ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ
‘ಪದಯಾನ’ದಿಂದ
ಸ್ಫೂರ್ತಿ ತುಂಬುವ ಭಾಗವತ
ಲೇ : ಯು.ಗಂಗಾಧರ ಭಟ್ಟ
ಮಾನವ ಸುಖಾಪೇಕ್ಷೆ ಉಳ್ಳವ. ಆಹಾರ, ನಿದ್ರೆ, ಭಯ, ಮೈಥುನಾದಿಗಳು ಮಾನವನಿಗೂ, ಪ್ರಾಣಿಗಳಿಗೂ ಸರ್ವಸಾಮಾನ್ಯವಾಗಿವೆ. ನಾವು ಸೇವಿಸುವ ಆಹಾರ ಷಡ್ರಸೋಪೇತ ಆಗಿರಬೇಕು ಎಂದು ಮಾನವರೆಲ್ಲರೂ ಬಯಸುತ್ತಾರೆ. ಆದರೆ ಅವನ ನೆಮ್ಮದಿಗೆ ಇಷ್ಟೇ ಸಾಲುವುದಿಲ್ಲ. ಮಾನವನಲ್ಲಿ ದೇಹಕ್ಕಿಂತಲೂ ಮಿಗಿಲಾಗಿ ಮನಸ್ಸು. ಚಿತ್ತ, ಬುದ್ಧಿ, ಅಹಂಕಾರಗಳು ನೆಲೆಯೂರಿರುತ್ತವೆ. ಇವುಗಳ ನೆಮ್ಮದಿಗೆ ನವರಸಗಳಿರಬೇಕು.
ಶೃಂಗಾರ, ವೀರ, ಕರುಣ, ಹಾಸ್ಯ, ಅದ್ಭುತ, ಭಯಾನಕ, ಬೀಭತ್ಸ, ರೌದ್ರ ಹಾಗೂ ಶಾಂತ ಎಂಬ ನವರಸಗಳು ನಮ್ಮ ಮನಸ್ಸಿನ ಪಕ್ವತೆಗೆ ನೆರವಾಗುತ್ತವೆ. ಉಪನಿಷತ್ತುಗಳು ಭಗವಂತನನ್ನು ರಸೋ ವೈ ಸಃ ಎಂದು ಕೊಂಡಾಡಿವೆ. ನಮ್ಮ ಜೀವನದ ಪಯಣ ಒಂದಲ್ಲೊಂದು ದಿನ ಅಲ್ಲಿಗೆ ತಲಪಬೇಕು. ರಸಾನುಭೂತಿಯಿಂದ ಮಾನವನ ಹೃದಯಕ್ಕೆ ಒಂದು ಸಂಸ್ಕಾರವಾಗುತ್ತದೆ. ಸಮುದ್ರದಿಂದ ಆವಿಯಾಗಿ ಹೊರಟ ನೀರು ಮೋಡವಾಗಿ, ಮಳೆಯ ನೀರಾಗಿ ಭೂಮಿಯ ಮೇಲೆ ಸುರಿಯುತ್ತದೆ. ಹೀಗೆ ಸುರಿದ ನೀರು ತೊರೆಯಾಗಿ ಕಾಲುವೆಗಳಲ್ಲಿ ಹರಿದು ನದಿಯಾಗಿ ಮರಳಿ ಸಮುದ್ರವನ್ನೇ ಸೇರುತ್ತದೆ. ಅದೇ ರೀತಿ, ಆನಂದಘನನಾದ ಮಾಧವನಿಂದ ಬಂದ ಮಾನವನು ಆನಂದಾನುಭೂತಿಯನ್ನು ಹೊಂದಿ, ಮರಳಿ ಆನಂದಘನನಲ್ಲಿಯೇ ಜೊತೆ ಸೇರಬೇಕು.
ಆನಂದಾನುಭೂತಿಯಾದಾಗ ಮಾನವನ ಜೀವನದಲ್ಲಿ ಒಂದು ರೀತಿಯ ಪರಿಪಕ್ವತೆ ಬರುತ್ತದೆ. ಸುಖ-ದುಃಖಗಳು, ಲಾಭ-ನಷ್ಟಗಳು, ಕೀರ್ತಿ-ಅಪಕೀರ್ತಿಗಳು ಬಂದರೂ, ಅವನಲ್ಲಿ ಸಮತ್ವ ಬುದ್ಧಿ ಜಾಗೃತವಾಗಿರುತ್ತದೆ. ಈ ಸ್ಥಿತಿಗೆ ತಲಪಲು ಕಲೆ ಹಾಗೂ ಸಾಹಿತ್ಯಗಳು ಸಮರ್ಥ ಸಾಧನಗಳಾಗಿವೆ. ಇವುಗಳಿಂದ ಮಾನವನ ಅಂತರಂಗ ಅರಳುತ್ತದೆ.
