ಜಯರಾಮ ಪಾಟಾಳಿ ಪಡುಮಲೆ
ಯಕ್ಷಗಾನದಲ್ಲಿ ವೇಷಧಾರಿಯಾಗಿಯೋ, ಅರ್ಥದಾರಿಯಾಗಿಯೋ ಇದ್ದು ಇಂತಿಷ್ಟು ವರುಷ ಯಕ್ಷಗಾನದಲ್ಲಿದ್ದೆ ಎಂದು ಬಯೋಡಾಟಾ ಬರೆಯುವುದು ಸುಲಭ! ಇದರೊಂದಿಗೆ ಒಂದಷ್ಟು ಮಂದಿ ಯಕ್ಷಗಾನದಲ್ಲಿ ತೊಡಗುವಂತೆ ಶಿಕ್ಷಣ ನೀಡಿ ಬೆಳೆಸುವುದು, ಅವರಲ್ಲಿ ಯಕ್ಷಶಿಕ್ಷಣ ಮನಃಸ್ಥಿತಿಯನ್ನು ತುಂಬುವುದು, ಕಲೆಯನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸ ಇದೆಯಲ್ಲಾ, ಅದು ಅಜ್ಞಾತ. ಎಲ್ಲೂ ದಾಖಲಾಗುವುದಿಲ್ಲ.
ಜಯರಾಮ ಪಾಟಾಳಿ ಪಡುಮಲೆ(45)ಯವರು ವೇಷಧಾರಿ. ಯಕ್ಷಶಿಕ್ಷಣದಂತಹ, ತಲೆಮಾರಿಗೆ ಕಲೆಯನ್ನು ದಾಟಿಸುವಂತಹ ಕೆಲಸವನ್ನು ತಮ್ಮ ಮಿತಿಯಲ್ಲಿ ಮಾಡುತ್ತಿದ್ದಾರೆ. ಇವರ ಕಲಾ ಕಾಯಕಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ‘ಜಾನಪದ ಲೋಕ ಪ್ರಶಸ್ತಿ’ ಪ್ರಾಪ್ತವಾಗಿದೆ. ಇದು ಅರ್ಹರಿಗೆ ಸಂದ ಗೌರವ. ಎಲ್ಲಕ್ಕಿಂತಲೂ ಮುಖ್ಯವಾಗಿ ಕೇರಳದ ನೆಲದಲ್ಲಿ ಕನ್ನಾಡಿನ ಸೊಗಡನ್ನು ಬಿಂಬಿಸುವ ಯತ್ನಕ್ಕೆ ಸಿಕ್ಕಿದ ಮನ್ನಣೆಯಿದು.
ಬಹುಕಾಲದಿಂದ ಜಯರಾಮ ಪಾಟಾಳಿಯವರನ್ನು ನೋಡುತ್ತಿದ್ದೇನೆ. ವೇಷ, ಅಭಿವ್ಯಕ್ತಿಗಳು ಪಲ್ಲಟವಾಗುತ್ತಿರುವ ಕಾಲಘಟ್ಟದಲ್ಲೂ ತಮ್ಮ ಪಾತ್ರಗಳಲ್ಲಿ ಯಕ್ಷಗಾನದ ಹೊರತಾದ ವಿನ್ಯಾಸಗಳನ್ನು ತಂದವರಲ್ಲ. ದೇಹಪ್ರಕೃತಿಗೆ ಒಪ್ಪುವಂತಹ ಖಳ ಪಾತ್ರಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಆಟ ರೈಸಬೇಕು ಎನ್ನುವ ಕಾರಣಕ್ಕಾಗಿ ರೈಸುವಂತಹ ಪ್ರಕಾರಗಳನ್ನು ರಂಗಕ್ಕೆ ತರುವ ಮನಃಸ್ಥಿತಿ ಅವರದ್ದಲ್ಲ. ಹಾಗಾಗಿ ಜಯರಾಮರ ಪಾತ್ರಾಭಿವ್ಯಕ್ತಿಗಳಲ್ಲಿ ಯಕ್ಷಗಾನದ ಹೊರತಾದ ಯಾವುದೇ ಆವಿಷ್ಕಾರಗಳಿಲ್ಲ, ವಿಕಾರಗಳಿಲ್ಲ.
