Wednesday, September 9, 2020

ಪದ್ಯಾಣ - ‘ಪದಯಾನ’- ಎಸಳು 44


 ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ

ಪದಗಳಿಗೆ ಭಾವ ತುಂಬುವ ನಿಸ್ಸೀಮ

ಲೇ : ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ

          ಯಕ್ಷಗಾನವೆಂಬುದು ಭಗವಂತನ ಕುರಿತು ಹೇಳುವ ದೃಶ್ಯ ಮಾಧ್ಯಮ. ಮೂಲತಃ ಭಗವಂತನಿಗೆ ಸಂಬಂಧಪಟ್ಟದ್ದು ಈ ಯಕ್ಷಗಾನ. ಇದರ ನಿರ್ದೇಶಕನನ್ನು ‘ಭಾಗವತ’ ಅನ್ನುತ್ತಾರೆ.  ಅವನ ನೇತೃತ್ವದ ತಂಡಕ್ಕೆ ‘ಮೇಳ’ ಅನ್ನುತ್ತಾರೆ. ಒಟ್ಟಾರೆ ಇದರಲ್ಲಿರುವ ಎಲ್ಲರೂ ವೇಷಧಾರಿಗಳೆಂಬ ಕಲ್ಪನೆಯಲ್ಲಿ ಈ ಭಾಗವತನನ್ನೇ ಮೊದಲನೇ ವೇಷಧಾರಿ ಎಂದು ಕಲ್ಪಿಸಿ, ಪ್ರಧಾನ ವೇಷಧಾರಿಯನ್ನು ಎರಡನೇ ವೇಷಧಾರಿ ಅನ್ನುವುದು ರೂಢಿ. ಅಷ್ಟು ಯೋಗ್ಯತೆ ಇದ್ದವನನ್ನು ಮಾತ್ರ ಭಾಗವತ ಅನ್ನಬೇಕು. ನಾನು ಕಂಡ ಅಂತಹ ಬೆರಳೆಣಿಕೆಯ ಭಾಗವತರಲ್ಲಿ ಪದ್ಯಾಣ ಗಣಪತಿ ಭಟ್ಟರು ಒಬ್ಬರು. 

          ಯಕ್ಷಗಾನ ಭಾಗವತಿಕೆ ಅನ್ನುವುದು ಶ್ರವ್ಯವಾಗಿ ಸಂಗೀತದ ಒಂದು ಪ್ರಕಾರವೇ ಹೌದು. ಆದರೆ ಇಲ್ಲಿ ಪದ್ಯಗಳ ಗಾತ್ರ ಅತೀ ಚಿಕ್ಕದು. ಆ ಪದ್ಯಗಳು ಪ್ರಸಂಗವನ್ನು ಮುನ್ನಡೆಸುವವುಗಳು. ಆದ್ದರಿಂದ ಹೆಚ್ಚು ಉದ್ದವಾಗಿ ರಾಗದ ವಿಸ್ತಾರಕ್ಕೆ ಅವಕಾಶವಿಲ್ಲ. ಇದ್ದ ಪದ್ಯಕ್ಕೆ ಸರಿಯಾಗಿಯೇ ರಾಗದ ವಿಸ್ತಾರವನ್ನು ಮಾಡೋಣವೇ? ಮುಮ್ಮೇಳದ ಕಲಾವಿದನಿಗೆ ಭಾವದ ಅಭಿವ್ಯಕ್ತಿಗೆ ಸಾಹಿತ್ಯವಿಲ್ಲದೆ ಆಲಾಪನೆ ಇತ್ಯಾದಿಗಳು ತೊಡಕಾಗುತ್ತದೆ. ಹಾಗಾಗಿ ಪದ್ಯಗಳನ್ನು ಚುಟುಕಾಗಿ ಮುಗಿಸುವ ತುರ್ತು ಭಾಗವತನಿಗೆ ಇದೆ. ಹಾಗೆಂದು ಅದರಲ್ಲಿ ಭಾವನೆಯು ಪೂರ್ಣವಾಗಿಯೇ ತುಂಬಬೇಕಾದ ಅನಿವಾರ್ಯತೆಯೂ ಇದೆ. ಹಾಗಾಗಿ ಆ ಭಾವನೆಗೆ ಸರಿಯಾದ ರಾಗ ಜೋಡಿಸಬೇಕು.

