Friday, June 22, 2018

ಸ್ಪರ್ಧೆಯು ಅಂತಿಮವಲ್ಲ, ಅದು ಆರಂಭ



(ಚಿತ್ರಗಳು : ರಾಮ್ನರೇಶ್ ಮಂಚಿ)
        
           ಬಂಟ್ವಾಳ ತಾಲೂಕಿನ ಮಂಚಿ-ಕುಕ್ಕಾಜೆಯ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟಿಗೆ ದಶಮಾನದ ಸಂಭ್ರಮ. ಖುಷಿಯನ್ನು 2017 ದಶಂಬರ 31ರಂದು ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆಯ ಆಯೋಜನೆಯ ಮೂಲಕ ಹಂಚಿಕೊಂಡಿದೆ. ಬಂಟ್ವಾಳದ ಎಸ್.ವಿ.ಎಸ್.ಕಾಲೇಜು, ಸುರತ್ಕಲ್ಲಿನ ಗೋವಿಂದದಾಸ ಕಾಲೇಜು, ಮಂಗಳೂರು ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಜಿರೆ ಎಸ್.ಡಿ.ಎಂ. ಕಾಲೇಜು, ಮೂಡುಬಿದಿರೆಯ ಆಳ್ವಾಸ್ ಕಾಲೇಜುಗಳು ಸ್ಪರ್ಧೆಯ ತಂಡಗಳು. ಎರಡನೆಯ ಮತ್ತು ಕೊನೆಯ ತಂಡವುಸುದರ್ಶನ ವಿಜಯಪ್ರಸಂಗ; ಮಿಕ್ಕಂತೆನರಕಾಸುರ ಮೋಕ್ಷ, ಬಭ್ರುವಾಹನ ಕಾಳಗ, ತರಣಿಸೇನ ಕಾಳಗಆಖ್ಯಾನಗಳನ್ನು ಪ್ರದರ್ಶಿಸಿದ್ದುವು.
                ಸ್ಪರ್ಧೆ ಅಂದ ಮೇಲೆ ಬಹುಮಾನ, ಪ್ರಶಸ್ತಿ, ಸಂಮಾನಗಳು ಇರುವಂತಾದ್ದೇ. ಎಲ್ಲಾ ತಂಡಗಳು ಒಂದಲ್ಲ ಒಂದು ಅಂಶಗಳಲ್ಲಿ ಪ್ರಥಮವೇ! ವಿದ್ಯಾರ್ಥಿ ದಿಸೆಯಲ್ಲಿ ಪಾಠಗಳ ಹೊರತಾದ ಕಲೆಯ ಕಲಿಕೆಗಳು ವಿದ್ಯಾರ್ಥಿ ಜೀವನಕ್ಕೆ ಸುಭಗತನವನ್ನು ತರುತ್ತದೆ.  ಕಲಾವಿದರಾಗಿ ರೂಪುಗೊಳ್ಳಲು ಕಾಲೇಜು ಮಟ್ಟದ ತಂಡಗಳು ಸಹಕಾರಿ. ಇನ್ನೂ ಕೆಲವರು ಒಳ್ಳೆಯ ಪ್ರೇಕ್ಷಕರಾಗಿ ಹೊರಹೊಮ್ಮಲು ಅಡಿಗಟ್ಟು. ಕಲಿಕೆಯೊಂದಿಗೆ ಕಲೆಯೂ ಮಿಳಿತಗೊಂಡರೆ ಕಲಿಕೆಗೆ ಹೊಳಪು.