ಜಯರಾಮರು ಮೂಲತಃ ಪುತ್ತೂರು ತಾಲೂಕಿನ ಪಡುಮಲೆಯವರು. ಯಕ್ಷಯಾಮಿನಿಯ ಮಹಾದೈತ್ಯ ಕೀರ್ತಿಶೇಷ ಬಣ್ಣದ ಮಾಲಿಂಗ, ತೇರಪ್ಪ ಪಾಟಾಳಿಯವರು ಕುಟುಂಬಸ್ಥರು. ಅಣ್ಣ ಕೆ.ಸಿ.ಪಾಟಾಳಿಯವರು ಜಯರಾಮರ ಕಲಾಯಾನಕ್ಕೆ ತುಂಬು ಬೆಂಬಲ ನೀಡಿದವರು. ಶ್ರೀ ಧರ್ಮಸ್ಥಳ ಕಲಾ ಕೇಂದ್ರದಲ್ಲಿ ಯಕ್ಷಕಲಿಕೆ. ಕೋಳ್ಯೂರು ರಾಮಚಂದ್ರ ರಾವ್ ಮತ್ತು ತಾರಾನಾಥ ವರ್ಕಾಡಿಯವರು ಗುರುಗಳು. ಹೀಗೆ ಯಕ್ಷಗಾನೀಯವಾದ ಶೈಕ್ಷಣಿಕ ಹಿನ್ನೆಲೆ.
ಪಾಟಾಳಿಯವರು ಶ್ರೀ ಕಟೀಲು ಮೇಳ ಮತ್ತು ಶ್ರೀ ಧರ್ಮಸ್ಥಳ ಮೇಳದಲ್ಲಿ ಸ್ವಲ್ಪ ಕಾಲ ವ್ಯವಸಾಯ ಮಾಡಿದ್ದರು. ಅವರ ವೇಷಗಾರಿಕೆಯ ಒಟ್ಟಂದವು ಸುಭಗತನದತ್ತ ವಾಲಿತು. ಹಿರಿಯರ ಒಡನಾಟ, ರಂಗಸೂಕ್ಷ್ಮದ ಕಲಿಕೆ, ಸವಾಲಿನ ರಂಗ ತಂತ್ರಗಳು, ಪ್ರಸಂಗ ಜ್ಞಾನ ಮೊದಲಾದ ತಾಂತ್ರಿಕಾಂಶಗಳು ಪಾತ್ರಾಭಿವ್ಯಕ್ತಿಗೆ ಪೂರಕವಾಯಿತು. ವೈಯಕ್ತಿಕವಾದ ಅನನುಕೂಲಗಳಿಂದ ಪೂರ್ಣವಾಗಿ ಮೇಳ ಜೀವನಕ್ಕೆ ಹೊಂದಿಕೊಳ್ಳಲು ತ್ರಾಸವಾಯಿತು. ಪ್ರಕೃತ ಶ್ರೀ ಮಲ್ಲ ಮೇಳದ ಕಲಾವಿದ. ಜತೆಗೆ ಯಕ್ಷಗಾನ ಶಿಕ್ಷಕ.
ಈಗ ‘ದೇವಿಮಹಾತ್ಮೆ’ ಪ್ರಸಂಗದ ವೈಭವದ ಕಾಲಘಟ್ಟ. ‘ಮಹಿಷಾಸುರ’ ಪಾತ್ರ ಮತ್ತು ಪಾತ್ರಧಾರಿಗಳಿಗೆ ತಾರಾಮೌಲ್ಯ! ರಂಗಪ್ರವೇಶದ ಪೂರ್ವದ ಅಬ್ಬರಗಳು ಹೆಚ್ಚು ಸುದ್ದಿಯಾಗುತ್ತದೆ. ನವಮಾಧ್ಯಮಗಳು ಬಗೆಬಗೆಯ ವರದಿಯನ್ನು ಪ್ರಸಾರಿಸುತ್ತವೆ. ಇಂತಹ ಬೊಬ್ಬಾಟಕ್ಕೆ ಪಾತ್ರಧಾರಿ ಒಗ್ಗಿಕೊಳ್ಳಬೇಕಾದ, ಒಪ್ಪಬೇಕಾದ ಸ್ಥಿತಿ. ಒಗ್ಗಿಕೊಳ್ಳಲು ಹಿಂದೇಟು ಹಾಕಿದರೆ ಅಭಿಮಾನಿಗಳಿಂದಲೇ ಋಣಾತ್ಮಕ ಪ್ರತಿಕ್ರಿಯೆ. ಅದ್ದೂರಿ ವೈಭವಗಳ ಮಧ್ಯೆ ಕಲಾವಿದ ಪಾತ್ರವನ್ನು ಯಶಗೊಳಿಸಲು ಯತ್ನಿಸಬೇಕಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಜಯರಾಮ ಪಾಟಾಳಿಯವರ ‘ಮಹಿಷಾಸುರ’ನ ಪಾತ್ರವು ಪ್ರತ್ಯೇಕವಾಗಿ ನಿಲ್ಲುತ್ತದೆ. ತನ್ನದು ‘ಯಕ್ಷಗಾನದ ಪಾತ್ರ’ ಎನ್ನುವ ಸ್ಪಷ್ಟಕಲ್ಪನೆ ಪಾಟಾಳಿಯವರಲ್ಲಿದೆ. ಜತೆ ಪಾತ್ರಧಾರಿಯಾಗಿ ಅವರ ರಂಗನಡೆಯನ್ನು ನಾನು ತುಂಬಾ ಇಷ್ಟಪಟ್ಟಿದ್ದೇನೆ. ಇವರದು ಪ್ರೇಕ್ಷಕರನ್ನು ಮೆಚ್ಚಿಸುವ ಪಾತ್ರವಲ್ಲ. ಪ್ರೇಕ್ಷಕರೇ ಮೆಚ್ಚುವ ಪಾತ್ರಧಾರಿ.
