Friday, June 22, 2018

ಸಾಂಸ್ಕøತಿಕ ಜೀವಂತಿಕೆಯನ್ನು ಹಿಡಿದಿಟ್ಟ ಕಲಾ ನಿಲಯ



            ಕೇರಳದ ಮಣ್ಣಿನಲ್ಲಿ ಕನ್ನಾಡಿನ ತಂಪಿನ ತೇವವನ್ನು ಯಕ್ಷಗಾನದ ಹಿಡಿದಿಟ್ಟಿದೆ. ನೂರಾರು ಕಲಾವಿದರು ರೂಪುಗೊಂಡ ತಾಣ. ಅನೇಕರು ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಇವರೆಲ್ಲಾ ವೈವಿಧ್ಯ ಕೊಡುಗೆಗಳನ್ನು ನೀಡಿದ ಪ್ರಾತಃಸ್ಮರಣೀಯರು. ಅದೇ ಹಾದಿಯಲ್ಲಿ ಹೆಜ್ಜೆಯೂರಿದ ಕಲಾವಿದರಿಂದು ವೃತ್ತಿ, ಹವ್ಯಾಸಿಯಾಗಿ ಬಣ್ಣದ ಬದುಕನ್ನು ಆತುಕೊಂಡಿದ್ದಾರೆ. ಯಕ್ಷಗಾನ ಸಂಘಗಳು ಕೂಡಾ ಸಾಂಸ್ಕøತಿಕ ಜೀವಂತಿಕೆಯನ್ನು ಹಬ್ಬಿಸಿದೆ, ಹಬ್ಬಿಸುತ್ತಿವೆ.
          ಕಾಸರಗೋಡು ಜಿಲ್ಲೆಯ ಮುಳಿಯಾರು-ಕೋಟೂರಿನಶ್ರೀ ಕಾರ್ತಿಕೇಯ ಕಲಾ ನಿಲಯವು ದೇವರ ನಾಡಿನ ಹೆಮ್ಮೆಯ ಸಂಘಟನೆ. ಯಕ್ಷಗಾನ ಪ್ರದರ್ಶನದ ವಿಸ್ತರಣೆಯನ್ನು ಮಾಡಿದ ಹಿರಿಮೆ. ಜತೆಗೆ ಸಹೋದರ ಕಲೆಗೂ ಸಮಾನ ಸ್ಥಾನವನ್ನು ಕಲ್ಪಿಸಿದ ಕಲಾ ನಿಲಯದ ಕಾರ್ಯಹೂರಣವು ಮನೆ ಮಾತು. ಸಮಾಜದ ಮುಖ್ಯವಾಹಿನಿಯ ಗಣನೆ ಮತ್ತು ಮಾನ್ಯತೆಗೆ ಒಳಗಾಗಿ ಸರ್ವಜನಸ್ವೀಕೃತ ಸಂಸ್ಥೆಯಾಗಿ ಹೊರಹೊಮ್ಮಿತ್ತು.
            ಕಲಾನಿಲಯದ ಪ್ರದರ್ಶನವು ರಾಜಧಾನಿಯಯಲ್ಲೂ ಮೆರೆದಿದೆ. ಆಕಾಶವಾಣಿ, ದೂರದರ್ಶನದಲ್ಲೂ ಮಾನ್ಯತೆ. ಕಥಕ್ಕಳಿ ನಾಡಿನಲ್ಲಿ ಯಕ್ಷಗಾನವನ್ನೂ ಮೆರೆಸಿದ ಸಂಸ್ಥೆಯ ಸಾಧನೆ ಸಣ್ಣದಲ್ಲ. ಅದು ಕಾಲಗರ್ಭದಲ್ಲಿ ಲೀನವಾಗುವ ವಿಚಾರವಂತೂ ಅಲ್ಲವೇ ಅಲ್ಲ. ಕಾಲದ ಪಲ್ಲಟದಿಂದ ಬೀಸುಹೆಜ್ಜೆಗೆ ಪ್ರಸ್ತುತ ಮಸುಕಾದರೂ ಪ್ರಖರತೆಯಿದ್ದ ದಿನಮಾನವು ಹೊಳಪಿನಿಂದ ಕೂಡಿತ್ತು. ಸರಕಾರಿ ವರಿಷ್ಠರಿಂದ ಹೊಗಳಿಸಿಕೊಂಡ ಕಲಾನಿಲಯದ ಪ್ರದರ್ಶನಕ್ಕೆ ಸಾಕ್ಷಿಯಾಗಿ ಹಿರಿಯ ವೇಷಧಾರಿ, ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್ಟರು ಮಾತಿಗೆ ಸಿಗುತ್ತಾರೆ.