                ಎಸ್.ವಿ.ಎಸ್.ಕಾಲೇಜಿನ ನರಕಾಸುರ ಮೋಕ್ಷ ಪ್ರಸಂಗದಶ್ರೀ ಕೃಷ್ಣಮತ್ತು ತನ್ನ ಪಾತ್ರದ ಕಥಾಹಂದರವನ್ನು ಅರ್ಥದಲ್ಲಿ ಪೂರ್ತಿಯಾಗಿ ಹರಡಿಸಿದನರಕಾಸುರಪಾತ್ರದ ಅರ್ಥಗಾರಿಕೆ, ಅಲ್ಲದೆ ಬಣ್ಣದ ವೇಷವು ಅಪೇಕ್ಷಿಸುವ ನಿಧಾನ ಲಯದ ಹೆಜ್ಜೆಗಳು ಗಮನೀಯ. ಸಮಯದ ಮಿತಿಯೊಳಗೆ ಮುಗಿಸಲು  ಪ್ರದರ್ಶನಕ್ಕೆ ಸ್ವಲ್ಪ ಎಡಿಟಿಂಗ್ ಬೇಕಿತ್ತು. ಗೋವಿಂದದಾಸ್ ಕಾಲೇಜಿನಸುದರ್ಶನ ವಿಜಯಪ್ರಸಂಗದ ವಿಷ್ಣು ಮತ್ತು ಲಕ್ಷ್ಮೀ ಪಾತ್ರಗಳ ಹೊಂದಾಣಿಕೆ ಹೃದ್ಯ. ಲಕ್ಷ್ಮೀ ಪಾತ್ರದಲ್ಲಿ ಸಹಜ ಭಾವಾಭಿವ್ಯಕ್ತಿ, ಪಾತ್ರ ಬಯಸುವ ಮುಗ್ಧತೆ, ರಂಗಚಲನೆಯ ಕ್ಷಿಪ್ರತೆಯಿತ್ತು. 
                ಮಂಗಳೂರು ಸರಕಾರಿ ಕಾಲೇಜಿನ ತಂಡದಬಬ್ರುವಾಹನಪ್ರಸಂಗದಲ್ಲಿಅರ್ಜುನ ಪಾತ್ರದ ರಂಗಾಳ್ತನ ಮತ್ತು ತೆರೆಕಲಾಸು ಚೆನ್ನಾಗಿತ್ತು. ಉಜಿರೆ ಎಸ್.ಡಿ.ಎಂ.ಕಾಲೇಜಿನತರಣಿಸೇನ ಕಾಳಗಪ್ರಸಂಗದ ರಾಮ ಮತ್ತು ಲಕ್ಷ್ಮಣರ ಸಭಾಕಲಾಸು, ತೆರೆಕಲಾಸಿನಲ್ಲಿ ವೃತ್ತಿಪರತೆಯ ಛಾಪಿತ್ತು. ಬಿಡ್ತಿಗೆ, ಮುಕ್ತಾಯಗಳ ಸ್ಪಷ್ಟ ಹೆಜ್ಜೆಗಳಿದ್ದುವು. ತರಣಿಸೇನನನ್ನು ಕಳುಹಿಸಿಕೊಡುವಸರಮೆಯಲ್ಲಿ ನಿಜಾರ್ಥದ ತಾಯ್ತನವಿತ್ತು. ಆಳ್ವಾಸ್ ತಂಡದ ವಿಷ್ಣು, ಸುದರ್ಶನ, ಲಕ್ಷ್ಮೀ, ಶತ್ರುಪ್ರಸೂದನ ಪಾತ್ರಗಳು ಪ್ರಸಂಗವನ್ನು ಗೆಲ್ಲಿಸಿವೆ.