ಮೇಳದಲ್ಲಿ ನಿತ್ಯವೇಷದಿಂದ ತೊಡಗಿ ಬಣ್ಣದ ವೇಷದ ತನಕದ ಒಂದೊಂದೇ ಹಂತಗಳನ್ನು ಏರಿ ಬಂದವರು. ಪುಂಡುವೇಷ, ಸ್ತ್ರೀವೇಷ, ಕಿರೀಟ ವೇಷ.. ವಿವಿಧ ವೈವಿಧ್ಯ ಪಾತ್ರಗಳಲ್ಲಿ ಬೆಳೆದು ಬಂದ ಜಯರಾಮರ ಸ್ವ-ಭಾವಕ್ಕೆ ಖಳಪಾತ್ರಗಳು ಹೆಚ್ಚು ಒಪ್ಪುತ್ತದೆ. ‘ಇಂದ್ರಜಿತು, ಕೌಂಡ್ಲಿಕ, ಕೌಂಹಾಸುರ, ಕಂಸ, ದಾರಿಕಾಸುರ, ಶೂರ್ಪನಖಿ..’ ಹೀಗೆ. ಅತಿರೇಕಗಳಿಲ್ಲದೆ ಪಾತ್ರ ನಿರ್ವಹಣೆ ಇವರ ವಿಶೇಷ. “ಪಾತ್ರದಲ್ಲಿ ಅತಿರೇಕ ನಿರ್ವಹಣೆ ಮಾಡಿದರೆ ಕ್ಷಣಿಕವಾಗಿ ಜನ ಮೆಚ್ಚಿಕೊಳ್ಳುತ್ತಾರೆ. ದೀರ್ಘಕಾಲಿಕವಾಗಿ ಕಲಾವಿದನಿಗದು ಹಿನ್ನಡೆ,” ಎನ್ನುತ್ತಾರೆ. ತನ್ನ ಪಾಲಿಗೆ ಬಂದ ಪಾತ್ರ ಯಾವುದೇ ಇರಲಿ ಅದರ ರಂಗಾಳ್ತನಕ್ಕೆ ಲೋಪವಾಗದ ಅಭಿವ್ಯಕ್ತಿ.
ಜಯರಾಮ ಪಾಟಾಳಿಯವರಿಗೆ ಮೇಳದ ಅನುಭವಗಳನ್ನು - ಬಣ್ಣಗಾರಿಕೆಯಿಂದ ತೊಡಗಿ ಪಾತ್ರಾಭಿವ್ಯಕ್ತಿ ತನಕದ ರಂಗನಡೆಗಳನ್ನು - ಖಚಿತವಾಗಿ ಹೇಳುವಂತಹ ಪಕ್ವತೆ. ಇವರ ಗುರುತ್ವದಲ್ಲಿ ಕಾಸರಗೋಡು ಜಿಲ್ಲೆಯ ಹಲವೆಡೆ ಶಿಷ್ಯರು ರೂಪುಗೊಂಡಿದ್ದಾರೆ, ರೂಪುಗೊಳ್ಳುತ್ತಿದ್ದಾರೆ. ಕೇವಲ ನಾಟ್ಯ ಕಲಿಸುವುದು ಮಾತ್ರ ಶಿಕ್ಷಕನ ಕೆಲಸವಲ್ಲ. ರಂಗದ ಒಂದೊಂದು ಸೂಕ್ಷ್ಮ ವಿಚಾರಗಳಿಗೆ ನಿಗಾ. “ವಿದ್ಯಾರ್ಥಿಗಳಿಗೆ ಯಕ್ಷಗಾನ ನೋಡಿ ಗೊತ್ತಿದೆಯಷ್ಟೇ. ಸೂಕ್ಷ್ಮತೆಯನ್ನು ಹೆಚ್ಚು ಎಚ್ಚರದಿಂದ ಹೇಳಿಕೊಡಬೇಕಾಗುತ್ತದೆ. ಉದಾ. ದೊಂದಿ ಹಿಡಿಯುವ ರೀತಿ, ಅದಕ್ಕೆ ರಾಳ ಎಸೆಯುವ ಕ್ರಮ.. ಮೊದಲಾದುವನ್ನು ಪ್ರಾಕ್ಟಿಕಲ್ ಆಗಿಯೇ ಹೇಳಿಕೊಡಬೇಕು.” ಎನ್ನುತ್ತಾರೆ ಜಯರಾಮ.