            1940ನೇ ಇಸವಿ. ಕೀರ್ತಿಶೇಷ ಮೂಡುಮನೆ ಸುಬ್ರಾಯ ಬಳ್ಳುಳ್ಳಾಯರಿಂದ ಪ್ರಾಥಮಿಕ ಶಾಲೆಯೊಂದರ ಹುಟ್ಟು. 1944ರಲ್ಲಿ ಸರಕಾರದ ಅಂಗೀಕಾರ. ದಿ.ಅಡ್ಕ ಸುಬ್ರಹ್ಮಣ್ಯ ಶರ್ಮ, ಪಯೋಲ ಸುಬ್ರಾಯ ಭಟ್ ಅಧ್ಯಾಪಕರಾಗಿದ್ದರು. 1955ರಲ್ಲಿಕಾರ್ತಿಕೇಯ ಪುಸ್ತಕಾಲಯ ಮತ್ತು ವಾಚನಾಲಯಆರಂಭ. ದಿ.ಚರವು ಶಂಕರ ಭಟ್ಟರ ಕಟ್ಟಡದಲ್ಲಿ ಚಟುವಟಿಕೆ. ಕೊಡುಗೈ ದಾನಿಗಳ ನೆರವಿನಿಂದಾಗಿ ಮುಂದಿನ ವರುಷ ಸ್ವಂತ ಕಟ್ಟಡವಾಯಿತು. ದಿ.ಮೂಡುಮನೆ ಎಂ.ಎಸ್.ಬಳ್ಳುಳ್ಳಾಯರಿಂದ ಸ್ಥಳದಾನ. ಅದರಲ್ಲಿಶ್ರೀ ಕಾರ್ತಿಕೇಯ ಕಲಾ ನಿಲಯ ಜನ್ಮ.
ಸಂಘ ಸ್ಥಾಪನೆಯ ಆರಂಭದ ದಿನಮಾನಗಳನ್ನು ಪೆರಡಂಜಿ ಗೋಪಾಲಕೃಷ್ಣ ಭಟ್ಟರು ನೆನಪಿಸುತ್ತಾ,  ದಿ.ಎಂ.ಎಸ್.ಬಳ್ಳುಳ್ಳಾಯ, ದಿ.ಕೆ.ಸುಬ್ರಾಯ ಭಟ್, ದಿ.ಚಂದ್ರೋಜಿ ರಾವ್, ದಿ.ಜಯರಾಮ ಶೆಟ್ಟಿ, ಅಡ್ಕ ಗೋಪಾಲಕೃಷ್ಣ ಭಟ್, ಎಂ.ಸುಬ್ರಹ್ಮಣ್ಯ ಭಟ್, ಎನ್.ಎಸ್.ಬಳ್ಳುಳ್ಳಾಯ, ಪಾತನಡ್ಕ ಗೋಪಾಲಕೃಷ್ಣ ಭಟ್... ಅಷ್ಟ ದಿಗ್ಗಜರು ಕಲಾ ನಿಲಯವನ್ನು ಸ್ಥಾಪಿಸಿದವರು,” ಎನ್ನುತ್ತಾರೆ. ಮುಂದೆ ಪಾತನಡ್ಕ ಗೋವಿಂದ ಭಟ್, ಕೊಟ್ಟೆಮೂಲೆ ಕೃಷ್ಣ ಭಟ್, ಕುಂಡತ್ತಾನ ಕೃಷ್ಣ ಭಟ್, ಮಜಕ್ಕಾರು ದೇರಣ್ಣ ರೈ, ಸುಬ್ಬಣ್ಣ ರೈ, .. ಹೀಗೆ ಉತ್ಸಾಹಿಗಳ ದಂಡು ತಯಾರಾಯಿತು. ಅತಿಥಿಗಳನ್ನು ಆಹ್ವಾನಿಸಿ ತಾಳಮದ್ದಳೆಗಳನ್ನು ಆಯೋಜಿಸಲಾಗುತ್ತಿತ್ತು.