ವೇದೋಪನಿಷತ್ತುಗಳಲ್ಲಿ ಅಂತರಂಗದ ವಿಕಾಸಕ್ಕಾಗಿ ಹತ್ತಾರು ದಾರಿಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿ ಕೆಲವು ಗಹನವಾದ ತತ್ವಗಳು. ಅವು ಶ್ರೀಸಾಮಾನ್ಯನಿಗೆ ಸುಲಭವಾಗಿ ಅರಿವಿಗೆ ಬಾರವು. ಆದರೆ ರಾಮಾಯಣ ಮಹಾಭಾರತ ಹಾಗೂ ಪುರಾಣಗಳು ವೇದೋಪನಿಷತ್ತಿನ ತತ್ವಗಳನ್ನು ಪಂಡಿತ-ಪಾಮರರಿಗೂ ಸುಲಭವಾಗಿ ವೇದ್ಯವಾಗುವಂತೆ ತಿಳಿಸುತ್ತವೆ. ಯಕ್ಷಗಾನವು ಈ ಪೌರಾಣಿಕ ಕತೆಗಳನ್ನು ನವರಸಪೂರ್ಣ ಅಭಿನಯ ಹಾಗೂ ಹಾಡುಗಾರಿಕೆಗಳ ಮೂಲಕ ಮಾನವನ ಅಂತರಂಗದಲ್ಲಿ ಪ್ರವೇಶಿಸುತ್ತದೆ. ಕಿವಿಗೆ ಇಂಪಾದ ಹಾಡು ಚೆಂಡೆ ಮದ್ದಳೆಗಳ ಝೇಂಕಾರ, ಸೊಗಸಾದ ನಾಟ್ಯ ಅಭಿನಯಗಳು, ವಿದ್ವತ್ಪೂರ್ಣವಾದ ಅರ್ಥಗಾರಿಕೆ ಇವೆಲ್ಲವೂ ಮನಸ್ಸಿಗೆ ಮುದವನ್ನುಂಟುಮಾಡುತ್ತವೆ.
ಪದ್ಯಾಣ ಮನೆತನ ಕಲಾಕಾರರ ತವರುಮನೆ. ಪದ್ಯಾಣ ಗಣಪತಿ ಭಟ್ಟರು ಒಳ್ಳೆಯ ಹಾಡುಗಾರರು.
ತನ್ನದೇ ಆಗಿರುವ ವಿಶಿಷ್ಟ ಶೈಲಿಯಿಂದ ಜನಮನವನ್ನು ರಂಜಿಸತಕ್ಕವರು. ಪಾತ್ರಾಭಿನಯ ಮಾಡಿದವರಿಗೆ ಸ್ಫೂರ್ತಿಯನ್ನು
ತುಂಬುವವರು. ಇವರ ತಮ್ಮ ಜಯರಾಮ ಭಟ್ಟರು ಒಳ್ಳೆಯ ಮೃದಂಗವಾದಕರು. ಅವರ ಚಿಕ್ಕಪ್ಪ ಶಂಕರನಾರಾಯಣ ಭಟ್ಟರು
ನುರಿತ ಚೆಂಡೆವಾದಕರು. ಗಣಪತಿ ಭಟ್ಟರ ತೀರ್ಥರೂಪರೂ ಹಾಡುತ್ತಿದ್ದರು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ
ಅವರು ಒಳ್ಳೆಯ ಮೃದಂಗವಾದಕರು. ಇವರ ಅಜ್ಜ ಪುಟ್ಟುನಾರಾಯಣ ಭಾಗವತರು ಈ ಪ್ರದೇಶದಲ್ಲೇ ಖ್ಯಾತಿಯನ್ನು
ಹೊಂದಿದ್ದವರು. ಶ್ರೀಯುತ ಗಣಪತಿ ಭಟ್ಟರಲ್ಲಿ ಅವರ ಅಜ್ಜನ ಪ್ರತಿಭೆ ಹೆಪ್ಪುಗಟ್ಟಿ ಬಂದಿದೆ. ಈಗ ಇವರ
ಷಷ್ಟ್ಯಬ್ದಿ ಉತ್ಸವವನ್ನು ನಾವು ಸಂಭ್ರಮದಿಂದ ಆಚರಿಸುತ್ತಿದ್ದೇವೆ.
(ಲೇಖಕರು ಈಚೆಗೆ ನಿಧನರಾಗಿದ್ದಾರೆ)
No comments:
Post a Comment