ಆ ದಿವಸ ನೆನಪಿದೆ. ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ಕಲಾವಿದ ತಾರಾನಾಥ ವರ್ಕಾಡಿಯವರು ಮಾತಿಗೆ ಸಿಕ್ಕಿದ್ದರು. “ಯಕ್ಷಗಾನ ಪತ್ರಿಕೆ ಹೊರತರುತ್ತಿದ್ದೇನೆ, ನಿಮ್ಮ ಅಭಿಪ್ರಾಯವೇನು?” ಎಂಬ ಮಾತಿಗೆ ನಾನು ಹೆಚ್ಚು ಧನಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ. ಕೃಷಿ ಪತ್ರಿಕೆಯೊಂದರ ಜವಾಬ್ದಾರಿಯ ಹಿನ್ನೆಲೆಯಲ್ಲಿ ಅದರ ಒಳ-ಹೊರಗಿನ ತ್ರಾಸವನ್ನು ಅನುಭವಿಸುತ್ತಿದ್ದ ನನಗೆ ವರ್ಕಾಡಿಯವರ ನಿರ್ಧಾರಕ್ಕೆ ಬೇಗನೆ ಉತ್ತರಿಸಲು ಕಷ್ಟವಾಗಿತ್ತು. ಹಾಗೆಂದು ಋಣಾತ್ಮಕವಾದ ಉತ್ತರವನ್ನು ನೀಡಿಲ್ಲ!
ಫೆಬ್ರವರಿ 2013ರ ಮೊದಲ ಪ್ರಾಯೋಗಿಕ ಸಂಚಿಕೆ ‘ಬಲ್ಲಿರೇನಯ್ಯ’ ಪ್ರಕಟಣೆ. ಶೈಕ್ಷಣಿಕವಾಗಿ ಯೋಚಿಸಬಲ್ಲ ತಾರಾನಾಥರು ಪತ್ರಿಕೆಯನ್ನು ಮುನ್ನಡೆಸಬಲ್ಲರು ಎನ್ನುವ ವಿಶ್ವಾಸವು ಸಂಚಿಕೆಯ ಪುಟಗಳಲ್ಲಿ ಕಾಣುತ್ತಿತ್ತು. ಆರ್ಥಿಕವಾಗಿ ಹೇಗೆ ಸಮತೂಗಿಸಬಲ್ಲರು ಎನ್ನುವ ಆತಂಕದಿಂದ ಅಂದು ಸುಮ್ಮನಾಗಿದ್ದೆ. ಅದನ್ನು ನಿಭಾಯಿಸುತ್ತಾ ಬಂದ ಪತ್ರಿಕೆಯು ಐದರ ಸಂಭ್ರಮಕ್ಕೆ ಏರಿದೆ. ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ ಬೆಳೆದಿದೆ. ಕಲಾವಿದನಾಗಿ, ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯನಾಗಿ ಯಕ್ಷರಂಗವನ್ನು ಭಿನ್ನವಾಗಿ ಯೋಚಿಸಲು ಸಾಧ್ಯ ಎನ್ನುವುದನ್ನು ತಾರಾನಾಥರು ತೋರಿದ್ದಾರೆ. ಐದರ ಕೂಸಿಗೆ ಅಭಿನಂದನೆ.
