಂಗ್ಲೀಷ್ ಬರುವುದಿಲ್ಲ ಎಂಬ ಕೀಳರಿಮೆ. ಮಕ್ಕಳ ವಿದ್ಯಾಭ್ಯಾಸದ ಹೊತ್ತಿಗೆ ಶಾಲಾಕಾಲೇಜುಗಳಿಗೆ ಹೋದುದು ತೀರಾ ಕಡಿಮೆ. ಸುರತ್ಕಲ್ ಮೇಳದಲ್ಲಿರುವಾಗಲೇ ಅಭಿಮಾನಿಗಳು ಇವರನ್ನು ಸಂಮಾನಿಸುತ್ತಿದ್ದಾರೆ. ಸಂಮಾನಕ್ಕೆ ಕರೆ ಬಂದಾಗಲೆಲ್ಲಾ ನವಿರಾಗಿ ನಿರಾಕರಿಸುತ್ತಿದ್ದರು. ಮೊದಮೊದಲು ಯಾಕೆಂದು ಅರ್ಥವಾಗುತ್ತಿರಲಿಲ್ಲ. ಸಂಮಾನವಾದ ನಂತರ ಸಂಮಾನಕ್ಕೆ ಉತ್ತರಿಸಬೇಕಲ್ವಾ. ಅದಕ್ಕೆ ಮುಜುಗರಪಟ್ಟು ಸಂಮಾನವನ್ನೇ ನಿರಾಕರಿಸುತ್ತಿದ್ದರು. ನಂತರ ಮಾತನಾಡಲು ರೂಢಿಯಾಯಿತು.

          ಇಬ್ಬರು ಮಕ್ಕಳಿಗೆ ಅಪ್ಪನೆಂದರೆ ಗೌರವ. ಅವರ ಮಾತನ್ನು ಮೀರರು. ಬಾಲ್ಯದ ವಿದ್ಯಾಭ್ಯಾಸದಿಂದ ತೊಡಗಿ ಉದ್ಯೋಗದ ತನಕ ತನ್ನ ಸ್ವಂತ ಸಂಪಾದನೆಯಿಂದ ನಿಭಾಯಿಸಿದ್ದಾರೆ ಎಂದು ಮಕ್ಕಳಿಗೂ ಗೊತ್ತು. ಸೊಸೆಯನ್ನಂತೂ ಸ್ವಂತ ಮಗಳ ಹಾಗೆ ನೋಡಿಕೊಳ್ಳುತ್ತಾರೆ. ನಿದ್ದೆಗೆಟ್ಟು ಮನೆಗೆ ಬರುವ ಮಾವನಿಗೆ ವಿಶ್ರಾಂತಿಗೆ ಏನು ಬೇಕೋ ಅದೆಲ್ಲವನ್ನೂ ಸೊಸೆ ಒದಗಿಸುತ್ತಾಳೆ. ಇದು ನಮ್ಮ ಸೌಭಾಗ್ಯ.

          ಮನೆಯ ಕೆಲಸದವರೆಂದರೆ ಪ್ರೀತಿ. ಕೆಲಸದವರಿಗೂ ಪದ್ಯಾಣರೆಂದರೆ ಒಲವು. ಬಾಯಿತಪ್ಪಿ ಒಮ್ಮೆಯೂ ಜೋರು ಮಾಡಿದ್ದಿಲ್ಲ. ಈ ಸ್ವಭಾವದಿಂದ ಕೆಲಸದವರು ಶ್ರದ್ಧೆಯಿಂದ ದುಡಿಯುತ್ತಾರೆ. ತೋಟ, ಮನೆವಾರ್ತೆಗಳಲ್ಲಿ ಹೆಚ್ಚು ತಲೆಹಾಕುವುದಿಲ್ಲ. ದೈನಂದಿನ ಯಕ್ಷಗಾನ ಕಾರ್ಯಕ್ರಮದತ್ತ ಪ್ರಾಮುಖ್ಯತೆ ಕೊಡುತ್ತಾರೆ.

          ಪತ್ತನಾಜೆ ಕಳೆದು ಒಂದೆರಡು ದಿವಸ ದೇಹಾಯಾಸ ಪರಿಹಾರವಾಗುವ ತನಕ ಸದ್ದಿಲ್ಲದೆ ಇರುತ್ತಾರೆ. ಮತ್ತೆ ನೋಡಬೇಕು ಅವರ ಅವಸ್ಥೆ! ಮನೆಯಲ್ಲಿ ಒಂಟಿಯಾಗಿ ಕೂರುವುದೆಂದರೆ ಅವರಿಗೆ ಹಿಂಸೆ. ಸ್ನೇಹಿತರಿಗೆ, ಆಪ್ತರಿಗೆ ಫೋನಿಸುತ್ತಲೇ ಇರುತ್ತಾರೆ. ಮನೆಗೆ ಬರುವಂತೆ ಆಹ್ವಾನಿಸುತ್ತಾರೆ. ಮೂಡ್ ಬಂದರೆ ಅಡುಗೆಗೆ ನೆರವಾಗುತ್ತಾರೆ. ಕಾವಲಿಗೆ ದೋಸೆ ಎರೆದು ಗರಿಗರಿಯಾದ ದೋಸೆ ಮಾಡುವುದೆಂದರೆ ಪ್ರೀತಿ ಹೆಚ್ಚು.