ಕೇರಳದಲ್ಲಿ ‘ಕೇರಳ ಶಾಲಾ ಕಲೋತ್ಸವ’ ಎನ್ನುವುದು ಸರ್ವ ಕಲೆಗಳ ಹಬ್ಬ. ಇದರೊಂದಿಗೆ ಯಕ್ಷಗಾನವನ್ನು ಮಿಳಿತಗೊಳಿಸುವಲ್ಲಿ ಆಡಳಿತದವರೊಂದಿಗೆ ಕೈಜೋಡಿಸಿದವರಲ್ಲಿ ಪಾಟಾಳಿಯವರೂ ಒಬ್ಬರು. ಮಲೆಯಾಳ ಮಾತಿನ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುವುದು ದೊಡ್ಡ ಸವಾಲು. ಕಲ್ಲಿಕೋಟೆ, ಪತ್ತನಾಂತಿಟ್ಟ, ಕಣ್ಣೂರು, ಕೋಟ್ಟಾಯಂ, ವಯನಾಡ್, ತಿರುವನಂತಪುರ.. ಮೊದಲಾದೆಡೆ ವಿದ್ಯಾರ್ಥಿಗಳಿಗೆ ಗೆಜ್ಜೆ ಕಟ್ಟಿದ್ದಾರೆ, ಬಣ್ಣ ಹಚ್ಚಿದ್ದಾರೆ. ತನ್ನ ಶಿಷ್ಯರು ರಂಗದಲ್ಲಿ ಕುಣಿಯುವುದನ್ನು ನೋಡಿ ಖುಷಿ ಪಟ್ಟಿದ್ದಾರೆ.
ಇವರ ನಿರ್ದೇಶನ ಮತ್ತು ಗುರುತ್ವದಲ್ಲಿ ಮುಳ್ಳೇರಿಯಾ, ಬದಿಯಡ್ಕ, ಕಾಟುಕುಕ್ಕೆ.. ಶಾಲೆಗಳು ಕಲೋತ್ಸವದಲ್ಲಿ ಭಾಗವವಹಿಸಿ ಉತ್ತಮ ಶ್ರೇಣಿಯನ್ನು ಪಡೆದಿರುವುದು ಉಲ್ಲೇಖನೀಯ. ಮಲೆಯಾಳ ಭಾಷೆಯಲ್ಲಿ ಕೋಟೂರಿನ ಕಾರ್ತಿಕೇಯ ಕಲಾ ನಿಲಯವು ಯಕ್ಷಗಾನವನ್ನು ಪ್ರಸಿದ್ಧೀಕರಿಸಿರುವುದನ್ನು ಮರೆಯುವಂತಿಲ್ಲ. ಆದರೆ ಕಲೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆಯಾಯಾ ಊರಿಗೆ ಹೋಗಿ ಅವರನ್ನು ಸಿದ್ಧಪಡಿಸುವ ಕಾಯಕದ ಹಿಂದೆ ತನು, ಮನ ಶ್ರಮವಿದೆ. ಇದೆಲ್ಲೂ ದಾಖಲಾಗುವುದಿಲ್ಲ.