                ಮಿಕ್ಕುಳಿದ ಪಾತ್ರಗಳ ಪ್ರಸ್ತುತಿಗಳು ಚೆನ್ನಾಗಿದ್ದುವು. ಇನ್ನಷ್ಟು ಸ್ಪರ್ಧಾ ಮನೋಭಾವ ಬೇಕಿತ್ತು. ಹಾಸ್ಯಗಳಿಗೆ ಪ್ರಸಂಗಗಳಲ್ಲಿ ಹೇಳುವಂತಹ ಅವಕಾಶಗಳು ಇಲ್ಲದಿದ್ದರೂ ಇದ್ದ ಅವಕಾಶಗಳಲ್ಲಿ ಇನ್ನೂ ಚೆನ್ನಾದ ನಿರ್ವಹಣೆ ಮಾಡಬಹುದಿತ್ತು. ವೇಷಭೂಷಣಗಳ ಹೊಂದಾಣಿಕೆಯ ಸಮಸ್ಯೆಯು ಒಂದು ತಂಡದ ಪ್ರದರ್ಶನದ ವೇಗವನ್ನು ಹೃಸ್ವಗೊಳಿಸಿತು. ಇಂತಹ ಸಂದರ್ಭದಲ್ಲಿ ಸಹಜವಾಗಿ ತಂಡದ ಹುಮ್ಮಸ್ಸು ಕಮರುತ್ತದೆ. ಒಟ್ಟಿನಲ್ಲಿ ಐದೂ ತಂಡಗಳ ಶ್ರಮಕ್ಕೆ ಶರಣು. ಎಲ್ಲಾ ಕಲಾವಿದರ ಎಳೆಯ ವಯಸ್ಸಿನ ಯಕ್ಷ ಹೆಜ್ಜೆಗೆ ಅಭಿನಂದನೆಗಳು. ಸ್ಪರ್ಧೆಯಲ್ಲಿ ಭಾಗವಹಿಸುವುದು ಅಂತಿಮವಲ್ಲ, ಅದು ಆರಂಭ ಎನ್ನುವ ಮನಃಸ್ಥಿತಿಯನ್ನು ಎಲ್ಲರೂ ರೂಢಿಸಿಕೊಂಡರೆ ಯಕ್ಷಗಾನದಲ್ಲಿ ಅಭಿವೃದ್ಧಿಯ ಹೆಜ್ಜೆಗಳನ್ನು ಊರಬಹುದು.
                ಬಹುಕಾಲದಿಂದ ಯಕ್ಷಗಾನದ ಸ್ಪರ್ಧೆಗಳನ್ನು ಪ್ರೇಕ್ಷಕನಾಗಿ ನೋಡುತ್ತಾ ಬಂದಿದ್ದೇನೆ. ಸ್ಪರ್ಧೆ ಎಂದಾಕ್ಷಣ ಅದಕ್ಕೊಂದು ಸಮಯದ ಮಿತಿ ಇದ್ದೇ ಇರುತ್ತದೆ. ಒಂದು ಅಥವಾ ಒಂದೂವರೆ ಗಂಟೆಯಲ್ಲಿ ಕಥಾನಕವನ್ನು ಯಕ್ಷಗಾನೀಯ ಚೌಕಟ್ಟಿನೊಳಗೆ ಅಂದವಾಗಿ ಬಿಂಬಿಸುವುದು ತ್ರಾಸದ ಕೆಲಸ. ಪರಂಪರೆ ಎಂದು ಹೇಳಲ್ಪಡುವ ಎಲ್ಲಾ ರಂಗವಿನ್ಯಾಸಗಳನ್ನು ತುರುಕಿ ಕಥೆಯನ್ನು ಪ್ರಸ್ತುತಪಡಿಸುವುದು ಗ್ರಹಿಸಿದಷ್ಟು ಸುಲಭವಲ್ಲ.
                ಇಂದು ಸಭಾಕಲಾಸು, ತೆರೆಕಲಾಸು ವಿನ್ಯಾಸಗಳು ರಂಗದಲ್ಲಿ ಉಳಿದುಕೊಂಡಿದ್ದರೆ ಯಕ್ಷಗಾನ ಸ್ಪರ್ಧೆಗಳು ಮತ್ತು ಅಪರೂಪಕ್ಕೊಮ್ಮೆ ಆಯೋಜಿಸಲ್ಪಡುವ ಕಮ್ಮಟ, ಕಾರ್ಯಾಗಾರಗಳಲ್ಲಿ ಮಾತ್ರ! ಇವುಗಳಲ್ಲಿದೆ, ಪಾತ್ರಗಳ ಸಹಜ ಸೌಂದರ್ಯಗಳ ಪ್ರತಿಫಲನ. ಕಾಲಮಿತಿಯು ಇಂತಹ ಹಳೆಯ ರಂಗಕ್ರಮಗಳನ್ನು ನುಂಗಿವೆ! ಹವ್ಯಾಸಿ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಾದರೂ ಉಳಿದುಕೊಂಡಿದೆಯಲ್ಲಾ, ಅದೊಂದೇ ಸಮಾಧಾನ.