          ಅದು ಪ್ರಾಯೋಗಕವಾಗಿ ಇರಬೇಕಾದರೆ ಭಾವವನ್ನು ತುಂಬುವಂತೆ ಪದಗಳ ಸಾಹಿತ್ಯದ ಕಡೆಗೆ ಗಮನ ಇರಬೇಕು. ಆ ಭಾವನೆಯನ್ನು ತರುವಂತೆಯೇ ಸ್ವರಗಳ ಏರಿಳಿತ ಬೇಕು. ಅದಕ್ಕೆ ಛಂದಸ್ಸಿನ ಇತಿಮಿತಿಯ ತಡೆ ಬೇರೆ ಇದೆ. ಅರ್ಥವಾಗುವಂತೆ ಸಂಗೀತ ಸ್ಪಷ್ಟ ಹಾಗೂ ಸ್ಫುಟವಾಗಿರಬೇಕು. ಅದಕ್ಕೆ ಎದುರಿನ ಮುಮ್ಮೇಳ ಕಲಾವಿದ ಕುಣಿಯಬೇಕು; ಕುಣಿಯುವಂತೆ ಮಾಡಬೇಕು. ಕೆಲವೊಮ್ಮೆ ಕುಣಿಯುವ ಸೂಚನೆಗಾಗಿ ಕೆಲವೊಂದು ಜಾಗಟೆಯ ಪೆಟ್ಟು ಹೊರಬರಬೇಕು. ಆ ಭಾಗ ಎಷ್ಟು ಎಳೆದಲ್ಲಿ ನಿಗದಿತ ಅವಧಿಗೆ ಪ್ರಸಂಗ ಮುಗಿಯಬಹುದೆಂಬ ಊಹಾಪೋಹ ಪಟ್ಟು ಅವನಿಗಿರಬೇಕು.

          ನಂತರದ ಪದ್ಯಕ್ಕೆ ಬೇಕಾದ ಕಲಾವಿದ ನೇಪಥ್ಯದಲ್ಲಿ ಸನ್ನದ್ಧನಾಗಿದ್ದಾನೆಯೇ ನೋಡಬೇಕು. ಹಾಗಿಲ್ಲದಿದ್ದರೆ ರಂಗದಲ್ಲಿರುವವನನ್ನು ಸ್ವಲ್ಪ ಹೆಚ್ಚು ಕುಣಿಸಬೇಕು. ಒಂದು ಪದ್ಯ ಹೆಚ್ಚು ಕೊಡಬೇಕು. ಬೇಗ ಮುಗಿಯಬೇಕಾದರೆ ಪದ್ಯ ಕಡಿತವಾಗಬೇಕು. ಇದರ ಸೂಚನೆಗಾಗಿ ಜಾಗಟೆಗೆ ಒಂದು ಘಾತ ಪೆಟ್ಟು ಹೊಡೆಯಬೇಕು. ಈ ಸಂದರ್ಭದಲ್ಲಿ ಹಿಮ್ಮೇಳದ ಸಹ ಕಲಾವಿದ ತನ್ನನ್ನು ಅನುಸರಿಸುವಂತೆ ನಿರ್ದೇಶಿಸಬೇಕು, ಪ್ರೋತ್ಸಾಹಿಸಬೇಕು, ಅವನೂ ಮಿಂಚುವಂತೆ ನೋಡಬೇಕು. ಹೀಗೆ ಪಟ್ಟಿ ಮಾಡಹೊರಟರೆ ಭಾಗವತನಾಗುವುದು ಎಷ್ಟು ಕಷ್ಟ ಎಂದು ತಿಳಿಯುತ್ತದೆ. ಇದಲ್ಲದೆ ಮೇಳದ ಲಭ್ಯ ಕಲಾವಿದರನ್ನು ಉಪಯೋಗಿಸಿಕೊಂಡೇ ಪ್ರಸಂಗಗಳ ವೇಷಗಳ ಹಂಚುವಿಕೆಯ ಸೂತ್ರಧಾರಿ ಭಾಗವತನೇ. ಹೀಗೆ ತನಗೆ ಸ್ಫುರಣೆಯಾದ ರಾಗದಲ್ಲಿ ರಸಗಳನ್ನು ರಂಗಸ್ಥಳದಲ್ಲಿ ತುಂಬುವಂತೆ ಮಾಡುವ ಪೂರ್ಣ ಹೊಣೆಗಾರಿಕೆ ಭಾಗವತನದ್ದು. ಅಂತಹ ಭಾಗವತರಲ್ಲಿ ಪದ್ಯಾಣ ಒಬ್ಬರು.