ಕಲಾವಿದ ನೆಟ್ಟಣಿಗೆ ಮಾಧವ ಅವರು ಮಾತಿನ ಮಧ್ಯೆ – “ಕನ್ನಡದ ನೆಲದವರು ಮಾತನಾಡುವ ಕನ್ನಡಕ್ಕಿಂತ ಮಲೆಯಾಳ ವಿದ್ಯಾರ್ಥಿಗಳು ಕಲಿಸಿಕೊಟ್ಟದ್ದನ್ನು ಸ್ಪಷ್ಟವಾಗಿ ಉಚ್ಛರಿಸುವುದನ್ನು ನೋಡಿದಾಗ ನಾವೆಲ್ಲಿ ತಪ್ಪುತ್ತಿದ್ದೇವೆ ಎನ್ನುವ ಅರಿವಾಗುತ್ತದೆ” ಎಂದು ಹೇಳಿದ ಮಾತು ನೆನಪಾಗುತ್ತದೆ ಗುರುವಿನಂತೆ ವಿದ್ಯಾರ್ಥಿ, ತಂದೆ-ತಾಯಿಗಳಂತೆ ಮಕ್ಕಳು ರೂಪುಗೊಳ್ಳುತ್ತಾರೆ. ಕಲಿಸಿಕೊಡುವಲ್ಲಿ ಎಡವಟ್ಟಾದರೆ ಶಿಷ್ಯರನ್ನು ದೂರಿ ಏನು ಪ್ರಯೋಜನ? ಈ ಹಿನ್ನೆಲೆಯಲ್ಲಿ ಜಯರಾಮ ಪಾಟಾಳಿಯವರ ಶಿಷ್ಯವೃಂದ ಸೋಲುವುದಿಲ್ಲ.
ತಲೆಮಾರಿಂದ ತಲೆಮಾರಿಗೆ ಕಲೆಯನ್ನು ದಾಟಿಸುವುದು ವರ್ತಮಾನದ ತುರ್ತು. ಒಂದು ಕಲೆಯು ಹೇಗೆ ಸಾಗಿ ಬಂದಿದೆಯೋ ಅದನ್ನು ಯಥಾಸ್ಥಿತಿ ಅಲ್ಲದಿದ್ದರೂ, ವಿರೂಪಗೊಳಿಸದೆ ಕಾಪಾಡುವುದು ಯಕ್ಷಗಾನಕ್ಕೆ ಕೊಡುವ ದೊಡ್ಡ ಕೊಡುಗೆ. ಜಯರಾಮ ಪಾಟಾಳಿಯವರು, ನೆಟ್ಟಣಿಗೆ ಮಾಧವ.. ಇಂತಹ ಗುರುಗಳು ತಮ್ಮ ಶಿಷ್ಯರನ್ನು ರೂಪುಗೊಳಿಸುವ ಹಿನ್ನೆಲೆಯಲ್ಲಿ ಕಲೆಯನ್ನು ತಲೆಮಾರಿಗೆ ದಾಟಿಸುವ ಅಜ್ಞಾತ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಶ್ರಮ ಶ್ಲಾಘನೀಯ. ಕಥಕ್ಕಳಿಯಂತಹ ಶಾಸ್ತ್ರೋಕ್ತ ಪಠ್ಯ ಹೊಂದಿದ ನಾಡಿನಲ್ಲಿ ಯಕ್ಷಗಾನದ ಸದ್ದನ್ನು ಮಾಡುತ್ತಿರುವುದು ಸಣ್ಣ ಕೆಲಸವಲ್ಲ.
ಜಯರಾಮ ಪಾಟಾಳಿಯವರಿಗೆ ಅರ್ಹವಾಗಿಯೇ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ಕೊಡಮಾಡುವ ‘ಜಾನಪದ ಲೋಕ ಪ್ರಶಸ್ತಿ’ ಪ್ರಾಪ್ತವಾಗಿದೆ. ಅದು ಶ್ರಮಕ್ಕೆ ಸಂದ ಮಾನ. ಯಕ್ಷಗಾನ ಅವರಿಗೆ ಹೊಟ್ಟೆಪಾಡಾದರೂ, ಅದನ್ನು ಎಂದೂ ಹೊಟ್ಟೆಪಾಡಿನ ಕಲೆಯಾಗಿ ಪಾಟಾಳಿಯವರು ಸ್ವೀಕರಿಸಿಲ್ಲ. ಕಲೆಗೆ ಅವರು ನೀಡುವ ಮಾನವೇ ಅವರಿಗೆ ಸಂಮಾನವನ್ನು ತಂದಿತ್ತಿದೆ. ಅವರಿಗೆ ಪ್ರಾಪ್ತವಾದ ಪ್ರಶಸ್ತಿಗೆ ಕೇರಳದ ನೆಲವು ಸಂಭ್ರಮಿಸುತ್ತಿದೆ.
ಪ್ರಜಾವಾಣಿ / ದಧಿಗಿಣತೋ / 16-2-2018
No comments:
Post a Comment