ಮೊದಲ ಸಂಚಿಕೆಯ ಸಂಪಾದಕೀಯದ ಆಶಯ ಇಷ್ಟವಾಗಿತ್ತು – “ಕಲಾವಿದರಲ್ಲಿ ಪತ್ರಿಕೆಗಳನ್ನು ಓದುವವರರ ಸಂಖ್ಯೆ ವಿರಳ. ಅವರನ್ನು ಹೇಗೆ ಓದಿಸಬಹುದೆಂದು ಯೋಚಿಸುತ್ತಿದ್ದೇನೆ. ಹೆಚ್ಚು ಕಲಾವಿದರಿಗೆ ಆಪ್ತವಾಗುವಂತೆ ಪುಟಗಳನ್ನು ಶ್ರೀಮಂತಗೊಳಿಸಬಹುದೆನ್ನುವ ಹಂಬಲ ನನ್ನದು. ಚೌಕಿಯ ಒಳಗೆ-ಹೊರಗೆ, ತೆಂಕು-ಬಡಗು-ಬಡಾಬಡಗು ಮಾತ್ರವಲ್ಲ ಕರ್ನಾಟಕದ ಬಯಲಾಟ ಪರಂಪರೆಗಳ ಸಮಗ್ರ ಯಕ್ಷಗಾನ ರಂಗಭೂಮಿಯ ಸರ್ವ ಕಲಾವಿದರ ವಿಶ್ವಕೋಶವಾಗಲಿ ಎನ್ನುವ ಕನಸು ನನ್ನದು. ಧೈರ್ಯಮಾಡಿ ದಿಟ್ಟ ಹೆಜ್ಜೆ ಇಟ್ಟಿದ್ದೇನೆ.”
ಈಚೆಗೆ ತಾರಾನಾಥರು ಮಾತಿಗೆ ಸಿಕ್ಕಾಗ ಅವರಲ್ಲಿ ವಿಷಾದದ ಅಲೆಯೊಂದು ತೇಲಿದುದನ್ನು ನೋಡಿದೆ! “ಕಲಾವಿದರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ವಾಟ್ಸಾಪ್, ಫೇಸ್ಬುಕ್ಕಿನಲ್ಲೇ ಕಾಲಕಳೆಯುವ ಬಹುತೇಕ ಬಂಧುಗಳಿಗೆ ಪತ್ರಿಕೆ ಯಾಕೆ?” ಮಾತಿನ ಮಧ್ಯೆ ಹಾದುಹೋದ ಎರಡು ವಾಕ್ಯಗಳು ವರ್ತಮಾನಕ್ಕೆ ಕನ್ನಡಿ. ಎಷ್ಟೋ ಬಾರಿ ತಾರಾನಾಥರು ನೀಡಿದ ಗೌರವ ಪ್ರತಿಯನ್ನು ಬಿಡಿಸಲೂ ಪುರುಸೊತ್ತಿಲ್ಲದ ಕಲಾವಿದರನ್ನು ನೋಡಿದ್ದೇನೆ! ಬಿಡಿಸಿ ಕಣ್ಣು ಹಾಯಿಸಿ ತಾವು ಕುಳಿತಲ್ಲೇ ಮರೆತು ಹೋದವರನ್ನೂ ನೋಡಿದ್ದೇನೆ! ತುಂಬಾ ಹಗುರವಾಗಿ ಮಾತನಾಡಿದವರೂ ನೆನಪಿನಲ್ಲಿದ್ದಾರೆ! ಇವೆಲ್ಲವನ್ನೂ ಸಮಚಿತ್ತದಿಂದ ಗ್ರಾಹ್ಯ ಮಾಡಿದ್ದರಿಂದಲೇ ಪತ್ರಿಕೆಯು ಐದನೇ ಸಂಪುಟಕ್ಕೆ ಮುನ್ನುಗ್ಗಿದೆ.