          ಶೇಣಿ ಗೋಪಾಲಕೃಷ್ಣ ಭಟ್ಟರ ಭೀಷ್ಮಾರ್ಜುನದ ಧ್ವನಿಸುರುಳಿಯಲ್ಲಿ ಭೀಷ್ಮನಿಗೆ ಮಾತ್ರ ಧ್ವನಿಯಾಗಿ ‘ಕುರುಕಲಾನ್ವಯ ತಿಲಕ ಬಾ ಬಾ..’ ಅನ್ನುವ ಪದ್ಯದ ಅವರ ಹಾಡು ನನ್ನ ಮನೋಮಂದಿರದಲ್ಲಿ ಇವರ ಹೆಸರನ್ನು ಚಿರಸ್ಥಾಯಿಯನ್ನಾಗಿಸಿತು. (ಆ ಧ್ವನಿಸುರುಳಿ ಈಗ ಅಲಭ್ಯ) ಅಂದಿನಿಂದ ಇಂದಿನ ವರೆಗೆ ಪದ್ಯಾಣದವರ ಪದಯಾನದ ಆರಾಧಕನಾಗಿ, ತನ್ಮುಖೇನ ಅಲೌಕಿಕ ಪ್ರಪಂಚದ ಸೊಬಗನ್ನು ಮನೋಲೋಕದಲ್ಲೇ ಕಾಣುವವನಾಗಿ ಸಂತೋಷಪಟ್ಟವನು ನಾನು. ಯಕ್ಷಗಾನದ ಅಬ್ಬೆಯ ಸೇವಕನಾದ್ದರಿಂದ ಅವರು ನನ್ನಲ್ಲಿ ಭಾವುಕರಾಗಿ ಬಳಿ ಬಂದು ಮಾತಿಗೆ ತೊಡಗುವಾಗ ಸ್ವರ್ಗ ಮೂರೇ ಗೇಣು ಅಂದುಕೊಂಡಿದ್ದೇನೆ.

          ಹಿರಿಯರಾದ ಶೇಣಿ ಗೋಪಾಲಕೃಷ್ಣ ಭಟ್ಟರ ನೆಚ್ಚಿನ ಭಾಗವತರೆಂದು ತನ್ನ ಎಳವೆಯಲ್ಲೇ ಅನ್ನಿಸಿಕೊಂಡವರು. ಸುಳ್ಯದ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯಿಂದ ಹೊರಬಂದ ಇವರ ಧ್ವನಿಸರುಳಿಯು ಇವರ ಪ್ರತಿಭೆಯನ್ನು ಎಳವೆಯಲ್ಲೇ ಕಂಡು ಎಲ್ಲರನ್ನೂ ದಿಗ್ಭ್ರಮೆಗೊಳಿಸುವಂತೆ ಮಾಡಿತ್ತು. ನನ್ನ ಮನೆಯಲ್ಲಿ ಎಷ್ಟು ಬಾರಿ ಈ ಧ್ವನಿಸುರುಳಿಯು ಪುನರಾವರ್ತನೆ ಆಗಿತ್ತೋ ನಾನರಿಯೆ. ಅಷ್ಟು ಅಚ್ಚುಕಟ್ಟಾಗಿ ಸಾಂದರ್ಭಿಕ ರಾಗಗಳನ್ನು ಮತ್ತು ಪದ್ಯದ ಪದಗಳ ಭಾವವನ್ನು ತುಂಬಿಸುವಲ್ಲಿ ಇವರು ನಿಸ್ಸೀಮರೆನಿಸಿದವರು.