             ಅಡ್ಕ ಗೋಪಾಲಕೃಷ್ಣ ಭಟ್ಟರು ಅಧ್ಯಕ್ಷರಾದ ಬಳಿಕ ಕಲಾ ನಿಲಯದ ಚಟುವಟಿಕೆಗಳು ವೇಗ ಪಡೆದುವು. ವಿವಿಧ ಹಂತಗಳಲ್ಲಿ ಕಾರ್ಯದರ್ಶಿಗಳಾಗಿ ಎಂ.ಎಸ್.ಬಳ್ಳುಳ್ಳಾಯರು, ಎಂ.ವಿ.ಬಳ್ಳುಳ್ಳಾಯರು, ಪೆರಡಂಜಿ ಗೋಪಾಲಕೃಷ್ಣ ಭಟ್ ಅಧ್ಯಕ್ಷರಿಗೆ ಹೆಗಲೆಣೆಯಾದರು. ಯಕ್ಷಗಾನದ ಪ್ರದರ್ಶನವನ್ನು ಸದಸ್ಯರೇ ಮಾಡಬೇಕೆಂಬ ತುಡಿತದ ಆಗ್ರಹ. ಅಡೂರು ರಾಮಚಂದ್ರ ಮಣಿಯಾಣಿಯವರಿಂದ ನಾಟ್ಯಾಭ್ಯಾಸ. ಕೀರ್ತಿಶೇಷ ಪುಂಡಿಕಾಯಿ ಕೃಷ್ಣ ಭಟ್, ನಾಯಿತ್ತೋಡು ಮಾಧವ ಭಟ್ಟರ ನಿರ್ದೇಶನ.
            ಇಷ್ಟಾಗುವಾಗ ಸ್ವಂತದ್ದಾದ ವೇಷಭೂಷಣ ಹೊಂದುವ ನೀಲನಕ್ಷೆ ತಯಾರಿ. ಪೆರಡಂಜಿ ಮತ್ತು ಪಾತನಡ್ಕ ನರಸಿಂಹ ಭಟ್ಟರ ಶ್ರಮದಲ್ಲಿ ವೇಷಭೂಷಣವೂ ಸಿದ್ಧವಾಯಿತು. ಹಿಮ್ಮೇಳ ಪರಿಕರಗಳೂ ತಯಾರಾದುವು. ಒಟ್ಟಿನಲ್ಲಿ ಮೇಳವೊಂದಕ್ಕೆ ಎಷ್ಟು ಬೇಕೋ ಅಷ್ಟು ಸಂಪನ್ಮೂಲತೆಗಳನ್ನು ಕಲಾ ನಿಲಯವು ಹೊಂದಿತು. ಪ್ರದರ್ಶನಗಳಿಗೆ ಶ್ರೀಕಾರ. ಎಲ್ಲರಲ್ಲೂ ಪುಟಿಯುವ ಉಮೇದಿನಿಂದಾಗಿ ಪ್ರದರ್ಶನಗಳೆಲ್ಲಾ ಕಳೆಗಟ್ಟಿದುವು. ವೇಷಭೂಷಣಗಳಿಗೆ ಬಾಡಿಗೆ ನೆಲೆಯಲ್ಲಿ ಬೇಡಿಕೆ ಬಂತು.
             ಬೇರೆ ಬೇರೆ ಪ್ರಭಾವಗಳಿಂದಾಗಿ ಕೇರಳದ ರಾಜಧಾನಿಯೂ ಸೇರಿದಂತೆ ಪ್ರದರ್ಶನಗಳಿಗೆ ಅವಕಾಶ ಪ್ರಾಪ್ತವಾಯಿತು. ಭಾಷೆಯ ತೊಡಕನ್ನು ಮೀರಿ ಕೇರಳಿಗರು ಯಕ್ಷಗಾನವನ್ನು ಸ್ವೀಕರಿಸಿದ್ದರು. ಮಲೆಯಾಳಿಗಳಿಗೆ ಕಥಾಭಾಗ ಅರ್ಥವಾಗಲು ಮಲೆಯಾಳ ಭಾಷೆಯನ್ನು ಅರ್ಥಗಾರಿಕೆಗೆ ಅಳವಡಿಸಲಾಯಿತು. ಕಲಾವಿದರು ಶತಾಯ ಗತಾಯ ಭಾಷೆಯನ್ನು ಕಲಿತು ಮಾಡಿದ ಪ್ರದರ್ಶನಗಳು ಒಂದು ಕಾಲಘಟ್ಟದ ಬೆರಗು. ಜತೆಗೆ ಕನ್ನಡಗಿರ ಗೊಣಗಾಟವೂ ಇತ್ತೆನ್ನಿ. “ಯಕ್ಷಗಾನವನ್ನು ಕುಲಗೆಡಿಸಲಿಗೋಸ್ಕರ ಅಥವಾ ಅಗ್ಗದ ಪ್ರಚಾರಕ್ಕಾಗಿ ಮಲೆಯಾಳ ಭಾಷೆಯನ್ನು ಅಳವಡಿಸಿದ್ದಲ್ಲ. ಪ್ರೇಕ್ಷಕರಿಗೆ ಕಥಾ ಭಾಗ ಅರ್ಥವಾಗದಿದ್ದರೆ ಆಟ ಆಡಿ ಏನು ಪ್ರಯೋಜನ. ಹಾಗಾಗಿ ಅರ್ಥಗಾರಿಕೆಯನ್ನು ಮಲೆಯಾಳದಲ್ಲಿ ಅಳವಡಿಸಿದ್ದೇವೆ,” ಎನ್ನುತ್ತಾರೆ ಅಡ್ಕ ಗೋಪಾಲಕೃಷ್ಣ ಭಟ್.