                ಹವ್ಯಾಸಿ ರಂಗಭೂಮಿಯು ವೃತ್ತಿರಂಗಭೂಮಿಗಿಂತ ಭಿನ್ನವಾಗಿರುವುದರಲ್ಲಿ ಅದರ ಸೌಂದರ್ಯ. ಇಂದು ಬಹುತೇಕ ಹವ್ಯಾಸಿ ರಂಗಭೂಮಿಯು ವೃತ್ತಿ ರಂಗಭೂಮಿಯ ಜೆರಾಕ್ಸ್ ಆಗಿದೆ. ವೃತ್ತಿ ಕ್ಷೇತ್ರದ ರಂಗಾಭಿವ್ಯಕ್ತಿಗಳಲ್ಲಿ ಬಿಂದು, ವಿಸರ್ಗ ಸಹಿತ ಅನುಕರಿಸುವುದೇ ಪಠ್ಯ ಎಂದು ಸ್ವೀಕರಿಸಿದಂತಿದೆ. ಎಷ್ಟೋ ಬಾರಿ ಕಲಾವಿದರ ರಂಗಚಲನೆಯ ದೋಷಗಳು, ನೃತ್ಯ ವಿಕಾರಗಳು ಹವ್ಯಾಸಿಗಳಲ್ಲಿ ಆಕಾರ ಪಡೆಯುತ್ತವೆ! ಇದರಿಂದಾಗಿ ಸ್ವಂತಿಕೆಯ ಕಾಲಲ್ಲಿ ನಿಲ್ಲಲು ಹವ್ಯಾಸಿಗಳು ಒದ್ದಾಡುವುದನ್ನು ಕಾಣುತ್ತೇವೆ.
                ಅರ್ಥಗಾರಿಕೆಯಲ್ಲಿ ಅನುಸರಣೆ ಮಾಡಬಹುದು. ಯಥಾವತ್ ಅನುಕರಣೆ ಮಾಡಿದರೆ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ. ಹಾಸ್ಯ ಪಾತ್ರಗಳು ಅನುಕರಣೆಯ ಚಾಳಿಯಿಂದ ಬಳಲುತ್ತಿವೆ. ವೃತ್ತಿ ರಂಗಭೂಮಿಯ ಛಾಯೆಯಿಂದ ದೂರ ನಿಂತು ಹಾಸ್ಯಗಳನ್ನು ವಿನ್ಯಾಸಿಸಬಹುದು. ಉದಾ: ದೇವದೂತ. ಎಷ್ಟೋ ಬಾರಿ ವೃತ್ತಿ ರಂಗದಲ್ಲೂ ದೇವದೂತನ ಪಾತ್ರವು ಹಾಸ್ಯಾಸ್ಪದವಾಗುತ್ತದೆ. ಇದನ್ನೇ ಅನುಕರಿಸಿದರೆ? ಹಾಸ್ಯ ಎನ್ನುವುದು ಸ್ವ-ಭಾವವಾಗಿ ಹೊರಹೊಮ್ಮಿದಾಗ ಹಾಸ್ಯ ರಸದ ಸೃಷ್ಟಿ. ಹಾಸ್ಯವೇ ಸ್ಫುರಿಸದಿದ್ದರೆ ಒಂದು ಪಾತ್ರವಾಗಿ ರಂಗದಲ್ಲಿ ಕಾಣುತ್ತದಷ್ಟೇ. ಹವ್ಯಾಸಿ ರಂಗಭೂಮಿಯಲ್ಲಿ ಹಾಸ್ಯ ಕಲಾವಿದರು ರೂಪುಗೊಳ್ಳುತ್ತಿಲ್ಲ. ಅಷ್ಟು ಸುಲಭವೂ ಇಲ್ಲ. 