          ವಿದ್ಯೆ ಸಾಕಾರಗೊಳ್ಳುವುದು ಅದರ ಪ್ರದರ್ಶನದಿಂದ ಅನ್ನುವುದು ಲೌಕಿಕವಾಗಿ ಎಷ್ಟು ಸತ್ಯವೋ, ಅದು ಮುಂದೆ ಪ್ರವಹಿಸುವಲ್ಲಿ ಗುರುವಾಗಿದ್ದುಕೊಂಡು ಶಿಷ್ಯನನ್ನು ಸಿದ್ಧಪಡಿಸುವುದು ಆಮುಷ್ಮಿಕವಾಗಿ ಅಷ್ಟೇ ಅಗತ್ಯ ಕೂಡಾ. ರವಿಚಂದ್ರ ಕನ್ನಡಿಕಟ್ಟೆಯಂತಹ ಅನೇಕ ದಕ್ಷ ಶಿಷ್ಯಸಂದೋಹದಿಂದಾಗಿ ತನ್ನ ಆ ಸಾಧನೆಯನ್ನೂ ಮಾಡುವ ಮೂಲಕ ಗುರುಋಣವನ್ನೂ ಪರಿಹರಿಸಿಕೊಂಡವರು ಪದ್ಯಾಣ ಭಾಗವತರು.

          ಪದ್ಯಾಣರು ಕಂಠದಿಂದಲೂ, ಹೃದಯದಿಂದಲೂ ಗೌರವನೀಯ. ಆದ್ದರಿಂದಲೇ ಅವರ ಭಾಗವತಿಕೆಯ ಪದಯಾನವು ಒಂದರ್ಥದಲ್ಲಿ ಬದುಕಿನ ಅರುವತ್ತು ವರುಷಗಳ ಪದಯಾನದ ಆಚರಣೆಯಾಗಿ, ಮನೆಮಂದಿಯಿಂದ ಆಚರಿಸಹೊರಟಾಗ ಅದುವೇ ಅವರ ಅಪಾರ ಶಿಷ್ಯರ, ಅಭಿಮಾನಿಗಳ ಹಬ್ಬವಾಗಿ ಪರಣಮಿಸಿತು.

          ಪದ್ಯಾಣ ಗಣಪತಿ ಭಟ್ಟರ ಪದಯಾನವು ಹೀಗೆಯೇ ಮಂದುವರಿಯಲಿ. ಅವರ ಜೀವನದ ಪದಯಾನವೂ ಹಾಗೆಯೇ ಸುಸೂತ್ರವಾಗಿ ಸಾಗಲಿ. ಇದರಿಂದ ದೈಹಿಕ, ಆರ್ಥಿಕ ಲಾಭ ಅವರು ಪಡೆಯುವ ಜತೆಯಲ್ಲೇ ನಾವು ರಸೈಕಬೋಜಿಗಳಾಗಿ ನಳಪಾಕಕ್ಕೆ ಭಾಜನರಾಗುವಂತೆ ಆಗಲಿ ಎಂದು ಯಕ್ಷಗಾನದ ಆರಾಧ್ಯಮೂರ್ತಿಯಾದ ನನ್ನವ್ವೆ ಕಟೀಲಿನ ಭ್ರಮರಾಂಬಿಕೆಯಲ್ಲಿ ಪ್ರಾರ್ಥಿಸಿ ಹಾರೈಸುತ್ತೇನೆ.

(ಲೇಖಕರು ಪದ್ಯಾಣ ಅಭಿನಂದನಾ ಸಮಿತಿಯ ಅಧ್ಯಕ್ಷರಾಗಿದ್ದರು)


No comments:

Post a Comment