ತಾರಾನಾಥರು ಪತ್ರಿಕೆಯನ್ನು ರೂಪಿಸಿದ ಹಿನ್ನೆಲೆಯಲ್ಲಿ ಅವರ ದೂರದೃಷ್ಟಿ ಗಮನಿಸಿ - “ಕರಾವಳಿಯಲ್ಲಿ ನಲವತ್ತಕ್ಕಿಂತ ಹೆಚ್ಚು ಮೇಳಗಳಿವೆ. ನೂರಾರು ಸಂಘ-ಸಂಸ್ಥೆಗಳಿವೆ. ಸಾವಿರಕ್ಕೂ ಮಿಕ್ಕಿ ಕಲಾವಿದರು ವೃತ್ತಿ ಮೇಳಗಳಲ್ಲಿ ದುಡಿಯುತ್ತಿದ್ದಾರೆ. ಬಹುಸಂಖ್ಯೆಯ ಲೇಖಕರಿದ್ದಾರೆ. ಪ್ರಸಾದನ ಕಲಾವಿದರು, ಚೌಕಿ ಕಲಾವಿದರು, ರಂಗಸ್ಥಳ ಕಟ್ಟುವವರು.. ಹೀಗೆ ಕಲಾವಿದರಲ್ಲದ ಕಲಾವಿದರನೇಕರು ಯಕ್ಷಗಾನದಿಂದ ಬದುಕು ಕಟ್ಟಿಕೊಂಡಿದ್ದಾರೆ. ಯಕ್ಷಗಾನ ಪತ್ರಿಕೋದ್ಯಮವಿದೆ. ಇಂತಹ ಕಲಾಲೋಕದ ಶ್ರೇಯೋಭಿವೃದ್ಧಿ ಎಷ್ಟರಮಟ್ಟಿಗೆ ಈಗಿನ ಅಕಾಡೆಮಿಯಿಂದ ಸಾಧ್ಯ? ಆದುದರಿಂದ ಯಕ್ಷಗಾನದ ಅಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಂತೆ ಕರಾವಳಿಯ ಯಕ್ಷಗಾನ ಪರಿಷತ್ತು ರೂಪುಗೊಳ್ಳಬೇಕು..”
ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಕುರಿತೂ ಒತ್ತಾಯಿಸುತ್ತಾರೆ - “ಯಕ್ಷಗಾನ ಬಯಲಾಟ ಅಕಾಡೆಮಿಯ ವ್ಯಾಪ್ತಿಯೊಳಗೆ ಬರುವ ಕಲೆಗಳೆಲ್ಲವನ್ನೂ ಅಕಾಡೆಮಿ ಸಮಾನವಾಗಿ ಗೌರವಿಸಬೇಕು. ಕರಾವಳಿಯ ಯಕ್ಷಗಾನವು ಬಯಲಾಟ ಅಕಾಡೆಮಿಯಿಂದ ಕಳಚಿಕೊಳ್ಳಲೇಬೇಕು. ಅದಕ್ಕೊಂದು ಪ್ರತ್ಯೇಕ ಅಕಾಡೆಮಿ ರಚನೆ ಆಗಲೇಬೇಕು. ಇಲ್ಲದಿದ್ದರೆ ಯಕ್ಷಗಾನದವರು ನಮಗೆ ಅನ್ಯಾಯ ಮಾಡಿದ್ದರು ಎಂದು ಬಯಲಾಟದವರು, ಬಯಲಾಟದವರು ಅನ್ಯಾಯ ಮಾಡಿದ್ರು ಎಂದು ಯಕ್ಷಗಾನದವರು ಪರಸ್ಪರ ಅಪಾರ್ಥದಿಂದ ಬಾಳಬೇಕಾಗುತ್ತದೆ. ಈ ಕಾರಣಕ್ಕಾಗಿ ಕರಾವಳಿಯ ಕಲಾವಿದರು, ಪೋಷಕರು, ಅಭಿಮಾನಿಗಳು ಪ್ರತ್ಯೇಕ ಅಕಾಡೆಮಿ ರಚನೆಯ ಕುರಿತು ಆಗ್ರಹಿಸಬೇಕು.