                ಪುಂಡುವೇಷಗಳಲ್ಲಿ ಬಡಗು ತಿಟ್ಟಿನ ನೃತ್ಯ, ಭರತನಾಟ್ಯದ ಹೆಜ್ಜೆಗಳು, ವೃತ್ತಿ ಕಲಾವಿದರ ಹೊಸ ಆವಿಷ್ಕಾರಗಳ ರಂಗಚಲನೆಗಳು ಮತ್ತು ಯಾವ ರಂಗಪ್ರಕಾರಕ್ಕೂ ಹೊಂದದ - ಕಲಾವಿದ ಕುಣಿದದ್ದೇ ಹೆಜ್ಜೆಯಾಗಿ ಮಾರ್ಪಡುವ ವಿನ್ಯಾಸಗಳನ್ನು ಕಾಣುತ್ತೇವೆ. ಶಿಳ್ಳೆ, ಚಪ್ಪಾಳೆಗಳು ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡಿದರೂ ಇಂತಹ ನೃತ್ಯವಿನ್ಯಾಸಗಳ ಔಚಿತ್ಯದ ಪ್ರಸ್ತುತಗಳು ಕಣ್ಮುಂದೆ ನಿಲ್ಲುತ್ತವೆ. ಯಕ್ಷಗಾನಕ್ಕೆ ಅದರದ್ದೇ ಆದ ರಂಗಗತಿಯಿದೆ ಎನ್ನುವುದನ್ನು ವರ್ತಮಾನದ ವೃತ್ತಿ ಮತ್ತು ವೃತ್ತಿಯನ್ನು ಅನುಕರಿಸುವ ಹವ್ಯಾಸಿ ಪಾತ್ರಧಾರಿಗಳು ಮರೆತಂತಿದೆ! ಆಯುಧಗಳ ಸಮರ್ಪಕ ಬಳಕೆಯತ್ತಲೂ ಎಚ್ಚರ ವಹಿಸಬೇಕು.
                ಸ್ಪರ್ಧಾ ತಂಡಗಳಲ್ಲಿ ಮಾತ್ರ ಪಾತ್ರಗಳ ಹೊರತಾದ ರಂಗಪ್ರವೇಶಿಸುವ ವ್ಯಕ್ತಿಗಳು ಸಮವಸ್ತ್ರದಲ್ಲಿರುವುದು  ಶಿಸ್ತಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಎಷ್ಟೋ ಕಡೆ ಪ್ಯಾಂಟ್ ಹಾಕಿದ, ಬಣ್ಣದ ಕಂಬಾಯಿ ಉಟ್ಟವರು ತೆರೆ ಹಿಡಿಯಲು ರಂಗಕ್ಕೆ ಬರುವುದು, ರಾಳ ಹಿಡಿಯುವುದು ರಂಗ ಸೌಂದರ್ಯಕ್ಕೆ ಬಾಧಕ. ಬದಲಾದ ಕಾಲಘಟ್ಟದಲ್ಲಿ ಎಲ್ಲೆಲ್ಲಾ ರಂಗಸೌಂದರ್ಯವನ್ನು ಸೆರೆಹಿಡಿಯಲು ಸಾಧ್ಯವೋ ಅಲ್ಲೆಲ್ಲಾ ಚೌಕಟ್ಟಿನೊಳಗೆ ಹೊಸ ವಿನ್ಯಾಸಗಳನ್ನು ಪೋಣಿಸಬಹುದು. ಆದರೆ ಚೌಕಟ್ಟಿನ ಹೊರತಾದ ಯಾವುದೇ ಸೇರ್ಪಡೆ, ಆವಿಷ್ಕಾರಗಳನ್ನು ರಂಗವು ಸ್ವೀಕರಿಸುವುದಿಲ್ಲ ಎನ್ನುವ ಎಚ್ಚರ ಹವ್ಯಾಸಿಗಳಲ್ಲಿ ಬೇಕೇ ಬೇಕು. 