            ಯಕ್ಷಗಾನದ ಜತೆಜತೆಗೆ ನಾಟಕಗಳ ಪ್ರದರ್ಶನ. ಆಗ ಯಕ್ಷಗಾನ ಮತ್ತು ನಾಟಕಗಳು ಬದುಕಿನ ಅಂಗವಾಗಿದ್ದುವು. ಅಡ್ಕರು ಬರೆದು ನಿರ್ದೇಶಿಸಿದವಿದ್ಯೋದಯ, ಸ್ನೇಹಸಮಾಧಿ, ಮಾಂಗಲ್ಯಭಾಗ್ಯ, ದೇವದಾಸಿ, ಮದುವೆ ಹುಚ್ಚು, ಡಾಕ್ಟರ್ನಾಟಕಗಳು ಜನಪ್ರಿಯವಾದುವು. ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿಯುದ್ಧಪಂಡ್ಗಾಗಿ ನಡೆದಮಾಂಗಲ್ಯ ಭಾಗ್ಯನಾಟಕವು ಸರಕಾರಿ ವರಿಷ್ಠರ ಗಮನವನ್ನೂ ಸೆಳೆದಿತ್ತು. ಕೇರಳ ಸರಕಾರದ ಆರೋಗ್ಯ ಇಲಾಖೆಯ ವತಿಯಿಂದ ಕುಷ್ಠರೋಗ ನಿವಾರಣಾ ಆಂದೋಳನದ ಅಂಗವಾಗಿಡಾಕ್ಟರ್ನಾಟಕವೂ ಯಶ ಕಂಡಿತು. ನಾಟಕದ ಅಭಿನಯವು ಬಹುತೇಕರಿಗೆ ಯಕ್ಷಗಾನದ ರಂಗಾಭಿವ್ಯಕ್ತಿಗೆ ಪೂರಕವಾಗಿತ್ತು. ಇದರಿಂದಾಗಿ ಕಲಾ ನಿಲಯದ ಆಟಗಳೆಲ್ಲಾ ಒಂದಕ್ಕಿಂದ ಒಂದು ಭಿನ್ನವಾಗಿದ್ದುವು. 
             ಕಾರ್ತಿಕೇಯ ಕಲಾ ನಿಲಯವು ಯಕ್ಷಗಾನ, ನಾಟಕಗಳಿಗೆ ಸೀಮಿತವಲ್ಲ. ವಯೋಜನ ವಿದ್ಯಾಭ್ಯಾಸ,  ಸಂಗೀತ, ಮೃದಂಗ, ಪಿಟೀಲು, ಕೊಳಲು ತರಬೇತಿಗಳಿಗೂ ಪ್ರಾಶಸ್ತ್ಯ ನೀಡಿತ್ತು. ಹಿಂದಿ ಭಾಷಾ ಕಲಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ಪ್ರತೀ ವರುಷ ತ್ಯಾಗರಾಜೋತ್ಸವ, ವಾರ್ಷಿಕೋತ್ಸವಗಳು ಅದ್ದೂರಿಯಾಗಿ ನಡೆಯುತ್ತಿದ್ದುವು. ‘ನಾನು ಕಲಾ ನಿಲಯದ ಕಲಾವಿದಎಂದು ಅಭಿಮಾನ ಪಡುವವರಿದ್ದಾರೆ. 