ಅಕಾಡೆಮಿಯ ಸದಸ್ಯರಾಗಿ ರಾಜ್ಯ ಸುತ್ತಿದ ಅನುಭವದಲ್ಲಿ ಮೂಡಲಪಾಯ ಯಕ್ಷಗಾನಕ್ಕೆ ಕಾಯಕಲ್ಪ ಮೂಡಿಸುವತ್ತ ಅವರ ಯೋಚನೆ ಗಮನಿಸಿ - “ಮೂಡಲಪಾಯ ಯಕ್ಷಗಾನದಲ್ಲಿ ನಮ್ಮ ಕರಾವಳಿಯ ಯಕ್ಷಗಾನದಂತೆ ಚತುರ್ವಿಧಾಭಿನಯಗಳಿವೆ. ಇಲ್ಲಿಯದೇ ಪಠ್ಯ. ಅಲ್ಲಿರುವ ಭಾಗವತರುಗಳು ಸಂಪ್ರದಾಯದ ಸಂರಕ್ಷಣೆಯ ಭ್ರಮೆಯಿಂದ ಹೊರಗೆ ಬಂದಿಲ್ಲ! ಹೊಸ ಕಾಲದ ಪ್ರಯೋಗಗಳಿಗೆ ತೆರೆದುಕೊಂಡಿಲ್ಲ. ಪ್ರದರ್ಶನದ ಗುಣಮಟ್ಟ ಶತಮಾನಗಳ ಹಿಂದಿದೆ. ದೊಡ್ಡಾಟಕ್ಕೆ ಕಾಯಕಲ್ಪ ಮಾಡುವ ಅಗತ್ಯವಿದೆ. ಹೊಸ ಪೀಳಿಗೆಯನ್ನು ಆಕರ್ಷಿಸಲು ತುರ್ತಾಗಿ ಪ್ರಯತ್ನ ನಡೆಸಬೇಕು. ಅವರು ಇಲ್ಲಿನ ಯಕ್ಷಗಾನವನ್ನು ಕಲಿತು ಬಯಲು ಸೀಮೆಯ ಯಕ್ಷಗಾನವನ್ನು ಹೊಸ ರೀತಿಯಿಂದ ಕಟ್ಟಬೇಕು.
‘ಬಲ್ಲಿರೇನಯ್ಯ’ - ಪುಟವನ್ನು ತೆರೆದಾಗ ಅಪರೂಪದ ಸಂಗತಿಗಳು ಗೋಚರವಾಗುತ್ತವೆ. ಮುಖ್ಯವಾಗಿ ಯಕ್ಷಗಾನೇತರ ಮನಸ್ಸುಗಳು ಗ್ರಹಿಸುವುದಕ್ಕಿಂತಲೂ ಯಕ್ಷಗಾನದ ಒಳಗಿದ್ದ ಕಲಾವಿದರು ಓದಿ ಮನನಿಸಬೇಕಾದ ಹೂರಣಗಳು ಸಂಚಿಕೆಯ ಗುಣಮಟ್ಟವನ್ನು ಎತ್ತರಿಸಿದೆ - ಕಲಾವಿದರ ಬದುಕು, ಕೃತಿಗಳ ಪರಿಚಯ, ಯಕ್ಷಪ್ರಶ್ನೆ, ಚಿಕ್ಕಪುಟ್ಟ ವರದಿಗಳು, ಕಲಾವಿದೆಯರ ಮನದ ಮಾತು, ತೆಂಕು-ಬಡಗು-ಬಡಾಬಡಗು ಪದ್ಧತಿಗಳು, ಗಟ್ಟಿ ಸಂಪಾದಕೀಯ ಮತ್ತು ಸ್ಥಿರ ಅಂಕಣಗಳು.