          ಆಡಂಬರ ಬದುಕಿನಿಂದ ದೂರ. ಸಾಮಾನ್ಯರಂತೆ ಇರುವುದು ಖುಷಿ. ಉಡುವ ಉಡುಪಿನಲ್ಲಿ  ಕಾಳಜಿಯಿಲ್ಲ. ಹೇಳುವಂತಹ ನಿರೀಕ್ಷೆಯಿಲ್ಲ. ಮಕ್ಕಳಾದ ಸ್ವಸ್ತಿಕ್, ಕಾರ್ತಿಕ್ ದೊಡ್ಡವರಾದ ಬಳಿಕ ಈಗ ಸ್ವಲ್ಪ ಆಧುನಿಕತೆಗೆ ಹೊಂದಿಕೊಂಡಿದ್ದಾರೆ. ಡ್ರೆಸ್ ನೋಡಿ ನನ್ನನ್ನು ಗುರುತಿಸುವುದು ಬೇಡ ಎನ್ನುವ ನಿರ್ಲಿಪ್ತ ಭಾವ. ಹೊಸ ಹೊಸ ವಿಚಾರಗಳಲ್ಲಿ ಆಸಕ್ತ. ಚಿಕ್ಕಚಿಕ್ಕ ವಿಚಾರಗಳಲ್ಲಿ ಜಾಸ್ತಿ ಒಲವು.

          ಮನೆಯಲ್ಲಿ ಪೂರ್ತಿ ಸ್ವಾತಂತ್ರ್ಯವನ್ನು ನನಗೆ ವಹಿಸಿದ್ದಾರೆ. ವಿಶ್ವಾಸವಿರಿಸಿದ್ದಾರೆ. ಮನೆಯವರೆಲ್ಲರ  ಬೇಡಿಕೆಗಳನ್ನು ಪ್ರೀತಿಯಿಂದ ಈಡೇರಿಸಿದ್ದಾರೆ. ಊರಿನ ಯಾವ ಮನೆಗೆ ಹೋಗಲಿ, ಮಕ್ಕಳಿಂದ ಮುದುಕರ ತನಕ ಗಣಪಣ್ಣ, ಶೀಲಕ್ಕ ಎಂದು ಕರೆದಾಗ ಖುಷಿಯಾಗುತ್ತದೆ.

          ಯಕ್ಷಗಾನದ ಭಾಗವತಿಕೆಯನ್ನು ನಾನು ಗೌರವಿಸಿದ್ದೇನೆ. ಅದು ನಮ್ಮ ಪಾಲಿನ ಕಾಮಧೇನು, ಕಲ್ಪವೃಕ್ಷ. ನಮಗೆ ಎಲ್ಲವನ್ನೂ ಈ ಕಲೆ ನೀಡಿದೆ. ಯಾವುದಕ್ಕೂ ಯಾವತ್ತೂ ಕಡಿಮೆ ಮಾಡಿಲ್ಲ. ಅಭಿಮಾನಿಗಳೆಂಬ ವಿಶಾಲವಾದ ಸಂಪತ್ತನ್ನು, ಅವರೆಲ್ಲರ ಪ್ರೀತಿ, ವಿಶ್ವಾಸ, ಗೌರವವನ್ನು ಪಡೆದಿದ್ದೇವೆ. ಅಭಿಮಾನಿಗಳು ಮಾತನಾಡಿಸಿದಾಗ ಮನತುಂಬಿ ಬರುತ್ತದೆ.

          ಪದ್ಯಾಣರ ಪದಯಾನದಲ್ಲಿ ಸೋಲರಿಯದಂತೆ ಹೆಜ್ಜೆ ಊರಿದ್ದೇನೆ. ನೆರಳಂತೆ ಹಿಂಬಾಲಿಸಿದ್ದೇನೆ. ಆ ನೆರಳಿನಲ್ಲಿ ಕನಸನ್ನು ಕಟ್ಟಿಕೊಂಡಿದ್ದೇನೆ. ಅದು ನನಸಾದ ಖುಷಿಯಲ್ಲಿದ್ದೇನೆ. ಕಲಾವಿದನ ಮಡದಿಯಾಗಿ ಪಡೆದ ಭಾಗ್ಯಕ್ಕೆ ಬೆಲೆಕಟ್ಟಲಾಗದು. ಇದು ಗಂಟಲ ಮೇಲಿನ ಮಾತಲ್ಲ.


No comments:

Post a Comment