                ಕಾಲ ಸರಿದಂತೆ ಬದುಕು ವಾಲಿತು. ಸಾಂಸ್ಕøತಿಕ ಗಾಢತೆಗಳು ಮಸುಕಾದುವು. ಹಿರಿಯರೆಲ್ಲಾ ದೂರವಾದರು. ಇನ್ನೂ ಕೆಲವರು ದೂರದ ಊರುಗಳಲ್ಲಿ ನೆಲೆಯಾದರು. ಒಂದು ಊರಿನ ಸಾಂಸ್ಕøತಿಕ ರಾಯಭಾರಿಯಾಗಿದ್ದ ಕಲಾ ನಿಲಯದ ಚಟುವಟಿಕೆಗಳು ಇಳಿಲೆಕ್ಕದತ್ತ ಜಾರಿದುವು. “ಅನೇಕ ಮಂದಿ ಹಿರಿಯರ ಶ್ರಮದಿಂದ ಕಲಾ ನಿಲಯವು ಕೇರಳದ ನೆಲದಲ್ಲಿ ಕನ್ನಡದ ಸೊಗಸನ್ನು ಹಿಡಿದಿಟ್ಟಿತ್ತು. ಕಾಸರಗೋಡು ಜಿಲ್ಲೆಯಲ್ಲೇ ಮಾದರಿಯಾದ ಸಂಘಟನೆಯಾಗಿ ರೂಪುಗೊಂಡಿತ್ತು. ಎಷ್ಟೋ ಮಂದಿ ಕಿರಿಯರು ಕಲಾವಿದರಾಗಿ ರೂಪುಗೊಂಡ ಸಂಸ್ಥೆಯು ಕಾಲದ ಪಲ್ಲಟಕ್ಕೆ ಒಳಗಾಯಿತು,” ಎಂದು ಮರುಗುತ್ತಾರೆ, ಅಧ್ಯಕ್ಷರಾಗಿ ಬಹುಕಾಲ ಮುನ್ನಡೆಸಿದ್ದ ಅಡ್ಕ ಗೋಪಾಲಕೃಷ್ಣ ಭಟ್.
              ಒಂದು ಕಾಲಘಟ್ಟದಲ್ಲಿ ಕನ್ನಡ ಯಕ್ಷಗಾನಕ್ಕೆ ಬೇಡಿಕೆಯಿದ್ದ ಕಲಾ ನಿಲಯದ ಚಟುವಟಿಕೆಗಳು ಈಗ ಮಲೆಯಳ ಭಾಷೆಯಲ್ಲಿ ಬೆರಳೆಣಿಕೆಯ ಯಕ್ಷಗಾನ ಪ್ರದರ್ಶನ ಏರ್ಪಡಿಸುತ್ತಿದೆ. ಕಲಾನಿಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಳ್ಳಮೂಲೆ ಗೋವಿಂದ ಭಟ್, ಬಳ್ಳಮೂಲೆ ಈಶ್ವರ ಭಟ್, ಅಡ್ಕ ಸುಬ್ರಹ್ಮಣ್ಯ ಭಟ್, .ಜಿ.ನಾಯರ್, ಕುಞಂಬು, ತಂಬಾನ್ ನಾಯರ್.. ಮೊದಲಾದ ಅನುಭವಿ ಕಲಾವಿದರಿಂದ ಪ್ರದರ್ಶನಗಳು ಸಂಪನ್ನವಾಗುತ್ತಿವೆ.
            ಕಾರ್ತಿಕೇಯ ಕಲಾ ನಿಲಯಎಂದಾಕ್ಷಣ ಅದರಲ್ಲಿ ಬೆಳೆದ ಕಲಾವಿದರಿಗೆ ಪುಳಕದ ಅನುಭವ. ಚಟುವಟಿಕೆಗಳು ಇಳಿಲೆಕ್ಕಕ್ಕೆ ಜಾರಿ ಬಹುಶಃ ಒಂದೂವರೆ ಎರಡು ದಶಕವಾಯಿತು. ಹೊಸ ಕಲಾರಕ್ತವನ್ನು ತುಂಬಿಸಿಕೊಳ್ಳಲುಕಾರ್ತಿಕೇಯ ಕಲಾ ನಿಲಯವು ಕಾಯುತ್ತಿದೆ

(ಸಾಂದರ್ಭಿಕ ಚಿತ್ರ) ಚಿತ್ರಗಳು : ಹರಿ ಫೋಟೋಗ್ರಫಿ
Prajavani / ದಧಿಗಿಣತೋ / 2-2-2018


No comments:

Post a Comment