ಪ್ರಸಂಗಕರ್ತ, ಕವಿ ಶ್ರೀಧರ ಡಿ.ಎಸ್. ಅವರು ತಮ್ಮ ಅಂಕಣದಲ್ಲಿ ಹಿರಿಯ ಕವಿಗಳನ್ನು ಪರಿಚಯಿಸುತ್ತಾರೆ. ಯಕ್ಷಗಾನ ರಂಗದಲ್ಲಿ ಕವಿ ಪರಂಪರೆಯನ್ನು ಮಾನಿಸುವ ಪರಂಪರೆ ಕಡಿಮೆ. ಕವಿಗೂ ಮಾನ ಸಿಗಬೇಕೆಂದು ಬಹುಕಾಲದಿಂದ ದನಿಯನ್ನು ಮೂಡಿಸಿದವರು. ಸಾವಿರಾರು ಕವಿಗಳಿಂದ ಪ್ರಸಂಗಗಳು ರಚಿಸಲ್ಪಟ್ಟಿದ್ದು ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಯಕ್ಷಗಾನದ ಕೊಡುಗೆ ಹಿರಿದು. ಕೆಳದಿ ಸುಬ್ಬ, ಕುಬೆವೂರು ಪುಟ್ಟಣ್ಣ ಶೆಟ್ಟಿ, ಜತ್ತಿ ಈಶ್ವರ ಭಾಗವತರು, ಮಟ್ಟಿ ವಾಸುದೇವ ಪ್ರಭು, ಧ್ವಜಪುರದ ನಾಗಪ್ಪಯ್ಯ, ಮೂಲಿಕೆ ರಾಮಕೃಷ್ಣಯ್ಯ, ಪಾಂಡೇಶ್ವರ ವೆಂಕಟ, ಗೇರುಸೊಪ್ಪೆ ಶಾಂತಪ್ಪಯ್ಯ, ಹಳೆಮಕ್ಕಿ ರಾಮ, ಅಜಪುರ ವಿಷ್ಣು... ಹೀಗೆ ಅನೇಕಾನೇಕ ಕವಿಗಳನ್ನು ತಮ್ಮ ಅಂಕಣದಲ್ಲಿ ಪರಿಚಯಿಸಿದ್ದಾರೆ.
‘ಯಕ್ಷಗಾನದ ರಂಗಭಾಷೆ’ ಸಮಕಾಲೀನ ಯಕ್ಷಗಾನವು ಬಯಸುವ ಹೂರಣಗಳುಳ್ಳ ಅಂಕಣ. ವಿದ್ವಾಂಸ ಡಾ.ಚಂದ್ರಶೇಖರ ದಾಮ್ಲೆಯವರು ವಿಸ್ತಾರವಾಗಿ ರಂಗಭಾಷೆಯನ್ನು ವಿಸ್ತøತಗೊಳಿಸಿದ್ದಾರೆ. ಪುರಾಣ ಪ್ರಸಂಗಗಳ ರಂಗನಡೆಗಳ ಹಿರಿಯರ ಹಾದಿಯನ್ನು ಲಿಪೀಕರಿಸಿದ್ದಾರೆ. 2013ರಲ್ಲಿ ಸುಳ್ಯದಲ್ಲಿ ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ರಂಗಭಾಷೆಯ ದಾಖಲಾತಿ ಮಾಡಿದ್ದಾರೆ. ಈ ಅನುಭವದ ಹಿನ್ನೆಲೆಯಲ್ಲಿ ದಾಮ್ಲೆಯವರ ಅಂಕಣವು ಪತ್ರಿಕೆಯ ಆರಂಭ ಕಾಲದಿಂದ ಗಟ್ಟಿತನದಿಂದ ಕೂಡಿರುವುದು ಓದುಗರಿಗೆ ಗ್ರಾಸ. ರಂಗಪ್ರಜ್ಞೆಯ ಕಲಾವಿದರಿಗೆ ಅಳವಡಿಸಿಕೊಳ್ಳಬಹುದಾದ ವಿಚಾರಗಳು.
ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಮುಖವರ್ಣಿಕೆ ಮತ್ತು ರಂಗಾಳ್ತನದಲ್ಲಿ ಪ್ರತ್ಯೇಕ ಛಾಪು. ಪಾರಂಪರಿಕ ಪಾತ್ರಗಳಲ್ಲದೆ ಹೊಸ ವಿನ್ಯಾಸದ ಮುಖವರ್ಣಿಕೆಗಳನ್ನು ಸ್ವತಃ ಬರೆದವರು. ಅವರ ಕಲಾಗಾರಿಕೆಯಲ್ಲಿರುವ ಸೃಷ್ಟಿಶೀಲ ಪ್ರಯೋಗವು ಕುತೂಹಲ ಮೂಡಿಸುತ್ತದೆ. ಆರಂಭದ ದಿವಸಗಳಲ್ಲಿ ‘ಬಣ್ಣದ ರೇಖೆಗಳು’ - ಅಂಕಣವು ಶೆಟ್ಟಿಗಾರರ ಅನುಭವದಿಂದ ಮೂಡಿದ ಸಂಪತ್ತು. ರಾವಣ, ಯಮ, ಕಾಟುಬಣ್ಣಗಳಲ್ಲಿ ರಾಜಬಣ್ಣ, ರಾಜಬಣ್ಣದಲ್ಲಿ ಬಲಿ ಚಕ್ರವರ್ತಿ ಮಹಿರಾವಣ.. ಮೊದಲಾದ ಪಾತ್ರಗಳ ಮುಖವರ್ಣಿಕೆಗಳ ವಿವರಗಳು ಅಭ್ಯಾಸಿಗಳಿಗೆ ಆಕರ. ಬಣ್ಣಗಾರಿಕೆಯ ಆಸಕ್ತರಿಗೆ ಖುಷಿಯಿಂದ ಹೇಳಿಕೊಡುವ ಗುಣ ಅವರಲ್ಲಿದೆ.
ಸೀಮಿತ ಜಾಹೀರಾತು. ಉಳಿದ ಪತ್ರಿಕೆಗಳಿಗೆ ಬರುವಂತೆ ರಾಶಿ ಜಾಹೀರಾತುಗಳು ಯಕ್ಷಗಾನ ಪತ್ರಿಕೆಗಳಿಗೆ ಸಿಗುವುದಿಲ್ಲ. ಸಂಘಟಕರು ಮತ್ತು ಅಭಿಮಾನಿಗಳು ಪತ್ರಿಕೆಗಳನ್ನು ಉಳಿಸಬೇಕಾಗಿದೆ, ಬೆಳೆಸಬೇಕಾಗಿದೆ. ಇಂತಹ ಮನಸ್ಸುಳ್ಳ ಅಭಿಮಾನಿಗಳ ಜಾಹೀರಾತುಗಳು ವೆಚ್ಚಗಳನ್ನು ಸ್ವಲ್ಪಮಟ್ಟಿಗೆ ಹಗುರಗೊಳಿಸುತ್ತಿವೆ. ಲಾಭದಾಯಕ ಅಲ್ಲವೆಂದೂ ಗೊತ್ತಿದ್ದರೂ ತಾರಾನಾಥ ವರ್ಕಾಡಿಯವರು ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಮುದ್ರಣ ಕಷ್ಟಗಳು ಮೈಮೇಲೆ ಏರಿದರೂ ಎಂದೂ ಗೊಣಗಲಿಲ್ಲ. ಒಂದೆಡೆ ಕಲಾವಿದನಾಗಿ ಮತ್ತೊಂದೆಡೆ ಸಂಪಾದಕನಾಗಿ, ಜತೆಜತೆಗೆ ಅಕಾಡೆಮಿ ಜವಾಬ್ದಾರಿ. ಇವುಗಳ ನಿಭಾವಣೆಯು ಅವರಿಗೆ ಯಕ್ಷಗಾನ ಕಲಿಸಿದ ಸ್ಥಿರತೆ ಮತ್ತು ಬದ್ಧತೆ.
ಬಲ್ಲಿರೇನಯ್ಯದ ಐದನೇ ವಾರ್ಷಿಕೋತ್ಸವ ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠದಲ್ಲಿ ಫೆಬ್ರವರಿ 4ರಂದು ಸಂಜೆ ಐದು ಗಂಟೆಗೆ ಸಂಪನ್ನವಾಗಲಿದೆ. ಯಕ್ಷಗಾನ ಕುಣಿತ ಸ್ಪರ್ಧೆ, ಮುಖವರ್ಣಿಕೆ ಸ್ಪರ್ಧೆ, ಪ್ರೇಕ್ಷಕ ಬಹುಮಾನ, ಸಂಮಾನ.. ಹೀಗೆ ತುಂಬು ಕಲಾಪಗಳು.
(ಪ್ರಜಾವಾಣಿ / ದಧಿಗಿಣತೋ / 2-2-2018)
No comments:
Post a Comment