                ಅರ್ಥಗಾರಿಕೆಯಲ್ಲಿ ವೃತ್ತಿ ರಂಗದ ಛಾಯೆ ಹೆಚ್ಚಾಗಿ ಕಾಣುತ್ತದೆ. ತಪ್ಪಲ್ಲ ಬಿಡಿ. ಆದರೆ ಹಿರಿಯರು ಸ್ಥಾಪಿಸಿದ ಕೆಲವೊಂದು ಅರ್ಥಗಾರಿಕೆಗಳ ವಿನ್ಯಾಸಗಳು ಆಯಾಯ ಕಲಾವಿದರ ಪೇಟೆಂಟ್! ಉದಾ: ಕುಂಬಳೆ ಸುಂದರ ರಾಯರ ಪ್ರಾಸಗಳು. ಪ್ರಾಸಗಳಿಗೆ ಕುಂಬಳೆಯವರು ಜೀವ ತುಂಬಿದ್ದಾರೆ. ಹೇಳುವ ಒಂದೊಂದು ಪದಗಳಲ್ಲೂ ಸ್ವಂತಿಕೆಯ ಭಾವವಿದೆ. ಪದಗಳು ಅವರದ್ದಾಗಿ ಹೊರಹೊಮ್ಮಿದಾಗ ಕಟ್ಟಿಕೊಡುವ ಸೌಂದರ್ಯ ಇದೆಯಲ್ಲಾ ಅದು ಕುಂಬಳೆಯವರಿಗೆ ಮಾತ್ರ ಸಾಧ್ಯ. ಅದನ್ನು ಯಥಾವತ್ ಅನುಕರಿಸುವುದು ತಪ್ಪಂತೂ ಅಲ್ಲವೇ ಅಲ್ಲ! ಆದರೆ ಪ್ರಾಸಗಳು ಬರೇ ಪದಗಳಾಗಿಯೇ ಉಳಿಯುವ ಆಂತಕವಿದೆ! 
                ಹವ್ಯಾಸಿ ತಂಡಗಳು ಅಲ್ಲಲ್ಲಿನ ಸಂಪನ್ಮೂಲಗಳನ್ನು ಹೊಂದಿಕೊಂಡು ಬೆಳೆಯುತ್ತವೆ. ಯಕ್ಷಗಾನದ ಸಮಗ್ರತೆಯ ಕಲ್ಪನೆಯನ್ನು ಮುಂದಿಟ್ಟುಕೊಂಡು ಬೆಳೆದಾಗ ಯಕ್ಷಗಾನಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ ನಮ್ಮ ನಡುವಿನ ಬಹುತೇಕ ಹವ್ಯಾಸಿ ತಂಡಗಳಲ್ಲಿ ದೂರದೃಷ್ಟಿಯಿರುವುದು ಖುಷಿಯ ಸಂಗತಿ. ಹವ್ಯಾಸಿ ರಂಗ ಮತ್ತು ವೃತ್ತಿ ರಂಗವು ಬೇರೆ ಬೇರೆಯಾಗಿರುವುದರಲ್ಲಿ ಅದರ ಸೌಂದರ್ಯ ಅಡಗಿದೆ. ಮುಮ್ಮೇಳ ಕಲಿಯಲು ಎಷ್ಟು ಆಸಕ್ತಿ ಇದೆಯೋ ಅಷ್ಟೇ ಆಸಕ್ತಿಯು ಹಿಮ್ಮೇಳ ಕಲಿಕೆಯಲ್ಲಿ ಕಾಣುತ್ತಿಲ್ಲ. ಸ್ಪರ್ಧೆಗಳಲ್ಲಿ ಹಿಮ್ಮೇಳ ಮತ್ತು ಮುಮ್ಮೇಳಗಳು ಹವ್ಯಾಸಿಯಾಗಿಯೇ ಪ್ರಸ್ತುತಗೊಳ್ಳಬೇಕು. ವೃತ್ತಿ ಗಾಢತೆಯ ಹಿಮ್ಮೇಳವನ್ನು ತಾಳಿಕೊಳ್ಳಲು ಹವ್ಯಾಸಿ ಮುಮ್ಮೇಳಕ್ಕೆ ಕಷ್ಟವಾಗುತ್ತಿದೆ! 

Prajavani / dadhiginatho coloum /  5-1-2018

No comments:

Post a Comment